ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 31
ಸುಂದರ ಸೂರ್ಯೋದಯ
ಮೇ17ನೇ ತಾರೀಕು.. ನಮ್ಮ ಪ್ರವಾಸದ ಹತ್ತನೇ ದಿನ..ಕೊನೆಯ ದಿನ! ಪ್ರವಾಸಿ ಬಂಧುಗಳೆಲ್ಲರೂ ಅದಾಗಲೇ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿ ಬಿಟ್ಟಿದ್ದೆವು. ಯಾರಿಗಾದರೂ ಆರೋಗ್ಯ ಸರಿಯಿಲ್ಲವೆಂಬ ಸುದ್ದಿ ರಾತ್ರೋರಾತ್ರಿ ತಿಳಿದರೂ, ಎಲ್ಲರೂ ಸ್ಪರ್ಧೆಯಲ್ಲಿ ತಮ್ಮಲ್ಲಿರುವ ಔಷಧಿ ಪೊಟ್ಟಣಗಳನ್ನು ಒಯ್ದು ಒಯ್ದು ಕೊಡುತ್ತಿದ್ದೆವು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ, ಊಟಗಳ ಸಮಯದಲ್ಲಿ ಒಬ್ಬರಿಗೊಬ್ಬರು ಲೇವಡಿ, ತಮಾಷೆ, ಕ್ಷೇಮ ಸಮಾಚಾರಗಳ ವಿನಿಮಯ ನಡೆದೇ ಇರುತ್ತಿತ್ತು. ಆದರೆ ಎಲ್ಲರೂ ಬೀಳ್ಕೊಡುವ ದಿನ ಬಂದೇ ಬಿಟ್ಟಿತ್ತು! ಹಿಂದಿನ ದಿನ ಸಂಜೆ,ಡಾರ್ಜಿಲಿಂಗ್ ತಲಪಿದ ಕೂಡಲೇ, ಚಂದ್ರಣ್ಣ ಮತ್ತು ಅವರ ಸುಪುತ್ರ ಮಾಸ್ಟರ್ ಭಾರ್ಗವ ಕೃಷ್ಣ(ನಮ್ಮ ಬಳಗದ ಸುಪರ್ ಚೆಂಡೆಗಾರ) ಅವನ ಪರೀಕ್ಷೆಯ ಸಲುವಾಗಿ ಅವರ ಊರಿಗೆ ವಿಮಾನದಲ್ಲಿ ಹಿಂತಿರುಗಲು ತಯಾರಿ ನಡೆದಿತ್ತು. ಡಾರ್ಜಿಲಿಂಗ್ ಗೆ ಸಮೀಪವಿರುವ ವಿಮಾನ ನಿಲ್ದಾಣ ಬಗ್ಡೋಗ್ರ(Bagdogra) ದಿಂದ ಬೆಂಗಳೂರು, ಬೆಂಗಳೂರಿನಿಂದ ಬಜ್ಪೆ, ಈರೀತಿ ಎರಡು ವಿಮಾನಗಳಲ್ಲಿ ಪ್ರಯಾಣಿಸುವುದಿತ್ತು. ಲಗ್ಗೇಜ್ ಗಳ ಸಹಿತ ಹೋಗಲಿರುವುದರಿಂದ ಮತ್ತು ಸುಮಾರು ಮೂರು ಗಂಟೆಗಳ ಪ್ರಯಾಣವಿರುವುದರಿಂದ ನಮ್ಮ ಪ್ರವಾಸದ ಸಂಚಾಲಕರಾದ ಬಾಲಕೃಷ್ಣನವರು ಅವರ ಪ್ರಯಾಣದ ಬಗ್ಗೆ ತುಂಬಾ ಕಾಳಜಿ ವಹಿಸಿ ಸರಿಯಾದ ಸಮಯಕ್ಕೆ ಟ್ಯಾಕ್ಸಿಯಲ್ಲಿ ಕಳುಹಿಸಿಕೊಟ್ಟಿದ್ದರು. ನಮಗೆಲ್ಲ ನಮ್ಮ ಹತ್ತಿರದ ಬಂಧುಗಳನ್ನು ಬೀಳ್ಕೊಡುವ ಸನ್ನಿವೇಶ ಸೃಷ್ಟಿಯಾಗಿತ್ತು. ಮುಂದಿನ ಒಂದು ದಿನದ ಡಾರ್ಜಿಲಿಂಗ್ ವೀಕ್ಷಣೆಗೆ ಅವರ ಗೈರುಹಾಜರಿಯ ನೋವು ನಮ್ಮೆಲ್ಲರನ್ನು ಕಾಡಿದ್ದಂತೂ ನಿಜ.
ಪ್ರಾತಃಕಾಲ 4:30ಕ್ಕೇ ಎಲ್ಲರೂ ರೆಡಿಯಾಗಿ; ಚಳಿಗೆ ಟೋಪಿ, ಮಫ್ಲರ್, ಸ್ವೆಟರ್ ಗಳನ್ನು ಹಾಕಿಕೊಂಡು ಹೋಟೇಲ್ ಬಾಗಿಲಲ್ಲಿ ಜಮಾಯಿಸಿದೆವು. ಅರೆ ನಿದ್ರೆ.. ಬೆಳಗ್ಗಿನ ಚಳಿಯಿಂದಾಗಿ ಮಕ್ಕಳ ಉತ್ಸಾಹ ಕೊಂಚ ತಗ್ಗಿದ್ದರೂ, ಹಿರಿಯರೆಲ್ಲರೂ ತುಂಬು ಉತ್ಸಾಹದಿಂದಿದ್ದು ಕಿರಿಯರನ್ನು ಕೀಟಲೆಗೈಯುತ್ತಿದ್ದರು! ಸೂರ್ಯೋದಯವು ಐದು ಗಂಟೆಗಿರುವುದರಿಂದ ಅದರ ಮೊದಲೇ, ಸುಮಾರು ಐದು ಕಿ.ಮೀ. ದೂರದಲ್ಲಿರುವ, ಸಮುದ್ರ ಮಟ್ಟದಿಂದ ಸುಮಾರು 8,200ಅಡಿಗಳಷ್ಟು ಎತ್ತರದಲ್ಲಿರುವ “ಟೈಗರ್ ಹಿಲ್” ಗೆ ತಲಪಬೇಕಿತ್ತು.. ಸೂರ್ಯೋದಯ ವೀಕ್ಷಿಸಲು. ಆದರೆ ನಾವು ಹೋಗಲಿರುವ ಟ್ಯಾಕ್ಸಿಗಳ ಸುದ್ದಿಯೇ ಇಲ್ಲ! ಕತ್ತಲು ಕರಗಲಾರಂಭಿಸಿದಂತೆಲ್ಲಾ ನಮಗೆ ತುಂಬಾ ಆತಂಕ …ನಮಗೆ ಸೂರ್ಯೋದಯ ನೋಡಲು ಸಿಗದಿದ್ದರೆ? ಆಂತೂ ಸ್ವಲ್ಪ ಹೊತ್ತಿನಲ್ಲಿಯೇ ವಾಹನದ ಆಗಮನವಾಗಿ ಅಲ್ಲಿಂದ ಹೊರಟಾಗ ಮಂದ ಬೆಳಕು ಎಲ್ಲೆಡೆ ಹರಡಿತ್ತು. ದೈವೇಚ್ಛೆ ಇದ್ದಂತಾಗಲೆಂದು ಧೈರ್ಯದಿಂದ ಹೊರಟೆವು. ಇಕ್ಕಟ್ಟಾದ ರಸ್ತೆ ತಿರುವುಗಳಲ್ಲಿ ಭಾರೀ ಚಾಕಚಕ್ಯತೆಯಿಂದ ಸಾಗುತ್ತಿತ್ತು ಕಾರು. ಹೊರಗೆ ನೋಡಿದರೆ ದಟ್ಟ ಮಂಜು ಹರಡಿತ್ತು! ಆಗಲೇ ಚಾಲಕ ಹೇಳಿದ ಮಾತು ನಮ್ಮ ಆತಂಕವನ್ನು ಇನ್ನೂ ಹೆಚ್ಚಿಸಿತು. ಒಂದು ವಾರದಿಂದ, ದಟ್ಟ ಮಂಜಿನಿಂದಾಗಿ, ಯಾರಿಗೂ ಸೂರ್ಯೋದಯ ನೋಡಲು ಸಿಗಲಿಲ್ಲವಂತೆ! ನಮ್ಮ ಅದೃಷ್ಟ ಇದ್ದಂತಾಗಲಿ ಎಂದುಕೊಂಡೆವು. ಅದಾಗಲೇ ಬೆಳಕು ದಟ್ಟವಾಗಿ ಹರಡತೊಡಗಿ ಸೂರ್ಯೋದಯದ ಸೂಚನೆಯನ್ನು ನೀಡಿತು. ಸುಮಾರು ಮೂರು ಕೀ.ಮೀ. ಸಾಗಿದಾಗ, ರಸ್ತೆ ತುಂಬಾ ಜನರು! ನಮ್ಮ ವಾಹನಗಳನ್ನು ಅಲ್ಲೇ ನಿಲ್ಲಿಸಿ ಅಲ್ಲಿಂದಲೇ ಭಾಸ್ಕರನ ಬರುವಿಕೆಯನ್ನು ವೀಕ್ಷಿಸಲು ಸೂಚಿಸಿದರು..ಮುಂದೆ ಹೋದರೆ ಇನ್ನೂ ತಡವಾಗಬಹುದೆಂದು. ನಾವು ಕಾರು ಇಳಿದ ಕ್ಷಣದಿಂದಲೇ ಮಂಜು ಕರಗುತ್ತಾ ಬಂದು ನಿಸರ್ಗ ನಿಚ್ಚಳವಾಗಲಾರಂಬಭಿಸಿತು! ಮೂಡಣ ಬಾನಿನಲ್ಲಿ ರವಿ ಕಿರಣಗಳು ಸ್ವಲ್ಪ ಸ್ವಲ್ಪವೇ ಬಾನಂಗಳದಲ್ಲಿ ಹರಡಲಾರಂಭಿಸಿದವು! ಇದನ್ನು ನೋಡಿ ನಿಜಕ್ಕೂ ನನಗಂತೂ ತಡೆಯಲಾರದ ಸಂತಸ! ಕಾರಿನಿಂದ ಧುಮುಕಿ, ಜನರೆಡೆಯಲ್ಲಿ ನುಸುಳಿ, ಮೊಬೈಲ್ ಹಿಡಿದು ಓಡಿದ್ದೇ ಓಡಿದ್ದು..ಫೋಟೋ ತೆಗೆಯಲು!
ಇಲ್ಲಿಯ ಸೂರ್ಯೋದಯ ಅದರ ವಿಶಿಷ್ಟತೆಗಾಗಿ ಬಹಳ ಪ್ರಸಿದ್ಧ. ಜಗತ್ತಿನ, ಮೂರನೇ ಅತೀ ಎತ್ತರದ, ಹಿಮಾಲಯದ ಪರ್ವತ ಕಾಂಚನಜುಂಗಾ ಶಿಖರದ ಮೇಲಿನಿಂದ ಮೂಡಿ ಬರುವಂತಹ ಸೂರ್ಯನ ಚೆಲುವು ಅದ್ವಿತೀಯ! ಅದಕ್ಕಾಗಿಯೇ ಜನರು , ಈ ಅಮೋಘ, ಸುಂದರ ದೃಶ್ಯವನ್ನು ವೀಕ್ಷಿಸಲು ಮುಗಿಬಿದ್ದು ಬರುವರು. ಸುದೈವದಿಂದ, ನಮಗೆ ಆ ಭಾಗ್ಯ ಒದಗಿದುದು ನಿಜಕ್ಕೂ ನಮ್ಮ ಅದೃಷ್ಟ! ಕ್ಷಣ ಕ್ಷಣಕ್ಕೂ ಮೇಲೇರುವ ಸೂರ್ಯನನ್ನು ನೋಡಲು ಎರಡು ಕಣ್ಣುಗಳೂ ಸಾಲದು. ಎಲ್ಲರೂ ಸಾಕಷ್ಟು ಫೋಟೋ, ವೀಡಿಯೋ ತೆಗೆಯುವಷ್ಟರಲ್ಲಿ, ಒಂದೈದು ನಿಮಿಷಗಳಲ್ಲಿ ಮುಗಿದು ಬಿಟ್ಟಿತು..ಈ ವೈಭವ! ಆಗಷ್ಟೇ ಬೆಳಗ್ಗಿನ 5:45..ಆದರೂ 8ಗಂಟೆಯ ಬಿಸಿಲ ಪ್ರಖರತೆ..ನಂಬಲಾಗಲೇ ಇಲ್ಲ! ಇನ್ನೂ ಸಮಯವಿದ್ದುದರಿಂದ ಅಲ್ಲೆ ಹತ್ತಿರದಲ್ಲಿದ್ದ *Batasia Loop* ಎಂಬಲ್ಲಿರುವ ಯುದ್ಧ ಸ್ಮಾರಕವನ್ನು ನೋಡಲು ಎಲ್ಲರನ್ನೂ ಕರೆದೊಯ್ದುರು ಗಣೇಶಣ್ಣ, ತಲೆ ಲೆಕ್ಕವಿಡುತ್ತಾ…
19ನೇ ಶತಮಾನದ ಮೊದಲ ಕಾಲಘಟ್ಟದಲ್ಲಿ ಡಾರ್ಜಿಲಿಂಗ್ ಪರ್ವತ ಪ್ರದೇಶದ ಕೆಲವು ಗ್ರಾಮಗಳನ್ನು ಹೊರತು ಪಡಿಸಿ ಉಳಿದ ಸುಮಾರು 3,200 ಚ.ಕಿ.ಮೀ.ಗಳಷ್ಟು ಪ್ರದೇಶವು ಸಿಕ್ಕಿಂ ರಾಜರ ಹಿಡಿತದಲ್ಲಿತ್ತು. ನೇಪಾಳದ ಗೂರ್ಖ ಜನರು ಮೊದಲಿನಿಂದಲೂ ಡಾರ್ಜಿಲಿಂಗ್ ನ್ನು ತಮ್ಮ ವಶಪಡಿಸಿಕೊಳ್ಳಲು ಪದೇ ಪದೇ ಹವಣಿಸುತ್ತಿದ್ದರು. ಆದ್ದರಿಂದ, ನೇಪಾಳದ ಗೂರ್ಖ ಪಂಗಡಗಳ ಜೊತೆ ಸಿಕ್ಕಿಂ ರಾಜರುಗಳ ನಿರಂತರ ಅಂತರ್ಯುದ್ಧ ನಡೆಯುತ್ತಲೇ ಇತ್ತು. ಬ್ರಿಟಿಷರೂ ಕೂಡಾ ಅವರನ್ನು ಮಟ್ಟ ಹಾಕಲು ಯತ್ನಿಸುತ್ತಿದ್ದರು. 1814ರಲ್ಲಿ ನಡೆದ ಆಂಗ್ಲೋ-ನೇಪಾಳ ಯುದ್ಧದಲ್ಲಿ ಗೂರ್ಖರು ಸೋಲನ್ನು ಅನುಭವಿಸಬೇಕಾಯಿತು. ಆ ಸಮಯದಲ್ಲಿ ಆದ ಒಪ್ಪಂದ ಪ್ರಕಾರ ಮೋಚಿ ಮತ್ತು ತೀಸ್ತಾ ನದಿಗಳ ಮಧ್ಯದ ಭಾಗವನ್ನು ಬ್ರಟಿಷರಿಗೆ ಬಿಟ್ಟುಕೊಡಬೇಕಾಯಿತು. 1849ರ ಸುಮಾರಿಗೆ, ಬ್ರಿಟಿಷ್ ಸಸ್ಯ ಶಾಸ್ತ್ರಜ್ಞ ಮತ್ತು ಪರಿಶೋಧಕರು, ಅವರ ಕೆಲಸಗಳಲ್ಲಿ ತಲ್ಲೀನರಾಗಿ, ಅರಿವಿಲ್ಲದೆ, ಸಿಕ್ಕಿಂ ರಾಜ್ಯದ ಗಡಿಯೊಳಗೆ ಹಾದು ಹೋದರು. ಅವರಿಬ್ಬರನ್ನು ಸೆರೆ ಹಿಡಿದು ತರಿಸಿದ ಸಿಕ್ಕಿಂ ದೊರೆ, ಅವರನ್ನು ಬಿಡಲೊಪ್ಪಲಿಲ್ಲ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರು(BEIC) ಸೈನ್ಯ ಕಳುಹಿಸಿ, ಅವರೊಡನೆ ಎಡೆಬಿಡದೆ ಹೋರಾಡಿ, ತಮ್ಮವರನ್ನು ಬಿಡಿಸಿಕೊಂಡುದೂ ಅಲ್ಲದೆ, ಸುಮಾರು1,700ಚ.ಕಿ.ಮೀನಷ್ಟು ಪ್ರದೇಶವನ್ನೂ ಬ್ರಿಟಿಷ್ ಸೇನೆ ತನ್ನ ವಶಪಡಿಸಿಕೊಂಡರು. ಈ ರೀತಿ ಒಟ್ಟು 3,200 ಚ.ಕಿ.ಮೀ. ಪ್ರದೇಶಕ್ಕೆ ಡಾರ್ಜಿಲಿಂಗ್ ಎಂದು ಹೆಸರಾಯಿತು. ಈ ಯುದ್ಧಗಳಲ್ಲಿ ವೀರ ಮರಣವನ್ನೈದ ಶೂರ ಗೂರ್ಖ ಸೈನಿಕರಿಗಾಗಿ ಈ ಸ್ಮಾರಕವನ್ನು 1995ರಲ್ಲಿ ರಚಿಸಿ, ಲೋಕಾರ್ಪಣೆ ಮಾಡಲಾಯಿತು.
ಸುಂದರ ಹೂದೋಟದ ಮಧ್ಯೆ, ದೂರ ಕಾಂಚನಜುಂಗಾ ಪರ್ವತದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಸ್ಮಾರಕವು ಎತ್ತರಕ್ಕೆ ಎದ್ದು ನಿಂತಿತ್ತು. ಬಳಿಯಲ್ಲಿ, ಗೂರ್ಖ ಯೋಧನೊಬ್ಬನ ಕಂಚಿನ ಪ್ರತಿಮೆಯು ಅವರ ದೇಶಾಭಿಮಾನ, ಶೂರತ್ವದ ಸಂಕೇತವಾಗಿ ನಿಂತಿತ್ತು. ಸ್ಮಾರಕದ ಸುತ್ತಲೂ ಹುತಾತ್ಮರ ಹೆಸರುಗಳನ್ನು ಕೆತ್ತಲಾಗಿತ್ತು. ಅಲ್ಲಿಯ ಸಾಂಪ್ರದಾಯಿಕ ಉಡುಪಿನಲ್ಲಿ, ಚಂದದ ಟೀ ಎಲೆ ತುಂಬಿಸುವ ಬುಟ್ಟಿಯನ್ನು ತಲೆಗೆ ಕಟ್ಟಿ,ಮಕ್ಕಳು ಹಿರಿಯರು ಸಹಿತ ಫೋಟೋ ತೆಗೆಸಿಕೊಂಡರು..ಸಿಹಿ ನೆನಪಿಗಾಗಿ. ಈ ಎತ್ತರದ ಜಾಗದಲ್ಲಿ ರಭಸದಿಂದ ಬೀಸುವ ಶೀತ ಗಾಳಿಯನ್ನು ಲೆಕ್ಕಿಸದೆ, ಮುಂದುವರಿದಿತ್ತು ನಮ್ಮ ವೀಕ್ಷಣೆ. ಅಲ್ಲಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮೆಲ್ಲ ಪ್ರವಾಸಿ ಬಂಧುಗಳನ್ನು ಕಷ್ಷದಲ್ಲಿ ಒಟ್ಟುಗೂಡಿಸಿ ಚಂದದ ಗ್ರೂಪ್ ಫೋಟೋ ಹೊಡೆದೇ ಬಿಟ್ಟರು…ನಮ್ಮ ಗಣೇಶಣ್ಣ!
ಈ ಪ್ರವಾಸಕಥನದ ಹಿಂದಿನ ಪುಟ ಇಲ್ಲಿದೆ: ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 30
(ಮುಂದುವರಿಯುವುದು..)
– ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ.
Very nice. ಇನ್ನು ಬಹುಶಃ ಕೆಲವು ವರ್ಷಗಳ ಮಟ್ಟಿಗೆ ಇಂತಹ ಪ್ರವಾಸಗಳು ಕನಸಿನ ಮಾತೇ ಸರಿ. ಹಳೆಯ ಪ್ರವಾಸಗಳನ್ನು ಮೆಲುಕು ಹಾಕುತ್ತ ಕೂರಬೇಕಷ್ಟೆ.
ಮೆಚ್ಚಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಯಲಕ್ಷ್ಮಿ ಮೇಡಂ ಹಾಗೂ ನಯನ ಮೇಡಂ..ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು.