ಜಮಾಲಾಬಾದ್ ನ ಕಮಾಲ್
ಜಮಾಲಾಬಾದ್, ನರಸಿಂಹಗಡ ಹಾಗೂ ಗಡಾಯಿಕಲ್ಲು ಎಂಬ ವಿವಿಧ ಹೆಸರಿನಿಂದ ಕರೆಯಲ್ಪಡುವ ಅಕರ್ಷಕ ಕೋಟೆಯು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ 6 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಈ ಕೋಟೆಯು, ಬೃಹದಾಕಾರದ ಗ್ರಾನೈಟ್ ಕಲ್ಲಿನ ತುದಿಯಲ್ಲಿದೆ. ಹಿಂದೆ ಇಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕೋಟೆ ಇತ್ತಂತೆ. 1794 ರಲ್ಲಿ, ಟಿಪ್ಪು ಸುಲ್ತಾನನು ಇದನ್ನು ನವೀಕರಿಸಿ ತನ್ನ ತಾಯಿಯಾದ ಜಮಾಲಬಿಯ ನೆನಪಿಗಾಗಿ ‘ಜಮಾಲಾಬಾದ್’ ಎಂಬ ಹೆಸರಿಟ್ಟನಂತೆ.
ಜಮಾಲಾಬಾದ್ ಕೋಟೆಯನ್ನೇರಲು 1876 ಮೆಟ್ಟಿಲುಗಳನ್ನೇರಬೇಕು. ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದರೂ ಕೊನೆಗೆ ತೀರಾ ಕಡಿದಾದ ಮೆಟ್ಟಿಲುಗಳಿವೆ. ಅಲ್ಲಿ ಹಸಿರು ಮರಗಳ ನೆರಳು ಕಡಿಮೆ. ಹಾಗಾಗಿ ಬಿಸಿಲಿನ ಝಳವೂ ನಮ್ಮ ಶ್ರಮ ಹೆಚ್ಚಿಸುತ್ತದೆ.
ದಾರಿಯಲ್ಲಿ ಒಂದು ಕಡೆ ಮುರಿದು ಬಿದ್ದ ಫಿರಂಗಿ ಈಗಲೂ ಇದೆ.ಕೋಟೆಯ ಮೇಲೆ ಬಹುಶ: ಮದ್ದುಗುಂಡುಗಳನ್ನು ಇಡುತ್ತಿದ್ದ ಕೋಣೆ ಇದೆ. ಒಂದು ಕೊಳವಿದೆ. ಆದರೆ ಅದರ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಕೋಟೆಯನ್ನು ಹತ್ತಲು ಶ್ರಮ ಹಾಗೂ 3-4 ತಾಸು ಸಮಯ ಬೇಕು. ಆದರು, ಕೋಟೆಯ ಮೇಲಿನಿಂದ ಕಾಣಿಸುವ ಪ್ರಕೃತಿ ಸೌಂದರ್ಯ ಈ ಶ್ರಮವನ್ನು ಸಾರ್ಥಕಗೊಳಿಸುತ್ತದೆ.
ಬಿಸಿಲಿನ ಝಳವು ಜೋರಾಗಿ ಇದ್ದುದರಿಂದ, ನಾವು ದಾರಿಯುದ್ದಕ್ಕೂ ಕಿತ್ತಳೆ, ಸೌತೆಕಾಯಿ ತಿನ್ನುತ್ತಾ ನಿಧಾನವಾಗಿ ಚಾರಣ ಮಾಡಿದೆವು. ಬೆಳಗ್ಗೆ ಸುಮಾರು 9 ಗಂಟೆಗೆ ಹತ್ತಲಾರಂಭಿಸಿದ್ದ್ದೆವು. ಎಲ್ಲರೂ ಕೋಟೆಯನ್ನೇರಿ ಕೆಳಗಿಳಿಯುವಷ್ಟರಲ್ಲಿ ಮಧ್ಯಾಹ್ನ 3 ಗಂಟೆ ಆಗಿತ್ತು .
ಜಮಾಲಾಬಾದ್ ಕೋಟೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅಲ್ಲಿ ಟಿಕೆಟ್ ಕೌಂಟರ್ ಇದೆ. ಕೋಟೆಯ ಕೆಳಭಾಗದಲ್ಲಿ ಒಂದು ಸಣ್ಣ ಅಂಗಡಿ ಇದ್ದು, ಅದರಲ್ಲಿ ನೀರು, ಜ್ಯೂಸ್ ಇತ್ಯಾದಿ ಸಿಗುತ್ತದೆ. ಆದರೆ ಊಟ ಸಿಗುವುದಿಲ್ಲ. ಹಾಗಾಗಿ, ನಮಗೆ ಊಟ ಬೇಕಿದ್ದರೆ ನಾವೇ ಒಯ್ಯಬೇಕು ಅಥವಾ ಬೆಳ್ತಂಗಡಿ -ಉಜಿರೆಗೆ ಹೋಗಬೇಕು.
– ಹೇಮಮಾಲಾ.ಬಿ.
(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ ಲೇಖನ.)
17/02/2014
ಚಾರಣ ಚೆನ್ನಾಗಿತ್ತು.
http://www.athreebook.com/2009/07/blog-post_28.html ಇಲ್ಲಿಂದ ತೊಡಗಿದಂತೆ ಮೂರು ಕಂತುಗಳ ಜಮಾಲಾಬಾದ್ ನೋಡಿ. ಅಂತರ್ಜಾಲದ ಲೇಖನಗಳು ಸ್ಥಳ ಸಂಕೋಚಿಯಲ್ಲವಾದ್ದರಿಂದ ಪತ್ರಿಕಾ ಲೇಖನಗಳ ಪ್ರತಿಗಳನ್ನು ಇಲ್ಲಿ ದಾಖಲಿಸುವ ಅವಶ್ಯಕತೆಯಿಲ್ಲ.
ತಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ಆದರೆ, ನನಗೆ ವಿಸ್ತೃತವಾಗಿ ಬರೆಯಲು ಪದಭಂಡಾರವೇ ಇಲ್ಲ. ಇನ್ನು ಮುಂದೆ ಪ್ರಯತ್ನಿಸುತ್ತೇನೆ.
-ಹೇಮಮಾಲಾ.