ಕವಿನೆನಪು 45: ಕುಟುಂಬ ನಿರ್ವಹಣೆಯಲ್ಲಿ ಕೆ ಎಸ್‌ ನ…

Share Button

ನನ್ನ ಅಪ್ಪ ಅಮ್ಮ ಶಾಂತನದಿ ಹಾಗೂ ಅಬ್ಬರಿಸುವ ಸಮುದ್ರಗಳ ಅಪೂರ್ವ ಸಂಗಮ. ನಮ್ಮ ಕುಟಂಬವನ್ನು  ಕೇವಲ ಒಂದು ಇಣುಕಿನಲ್ಲಿ ಗ್ರಹಿಸಿದವರು ಕೆ.ಎಸ್.ನ ಕೇವಲ ಬರವಣಿಗೆಯಲ್ಲೇ ತೊಡಗಿಕೊಂಡಿದ್ದರು ಹಾಗೂ ನನ್ನ ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದುಕೊಂಡಿದ್ದರು. ನಮ್ಮ ತಂದೆಯವರೂ ಕೆಲವು ಸಂದರ್ಶನ ಹಾಗೂ ಮಾತುಕತೆಗಳಲ್ಲಿ ಸೌಜನ್ಯಕ್ಕಾಗಿ ಮನೆಯ ನಿರ್ವಹಣೆಯ ಶ್ರೇಯವನ್ನು ಅಮ್ಮನಿಗೇ ನೀಡಿದ್ದುಂಟು. ನಮ್ಮ ತಂದೆಯವರ ಜೀವನದ ಕೊನೆಯ ಹತ್ತು ವರುಷಗಳಲ್ಲಿ ಅಮ್ಮ ಸಂಸಾರದಲ್ಲಿ ಕ್ರಿಯಾಶೀಲ ಪಾತ್ರ ವಹಿಸುವುದು ಅನಿವಾರ್ಯವಾಗಿತ್ತು.

ಆದರೆ ವಾಸ್ತವದಲ್ಲಿ ಇದು ಕೇವಲ ಅರ್ಧಸತ್ಯ. ನಾನು ಬಾಲ್ಯದಿಂದ ಗಮನಿಸಿದಂತೆ ನಮ್ಮ ತಂದೆ ಕುಟುಂಬ ಸದಸ್ಯರ ಯಾವುದೇ ಅಗತ್ಯಗಳನ್ನು ತಾವೇ ತಿಳಿದುಕೊಂಡೋ ಅಥವಾ ನಾವು ಹೇಳಿದಾಗ ತಿಳಿದುಕೊಂಡೋ ಅದನ್ನು ಪೂರೈಸಲು ತಕ್ಷಣ ತೊಡಗುತ್ತಿದ್ದರು. ಶಿಕ್ಷಣ, ಆರೋಗ್ಯ, ಉದ್ಯೋಗ ಇಂಥ ಯಾವುದೇ ಸಮಸ್ಯೆಯನ್ನು ಬರಲಿ, ಅದರ ಚಿಂತೆ ನನಗಿರಲಿ”, ಎನ್ನುತ್ತ ತಮಗೆ ಪರಿಚಿತರಿದ್ದ ಅಧಿಕಾರಸ್ಥರನ್ನೋ, ಸ್ನೇಹಿತರನ್ನೋ ಸಂಪರ್ಕಿಸಿ, ಅಗತ್ಯವಿದ್ದರೆ ಅವರನ್ನು ಮುಖತಃ ಭೇಟಿ ಮಾಡಿ ಪರಿಹಾರಕ್ಕೆ ಯತ್ನಿಸುತ್ತಿದ್ದರು.

ನಾನು ಕಾಲೇಜು ಸೇರುವಾಗ ಬೇಡವೆಂದರೂ ನನ್ನ ಜತೆ ವಿಜಯಾ ಕಾಲೇಜಿಗೆ ಬಂದು ಪ್ರೊ ಜಿ ವಿ ಯವರಿಗೆ ಪರಿಚಯಿಸಿದರು. ೧೯೭೮ರಲ್ಲಿ ನಾನು ಸಿಂಡಿಕೇಟ್ ಬ್ಯಾಂಕ್ ನಲ್ಲಿ ತರಬೇತಿಗೆ ಮಣಿಪಾಲಕ್ಕೆ ಹೊರಟಾಗ ಬಂದು ಉಡುಪಿಯಲ್ಲಿ ನನ್ನ ವಾಸದ ವ್ಯವಸ್ಥೆ ಮಾಡಿಕೊಟ್ಟು, ಮಣಿಪಾಲದಲ್ಲಿ ಬ್ಯಾಂಕ್ ನ ಉನ್ನತ ಅಧಿಕಾರಿಗಳನ್ನು ಕಂಡು ನನ್ನ ವಿಷಯ ತಿಳಿಸಿದರು.

ಪ್ರೌಢಶಾಲೆಯಲ್ಲಿ ಓದುವಾಗ ಹಲವು ಗಣಿತದ ಸಮಸ್ಯೆಗಳನ್ನು ಬಿಡಿಸಲು ಬರದಿದ್ದಾಗ, ಅಥವಾ ಸಂಸ್ಕೃತದ ವಿಷಯದಲ್ಲಿ ಏನಾದರೂ ಅನುಮಾನಗಳಿದ್ದಾಗ  ಸಹಾಯ ಮಾಡುತ್ತಿದ್ದರು.ಈ ನಡುವೆ ರೇಷನ್ ತರಲು ಚೀಲ ಹಿಡಿದು ಹೊರಟು ಕ್ಯೂ ನಿಲ್ಲಲೂ ಸೈ. ಏಕೆಂದರೆ ಆಗಿನ ಕಾಲದ ಜನಸಾಮಾನ್ಯರಿಗೆ ಇವರು ಯಾರೆಂದೇ ಅಷ್ಟಾಗಿ  ತಿಳಿದಿರಲಿಲ್ಲ. ಆದರೆ ಮನೆಗೆ ಅವರ ಕಾವ್ಯವಲಯದ ಸ್ನೇಹಿತರು ಬಂದಾಗ ಅಥವಾ ಅವರು ಬರೆಯಲು ಕೂತಾಗ, ನಾವುಗಳು ಮಧ್ಯಪ್ರವೇಶ ಮಾಡುವುದು ನಿಷಿದ್ಧವಾಗಿತ್ತು.

ಬೆಳಗಿನ ಹೊತ್ತು ಕಛೇರಿಗೆ ಹೋಗುವ ಮುನ್ನ ನೆಲದ ಮೇಲೆ ಕುಳಿತು, ಒಂದು ಕೈಯಲ್ಲಿ ನಶ್ಯದ ಚಿಟಿಕೆ ಹಿಡಿದುಕೊಂಡು ಬರೆಯುತ್ತಿದ್ದರು. ಕನಿಷ್ಠ ನಾಲೈದು ಬಾರಿ ಬರೆದದ್ದನ್ನು ಸಮಾಧಾನವಾಗದೆ ಉಂಡೆ ಕಟ್ಟಿ ಬಿಸಾಡುತ್ತಿದ್ದರು. ಬರವಣಿಗೆ ಶೈಲಿ ಸ್ಪುಟವಾಗಿ, ಬಹಳ ಆಕರ್ಷಕವಾಗಿತ್ತು. ಒಂಬತ್ತೂವರೆಗೆ ಬೇಗ ಬೇಗ ಬಿಸಿಯಡುಗೆ ಊಟಮಾಡಿ ಕಛೇರಿಗೆ ಹೊರಟು, ಸಾಯಂಕಾಲ ವಿಸೀ ಅವರ ಮನೆಗೋ, ಮತ್ತಾವ ಕಾರ್ಯಕ್ರಮಕ್ಕೋ ಹೋಗಿ ಮನೆಗೆ ಬರುತ್ತಿದ್ದುದು ರಾತ್ರೆ ಎಂಟಕ್ಕೆ.

ಮನೆಯ ಮಕ್ಕಳ ಮದುವೆ ಮತ್ತು ಇತರ ಸಮಾರಂಭಗಳ ವ್ಯವಸ್ಥೆಯಲ್ಲಿ ನಮ್ಮ ದೊಡ್ಡ ಭಾವ ರಾಮಸ್ವಾಮಿಯವರ ಸಕ್ರಿಯ ಸಹಕಾರವನ್ನು ಪಡೆಯುತ್ತಿದ್ದರು. ಅವರ ವ್ಯವಹಾರ ಜ್ಞಾನ – ಹಾಗೂ ವಿಚಕ್ಷಣೆಯ ಬಗ್ಗೆ ನಮ್ಮ ತಂದೆಯವರಿಗೆ ಅಪಾರ ಮೆಚ್ಚುಗೆ ಹಾಗೂ ವಿಶ್ವಾಸವಿತ್ತು.

ಮನೆಯಲ್ಲಿನ ಸಂಪನ್ಮೂಲದ ಕೊರತೆ ಹಾಗೂ ಕಷ್ಟ ಕಾರ್ಪಣ್ಯಗಳ ಕಾವು ನಮಗೆ ತಟ್ಟದಂತೆ ಅವರು ವಹಿಸಿದ ಎಚ್ಚರ ಮತ್ತು ಪಟ್ಟ ಶ್ರಮ ಕಂಡಾಗ ನಮಗೆ ಧನ್ಯತೆಯ ಭಾವ ಉಂಟಾಗುತ್ತದೆ.

(ಮುಂದುವರಿಯುವುದು)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:     http://surahonne.com/?p=32273

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

3 Responses

  1. ನಯನ ಬಜಕೂಡ್ಲು says:

    ಕವಿಗಳ ಜೀವನ ಶೈಲಿ, ಆ ಸಂಸಾರದ ಜವಾಬ್ದಾರಿ ನಿಭಾಯಿಸುತಿದ್ದ ರೀತಿಯ ವಿವರ ಅವರೊಬ್ಬ ಸದ್ಗ್ರುಹಸ್ಥರೂ ಕೂಡಾ ಅನ್ನುವುದನ್ನು ಪರಿಚಯಿಸುತ್ತದೆ.

  2. ಶಂಕರಿ ಶರ್ಮ says:

    ಸಾಮಾನ್ಯವಾಗಿ ಬಹಳ ದೊಡ್ಡ ಸಾಹಿತಿಗಳ ಮನೆಯಲ್ಲಿ ಎಲ್ಲಾ ಜವಾಬ್ದಾರಿಗಳನ್ನೂ ಅವರ ಪತ್ನಿ ವಹಿಸಿಕೊಳ್ಳುವುದನ್ನು ಕಾಣಬಹುದು. ಆದರೆ ಇಲ್ಲಿ ತಮ್ಮ ತಂದೆಯವರು ಅವರ ಬಾಧ್ಯತೆಗಳನ್ನು ಕೂಡಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ನಿಜಕ್ಕೂ ಸಂತೋಷದ ವಿಷಯ. ಹಿರಿಕವಿಗಳ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ನಮಗೆ ಒದಗಿಸುತ್ತಿರುವ ತಮಗೆ ಕೃತಜ್ಞತೆಗಳು ಸರ್.

  3. Padma Anand says:

    ಹಿರಿಯ ಕವಿಗಳ ಹಿರಿತನದ ಬಗ್ಗೆ ಬೆಳಕು ಚೆಲ್ಲುವ ʼಕವಿನೆನಪುʼ ಅತ್ಯಂತ ಆಪ್ತವಾಗಿ ಮೂಡಿಬರುತ್ತಿದೆ. ಮನ ಮುಟ್ಟುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: