ಸಣ್ಣ ಕಥೆ: ಆ ರಟ್ಟಿನ ಪೆಟ್ಟಿಗೆ..
ಎಂದಿನಂತೆ ಆ ದಿನವೂ ಆಫೀಸಿನ ತನ್ನ ಕೊಠಡಿಗೆ ಬಂದು ಬೀಗ ತೆಗೆದು ಒಳಹೊಕ್ಕ ನಿಮಿಷನಿಗೆ ಕಬೋರ್ಡಿನ ಮೇಲಿಟ್ಟಿರುವ, ಅಂಟಿಸಿದ ಟೇಪಿನ್ನೂ ತೆಗೆಯದ ಅದೆ ರಟ್ಟಿನ ಪೆಟ್ಟಿಗೆ ಮತ್ತೆ ಕಣ್ಣಿಗೆ ಬಿತ್ತು – ಅದೇನಿರಬಹುದೆಂದು ಕುತೂಹಲ ಕೆರಳಿಸುತ್ತ. ನಿತ್ಯವೂ ಅದನ್ನು ನೋಡುತ್ತಲೆ ಇರುವ ನಿಮಿಷನಿಗೆ ಯಾಕೊ ಅವತ್ತಿನವರೆಗು ಅದೇನೆಂದು ನೋಡುವ ಕುತೂಹಲ ಮೂಡಿರಲಿಲ್ಲ.. ನೂರೆಂಟು ಅವಸರದ ವಿಷಯಗಳ ನಡುವೆ ಈ ಪೆಟ್ಟಿಗೆಯತ್ತ ಚಿತ್ತದ ಮೊದಲ ಗಮನ ಹರಿಯುವುದಾದರು ಎಂತು ? ಆಫೀಸಿನ ಬೀಗದ ಕೈ ತೆಗೆದುಕೊಂಡು ತಿಂಗಳಷ್ಟೆ ಆಗಿದೆ – ಹೆಚ್ಚು ಕಡಿಮೆ ಆ ಊರಿಗೆ ವರ್ಗವಾಗಿ ಬಂದಷ್ಟೆ ಸಮಯ. ಎರಡು ತಿಂಗಳ ಮೊದಲೆ ಬರಬೇಕಿದ್ದರು, ನಾನಾ ಕಾರಣಗಳಿಂದ ದಿನ ಮುಂದೂಡಬೇಕಾದ್ದು ಅನಿವಾರ್ಯವಾಗಿ ತಡವಾಗಿ ಹೋಗಿತ್ತು. ನಿಗದಿತ ದಿನಾಂಕಕ್ಕೆ ಬರುವನೆಂಬ ಮಾಹಿತಿಯ ಮೇಲೆ ಕೊಠಡಿಯನ್ನೆಲ್ಲ ಸಿದ್ದಪಡಿಸಿ ‘ನಿಮಿಷ್ ಕುಮಾರ್ – ಡೈರೆಕ್ಟರ್ ಅಫ್ ಪ್ರಾಜೆಕ್ಟ್ ಸರ್ವಿಸಸ್’ ಎಂದು ನಾಮಫಲಕವನ್ನು ಸಿದ್ದ ಮಾಡಿ ನೇತು ಹಾಕಿಬಿಟ್ಟಿದ್ದರು, ರೈಲಿನ ಬೋಗಿಯಲ್ಲಿ ಸೀಟು ಕಾದಿರಿಸುವಂತೆ…! ಆ ಬೋರ್ಡು ಮಾತ್ರ ನಿಯತ್ತಾಗಿ ನೇತಾಡುತ್ತಿತ್ತು ಅವನು ಬಂದು ಅಧಿಕಾರ ವಹಿಸಿಕೊಳ್ಳುವವರೆಗು ಅವನ ದಾರಿ ಕಾಯುತ್ತ.
ಅವನಿಗಿಂತ ಮೊದಲೆ ಬಿಜಿನೆಸ್ ಟ್ರಿಪ್ಪಿನಲ್ಲಿ ಬಂದು ಬಂದು ಹೋದ ಕೆಲವರು ‘ಏನ್ರಿ…ಆಗಲೆ ಹೆಸರು ಹಾಕಿ ಆಫೀಸು ರೂಮು ಬುಕ್ ಮಾಡಿಟ್ಟುಬಿಟ್ಟಿದ್ದಾರೆ ..? ನೀವು ಹೋಗುವುದೊಂದೆ ಬಾಕಿ ಅಂಥ ಕಾಣುತ್ತೆ..’ ಎಂದು ಒಂದು ರೀತಿಯ ಪರೋಕ್ಷ ಒತ್ತಡವನ್ನು ಹಾಕಿ ಹೋಗಿದ್ದರು – ಆದಷ್ಟು ಶೀಘ್ರದಲ್ಲಿ ಹೊರಡುವುದಕ್ಕೆ.. ತೀರಾ ಕೊನೆಯವಳಾಗಿ ಹೋಗಿದ್ದ ರೀಟಾ ಮೋಹನ್ ಹಿಂದಿರುಗಿ ಬಂದವಳೆ, ‘ಏನ್ ಸಾರ್.. ನಿಮ್ಮ ರೂಮನ್ನ ಖಾಲಿಯಿದೆ ಅಂತ ಯಾವುದೊ ಟೆಸ್ಟಿಂಗಿಗೊ, ಟ್ರೈನಿಂಗಿಗೊ ಬಳಸ್ತಾ ಇದಾರೆ ? ರೂಮು ತುಂಬ ಆರೇಳು ಜನ ಕೂತಿದ್ದನ್ನ ಕಂಡೆ.. ಅದೇನೊ ಪ್ರಾಜೆಕ್ಟ್ ವಾರ್ ರೂಮ್ ಅಂತೆ.. ಸದ್ಯಕ್ಕೆ ಯಾರು ಕೂತಿಲ್ಲ ಅಂತ ಟೆಂಪರರಿಯಾಗಿ ಬಳಸ್ಕೋತಾ ಇದಾರೆ’ ಎಂದು ಹೇಳಿ ಸ್ವಲ್ಪ ಆತಂಕವನ್ನು ಹೆಚ್ಚೆ ಮಾಡಿದ್ದಳು. ಈಗ ಇನ್ನು ಇಲ್ಲೆ ಬಿದ್ದಿರುವ ಈ ದೊಡ್ಡ ಪೆಟ್ಟಿಗೆ ಬಹುಶಃ ಅವರು ಬಳಸುತ್ತಿದ್ದುದ್ದೆ ಇರಬೇಕು .. ‘ಮತ್ತೇನಿರುತ್ತದೆ ಅಲ್ಲಿ? ಪ್ರಾಜೆಕ್ಟಿಗೆ ಸಂಬಂಧಿಸಿದ ಪೇಪರು, ಅದು ಇದೂ ಅಂತ ತುಂಬಿ ಇಟ್ಟಿರಬೇಕು.. ಜಾಗ ಖಾಲಿ ಮಾಡುವ ಹೊತ್ತಲ್ಲಿ ಅದನ್ನು ಸ್ವಚ್ಛ ಮಾಡುವ ಹೊಣೆ ತಮಗೆ ಸೇರಿದ್ದಲ್ಲ ಎಂದು ಹೊರಟು ಬಿಟ್ಟಿರುತ್ತಾರೆ.. ಅದೇನೆಂದು ಗೊತ್ತಿರದಿದ್ದರು ಅದನ್ನು ಇಟ್ಟುಕೊಂಡು ದಿನವೂ ಅದನ್ನು ನೋಡಿಕೊಂಡಿರಬೇಕಾದವನು ನಾನು.. ಹಾಳಾಗಲಿ, ಮಧ್ಯೆ ಬಿಡುವಾದಾಗ ಅದರೊಳಗೇನಿದೆ ನೋಡಿಕೊಂಡು ಅದಕೊಂದು ಗತಿ ಕಾಣಿಸಿಬಿಡಬೇಕು’ ಎಂದುಕೊಂಡು ತನ್ನ ಮೆತ್ತನೆಯ ಆಸನದತ್ತ ನಡೆದ ನಿಮಿಷ ತನ್ನ ದೈನಂದಿನ ಕೆಲಸಗಳಲ್ಲಿ ಮುಳುಗಿಹೋಗಿದ್ದ ಎಂದಿನಂತೆ.
ತನ್ನ ಆಫೀಸಿನ ಟೇಬಲ್ಲಿನ ಮೇಲೆ ಸದಾ ಪೇಪರು, ಅದು ಇದೂ ಎಂದು ಹರಡಿಕೊಳ್ಳದೆ ನೀಟಾಗಿ, ಶಿಸ್ತಾಗಿ ಇರುವಂತೆ ನೋಡಿಕೊಳ್ಳುವುದು ಅವನ ಹಳೆಯ ಅಭ್ಯಾಸ. ಒಂದು ರೀತಿಯ ಶಿಸ್ತಿನ ವಾತಾವರಣ ಮಾತ್ರವಲ್ಲದೆ, ಎಲ್ಲವನ್ನು ಶೀಘ್ರ ವಿಲೇವಾರಿ ಮಾಡುವ ಒತ್ತಡವು ಬರುವ ಕಾರಣ. ಸಹೋದ್ಯೋಗಿಗಳನೇಕರು ಅದನ್ನು ಗಮನಿಸಿ ಆಡಿದ್ದು ಇದೆ – ‘ನಿಮ್ಮ ಟೇಬಲ್ ಯಾವಾಗಲೂ ತುಂಬಾ ಕ್ಲೀನಪ್ಪ.. ಚೆನ್ನಾಗಿ ಇಟ್ಟುಕೊಂಡಿರುತ್ತೀರಾ’… ಮತ್ತೆ ಕೆಲವರು ಹಿಂದಿನಿಂದ ಕುಹಕವಾಡುತ್ತಾರೆಂದು ಗೊತ್ತಿದೆ; ‘ಅವನಿಗೇನ್ರಿ..? ಕೆಲಸವೆ ಇಲ್ಲ ಅಂತ ಕಾಣುತ್ತೆ.. ಹೆಸರಿಗೆ ಸೀನಿಯರು ಮ್ಯಾನೇಜರು..ಟೇಬಲ್ ನೋಡಿದರೆ ಸದಾ ಖಾಲಿ.. ಏನು ಕೆಲಸ ಮಾಡ್ತಾನೊ ಇಲ್ಲವೊ ಅಂತಲೆ ಅನುಮಾನ..’ ಎಂದಾಡಿಕೊಂಡದ್ದು ಅವನ ಕಿವಿಗು ಬಿದ್ದಿದೆ.. ಆದರೆ ಅದನ್ನವನು ಯಾವತ್ತೂ ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ.. ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡು ಹೋಗುವುದು ಅವನ ಜಾಯಮಾನ.. ಈಗಲೂ ಅಷ್ಟೆ.
ಪ್ರಮೋಶನ್ನು ಸಿಕ್ಕಿತೆಂಬ ಕಾರಣದಿಂದ ಈ ಜಾಗಕ್ಕೆ ಬಂದು ‘ಸೆಟಲ್’ ಆಗಲಿಕ್ಕೆ ಹವಣಿಸುತ್ತಿರುವ ಹೊತ್ತಿನಲ್ಲಿ ನೂರೆಂಟು ತರದ ತರಲೆ ತಾಪತ್ರಯಗಳನ್ನು ನಿಭಾಯಿಸಿಕೊಳ್ಳಬೇಕಾದ ಕಾರಣ ತನ್ನ ರೂಮಿನ ಚಿಲ್ಲರೆ ವಿಷಯಗಳತ್ತ ಗಮನ ಹರಿಸಲಾಗಿಲ್ಲ. ಸಾಲದ್ದಕ್ಕೆ ಹೊಸ ಜಾಗಕ್ಕೆ ಬರುವ ಹೊತ್ತಿಗೆ ಸರಿಯಾಗಿ ಅಲ್ಲಿ ಆಫೀಸಿನ ಸಹಾಯಕ್ಕೆಂದು ಇರಬೇಕಿದ್ದ ರಾಗಿಣಿ ‘ಮೆಟರ್ನಿಟಿ ಲೀವ್’ ಹಾಕಿ ಹೋಗಿರುವ ಕಾರಣ ಎಲ್ಲಾ ತಾನೆ ಮಾಡಿಕೊಳ್ಳಬೇಕಾದ ಅನಿವಾರ್ಯ.. ಪಾಪದ ಹುಡುಗಿ ಹೋಗುವ ಮುನ್ನ ಏನೆಲ್ಲ ಸಾಧ್ಯವೊ ಅದನ್ನೆಲ್ಲ ಮಾಡಿಟ್ಟೆ ಹೋಗಿದ್ದಾಳೆ, ಆದರೆ ರೂಮು ತಾನು ಬರುವ ತನಕ ಖಾಲಿಯಾಗಿಲ್ಲದ ಕಾರಣ ಅದನ್ನು ಒಪ್ಪ ಒರಣವಾಗಿಸಲು ಸಾಧ್ಯವಾಗಿಲ್ಲವೆಂದು ಕಾಣುತ್ತದೆ.. ಅದೇನೆ ಇರಲಿ ತಲೆಯೆತ್ತಿ ನೋಡಿದಾಗಲೆಲ್ಲ ಆ ರಟ್ಟಿನ ಪೆಟ್ಟಿಗೆ ಕಣ್ಣಿಗೆ ಬಿದ್ದು , ಅದೊಂದು ಅಪಶೃತಿಯ ತಂತಿಯಂತೆ ನಿತ್ಯವೂ ಕಾಡುತ್ತದೆ – ಅದರಲ್ಲು ಅದರ ಗಾತ್ರದ ದೆಸೆಯಿಂದ. . ಒಂದು ವಾರದ ಕೊನೆಯಲ್ಲಾದರು ಬಂದು ಅದರಲ್ಲೇನಿದೆ ನೋಡಿ ಮೋಕ್ಷ ಕೊಟ್ಟುಬಿಡಬೇಕು – ನೋಡಿ ನೋಡಿ ಅಭ್ಯಾಸವಾಗಿಬಿಡುವ ಮೊದಲೆ.. ಈಗಾಗಲೆ ಬಂದು ಎರಡು ತಿಂಗಳು ಕಳೆದುಹೋಯ್ತು.. ಅಬ್ಬಾ! ಈ ಕೆಲಸದ ಜಂಜಾಟದಲ್ಲಿ ಹಾಳು ದಿನಗಳು ಓಡುವುದೆ ಗೊತ್ತಾಗುವುದಿಲ್ಲ..
ನಿಮಿಷನಿಗಂದು ಪುರುಸೊತ್ತಿಲ್ಲದ ದಿನ.. ಬೆಳಗಿನಿಂದ ಮೀಟಿಂಗಿನ ಮೇಲೆ ಮೀಟಿಂಗು.. ಒಂದಲ್ಲ ಒಂದು ಗುಂಪು ಬಂದು ಏನಾದರೊಂದು ವಿಷಯದ ಚರ್ಚೆ ನಡೆಸಿ ಹೋಗುತ್ತಿವೆ.. ಅದಕ್ಕವನು ದೂರುವಂತೆಯೂ ಇಲ್ಲ.. ಅದನ್ನು ವ್ಯವಸ್ಥೆ ಮಾಡಿದವನು ಸ್ವತಃ ಅವನೆ. ಹೊಸ ಕೆಲಸದ ಮೇಲೆ ಹಿಡಿತ ಸಿಗಬೇಕಾದರೆ ಮೊದಲು ಅಲ್ಲೇನು ನಡೆದಿದೆಯೆಂದು ಅರ್ಥ ಮಾಡಿಕೊಳ್ಳಬೇಕು.. ಆಮೇಲಷ್ಟೆ ಅದರ ಸಾಧಕ ಭಾಧಕ, ಬೇಕು ಬೇಡಗಳ ತರ್ಕ, ನಿಷ್ಕರ್ಷೆ ಸಾಧ್ಯ.. ಆದರೆ ಆ ದಿನ ಮಾತ್ರ ಸ್ವಲ್ಪ ಹೆಚ್ಚೆ ಆಯಿತೆಂದು ಹೇಳಬೇಕು – ಗಂಟೊಗೊಂದರಂತೆ ಏಳು ಮೀಟಿಂಗುಗಳು.. ಸಾಲದ್ದಕ್ಕೆ ಕೊನೆಯದು ಕಸ್ಟಮರ ಜತೆಗಿನ ಭೇಟಿ.. ಅಂತಹ ಮುಖ್ಯ ಭೇಟಿಗಳನ್ನು ದಿನದ ಕೊನೆಯಲ್ಲಿಟ್ಟುಕೊಳ್ಳುವುದೆ ಮೂರ್ಖತನ.. ಆದರೆ ಆ ಸಮಯ ಕಸ್ಟಮರೆ ಸೂಚಿಸಿದ ಕಾರಣ ಬೇರೆ ದಾರಿಯಿರಲಿಲ್ಲ.. ರಾಗಿಣಿಯಿದ್ದಿದ್ದರೆ ಇಂತದ್ದನ್ನೆಲ್ಲ ಸುಲಭವಾಗಿ ಮ್ಯಾನೇಜ್ ಮಾಡಿ ಬಿಡುತ್ತಿದ್ದಳೇನೊ – ತನಗೆ ಅಷ್ಟು ಸರಳವಾಗಿ ಮೀಟಿಂಗುಗಳನ್ನು ನಿರಾಕರಿಸಲು ಬರದು.. ಎಲ್ಲಕ್ಕಿಂತ ಮುಖ್ಯವಾಗಿ ಸಮಯ ಇದೆಯೆ, ಇಲ್ಲವೆ ಎಂದೂ ಯೋಚಿಸದೆ, ಪರಿಶೀಲಿಸದೆ ‘ಓಕೆ’ ಎನ್ನುವ ಆತುರದ ಸ್ವಭಾವ.. ಅದು ಯಾರು ಹೆಸರಿಟ್ಟರೊ, ನಿಮಿಷ ಎಂದು – ಕಾಲದ ಪ್ರಾಮುಖ್ಯತೆಯ ಪ್ರಜ್ಞಾಪೂರ್ವಕ ಪರಿವೆಯೆ ಇಲ್ಲದವನಿಗೆ.. ಅದು ಬೇರೆ ವಿಷಯ…
ಈಗಾಗಲೆ ಮೂರು ಮೀಟಿಂಗು ಮುಗಿಸಿದ್ದಾನೆ ನಿಮಿಷ.. ಬೆಳಗಿನಿಂದಲು ಒಂದು ಮಿಂಚಂಚೆಯನ್ನು ಓದಲಾಗಿಲ್ಲ, ಗಂಟೆ ಗಳಿಗೆಗೊಮ್ಮೆ ಪ್ರತ್ಯಕ್ಷವಾಗುವ ಬರಿಯ ಹಾಳು ಮೊಬೈಲ್ ಮೆಸೇಜ್ ಬಿಟ್ಟರೆ ಬೇರೇನು ನೋಡಲು ಶಕ್ಯವಾಗಿಲ್ಲ. ಲಂಚಿನ ಸಮಯ ಹತ್ತಿರವಾದಂತೆ ಯಾಕೊ ಪದೆ ಪದೆ ಕಣ್ಣು ಆ ರಟ್ಟಿನ ಪೆಟ್ಟಿಗೆಯತ್ತಲೆ ಹರಿಯುತ್ತದೆ ಆಯಾಚಿತವಾಗಿ.. ಆ ದಿನ ಅದರ ಕುರಿತು ಯಾಕೀ ಬಗೆಯ ಹೆಚ್ಚಿನ ಅಸಹನೆ ಎಂದು ಚಿಂತಿಸಲಾಗದಷ್ಟು ಬಿಜಿ.. ಕೊನೆಗೆ ಲಂಚಿನ ಮುನ್ನದ ಮೀಟೀಂಗ್ ಮುಗಿಸಿ ಕ್ಯಾಂಟಿನ್ನಿಗೆ ಹೊರಡಲು ಸಿದ್ದನಾಗುವ ಹೊತ್ತಲ್ಲಿ ಫಕ್ಕನೆ ಅರಿವಿಗೆ ಬಂದಿತ್ತು – ಯಾಕೀ ಹೆಚ್ಚಿದ ಚಡಪಡಿಕೆಯೆಂದು.. ‘ದಿನದ ಕೊನೆಗೆ ಬರುವ ಗ್ರಾಹಕರ ಮುಂದೆ ಆ ಪೆಟ್ಟಿಗೆ ಪ್ರದರ್ಶನಕ್ಕಿಡುವುದು ಶೋಭೆಯಲ್ಲ – ನೀಟಾದ ಫರ್ನೀಷರಿನ ನಡುವೆ ದೃಷ್ಟಿಬೊಟ್ಟಂತೆ ಬಿದ್ದಿರುವ ಈ ಪೆಟ್ಟಿಗೆ ಮುಜುಗರಕ್ಕೆ ಕಾರಣವಾಗುತ್ತದೆ; ಅದಕ್ಕೆ ಇರಬೇಕು ಒಂದು ರೀತಿಯ ಈ ಎಲ್ಲಾ ಅಸಹನೆ, ಚಡಪಡಿಕೆ.. ಇನ್ನು ಮಧ್ಯಾಹ್ನದ ಮೀಟಿಂಗುಗಳು ಶುರುವಾದರೆ ಆ ಪೆಟ್ಟಿಗೆಯ ಕಡೆ ಗಮನ ನೀಡಲಾಗುವುದಿಲ್ಲ.. ಈಗಲೆ ಯಾರನ್ನಾದರು ಕರೆದು ಸದ್ಯಕ್ಕೆ ಬೇರೆಲ್ಲಾದರು ಇಡಲು ಹೇಳಿಬಿಡಲೆ ? ಆದರೆ ಈಗ ಲಂಚಿನ ಹೊತ್ತು .. ಯಾರು ಕೈಗೆ ಸಿಗುವುದಿಲ್ಲ.. ಅದೆಷ್ಟು ತೂಕವಿದೆಯೊ ಏನೊ.. ಏನು ಮಾಡಬಹುದು ಸದ್ಯಕ್ಕೆ ?’
ಹಾಗೆ ಸುತ್ತಲು ಕಣ್ಣಾಡಿಸುತ್ತಿದ್ದ ನಿಮಿಷನಿಗೆ ತಟ್ಟನೆ ಕಣ್ಣಿಗೆ ಬಿದ್ದಿತ್ತು ಅದರ ಪಕ್ಕದಲ್ಲಿದ್ದ ದೊಡ್ಡ ಅಲ್ಮೇರ.. ‘ಫೈಲುಗಳನ್ನಿಡುವ ಕಬೋರ್ಡಿನ ಪಕ್ಕದಲ್ಲೆ ಅದನ್ನು ಇಟ್ಟಿದ್ದಾರೆ, ಬಹುಶಃ ಕಬೋರ್ಡಿಗೆ ಹಿಡಿಸದ ದೊಡ್ಡ ಸರಕುಗಳನ್ನಿಡಲಿರಬೇಕು.. ಅದೆಲ್ಲ ಖಾಲಿ ಖಾಲಿಯೆ ಇದೆ – ಇನ್ನು ಬಳಸದಿರುವ ಕಾರಣ. ಗಾತ್ರ ಹಿಡಿಸುವಂತಿದ್ದರೆ ಈ ಪೆಟ್ಟಿಗೆಯನ್ನು ಸದ್ಯಕ್ಕೆ ಅಲ್ಲಿಗೆ ವರ್ಗಾಯಿಸಿಬಿಡಬಹುದಲ್ಲಾ ? ಆದರೆ ಹಾಳಾದ್ದು ಅದೆಷ್ಟು ತೂಕವಿದೆಯೊ ಏನೊ? ಸರಿ.. ಯಾಕೊಂದು ಬಾರಿ ನೋಡಿಯೆ ಬಿಡಬಾರದು? ಎತ್ತಲು ಆಗದಿದ್ದರೆ ಯಾರಾದರು ಲಂಚಿನ ನಂತರ ಬಂದವರ ಸಹಾಯ ತೆಗೆದುಕೊಂಡು ಎತ್ತಿಟ್ಟರಾಯ್ತು..’ ಎಂದುಕೊಂಡವನೆ ಎದೆಯುಬ್ಬಿಸಿ, ಕೈಗಳೆರಡನ್ನು ಹುರಿಗೊಳಿಸುತ್ತ ಭಾರವಾದ ವಸ್ತುವನ್ನು ಎತ್ತಿಕೊಳ್ಳುವ ಭೌತಿಕ ಹಾಗು ಮಾನಸಿಕ ಸಿದ್ದತೆಯೊಂದಿಗೆ ಪೆಟ್ಟಿಗೆಗೆ ಕೈ ಹಾಕಿದ ನಿಮಿಷ..
ಭಾರವೇನು ಬಂತು ? ಹೂವೆತ್ತಿದಷ್ಟು ಹಗುರವಾಗಿ ಮೇಲೆದ್ದು ಬಂದಿತ್ತು ಆ ಪೆಟ್ಟಿಗೆ.. ! ಬಹುಶಃ ಮೂರ್ನಾಲ್ಕು ಕೇಜಿಯ ತೂಕದ ಅದರೊಳಗೆ ತೂಕವಾದದ್ದೇನು ಇರಲಿಲ್ಲವೆಂದು ಕಾಣುತ್ತದೆ..ಒಳಗೆ ಟೊಳ್ಳಾಗಿ ಖಾಲಿಯಿದ್ದರು ಇದ್ದೀತು. ಸಲೀಸಾಗಿ ಅದನ್ನೆತ್ತಿದವನೆ ಅಲ್ಮೇರದ ಎಡಖಾನೆಯಲ್ಲಿಟ್ಟು ಮತ್ತೆ ಬಾಗಿಲು ಮುಚ್ಚಿ ನಿರಾಳ ಉಸಿರಾಡಿದ ನಿಮಿಷ.. ‘ಸದ್ಯಕ್ಕೆ ಪರಿಹಾರ ಸುಲಭವಾಗಿಯೆ ಆಗಿಹೋದಂತಾಯ್ತು.. ಈಗ ಪೆಟ್ಟಿಗೆ ಮೊದಲಿದ್ದ ಜಾಗ ಖಾಲಿಯಾಗಿ, ನೀಟಾಗಿ ಕಾಣುತ್ತಿದೆ – ಬಹುಶಃ ಅಲ್ಲೊಂದು ಹೂ ಕುಂಡವನ್ನೊ, ಹೂದಾನಿಯನ್ನೊ ಇಟ್ಟರೆ ನಾವೆಲ್ಟಿಯಾಗಿರುತ್ತದೆ..’ ಎಂದುಕೊಂಡೆ ಕ್ಯಾಂಟಿನ್ನಿನತ್ತ ನಡೆದವನ ಮನದಲ್ಲಿ ಮಾತ್ರ ಆ ಮೂಲ ಕೊರೆತ ನಿಂತಿರಲಿಲ್ಲ; ‘ಏನೊ ಭಾರದ ಪೇಪರುಗಳಿರಬಹುದೆಂದುಕೊಂಡಿದ್ದೆ.. ನೋಡಿದರೆ ಇಷ್ಟು ಹಗುರವಿದೆಯಲ್ಲ? ಒಳಗೇನಿರಬಹುದೆಂದು ನೋಡಿಬಿಡಬೇಕು ಒಮ್ಮೆ..ಹಾಳು ಕುತೂಹಲ ಸುಮ್ಮನಿರಲು ಬಿಡುವುದಿಲ್ಲ.. ಅದೂ ಇಷ್ಟು ಖಾಲಿಯಿದೆಯೆಂದರೆ ಏನೊ ಹೊಸದಾದ ಪ್ಯಾಕ್ ಮಾಡಿಟ್ಟ ವಸ್ತುವೆ ಇರಬೇಕು..’ಎಂದುಕೊಂಡೆ ಗಬಗಬನೆ ತಿನ್ನುತ್ತ ಊಟದತ್ತ ಗಮನ ಹರಿಸಿದ್ದ ನಿಮಿಷ, ಮುಂದಿನ ಮೀಟಿಂಗಿನ ಬಗ್ಗೆ ಮತ್ತೆ ಚಿಂತನೆಗಿಳಿಯುತ್ತ..
ಅಚ್ಚರಿಯೆಂಬಂತೆ ಆ ಮಧ್ಯಾಹ್ನದ ಮೀಟಿಂಗುಗಳೆಲ್ಲ ಅಂದುಕೊಂಡಿದ್ದಕ್ಕಿಂತ ಬಲು ಸುಗಮವಾಗಿಯೆ ನಡೆದುಹೋದವು. ಕಸ್ಟಮರನ ಭೇಟಿಯೂ ಸುಸೂತ್ರವಾಗಿ ನಡೆದು, ಮನೆಗೆ ಎಂದಿಗಿಂತ ತಡವಾಗಿ ಹೊರಡಬೇಕಾಗಿ ಬಂದರೂ ಏನೂ ಆಯಾಸ ಕಾಣಿಸಿಕೊಳ್ಳದೆ ಒಂದು ರೀತಿಯ ಹರ್ಷ ಮೈ ತುಂಬಿಕೊಂಡಂತಿದ್ದುದನ್ನು ಕಂಡು ನಿಮಿಷನಿಗೆ ಅಚ್ಚರಿಯೆನಿಸಿತ್ತು. ‘ಆ ಮನೋಭಾವಕ್ಕೂ ತಾನು ಅಲ್ಮೇರದೊಳಗೆ ಮುಚ್ಚಿಟ್ಟ ರಟ್ಟಿನೆ ಪೆಟ್ಟಿಗೆಗು ಏನಾದರೂ ಸಂಬಂಧವಿರಬಹುದೆ? ‘ ಎನ್ನುವ ಅನಿಸಿಕೆ ಮೂಡಿ ಮರೆಯಾದರೂ ಆ ತರಹದ ಮೂಢನಂಬಿಕೆಯ ಆಲೋಚನೆಗೆ ಅವನಿಗೇ ನಗು ಬಂತು. ಅದೇ ಚಿಂತನೆಯಲ್ಲಿ ಕೊಠಡಿಗೆ ಬೀಗ ಹಾಕಲು ಹೊರಟವನಿಗೆ ಇದ್ದಕ್ಕಿದ್ದಂತೆ, ‘ಯಾಕೊಮ್ಮೆ ಒಳಗೇನಿದೆಯೆಂದು ನೋಡಿಯೆ ಬಿಡಬಾರದು ?’ ಎಂದು ಬಲವಾಗಿಯೆ ಅನಿಸಿತು..
ಒಮ್ಮೆ ಆ ಅನಿಸಿಕೆ ಮನಸಿಗೆ ಬಂದಿದ್ದೆ ತಡ, ಅದು ಆಸೆಯ ಮೂಸೆಯಲ್ಲಿ ಹೊರಳಿ, ಅರಳಿ ಬಲವಾದ ಪ್ರಲೋಭನೆಯ ಹೆಮ್ಮರವಾಗಲಿಕ್ಕೆ ಹೆಚ್ಚೇನು ಸಮಯ ಹಿಡಿಯಲಿಲ್ಲ. ಆ ಆಸೆ ಅದಮ್ಯ ಒತ್ತಡವಾಗಿ ಬದಲಾಗಿ, ‘ಹೇಗೂ ತೂಕವಿಲ್ಲದ ಹಗುರ ಪೆಟ್ಟಿಗೆ ತಾನೆ ? ಒಮ್ಮೆ ಬಿಚ್ಚಿ ನೋಡಿಯೆ ಹೊರಟುಬಿಡೋಣ’ ಎಂಬ ಭಾವಕ್ಕೆ ರಾಜಿ ಮಾಡಿಸಿದಾಗ, ಏನೊ ಒಂದು ಬಗೆಯ ರಣೋತ್ಸಾಹದಿಂದ ಮತ್ತೆ ಒಳಗೆ ಬಂದು ಅಲ್ಮೇರ ಬಾಗಿಲು ತೆರೆದ. ಈಗಾಗಲೆ ಸಂಜೆಯ ಗಡುವು ದಾಟಿದ್ದ ಕಾರಣ ಆಫೀಸು ಬಹುತೇಕ ಖಾಲಿಯಾಗಿತ್ತು.. ಹೊರ ತೆಗೆದ ರಟ್ಟಿನ ಪೆಟ್ಟಿಗೆಯನ್ನು ನಿಧಾನವಾಗಿ ತಾನು ಕೂರುವ ಜಾಗದ ಎದುರಿನ ಮೇಜಿನ ಮೇಲಿರಿಸಿ ಜಾಗರೂಕತೆಯಿಂದ ಬಿಚ್ಚತೊಡಗಿದ, ಅದನ್ನು ಮತ್ತೆ ಮೊದಲಿನಂತೆ ಜೋಡಿಸಲು ಸಾಧ್ಯವಿರುವ ಹಾಗೆ. ಅದರ ಆಯತಾಕಾರದ ಚಿಕ್ಕ ಬದಿಯ ಪಾರದರ್ಶಕ ಟೇಪನ್ನು ಎಳೆಯುತ್ತಿದ್ದಂತೆ ಪಟ್ಟನೆ ಬಿಚ್ಚಿಕೊಂಡ ಅದರ ಬಾಯಿಯ ಮೂಲಕ ಒಳಗಿರುವುದೇನೆಂದು ತಟ್ಟನೆ ಗೋಚರಿಸಿಬಿಟ್ಟಿತ್ತು ನಿಮಿಷನಿಗೆ..!
ಅದೊಂದು ಪೋಲೊ ಕಂಪನಿಯ, ಬೆಳ್ಳಿ ಲೋಹದ ಬಣ್ಣದ ವಿಮಾನದ ಕ್ಯಾಬಿನ್ ಬ್ಯಾಗೇಜ್ ಸೈಜಿನ ಸುಂದರ ಲಗೇಜ್ ಪೀಸ್ ಆಗಿತ್ತು… ಲೋಹದ ಹಾಗೆ ಗಟ್ಟಿ ಹೊದಿಕೆಯ ಕವಚದಿಂದ ಮಾಡಲ್ಪಟ್ಟಿದ್ದರು, ತೂಕವಿಲ್ಲದ ಹಗುರ ಮೂಲವಸ್ತುವನ್ನು ಬಳಸಿದ್ದ ಕಾರಣ ತೀರಾ ತೂಗದೆ ಹಗುರವಾಗಿತ್ತು. ಅದರ ವಿನ್ಯಾಸ ಕೂಡ ನಾವೀನ್ಯತೆಯಿಂದ ಕೂಡಿ, ಮಧ್ಯದ ಭಾಗದಿಂದ ಎರಡು ಬದಿಗೆ ಸಮನಾದ ಸಲೆಯಿರುವಂತೆ ಜಿಪ್ಪಿನ ಮೂಲಕ ಬೇರ್ಪಡಿಸಲಾಗಿತ್ತು.. ಆ ಜಿಪ್ಪನ್ನು ಬಿಚ್ಚಿ ಒಳಗೆ ತೆಗೆದು ನೋಡಿದರೆ ಅದರ ಒಳ ವಿನ್ಯಾಸವೆ ದಂಗು ಬಡಿಸುವ ಮತ್ತೊಂದು ಲೋಕವನ್ನು ತೆರೆದಿಟ್ಟಂತಿತ್ತು… ಸೊಗಸಾದ, ರೇಷ್ಮೆಯಂತೆ ನವಿರಾಗಿ ಹೊಳೆಯುವ, ವಿಶೇಷ ವಸ್ತ್ರದಲ್ಲಿ ಮಾಡಲ್ಪಟ್ಟ ಬಾಟಿಕ್ ಪ್ರಿಂಟಿಂಗಿದ್ದ ಲೈನಿಂಗ್.. ಬಟ್ಟೆಯ ಅಂಚಿನುದ್ದಕ್ಕು ಇದ್ದ ಗಟ್ಟಿಮುಟ್ಟಾದ ಸುಲಲಿತವಾಗಿ ಸರಿದಾಡಬಲ್ಲ ಜಿಪ್ಪನ್ನು ಹಾಕಿ ಮುಚ್ಚಿದರೆ ಪ್ರತಿ ಬದಿಯು ಮತ್ತೊಂದು ಪುಟ್ಟ ಪೆಟ್ಟಿಗೆಯಂತೆ ಬದಲಾಗುತ್ತಿದ್ದುದಲ್ಲದೆ, ಆ ಮುಚ್ಚಿದ ಹೊಳೆಯುವ ವಸ್ತ್ರದ ಮೇಲೆ ಜಿಪ್ಪಿನ ಪುಟ್ಟ ಪಾಕೇಟ್ಟುಗಳು. ಆ ಜಿಪ್ಪಿನ ಪುಟ್ಟ ಜೇಬುಗಳಲ್ಲಿ ಮತ್ತಷ್ಟು ಸಣ್ಣ ಪುಟ್ಟ ವಸ್ತುಗಳನ್ನಿಡುವ ಸಾಧ್ಯತೆಯಿದ್ದು, ಖಾನೆಗಳ ವಿನ್ಯಾಸ, ಸಂಯೋಜನೆ, ಅಚ್ಚುಕಟ್ಟುತನವೆಲ್ಲ ನೋಡಿದರೆ ‘ವಿವರಗಳತ್ತ ಸಮಸ್ತ ಗಮನ – ಅಟೆನ್ಷನ್ ಟು ಡೀಟೈಲ್’ ಎನ್ನುವುದು ಅದರ ಪ್ರತಿ ಅಂಗುಲದಲ್ಲು ಎದ್ದು ಕಾಣಿಸುವಂತಿತ್ತು. ಹೊರಗಿನ ಸೂಟ್ಕೇಸ್ ಮುಚ್ಚುವ ಜಿಪ್ಪಿನ ತುದಿಗಳೆರಡು ಸಂಧಿಸುವ ಜಾಗದಲ್ಲಿ ಅದನ್ನು ಮತ್ತೆ ಸರಿದಾಡದಂತೆ ಪ್ರತಿಬಂಧಿಸುವ ಕೀಲಿಯ ಕಿಂಡಿ ಮತ್ತು ಅದರ ನಂಬರ ಲಾಕಿನ ಪ್ಯಾನೆಲ್.. ಅದೆಲ್ಲ ಸಾಲದೆಂಬಂತೆ ಅದನ್ನು ಹಿಡಿದೆಳೆದುಕೊಂಡು ಹೋಗುವ ಉದ್ದನೆಯ ಸರಳಿನ ಹಿಡಿಯ ಮೇಲೆ ನಿಮಿಷನ ಕಂಪನಿಯ ಲೋಗೊ ಇರುವ ಪದಕದಂತಹ ಲೋಹದ ತುಂಡಿನ ಅಳವಡಿಕೆ ಬೇರೆ. ತಮ್ಮ ಕಂಪನಿಯಿಂದ ಆರ್ಡರು ಕೊಟ್ಟು ಮಾಡಿಸಿರಬೇಕು, ಯಾವುದೊ ವಿಶೇಷ ಉದ್ದೇಶದ ಸಲುವಾಗಿ.. ಆ ಕಾರಣದಿಂದಲೆ ಇಷ್ಟೆಲ್ಲಾ ಎಚ್ಚರಿಕೆಯಿಂದ ಪ್ರತಿಯೊಂದಕ್ಕು ಗಮನವಿಟ್ಟು ಸಿದ್ದ ಮಾಡಿದ್ದಾರೆ – ‘ಮೇಕ್ ಟು ಆರ್ಡರ’ ನ ಸಲುವಾಗಿ.. ಆದ್ದರಿಂದಲೆ ಒರಿಜಿನಲ್ ಪೋಲೊ ಹೆಸರು ಮತ್ತು ಲೋಗೊ ತೆಗೆದು ಹಾಕಿ ನಮಗೆ ಬೇಕಾದ ಕಂಪನಿಯ ಹೆಸರು, ಲೋಗೊ ಇರುವ ಕಿರು ಫಲಕ ಅಂಟಿಸಿದ್ದಾರೆ…’ ಎಂದುಕೊಂಡು ಅದನ್ನು ಮತ್ತೆ ಮೊದಲಿನ ಹಾಗೆ ಮುಚ್ಚಿ ಒಳ ಸೇರಿಸಿದ ನಿಮಿಷ, ಅಲ್ಮೇರದೊಳಗಿಡುತ್ತ..
ಹಾಗೆ ಇಡುತ್ತಿದ್ದಂತೆ ತಟ್ಟನೆ ಮತ್ತೊಂದು ಪ್ರಶ್ನೆಯುದಿಸಿತು ನಿಮಿಷನ ಮನದಲ್ಲಿ – ‘ಇದನ್ನೇಕೆ ತನ್ನ ರೂಮಿನಲ್ಲಿಟ್ಟಿದ್ದಾರೆ?’ ಎಂದು. ‘ಬಹುಶಃ ಅಲ್ಲಿಗೆ ಹೊಸದಾಗಿ ಬಂದ ತನ್ನ ಉಪಯೋಗಕ್ಕೆಂದೆ ಕಂಪನಿ ನೀಡಿರುವ ಉಡುಗೊರೆಯೆ ಇದು ? ಪ್ರಮೋಶನ್ನಿನಲ್ಲಿ ಈ ಸ್ಥಾನಕ್ಕೆ ಬಂದವರೆಲ್ಲರಿಗು ಕೊಡುತ್ತಾರೆಯೊ ಏನೊ? ಅಂದ ಮೇಲೆ ತಾನಿದನ್ನು ಮನೆಗೆ ಒಯ್ದು ಬಳಸಲು ಆರಂಭಿಸಬಹುದಲ್ಲ ? ಎರಡು ಅಥವಾ ಮೂರು ದಿನದ ಬಿಜಿನೆಸ್ ಟ್ರಿಪ್ಪಿಗೆ ಹೇಳಿ ಮಾಡಿಸಿದಂತಿದೆ… ನೋಡಲು ಒಳ್ಳೆ ಪ್ರೊಪೆಷನಲ್ ಲುಕ್ ಇರುವುದರಿಂದ ತನ್ನ ಸ್ಥಾನಮಾನಕ್ಕು ಒಳ್ಳೆಯ ಜೋಡಿ..’ ಹೀಗೆಲ್ಲಾ ಯೋಚಿಸುತ್ತ ಅದನ್ನು ಒಳಗಿಡುವುದೊ ಅಥವಾ ಮತ್ತೆ ಹೊರಕ್ಕೆ ತೆಗೆಯುವುದೊ ಎನ್ನುವ ಸಂದಿಗ್ದದಲ್ಲಿ ಸಿಕ್ಕಿದ್ದ ಹೊತ್ತಲ್ಲೆ, ಮನದ ಇನ್ನೊಂದು ಮೂಲೆಯಿಂದ ಮೊದಲಿನ ಆಲೋಚನಾ ಸರಣಿಗೆ ಸಂವಾದಿಯಾಗಿ ಮತ್ತೊಂದು ವಾದಸರಣಿ ತೇಲಿ ಬರತೊಡಗಿತು.. ‘ಛೆ..ಛೆ.. ಇರಲಾರದು.. ಅದು ನನಗೆ ಎಂದಾಗಿದ್ದರೆ, ಅದನ್ನು ಯಾರಾದರು ತಿಳಿಸದೆ ಇರುತ್ತಿದ್ದರೆ ? ಬಹುಶಃ ತಾನಿಲ್ಲದಾಗ ಖಾಲಿ ರೂಮೆಂದುಕೊಂಡು ಇಲ್ಲಿ ಇಟ್ಟು, ಮತ್ತೆ ವಾಪಸ್ಸೆತ್ತಿಕೊಳ್ಳಲು ಮರೆತಿರಬೇಕು… ಅದು ಯಾರ ಸಲುವಾಗಿ ತಂದಿದ್ದೊ, ಅಥವಾ ಯಾರಿಗೆ ಸೇರಿದ್ದೊ ? ತೆಗೆದುಕೊಳ್ಳದೆ ಇಟ್ಟುಬಿಡುವುದೆ ಸರಿ..’ ಎಂದು ವಿಲೋಮ ವಾದ ಮುಂದೊಡ್ಡಿ ಗೊಂದಲಕ್ಕಿಳಿಸಿಬಿಟ್ಟಿತ್ತು..
‘.. ಬೇರೆಯವರಿಗೆಂದಾದರೆ ನನ್ನ ರೂಮಿನಲ್ಲೇಕಿಡುತ್ತಿದ್ದರು? ಅದೂ ಇಲ್ಲಿರುವುದು ಒಂದೇ ಒಂದು ಪೆಟ್ಟಿಗೆ ಮಾತ್ರ.. ತಾತ್ಕಲಿಕವಾಗಿ ಸ್ಟೋರು ರೂಮಿನಲ್ಲಿಟ್ಟಂತೆ ಇಟ್ಟಿದ್ದರೆ ಇನ್ನು ಹೆಚ್ಚು ಪೆಟ್ಟಿಗೆಗಳಿರಬೇಕಿತ್ತಲ್ಲವೆ ? ಒಂದೆ ಒಂದನ್ನು ಯಾಕಿಡುತ್ತಿದ್ದರು ? ಆದರು ಅದರ ಕುರಿತಾಗಿ ನನಗೆ ಯಾರಾದರು ಹೇಳಬೇಕಿತ್ತಲ್ಲಾ ? ಅದನ್ನು ನನಗೆ ಹೇಳುವವರು ಎಂದರೆ ಅದು ನನ್ನ ಸೆಕ್ರೆಟರಿ ರಾಗಿಣಿಯೆ ಆಗಿರಬೇಕು.. ಹಾಂ..! ರಾಗಿಣಿಯ ಮೆಟರ್ನಿಟಿ ರಜೆಯ ಕಾರಣದಿಂದ ಅವಳು ನನಗೆ ತಿಳಿಸಲಾಗಿಲ್ಲ.. ಅಲ್ಲದೆ ಅವಳ ಆಗಿನ ಮನಸ್ಥಿತಿಯಲ್ಲಿ ಅವಳಿಗೆ ತನ್ನ ಹೆರಿಗೆಯ ಚಿಂತೆಯಿರುವುದೆ ಹೊರತು ಈ ಸಣ್ಣ ಪುಟ್ಟ ವಿಷಯಗಳು ನೆನಪಿರುವುದು ಕಷ್ಟ.. ಅದರಲ್ಲು ತಾನು ಎರಡು ತಿಂಗಳ ಅಂತರದ ನಂತರ ಬಂದರೆ, ಯಾರಿಗೆ ತಾನೆ ನೆನಪಿದ್ದೀತು ? ಬಹುಶಃ ಅವಳು ಹೆರಿಗೆ ರಜೆ ಮುಗಿಸಿ ವಾಪಸ್ಸು ಬಂದ ಮೇಲೆ ನೆನಪಿಸಿಕೊಂಡು ಹೇಳುತ್ತಾಳೇನೊ?’ ಎಂದು ಅದೇ ಬಿರುಸಿನಲ್ಲಿ ಪ್ರಲೋಭಿಸತೊಡಗಿತ್ತು ಮನದಿನ್ನೊಂದು ಮೂಲೆ..
ಆಗ ಇದ್ದಕ್ಕಿದ್ದಂತೆ ನಿಮಿಷನಿಗೆ ನೆನಪಾಗಿದ್ದು ಕಂಪನಿ ಪಾಲಿಸಿಯಾದ ಮೌಲ್ಯಾಧಾರಿತ ವ್ಯಕ್ತಿತ್ವ ನಿಭಾವಣೆಯ ಪ್ರಮಾಣ ವಚನ.. ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವುದಾದರೆ, ಅನುಮಾನವಿದ್ದಾಗ ಸುರಕ್ಷಿತ ತೀರ್ಮಾನ ಕೈಗೊಳ್ಳುವುದೆ ಉಚಿತ ವಿಧಾನ.. ‘ಈ ವಿಷಯದಲ್ಲಿ ನಿಖರ ಮಾಹಿತಿ ಇಲ್ಲದ ಕಾರಣ ಸುಮ್ಮನೆ ವಾಪಸ್ಸು ಇಟ್ಟು ಬಿಡುವುದೆ ಸರಿ.. ಬೇಕಾದರೆ ರಾಗಿಣಿ ವಾಪಸ್ಸು ಬಂದ ಮೇಲೊ, ಪೋನು ಮಾಡಿದಾಗಲೊ ವಿಚಾರಿಸಿ ಕೇಳಿದರಾಯಿತು..’
ಈ ವಿಚಾರ ಸರಣಿ ಮೂಡುತ್ತಿದ್ದಂತೆ ಗಟ್ಟಿ ನಿರ್ಧಾರ ಮಾಡಿದ ನಿಶ್ಚಿತ ಮನ ಆ ಪೆಟ್ಟಿಗೆಯನ್ನು ಮತ್ತೆ ವಾಪಸಿಟ್ಟು ಬೀಗ ಹಾಕಿ ನಡೆಯಿತು ನಿರಾಳತೆಯ ನಿಟ್ಟುಸಿರುಬಿಡುತ್ತ. ಆದರು ಕಾರಿನ ಪ್ರಯಾಣದುದ್ದಕ್ಕು, ಮನೆ ಸೇರುವ ತನಕ ಆ ಕ್ಯಾಬಿನ್ ಬ್ಯಾಗೇಜ್ ಲಗೇಜಿನ ಸುಂದರ ರೂಪವೆ ಕಾಣುತ್ತಿತ್ತು ನಿಮಿಷನ ಕಣ್ಣ ಮುಂದೆ..!
*******************
ಮುಂದಿನ ಎರಡು ವಾರ ಬಿಡುವಿಲ್ಲದ ಕೆಲಸ ನಿಮಿಷನಿಗೆ. ತಲೆ ಕೆರೆದುಕೊಳ್ಳಲು ಪುರುಸೊತ್ತಿಲ್ಲದಷ್ಟು ಕಾರ್ಯಭಾರ.. ಎರಡು ವಾರದ ನಂತರ ವಿದೇಶದಲ್ಲಿ ನಡೆಸಬೇಕಾಗಿದ್ದ ‘ಮ್ಯಾನೇಜ್ಮೆಂಟ್ ಮೀಟಿಂಗ್’ ಮತ್ತು ‘ಕಸ್ಟಮರ್ ಮೀಟ್’ಗಾಗಿ ಮಾಡಬೇಕಾದ ನೂರೆಂಟು ಸಿದ್ದತೆಗಳು ಅವನ ತಲೆಗೆ ಗಂಟು ಬಿದ್ದಿತ್ತು.. ಹಿಂದೆಲ್ಲ ಇಂಥಾ ಮೇಳಗಳ ಉಸ್ತುವಾರಿ ನೋಡಿಕೊಂಡು ಅನುಭವವಿದ್ದ ರಾಗಿಣಿಯ ಅಲಭ್ಯತೆಯಿಂದಾಗಿ ಎಲ್ಲಾ ತರದ ಚಿಕ್ಕ ಪುಟ್ಟ ಕೆಲಸಗಳ ನಿಭಾವಣೆಯ ಭಾಗವು ಅವನ ಸಮ್ಮತಿಗೊ, ಸಲಹೆಗೊ ಕಾಯುತ್ತ, ಮತ್ತಷ್ಟು ತಡವಾಗಿಸಲು ಅವನನ್ನೆ ಕಾರಣವಾಗಿಸುತ್ತಿತ್ತು.. ಅಂತು ಇಂತು ಎಲ್ಲಾ ಸಿದ್ದತೆಗಳು ನಡೆದು ಬ್ಯಾಂಕಾಕಿಗೆ ಹೊರಡುವ ದಿನ ಬಂದಾಗ ಯಾವುದೊ ದೊಡ್ಡ ಬೆಟ್ಟವೊಂದು ತಲೆಯಿಂದಿಳಿದು ಹಗುರಾಗಿ ಹೋದ ಅನುಭಾವ..
ಎರಡು ದಿನದ ಸಮ್ಮೇಳನಕ್ಕೆ ಬೇಕಾದ ಲಗೇಜು ಪ್ಯಾಕು ಮಾಡಿಕೊಂಡು ಅದಕ್ಕೆ ಸರಿಯಾದ ಸೂಟ್ಕೇಸ್ ಯಾವುದಿದೆಯೆಂದು ಹುಡುಕುತ್ತಿದ್ದವನಿಗೆ ವಾರದ ಪ್ರಯಾಣಕ್ಕೆ ಬೇಕಾಗುವ ಸೈಜಿನ ಲಗೇಜ್ ಬ್ಯಾಗ್ ಮಾತ್ರ ಸಿಕ್ಕಿದಾಗ ತಟ್ಟನೆ ನೆನಪಾಗಿತ್ತು, ಅಲ್ಮೇರದಲ್ಲಿರುವ ಪುಟ್ಟ ಲಗೇಜು.. ‘ಆ ಸೈಜಿನ ಲಗೇಜ್ ಬ್ಯಾಗಿದ್ದಿದ್ದರೆ ಎಷ್ಟು ಸುಲಭವಿರುತ್ತಿತ್ತು? ಚೆಕ್ ಇನ್ ಮಾಡುವ ಹಂಗಿಲ್ಲದೆ ನೇರ ವಿಮಾನದ ಕ್ಯಾಬಿನ್ನಿಗೆ ಒಯ್ದು ಬಿಡಬಹುದಿತ್ತು.. ಈ ದೊಡ್ಡ ಲಗೇಜೆಂದರೆ ಚೆಕ್ ಇನ್ ಮಾಡಲೆ ಬೇಕು.. ಅಂದ ಮೇಲೆ ಹಾಳಾದ್ದು ಎರಡೂ ಕಡೆಯೂ ಲಗೇಜಿನಿಂದ ತಡವಾಗುತ್ತದೆ… ಸಾಲದ್ದಕ್ಕೆ ಅದೇ ವಿಮಾನದಲ್ಲಿ ಬಾಸ್ ಕೂಡ ಹೊರಡುತ್ತಿದ್ದಾರೆ.. ಅವರ ಜತೆಗಿದ್ದಾಗ ತಡವಾಯ್ತೆಂದರೆ ಇನ್ನೂ ಮುಜುಗರ ಹೆಚ್ಚು.. ಅವರಿಗೇನೊ ‘ಫ್ರೀಕ್ವೆಂಟ್ ಫ್ಲೈಯರ್’ ಸ್ಕೀಮಿನಲ್ಲಿ ಪ್ರಿಯಾರಿಟಿ ಚೆಕ್ ಇನ್ ಆಗಿಬಿಡುತ್ತದೆ.. ಹೊಸಬರಾದ ನನ್ನಂತಹವರದು ತಾನೆ ಪಾಡು..?’ ಎಂದು ಗೊಣಗಿಕೊಂಡೆ ಮಾಮೂಲಿಗಿಂತ ಒಂದು ಗಂಟೆ ಮೊದಲೆ ಏರ್ಪೋರ್ಟ್ ತಲುಪಿ ಲಗೇಜ್ ಚೆಕ್ ಇನ್ ಮಾಡಿದ್ದ. ಗಮ್ಯ ತಾಣ ತಲುಪಿ, ಇಮಿಗ್ರೇಶನ್ ಕೌಂಟರ್ ದಾಟಿ ಲಗೇಜ್ ಮತ್ತೆ ಪಡೆಯಲು ಕನ್ವೇಯರ್ ಬೆಲ್ಟಿನತ್ತ ನಡೆದು ಕಾಯುತ್ತ ನಿಂತವನಿಗೆ, ಕಡೆಗು ಅರ್ಧಗಂಟೆಯ ನಂತರವೆ ಲಗೇಜ್ ಕೈಗೆ ಸಿಕ್ಕಿದ್ದು.. ಆದರೆ ಅವನಿಗೆ ಬೇಸರವಾಗಿದ್ದು ಆ ಕಾರಣದಿಂದಲ್ಲ..
ಹೋಟಿಲಿಗೆ ಒಂದೆ ಕಾರಿನಲ್ಲಿ ಹೋಗಬೇಕಿದ್ದ ಕಾರಣ, ಅವನ ಬಾಸು ಆಗಲೆ ತಮ್ಮ ಪುಟ್ಟ ಕ್ಯಾಬಿನ್ ಬ್ಯಾಗೇಜೊಂದನ್ನು ಹಿಡಿದು ಕಾಯುತ್ತ ನಿಂತಿದ್ದರು.. ಚೆಕ್ ಇನ್ ಬ್ಯಾಗೇಜ್ ಇಲ್ಲವೆಂದ ಮೇಲೆ ಸುಮಾರು ಹೊತ್ತೆ ಕಾದಿರಬೇಕು – ಆ ಅಸಹನೆ ಅವರ ಮುಖದಲ್ಲಿ ಎದ್ದು ಕಾಣುವಂತಿದ್ದರು ಬಾಯಿ ಬಿಟ್ಟೇನು ಹೇಳದೆ, ‘ ಯೆಸ್ ಲೆಟಸ್ ಗೋ’ ಎಂದವರನ್ನು ಕುರಿಯ ಹಾಗೆ ಹಿಂಬಾಲಿಸಿ ನಡೆದಿದ್ದ ನಿಮಿಷ.. ಹಾಗೆ ನಡೆದಿದ್ದಂತೆ ಮುಂದೆ ನಡೆದಿದ್ದ ಬಾಸಿನ ಲಗೇಜು ಯಾಕೊ ತೀರಾ ಪರಿಚಿತವಿರುವಂತೆ ಕಂಡಿತು.. ಸ್ವಲ್ಪ ಹತ್ತಿರಕ್ಕೆ ಬಂದು ಯಾಕಿರಬಹುದೆಂದು ಗಮನಿಸಿದವನಿಗೆ ಶಾಕ್ ಆಗುವಂತೆ, ಅದು ಯಥಾವತ್ತಾಗಿ ತನ್ನ ಅಲ್ಮೇರದಲ್ಲಿದ್ದ ಲಗೇಜಿನಂತದ್ದೆ – ಬಣ್ಣ, ಗಾತ್ರ, ವಿನ್ಯಾಸವೆಲ್ಲವು ಪ್ರತಿಶತ ಅದರಂತೆ ಇದ್ದ, ಮತ್ತೊಂದು ಪೋಲೊ ಲಗೇಜ್ ಆಗಿದ್ದುದು ಕಾಣಿಸಿತು.. ಅದರ ಹಿಡಿಯಲ್ಲಿ ಅಂಟಿಸಿದ್ದ ತನ್ನ ಕಂಪನಿಯದೆ ಲೋಗೊ ಕೂಡ ಯಥಾವತ್ ನಕಲಾಗಿದ್ದುದು ಕಾಣುತ್ತಿದ್ದಂತೆ, ‘ಅರೆರೆ..ಈ ಲಗೇಜನ್ನು ಎಲ್ಲರಿಗು ನೀಡಿರುವಂತಿದೆಯಲ್ಲ ? ಬಾಸಿನ ಹತ್ತಿರವೂ ಇದೆಯೆಂದ ಮೇಲೆ, ತನ್ನ ರೂಮಿನಲ್ಲಿರುವುದು ತನಗೆ ಇರಬೇಕೆಂದು ತಾನೆ ಅರ್ಥ? ತಾನೆ ಏನೇನೊ ಇಲ್ಲದ್ದೆಲ್ಲ ಚಿಂತಿಸಿ ಏಮಾರಿಬಿಟ್ಟೆ.. ಈ ಬಾರಿಯಿಂದಲ್ಲದಿದ್ದರು ಮುಂದಿನ ಬಾರಿಯಿಂದ ಅದನ್ನೆ ಬಳಸಿ ಕೊಂಚ ಲಗೇಜ್ ಹೊರೆ ಕಡಿಮೆ ಮಾಡಿಕೊಳ್ಳುವುದೊಳಿತು.. ಅಂತೆಯೆ ಲಗೇಜಿಗೆ ಕಾಯುವ ವೇಳೆ ಕೂಡಾ..’ ಎಂದುಕೊಂಡು ಲಗುಬಗೆಯಿಂದ ಹಿಂಬಾಲಿಸಿದ್ದ ವೇಗದ ಧಾಟಿಯ ಬಾಸಿನ ನಡಿಗೆಯನ್ನೆ ಅನುಸರಿಸುತ್ತ..
ಸಮ್ಮೇಳನವೆಲ್ಲ ಯಶಸ್ವಿಯಾಗಿ ಮುಗಿದ ಮೇಲೆ ಊರಿಗೆ ಹಿಂತಿರುಗಿದ ನಿಮಿಷ ಒಂದು ದಿನ ಸಂಜೆ ಆ ಪೆಟ್ಟಿಗೆ ತೆರೆದು, ಅದನ್ನು ಮನೆಗೊಯ್ದು ಇರಿಸಿಕೊಂಡ. ಅಲ್ಲಿಂದಾಚೆಗೆ ಒಂದೆರಡು ಸಣ್ಣ ಪ್ರಯಾಣಗಳಲ್ಲಿ ಬಳಸಿಯೂ ಬಿಟ್ಟ.. ಅದರ ಫಲಿತವಾಗಿ ಹೊಚ್ಚ ಹೊಸದರಂತಿದ್ದ ಅದರ ಕಪ್ಪು ಗಾಲಿಗಳ ಮೇಲೆ ನಡುವಿನಲ್ಲಿ ಮಂಜು ಮಂಜಾದಂತಿದ್ದ ಬಿಳಿ ಗೆರೆಯೊಂದು, ಅದು ನೆಲದ ಮೇಲೆ ಓಡಾಡಿದ ಗುರುತಿನ ಕುರುಹೆಂಬಂತೆ ಅಚ್ಚು ಹಾಕಿಕೊಂಡು ಬಿಟ್ಟಿತ್ತು. ಅಷ್ಟೆ ಸಾಲದೆನ್ನುವಂತೆ, ಬೇರಾವುದೊ ಲಗೇಜಿಗೆ ತಗುಲಿ ಅದರ ನುಣುಪಾದ ಮೈ ಮೇಲೆ ಕಂಡೂ ಕಾಣದಂತಿದ್ದ ಗೀರುಗಳನ್ನು ಮೂಡಿಸಿ, ಅದರ ಹೊಸತಿನ ಬೆಡಗಿಗೆ ಕೊಂಚ ಕುಂದು ಮೂಡಿಸಿ ಲೋಪವುಂಟಾಗಿಸಿದಾಗ, ಹೊಸ ಕಾರಿಗೆ ಗೀರು ಬಿದ್ದಷ್ಟೆ ಸಂಕಟಪಟ್ಟುಬಿಟ್ಟಿದ್ದ ನಿಮಿಷ..! ಆದರೆ ಹಳತಾದಂತೆ ಅದರ ವ್ಯಾಮೋಹ ತುಸು ಸಡಿಲವಾಗಿಯೊ ಅಥವಾ ಬಿದ್ದ ಹಲವಾರು ಗೀರುಗಳಿಂದ, ಎದ್ದು ಕಾಣುವಂತಿದ್ದ ಒಬ್ಬಂಟಿ ಗೀರು ಎದ್ದು ಕಾಣದಂತೆ ಮರೆಯಾಗಿ ಹೋಗಿಯೊ – ಒಟ್ಟಾರೆ ಅದರ ಪ್ರಕಟ ರೂಪದ ಹೆಚ್ಚುಗಾರಿಕೆಯನ್ನೆ ಗಮನಿಸದವನಂತೆ ಯಾಂತ್ರಿಕವಾಗಿ ಬಳಸತೊಡಗಿದ್ದ ಅದರ ಸೊಬಗನ್ನೆಲ್ಲ ಮರೆತೆ ಹೋದವನಂತೆ..
*******************
ಇದಾಗಿ ಸುಮಾರು ಎರಡು ತಿಂಗಳುಗಳ ನಂತರ…
ಆಫೀಸಿನ ಟೆಲಿ ಕಾನ್ಫರೆನ್ಸೊಂದರಲ್ಲಿ ನಿರತನಾಗಿದ್ದ ನಿಮಿಷನಿಗೆ ಗಾಜಿನ ಗೋಡೆಯಾಚೆ ಯಾರೊ ಹೆಣ್ಣು ಕಾಯುತ್ತ ನಿಂತಿದ್ದು ಕಾಣಿಸುತ್ತಿತ್ತು.. ಭಾಗಶಃ ಪಾರದರ್ಶಕ ಗಾಜಿನ ತೆರೆಯ ಪಾರ್ಶ್ವ ಭಾಗದಿಂದ ಅರೆಬರೆ ಕಾಣುತ್ತಿದ್ದ ಸಮವಸ್ತ್ರದ ದೆಸೆಯಿಂದಲೆ ಅದು ಬಾಸಿನ ಸೆಕ್ರೆಟರಿ ‘ಸ್ಟೆಲ್ಲಾ’ ಎಂದರಿವಾಗಿ ಹೋಗಿತ್ತು ನಿಮಿಷನಿಗೆ.. ಆದರೆ ಅವನ ಕಾಲ್ ಮುಗಿಯಲು ಇನ್ನು ಹತ್ತು ನಿಮಿಷವಿತ್ತು.. ಹೀಗಾಗಿ ಅವಳು ನಿಂತಿದ್ದರ ಅರಿವಿದ್ದರು ಅವಳಿಗೆ ಕಾಣುವಂತೆ, ಕೈ ಮೂಲಕವೆ ಕಾದಿರಲು ಸನ್ನೆ ಮಾಡಿ ಹಾಗೆಯೆ ಮಾತು ಮುಂದುವರೆಸಿದ್ದ. ಅದರ ಅರಿವಿದ್ದೊ ಏನೊ ಸ್ಟೆಲ್ಲಾ ಸಹ ಒಳಗೆ ಬರದೆ ಕಾಯುತ್ತ ನಿಂತಿದ್ದಳು ಅವನ ಪೋನಿನ ಮಾತು ಮುಗಿವವರೆಗೆ. ಅದು ಮುಗಿಯುತ್ತಿದ್ದಂತೆ ಮೆಲುವಾಗಿ ಬಾಗಿಲು ತಟ್ಟಿ, ‘ಹಲೋ ನಿಮಿಷ್..ಮೇ ಐ ಕಮ್ ಇನ್ ?’ ಎಂದಳು.. ವಯಸಿನ ಹಿರಿತನದಿಂದಲೊ ಅಥವಾ ಅನುಭವದ ಗಟ್ಟಿತನದಿಂದಲೊ ಅವಳು ಎಲ್ಲರನ್ನು ಏಕವಚನದ ಹೆಸರಲ್ಲೆ ಕರೆಯುವುದು – ಅವಳ ನೇರ ಬಾಸಿನ ಹೊರತಾಗಿ.
” ಹಲೋ ಸ್ಟೆಲ್ಲಾ.. ಪ್ಲೀಸ್ ಕಮ್.. ಏನಿ ಥಿಂಗ್ ಅರ್ಜೆಂಟ್ ? ಸಾರೀ.. ಐ ವಾಸ್ ಇನ್ ಎ ಕಾಲ್ ಜಸ್ಟ್ ನೌ..” ಎಂದ..
ಯಾಕೊ ತುಸು ಕಂಗೆಟ್ಟಂತಿದ್ದ ಸ್ಟೆಲ್ಲಾ, ” ನೋ ಪ್ರಾಬ್ಲಮ್ ನಿಮಿಷ್..ಇಟ್ಸ್ ಓಕೆ .. ಸಾರಿ ಫಾರ್ ದ ಟ್ರಬಲ್.. ನಾನು ನಿಮ್ಮಲ್ಲಿ ಅರ್ಜೆಂಟಾಗಿ ಏನೊ ಕೇಳ ಬೇಕಾಗಿತ್ತು.. ಅದಕ್ಕೆ ಬಂದೆ..” ಎಂದಳು..
” ಕೇಳಿ ಪರವಾಗಿಲ್ಲ.. ನನ್ನ ಮುಂದಿನ ಮೀಟಿಂಗಿಗೆ ಇನ್ನು ಅರ್ಧ ಗಂಟೆ ಬಾಕಿಯಿದೆ..”
” ಏನಿಲ್ಲ ನಿಮಿಷ್.. ಈ ಬಾರಿಯ ನಮ್ಮ ಮಾರ್ಕೆಟಿಂಗ್ ಸ್ಲೋಗನ್ನಿಗೆ ನಾವೊಂದು ಕಾಂಪಿಟೇಷನ್ ನಡೆಸಿ, ಎಲ್ಲರನ್ನು ಭಾಗವಹಿಸುವಂತೆ ಮಾಡಿ ಅದಕ್ಕೆ ಬಹುಮಾನಗಳನ್ನು ಘೋಷಿಸಿದ್ದೆವಲ್ಲ..?”
” ಆಹಾಂ.. ಹೌದು ನೆನಪಿದೆ.. ನಾನಿಲ್ಲಿಗೆ ಬರುವ ಮೂರು ತಿಂಗಳ ಮೊದಲೆ ನಡೆದಿತ್ತು.. ಈಗೇಕದರ ಸುದ್ದಿ..?”
” ಅದರಲ್ಲಿ ಗೆದ್ದ ಮೂವರಿಗೆ ಪ್ರೈಜ್ ಕೊಡಬೇಕೆಂದು ಮೂರು ಐಟಂ ಕೂಡ ತಂದಿದ್ದೆವು.. ಆದರೆ ಮೂವರಲ್ಲಿ ಒಬ್ಬರು ಕೊರಿಯಾದವರಾದ ಕಾರಣ ಅವರಿಗೆ ನೇರ ಬಹುಮಾನ ಕೊಡಲಾಗಲಿಲ್ಲ.. ಯಾವಾಗಲಾದರು ಅವರು ಇಲ್ಲಿಗೆ ಬಂದಾಗ ಅಥವಾ ಯಾರಾದರು ಅಲ್ಲಿಗೆ ಹೋದಾಗ ಕಳಿಸಿದರಾಯ್ತೆಂದು ತೆಗೆದಿಡಲಾಗಿತ್ತು..”
” ಇಷ್ಟೊತ್ತಿಗೆ ಯಾರಾದರು ಒಯ್ದು ಕೊಟ್ಟಾಗಿರಬೇಕಲ್ಲವೆ..? ನಾನು ಹೇಗಿದ್ದರು ಮುಂದಿನ ವಾರ ಕೊರಿಯಾ ಆಫೀಸಿಗೆ ಹೋಗುತ್ತಿದ್ದೇನಲ್ಲಾ ? ಇನ್ನು ತಲುಪಿಸಿಲ್ಲವೆಂದರೆ, ಬೇಕಿದ್ದರೆ ನಾನು ಕೊಂಡೊಯ್ಯಬಲ್ಲೆ…”
” ಇಲ್ಲಾ ನಿಮಿಷ್.. ಅದೇ ಈಗ ತೊಂದರೆಯಾಗಿರುವುದು.. ಆ ವ್ಯಕ್ತಿ ಮುಂದಿನ ವಾರ ಇಲ್ಲಿಗೆ ಬರುತ್ತಿದ್ದೇನೆ, ಬಂದಾಗ ಅದನ್ನು ಕೊಂಡೊಯ್ಯುತ್ತೇನೆ ಎಂದು ಮೇಲ್ ಬರೆದಿದ್ದಾರೆ..”
“ಸರಿ ಮತ್ತೇನು ತೊಂದರೆ..? ಸುಲಭದಲ್ಲೆ ಪರಿಹಾರವಾಯ್ತಲ್ಲ.. ಆಗಲೆ ಕೊಟ್ಟುಬಿಟ್ಟಾರಾಯ್ತಲ್ಲವೆ ?”
“ತೊಂದರೆಯಾಗಿರುವುದು ಹ್ಯಾಂಡ್ ಓವರ್ ಮಾಡುವುದಕ್ಕಲ್ಲಾ..”
“ಮತ್ತೇನಕ್ಕೆ ?”
” ಇದ್ದಕ್ಕಿದ್ದಂತೆ ಈಗ ಆ ಐಟಂ ಎಲ್ಲಿದೆಯೊ ಕಾಣುತ್ತಿಲ್ಲ.. ”
“ಹಾಂ…?!”
” ಅದೊಂದು ಕ್ಯಾಬಿನ್ ಬ್ಯಾಗೇಜ್ ಪೋಲೊ ಲಗೇಜ್ ಪೀಸ್ ನಿಮಿಷ್.. ಅದು ಎಲ್ಲಿಟ್ಟಿದೆಯೆಂದು ನನಗೂ ಗೊತ್ತಿರಲಿಲ್ಲ.. ಅದಕ್ಕೆ ರಾಗಿಣಿಗೆ ಪೋನ್ ಮಾಡಿ ಕೇಳಿದೆ.. ಆ ಸಮಯದಲ್ಲಿ ಅವಳೆ ಕೋ ಆರ್ಡಿನೇಟ್ ಮಾಡಿದ್ದು.. ಅವಳೆಂದಳು, ಅದು ದೊಡ್ಡ ಐಟಂ ಆದ ಕಾರಣ ಹೊರಗಿಡಲು ಜಾಗ ಇರಲಿಲ್ಲ.. ಆ ಹೊತ್ತಿನಲ್ಲಿ ನಿಮ್ಮ ರೂಮಿನ್ನು ಖಾಲಿಯಾಗಿದ್ದ ಕಾರಣ ಅದನ್ನು ನಿಮ್ಮ ರೂಮಿನಲ್ಲಿಟ್ಟು ಬೀಗ ಹಾಕಿದ್ದಳಂತೆ.. ಸೇಫಾಗಿರಲಿ ಅಂತ.. ‘ಅಲ್ಲೆ ಎಡಗಡೆಯ ಕಬೋರ್ಡಿನ ಮೇಲೆ ಇಟ್ಟಿದೆ ಒಂದು ರಟ್ಟಿನ ಪೆಟ್ಟಿಗೆಯೊಳಗೆ, ನೋಡಿ ತೆಗೆದುಕೊ’ ಎಂದಳು.. ಆದರೆ ಇಲ್ಯಾವುದು ಪೆಟ್ಟಿಗೆ ಇರುವಂತೆ ಕಾಣುತ್ತಿಲ್ಲ.. ನೀವು ಬಂದ ಮೇಲೆ ಅದನ್ನೇನಾದರು ನೋಡಿದಿರಾ? ಬೈ ಛಾನ್ಸ್ ಎಲ್ಲಾದರು ಎತ್ತಿಟ್ಟಿದ್ದೀರಾ ? ಎಂದು ಕೇಳಲು ಬಂದೆ ಅಷ್ಟೆ.. ನಿಮಗೇನಾದರು ಗೊತ್ತಿದೆಯ, ಅದರ ಬಗ್ಗೆ..?” ಎಂದು ಅವನ ಮುಖವನ್ನೆ ನೋಡುತ್ತ ಮಾತು ನಿಲ್ಲಿಸಿದಳು ಸ್ಟೆಲ್ಲಾ, ಅವನ ಉತ್ತರಕ್ಕಾಗಿ ಕಾಯುತ್ತ..
ಸನ್ನಿವೇಶದ ಸಂಕೀರ್ಣತೆ ತಂದಿರಿಸಿದ ಅನಿರೀಕ್ಷಿತ ಇಕ್ಕಟ್ಟಿನ ಬಿಕ್ಕಟ್ಟಿಗೆ ಸಿಕ್ಕಿ ಕಕ್ಕಾಬಿಕ್ಕಿಯಾಗುತ್ತ, ಅವಳಿಗೇನುತ್ತರಿಸಬೇಕೆಂದು ಅರಿವಾಗದ ಸಂದಿಗ್ದದಲ್ಲಿ ಪೆದ್ದನಂತೆ ಅವಳ ಮುಖವನ್ನೆ ನೋಡುತ್ತ ನಿಂತುಬಿಟ್ಟ ನಿಮಿಷ – ಬಾಯಿಂದ ಮಾತೆ ಹೊರಡದವನಂತೆ !
(ಮುಕ್ತಾಯ)
– ನಾಗೇಶ ಮೈಸೂರು
Nice story…
ಥ್ಯಾಂಕ್ಸ್