ಮದುವೆಗೆ ಎಷ್ಟು ಜನ ಬಂದಿದ್ದರು ?
ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಸಮಾರಂಭಗಳಿಗೆ ಹೋಗಿ ಬಂದವರ ಬಳಿ ‘ಎಷ್ಟು ಜನ ಬಂದಿದ್ದರು’ ? ಎಂದು ಕೇಳುವ ವಾಡಿಕೆಯಿದೆ. ‘ಎಷ್ಟು ಜನ’ ಎಂದರೆ ಕರಾರುವಾಕ್ಕಾದ ಮಾಹಿತಿಯ ನಿರೀಕ್ಷೆಯಿಂದ ಅಲ್ಲ, ಒಂದು ಅಂದಾಜಿನ ಉತ್ತರ ಕೊಟ್ಟರೆ ಸಾಕು ಎಂದು ಪ್ರಶ್ನೆ ಕೇಳಿದವರಿಗೂ, ಉತ್ತರ ಹೇಳುವವರಿಗೂ ಗೊತ್ತು. ಊಟದ ಹಾಲ್ ಎಷ್ಟು ಬಾರಿ ಭರ್ತಿಯಾಗಿತ್ತು ಎಂತಲೋ, ಕಣ್ಣ ಅಂದಾಜಿನಿಂದಲೋ ತಮ್ಮದೇ ಆದ ಸಂಖ್ಯಾಶಾಸ್ತ್ರದ ಆಧಾರದಲ್ಲಿ ಉತ್ತರಿಸುವುದೂ ಅಷ್ಟೇ ಸಹಜ.
ದಕ್ಷಿಣಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಕೆಲವು ಸಮುದಾಯಗಳಲ್ಲಿ, ಶುಭಸಮಾರಂಭದ ಪೂರ್ವಭಾವಿ ತಯಾರಿಯಾಗಿ ಒಂದು ವಿಶಿಷ್ಟ ಆಚರಣೆ ಇದೆ. ಸಮಾರಂಭದ ಹಿಂದಿನ ದಿನದ ರಾತ್ರಿ, ಗಣಪತಿ ಪೂಜೆಯನ್ನು ಮಾಡಿ, ನಾಳೆ ನಡೆಯಲಿರುವ ಸಮಾರಂಭವು ಸುಸೂತ್ರವಾಗಿ ನಡೆಯಲೆಂದು ದೇವರ ಆಶೀರ್ವಾದ ಬೇಡುತ್ತಾ ಸಂಕಲ್ಪ ಮಾಡುವ ಶಾಸ್ತ್ರವಿದೆ. ಇದಾದ ನಂತರ, ಅಡುಗೆ ವ್ಯವಸ್ಥೆಯ ಮುಖ್ಯಸ್ಥರು ದೇವರನ್ನು ಪ್ರಾರ್ಥಿಸಿ, ಕೆಲವು ಬಾಳೆಕಾಯಿಗಳನ್ನು ಸಿಪ್ಪೆ ಸಮೇತವಾಗಿ ಸೀಳಿ, 2-3 ಇಂಚುಗಳಷ್ಟು ದೊಡ್ಡದಾದ ಹೋಳುಗಳನ್ನಾಗಿ ಮಾಡುತ್ತಾರೆ. ಒಂದು ಕಂಚಿನ ಪಾತ್ರೆಯಲ್ಲಿ ಸಾಕಷ್ಟು ನೀರನ್ನು ಸುರಿದು, ಕತ್ತರಿಸಿಟ್ಟ ಬಾಳೆಕಾಯಿ ಹೋಳುಗಳನ್ನು ಅದಕ್ಕೆ ಸುರುವುತ್ತಾರೆ.
ಈ ಪಾತ್ರೆಗೆ ಬೆಳಕು ತೋರಿಸಿ, ಆರತಿ ಮಾಡುವ ಶಾಸ್ತ್ರವೂ ಇದೆ. ಬಾಳೆಕಾಯಿ ಹೋಳುಗಳು ಸಿಪ್ಪೆ ಮೇಲ್ಮುಖವಾಗಿ ಬಿದ್ದರೆ 100 ಅಂತಲೋ, ಕೆಳಮುಖವಾಗಿ ಬಿದ್ದರೆ 50 ಅಂತಲೋ ಇತ್ಯಾದಿ ಸಂಖ್ಯೆಯನ್ನು ಮನಸ್ಸಿನಲ್ಲಿ ಲೆಕ್ಕ ಹಾಕಿರುತ್ತಾರೆ. ನೀರಿನಲ್ಲಿ ಮೇಲ್ಮುಖ ಮತ್ತು ಕೆಳಮುಖವಾಗಿ ಕಾಣಿಸುವ ಬಾಳೆಕಾಯಿ ಹೋಳುಗಳ ಸಂಖ್ಯೆಗಳಿಗೆ ತಕ್ಕಂತೆ ಪೂರ್ವನಿಗದಿತ ಸಂಖ್ಯೆಯಿಂದ ಗುಣಿಸಿ, ನಾಳೆಗೆ ಸುಮಾರು ಎಷ್ಟು ಜನ ಸೇರಬಹುದು ಎಂಬ ಸಂಖ್ಯೆ ತಿಳಿಸುತ್ತಾರೆ. ಮನೆಯ ಯಜಮಾನರಿಗೆ ಎಷ್ಟು ಮಂದಿ ಸೇರಬಹುದು ಎಂಬ ಅಂದಾಜು ಇರುವುದರಿಂದ, ಇವೆರಡನ್ನೂ ಪರಿಗಣಿಸಿ, ಮಾಡಲಿರುವ ಶಾಕ-ಪಾಕಾದಿ ಗಳು ಅಕ್ಷಯವಾಗಲಿ, ಎಲ್ಲರೂ ತೃಪ್ತರಾಗಲಿ ಎಂಬ ಆಶಯದಿಂದ ನಾಳೆಯ ಅಡುಗೆಯ ಸಿದ್ಧತೆಗೆ ತೊಡಗುತ್ತಾರೆ.
ಈ ಶಾಸ್ತ್ರವು ಅಡುಗೆಯವರಿಗೆ ಕೊಡುವ ಗೌರವದ ಪ್ರತೀಕವೂ ಹೌದು.
ಒಟ್ಟಾರೆಯಾಗಿ ವಿಶಿಷ್ಟ ರೀತಿಯ ಸಂಭವನೀಯತೆ ( Probability Theory)ಮತ್ತು ಸಂಖ್ಯಾಶಾಸ್ತ್ರದ (Statistics) ಸಂಯೋಜನೆ ಇಲ್ಲಿದೆ. ಸಂಖ್ಯಾಶಾಸ್ತ್ರದ ಬಳಕೆ 18 ನೆಯ ಶತಮಾನದಲ್ಲಿ ಆರಂಭವಾಯಿತಂತೆ. ಈ ಶಾಸ್ತ್ರ ಯಾವಾಗ ಆರಂಭವಾಯಿತೋ ಗೊತ್ತಿಲ್ಲ!!!
– ಹೇಮಮಾಲಾ.ಬಿ
ಇದು ಹೊಸ ವಿಚಾರ. ನನಗೇನೂ ಗೊತ್ತಿಲ್ಲ…, ಇದು ಸಾಧ್ಯ ಅಂತ ನೀವು ಪರೀಕ್ಷಿಸಿದ್ದೀರಾ..? ನಂಬಿಕೆ..?!!
ಹೀಗೂ ಉಂಟೇ?
ಉತ್ತಮ ಮಾಹಿತಿ.. ಥ್ಯಾಂಕ್ ಯೂ ಹೇಮಾ.
ಉತ್ತಮ ಮಾಹಿತಿ.. ಧನ್ಯವಾದಗಳು,
ಅರ್ಥಪೂರ್ಣ ವಿಚಾರ.ಇದನ್ನು ಪ್ರಸ್ತುತ ಪಡಿಸಿದ್ದಕ್ಕೆ ಅಭಿನಂದನೆಗಳು.
ಮದುವೆ , ಉಪನಯನ, ಮೊದಲಾದ ಶುಭ ಸಮಾರಂಭಗಳ ಮುನ್ನಾದಿನ ಇದನ್ನು ’ಅತ್ತಾಳ’ ಎಂಬುದಾಗಿ ಕರೆದು, ’ಅತಾಳಕ್ಕೆ ಕೊರವಲೆ ಹೋಪದು’ ಎಂಬುದಾಗಿ ಮುನ್ನಾದಿನ ನೆರೆಕರೆ,ನೆಂಟರಿಷ್ಟರು ಸೇರಿ ಸುಧರಿಕೆಗೆ ಹೀಗೆ ಕರೆಯುತ್ತಾರೆ. ಈ ಮಾಹಿತಿಯನ್ನು ಸುರಹೊನ್ನೆ ಓದುಗರಿಗೆ ನೀಡಿದ್ದು ಮೆಚ್ಚಿಗೆಯಾಯ್ತು.
ಧನ್ಯವಾದಗಳು.
‘ಅತ್ತಾಳ’ದ ದಿನ ‘ಮೇಲಾರಕ್ಕೆ ಕೊರವದು’ ಎಂಬುದರ ಬಗ್ಗೆಯೂ ಹಿಂದೊಮ್ಮೆ ಬರೆದಿದ್ದೆ .http://52.55.167.220/?p=7819
ನನಗೆ ಸಮಾರಂಭದ ದಿನದಂದು ಇರುವ ಗಡಿಬಿಡಿಗಿಂತ ‘ಅತ್ತಾಳ’ದ ಸೊಗಸು ಹೆಚ್ಚು ಖುಷಿಯಾಗುತ್ತದೆ.
‘ಮೇಲಾರಕ್ಕೆ ಕೊರವದು’ ಬಗ್ಗೆ ಹೇಳಿದಾಗ ನನಗೆ, ಮದುವೆಯ ಹಿಂದಿನ ತರಕಾರಿ ಹಚ್ಚಲು ಎಲ್ಲರೂ ಸೇರುವ ಸಂಭ್ರಮದ ಬಗ್ಗೆ ನೆನಪಾಯಿತು..!!ಆಹಾ..ಅದರ ಸಂಭ್ರಮವೇ ಬೇರೆ.. ತೀರಾ ಹತ್ತಿರದ ನೆಂಟರು ಮತ್ತು ನೆರೆಕರೆಯವರು ಮಾತ್ರ ಸೇರಿ ಮರುದಿನದ ಊಟದ ತಯಾರಿಯ ಸಿಧ್ಧತೆ ನಡೆಯುತ್ತದೆ.ಮನೆಗಳಿಂದ, ಗಂಡಸರು (ಮಾತ್ರ) ಚೂರಿ ಹರಿತ ಮಾಡಿಕೊಂಡು ಹೊರಟರೆ ಮತ್ತೆ ಮನೆ ಸೇರುವುದು ರಾತ್ರಿ ೧೧ಗಂಟೆ ಮೇಲೆಯೇ..! ಬರುವಾಗ ಚೂರಿಯು ಅದಲುಬದಲು ಅಗುವುದೂ ಇದೆ…ಅಲ್ಲಿ ಆಗಾಗ ಚಾ ಸರಬರಾಜು ಆಗಲೇ ಬೇಕು…ಹಾಸ್ಯ,ನಗೆ ಚಟಾಕಿಗಳ ಹೊಳೆಯೇ ಹರಿಯುತ್ತದೆ ಅಲ್ಲಿ..ಧನ್ಯವಾದಗಳು ಮಾಲಾ…ಎಲ್ಲ ನೆನಪು ಹಸಿರುಗೊಳಿಸಿದ್ದಕ್ಕೆ…
ಹೌದು, ಹೇಮ, ಶಂಕರಿ ಶರ್ಮ ಹೇಳಿದ್ದು ಸರಿ. ಅತ್ತಾಳದ ದಿನ ಅತೀ ಹತ್ತಿರದ ನೆಂಟರು, ಆತ್ಮೀಯರು ಸೇರಿ[ ಈಗಿನ ಗಡಿಬಿಡಿ ಜೀವನದಲ್ಲಿ ಹಾಗೆ ಸೇರುವುದೇ ಅಪರೂಪವಾದ್ದರಿಂದ] ಮೇಲಾರಕ್ಕೆ ಕೊರೆಯಾಣ, ಮದುರಂಗಿ ಹಾಸ್ಯ, ಜೋಕು, ಚಟಾಕಿಗಳ ಗಮ್ಮತ್ತೇ ಗಮ್ಮತ್ತು. ಅಲ್ಲದೆ ಹೆಂಗಳೆಯರಿಗೆ ಆ ದಿವಸದಲ್ಲಿ ಮಾರಣೇ ದಿನದಷ್ಟು ಒತ್ತಡವೂ ಇಲ್ಲದ್ದರಿಂದ ಅದೊಂದು ಗೌಜಿಯೇ ಸರಿ!!.
ವಿಶಿಷ್ಟ ಸಂಪ್ರದಾಯವನ್ನು ಓದುಗರಿಗೆ ತೋರಿಸಿ ಕೊಟ್ಟಿದ್ದೀರಿ . ಹಳೆಯ ಇಂಥ ಪದ್ದತಿಗಳನ್ನು ಹಂಚಿಕೊಳ್ಳಲು ಸುರಹೊನ್ನೆ ವೇದಿಕೆ ಆದರೆ ಸಂತೋಷ .
ಬರಹದ ಶೈಲಿಯು ವಿಚಾರವೂ ಚೆನ್ನಾಗಿದೆ…ಅಭಿನಂದನೆಗಳು