ಶಾಲಾ ಬಾಲಕಿಯಾದಳು ಯಶಸ್ವಿ ನವೋದ್ಯಮಿ
ನವೋದ್ಯಮ ಪ್ರಾರಂಭಿಸಲು ವಯಸ್ಸಿನ ಅಂತರವಿಲ್ಲ.
ಉದಾಹರಣೆಗೆ 12 ವರ್ಷದ ಮೈತ್ರಿ ಆನಂದರವನ್ನು ನೋಡಿ. ಆಕೆ 6 ವರ್ಷದವಳಾಗಿದ್ದಾಗ, ರಜಾದಿನಗಳಲ್ಲಿ ಅಜ್ಜಿಯ ಮನೆಗೆ ಹೋಗಿದ್ದಳು. ಅಜ್ಜಿಯ ಮನೆಯಲ್ಲಿ ಪುಟ್ಟ ಗ್ರಂಥಾಲಯವೊಂದನ್ನು ಮಾಡಿದ ಮೈತ್ರಿ, ನೆರೆಹೊರೆಯ ಮಕ್ಕಳನ್ನು ಈ ಗ್ರಂಥಾಲಯದ ಸದಸ್ಯರನ್ನಾಗಿ ಮಾಡಿಕೊಂಡು, ಅವರಿಗೆ ಪುಸ್ತಕಗಳನ್ನು ಓದಲು ನೀಡಲು ಪ್ರಾರಂಭಿಸಿದಳು. ಮುಂದೆ ಮಕ್ಕಳಿಗಾಗಿ ಒಂದು ಪತ್ರಿಕೆಯನ್ನು ಪ್ರಾರಂಭಿಸಿದ ಮೈತ್ರಿ, ಈ ಪತ್ರಿಕೆಯ ಜೊತೆಯಲ್ಲಿ ತಾನು ರಚಿಸಿದ ಚಿತ್ರಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದಳು.
ಶಾಲೆಯಲ್ಲಿ ಈಜು ಕಲಿಯಲು ಪ್ರಾರಂಭಿಸಿದ ಮೈತ್ರಿಗೆ, ಪ್ರತಿದಿನ ಈಜು ಕಲಿಯಲು ಬೇಕಾದ ಉಡುಪು, ಟವೆಲ್, ಇತ್ಯಾದಿಗಳನ್ನು ಹೊಂದಿಸಿಕೊಂಡು ತರಬೇತಿಗೆ ಹೋಗುವುದು ಸಮಸ್ಯೆಯಾಗತೊಡಗಿತು. ಇವುಗಳನ್ನು ಒಂದು ಬ್ಯಾಗ್‌ನಲ್ಲಿ ಹೊಂದಿಸಿಟ್ಟು ಕೊಂಡರೆ ಸುಲಭವಾಗುತ್ತದೆ ಎಂದು ಸೂಕ್ತವಾದ ಬ್ಯಾಗ್ ಹುಡುಕಲು ಪ್ರಾರಂಭಿಸಿದಳು ಮೈತ್ರಿ. ಈಜುಪಟುಗಳಿಗೆ ಸೂಕ್ತವಾದ ಬ್ಯಾಗ್ ಮಾರುಕಟ್ಟೆಯಲ್ಲಿ ದೊರೆಯುತ್ತಿರಲಿಲ್ಲ. ಹೀಗಾಗಿ ನಾನು ಇಂತಹ ಬ್ಯಾಗ್ ವಿನ್ಯಾಸ ಮಾಡಲು ಪ್ರಾರಂಭಿಸಿದೆ ಎಂದು ಮೈತ್ರಿ ಹೇಳುತ್ತಾಳೆ.
ಮೈತ್ರಿ ವಿನ್ಯಾಸ ಮಾಡಿರುವ ಬ್ಯಾಗ್ (ಚಿತ್ರ ನೋಡಿ)ನಲ್ಲಿ ಒದ್ದೆ ಉಡುಪು ಇಟ್ಟು ಕೊಳ್ಳಲು ಪ್ರತ್ಯೇಕ ಬ್ಯಾಗ್ ನೀಡಲಾಗಿದೆ. ಟವೆಲ್ ಮತ್ತು ಬೇರೆ ಉಡುಪು ಹಾಗೂ ಪರಿಕರಗಳನ್ನು ಇಟ್ಟುಕೊಳ್ಳಲು ಸೂಕ್ತವಾಗಿ ಬ್ಯಾಗ್ ವಿನ್ಯಾಸ ಮಾಡಲಾಗಿದೆ. ವಾಟರ್‌ಪ್ರೂಫ್ ಆಗಿರುವ ಈ ಬ್ಯಾಗ್‌ಗೆ “Bag Buddy” ಎಂದು ಹೆಸರಿಡಲಾಗಿದೆ. ಇಂತಹ ಪ್ರತಿಯೊಂದು ಬ್ಯಾಗ್‌ನ್ನು 700 ರೂಪಾಯಿಗಳಿಗೆ ಮೈತ್ರಿ ಮಾರಾಟ ಮಾಡುತ್ತಿದ್ದಾಳೆ.
ಈಜುಪಟುಗಳಿಗೆ ಬೇಕಾಗುವ ಬ್ಯಾಗ್ ಹೇಗಿರಬೇಕು ಎಂದು ವಿನ್ಯಾಸ ಮಾಡಿದ ಮೈತ್ರಿ, ಪರಿಣಿತರಿಗೆ ಈ ವಿನ್ಯಾಸವನ್ನು ತೋರಿಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡಳು. ನಂತರ ಈ ರೀತಿಯ ಬ್ಯಾಗ್ ತಯಾರಿಸುವ ಸಂಸ್ಥೆಗಳನ್ನು ಹುಡುಕಲು ಗೂಗಲ್ ಬಳಸಿದ ಮೈತ್ರಿ, ತನಗೆ ಸೂಕ್ತವೆಂದು ಕಂಡು ಬಂದ ಸಂಸ್ಥೆಗಳಿಗೆ ಭೇಟಿ ನೀಡಿ, ವ್ಯವಸ್ಥಾಪಕರ ಜೊತೆ ಚರ್ಚೆ ಮಾಡಿದಳು. ಕೊನೆಗೆ, ಈಗಾಗಲೇ ಕ್ರೀಡಾಪಟುಗಳಿಗೆ ಅಗತ್ಯವಾದ ಬ್ಯಾಗ್‌ಗಳನ್ನು ತಯಾರಿಸುತ್ತಿದ್ದ ಸಂಸ್ಥೆಯೊಂದನ್ನುಆಯ್ಕೆ ಮಾಡಿದ ಮೈತ್ರಿ, ತನಗೆ ಬೇಕಾದ ಬ್ಯಾಗುಗಳನ್ನು ಈ ಸಂಸ್ಥೆ ಉತ್ಪಾದನೆ ಮಾಡಲು ಆರ್ಡರ್ ನೀಡಿದಳು.
ಬ್ಯಾಗ್ ವಿನ್ಯಾಸವಾಯಿತು, ಉತ್ಪಾದನೆಯೂ ಅಗುತ್ತಿದೆ, ಇನ್ನು ಮಾರಾಟ ಮಾಡುವುದು ಹೇಗೆ ಎನ್ನುವ ಪ್ರಶ್ನೆ ಎದುರಾಯಿತು. ಆಗ ಮೈತ್ರಿ ಈ ಬ್ಯಾಗ್ ಪ್ರಚಾರಕ್ಕಾಗಿ ಸ್ನೇಹಿತರ ನೆರವಿನಿಂದ ಕೆಲವು ನಿಮಿಷಗಳ ವಿಡಿಯೋವೊಂದನ್ನು ಮಾಡಿದಳು. ಈ ವಿಡಿಯೋವನ್ನು ಹಲವಾರು ಜನರಿಗೆ ತೋರಿಸಿ ಅವರ ಅಭಿಪ್ರಾಯವನ್ನು ಪಡೆದುಕೊಂಡ ಮೈತ್ರಿ, ನಂತರವಷ್ಟೇ ಈ ವಿಡಿಯೋವನ್ನು ತನ್ನ ಜಾಲತಾಣ ಮತ್ತು ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿದಳು. ಅಂದ ಹಾಗೆ, ಬಹಳ ಬೇಗ ಜನಪ್ರಿಯವಾದ ಈ ವಿಡಿಯೋ ಹೇಗಿರಬೇಕು ಎನ್ನುವ ಕಲ್ಪನೆ, ಸ್ಕಿಪ್ಟ್, ನಿರ್ದೇಶನ ಮಾಡಿದ್ದು ಮೈತ್ರಿ.
ಜಾಲತಾಣ, ಇನ್ಸಟಾಗ್ರಾಮ್ ಖಾತೆಯನ್ನು ಮಾತ್ರ ಅವಲಂಬಿಸದೆ, ತನ್ನ ತಂದೆಯ ಸ್ನೇಹಿತನೊಬ್ಬ ನೆಡೆಸುತ್ತಿದ್ದ ಕ್ರೀಡಾ ಸಾಮಗ್ರಿಗಳ ಅಂಗಡಿಯ ಮೂಲಕವೂ ತನ್ನ ಬ್ಯಾಗ್‌ಗಳ ಮಾರಾಟ ಮಾಡಲು ಮೈತ್ರಿ ಪ್ರಾರಂಭಿಸಿದಳು. ಈ ರೀತಿ ನವೋದ್ಯಮ ಪ್ರಾರಂಭಿಸಿದ ಮೈತ್ರಿ, ಕಳೆದ 18 ತಿಂಗಳುಗಳಲ್ಲಿ 50,000 ರೂಪಾಯಿ ಲಾಭ ಗಳಿಸಿದ್ದಾಳೆ. ಈಗ ತನ್ನ ಬ್ಯಾಗ್‌ಗಳ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿರುವ ಮೈತ್ರಿ, ಅದಕ್ಕೆ ತಕ್ಕ ಕಾರ್ಯಯೋಜನೆಯನ್ನು ಪರಿಣಿತರ ನೆರವಿನಿಂದ ಅಭಿವೃದ್ಧಿಪಡಿಸುತ್ತಿದ್ದಾಳೆ.
ಮೈತ್ರಿ ಆನಂದರವರ ಈ ಯಶೋಗಾಥೆಯಿಂದ ನಾವು ಕಲಿಯಬೇಕಾಗಿರುವುದು,
1) ಈಜುಪಟುಗಳಿಗೆ ಸೂಕ್ತವಾದ ಬ್ಯಾಗ್ ಮಾರುಕಟ್ಟೆಯಲ್ಲಿ ದೊರೆಯದೆ ಹೋದಾಗ, ಲಭ್ಯವಿರುವ ಬ್ಯಾಗ್‌ನ್ನು ಬಳಸಿದರಾಯಿತು ಎಂದು ಮೈತ್ರಿ ಸುಮ್ಮನಾಗಲಿಲ್ಲ. ಬ್ಯಾಗ್ ಇಲ್ಲದಿರುವುದನ್ನು ಅವಕಾಶವಾಗಿ ಬಳಸಿಕೊಳ್ಳಲು ಆಕೆ ಮುಂದಾದಳು.
2) ಈಜುಪಟುಗಳಿಗೆ ಸೂಕ್ತವಾದ ಬ್ಯಾಗ್ ಕುರಿತು ತಾನು ಮಾಡಿದ ವಿನ್ಯಾಸವನ್ನು ಪರಿಣಿತರಿಗೆ ತೋರಿಸಿ, ಅವರ ಸಲಹೆ, ಸೂಚನೆಗಳನ್ನು ಪಡೆದುಕೊಂಡಳು. ಹೀಗೆ ತಜ್ಞರ ನೆರವು ಪಡೆಯುವುದು ನವೋದ್ಯಮಿಗಳಿಗೆ ಬಹಳ ಅಗತ್ಯವಿದೆ. ತನ್ನ ಬ್ಯಾಗ್‌ಗೆ ಹೆಸರು ಹುಡುಕುವಾಗಲು ಮೈತ್ರಿ, ವಿಶೇಷವಾಗಿ ಯುವ ಜನಾಂಗಕ್ಕೆ ಆಕರ್ಷಕವಾಗಿರುವ ಹಾಗೂ ಸುಲಭವಾಗಿ ನೆನಪಿನಲ್ಲಿ ಉಳಿಯುವ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
3) ಬ್ಯಾಗ್ ತಯಾರಿಸಲು ಸೂಕ್ತ ಸಂಸ್ಥೆಗಳ ಮಾಹಿತಿ ಸಂಗ್ರಹಣೆ, ಈ ಸಂಸ್ಥೆಗಳಿಗೆ ಭೇಟಿ ಮತ್ತು ವ್ಯವಸ್ಥಾಪಕರೊಡನೆ ಚರ್ಚೆಯಲ್ಲಿ ಮೈತ್ರಿ ಸ್ವತಃ ಭಾಗಿಯಾದಳು. ಈ ರೀತಿ ನವೋದ್ಯಮದ ಪ್ರತಿಯೊಂದು ಕೆಲಸದಲ್ಲೂ ನವೋದ್ಯಮಿ ತೊಡಗಿಕೊಳ್ಳುವುದು ಅಗತ್ಯವಿದೆ.
4) ಬ್ಯಾಗ್ ಮಾರಾಟಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಜಾಲತಾಣ ಬಳಸಲು ಮೈತ್ರಿ ಮುಂದಾದಳು. ಹೊಸ ಉತ್ಪನ್ನವಾದ ಕಾರಣ ಜಾಹಿರಾತು ವಿಡಿಯೋ ಹೆಚ್ಚು ಪರಿಣಾಮಕಾರಿ ಎಂದು ನಿರ್ಧರಿಸಿದ ಮೈತ್ರಿ, ಆ ವಿಡಿಯೋದ ಪ್ರತಿಯೊಂದು ಹಂತದಲ್ಲಿ ತನ್ನನ್ನು ತೊಡಗಿಸಿಕೊಂಡಳು. ವಿಡಿಯೋ ಸಿದ್ಧವಾದ ಮೇಲೆ ಅದನ್ನು ಹಲವಾರು ಜನರಿಗೆ ತೋರಿಸಿ, ಅವರ ಪ್ರತಿಕ್ರಿಯೆ ಪಡೆದು, ಅಗತ್ಯವಾದರೆ ಬದಲಾವಣೆಗಳನ್ನು ಮಾಡಿಕೊಂಡು, ನಂತರವಷ್ಟೇ ಈ ವಿಡಿಯೋವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದಳು.
5) ನವೋದ್ಯಮದ ಉತ್ಪನ್ನ ಅಥವಾ ಸೇವೆಯನ್ನು ಮಾರಾಟ ಮಾಡಲು ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳುವುದು ಅಗತ್ಯವಿದೆ. ಸಾಮಾಜಿಕ ಜಾಲತಾಣ, ಜಾಲತಾಣಗಳ ಜೊತೆಗೆ ತನ್ನ ತಂದೆಯ ಸ್ನೇಹಿತನ ಅಂಗಡಿಯ ಮೂಲಕವೂ ತನ್ನ ಬ್ಯಾಗ್ ಮಾರಾಟ ಮಾಡಲು ಮೈತ್ರಿ ಪ್ರಾರಂಭಿಸಿದ್ದನ್ನು ಇಲ್ಲಿ ಗಮನಿಸಬಹುದು.
18 ತಿಂಗಳಿನಲ್ಲಿ ಮೈತ್ರಿ ಗಳಿಸಿದ ಲಾಭ ಹೆಚ್ಚಲ್ಲವೆಂದು ಅನ್ನಿಸಿದರೂ, ನವೋದ್ಯಮವೊಂದು ಇಷ್ಟು ಕಡಿಮೆ ಅವಧಿಯಲ್ಲಿ ಲಾಭಗಳಿಸುವುದು ಸಾಮಾನ್ಯವಲ್ಲವೆಂದು ಗಮನಿಸಬೇಕು. ಇದಲ್ಲದೆ ಮುಂಬರುವ ದಿನಗಳಲ್ಲಿ ಬ್ಯಾಗ್ ಜೊತೆಯಲ್ಲಿ ಈಜುಪಟುಗಳಿಗೆ ಅಗತ್ಯವಾದ ಉತ್ತಮ ಗುಣಮಟ್ಟದ ಟವೆಲ್, ಸೋಪು, ಶಾಂಪೂ ಇತ್ಯಾದಿಗಳನ್ನು ಕೂಡಾ ಮಾರಾಟ ಮಾಡಲು ಮೈತ್ರಿಗೆ ಅವಕಾಶವಿದೆ. ಆಗ ಆಕೆಯ ನವೋದ್ಯಮದ ಮಾರುಕಟ್ಟೆ ವಿಸ್ತಾರವಾಗುತ್ತದೆ ಹಾಗೂ ಲಾಭದ ಪ್ರಮಾಣ ಹೆಚ್ಚಾಗುತ್ತದೆ ಕೂಡಾ.
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:http://surahonne.com/?p=30284
-ಡಾ.ಉದಯ ಶಂಕರ ಪುರಾಣಿಕ
ಉತ್ತಮವಾದ ಸಾಧನೆ ಸರ್. ಮೈತ್ರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಮುಂದೆ ಬಹಳ ದೊಡ್ಡ ಸಾಧನೆಯನ್ನು ಮಾಡಲಿ ಎಂದು ಹಾರೈಸುವೆ. ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಸರ್
ಬದುಕಲ್ಲಿ ಏನನ್ನಾದರೂ ಸಾಧಿಸಬೇಕು, ಸಿಕ್ಕಿರುವ ಬಾಳಲ್ಲಿ ಉಪಯೋಗ ಆಗುವಂತಹ ಏನಾದರೂ ಸಾಧನೆಯನ್ನು ಮಾಡಬೇಕು ಅನ್ನುವ ಉತ್ಸಾಹ ಹೊಂದಿರುವ ಮನಸುಗಳಿಗೆ ಪ್ರೋತ್ಸಾಹ ನೀಡುವಂತಹ, ಸ್ಫೂರ್ತಿ ತುಂಬುವಂತಹ ಬರಹ. ತುಂಬಾ ಚೆನ್ನಾಗಿದೆ ಸರ್.
ಸಾಧಿಸುವ ಸಂಕಲ್ಪ ಮತ್ತು ಇಚ್ಛಾ ಶಕ್ತಿ ಪ್ರಬಲ ಇದ್ದರೆ ಅಸಾಧ್ಯ ವಾದದ್ದನ್ನ ಸಾಧ್ಯವಾಗಿಸುವುದಕ್ಕೆ ಮೈತ್ರಿ ಉತ್ತಮ ಮಾದರಿ ಆಗಿದ್ದಾರೆ ಸರ್. ಅವಳಿಗೆ ಅಭಿನಂದನೆಗಳು.
ನಿಜ, ಅಗತ್ಯವೆನ್ನುವುದು ಅನ್ವೇಷಣೆಗೆ ದಾರಿ ಎನ್ನುವುದಕ್ಕೆ ಇದು ಉದಾಹರಣೆ. ಮೈತ್ರಿಯ ಈ ಸಾಧನೆಗೆ ಶಹಬ್ಬಾಷ್
ಲಭ್ಯತೆಗೆ ಆನುಗುಣವಾಗಿ ಸ್ಪಂದಿಸಿ ಜಯಿಸಿದ ಪುಟ್ಟ ಹುಡುಗಿಯ ಯಶೋಗಾಥೆ ನಿಜಕ್ಕೂ ಇತರರಿಗೆ ಮಾರ್ಗದರ್ಶಕ.ಉತ್ತಮ ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು ಸರ್.
ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನುವವರಿಗೆ ಮೈತ್ರಿ ಒಂದು ಉತ್ತಮ ಉದಾಹರಣೆ. ಅಭಿನಂದನೆಗಳು ಹಾಗೂ ಷುಭಾಶಯಗಳು