ಹೀಗೇ ತೆವಳಬೇಕೇ ನಮ್ಮ ಹೆಚ್ಚಿನ ಧಾರಾವಾಹಿಗಳು?
ದಿನವೊಂದರಲ್ಲಿ ಮೂರು, ನಾಲ್ಕು ಬಾರಿ ನ್ಯೂಸ್ ನೋಡುವ ಅಭ್ಯಾಸವಿರುವ ನಾನು ಮಧ್ಯೆ ಬ್ರೇಕ್ ನ ಸಮಯದಲ್ಲಿ ಕನ್ನಡ, ಮಲಯಾಳ ಚಾನೆಲ್ ಗಳನ್ನು ಗಮನಿಸುವುದಿದೆ. ಆ ಸಂದರ್ಭದಲ್ಲಿ ನಾನು ಗಮನಿಸಿದ ವಿಚಾರ ಮಲಯಾಳಂ ಚಾನೆಲ್ ಕೌಟುಂಬಿಕ ಸೀರಿಯಲ್ ಗಳನ್ನು ವೀಕ್ಷಕರ ಮುಂದಿಡುವ ರೀತಿಗೆ ಮತ್ತು ಕನ್ನಡ ಧಾರಾವಾಹಿಗಳಲ್ಲಿ ಅವುಗಳನ್ನು ಗಿರಕಿ ಹೊಡೆಯಿಸುವ ಚಾಣಾಕ್ಷತೆಗೆ. ಮಲಯಾಳಂ ನಮ್ಮ ರಾಜ್ಯದ ಭಾಷೆ ಮತ್ತು ಅವುಗಳಲ್ಲಿ ಸಹಜವಾಗಿ ಅವರು ದೈನಂದಿನ ಜನಜೀವನವನ್ನು ಯಥಾವತ್ತಾಗಿ ನೋಡುಗರಿಗೆ ಉಣಬಡಿಸುವ ವೈವಿಧ್ಯತೆ. ಪ್ರಕೃತಿ, ನೀರು, ಕಡಲು, ತೆಂಗಿನ ಮರ, ದೋಣಿ, ಟೀ ಶಾಪ್, ಉದ್ದದ ಗಾಜಿನ ಲೋಟಗಳಲ್ಲಿ ಟೀ, ನೇಂದ್ರ ಫಲ, ಮನೆಗಳಲ್ಲಿನ ನಿತ್ಯದ ಬದುಕು ಅತ್ಯಂತ ತಾಜಾ ತಾಜಾ ಆಗಿ ಅವು ನೋಡುಗರ ಮನಸೂರೆಗೈದರೆ , ಕೌಟುಂಬಿಕ ಜೀವನದ ಸಹಜ ಚಿತ್ರಣ ಉತ್ಪ್ರೇಕ್ಷೆ ರಹಿತವಾಗಿ ಕಾಣಬಹುದು. ಹಳೆಯ ಪಂಚೆ, ಬುಶ್ ಶರ್ಟ್, ಸಡಿಲವಾಗುವ ಪಂಚೆಯನ್ನು ಎತ್ತಿ ಬಿಗಿದು ಕಟ್ಟುತ್ತಲೇ ಓಡಾಟ, ಕಾಟನ್ ಸೀರೆ, ಎತ್ತಿಕಟ್ಟಿದ ಜುಟ್ಟು, ಬಿಳಿಯ ಸೀರೆ ಅಥವಾ ಅಡ್ಡ ಮುಂಡು (ಮಹಿಳೆಯರ ಉಡುಗೆ) ಹಳೆಯ ಮನೆ ಅದೂ ವೈಭೋಗ ರಹಿತ, ಅವಿವಾಹಿತ ಹೆಣ್ಣುಮಕ್ಕಳ ಡ್ರೆಸ್ , ಬಾಚಿ ಇಳಿಬಿಟ್ಟ ಕೂದಲು, ಮನೆಯೊಳಗಿನ ಹಿತಕಾರಿ ಸಂಬಂಧಗಳು ಎಲ್ಲವೂ ಇನ್ನಿಲ್ಲದ ಹಾಗೆ ಮನಸ್ಸನ್ನು ಸೆರೆ ಹಿಡಿಯುತ್ತದೆ.
ಬದುಕು ಕೇರಳ ರಾಜ್ಯದಲ್ಲಿ ಆದರೂ ನನ್ನದು ಅಪ್ಪಟ ಕನ್ನಡದ ಮನೆ. ಎರಡೂ ಭಾಷೆಗಳಲ್ಲಿ, ಬದುಕಿನಲ್ಲಿ ಸಾಮರಸ್ಯ ಹೊಂದಿದವರು ನಾವು. ಮಲಯಾಳಿ ಸಮುದಾಯದ “ವಿಷು ಹಬ್ಬ” ಆಚರಿಸುತ್ತೇವೆ. ಕನ್ನಡದ ಹಬ್ಬಗಳನ್ನೂ ಆಚರಿಸುತ್ತೇವೆ. ಕನ್ನಡದ ಕೃತಿಗಳ ಬಗ್ಗೆ ಸಾಕಷ್ಟು ಅಭಿಮಾನವಿದೆ. ನಾನಿಲ್ಲಿ ಸೀರಿಯಲ್ ಗಳಲ್ಲಿ ಅಸಹಜವಾಗಿ ಕಾಣುವ ವಿಚಾರಗಳನ್ನು ಎಗ್ಗಿಲ್ಲದೆ ಪ್ರಸಾರಿಸುವ ಬಗ್ಗೆ ಅಭಿಪ್ರಾಯಿಸುತ್ತಿದ್ದೇನೆ. ಹಾಗೆಂದು ಉತ್ತಮ ಕಥಾವಸ್ತುಗಳಿದ್ದು ಮನೆಮಂದಿ ಎಲ್ಲರು ಒಟ್ಟಿಗೆ ಕುಳಿತು ನೋಡುವಂಥ ಧಾರಾವಾಹಿಗಳು ಇಲ್ಲದಿಲ್ಲ. ಅವು ಅಪಾರ ಜನಪ್ರಿಯತೆ ಗಳಿಸಿದ್ದೂ ಇದೆ. ಅವು ಗಟ್ಟಿ ತಳಹದಿಯ ಮೇಲೆ ನಿಂತರೆ ಇನ್ನೂ ಹಲವು ಹೀಗಿರುತ್ತದೆ.
ಬಹಳಷ್ಟು ಕಡೆ ನಾನು ಗಮನಿಸಿದ್ದು ಸೀರಿಯಲ್ ಗಳಲ್ಲಿನ ಸ್ತ್ರೀಯರ ಪಾತ್ರಗಳು; ಅಲ್ಲಿ ಅಲಂಕಾರ, ಸೀರೆ, ಒಡವೆ, ನಾನಾ ಮಾದರಿಯ ಉಡುಗೆ ತೊಡುಗೆಯ, ಕೇಶಾಲಂಕಾರದ, ಗಾಢ ತುಟಿರಂಗಿನ ಪ್ರದರ್ಶನಕ್ಕೆ ಕೊಟ್ಟ ಆದ್ಯತೆ ಉತ್ತಮ ಕಥಾವಸ್ತುವಿಗೆ ಕಾಣುವುದಿಲ್ಲ. ಕೃತಕತೆಯೇ ಜಾಸ್ತಿ. ಜೊತೆಗೆ ಕಣ್ಣೆದುರಿಗೇ ವಾಸ್ತವ ಕಂಡರೂ ಬಾಲಿಶ ಮಾತುಗಳಲ್ಲಿ, ಭೋಳೆತನದ ಪರಮಾವಧಿ ಗಮನಿಸ ಬಹುದು. ಸಣ್ಣ ಮಕ್ಕಳಿಗೆ ಕೂಡ ಅರ್ಥವಾಗುವ ಮಟ್ಟಿನ ಸತ್ಯಗಳು ಪ್ರಬುದ್ಧರಿಗೆ ಅರ್ಥವಾಗದೆ ಹೋದೀತೆ? . ಸುಳ್ಳು ಹೇಳುವಾಗಿನ ಮುಖಭಾವ, ತೊದಲು . ಅದೂ, ಅದೂ ಎನ್ನುವ ರಾಗ ಕಂಡಾಗ ಅದು ಅಸತ್ಯ ಅನ್ನುವುದು ಮಕ್ಕಳಿಗೂ ಅರ್ಥವಾಗುತ್ತದೆ. ಇನ್ನು ಸೀರಿಯಲ್ ಗಳಲ್ಲಿ ಪ್ರಧಾನವಾಗಿ ಎಲ್ಲವನ್ನೂ ಒಂದೇ ದೊಡ್ಡಿಯಲ್ಲಿ ಕೂಡಿ ಹಾಕಿದ ಹಾಗೆ ಒಂದೇ ಮನೆಯಲ್ಲಿ ಸಂಬಂಧಿಕರೆಲ್ಲರ ವಾಸ. ಇಂದಿಗೆ ಮನೆ ಎಂದರೆ ಅಲ್ಲಿ ತಾಯಿ, ತಂದೆ ಮಕ್ಕಳು ಅಥವಾ ಅತ್ತೆ, ಮಾವ , ದಂಪತಿ, ಮಕ್ಕಳಷ್ಟೆ, ಸಂತೆಯ ಹಾಗೆ ಎಲ್ಲಿದೆ? ಬೇರೆ ಬೇರೆ ನಿವಾಸಗಳಾದರೆ ಖರ್ಚು ಹೆಚ್ಚಾಗುವ ದೃಷ್ಟಿಯಿಂದ ಈ ಸಕಲಕೆಲ್ಲ ಒಂದೆ ಮನೆ. ಆ ಮನೆಗಳಲ್ಲಿ ಊಟ, ತಿಂಡಿಗಳ ಸಮಯದಲ್ಲಿ ಒಟ್ಟಾಗುವಿಕೆ, ಅಲ್ಲಿ ಮಾತ್ಸರ್ಯ, ಚಾಡಿ, ಡಬಲ್ ಮೀನಿಂಗ್ ನ ಡೈಲಾಗ್ ಗಳು , ಉರಿನೋಟ, ವ್ಯಂಗ್ಯಕ್ಕೇ ಸೀಮಿತ.
ಪ್ರತಿ ಮನೆ ಎಂದರೆ ಅದು ಮನೆಯವರಿಗೆ ನೆಮ್ಮದಿಯ ತಾಣವಾಗಬೇಕು; ಆದರೆ ಇಲ್ಲಿ ಮನೆ ಒಡೆಯುವಿಕೆ, ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟುವಿಕೆ, ತಿನ್ನುವ ಆಹಾರದಲ್ಲಿ ಗುಟ್ಟಾಗಿ ಏನೇನನ್ನೋ ( ನಿದ್ದೆಮಾತ್ರೆ, ಸ್ಲೋ ಪಾಯಿಸನ್, ವಾಂತಿಗೆ. ಕಾಯಿಲೆಗೆ ಕಾರಣವಾಗುವುದನ್ನು) ಹಾಕುವುದು, ನಡೆವ ಹಾದಿಗೆ ಎಣ್ಣೆ ಚೆಲ್ಲಿ ಬೀಳಿಸುವುದು, ಒಬ್ಬರಿಗೊಬ್ಬರಿಗೆ ಕಾಣದಂತೆ ಗುಟ್ಟಿನ ವ್ಯವಹಾರಗಳು, ಸೊಸೆಯಾದಾಕೆಗೆ ಅಡಿಗೆ, ತಿಂಡಿ ತಯಾರಿ, ಮನೆಗೆಲಸ , ಪರಮ ವಿಧೇಯತೆ , ಕಣ್ಣೀರು, ದೇವತಾರ್ಚನೆ ಬಿಟ್ಟು ಇನ್ನೇನಿಲ್ಲ. ಆಕೆಯ ವಿದ್ಯಾರ್ಹತೆ, ನೌಕರಿ, ಹಾಬಿಗಳು, ಮನರಂಜನೆ ಎಲ್ಲ ಅದಷ್ಟರಲ್ಲೇ ಇರುತ್ತದಾ? ಗಂಡನಾದವ ಆಕೆಯನ್ನು ಅಲಕ್ಷಿಸುವುದು, ವಿರಸ, ಜಗಳ ಬೇಕಾ? ಅದು ಬಿಟ್ಟರೆ ದೇವಸ್ಥಾನಕ್ಕೆ ಹೊರಡುವುದು; ಅದೂ ಮದುವೆ ಮನೆಗೆ ಹೊರಟಂತೆ. ಭಕ್ತಿ ಬೇಕು ನಿಜ. ಆದರೆ ಅತೀ ಅಲಂಕಾರ, ಮನೆಯಿಂದ ಹೊರಗಿನ
ಸಂಪರ್ಕವೆಂದರೆ ಹೆಣ್ಣುಮಕ್ಕಳಿಗೆ ಬರೇ ದೇವಸ್ಥಾನ, ಕಾರಿನಲ್ಲಿ ರಸ್ತೆಯ ತುಂಬ ಸುತ್ತಾಡುವುದಷ್ಟೇನಾ? ಜಗತ್ತು ನಾಗಾಲೋಟದಿಂದ ಅಭಿವೃದ್ಧಿಯಾಗುವ ಈ ದಿನಗಳಲ್ಲಿ ಮಹಿಳೆ ಅಂದರೆ ಕೇವಲ ಅಡಿಗೆ, ಊಟ, ತಿಂಡಿ , ಅಲಂಕಾರ, ಕಣ್ಣೀರು, ಬಲಿಪಶುವಿನ ಸ್ಥಾನವಷ್ಟೇನಾ? ಆದರೆ ಅನ್ಯ ಮಹಿಳಾ ಸದಸ್ಯರೆಂದರೆ ಬರೇ ಮನೆ ಒಡೆಯುವಿಕೆ, ಗುರುಗುಟ್ಟುವಿಕೆ, ಜಗಳ ತಂದು ಹಾಕುವಿಕೆ, ವ್ಯಂಗ್ಯ, ಮಾತ್ಸರ್ಯ, ಅಸಹನೆ ಅಂತಲೇ ತೋರಿಸುವುದು ಸರಿಯೇ? ಮಹಿಳೆಯರ ಪಾತ್ರದ ಚಿತ್ರಣ ಹೀಗಿರುತ್ತದೆ ಹೊರತು ಪುರುಷ ಪಾತ್ರಗಳು ಇಲ್ಲಿ ನಾಮ್ ಕೇ ವಾಸ್ತೆ ಅನ್ನುವುದನ್ನು ಗಮನಿಸಬೇಕು.
ಮಹಿಳೆ ಅಂದರೆ ಆಕೆ ಮನೆ ಮಗಳಾಗಿರಲಿ, ಸೊಸೆಯೇ ಆಗಿರಲಿ; ಅಥವಾ ಹಿರಿಯಾಕೆ– ಅತ್ತೆಯೋ, ಅಮ್ಮನೋ ಇರಲಿ ಆಕೆಯ ವ್ಯಕ್ತಿತ್ವ ಅಷ್ಟಕ್ಕೇ ಮೀಸಲಾ? ಬುದ್ಧಿಶಕ್ತಿ, ಅರಿವು, ಜವಾಬ್ದಾರಿ, ಪ್ರೌಢಿಮೆ, ವಿದ್ಯೆ, ಉದ್ಯೋಗ ಇತ್ಯಾದಿ ಏನೂ ಆಕೆಗೆ ಇಲ್ಲವೇ? ಆಕೆ ಮನೆಯೊಡೆವ ಕೆಲಸಕ್ಕೇ ಸೀಮಿತವಾಗಿ ತೋರಿಸಿದ್ದೇ ಆದರೆ ಅಂಥ ಸೀರಿಯಲ್ ಗಳನ್ನು ನಿತ್ಯ ನೋಡುವ! ಹುಡುಗಿಯರು ಅತ್ತೆ ಅಂದರೆ ಪ ತಿಯ ತಾಯಿ, ಆಕೆ ಗೌರವಾನ್ವಿತೆ, ಮನೆಯ ಹಿರಿಮಹಿಳೆ ಎಂದು ಪರಿಗಣಿಸುತ್ತಾರಾ? ಅಥವಾ ಸೀರಿಯಲ್ ಗಳ ನ್ನು ನೋಡುವ ಭ್ರಮಾಧೀನತೆಯ ಕಣ್ಣಿಂದಲೇ ಆಕೆ ಅತ್ತೆ ಅಂದರೆ ನೂತನ ಪತಿ, ಪತ್ನಿಯರ ಮಧ್ಯ ವಿರಸ ತಂದು ಹಾಕುವಾಕೆ ಎಂದು ತಾತ್ಸಾರದಿಂದಲೇ ನೋಡುತ್ತಾರಾ? ಆಕೆಗೆ ಕಣ್ಣೀರು ಹಾಕಿಸುವುದೇ ಕೆಲಸ, ತಮ್ಮಿಬ್ಬರ ಸಿಹಿ ಬಾಳಿನಲ್ಲಿ ಅಡ್ಡ ಬರುವಾಕೆ ಎಂಬ ಕಹಿ ನೂತನ ವಧುವಿಗೆ ಬಂದರೆ ಆ ಸಂಸಾರದ ಕಥೆ ಹೇಗಿರುತ್ತದೆ? ಅದೇ ರೀತಿ ಅತ್ತೆಯ ಸ್ಥಿತಿ ಇದ್ದೇ ಇರುತ್ತದೆ. ಮನೆಯೊಳಗೆ ಸೌಹಾರ್ದತೆಯಿಂದ ಇದ್ದು ಮಧುರವಾದ ಸಂಬಂಧಗಳನ್ನು ಬೆಳೆಸಿಕೊಂಡು ಮನೆ ಅಂದರೆ ಅದು ತಂಪಿನ ತಾಣವಾಗಬೇಕಾದಲ್ಲಿ ಬೆಂಕಿಯ ಕೆಂಡ ಮಾಡುವ ಹಾಗಿರಬಾರದು. ಸೀರಿಯಲ್ ನಲ್ಲಿ ಕಾಣುವುದು ಬದುಕಲ್ಲ ನಿಜ ; ಆದರೆ ದಿನದಿನ ಅದನ್ನೇ ಕಂಡರೆ ಮಿಥ್ಯವೂ ಸತ್ಯವೆಂಬ ಭ್ರಮೆ ತಪ್ಪದು.
ಮುಕ್ತಾಯವಾಗಿ ಆರಂಭ ಮಾತ್ರವಿರುವ ಮುಕ್ತಾಯವೇ ಇಲ್ಲದ ಇಂಥ ಧಾರಾವಾಹಿಗಳು ಸಮಾಜಕ್ಕೆ ಏನನ್ನು ಕೊಡುತ್ತವೆ? ವರುಷಗಳೇ ಉರುಳಿದರೂ ಮುಕ್ತಾಯ ಕಾಣದು. ನಮ್ಮಲ್ಲಿ ಉತ್ತಮ ಕಥೆಗಳು ಧಾರಾಳವಾಗಿವೆ. ಅವುಗಳು ಯಾಕೆ ಬೇಡವಾಗುತ್ತದೆ? ಕದನ, ಕಾಳಗ ಮನೆಯ ನಿತ್ಯದ ಬದುಕಾದರೆ ಮನಶ್ಶಾಂತಿ ಎಲ್ಲಿದೆ? ದಿನಾ ತಪ್ಪದೆ ನೋಡುವ ಎಳೆಯರ, ಹಿರಿಯರ ಮನಸ್ಸು ಇದರಿಂದ ಪ್ರಭಾವಿತಗೊಳ್ಳುತ್ತದೆ.
ಖ್ಯಾತ ನಿರ್ದೇಶಕರೊಬ್ಬರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅವರು ವಿಷಾದಿಸಿದ್ದರು. ಅಲ್ಲಿ ಅವರನ್ನುವ ಹಾಗೆ ಶ್ರೀಮಂತರ ಮನೆಯ ಕಥೆಗಳಾಗಬೇಕು; ಅಲ್ಲಿ ಸಕಲ ವೈಭವಗಳಿರತಕ್ಕದ್ದು, ಆದರೆ ಮನೆಯಲ್ಲಿ ನಿತ್ಯಾ ಜಗಳ, ಕಾಳಗ, ಅಸೂಯೆ, ವಿರಸ, ಅನ್ಯ ಸಂಬಂಧ, ಕಣ್ಣೀರು, ನೋವು ,ಒಟ್ಟಿನಲ್ಲಿ ಸುಖಶಾಂತಿ ಎನ್ನುವುದು ಅವರಿಗೆ ಇರಬಾರದು. ಮೋಸ ವಂಚನೆ , ಅಪಘಾತ, ಕೋಮಾ, ಅಳು, ಗಲಾಟೆ ದಿನದ ಅಂಗವಾಗತಕ್ಕದ್ದು. ಅದಕ್ಕೆ ಮುಕ್ತಾಯವಿಲ್ಲ. ಹೀಗೆ ಮೇಲಿಂದ ಒತ್ತಡ ಬರುತ್ತದೆ ಎಂ ಬ ಅಭಿಪ್ರಾಯ ಕೊಟ್ಟಿದ್ದರು. ಹಾಗಿದ್ದರೇ ಅದನ್ನು ನೋಡುವ ಮಧ್ಯಮ ವರ್ಗದವರು ಆ ಧಾರಾವಾಹಿಯ ಪಾತ್ರಗಳ ಬದುಕಿನಲ್ಲಿ ಮುಗಿಯದ ಕಷ್ಟ, ಸಂಕಟಗಳಿಗೆ ತಮ್ಮ ಬದುಕನ್ನು ಹೋಲಿಸಿಕೊಳ್ಳುತ್ತಾರೆ. ಜೊತೆಗೆ ಅವರಿಂದ ತಾವೇ ಸುಖಿಗಳು ಎಂಬ ಅನ್ನಿಸಿಕೆಯ ಜೊತೆಗೆ ಸಿರಿವಂತರ ಬದುಕೆಂದರೆ ಇಷ್ಟೇ ಅನ್ನುವ ತೃಪ್ತಿ ಪಡೆಯುತ್ತಾರೆ. ಅವರ ಜಗಳಗಳನ್ನು ಎಂಜಾಯ್ ಮಾಡುತ್ತಾ ಮಾಡುತ್ತ ವೀಕ್ಷಕ ವರ್ಗ ಹೆಚ್ಚುತ್ತದೆ. ಟಿ.ಆರ್.ಪಿ. ಕೂಡಾ ಹಾಗೇ. ಈಗ ಅರೆಕ್ಷಣ ವಿವೇಚಿಸಿದರೆ ಇದು ಸಮಾಜಕ್ಕೆ ಕೊಡುವುದು ಪೊಳ್ಳು ಅಥವಾ ಮನೆಮನೆಗಳಲ್ಲಿನ ಸಂಬಂಧಗಳನ್ನು ಒಡೆಯುವ ಕೆಲಸ ಮಾಡುತ್ತದೆ ಅನ್ನುವುದು ಯಾರೂ ಹೇಳದೆ ಅರ್ಥವಾಗುತ್ತದೆ.
– ಕೃಷ್ಣವೇಣಿ, ಕಿದೂರು
True..
ನಿಜ. ಮುಕ್ತಿಯೇ ಇಲ್ಲದ ಕಿರಿಕಿರಿ ಹುಟ್ಟಿಸುವ ಧಾರಾವಾಹಿಗಳನ್ನು ನಮ್ಮ ಮನೆಯಲ್ಲಿ ವೀಕ್ಷಿಸುವುದನ್ನು ಬಿಟ್ಟು ಕೆಲವು ವರ್ಷಗಳೇ ಆದುವು.
Wonderful article, T,V Saraniya Nirdeshakaru, Idannu Gamanisi,
Sookta Krama Kaikolluwadu sookta, Aaa… Jagamagisuwa Seere..
, Odawe Wastu.., Dhalada Make -up. Datta Kappina(Dark) Hubbugalu,
Ittyadi ityadi Nodi Rosi Hogiddewe, Intha Olleya Vishaya Prastuta
Padisida Smt. “Krishnaveni” Vichara Dhare Mananeeyawagide,