ದೇವರನಾಡಲ್ಲಿ ಒಂದು ದಿನ – ಭಾಗ 4

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು) 
ಪ್ರಾಣವಿಧಾತನ ಸನ್ನಿಧಾನ


ನಾನಾ ಜೀವಿಗಳ ಆಧಾರತಾಣ ನಾಗರಹೊಳೆಯ ಸೌಂದರ್ಯವನ್ನು ಸವಿಯುತ್ತಾ ಹೊರಟವಳಿಗೆ ಚೆಕ್ ಪೋಸ್ಟ್ ಬಂದದ್ದು ತಿಳಿಯಲೇ ಇಲ್ಲ.  ಏರಿಳಿತಗಳ ಬದುಕಿನಂತೆ ಕಂಡ  ರಸ್ತೆಯ ಉದ್ದಕ್ಕೂ ಸಾಕಷ್ಟು ಗುಂಡಿಗಳು ಎದುರಾದವು.   ತುಂಬಾ ಕಿತ್ತು ಹೋದ ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಆದರೆ ಚೆಕ್ ಪೋಸ್ಟ್ ದಾಟಿದ ಬಳಿಕ ಕೇರಳದ ಸರಹದ್ದಿನ ಪ್ರಾರಂಭ. ವಾಹ್! ಎಂತಹ ಸುಂದರವಾದ ರಸ್ತೆಗಳದು ಗೊತ್ತ.  ರಸ್ತೆಯಲ್ಲಿ ಆರಾಮಾಗಿ ಕುಳಿತು ಕಾಲಕಳೆಯುವಷ್ಟು ಸೊಗವಿತ್ತು.  ಹಾವಿನಂತೆ ಬಾಗಿ ಬಳುಕಿದ ರಸ್ತೆಯ ಇಕ್ಕೆಲಗಳಲ್ಲೂ ಮರಗಳ ರೆಂಬೆ ಕೊಂಬೆಗಳು ಬಾಗಿ ಬಳುಕಿ ಸ್ವಾಗತ ಕೋರಿದವು.

ಬಿಸಿಲಿನ ರಂಗೇರಿ ಹಿಮಚ್ಛಾದಿತ ಬೆಟ್ಟಗಳು ಬಟ್ಟೆಯನ್ನು ಕಳಚಿ ಹಸಿರಂಗಿ ತೊಟ್ಟಂತೆ ಕಣ್ಣಿಗಾನಂದ ತಂದವು.  ಊರೊಂದು ಸಮೀಪವಾಯಿತು.  ತಿಂಡಿ ತಿನ್ನಲು ಸಮಯವೂ ಆಗಿತ್ತು. ರಸ್ತೆಯುದ್ದಕ್ಕೂ ಮಲೆಯಾಳಂ ಭಾಷೆಯಲ್ಲಿ ಬರೆದ ಬೋರ್ಡ್ ಗಳು ರಾರಾಜಿಸಿದವು.  ಒಂದೇ ಒಂದು “ರೂಂ ” ಎಂಬ ಕನ್ನಡ ಬೋರ್ಡ್ ನೋಡಿ ಖುಷಿಯಾಯಿತು.  ಏಕೆಂದರೆ ಬೇರೆ ಭಾಷೆ ಬರದು ನನಗೆ.

ಚುಮುಚುಮು ಚಳಿಗೆ ಹೊಟ್ಟೆ ಹಸಿಯುವಿಕೆ ಬಹಳವಾಗಿ ದಾರಿಯಿಲ್ಲಿ ಸಿಕ್ಕ ಹೋಟೆಲ್ಲೊಂದಕ್ಕೆ ನುಗ್ಗಿದೆವು. ರೆಸ್ಟಾರೆಂಟ್ ತುಂಬಾ ನಮ್ಮದೇ ಗದ್ದಲ.  ನಮ್ ಕಡೆಯ ತಿಂಡಿ ಬೇಡವೆಂದು ಅಲ್ಲಿನ ವಿಶೇಷ ತಿಂಡಿಯನ್ನು ಆರ್ಡರ್ ಕೊಟ್ಟು ಪುಟ್ಟು ರುಚಿ ನೋಡಿಯಾಯಿತು. ಆದರೂ ಪೂರಿ ಸಾಗುವಿನ ವಿಶೇಷವೇ ಹೊಟ್ಟೆ ತುಂಬಿಸಿದ್ದು. ಅಲ್ಲಿ ಕೊಡುವ ವಿಶೇಷ ಬೇರು ಹಾಕಿ ಕುದಿಸಿದ ನೀರು ಮನ ಸೆಳೆಯಿತು.  ಎಲ್ಲಾ ಹೋಟೆಲ್ ಗಳಲ್ಲಿ ಇದನ್ನು ಫಾಲೋ ಮಾಡಿದ್ದು,  ಅಲ್ಲಿನ ನಿಯಮಕ್ಕೆ ಎಲ್ಲರೂ ಬದ್ದರಾಗಿದ್ದುದು ಮತ್ತೊಂದು ಸಂಗತಿ.   ತಿಂಡಿ, ಕಾಫಿ,ಪೋಟೋ ಸೆಷನ್ ನಂತರ ಮುಂದಿನ ಪಯಣಕ್ಕೆ ಸಿದ್ಧವಾಗಲೇ ಬೇಕಿತ್ತು.  ಹಾಗಾಗಿ ಹೊರಟುನಿಂತೆವು. (ತುಂಬಾ ಚೆನ್ನಾಗಿ ಚಹಾ ಮಾಡುವ ಹೋಟೆಲ್ ಗಳಲ್ಲಿ ನಮ್ಮಲ್ಲಿ ಸಿಗುವ ಫಿಲ್ಟರ್ ಕಾಫಿ ದೊರೆಯುವುದು ಕಷ್ಟ ಸಾಧ್ಯ ಎನಿಸಿತು. )

ದಾರಿ ಸಾಗಿತು….ಸಾಗುತ್ತಿದ್ದ ಹಾಗೇ ನಮ್ಮ ಕಾರುಗಳೆಲ್ಲಾ ಸಾಲಾಗಿ ನಿಂತುಬಿಟ್ಟಿದ್ದವು.  ನಮ್ಮ ಜೊತೆ ದೀಪಶ್ರೀ ತಿಂದದ್ದು ಹೊರಹಾಕಿದಂತೆ ಮತ್ತೊಂದು ಕಾರಲ್ಲಿ ಜ್ಯೋತಿ ಕೂಡಾ ಎಲ್ಲರ ಬಟ್ಟೆಗಳಿಗೊಂದಿಷ್ಟು ಆಹಾರದ ಚಿತ್ರ ಬಿಡಿಸಿದ್ದರಂತೆ.  ನೀರುಹಾಕಿ ಆ ಚಿತ್ರಗಳನ್ನು ತೊಳೆಯುತ್ತಿದ್ದರು.  ಪಾಪ ಕೆಲವರಿಗೆ ಪ್ರಯಾಣದಲ್ಲಿನ ತಿರುವುಗಳು ತ್ರಾಸ ಕೊಡುವುದು ಸಹಜ.  ಒಂದು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮತ್ತೆ ಬರ್ ಬರ್ ಶಬ್ದದೊಂದಿಗೆ ಕಾರುಗಳು ಹೊರಟವು.

ಈಗ ನಮ್ಮ ಪಯಣ ತಿರುನೆಲ್ಲಿಯತ್ತ ಸಾಗಿತು.  ಸುಮಾರು ಏಳು ಕಿಲೋಮೀಟರ್ ನಂತರ ದೇವಾಲಯದ ಆವರಣದಲ್ಲಿ ಕಾರ್ ಪಾರ್ಕಿಂಗ್ ಮಾಡಿ ಮೆಟ್ಟಿಲು ಹತ್ತಿ ಮೇಲೆ ಹೋಗಬೇಕಿತ್ತು. ಬಿಸಿಲು ಬಹಳವೇ ಏರಿತ್ತು. ಮೆಟ್ಟಿಲು ಹತ್ತಿ ಹೋದರೆ ಪುರಾತನ ದೇವಾಲಯವಿತ್ತು. ಮಹಾವಿಷ್ಣುವಿನ ದೇವಾಲಯವದು. ನೋಡಲು ಬಹಳವೇ ಚಂದವಿತ್ತು.  ಕೇರಳ ಮಾದರಿಯ ದೇವಾಲಯಗಳ ಶೈಲಿಯೇ ಭಿನ್ನ. ಮಂಗಳೂರು ಹಂಚಿನ ಮೇಲ್ಛಾವಣಿಯು ನಾಲ್ಕು ದಿಕ್ಕಿನಲ್ಲೂ ಇಳಿಜಾರಿಸಿದಂತೆ ಕಟ್ಟಿರುವ ರೀತಿಯೇ ಭಿನ್ನ.  ಸ್ವಚ್ಛತೆಯನ್ನು ಕಾಪಾಡಿದ ಮಂದಿರ ಬಹಳ ಪ್ರಶಾಂತವಾಗಿ ಇತ್ತು.   ಬ್ರಹ್ಮ ಗಿರಿಯ ನಡುವೆ ರಾರಾಜಿಸುತ್ತಿತ್ತು.  ಈ ದೇವಾಲಯದ ಸುತ್ತಲಿನ ಹಸಿರುಬೆಟ್ಟಗಳು ಅರಳಿದ ತಾವರೆಯ ದಳಗಳಂತೆ ಕಂಡವು.  ನಡುವೆ ಈ ಪುಟ್ಟ ದೇವಾಲಯ ಕುಸುಮದಂತೆ  ಕಂಗೊಳಿಸಿತು. ಕುಸುಮದೊಳಗೆ ರಾರಾಜಿಸುವ ಮಹಾವಿಷ್ಣವಿನ ದರ್ಶನಕ್ಕೆ ಅಣಿಯಾದೆವು. ಸುತ್ತಲಿನ ವಾತಾವರಣ ಸವಿದು ಒಂದಷ್ಟು ಪಟಗಳಿಗೆ ಪೋಸು ನೀಡಿ ಮಂಗಳಾರತಿಯ ಸಮಯಕ್ಕೆ ದೇವಾಲಯದ ಒಳಗೆ ಹೋಗಬೇಕೆಂದು ಕೊಳ್ಳುವಷ್ಟರಲ್ಲಿ ದೀಪಸ್ವಾಮಿ ಮತ್ತೊಂದು ಪ್ರದೇಶಕ್ಕೆ ಕೈ ಹಿಡಿದು ಕರೆದೊಯ್ದಳು.  ದೇವಾಲಯದ ಹಿಂದೆ ಒಂದು ಕಿಮೀ ಯಷ್ಟು ಮೆಟ್ಟಿಲು ಇಳಿದು ಸಾಗಬೇಕಿತ್ತು.  ಅಲ್ಲಿ ಒಂದು ಕೊಳವಿತ್ತು.  ಪವಿತ್ರ ದೇವಾಲಯದ ‘ಪಂಚತೀರ್ಥ’ ಕೊಳವದು.  ಅಲ್ಲಿ ಇಳಿಯಲು ಆಗತ್ತಿರಲಿಲ್ಲ. ಈ ದೇವಾಲಯದ ಗಮನಾರ್ಹ ವಿಷಯ ಎಂದರೆ ಅಲ್ಲಿ ದೇವಾಲಯಕ್ಕೆ ಬಾವಿ ಇಲ್ಲ. ಆದ್ದರಿಂದ ಕಣಿವೆಯ ಆಳವಾದ ದೀರ್ಘಕಾಲಿಕ ಪರ್ವತದ ಹೊಳೆಯಿಂದ ನೀರನ್ನು ಪುರೋಹಿತರ ಕೋಣೆಗೆ ಪ್ರಭಾವಶಾಲಿ ಕಲ್ಲಿನ ಜಲಚರಗಳ ಮೂಲಕ ಸಾಗಿಸಲಾಗುತ್ತದೆ. ತಿರುನೆಲ್ಲಿಯ ಪಾಪನಾಶಿನಿ  ಹೊಳೆಗೆ ಹತ್ತಿರವಿರುವ ಬಂಡೆಯಲ್ಲಿ ಮೃತರ ಅಂತಿಮ ಸಂಸ್ಕಾರವನ್ನು ಮಾಡುವ ತಾಣವಾಗಿ ಪ್ರಸಿದ್ಧಿಯಾಗಿದೆ.  ಇಲ್ಲಿಗೆ ಭೇಟಿ ನೀಡಿದ್ದು ಒಂದು ವಿಶೇಷ.

PC: Internet


ಈ ದೇವಾಲಯದ ಇತಿಹಾಸ ಸಿಗುವುದು ಸ್ವಲ್ಪ ಕಷ್ಟ. ದಾಖಲೆಗಳಾವುದೂ ಅಸ್ತಿತ್ವದಲ್ಲಿ ಇರಲಿಲ್ಲ.  ಜೀರ್ಣೋದ್ಧಾರ ಮಾಡಿದ್ದರಿಂದ ದೇವಾಲಯದ ಹೊರಭಾಗ ಸ್ವಲ್ಪ ಬದಲಾವಣೆ ಕಂಡಿತ್ತು. ಆದರೂ ಚೇರ ರಾಜನಾದ ಭಾಸ್ಕರ ರವಿವರ್ಮನ ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು ಎಂದು ಹೇಳುವರು. ದಟ್ಟವಾದ ಕಣಿವೆಯಲ್ಲಿ ಈ ದೇವಾಲಯವಿದೆ. ಇದನ್ನು ಬ್ರಹ್ಮ ಸ್ಥಾಪಿತ ದೇವಾಲಯಎಂದು ಕೂಡಾ ಹೇಳುವರು.  ವಿಷ್ಣುವಿನ ಹೆಚ್ಚು ಪುರಾತನ ದೇವಾಲಯಗಳು ಬ್ರಹ್ಮ ದೇವರ ಸ್ಥಾಪನೆ ಎಂದು ಇತಿಹಾಸಗಳು ಸಾರುತ್ತವೆ. ಅಲ್ಲದೆ ‘ಬ್ರಹ್ಮ ಗಿರಿ’ಯ ತಪ್ಪಲಿನಲ್ಲೇ ಈ ದೇವಾಲಯ ಇರುವುದು. ಈ ಕಣಿವೆಯನ್ನು ‘ಸಹ್ಯ ಕಣಿವೆ ‘ ಎಂದು ಕರೆಯುವರು. ಅಪರಿಮಿತ ಸೌಂದರ್ಯದಿಂದ ಈ ಕಣಿವೆ ಕಂಗೊಳಿಸುತ್ತಿದೆ.  ಅಮಲ ಮರದಲ್ಲಿ ಕೆತ್ತಿರುವ ಈ ಮೂರ್ತಿಯ ಸೌಂದರ್ಯಕ್ಕೆ ಬೆರಗಾಗಿ ಬ್ರಹ್ಮ ದೇವರು ದೇವತೆಗಳ ಸಹಾಯದಿಂದ ಇಲ್ಲಿಯೇ ಮಹಾವಿಷ್ಣುವಿನ ಪ್ರತಿಷ್ಠಾಪನೆ ಮಾಡಿದರಂತೆ. ಹಾಗಾಗಿ ಈ ಕ್ಷೇತ್ರಕ್ಕೆ ‘ಸಹ್ಯಮಲಕ ಕ್ಷೇತ್ರ ‘ ಎಂಬ ಹೆಸರನ್ನು ಇಟ್ಟಿದ್ದಾರೆ ಎಂದು ಪುರಾಣಗಳು ಸಾರುತ್ತವೆ.  ದೇವಾಲಯದ ಬಳಿ ಪಾಪನಾಶಿನಿ ಹರಿಯುವಳು.  ಅದನ್ನು ನೋಡಲು ನಮಗೆ ಸಮಯವಾಗಲಿಲ್ಲ.ಇಂದಿಗೂ ಆ ದೇವಾಲಯದ ಪ್ರಧಾನ ಅರ್ಚಕ ಬ್ರಹ್ಮ ದೇವರಂತೆ. ಬೆಳಿಗ್ಗಿನ ವೇಳೆ ಇಂದಿಗೂ ಬ್ರಹ್ಮ ದೇವರು ಪೂಜೆಮಾಡುವರೆಂಬ ನಂಬಿಕೆಯಿಂದ ಪೂಜಾ ಸಾಮಗ್ರಿಗಳ ಒಂದು ಭಾಗವನ್ನು ಬಿಡುವರಂತೆ. ಭಗವಾನ್ ಪರಶುರಾಮರು ತನ್ನ ತಂದೆಯ ಅಂತಿಮ ವಿಧಿವಿಧಾನಗಳನ್ನು ಇಲ್ಲಿಯೇ ಮುಗಿಸಿದರೆಂಬ ಖ್ಯಾತಿ ಕೂಡಾ ಈ ಪ್ರದೇಶಕ್ಕಿದೆ. ಹಾಗಾಗಿ ನಮ್ಮ ಚೂರು ಪಾಪಕರ್ಮಗಳು ಈ ಮಹಾವಿಷ್ಣುವಿನ ದರ್ಶನದಿಂದ ಮುಕ್ತಿ ಹೊಂದಲು ಒಂದು ಅವಕಾಶ ಸಿಕ್ಕಿದ್ದು ನಿಜಕ್ಕೂ ನನ್ನ ಭಾಗ್ಯವೇ ಸರಿ.

ಕೇರಳದ ಸಂಸ್ಕೃತಿ, ಆಚಾರ ವಿಚಾರಗಳ ಪದ್ದತಿಯಂತೆ ಆಲಯದೊಳಗೆ ನಗಾರಿ, ತಮಟೆ, ಜಾಗಟೆಗಳನ್ನು ನುಡಿಸುತ್ತಿದ್ದರು. ತುಂಬಾ ಚಿಕ್ಕದಾದ ಆವರಣವದು. ಇಪ್ಪತ್ತೈದು ಜನ ನಿಲ್ಲಬಹುದಿತ್ತು. ಆದರೂ ಸುಮಾರು ನಲವತ್ತರ ಮೇಲೆ ಭಕ್ತರು ಕಿಕ್ಕಿರಿದು ದೇವರ ದರ್ಶನಕ್ಕೆ ನಿಂತರು. ಸಾಲಾಗಿ ನಿಲ್ಲುವ ಪದ್ಧತಿ ಏನೂ ಇರಲಿಲ್ಲ. ಇದ್ದ ಜಾಗದಲ್ಲೇ ತೂರಿಕೊಂಡು ನಿಂತೆವು.   ರಾಶಿ ತುಪ್ಪದ ದೀಪಗಳ ಘಮಲು ಆಲಯವನ್ನು ಪಸರಿಸಿತ್ತು. ಬಹುಶಃ ರಾತ್ರಿ ಹಚ್ಚಲು ಇರಬೇಕು. ಅದು ಬೆಳಿಗ್ಗೆನೇ ಸಿದ್ಧವಾಗಿತ್ತು.  ಇದರ ವಾಸನೆ ತಡೆಯದವರು ಹೊರಗೆ ಹೋದರು. ಇನ್ನೇನು ದೇವರ ದರ್ಶನ ಈಗ ಆಗಬಹುದು ಎಂದು ಕೊಂಡು ಬೇಗ ಬೇಗ ಬರುವ ಸ್ತೋತ್ರಗಳನ್ನು ಪಠಿಸುತ್ತ ನಿಂತೆ. ಬಹುಶಃ ನೈವೇದ್ಯ ಮಾಡುತ್ತಿರಬೇಕು ಎಂದು ಕೊಂಡೆ. ಊಹೂಂ…… ಎಷ್ಟು ಹೊತ್ತಾದರೂ ತೆರೆಯಲೇ ಇಲ್ಲ. ಮತ್ತೆ ದೇವಾಲಯದಲ್ಲಿ  ಒಂದೇ ಸಮನೆ ಮುಚ್ಚಿದ ಬಾಗಿಲು ನೋಡುತ್ತಾ ನಿಲ್ಲುವುದೆಂದರೆ ನನಗಾಗದ ಕೆಲಸ.  ದೇವರನ್ನು ನೋಡುವುದಾದರೆ ಸಮಯ ಹೋಗುವುದೇ ತಿಳಿಯದು.  ಆದರೇಕೆ ತಾಸುಗಟ್ಟಲೆ ಮುಚ್ಚಿದ ಬಾಗಿಲು ತೆರೆಯಲಿಲ್ಲ ಎಂಬುದು ತಿಳಿಯಲಿಲ್ಲ. ನಗಾರಿ ಶಬ್ದಕ್ಕೆ ಕಿವಿಕೊಟ್ಟು ಅಲ್ಲೇ ಕಾಲು,ತಲೆ ಕುಣಿಸುತ್ತಾ ನಿಂತೆ.

ಸುಮಾರು ಒಂದು ಗಂಟೆಯ ನಂತರ ದೇವರ ಗರ್ಭಗುಡಿಯ ಬಾಗಿಲು ತೆಗೆದು ದಿವ್ಯ ಮೂರುತಿಯ ದರ್ಶನ ಭಾಗ್ಯಕ್ಕೆ ಅನುವುಮಾಡಿಕೊಟ್ಟರು.  ಬಹುಶಃ ಎಲ್ಲಾ ಪೂಜಾ ವಿಧಾನವೂ ಮುಗಿದಿತ್ತು. ಬೆಣ್ಣೆಯ ಅಲಂಕಾರದಲ್ಲಿ ಕಂಗೊಳಿಸಿದ ವಿಷ್ಣುವಿನ ಮೂರುತಿ ಅತ್ಯಂತ ಸುಂದರವಾಗಿತ್ತು. ಓಂ ನಮೋ ನಾರಾಯಣಾಯ ಪಠನೆಯೊಂದಿಗೆ ಭಗವಂತನನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಏಕೆಂದರೆ ಹೆಚ್ಚು ಅವಕಾಶ ಇರುವುದಿಲ್ಲ. ಮಂಗಳಮೂರ್ತಿಗೊಂದು ಮಂಗಳಪಾಡಿಕೊಂಡು, ಕರಮುಗಿದು, ಕಣ್ತುಂಬಿಸಿಕೊಂಡು ಹೊರಬಂದಾಗ  ನೆತ್ತಿಯ ಮೇಲಿನ ಸೂರ್ಯ ಇರೋಬರೋ ಕೆಂಡವನ್ನೆಲ್ಲಾ ಬೀಸಿ ಒಗೆದಿದ್ದ.  ಬಿಸಿಲಿನ ಪ್ರಖರತೆಗೆ ಬೇಗ ದಣಿವಾಗುತ್ತಿದ್ದರಿಂದ ಬೇಗ ಬೇಗ ಹೆಜ್ಜೆ ಹಾಕಿ ಪುಟ್ಟ ಗೂಡಾದ ಕಾರನ್ನು ಸೇರಿ ಮುಂದಿನ ತಿರುವಿಗೆ ಸಿದ್ಧರಾದೆವು.

ಮುಂದುವರೆಯುವುದು..

ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=37800

-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ

5 Responses

  1. ನಯನ ಬಜಕೂಡ್ಲು says:

    Nice one

  2. ಬಿ.ಆರ್.ನಾಗರತ್ನ says:

    ಪ್ರವಾಸ ಕಥನ… ಎಂದಿನಂತೆ ಓದಿಸಿಕೊಂಡು ಹೋಯಿತು…
    ಧನ್ಯವಾದಗಳು ಗೆಳತಿ ಲಕ್ಷ್ಮಿ.

  3. ಶಂಕರಿ ಶರ್ಮ says:

    ಕೇರಳ ಪ್ರವಾಸದ ಸೊಗಸಾದ ಲೇಖನವು ನಮ್ಮನ್ನೂ ನಿಮ್ಮೊಂದಿಗೆ ದೇಗುಲದೊಳಕ್ಕೆ ಕರೆದೊಯ್ದು ವಿಷ್ಣುವಿನ ಬೆಣ್ಣೆ ಅಲಂಕಾರವನ್ನು ಕಣ್ಣು ತುಂಬಿಕೊಳ್ಳುವಂತೆ ಮಾಡಿತು!

  4. Padma Anand says:

    ಚಂದದ ವರ್ಣನೆಯ ಸುಂದರ ಪ್ರವಾಸೀ ಕಥನ.

  5. Padmini Hegde says:

    ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: