ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮಲಗುವ ಮೊದಲು ರಾವ್ ಹೆಂಡತಿಯನ್ನು ಕೇಳಿದರು.
“ಅಂಜಲಿಗೆ ಈಗ ಎಷ್ಟು ವರ್ಷ?”
“24-25 ವರ್ಷ ಇರಬಹುದು.”
“ಹಾಗಾದ್ರೆ ಅನಿಕೇತ್‌ಗೆ?”
“ಅವನು ವರುಗಿಂತ 3 ವರ್ಷ ದೊಡ್ಡವನು ಯಾಕೆ?”
“ಅಂಜಲಿ ನಮ್ಮನೆ ಮಗಳಂತಿದ್ದಳು. ಅವಳಿಗೆ ಮದುವೇಂದ್ರೆ ಆಶ್ಚರ್ಯವಾಗ್ತಿದೆ.”
“ನಂಬಲೇಬೇಕು. ನೀಲಾ ನಮ್ಮಿಬ್ಬರಿಗೂ ವೀಸಾ, ಪಾಸ್‌ಪೋರ್ಟ್ ಮಾಡಿಸ್ತಾಳೆ. ನಾವು ಮದುವೆಗೆ ಹೋಗಿಬರೋಣ.”
“ಅದೆಲ್ಲಾ ಯಾಕೆ?”
“ನಾವು ಯಾವಾಗ ವಿಮಾನದಲ್ಲಿ ಹೋಗೋದು? ನನಗೂ ಆಸೆ ಆಕಾಂಕ್ಷೆಗಳಿವೆ ಅರ್ಥ ಮಾಡಿಕೊಳ್ಳಿ.”
“ಹಾಗಲ್ಲ ಶಕ್ಕು.”
“ಈ ವಿಚಾರ ಚರ್ಚೆ ಬೇಡ. ನಾವು ಹೋಗಲೇಬೇಕು. ನೀವು ಒಪ್ಪದಿದ್ದರೆ ನಾನು ಉಪವಾಸ ಸತ್ಯಾಗ್ರಹ ಮಾಡಬೇಕಾಗತ್ತೆ.”
“ಸರಿ ಹೋಗೋಣ. ಆದರೆ ಮನೆಯವರ ಮುಂದೆ ಈಗಲೇ ಈ ವಿಚಾರ ಹೇಳಬೇಡ.”
“ಆಗಲೀರಿ. ನೀವು ಒಪ್ಪಿದ್ರಲ್ಲಾ – ಅಷ್ಟೇಸಾಕು.”

“ಒಂದು ರೌಂಡ್ ಟೀ ಮಾಡ್ತೀಯಾ?”
“ಆಗಲಿ ಮಾಡ್ತೀನಿ” ಎಂದರು ಶಕುಂತಲಾ. ಅಷ್ಟರಲ್ಲಿ ಒಂದು ಜಗ್‌ನಲ್ಲಿ ಟೀ, ಕಪ್‌ಗಳನ್ನು ಹಿಡಿದು ಬಂದಳು ಶೋಭಾ.
“ಬನ್ನಿ ಎಲ್ಲರೂ ಟೀ ತೆಗೆದುಕೊಳ್ಳಿ.”
ಎಲ್ಲರೂ ಬಂದರು. ವರು ಒಂದು ಬ್ಯಾಗ್ ತಗಲಿ ಹಾಕಿಕೊಂಡು ಹೊರಟಳು.
“ವರು ಟೀ……..”
“ಬೇಡ ಚಿಕ್ಕಮ್ಮ….. ನಾನು ಹೊರಗೆ ಹೋಗಿ ರ‍್ತೀನಿ.”
“ಏನು ಅಡಿಗೆ ಬೇಕು ಹೇಳು………”
“ನೀವೇನೂ ಮಾಡಬೇಡಿ. ಅನ್ನ, ಸಾರು ಸಾಕು. ಪೂರಿ, ಸಾಗು ಹೆವಿ ಆಗೋಯ್ತು.”
“ನಾನೂ ಅದೇ ಅಂದ್ಕೊAಡಿದ್ದೆ”
ವರು ಮುಕ್ಕಾಲು ಗಂಟೆಯಲ್ಲಿ ವಾಪಸ್ಸು ಬಂದಳು.
ಶಂಕರೂ ಪೇಪರ್ ಬಂಡಲ್ ತೆಗೆದಿಟ್ಟುಕೋ. ನಾನು ಒಂದು ಬಂಡಲ್ ತೆಗೆದುಕೊಂಡು ಹೋಗ್ತೀನಿ.”
“ಥ್ಯಾಂಕ್ಸ್ ಅಕ್ಕ..”
“ಇನ್ನೇನೋ ತಂದಿದ್ದೀಯ……..”
“ಒಂದು ಕೆ.ಜಿ. ತೊಂಡೆಕಾಯಿ ತಂದಿದ್ದೀನೆ. ರಾತ್ರಿ ಚಪಾತಿಗೆ ಪಲ್ಯಾನೋ, ಗೊಜ್ಜೋ ಮಾಡಿದರಾಯ್ತು.”
ಶಕುಂತಲ ಒಂದು ಲೋಟ ಮಜ್ಜಿಗೆ ತಂದಿಟ್ಟರು. ಅಷ್ಟರಲ್ಲಿ ಅಲ್ಲಿಗೆ ಬಂದ ಪಾರ್ವತಿ ಕೇಳಿದರು. “ವರು ನಾಳೆ ಎಷ್ಟು ಹೊತ್ತಿಗೆ ಹೊರಡ್ತಿದ್ದೀಯಾ?”
“ಬೆಳಿಗ್ಗೆ ತಿಂಡಿ ತಿಂದುಕೊಂಡು ಹೊರಡ್ತೀನಿ ಅತ್ತೆ…….”
“ಶಕುಂತಲಾ ನಾಳೆ ನಾವೂ ವರು ಜೊತೆ ಹೊರಡ್ತೀನಿ. ವರು ನೀನು ನಮ್ಮನ್ನು ಮನೆಗೆ ಬಿಟ್ಟು ಆಮೇಲೆ ನಿಮ್ಮನೆಗೆ ಹೊರಡು. ಶಕುಂತಲಾ ಪುಳಿಯೋಗರೆ, ಮೊಸರನ್ನ ಮಾಡಿಕೊಡು.”
“ಅತ್ತೆ, ನಾನು ನಾಳೆ ಬಸ್‌ನಲ್ಲಿ ಹೋಗ್ತಿದ್ದೀನಿ. ಕಾರ್‌ನಲ್ಲಲ್ಲಾ, ಮಾನಸ ಬಂದಿಲ್ಲ. ಅವಳು ಕುಶಾಲನಗರಕ್ಕೆ ಹೋಗಿದ್ದಾಳೆ……”
“ಸುಳ್ಳು ಹೇಳಬೇಡ ವರು……”
“ನಾನ್ಯಾಕೆ ಸುಳ್ಳು ಹೇಳಲಿ?”
“ಯಾಕೆ ಅಷ್ಟು ಬೇಗ ಹೋಗ್ತೀಯಾ?”
“ಅಮ್ಮ ಸೆಮಿನಾರ್‌ಗೆ ಪೇಪರ್ ಟೈಪ್ ಮಾಡಬೇಕು. ಇಲ್ಲಿ ನನ್ನ ಹತ್ತಿರ ಲ್ಯಾಪ್‌ಟ್ಯಾಪ್ ಇಲ್ಲ. ರೂಂನಲ್ಲಿ ಮಾನಸಾದು ಲ್ಯಾಪ್‌ಟ್ಯಾಪ್ ಇರತ್ತೆ. ಅರ‍್ಯಾರೂ ಇರಲ್ಲ. ಶಾಂತವಾಗಿ ಕೆಲಸ ಮಾಡಿಕೊಳ್ಳಬಹುದು.”
“ಅವರೆಲ್ಲಾ ಯಾವತ್ತು ರ‍್ತಾರೆ?”
“ನಾಳೆ ರ‍್ತಾರೆ……”
“ರಾತ್ರಿ ನೀನೊಬ್ಬಳೇ ಇರ‍್ತೀಯಾ?” ಶಕುಂತಲಾ ಆತಂಕದಿಂದ ಕೇಳಿದರು.
“ಇಲ್ಲಮ್ಮ. ಕೆಲಸದ ಮಲ್ಲಿ ರ‍್ತಾಳೆ” ವರು ಧಾರಾಳವಾಗಿ ಸುಳ್ಳಿನ ಮೂಟೆ ಉರುಳಿಸಿದಳು.
“ಸೀನು, ಪಾಪ ಮಗು ಬಸ್‌ನಲ್ಲಿ ಯಾಕೆ ಹೋಗಬೇಕು? ಕಾರು ಬುಕ್ ಮಾಡು. ನಾವು ಹೊರಟುಬಿಡ್ತೀವಿ.”
“ಅತ್ತೆ-ನಮ್ಮಪ್ಪ ಕುಬೇರ ಅಲ್ಲ. ನೀವೇ ಕಾರ್ ಚಾರ್ಜ್ ಕೊಡ್ತೀರ ಹೇಳಿ. ಈಗಲೇ ಕಾರು ಬುಕ್ ಮಾಡ್ತೀನಿ.”
ಪಾರ್ವತಿ ತೆಪ್ಪಗಾದರು.

******

ಸೆಮಿನಾರ್ ಮುಗಿಯಿತು. ವರು ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡಿದಳು. ಮಡಿಕೇರಿಯ ರಾಗಿಣಿಯ ಪ್ರೆಸೆಂಟೇಶನ್ ಇನ್ನೂ ಚೆನ್ನಾಗಿತ್ತು. ಅವಳು ಒಂದನೇ ತರಗತಿಯಿಂದ ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ದಳು. ತುಂಬಾ ಶ್ರೀಮಂತರು. ಅವಳ ಒಬ್ಬ ಅಣ್ಣ ಅಮೇರಿಕಾದಲ್ಲಿದ್ದ. ರಾಗಿಣಿ ರಜಾ ಬಂದಾಗಲೆಲ್ಲಾ ಅಮೇರಿಕಾಗೆ ಹೋಗುತ್ತಿದ್ದಳು. ರಾಗಿಣಿ ತನ್ನ ಬಗ್ಗೆ ಅವಳು ಏನೂ ಹೇಳಿರಲಿಲ್ಲ. ಬೇರೆಯವರು ಮಾತಾಡುತ್ತಿದ್ದರು.
“ಕಂಗ್ರಾಟ್ಸ್ ರಾಗಿಣಿ ವೆರಿ ನೈಸ್ ಪ್ರೆಸೆಂಟೇಶನ್.”
“ನಿನ್ನದೂ ಚೆನ್ನಾಗಿತ್ತು ವಾರುಣಿ. ಕನ್ನಡ ಮೀಡಿಯಂನಲ್ಲಿ ಓದಿರುವ ನಿನ್ನ ಪ್ರಯತ್ನ ನಿಜವಾಗಿ ಮೆಚ್ಚಬೇಕು. ಮುಂದಿನ ಸಲ ಪೇಪರ್ ಪ್ರೆಸೆಂಟ್ ಮಾಡುವಾಗ ಏನಾದರೂ ಸಹಾಯ ಬೇಕಾದರೆ ನನ್ನನ್ನು ಕೇಳು.”
“ಥ್ಯಾಂಕ್ ಯು” ಎಂದಳು ವಾರುಣಿ.

******

ಮತ್ತೇ ಎರಡು ತಿಂಗಳು ಉರುಳಿತು. ಸೆಮಿನಾರ್‌ಗಳಲ್ಲಿ ಸಿಂಧು, ಕೃತಿಕಾ ಭಾಗವಹಿಸಿದರು. ಮಾನಸ ಮಾತ್ರ ಸೆಮಿನಾರ್ ಎಂದರೆ ಹೆದರುತ್ತಿದ್ದಳು.
ಇದೇ ವೇಳೆಯಲ್ಲಿ ನೀಲಾಂಬಿಕೆ-ಶ್ರೀಪತಿ ಮದುವೆಗೆ ಕರೆಯಲು ದುಬೈನಿಂದ ಬಂದರು.
“ಅಣ್ಣ-ಅತ್ತಿಗೆ ನೀವು ಮದುವೆಗೆ ಬರಲೇಬೇಕು. ನವೆಂಬರ್‌ನಲ್ಲಿ ಮದುವೆ. ನಮ್ಮ ಪರಿಚಯದವರು ಬಂದು ನಿಮ್ಮ ಐದು ಜನರಿಗೆ ಪಾಸ್‌ಪೋರ್ಟ್ ಮಾಡಿಸಿಕೊಡ್ತಾರೆ. ನಿಮ್ಮನ್ನು ದುಬೈಗೆ ತಲುಪಿಸುವ ಜವಾಬ್ದಾರಿ ಅವರಿಗೆ ವಹಿಸಿದ್ದೇನೆ. ವಾರುಣಿಗೂ ಹೇಳಿ.”
“ಅವಳು ಬರ‍್ತಾಳೋ ಇಲ್ಲವೋ ಗೊತ್ತಿಲ್ಲ……….”
“ಒಪ್ಪಿಸಲು ಪ್ರಯತ್ನಿಸಿ. ಮದುವೆಯಾದ ಮೇಲೆ ನಿಮಗೆ ದುಬೈ ತೋರಿಸ್ತೇನೆ. ನೀವು 10 ದಿನವಾದರೂ ನಮ್ಮ ಜೊತೆ ಇರಬೇಕು.”
“ನೀನು ಇಷ್ಟು ಹೇಳುವಾಗ ನಾವು ಬರದೇ ಇರ‍್ತೀವ. ಖಂಡಿತಾ ಬರ‍್ತೀವಿ” ಎಂದರು ಶಕುಂತಲ.

ನೀಲಾಂಬಿಕೆ-ಶ್ರೀಪತಿ 2-3 ಸಲ ಬಂದು ಹೋದರು. ಅವರ ಪರಿಚಿತ ಮಧುಕರ್ ಬಂದು ರಾವ್ ಕುಟುಂಬ ದುಬೈಗೆ ಹೋಗಲು ಎಲ್ಲ ವ್ಯವಸ್ಥೆ ಮಾಡಿದರು. ವಾರುಣಿ ಮಾತ್ರ ಹೋಗಲು ಒಪ್ಪಲಿಲ್ಲ.
ರಾವ್ ತಮ್ಮಂದಿರಿಗೆ, ದೇವಕಿಗೆ ನೀಲಾಂಬಿಕೆ ದಂಪತಿಗಳನ್ನು ನೋಡಿ ಆಶ್ಚರ್ಯವಾಗಿತ್ತು. ಅವರು ಅಣ್ಣ-ಅತ್ತಿಗೆಯ ಬಗ್ಗೆ ತೋರುವ ಗೌರವ ನೋಡಿ ಒಂದು ತರಹವಾಗಿತ್ತು.

ಅಕ್ಟೋಬರ್ 29ಕ್ಕೆ ಫ್ಲೈಟ್ ಬುಕ್ಕಾಗಿತ್ತು. ಮಧುಕರ್ 28ರ ರಾತ್ರಿ ಎಂಟುಗಂಟೆಗೆ ಸಿದ್ದರಿರಲು ಹೇಳಿದ್ದ. ಶಕುಂತಲಾ ಮದುವೆಯಲ್ಲಿ ಉಡಲು ಸೀರೆಗಳನ್ನು ಜೋಡಿಸಿಕೊಂಡರು. ದೇವಕಿ ಬಹಳ ಧಾರಾಳತನ ತೋರಿ ಮಕ್ಕಳಿಗೆ ಡ್ರೆಸ್‌ಗಳನ್ನು ಕೊಡಿಸಿದ್ದಳು. ಶ್ರಾವಣಿ, ಶಂಕರ ತುಂಬಾ ಖುಷಿಯಲ್ಲಿದ್ದರು.

ಇಪ್ಪತ್ತೆಂಟನೆಯ ತಾರೀಕು ಭಾನುವಾರ ಬೆಳಿಗ್ಗೆ ತಿಂಡಿ ತಿನ್ನುವಾಗ ದೇವಕಿ ಕೇಳಿದಳು “ಸೀನಣ್ಣ ನಿನ್ನನ್ನು ಒಂದು ಪ್ರಶ್ನೆ ಕೇಳಲಾ?”
“ಕೇಳಮ್ಮ.”
“ನೀಲಾ-ಶ್ರೀಪತಿ ನಿಮ್ಮನ್ನು ತುಂಬಾ ಇಷ್ಟಪಡ್ತಾರೆ. ನಿಮ್ಮನ್ನು ದೇವರೂಂತ ಭಾವಿಸಿದ್ದಾರೆ. ಅವರು ಮನಸ್ಸು ಮಾಡಿದರೆ ಈ ಮನೆಯನ್ನು ನಮಗೆ ಮಾರಕ್ಕಾಗಲ್ವಾ?”
“ಅವರು ಮಾರಬಹುದು. ಈ ಏರಿಯಾದಲ್ಲಿ ಈ ಮನೆಗೆ ಕಡಿಮೆ ಅಂದ್ರೂ 3 ಕೋಟಿಯಾಗತ್ತೆ. ಕೊಂಡುಕೊಳ್ಳುವವರು ಯಾರು?” ಸೀನಣ್ಣ ಕೇಳಿದರು.
“ನಾವೆಲ್ಲರೂ ಸೇರಿ ಕೊಂಡುಕೊಳ್ಳೋಣ. ಆಗ ನಮಗೂ ಕಡಿಮೆ ಬೀಳತ್ತೆ. ಅಕ್ಕ ಮೈಸೂರು ಮನೆ ಮಾರಿ ದುಡ್ಡು ಕೊಡಲಿ ಬೇಕಿದ್ರೆ ಆಮೇಲೆ ಮೇಲೆ ಮನೆಕಟ್ಟಬಹುದು.”

“ಅವರು ಖಂಡಿತಾ ಮಾರಲ್ಲಮ್ಮ. ಅವರಿಗೆ ಈ ಮನೆ ಮೇಲೆ ತುಂಬಾ ಪ್ರೀತಿಯಿದೆ. ಬೇಕಾದರೆ ಒಡೆಸಿ ಇದೇ ಜಾಗದಲ್ಲಿ ಬೇರೆ ರೀತಿ ಮನೆ ಕಟ್ಟಬಹುದು.”
“ಕೇಳಕ್ಕೇನಣ್ಣ? ನೀನು ಮೊದಲು ಕೇಳು.”
“ನಿಮ್ಮಣ್ಣ ಖಂಡಿತಾ ಕೇಳ್ತಾರೆ. ಆದರೆ ನಾವು ಇಲ್ಲಿರಲ್ಲ. ನಾವು ವರು ಜೊತೆ ಹೋಗ್ತರ‍್ತೇವೆ.”
“ವರು ಯಾವ ದೊಡ್ಡ ಮನುಷ್ಯಳೂಂತ ಅವಳ ಮಾತಿಗೆ ಬೆಲೆ ಕೊಡ್ತೀರಾ? ಜಾನಕಿ ಸಿಡುಕಿದಳು.

“ನಮಗೂ ವಯಸ್ಸಾಗ್ತಿದೆ ಜಾನಕಿ. ಮೊದಲಿನ ಹಾಗೆ ಕೆಲಸ ಮಾಡಕ್ಕಾಗಲ್ಲ. 10-15 ಜನರಿಗೆ ಊಟ, ತಿಂಡಿ ಮಾಡುವಷ್ಟು ಶಕ್ತಿ ಇಲ್ಲ. ನೀವೆಲ್ಲಾ ಕೆಲಸಕ್ಕೆ ಹೋಗುವವರು. ಅಡಿಗೆ ಮನೆ ಕಡೆಗೆ ತಿರುಗಿಯೂ ನೋಡಲ್ಲ. ನಿನ್ನ ಮಗು ಜವಾಬ್ದಾರಿನೂ ನಮ್ಮದೇ. ಎಷ್ಟು ವರ್ಷ ನಾವು ಹೀಗಿರಬೇಕು ಹೇಳು.”
“ಜಾನಕಿ ನಿನಗೆ ತೆಪ್ಪಗಿರಕ್ಕಾಗಲ್ವಾ?” ಸುಧಾಕರ ಗದರಿದ.

“ಅಕ್ಕ ಹೇಳಿದ್ರಲ್ಲಿ ಏನು ತಪ್ಪಿದೆ ಸುಧಾಕರ? ಅಕ್ಕ ಒಂದು ಒಡವೆ ಮಾಡಿಸಿಕೊಂಡಿದ್ದಾರಾ? ಮೊನ್ನೆ ವರು ಆರ್ಟಿಫೀಶಿಯಲ್ ಜ್ಯೂಯಲರಿ ಕೊರಿಯರ್‌ನಲ್ಲಿ ಕಳಿಸಿದ್ದಾಳೆ. “ನೀನು ಚಿನ್ನದ್ದು ಹಾಕಿಕೊಂಡು ಹೋಗಕ್ಕಾಗಲ್ಲ. ನೀನು ಬೇರೆಯವರ ಒಡವೆ ಹಾಕಿಕೊಂಡು ಹೋಗಬೇಡ. ಅದು ಕಳೆದುಹೋದರೆ ವಾಪಸ್ಸು ಮಾಡೋದು ಕಷ್ಟ” ಅಂತ ಹೇಳಿದಳು ಗೊತ್ತಾ?”
ಯಾರೂ ಮಾತಾಡಲಿಲ್ಲ.

“ಏನು ಒಡವೆ ಕಳಿಸಿದ್ದಾಳೆ ತೋರಿಸಿ ಅತ್ತಿಗೆ.”
ಶಕುಂತಲಾ ತಂದು ತೋರಿಸಿದರು.
ತಾಯಿಗೆ ಒಂದು ಜೊತೆ ಬಳೆ, ಒಂದೆಳೆಯ ಸರ, ಒಂದು ಚಿಕ್ಕ ಮಾಂಗಲ್ಯದ ಚೈನ್, ತಂಗಿಗೆ ಎರಡು ಸೆಟ್ ಒಡವೆಗಳು. ಪ್ರತಿ ಸೆಟ್‌ನಲ್ಲೂ ಕಿವಿಯದು, ಬಳೆ, ನೆಕ್ಲೇಸ್ ಇತ್ತು. ಜೊತೆಗೆ ಒಂದು ಜೊತೆ ಕಾಲು ಚೈನೂ ಇತ್ತು.”
“ಇದಕ್ಕೆಲ್ಲಾ ಸುಮಾರು 10,000 ಖರ್ಚು ಮಾಡಿರುತ್ತಾಳೆ. ಮೈಸೂರಿಗೆ ಹೋದ ಮೇಲೆ ಹೊಸ ರೀತಿ ಖರ್ಚು ಮಾಡೋದು ಕಲಿತಿದ್ದಾಳೆ” ಎಂದಳು ದೇವಕಿ.

“ಹಾಗೇನಿಲ್ಲ ದೇವಕಿ. ಅಕ್ಕನ ಒಡವೆಗಳು ಮಾತ್ರ ಹೊಸದು. ಉಳಿದಿದ್ದು ಮಾನಸಾದು. ಅವಳೇ ಆರಿಸಿಕೊಟ್ಟಳಂತೆ. ಅವಳ ಫ್ರೆಂಡ್ಸ್ ಇದೇ ತರಹ ಒಡವೆಗಳನ್ನು ಹಾಕುತ್ತಾರಂತೆ.”
ಜಾನಕಿ, ದೇವಕಿ ಹೊಟ್ಟೆ ಉರಿದುಕೊಂಡರು. ಅವರಿಬ್ಬರು ಸಂಪಾದಿಸುತ್ತಿದ್ದರೂ ಇಂಡಿಯಾ ಬಿಟ್ಟು ಹೊರಗೆ ಹೋಗಿರಲಿಲ್ಲ. ಏನೂ ಸಂಪಾದಿಸದ ಶಕುಂತಲಾ ಕುಟುಂಬದ ಜೊತೆ ದುಬೈಗೆ ಹಾರುವುದೆಂದರೇನು? ಅವರಿಲ್ಲದೆ ಈ ಮನೇನ್ನ ನಡೆಸೋದು ಹೇಗೆ?”
“ದೇವಕಿ, ಅಕ್ಕ ಇಲ್ಲದೆ ನಾನೊಬ್ಬಳೇ ಈ ಮನೆ ನಡೆಸಕ್ಕಾಗಲ್ಲ. ನಾನೂ ಹತ್ತು ದಿನ ರಜ ಹಾಕಿ ನಮ್ಮ ಅಮ್ಮನ ಮನೆಗೆ ಹೋಗ್ತಿದ್ದೀನಿ. ಅಲೋಕ್ ನನ್ನ ಜೊತೆ ಬರ‍್ತಾನೆ.”

ಜಾನಕಿ-ದೇವಕಿ ಏನೂ ಮಾತಾಡಲಿಲ್ಲ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆhttp://surahonne.com/?p=43231

ಸಿ.ಎನ್. ಮುಕ್ತಾ

5 Comments on “ಕನಸೊಂದು ಶುರುವಾಗಿದೆ: ಪುಟ 4

  1. ಜವಾಬ್ದಾರಿ ಬೇಡ ವೆಂದರೂ ಹೇಗೆ ತಲೆಮೇಲೆ ಬೀಳುತ್ತೆ ಎನ್ನುವುದು ಒಂದೆಡೆಯಾದರೆ ಜವಾಬ್ದಾರಿ ಯಿಂದ ನುಣಚಿಕೊಳ್ಳುವುದು ಹೇಗೆ.. ಎನ್ನುವುದು ಇನ್ನೂ ಒಂದು ಕಡೆ.. ಮಕ್ಕಳ.. ಒಡನಾಟ.. ಧಾರಾವಾಹಿ ಯ ಮುಖಾಂತರ.. ಕುತೂಹಲ ಮೂಡಿಸುತ್ತಾ ಹೋಗುತ್ತಿದೆ..ಮೇಡಂ..

  2. ಹಳೆ ತಲೆಮಾರು ಮತ್ತು ಹೊಸ ತಲೆಮಾರಿನ ತಿಕ್ಕಾಟಗಳು ಮತ್ತು ಸಮನ್ವಯತೆ ಎರಡನ್ನೂ ಬಿಂಬಿಸುತ್ತಾ ಸುಂದರವಾಗಿ ಕಾದಂಬರಿ ಮುಂದುವರೆಯುತ್ತಿದೆ.

  3. ಕುತೂಹಲಕಾರಿ ಕೌಟುಂಬಿಕ ಕಥಾಹಂದರ, ….ಬಹಳ ಚೆನ್ನಾಗಿದೆ ಮೇಡಂ

  4. ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಸಂಪಾದಕಿಯವರಿಗೂ, ಓದಿ ಅಭಿಪ್ರಾಯ ತಿಳಿಸಿ , ಪ್ರೋತ್ಸಾಹಿಸಿಸುತ್ತಿರುವ ಆತ್ಮೀಯ ಓದುಗ ಬಾಂಧವರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *