ದೋಸೆಪ್ರಿಯ ಕರಾವಳಿಗರು
ನಮ್ಮ ಅವಿಭಜಿತ ದಕ್ಷಿಣಕನ್ನಡದ ಬಹುತೇಕ ಮನೆಗಳಲ್ಲಿ ಬೆಳಗಿನ ತಿಂಡಿಗೆ ದೋಸೆ. ವಿವಿಧತೆಯಲ್ಲಿ ಏಕತೆ ಇರುವ ಹಾಗೆ ವಿವಿಧ ನಮೂನೆಯ ತಿಂಡಿ ಇದ್ದರೂ ಎಲ್ಲಕ್ಕು ಮೂಲ ನಾಮ ದೋಸೆ. ಅದರಲ್ಲೂ ಸೀಸನಲ್ ಬೇರೆ! ಹಾಗೆಂದರೆ ಸೌತೆಕಾಯಿ ಬೆಳೆವ ಸೀಸನ್ ನಲ್ಲಿ ಮನೆ ಮನೆಯಲ್ಲಿ ಸೌತೆದೋಸೆ ಆದರೆ ಬಾಳೆಹಣ್ಣು ಖರ್ಚಾಗದೆ ಇದ್ದಾಗ ಬಾಳೆಹಣ್ಣಿನ ದೋಸೆ. ತೋಟದ ತೆಂಗಿನಕಾಯಿ ಕೀಳುವಾಗ ಎಳನೀರು ಅಥವಾ ಎಳೆಗಾಯಿ ಕಿತ್ತು ಹಾಕಿದ್ದರೆ ಅದು ಮುಗಿವ ತನಕ ಅದರದೇ ದೋಸೆ. ಹಾಗೆ ಬಾಳೆಕಾಯಿ ದೋಸೆ, ಗೋಧಿ ದೋಸೆ ,ಮುಳ್ಳುಸೌತೆ ದೋಸೆ ಇತ್ಯಾದಿ. ಹಲಸಿನ ಸೀಸನ್ ಪೂರ್ತಿ ಹಲಸಿನ ತೊಳೆಯ ದೋಸೆ. ನಂತರ ಅದರ ಹಣ್ಣಿನದು.
.
ಏನೂ ಸಿಗದ ದಿನ ನಮ್ಮ ಪ್ರಸಿದ್ಧ ನೀರುದೋಸೆ. ಎಲ್ಲ ಅಮ್ಮಂದಿರು ಕೂಡಾ ನೀರುದೋಸೆಯ ಸ್ಪೆಷಲಿಷ್ಟ್ ಗಳೇ. ಇನ್ನು ಖಾಲಿದೋಸೆ, ಮಸಾಲೆದೋಸೆ , ತುಪ್ಪದೋಸೆ ಇತ್ಯಾದಿಗಳ ಬಗ್ಗೆ ಎಲ್ಲ ಮಕ್ಕಳದೂ ಒಮ್ಮತದ ಅಭಿಪ್ರಾಯ. ಏನೆಂದರೆ ಅದೆಲ್ಲ ಹೋಟೆಲ್ ನಲ್ಲಿ ಮಾಡುವ ಹಾಗೆ ನಮ್ಮಮ್ಮಂದಿರಿಗೆ ತಿಳಿಯುವುದಿಲ್ಲ.ಅಲ್ಲಿ ತಿಂದರೇ ಅಪಾರ ರುಚಿ ಅನ್ನುವ ಒಗ್ಗಟ್ಟು. ತರಕಾರಿ ಮುಟ್ಟದ ಮಕ್ಕಳಿರುವ ಮನೆಗಳಲ್ಲಿ ಅಮ್ಮಂದಿರು ಉಪಾಯವಾಗಿ ಕುಂಬಳ, ಗೆಣಸು, ಸೋರೆಕಾಯಿ, ಇತ್ಯಾದಿ ತರಕಾರಿ ಹಾಕಿ ಮಾಡಿದ ದೋಸೆ ತಿನ್ನಿಸಿ ಆ ಮೂಲಕ ತರಕಾರಿ ತಿನ್ನಿಸುತ್ತಾರೆ. ಈ ದೋಸೆ ಇಂದು ನಿನ್ನೆಯ ತಿಂಡಿ ಅಲ್ಲ. ಬಲು ಪ್ರಾಚೀನ ಕಾಲದ್ದೇ. ಮೊದಲಿನ ಕಾಲದಲ್ಲಿ ನೂತನ ಮದುಮಕ್ಕಳು ಮನೆಗೆ ಬಂದರೆ ನೀರುದೋಸೆ ಮಾಡಿ ಬಡಿಸಿದರೆ ಅದು ಭರ್ಜರಿಯ ಸನ್ಮಾನ. ಇದು ಸಸ್ಯಾಹಾರಿಗಳಲ್ಲಿ.
ಗರಂ ಮಸಾಲೆ ಘಮಘಮಿಸುವ ಭಾತ್ ಗಳು, ನೈಚ್ಚೋರ್, ಪಲಾವ್, ಪರೋಟ, ನಾನ್, ಚಪಾತಿ, ಪೂರಿ, ಸಮೋಸಾ, ನೂಡಲ್ಸ್, ಮ್ಯಾಗಿಗಳ ಸಾಲು ಸಾಲು ತಿಂಡಿಗಳ ಕ್ಯಾಟ್ ವಾಕ್ ನ ಎದುರಿಗೆ ದೋಸೆ ಅದರ ಸ್ಥಾನ ಎಲ್ಲಿಯೂ ಬಿಟ್ಟುಕೊಡದೆ ಇರುವುದು ಸತ್ಯ. ಇಡ್ಲಿ, ಸಾಂಬಾರ್, ವಡೆಯನ್ನೂ ದೋಸೆ ಹಿಂದೆ ಇಕ್ಕಿದ್ದು ರೆಸ್ಟುರಾಗಳಲ್ಲಿ ಕಾಣುತ್ತದೆ. ಗ್ರಾಹಕರ ಪ್ರಕಾರ ಇಡ್ಲಿ ತಿಂದರೆ ನಿದ್ದೆ ಜಾಸ್ತಿ; ದೋಸೆ ಆದರೆ ಆಗತಾನೇ ಫ್ರೆಶ್ ಆಗಿ ಮಾಡಿ ಬಿಸಿ ಬಿಸಿ ತಂದಿಡುತ್ತಾರೆ. ಗರಿಗರಿಯಾಗಿ ಕಾಗದದ ಹಾಗಿರುವ ಅದನ್ನು ತಿಂದರೆ ಬಾಯಿರುಚಿ ಹೆಚ್ಚುತ್ತದೆ. ಹಗುರ ಕೂಡಾ. ಎಲ್ಲಕ್ಕೂ ಹೆಚ್ಚಾಗಿ ಅದು ನಿನ್ನೆಯ ಹಳಸಲು ಆಗಿರುವ ಸಾಧ್ಯತೆ ಇಲ್ವೇಇಲ್ಲ. ರೆಸ್ಟುರಾಗಳಲ್ಲಿ ದೋಸೆಯವರ ( ಕೆಲವು ವಾಂಟೆಡ್ ಗಳಲ್ಲಿ ಕಾವಲಿಯವರು ಅಂತಾರೆ) ಸ್ಥಾನ ಹಿರಿದು.
.
ವಿಸ್ತಾರವಾದ ಹಂಚಿನಲ್ಲಿ ಏಕಕಾಲಕ್ಕೆ ಹತ್ತಿಪ್ಪತ್ತು ದೋಸೆ ಹಾಕಿ, ಕ್ಷಣಾರ್ಧದಲ್ಲಿ ತಿರುವಿ ಹಾಕುವ ಸ್ಟೈಲ್ ನೋಡಬೇಕು. ಅದ್ಭುತ. ಜೊತೆಗೆ ದೋಸೆ ಹಾಕುವಾತ ಮಹಾರಾಜನ ಮರ್ಜಿಯಲ್ಲಿ ಮೀಸೆ ತಿರುವಿ ನಿಲ್ಲುವ ಭಂಗಿ! ಸಾಧಾರಣವಾಗಿ ಉತ್ತರಭಾರತೀಯರಿಗೆ ದೋಸೆ ಬಲುಪ್ರಿಯವಾಗಿದ್ದು ಅದರ ಸವಿಯಿಂದ. ಅಲ್ಲಿನ ಒಂದೇ ರೀತಿಯ ಆಹಾರ ಸೇವಿಸಿದ ಅವರಿಗೆ ಇಲ್ಲಿನ ಕೋನ್ ಶೇಪ್ ನ, ಮಸಾಲೆ ದೋಸೆಯ ಸುರುಳಿ, ಪಿರಾಮಿಡ್ ಆಕಾರದ ದೋಸೆಗಳು ಸೆಳೆಯುತ್ತವೆ. ನಿತ್ಯಾ ಅದನ್ನೇ ಬೆಳಗಿನ ಉಪಾಹಾರವಾಗಿ ತಿನ್ನುವ ನಮ್ಮಲ್ಲಿ ಕೂಡಾ ದೋಸೆಗೇ ಪ್ರಥಮ ಪ್ರಾಶಸ್ತ್ಯ. ಮಳೆಗಾಲದಲ್ಲಿ ಕಾವಲಿಗೆಗೆ ತುಪ್ಪ ಹಾಕಿ ಚುಯ್ ಎಂದು ನೀರುದೋಸೆ ಮಾಡಿದಾಗ ಆ ಘಮ ಗಾಳಿಯಲ್ಲಿ ಬಲುದೂರದ ತನಕ ಹರಡಿಕೊಳ್ಳುತ್ತದೆ. ಜೊತೆಗೆ ನಮ್ಮ ಅವಿಭಜಿತ ದ. ಕ.ದಲ್ಲಿ ಮಿಡಿ ಉಪ್ಪಿನಕಾಯಿ ಬೆಸ್ಟ್ ಕಾಂಬಿನೇಶನ್. ಆರೋಗ್ಯದ ಮಟ್ಟಿಗೆ ಉತ್ತಮ; ಅಲ್ಲದೆ ಎಳೆಯರಿಂದ ತೊಂಭತ್ತರ ಹಿರಿಯರಿಗೆ ಕೂಡಾ ಮೆದು ಮೆದು ನೀರುದೋಸೆ ತಿನ್ನಲು ಸಲೀಸು. ಅರಗದ ಸಮಸ್ಯೆ ಇಲ್ವೇಇಲ್ಲ. ವಿದ್ಯಾರ್ಥಿಗಳಿಗೆ ಎಣ್ಣೆಯಲ್ಲಿ ಕರಿದ ಪೂರಿ, ಸಮೋಸಾ ತಿನ್ನಿಸಿ ಶಾಲೆಗೆ ಕಳಿಸುವ ಅಮ್ಮಂದಿರು ಇಲ್ಲಿನವರಲ್ಲ. ಒಡಲ ಆರೋಗ್ಯ ಹಾಳಾಗದ ಹಾಗೆ ದಿನದಿನ ಫ್ರೆಶ್ ದೋಸೆಗಳು.
ಮಲಯಾಳಂ ಫಿಲಂ ಒಂದು ನೋಡಿದ್ದೆ. ಅದರಲ್ಲಿ ಹೋಟೆಲ್ ಒಂದರಲ್ಲಿ ವೆರೈಟಿಯ, ನವನವೀನ ತಿಂಡಿಗಳನ್ನು, ಆ ತನಕವೂ ಸ್ಥಳೀಯರು ಕಂಡೇ ಇಲ್ಲದ ತಿಂಡಿಗಳಿಗೆ ಫೇಮಸ್. ಭರ್ಜರಿ ವ್ಯಾಪಾರ. ಅಷ್ಟರಲ್ಲಿ ಹೀರೋಗಳಿಗೆ ದೋಸಾ ಹೋಟೆಲ್ ತೆರೆಯುವ ಮೂಲಕ ಆತನಿಗೆ ಸ್ಪರ್ಧಿಗಳಾದರು. ವ್ಯಾಪಾರವೆಲ್ಲ ದೋಸಾ ಹೋಟೆಲ್ ಗೆ ತಿರುಗಿತು. ಬೇಡಿಕೆಯೋ ಬೇಡಿಕೆ. ಗ್ರಾಹಕರು, ಓನರ್ ಗಳು ನಾನಾ ವಿಧದ ದೋಸೆ ಪ್ಲೇಟ್ ಕೈಲಿ ಹಿಡಿದು ಆ ದೋಸೆಗಳ ನಾಮಾರ್ಚನೆಯನ್ನು ಹಾಡುತ್ತ ಕುಣಿಯುವಾಗ, ಎದುರಿನ ವೈವಿಧ್ಯಮಯ ತಿಂಡಿ ಸಿಗುವ ರೆಸ್ಟುರಾದ ಮಾಲಕ ಹ್ಯಾಪು ಮೋರೆ ಹಾಕಿ ನೋಡುವ ಚಿತ್ರ ಬಲು ನೈಜವಾಗಿತ್ತು.
.
ಕರಾವಳಿಯ ಜನರ ನಿತ್ಯದ ಆಹಾರ ನಾನಾ ವಿಧದ ದೋಸೆಗಳು. ಮನೆ ಮನೆಯ ಅಮ್ಮಂದಿರು ದೋಸಾ ಸ್ಪೆಶಲಿಷ್ಟ್ ಗಳೇ. ಮಕ್ಕಳು ದೊಡ್ಡವರಾಗಿ ವಿದ್ಯಾಭ್ಯಾಸಕ್ಕೋ, ಉದ್ಯೋಗ ನಿಮಿತ್ತವೋ ದೂರದೂರಿನಲ್ಲಿ ನೆಲಸಿದವರಿಗೆ ಮನೆಯ ದೋಸೆಯ ರುಚಿ ಅವಿಸ್ಮರಣೀಯ. ಬರುವ ಮುನ್ನಾ ದಿನ ಮನೆಗೆ ತಮಗೆಂಥ ದೋಸೆ ತಿನ್ನುವ ಆಸೆ ಆಗಿದೆ ಎನ್ನುವುದು ತಿಳಿಸಿ ಬರುವುದು ಸುಳ್ಳಲ್ಲ.ಅದರಲ್ಲಿಯೂ ಹಲಸಿನಕಾಯಿ ದೋಸೆ ಅಂದರೆ ಬಾಯಿ ಚಪ್ಪರಿಸದ ಕರಾವಳಿಗರು ಇರಲಿಕ್ಕಿಲ್ಲ. ನೀರುದೋಸೆ ತೆಳ್ಳಗೆ, ಮೃದುವಾಗಿ ಮಾಡುವ ಗುಟ್ಟು ಇಲ್ಲಿ ಮಕ್ಕಳಿಗೂ ಗೊತ್ತು.
.
ಕೇರಳದ ಒಂದನೆ ತರಗತಿಯ ಪಾಠದಲ್ಲಿನ ದೋಸೆ ಪದ್ಯ ಹೀಗಿತ್ತು.
‘‘ ದೋಸೆಯಮ್ಮ ದೋಸೆ, ತುಪ್ಪದೋಸೆ,
ಅಪ್ಪನಿಗೆ ಐದು, ಅಮ್ಮನಿಗೆ ನಾಲ್ಕು
ಅಣ್ಣನಿಗೆ ಮೂರು, ಅಕ್ಕನಿಗೆ ಎರಡು,
ನನಗೆ ಮಾತ್ರ ಒಂದೇ ಒಂದು , ಯಾಕೆ ಗೊತ್ತಿಲ್ಲ?”
.
– ಕೃಷ್ಣವೇಣಿ ಕಿದೂರು
.
ಕರಾವಳಿಯವರು ಬನ್ಸ್ ಪ್ರೀಯರು,( ಮೀನು ಪ್ರೀಯರು)
ನಿಜ . ಬೆಳಗ್ಗೆದ್ದು ದೋಸೆ ನಮ್ಮ ಕಡೆಯ ಮನೆ ಮನೆಗಳಲ್ಲಿನ ತಿಂಡಿ . ಬನ್ಸ್ ಟೇಸ್ಟಿ, ಆದರೆ ಮುಂಜಾನೆ ಎಣ್ಣೆ ತಿಂಡಿ ಮಾಡುವುದಿಲ್ಲ. ಮತ್ತೆ ಹಸಿ ಮೀನು ಧಾರಾಳ ಸಿಗುವ ಇಲ್ಲಿ ಊಟಕ್ಕೆ ಅದು ತಪ್ಪದು ನಾನ್ ವೆಜ್ ಸೇವಿಸುವ ಮನೆಗಳಲ್ಲಿ . ಅಭಿಪ್ರಾಯಕ್ಕೆ ಕೃತಜ್ಞತೆಗಳು .
ಕರಾವಳಿಯವರು ಜನಪ್ರಿಯರು ಕೂಡಾ ಎನ್ನಲು ಮರೆಯಬೇಡಿ ಗಾಯಡಿ ಅವರೇ!
ಕರಾವಳಿಯವರು ಎಲ್ಲಿಗೇ ಹೋದರೂ ‘ದೋಸೆಪ್ರಿಯತೆ’ ಮೆರೆಯುತ್ತಾರೆ..
ಹೌದು . ದೋಸೆ ಅಚ್ಚುಮೆಚ್ಚಿನ ಸರಳ ಆಹಾರ . ಚಿತ್ರಗಳು ಅತ್ಯಾಕರ್ಷಕ .
ಲೇಖನ ಓದುತ್ತಾ ಹೋದಂತೆ ಮನಸ್ಸು ಬಾಲ್ಯಕಾಲಕ್ಕೆ ಸರಿಯಿತು! ಥ್ಯಾಂಕ್ಸ್ ಟು ಕೃಷ್ಣವೇಣಿ akka!