ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 4
ಭುವ(ಬ)ನೇಶ್ವರದಲ್ಲಿರುವ ಅತೀ ಹಳೆಯ ಶ್ರೀ ಲಿಂಗರಾಜದೇವರ ದೇಗುಲದ ವೀಕ್ಷಣೆಗೆ ಹೊರಟಾಗ ಪೂರ್ತಿ ಕತ್ತಲಾವರಿಸಿತ್ತು. ವಿದ್ಯುಚ್ಛಕ್ತಿಯಿಲ್ಲದೆ ನಗರವಿಡೀ ದಾರಿ ದೀಪಗಳೂ ಇರಲಿಲ್ಲ. ಆ ಕತ್ತಲಲ್ಲೇ ಮೊಬೈಲ್ ಬಳಕಿನಲ್ಲಿ ನಮ್ಮನ್ನು ದೇವಸ್ಥಾನದೆಡೆಗೆ ಕರೆದೊಯ್ದರು ಗಣೇಶಣ್ಣ. ಮಾರ್ಗದೆಲ್ಲೆಡೆ ವಿದ್ಯುತ್ ಕಂಬಗಳು, ತಂತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುದನ್ನು ಅಸಹಾಯಕರಾಗಿ ನೋಡುವುದು ಮನಸ್ಸಿಗೆ ಕಷ್ಟವೆನಿಸಿತು. ಮಾರ್ಗಗಳು ಸೇರುವಲ್ಲಿ ನಗರಸಭೆಯವರು ಜನರೇಟರ್ ಮೂಲಕ ಬೆಳಕಿನ ವ್ಯವಸ್ಥೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ!
ಆ ಕತ್ತಲೆಯಲ್ಲಿ ದೇವಸ್ಥಾನದ ಇರುವಿಕೆಯೇ ಕಾಣದಾಗಿತ್ತು. ರಸ್ತೆ ಬದಿಗಳಲ್ಲಿ ಪುಟ್ಟ ಪುಟ್ಟ ಸ್ಥೂಪಗಳಂತಹ ದೇವಸ್ಥಾನಗಳು ಕಾಣಸಿಕ್ಕಿದುವು. ಸ್ವಚ್ಛವಾಗಿ ಕಾಲುಗಳನ್ನು ತೊಳೆದು ಒಳಹೋಗುವಾಗಲೇ ಕಂಡಿತು ಆ ಸಮುಚ್ಚಯದೊಳಗೆ ಹಲವಾರು ದೇಗುಲಗಳು. ನಮಗಾಗಿ ಅರ್ಚಕರೊಬ್ಬರನ್ನು ಮಾರ್ಗದರ್ಶನ ಹಾಗೂ ವಿವರಣೆಗಾಗಿ ಬಾಲಣ್ಣನವರು ವ್ಯವಸ್ಥೆ ಮಾಡಿದ್ದರು. ಅಲ್ಲಿಯ ಅರ್ಚಕರನ್ನು *ಪಂಡಾ* ಎನ್ನುತ್ತಾರೆ. ಅಲ್ಲೇ ಸ್ವಲ್ಪ ಎತ್ತರದ ಸ್ಥಳದಲ್ಲಿ ಎಲ್ಲರೂ ಕುಳಿತು, ಮಂದವಾದ ಬೆಳಕಿನಲ್ಲಿ, ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿದ ನಮ್ಮೆಲ್ಲರಲ್ಲೂ ಕುತೂಹಲ ತುಂಬಿತ್ತು. ಅವರು ಇಂಗ್ಲಿಷ್ ನಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸತೊಡಗಿದರು.
ಮೊತ್ತ ಮೊದಲಾಗಿ ಮುಖ್ಯ ದೇಗುಲಕ್ಕೆ ಹೋಗಲು ಹತ್ತುವ ಮೆಟ್ಟಲುಗಳ ಬಗ್ಗೆ ಹೇಳಿದ್ದು ನಿಜಕ್ಕೂ ಮನಮುಟ್ಟುವಂತಿತ್ತು. ಅಗಲವಾದ, ದೊಡ್ಡದಾದ ಆರು ಮೆಟ್ಟಲುಗಳನ್ನು ಏರುವಾಗ, ಪ್ರತಿ ಮೆಟ್ಟಲಿಗೊಮ್ಮೆ *ಓಂ ನಮಃಶಿವಾಯಃ* ಎಂಬ ಶಿವ ಷಡಾಕ್ಷರಿ ಮಂತ್ರವನ್ನು ಜಪಿಸುವುದು ಬಹಳ ಪುಣ್ಯದಾಯಕ. 12ನೇ ಶತಮಾನದಲ್ಲಿ ಗಂಗರಾಜರ ಕಾಲದಲ್ಲಿ ಕಟ್ಟಲ್ಪಟ್ಟರೂ, 11ನೇ ಶತಮಾನದಲ್ಲಿಯೇ *ಜಜಾತಿ ಕೇಸರಿ* ಎಂಬ ರಾಜನಿಂದ ಶಿಲಾಮಯವಾದ ಮೂಲ ದೇಗುಲವನ್ನು ರಚಿಸಲಾಯಿತು. ಪುರಿಯ ಜಗನ್ನಾಥ ದೇವಾಲಯದಂತೆಯೇ ಕಳಿಂಗ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದೇಗುಲದಲ್ಲಿ ಉದ್ಭವ ಲಿಂಗರೂಪಿ ಹರನ ಜೊತೆಗೇ ಹರಿ ರೂಪೀ ಜಗನ್ನಾಥ ದೇವರನ್ನು ಪೂಜಿಸುವ ಸಂಪ್ರದಾಯವು ಚಾಲ್ತಿಯಲ್ಲಿದೆ. ದೇಗುಲದ ಪ್ರಧಾನ ಗೋಪುರದ ಎತ್ತರ 180 ಅಡಿಗಳಷ್ಟಿದ್ದು, ಗೋಪುರದ ಶಿಖರದಲ್ಲಿ 12 ಅಡಿಗಳಷ್ಟು ವ್ಯಾಸದ ಚಕ್ರವಿದ್ದು, ಅದರಲ್ಲಿ ಹರಿ, ಹರರ ಸಾಂಕೇತಿಕ ಚಿಹ್ನೆಗಳಾಗಿ ತ್ರಿಶೂಲ ಮತ್ತು ಬಿಲ್ಲು ಬಾಣಗಳ ಆಕೃತಿಗಳನ್ನು ಕಾಣಬಹುದು. ಇಲ್ಲಿ ದಿನವೂ ವಿಶೇಷವಾದ ಅನ್ನ ದಾಸೋಹ ನಡೆಯುವುದಲ್ಲದೆ ಅನ್ನದಾನದ ಹರಕೆ ಅಥವಾ ಸೇವೆ ಮಾಡಿಸುವುದರಿಂದ ಇಷ್ಟಾರ್ಥ ಈಡೇರುವುದೆಂದು ನಂಬಿಕೆಯಿದೆ.ನಮ್ಮ ಒಡನಾಡಿ ಬಂಧುಗಳು ಕೆಲವರು ಯಥಾನುಶಕ್ತಿ ಸೇವೆ ಮಾಡಿಸಿ ನಮಗೆಲ್ಲ ಪ್ರಸಾದ ಹಂಚಿದರು.
ಅರೆ ಕತ್ತಲೆಯಲ್ಲಿಯೇ ಎಲ್ಲಾ ಮಾಹಿತಿಗಳನ್ನೂ ಕೂಲಂಕಷವಾಗಿ ತಿಳಿದುಕೊಂಡು ದೇಗುಲದ ಆವರಣದಲ್ಲಿರುವ ಪುಟ್ಟ ಪುಟ್ಟ ಮಂದಿರಗಳ ವೀಕ್ಷಣೆಗೆ ಹೊರಟಾಗ ಇನ್ನೊಂದು ಮಾಹಿತಿ ಲಭ್ಯವಾಯಿತು. ಬ್ರಹ್ಮಪುರಾಣದ ಪ್ರಕಾರ ದೇವಶಿಲ್ಪಿ ವಿಶ್ವಕರ್ಮನಿಗೆ, ಒಂದು ರಾತ್ರಿಯೊಳಗೆ ಒಂದು ಲಕ್ಷ ದೇಗಲಗಳನ್ನು ನಿರ್ಮಿಸಲು ಆದೇಶಿಸಲಾಗಿತ್ತು. ಕೊನೆಯದಾಗಿ ಅವನದೇ ದೇಗುಲವನ್ನು ಪೂರ್ತಿಗೊಳಿಸಲಾಗದಿದ್ಧುದು ವಿಪರ್ಯಾಸ.!ಪ್ರಾಕೃತಿಕ ಸವೆತಗೊಳಗಾಗಿ ಅಷ್ಟೂ ದೇಗುಲಗಳು ಈಗಿಲ್ಲದಿದ್ದರೂ, ಇರುವವುಗಳಲ್ಲಿ ಕ್ರಮಬದ್ಧ ಪೂಜೆಗಳು ನಡೆಯುತ್ತಿವೆ. ಹಾಗೆಯೇ ವಿಶ್ವಕರ್ಮನಿಂದ ಅಪೂರ್ಣಗೊಂಡ ಅವನದೇ ದೇಗುಲವನ್ನೂ ಕಾಣಬಹುದು.
ಅಲ್ಲಿದ್ದ ಸುಮಾರು ಹತ್ತಡಿ ಎತ್ತರದ ಚಂದದ ಕರಿ ಶಿಲೆಯ ಗಣಪತಿ ವಿಗ್ರಹ ಎಲ್ಲರ ಗಮನ ಸೆಳೆಯಿತು. ಅರೆ ಬೆಳಕಲ್ಲೇ ಇವುಗಳನ್ನೆಲ್ಲ ನೋಡಿದ್ದು ಅಪೂರ್ಣವೆನಿಸಿದ್ದರಿಂದ ಬಾಲಣ್ಣನವರು ಮರುದಿನ ಬೆಳಗ್ಗೆ ಪುನಃ ಸರಿಯಾದ ವೀಕ್ಷಣೆಗೆ ಕರೆತರುವ ಭರವಸೆಯೊಂದಿಗೆ ಶ್ರೀ ಲಿಂಗದೇವರಿಗೆ ನಮಿಸುತ್ತಾ, ಅರೆ ಕತ್ತಲೆಯಲ್ಲಿ ಎಡವಿಕೊಂಡು ಬಸ್ಸಿನ ಸುಖಾಸನದತ್ತ ಸಾಗಿದಾಗ, ಪ್ರವಾಸದ ಪ್ರಥಮ ದಿನವೇ ಸಾಕಷ್ಟು ಹೊಸ ವಿಷಯ, ಸ್ಥಳಗಳ ಬಗ್ಗೆ ತಿಳಿದಂತಾಗಿ ಎಲ್ಲರ ಮನ ಮುದಗೊಂಡಿತ್ತು.. ರಾತ್ರಿಯ ಸವಿ ಭೋಜನ ಸವಿದು, ವಿಶ್ರಾಂತಿ ಬಯಸಿ ದಣಿದ ದೇಹವು ನಿದ್ರಾದೇವಿಗೆ ಶರಣಾಯಿತು…
ಹಿಂದಿನ ಪುಟ ಇಲ್ಲಿದೆ: ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 3 (ಮುಂದುವರಿಯುವುದು..)
-ಶಂಕರಿ ಶರ್ಮ, ಪುತ್ತೂರು.
ಸುಂದರವಾದ ಪ್ರವಾಸ . ಚೆನ್ನಾಗಿದೆ
ನಿಮಗೆ ಧನ್ಯವಾದಗಳು.
ಸೊಗಸಾದ ನಿರೂಪಣೆ.
ಸೊಗಸಾದ ನಿರೂಪಣೆ.