ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 3

Share Button

(ಈ) ಕ್ರಿಸ್ತಶಕೆಯ ವಿಶಿಷ್ಟ ಸ್ತ್ರೀಯರು

ವಿದುಷಿಯರು, ಕವಯಿತ್ರಿಯರು:

ಸಂಗೀತ, ನೃತ್ಯ, ಗೃಹಾಲಂಕರಣ, ವರ್ಣಚಿತ್ರಕಲೆ, ತೋಟಗಾರಿಕೆ, ಆಟದ ಸಾಮಾನುಗಳ ತಯಾರಿಕೆಯಲ್ಲಿ ಸ್ತ್ರೀಯರು ನಿರತರಾಗಬೇಕೆಂದು ಧರ್ಮಶಾಸ್ತ್ರಕಾರರು ನಿರ್ದೇಶಿಸಿದ್ದರೂ ದೂರದ ಗುರುಕುಲಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ಹುಡುಗರೊಂದಿಗೆ ಹುಡುಗಿಯರೂ ಇರುತ್ತಿದ್ದರು. ಅವರು ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು, ಕಾವ್ಯ, ಛಂದಸ್ಸು ಮತ್ತು ವಿವಿಧ ಸಾಹಿತ್ಯ ಪ್ರಕಾರಗಳನ್ನು ಕರಗತ ಮಾಡಿಕೊಳ್ಳುತ್ತಿದ್ದರು. ಕ್ರಿಸ್ತಶಕೆಯ ಮೊದಲ ಸಹಸ್ರಮಾನದಲ್ಲಿ ಉಲ್ಲೇಖಿತರಾದ ಇಂಥ ಕವಯಿತ್ರಿಯರು ರೇವಾ, ರೋಹಾ, ಮಾಧವೀ, ಅನುಲಕ್ಷ್ಮೀ, ಪಹಾಯ್, ವಡ್ಡವಹೀ, ಶಶಿಪ್ರಭ. ಹಾಲನ ಗಾಥಾ ಸಪ್ತಸತಿ ಸಂಕಲನದಲ್ಲಿ ಸೇರ್ಪಡೆಯಾಗಿರುವ ಇವರ ರಚನೆಗಳು ಈಗಲೂ ಜನಪ್ರಿಯ. ಶಂಕರಾಚಾರ್ಯ ಮತ್ತು ಮಂಡನಮಿಶ್ರರ ನಡುವಿನ ತಾತ್ತ್ವಿಕ ವಾದವನ್ನು ಸರಿಯೋ ತಪ್ಪೋ ಎಂದು ನಿರ್ಧರಿಸುವ ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತವಳು ಭಾರತೀ,

ಸುಲಭವಾದ ಮತ್ತು ಉದಾತ್ತವಾದ ಶೈಲಿಗೂ, ಶಬ್ದಾರ್ಥಗಳನ್ನು ಸೊಗಸಾಗಿ ಅನ್ವಯಿಸುವ ಚಾಕಚಕ್ಯತೆಗೂ ಹೆಸರಾದವಳು ಶೀಲಭಟ್ಟಾರಿಕೆ. ಸ್ವರ್ಗಸ್ಥಳಾಗಿದ್ದರೂ ತನ್ನ ಓದುಗರ ಮೇಲೆ ವಶೀಕರಣ ಬೀರುತ್ತಿದ್ದವಳು ದೇವೀ. ಸಾಕ್ಷಾತ್ ಸರಸ್ವತಿಯೇ ಎನ್ನುವ ಕೀರ್ತಿಯನ್ನು ಹೊಂದಿದ್ದವಳು ವಿಜಯಾಂಕಾ. ಸಂಸ್ಕೃತ ಸಂಕಲನಗಳಲ್ಲಿ ಸ್ಥಾನ ಪಡೆದವರು ಮಾರುಲಾ, ಮೋರಿಕಾ, ಸುಭದ್ರೆಯರು. ಪಾಟಲೀಪುರದಲ್ಲಿ ನಡೆದ ರಾಜಕೀಯ ವಿಪ್ಲವವನ್ನು ವಸ್ತುವನ್ನಾಗಿ ಉಳ್ಳ ಪ್ರಸಿದ್ಧ ಕೌಮುದೀ ಮಹೋತ್ಸವ ನಾಟಕದ ಕತೃ‍ ಇತಿಹಾಸ ಮತ್ತು ರಾಜಕೀಯಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದ ಆಸ್ಥಾನ ವಿದುಷಿಯೇ ಆಗಿದ್ದಳು.

ವೈದ್ಯೆಯರು, ಉಪಾಧ್ಯಾಯಿನಿಯರು:

ವೈದ್ಯಕೀಯ ಕ್ಷೇತ್ರದಲ್ಲಿ ಪ್ರಧಾನವಾಗಿ ಕೇಳಿಬರುವ ಹೆಸರು ಚರಕ, ಸುಶ್ರುತರವರದಾಗಿದ್ದರೂ ಕ್ರಿಸ್ತಶಕ 8ನೆಯ ಶತಮಾನದಲ್ಲಿ ಅರಬ್ ಭಾಷೆಗೆ ಭಾಷಾಂತರಗೊಂಡ ವೈದ್ಯಶಾಸ್ತ್ರದ ಕತೃ ರೂಪಾ (ಕುಶಾ). ವೈದ್ಯಕೀಯವನ್ನು ಅಧ್ಯಯನ ಮಾಡಿ ಹೀಗೆ ಅಧಿಕೃತ ಪಠ್ಯಗಳನ್ನು ಹಲವಾರು ಮಂದಿ ಮಹಿಳೆಯರು ರಚಿಸಿದ್ದಾರೆ. ಈಕೆಯ ಕೃತಿ ಭಾಷಾಂತರಗೊಂಡದ್ದರಿಂದ ಈಕೆಯ ಹೆಸರು ಮಾತ್ರ ದಾಖಲೆಯಲ್ಲಿ ಕಾಣಸಿಗುತ್ತದೆ. ವೈದ್ಯಕೀಯದಂತೆ ಉಪಾಧ್ಯಾಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದ ಸ್ತ್ರೀಯರೂ ಇದ್ದರು. ಇವರ ಸಂಖ್ಯೆ ಗಣನೀಯವಾಗಿಯೇ ಇತ್ತು. ಇವರು ಪುರುಷಬೋಧಕರ ಪತ್ನಿಯರಿಗಿಂತ ಭಿನ್ನ ಎಂದು ಗುರುತಿಸಲು ಗುರುಪತ್ನಿಯರನ್ನು ಉಪಾಧ್ಯಾಯೆ ಎಂದೂ, ಬೋಧಕಿಯರನ್ನು ಉಪಾಧ್ಯಾಯಿನಿ ಎಂದೂ, ಗುರುಕುಲಗಳನ್ನು ಸ್ಥಾಪಿಸಿ ಬೋಧನೆ ಮಾಡುತ್ತಿದ್ದ ವಿದುಷಿಯರನ್ನು ಆಚಾರ್ಯಾ ಎಂದೂ ಕರೆಯುತ್ತಿದ್ದರು.

9ನೆಯ ಶತಮಾನದ ವೇಳೆಗೆ

ವೇದಕಾಲದಲ್ಲಿ ಸಾಮವೇದದ ಮಂತ್ರಗಳನ್ನು ಹಾಡುತ್ತಿದ್ದವರು ಕನ್ಯೆಯರೇ ಆಗಿರುತ್ತಿದ್ದರು. ವೇದೋತ್ತರಕಾಲದಲ್ಲಿ ಹುಡುಗಿಯರು ಓದು ಬರಹದೊಂದಿಗೆ ಸಂಗೀತ, ನೃತ್ಯ, ಪೈಂಟಿಂಗ್, ತೋಟಗಾರಿಕೆ, ಮಾಲೆ ಕಟ್ಟುವುದು, ಆಟಿಕೆಗಳ ತಯಾರಿಕೆ, ಗೃಹಾಲಂಕರಣ ಮುಂತಾದ ಸೌಂದರ್ಯಪ್ರಜ್ಞೆಗೆ ಸಂಬಂಧಿಸಿದ ಕಲೆಗಳನ್ನು ಕಲಿಯುವುದಕ್ಕೆ ಪ್ರೋತ್ಸಾಹ ಇತ್ತು. ಹುಡುಗಿಯರು ಸಾರ್ವಜನಿಕವಾಗಿ ನೃತ್ಯಪ್ರದರ್ಶನ ನೀಡುವುದಕ್ಕೆ ಯಾವ ನಿಷೇಧಗಳೂ ಇರಲಿಲ್ಲ. ಜನಸಾಮಾನ್ಯ ಸ್ತ್ರೀಯರು ವೈದ್ಯಕೀಯ, ಬೋಧನೆ, ಸಂಗೀತ, ನೃತ್ಯ ವೃತ್ತಿಗಳನ್ನು ಆಯ್ಕೆಮಾಡಿಕೊಂಡು ಆರ್ಥಿಕವಾಗಿ ಸ್ವತಂತ್ರ ಬದುಕನ್ನು ಕಂಡುಕೊಳ್ಳುವಂತೆ ನೂಲುವಿಕೆ, ನೇಯ್ಗೆಗಳಿಂದಲೂ ಸ್ವತಂತ್ರಜೀವನವನ್ನು ರೂಪಿಸಿಕೊಳ್ಳುತ್ತಿದ್ದರು. (1850ರ ವರೆಗೂ ಬಟ್ಟೆ ಉದ್ಯಮ ಉತ್ತುಂಗದಲ್ಲೇ ಇತ್ತು)

ಕ್ರಿಸ್ತಶಕ 9ನೆಯ ಶತಮಾನದವೇಳೆಗೆ ರಾಜಕೀಯ ಭದ್ರತೆ ಅತ್ಯಂತ ಮುಖ್ಯ ಸಂಗತಿಯಾಗಿಬಿಟ್ಟಿತ್ತು. ಯುದ್ಧದಲ್ಲಿ, ರಾಜಕೀಯದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ನ್ಯಾಯವಿತರಣೆಯಲ್ಲಿ ಭಾಗಿಯಾಗುವವರ ವರ್ಗಗಳು ಪ್ರತ್ಯೇಕವಾಗಿ ರೂಪುಗೊಂಡಿದ್ದವು. ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರೆಯುವಂತಹವು ಆಗಿದ್ದವು. ಅನಿವಾರ್ಯ ಪ್ರಸಂಗಗಳನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಎಲ್ಲರೂ ಅವರವರ ವಂಶಪಾರಂಪರ್ಯ ಕೆಲಸಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವುದೇ ಲೋಕರೂಢಿಯಾಗಿತ್ತು. ಈ ವೇಳೆಗೆ ಮಹಿಳಾ ವಿದ್ಯಾಭ್ಯಾಸ ಸಂಪೂರ್ಣವಾಗಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರ ಮತ್ತು ಕ್ಷತ್ರಿಯರ ಮನೆಯ ಹೆಣ್ಣುಮಕ್ಕಳಿಗೆ ಸೀಮಿತವಾಗಿತ್ತು. ಓದು ಬರಹವನ್ನು ಸಂಗೀತಗಾರ್ತಿ ಮತ್ತು ನೃತ್ಯಗಾತಿಯರು ಮಾತ್ರ ಕಲಿಯಬೇಕಾದದ್ದು ಎಂದು ಸಾಮಾನ್ಯಜನರು ತಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸಿದ್ದರು. ಹೆಂಗಸರು ಮನೆಯ ಒಳಗೆ, ಪುರುಷರು ಮನೆಯ ಹೊರಗೆ ಕುಟುಂಬ, ವೃತ್ತಿ, ರಾಜ್ಯಸಂಬಂಧಿತ ಕೆಲಸಕಾರ್ಯಗಳನ್ನು ನಿರ್ವಹಿಸುವುದು ನಿಗದಿತ ಕರ್ತವ್ಯವೇ ಆಗಿತ್ತು. ಹೊಸರೀತಿಯ ಪರಿಣತಿಯ ಅಗತ್ಯ, ಹೊಸ ಪಂಥಾಹ್ವಾನಗಳನ್ನು ಎದುರಿಸಬೇಕಾದ ಅಗ್ನಿಪರೀಕ್ಷೆಗಳ ತೊಡಕು ಇರಲಿಲ್ಲ. ಪುರುಷರೂ, ಸ್ತ್ರೀಯರೂ ಇಬ್ಬರೂ ಅಂಧಶ್ರದ್ಧೆ, ವಿಚಾರರಹಿತ ನಂಬಿಕೆ, ರೂಢಿಗತ ಅಭ್ಯಾಸಬಲಗಳ ಧಾರ್ಮಿಕ, ಸಾಮಾಜಿಕ ರೀತಿನೀತಿಗಳಿಗೆ ಕಟ್ಟುಬಿದ್ದಿದ್ದರು.

(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ :  http://surahonne.com/?p=31845

-ಪದ್ಮಿನಿ ಹೆಗಡೆ, ಮೈಸೂರು

8 Responses

  1. Samatha.R says:

    ಉಪಯುಕ್ತ ಮಾಹಿತಿ ಪೂರ್ಣ ಮೌಲಿಕ ಬರಹ…

  2. ನಯನ ಬಜಕೂಡ್ಲು says:

    ಮಾಹಿತಿ ಪೂರ್ಣ ಲೇಖನ ಸರಣಿ

  3. Anonymous says:

    ಅರ್ಥಪೂರ್ಣವಾಗಿದೆ

  4. dharmanna dhanni says:

    ಚೆನ್ನಾಗಿದೆ

  5. ಚೆನ್ನಾಗಿ ಬರೆದ ಬರಹ

  6. ಲೇಖನ ಮಾಹಿತಿ ಪೂರ್ಣವಾಗಿದೆ ವಂದನೆಗಳು

  7. ಶಂಕರಿ ಶರ್ಮ says:

    ಬಹಳ ಹಿಂದಿನ ಕಾಲದಲ್ಲಿಯೂ ಮಹಿಳೆಯರು ಜ್ಞಾನಾರ್ಜನೆಯಲ್ಲಿ ಮಾಡಿದ ಸಾಧನೆಯ ವಿವರಗಳನ್ನು ತಿಳಿದು ನಿಜಕ್ಕೂ ಆಶ್ಚರ್ಯವಾಗುತ್ತದೆ. ಕುತೂಹಲಕಾರಿಯದ ಚಿಂತನಾತ್ಮಕ ಲೇಖನ ಚೆನ್ನಾಗಿದೆ.

  8. sudha says:

    Very informative article

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: