ಕಾದಂಬರಿ: ನೆರಳು…ಕಿರಣ 30
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಬೆಳಗ್ಗೆಯೇ ಮನೆ ಬಿಟ್ಟಿದ್ದ ಶ್ರೀನಿವಾಸ ತನ್ನ ಗೆಳೆಯನ ತಂದೆಯವರ ಸಂಸ್ಕಾರ ಕಾರ್ಯ ಮುಗಿಸಿ ಹಿಂದಿರುಗಿದನು. ಸ್ನಾನ ಪೂಜಾದಿಗಳನ್ನು ಮುಗಿಸಿ ಅಲ್ಲಿ ನಡೆದ ಸುದ್ಧಿಗಳನ್ನು ಹೇಳುವಷ್ಟರಲ್ಲಿ ಜೋಯಿಸರೂ ಆಗಮಿಸಿದರು.
ಮತ್ತೊಮ್ಮೆ ಅವರೆದುರು ಎಲ್ಲ ಸಂಗತಿಗಳ ಪುನರಾವರ್ತನೆಯಾಯಿತು. ಹಾಗೇ “ಅಪ್ಪಾ ಆಷಾಢಮಾಸದಲ್ಲಿ ಒಂದೆರಡು ಕಡೆಗಳಲ್ಲಿ ಪೂಜೆ ಮಾಡಲು ಒಪ್ಪಿಕೊಂಡಿದ್ದನಂತೆ ಸುಬ್ಬು. ಈಗ ಅವನು ಅವುಗಳನ್ನು ಮಾಡಿಸುವಂತೆ ನನಗೆ ಒಪ್ಪಿಸಿದ್ದಾನೆ. ಒಂದಿಬ್ಬರು ಸಹಾಯಕರನ್ನೂ ಪರಿಚಯಿಸಿ ಅವರೊಡನೆ ಮಾತುಕತೆಯಾಡಿದ್ದಾನೆ. ಅವರುಗಳೇ ಇಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಹೋಗುವಂತೆ ವ್ಯವಸ್ಥೆ ಮಾಡಿದ್ದಾನೆ” ಎಂದು ಹೇಳಿದನು.
“ಏಕೆ ಅವನ ಗುಂಪಿನಲ್ಲಿ ಬೇರೆ ಯಾರೂ ಒಪ್ಪಿಕೊಂಡಿಲ್ಲವಾ?” ಎಂದು ಕೇಳಿದರು ಸೀತಮ್ಮ.
“ಇಲ್ಲಾಮ್ಮ, ಸುಬ್ಬುವಿನ ತಂದೆಯವರ ಹದಿಮೂರು ದಿನಗಳ ಕಾರ್ಯ ಮುಗಿಯುವವರೆಗೂ ಅವರು ಅಲ್ಲಿಗೆ ಹೋಗುವುದು, ಬರುವುದು ನಡೆದಿರುತ್ತದೆ.. ಅದಕ್ಕೇ ನನಗೆ ವಹಿಸಿದ್ದಾನೆ” ಎಂದ ಶ್ರೀನಿವಾಸ.
“ಅದು ಸರೀ ಮಗಾ, ಇಲ್ಲಿಯೇನಾ ಅಥವಾ ಬೇರೆ ಊರಿನಲ್ಲಾ?” ಎಂದರು ಸೀತಮ್ಮ.
“ಇಲ್ಲಿಯೇ ಸುತ್ತಮುತ್ತಲಿನ ಬಡಾವಣೆಗಳಲ್ಲಿ, ಮಾಡಿಕೊಟ್ಟರಾಯಿತು” ಎಂದ ಶ್ರೀನಿವಾಸ.
“ನಿನಗೆ ಬಿಡುವೇ ಇಲ್ಲವಲ್ಲೋ, ಇನ್ನೇನು ಶ್ರಾವಣ ಮಾಸ ಬಂದುಬಿಡುತ್ತೆ. ಪೂಜೆಗಳು ಸಾಲು ಸಾಲು. ಈ ಮಧ್ಯೆ ಗೌರಿಯಮ್ಮ ಬೇರೆ ಪೂಜೆ ಮಾಡಿಸಲು ಪಟ್ಟಿಯನ್ನೇ ಕೊಟ್ಟಿದ್ದಾರೆ.” ಎಂದರು ಸೀತಮ್ಮ.
“ಅಮ್ಮಾ ನಮ್ಮ ಉದ್ಯೋಗವೇ ಅದು. ಕೆಲಸ ಸಿಕ್ಕಷ್ಟು ಒಳ್ಳೆಯದಲ್ಲವೇ? ಯಾರನ್ನೋ ಓಲೈಸಲು ನಮಗಿಷ್ಟವಿರಲಿ, ಬಿಡಲಿ ಕೆಲಸ ಮಾಡುವುದಕ್ಕಿಂತ ಭಗವಂತನ ಆರಾಧನೆಯ ಕೆಲಸ ಉತ್ತಮವಲ್ಲವೇ.” ಎಂದನು ಶ್ರೀನಿವಾಸ.
“ಆಯಿತು ಪೂಜಾರಪ್ಪಾ,” ಎಂದರು ವ್ಯಂಗ್ಯವಾಗಿ.
“ ಹಾಗೇಕೆ ಹೇಳುತ್ತೀರಾ? ಪೂಜಾರಪ್ಪನ ಮಗ ಮರಿಪೂಜಾರಪ್ಪ ಅಂತ ಹೇಳಿ” ಎಂದು ನಗುತ್ತಾ “ಏನು ಭಾಗ್ಯಾ ನಾನು ಬೆಳಗ್ಗೆ ನಿನಗೆ ಹೇಳಿ ಹೋಗಲಿಲ್ಲವೆಂದು ಬೇಸರವೇ? ಮೌನಗೌರಿಯಂತೆ ಕುಳಿತಿದ್ದೀಯಲ್ಲಾ” ಎಂದ ಶ್ರೀನಿವಾಸ.
“ಅಯ್ಯೊ ಪಾಪ ಆ ಹುಡುಗೀನ್ಯಾಕೆ ಗೋಳಾಡಿಸುತ್ತೀ, ಎಂದಾದರೂ, ಯಾರನ್ನಾದರೂ, ಯಾವುದಕ್ಕಾದರೂ ಅವಳು ದೂರಿದ್ದಿದೆಯಾ. ಈಗ ಅವಳ ಗಮನವೆಲ್ಲ ನಿಮ್ಮಪ್ಪ ಎಷ್ಟೋ ವರ್ಷಗಳಿಂದ ಪೆಠಾರಿಯಲ್ಲಿ ಬೆಚ್ಚಗೆ ಮಲಗಿಸಿದ್ದರಲ್ಲ, ಈಗ ಅವರ ಮುತ್ತಾತನ ಕಡತಗಳನ್ನು ಇವಳಿಗೆ ವರ್ಗಾಯಿಸಿದ್ದಾರೆ. ಅವುಗಳನ್ನು ಈಗ ಎಬ್ಬಿಸಿ ಕೂಡಿಸುವ ಆತುರದಲ್ಲಿದ್ದಾಳೆ. ಸಂಜೆಯಾಗಿದ್ದೇ ತಿಳಿಯದಷ್ಟು ಅದರಲ್ಲಿ ಮುಳುಗಿಹೋಗಿದ್ದಳು. ಈಗ ಅದೇ ವಿಚಾರದಲ್ಲಿ ಚಿಂತನೆ ನಡೆಸಿರಬಹುದು.” ಎಂದು ಹೇಳಿದರು ಸೀತಮ್ಮ.
“ಅರೆ ಅದಕ್ಕೇನೂ ಮಹೂರ್ತವಿಟ್ಟಿಲ್ಲಮ್ಮಾ, ನಿನಗಾದಾಗ ನಿಧಾನವಾಗಿ ಮಾಡು ತಾಯೀ” ಎಂದರು ಜೋಯಿಸರು.
“ಅವಳು ಒಂದು ಕೆಲಸವನ್ನು ಹಿಡಿದರೆ ಆವಾಹನೆ ಮಾಡಿಕೊಂಡಂತೆ. ಮಾಡಲಿ ಬಿಡಿ. ಅವಳು ತರಗತಿ ಪ್ರಾರಂಭಿಸಿದರೆ ಹೆಚ್ಚು ಸಮಯ ಸಿಗುವುದಿಲ್ಲ. ಎಲ್ಲಿಗೂ ಹೋಗುವುದಿಲ್ಲ. ಶ್ರಾವಣದವರೆಗೆ ನಾನು ಆರಾಮವೆಂದುಕೊಂಡಿದ್ದೆ. ಆದರೆ ಈಗ ಅನಿವಾರ್ಯವಾಗಿ ಬಿಝಿಯಾದೆ.” ಎಂದ ಶ್ರೀನಿವಾಸ.
“ ಇವರು ಹೇಳಿದ್ದು ನಿಜ ಮಾವಯ್ಯ. ಆದರೆ ಈ ಕೆಲಸ ಅವಸರವಾಗಿ ಮಾಡುವಂತಹದ್ದಲ್ಲ. ಹಾಗೇ ಪ್ರಾರಂಭಿಸಿದರೆ ಭದ್ರವಾಗಿ ಕುಳಿತು ಮಾಡುವಂತಹುದು. ಇದನ್ನು ಬರೆದಿಡಲು ಒಂದೆರಡು ಬಂಡಲ್ ಬಿಳಿಹಾಳೆ, ಕಾರ್ಬನ್ ಪೇಪರ್‍ಗಳು, ಒಳ್ಳೆಯ ಪೆನ್ನು ಮತ್ತು ಇಂಕಿನಲ್ಲಿ ಬರೆದಿದ್ದನ್ನು ಅಳಿಸಲು ಸಾಧ್ಯವಾಗುವ ಎರೇಸರ್, ತಂದುಕೊಡಿ. ನಿಧಾನ ಮಾಡಬೇಡಿ.” ಎಂದು ಕೇಳಿದಳು ಭಾಗ್ಯ.
“ಈ ಅಪ್ಪಾ ಮಕ್ಕಳು ಮದುವೆಯಾದ ಹೊಸದರಲ್ಲಿ ಪ್ರಸ್ತಾಪ ಮಾಡಿದ ಕಾರು ಕೊಳ್ಳುವುದನ್ನು ಇನ್ನೂ ಮಾಡುತ್ತಲೇ ಇದ್ದಾರೆ. ಇನ್ನು ನೀನು ಅವರುಗಳಿಗೆ ಸಾಮಾನುಗಳನ್ನು ತಂದುಕೊಡಲು ಒಪ್ಪಿಸಿದ್ದೀಯೆ. ಅವರಿಬ್ಬರ ಕಾರ್ಯತತ್ಪರತೆ ನೆನಪಿಗೆ ಬಂತು, ನೀನಿನ್ನು ಕೆಲಸ ಮಾಡಿದ ಹಾಗೇ ಇದೆ. ಏನೇನು ಬೇಕೋ ಒಂದು ಲಿಸ್ಟ್ ಮಾಡಿಕೊಡು, ನಾರಣಪ್ಪನ ಜೊತೆ ಮಾಡಿಕೊಂಡು ನಾವೇ ಹೋಗಿ ತರೋಣ” ಎಂದರು ಸೀತಮ್ಮ.
“ಲೇ..ಲೇ..ಸೀತೂ, ಕಾರು ಖರೀದಿ ಪ್ರಸ್ತಾಪ ಸ್ಥಗಿತವಾಗಿಲ್ಲ ಕಣೆ, ಪ್ರಕ್ರಿಯೆ ನಡೆದಿದೆ. ಆ ನಂಜುಂಡನಿಗೆ ನಮಗೆ ಸೆಕೆಂಡ್‌ಹ್ಯಾಂಡ್ ಕೊಡಿಸಲು ಇಷ್ಟವಿಲ್ಲ. ಅದಕ್ಕೇ ಯಾವುದಾದರೂ ಕಾರು ಮಾರಾಟಕ್ಕೆ ಬಂದರೂ ಒಂದಲ್ಲಾ ಒಂದು ನ್ಯೂನತೆ ಹೇಳಿ ತಳ್ಳಿ ಹಾಕುತ್ತಿದ್ದ. ಶೀನಿ ಕೇಳಿದ್ದಕ್ಕೆ, ಬೇಡಿ ಶ್ರೀನಿವಾಸು, ನಿಧಾನವಾದರೂ ಸರಿ ಹೊಸದನ್ನೇ ತೆಗೆದುಕೊಳ್ಳಿ ಎಂದು ಹೇಳಿದನಂತೆ. ಜಮೀನಿಗೆ ಹಣ ಹೊಂದಿಸಿಕೊಟ್ಟಾದ ಮೇಲೆ ಅದನ್ನು ಸಿಲ್ಲಿಸಿದೆವಾ. ಸೀನು ತೋಟ ಮಾಡಬೇಕೆಂದು ಆಸೆಪಟ್ಟ. ಅದರ ತಯಾರಿ, ಅದನ್ನೊಂದು ರೂಪಕ್ಕೆ ತರುವಲ್ಲಿ ಎಷ್ಟಾಯಿತೆಂದು ನಿನಗೇ ಗೊತ್ತಲ್ಲಾ. ಈಗ ಅದು ಒಂದು ಹಂತಕ್ಕೆ ಬಂದಿದೆ. ಲೋನ್ ತೆಗೆದುಕೊಂಡು ಕಾರು ಖರೀದಿಸಲು ಶೀನಿ ಒಪ್ಪಲಿಲ್ಲ. ಹೀಗಾಗಿ ಹಣ ಹೊಂದಿಸಿದ ಮೇಲೇ ಆ ಯೋಚನೆ ಮಾಡೋಣವೆಂದು ಮುಂದಕ್ಕೆ ಹಾಕಿದ್ದೇವೆ. ತಿಳಿಯಿತೇ ಅರ್ಧಾಂಗಿ?” ಎಂದು ವಿವರಿಸಿದರು ಜೋಯಿಸರು.
“ಹೌದಾ ! ನಾನು ಅದನ್ನೆಲ್ಲಾ ಯೋಚಿಸಲೇ ಇಲ್ಲ. ನಿಮ್ಮನ್ನು ಕೇಳಲೂ ಇಲ್ಲ. ಪಾಪ ಸುಮ್ಮನೆ ನಿಮ್ಮ ಮೇಲೆ ಆಪಾದನೆ ಮಾಡಿದೆ ಕ್ಷಮಿಸಿಬಿಡೀಪ್ಪ” ಎಂದರು ಸೀತಮ್ಮ.
“ಆಯಿತು ಕ್ಷಮಿಸುತ್ತಾರೆ. ಈಗ ಎಲ್ಲರೂ ಊಟಕ್ಕೆ ಬರುತ್ತೀರಾ? ಎಲೆಗಳು ಕಾಯುತ್ತಿವೆ” ಎಂದು ಕರೆದ ನಾರಣಪ್ಪನ ಮಾತಿಗೆ ಸಮ್ಮತಿಸಿದಂತೆ ನಗುತ್ತಾ ಎಲ್ಲರೂ ಊಟದ ಮನೆಯ ಕಡೆ ಹೆಜ್ಜೆ ಹಾಕಿದರು.
ಮಾರನೆಯ ದಿನ ಎಲ್ಲರೂ ಅವರವರ ಕೆಲಸಗಳಿಗೆ ಹೊರಗೆ ಹೋದ ಮೇಲೆ ಭಾಗ್ಯ ಸ್ವಲ್ಪ ಹೊತ್ತು ಸಂಗೀತ ಅಭ್ಯಾಸ ಮಾಡಿ ನಂತರ ಅಡುಗೆ ಮನೆಗೆ ಬಂದವಳೇ “ನಾಣಜ್ಜಾ ನಾನು ಏನಾದರೂ ಸಹಾಯ ಮಾಡಲೇ?” ಎಂದಳು.
“ಏನೂ ಬೇಡ ಭಾಗ್ಯಮ್ಮಾ, ಎಲ್ಲವೂ ಮುಗಿಯಿತು. ಇನ್ನೂ ಸ್ವಲ್ಪ ಹೊತ್ತು ನೀವು ಹಾಡುತ್ತಿದ್ದರೆ ಚಂದಿತ್ತು. ಶೀನಪ್ಪ ತಮ್ಮ ಬಿಗುಮಾನ ತೊರೆದು ನಿಮಗೆ ಕೆಲಸ ಮಾಡಲು ಒಪ್ಪಿಗೆ ಕೊಟ್ಟಿದ್ದರೆ ದಿವ್ಯವಾಗಿರುತ್ತಿತ್ತು. ಈಗೇನು ನಮ್ಮಲ್ಲಿ ಹೆಣ್ಣುಮಕ್ಕಳು ಕಲಿಕೆಯಲ್ಲಿ ಮುಂದೆಬರುತ್ತಿದ್ದಾರೆ, ಕೆಲಸಕ್ಕೂ ಹೋಗುತ್ತಾರೆ. ಹಿರಿಯರಿಗಿಂತ ಕಿರಿಯಪ್ಪನದ್ದೇ ಕಿರಿಕಿರಿ. ಅವ ಕೆಟ್ಟವನೇನಲ್ಲ, ಆದರೆ ಸ್ವಾಭಿಮಾನದ ಸಮಸ್ಯೆ.” ಎಂದರು ನಾರಣಪ್ಪ.
“ಹೋಗಲಿ ಬಿಡಿ ನಾಣಜ್ಜ, ಅವರಿಗೆ ಇಷ್ಟವಿಲ್ಲ ಎನ್ನುವುದು ತಿಳಿದಮೇಲೂ ಅದನ್ನೇ ಹಿಡಿದು ಜಗ್ಗಾಡುವುದು ಬೇಡ. ಸದ್ಯಕ್ಕೆ ಮೊದಲಿಗಿಂತ ವಾಸಿ, ಮನೆಯಲ್ಲಿದ್ದುಕೊಂಡೇ ನನ್ನ ಪ್ರತಿಭೆಯು ಅನಾವರಣವಾಗುವಂತೆ ಅನುಕೂಲ ಒದಗಿಸಿ ಕೊಡುತ್ತಿದ್ದಾರೆ. ಇರುವುದೆಲ್ಲವ ಬಿಟ್ಟು ಇಲ್ಲದುದರ ಕಡೆ ಚಿಂತೆ ಏಕೆಂದು ಹಿರಿಯರು ಹೇಳಿಲ್ಲವೇ. ಹಾಂ ಅಡುಗೆ ಏನು? ನಾನು ಈಕಡೆಗೆ ಬರಲೇ ಇಲ್ಲ. ಕಷಾಯ ಸಹ ನೀವೇ ನಾನಿದ್ದ ಜಾಗಕ್ಕೆ ತಂದುಕೊಟ್ಟುಬಿಟ್ಟಿರಿ” ಎಂದಳು ಭಾಗ್ಯ.
“ಅದ್ಯಾವ ದೊಡ್ಡ ಸಂಗತಿ, ಭಾಗ್ಯಮ್ಮ ನೀವು ಅಡುಗೆ ಏನೆಂದು ಕೇಳಿದಿರಲ್ಲಾ, ಹೆಸರುಬೇಳೆ ಕ್ಯಾರೆಟ್ ಕೋಸಂಬರಿ, ಹೀರೇಕಾಯಿ ಚಟ್ನಿ, ಬೆರಕೆ ಸೊಪ್ಪಿನ ಹುಳಿ, ಅನ್ನ, ತಿಳಿಸಾರು, ಹಪ್ಪಳ, ಉಪ್ಪಿನಕಾಯಿ, ಮೊಸರು, ಬೆರೆಸಿದ ಮಜ್ಜಿಗೆ ಅಷ್ಟೇ.” ಎಂದರು ನಾರಣಪ್ಪ.
“ಪರವಾಗಿಲ್ಲ, ನಾಣಜ್ಜ, ಹಿತ್ತಲಲ್ಲಿ ಬೆಳೆಯುವ ತರಕಾರಿಗಳನ್ನೆಲ್ಲ ಬಳಕೆ ಮಾಡುವುದರಲ್ಲಿ ಎಕ್ಸ್‌ಪರ್ಟ್ ಆಗಿಬಿಟ್ಟಿದ್ದೀರಿ” ಎಂದು ತಾರೀಫು ಮಾಡಿದಳು.
“ಅದಕ್ಕೆಲ್ಲ ಗುರು ನೀವೇ,” ಎಂದರು ನಾರಣಪ್ಪ.
“ಅದು ಸರಿ ನಾಣಜ್ಜ, ಅತ್ತೆ ಎಲ್ಲೂ ಕಾಣಿಸಲಿಲ್ಲ, ಗುಡಿಗೇನಾದರೂ ಹೋಗಿದ್ದಾರಾ?” ಎಂದು ಪ್ರಶ್ನಿಸಿದಳು ಭಾಗ್ಯ.
“ನಿನ್ನತ್ತೆ ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾಳೆ, ತೊಗೋ ನೀನು ಹೇಳಿದ್ದ ಸಾಮಾನುಗಳೆಲ್ಲವೂ ಸರಿಯಾಗಿವೆಯಾ ನೋಡಿಕೊ” ಎಂದು ಒಂದು ಚೀಲವನ್ನು ಅವಳ ಕೈಯಿಗೆ ಕೊಟ್ಟರು ಸೀತಮ್ಮ.
“ಏನತ್ತೇ ಇವು?” ಎಂದು ಕೇಳಿದಳು ಭಾಗ್ಯ.
“ಅದೇ ನೀನು ನೆನ್ನೆದಿನ ಹೇಳಿದ ಬಿಳಿಹಾಳೆ, ಪೆನ್ನು, ಇತ್ಯಾದಿಗಳು. ನಾನಾಡಿದ ಮಾತಿನ ಪ್ರಭಾವ ಬೇಗನೇ ಆಗಿದೆ ನಿಮ್ಮ ಮಾವನವರಿಗೆ. ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೇ ಅಲ್ವಾ ಅಂಗಡಿ ಇರುವುದು. ಲಿಸ್ಟ್ ಬರೆದುಕೊಂಡು ಹೋಗಿದ್ದರೂಂತ ಕಾಣುತ್ತೆ. ಅಲ್ಲಿಗೆ ಕೊಟ್ಟಿರಬೇಕು ಆ ಅಂಗಡಿಯ ಹುಡುಗ ಬಂದು ಇವನ್ನು ಕೊಟ್ಟುಹೋದ” ಎಂದರು ಸೀತಮ್ಮ.
ಒಂದೊಂದೇ ವಸ್ತುಗಳನ್ನು ತೆಗೆದು ನೋಡಿ ಅದರಲ್ಲೇ ಇರಿಸಿ “ಏಲ್ಲವೂ ಇವೆ ಅತ್ತೆ” ಎಂದು ಭಾಗ್ಯ ಅವುಗಳನ್ನು ಎತ್ತಿಡಲು ಮಹಡಿಯ ಹತ್ತಿರ ಹೋದಳು. ಆದಷ್ಟು ಬೇಗ ಮಾವನವರು ಕೊಟ್ಟಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಿ ಅವರಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಕೊಳ್ಳುತ್ತಾ ಸಾಮಾನುಗಳನ್ನು ರೂಮಿನಲ್ಲಿಟ್ಟು ಕೆಳಗಿಳಿದು ಬಂದಳು.
ಮೊದಲೇ ನಿರ್ಧರಿಸಿದಂತೆ ತನ್ನ ಮಾವನವರು ಕೊಟ್ಟಿದ್ದ ಎರಡು ಕಟ್ಟಿನಲ್ಲಿದ್ದ ಲೇಖನಗಳನ್ನು ಪುಸ್ತಕರೂಪಕ್ಕೆ ತರಲು ಅನುಕೂಲವಾಗುವಂತೆ ಸಿದ್ಧಪಡಿಸಿದಳು. ಆಷಾಢಮಾಸ ಮುಗಿಯಲು ಇನ್ನೂ ಎರಡು ದಿನಗಳಿರುವಾಗಲೇ ಅದನ್ನು ಜೋಯಿಸರ ಮುಂದೆ ಇಟ್ಟಳು.
“ಅವ್ವಯ್ಯಾ, ಇಷ್ಟು ಬೇಗ ಮುಗಿಸಿಬಿಟ್ಟೆಯಾ ಭಾಗ್ಯ” ಎಂದು ಕೇಳಿದರು ಸೀತಮ್ಮ.
“ಅಷ್ಟೇನೂ ತುಂಬ ಕಷ್ಟವಾಗಿರಲಿಲ್ಲ ಅತ್ತೆ, ಸರಾಗವಾಗಿ ಓದಿಕೊಂಡು ಬರೆದಿಟ್ಟೆ. ಆ ಹಾಳೆಗಳು ಇನ್ನೂ ಸ್ವಲ್ಪ ಚೆನ್ನಾಗಿದ್ದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು. ಮೂಲಪ್ರತಿಯನ್ನೇ ಪ್ರಕಟಣೆಗೆ ಕೊಡಬಹುದಾಗಿತ್ತು. ಆದರೆ ಅವನ್ನು ಗಟ್ಟಿಯಾಗಿ ಹಿಡಿದರೆ ಪುಡಿಪುಡಿಯಾಗುತ್ತವೇನೋ ಅನ್ನುವ ಸ್ಥಿತಿಗೆ ತಲುಪಿವೆ. ಇದರಿಂದ ನಿಧಾನವಾಯಿತು. ಈಗ ಎರಡು ಕಟ್ಟನಲ್ಲಿದ್ದವುಗಳಲ್ಲಿ ಒಂದು ಆಯುರ್ವೇದಕ್ಕೆ ಸಂಬಂಧಿಸಿದ ಮಾಹಿತಿಗಳು, ಇನ್ನೊಂದು ಹಾಡುಗಳ ಸಂಗ್ರಹವನ್ನು ಮಾತ್ರ ಮಾಡಿ ಮುಗಿಸಿದ್ದೇನೆ. ಇನ್ನೊಂದು ಸಂಗೀತಕ್ಕೆ ಸಂಬಂಧಿಸಿದ್ದು. ಓದಿ ಮನನ ಮಾಡಿಕೊಂಡು ಸಿದ್ಧಪಡಿಸಬೇಕು. ಅಂದರೆ ಮಾವಯ್ಯ ಕೊಟ್ಟಿದ್ದ ಕೆಲಸ ಸಂಪೂರ್ಣವಾಗಿ ಇನ್ನೂ ಪೂರ್ತಿಯಾಗಿಲ್ಲ.” ಎಂದಳು ಭಾಗ್ಯ.
ಜೋಯಿಸರಿಗೆ ಸೊಸೆಯು ತನ್ಮಯತೆಯಿಂದ ಕೆಲಸ ಮಾಡಿರುವ ರೀತಿ ಕಂಡು ಆನಂದವಾಯಿತು. “ನೋಡೇ ಸೀತಾ, ಭಾಗ್ಯಳ ಬರವಣಿಗೆ ಒಳ್ಳೆ ಮುತ್ತು ಪೋಣಿಸಿದಂತೆ ಇದೆ. ಶಹಭಾಸ್, ತುಂಬ ಮುತುವರ್ಜಿಯಿಂದ ತಯಾರಿಸಿದ್ದೀಯಮ್ಮ. ಇದನ್ನು ಶೀನನಿಗೆ ತೋರಿಸಿದೆಯಾ?” ಎಂದು ಕೇಳಿದರು.
“ಹೂ ಮಾವಯ್ಯಾ, ಅವರು ಇದನ್ನು ತುಂಬ ಗಂಭೀರವಾಗಿ ಗಮನಿಸಿದಂತೆ ಕಾಣಿಸಲಿಲ್ಲ. ಆದರೆ ಒಮ್ಮೆ ಕಣ್ಣಾಡಿಸಿ ಅಂತೂ ಛಲಬಿಡದ ತ್ರಿವಿಕ್ರಮನಂತೆ ಸಾಧಿಸಿಬಿಟ್ಟೆ. ಮಿಕ್ಕಿರುವ ಇನ್ನೊಂದನ್ನೂ ಪೂರೈಸಿಬಿಡು.” ಎಂದು ಹೊಗಳಿದರು.” ಎಂದಳು ಭಾಗ್ಯ.
“ಅವನಿಗೂ ಹೊಗಳುವುದನ್ನು ಕಲಿಸಿಬಿಟ್ಟೆ ನೀನು.” ಎಂದರು ಸೀತಮ್ಮ.
“ಏ.,ಅದೇಕೆ ಹಾಗೆ ಹೇಳುತ್ತೀ ಸೀತಾ. ಅವನೇನು ಮನುಷ್ಯನಲ್ಲವೇ? ಸ್ವಲ್ಪ ಬಿಗಿ ಅಷ್ಟೇ” ಎಂದು ನಕ್ಕರು ಜೋಯಿಸರು.
“ಷ್..ಮೆಲ್ಲಗೆ, ಶೀನು ಬರುವ ಸಮಯ, ಕೇಳಿಸಿಕೊಂಡರೆ ಬುಸುಗುಟ್ಯಾನು” ಎಂದು ಪಿಸುಗುಟ್ಟುತ್ತಾ ನಕ್ಕರು ಸೀತಮ್ಮ.
ಹೂಂ ಹೆತ್ತವರು ತಮ್ಮ ಮಗನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಬರೀ ಬಿಗುಮಾನವೇನು, ಬಿಗಿ ಮನುಷ್ಯನೇ. ಏನಾದರಾಗಲೀ ಪ್ರೀತಿ, ಅಂತಃಕರಣದಿಂದ ನೋಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದುಕೊಂಡಳು ಭಾಗ್ಯ.
“ಅಮ್ಮಾ ಭಾಗ್ಯಾ, ನಾಳೆ ಸ್ವಲ್ಪ ಬಿಡುವು ಮಾಡಿಕೋ. ನಿನ್ನ ಅಪ್ಪ ಅಮ್ಮನ ಮನೆಗೆ ಹೋಗಿ ಪೂಜೆಗೆ ಬರಲು ಆಹ್ವಾನಿಸಿ ಬರೋಣ. ನೀನೂ ಏನೇನೋ ಕೆಲಸ ಹಚ್ಚಿಕೊಂಡು ಅಲ್ಲಿಗೆ ಹೋಗಲೇ ಇಲ್ಲ” ಎಂದರು ಸೀತಮ್ಮ.
ಅತ್ತೆಯವರ ಮಾತುಗಳನ್ನು ಕೇಳಿದ ಭಾಗ್ಯ ಹೋಗಲು ಮನಸ್ಸಿದ್ದರೂ ಬೇಕೆಂದೇ ಕಡಿವಾಣ ಹಾಕಿಕೊಂಡಿದ್ದಳು. ಅತ್ತೆಯವರು ನನ್ನ ಜೊತೆಗಿದ್ದರೆ ಹೆಚ್ಚು ಪ್ರಶ್ನೆಗಳು ಬರುವುದಾಗಲೀ, ಬೇರೆ ಮಾತುಗಳಾಗಲೀ ಬರುವುದಿಲ್ಲ. ಎಂದುಕೊಂಡಳು. ಮದುವೆಗೆ ಮುಂಚೆ ಭಾವನಾ ಓದುಬರಹಕ್ಕೆ ಎಷ್ಟೊಂದು ಪ್ರಾಮುಖ್ಯತೆ ಕೊಡುತ್ತಿದ್ದಳು. ನನಗೆ ಮುಂದಕ್ಕೆ ಓದಲು ಅನುಕೂಲ ಸಿಗಲೆಂದು ಆಶಿಸುತ್ತಿದ್ದಳು. ನನ್ನ ಸಂಗೀತ ಸಾಧನೆ ನೋಡಿ ಹಿಗ್ಗುತ್ತಿದ್ದಳು. ಈಗೇನಾಯಿತು. ಮಕ್ಕಳಾಗುವುದು ಬಿಡುವುದರಲ್ಲಿ ನನ್ನೊಬ್ಬಳದೇ ಪಾತ್ರವಿದೆಯಾ, ಅಥವಾ ಹೊರಗಿನ ಜನರ ಮಾತುಗಳನ್ನು ಕೇಳಿ ಅಕ್ಕನ ಬಗ್ಗೆ ಕಾಳಜೀನಾ ಅರ್ಥವಾಗುತ್ತಿಲ್ಲ. ಸುಖಾ ಸುಮ್ಮನೆ ಇಲ್ಲದ ಗೊಂದಲವನ್ನು ಉಂಟುಮಾಡುತ್ತಿದ್ದಾಳೆ. ನನ್ನ ಹೆತ್ತವರೂ ಅದಕ್ಕೆ ತಾಳ ಹಾಕುತ್ತಿದ್ದಾರೆ. ಭಗವಂತ ಇವೆಲ್ಲಕ್ಕೂ ನೀನೇ ಒಂದು ಪೂರ್ಣವಿರಾಮ ಹಾಕಪ್ಪಾ ಎಂದುಕೊಂಡು “ಆಯಿತು ಅತ್ತೆ, ಹೋಗಿ ಬರೋಣ, ಹಾಗೇ ಭಾವನಾಳನ್ನೂ ಕರೆದುಬರೋಣ, ಕೇಶುಮಾಮ, ರಾಧತ್ತೆಯವರನ್ನು ನೋಡಿ ಬಹಳ ದಿನಗಳಾದವು. ಹೋದ ಸಾರಿ ಅಜ್ಜಿಯ ಅನಾರೋಗ್ಯದ ನಿಮಿತ್ತ ಅವರು ಬಂದಿರಲಿಲ್ಲ.” ಎಂದಳು.
“ಅರೇ ಸೀತೂ ಪೂಜೆಯ ದಿನವನ್ನು ಫಿಕ್ಸ್ ಮಾಡಿದವರಂತೆ ಮಾತನಾಡುತ್ತಿದ್ದೀರಲ್ಲ. ಸೀನೂ ಇನ್ನೂ ಹೇಳೇ ಇಲ್ಲ.” ಎಂದರು ಜೋಯಿಸರು.
ಸೀತಮ್ಮನವರು ಉತ್ತರ ಕೊಡುವುದಕ್ಕೆ ಮೊದಲೇ ಭಾಗ್ಯ “ಮಾವಯ್ಯಾ ಮೊನ್ನೆ ರಾತ್ರಿಯೇ ಅವರು ಹೇಳಿದರಲ್ಲ. ಶ್ರಾವಣ ಮಾಸ ಪ್ರಾರಂಭದಲ್ಲಿಯೇ ಮೊದಲ ಗುರುವಾರ ನಾನು ಬಿಡುವಾಗಿದ್ದೀನಿ ಮಾಡಿಸೋಣ, ಗೌರಿಯಮ್ಮನವರಿಗೂ ಹೇಳುತ್ತೇನೆ ಎಂದರು ಮರೆತು ಬಿಟ್ಟಿರಾ” ಎಂದಳು. “ಓ ಹೌದಲ್ಲವೇ, ನೆನಪಿಸಿದ್ದು ಒಳ್ಳೆಯದೇ ಆಯಿತು. ಯಾವುದೋ ಯೋಚನೆಯಲ್ಲಿ ಆ ವಿಚಾರ ನನ್ನ ತಲೆಯಲ್ಲಿ ಕುಳಿತಿಲ್ಲ. ನಾನೂ ದೇವಸ್ಥಾನದಲ್ಲಿ ಸಹ ಅರ್ಚಕರಿಬ್ಬರಿಗೆ ಮೊದಲೇ ಹೇಳಬೇಕು” ಎಂದರು ಜೋಯಿಸರು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35970
–ಬಿ.ಆರ್.ನಾಗರತ್ನ, ಮೈಸೂರು
ಕಾದಂಬರಿ ಚೆನ್ನಾಗಿ ಮೂಡಿ ಬರುತ್ತಿದೆ. ಕಥಾವಸ್ತು ಇನ್ನೊಂದು ಮಗ್ಗುಲಿಗೆ ಹೊರಳುವ ಘಟ್ಟದಲ್ಲಿರುವಂತಿದೆ.
ಧನ್ಯವಾದಗಳು ಗೆಳತಿ ಹೇಮಾ..ನೀವು..
ನೀಡುವ ಪ್ರೋತ್ಸಾಹ ಕ್ಕೆ…ಮತ್ತೊಂದು ಧನ್ಯವಾದಗಳು…
ಸುಂದರವಾದ ಕಥೆ
ಧನ್ಯವಾದಗಳು ಮೇಡಂ
“ನೆರಳು” ಕಾದಂಬರಿಯು ಅತ್ಯಂತ ಸಹಜ, ಸರಳ, ಸುಂದರವಾಗಿ ಮೂಡಿಬರುತ್ತಿದೆ… ಧನ್ಯವಾದಗಳು ನಾಗರತ್ನ ಮೇಡಂ.
ನಿಮ್ಮ… ಸಹೃದಯ…ಪ್ರತಿಕ್ರಿಯೆ ಗೆ ಅನಂತ ಧನ್ಯವಾದಗಳು ಶಂಕರಿ ಮೇಡಂ.
ಅಂತೂ ಭಾಗ್ಯಳ ಸಂಗೀತ ಶಾಲೆಯ ಪ್ರಾರಂಭಿಕ ತಯ್ಯಾರಿ ಜೋರಾಗಿಯೇ ನಡೆಯಹತ್ತಿದೆ. ಕುತೂಹಲ ಮೇರೆ ಮೀರುತ್ತಿದೆ.