ಯಾರೀ ಗಾಂಧಿ?

Spread the love
Share Button

 

charkha and gandhi

ಅವನಾರೊ ಗಾಂಧಿತಾತ
ಬೆನ್ನು ಬಿಡದಂತೆ ಭೂತ
ಮುಂದೆ ನಡೆ ನಡೆದನಂತೆ
ಇಂದೇಕೆ ಹಿಂದೆ ಬಿದ್ದ ಕಥೆ ?||

ಇವನೆ ನೋಡು ಗಾಂಧಿತಾತ
ಮಿಕ್ಕುಳಿದ ಬರಿದವನ ಭೂತ
ಬಯಸಿದ್ದನವ ಭವ್ಯ ಭವಿತ
ಅದನ್ಹುಡುಕುವುದರಲೆ ಪ್ರಸ್ತುತ ||

ಅವನಿದ್ದನಂತೆ ಗಾಂಧಿ ತಾತ
ಸ್ವಚ್ಛತೆಗೆ ಆಶ್ರಮದಲಿ ಕೂತ
ಗಲ್ಲಿ ಮೋರಿ ಓಣಿ ತೊಳೆಸುತ
ಕಕ್ಕಸಿನ ಮನೆಗು ಮೋಕ್ಷವಿತ್ತ ||

ಅವನೆಲ್ಲಿಹನೊ ಗಾಂಧಿತಾತ
ಬಲ್ಲವರೆಲ್ಲರು ಜತೆಯಾಗುತ
ಗಾಂಧಿತಾತನ ಮರಿ ಹಾಕುತ
ಗಾಂಧಿತ್ವ ಸಂತತಿಯಾಗಿಸುತ ||

ಅವನಾರೊ ಇದ್ದನಂತೆ ಗಾಂಧಿ
ಪೆಟಾರಿಯಲವಿತಿದ್ದ ಸಂಬಂಧಿ
ಧೂಳ್ಹೊಡೆದು ಕೊಡವಿ ಸ್ವಚ್ಛ ಶುದ್ಧಿ
ಪ್ರಮಾಣಿಸುತ ಮುಟ್ಟೆವು ಸೇಂದಿ ||

ಅವನೇನಾ ನಮ್ಮ ಗಾಂಧಿ ತಾತ?
ಬರಿ ಕಚ್ಛೆಯಲ್ಲೆ ಇದ್ದಾ ಭಗವಂತ
ಸರಳ ಬಾಳೆ ಬೋಧಿಸಿ ಬದುಕುತ್ತ
ಅರಳುವ ದಾರಿ ತೆರೆದು ನಮಗಿತ್ತ? ||

ಅವನೆ ನೋಡು ನಮ್ಮ ಗಾಂಧಿತಾತ
ನಮ್ಮೆಲ್ಲರ ಹೆಮ್ಮೆ ಘನ ರಾಷ್ಟ್ರ ಪಿತ
ಅವನಿತ್ತ ದೀಕ್ಷೆ ಸ್ವಾತಂತ್ರದ ಅಮಿತ
ಅಹಿಂಸೆಯಲೆ ಗೆಲುವ ಬಗೆ ತೋರುತ ||

 – ನಾಗೇಶ ಮೈಸೂರು

Follow

Get every new post on this blog delivered to your Inbox.

Join other followers: