ಯುವ ಉದ್ಯಮಿಗಳಿಗೆ ಸಲಹೆ..
ಮನುಷ್ಯರ ಸಮಸ್ಯೆ ಏನೆಂದರೆ ಅವರಿಗೆ ತಮ್ಮ ಬದುಕೇ ದೊಡ್ಡ ಚಿಂತೆಯಾಗಿದೆ.
ಹೀಗಾಗಿ ಏನಾದರೂ ಸಾಧಿಸುವುದು, ಅಥವಾ ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸುವುದಿಲ್ಲ. ಬೆಂಗಳೂರಿನಲ್ಲಿ ಒಂದು ಅಪಾರ್ಟ್ಮೆಂಟ್ ಖರೀದಿಸುವುದು, ಚೆಲುವೆಯೊಬ್ಬಳನ್ನು ಮದುವೆಯಾಗುವುದು, ಇಬ್ಬರು ಮಕ್ಕಳನ್ನು ಹೊಂದುವುದು, ಅವರನ್ನು ಕಾನ್ವೆಂಟ್ ಶಾಲೆಗೆ ಕಳಿಸುವುದು…ಇದನ್ನೇ ನೂರೆಂಟು ಸಾಧನೆ ಎಂದು ಭಾವಿಸುತ್ತಾರೆ. ” ಲೈಫಲ್ಲಿ ಸೆಟ್ಲ್ ಆದೆ” ಎಂದುಕೊಳ್ಳುತ್ತಾರೆ. ಆದರೆ ಇದು ಬದುಕಿನ ಒಂದು ಚೂರು ಮಾತ್ರ.
ಯಾರಾದರೂ ವಿದ್ಯಾರ್ಥಿಯನ್ನು ” ನೀವೇನು ಓದುತ್ತೀರಿ? ಎಂದರೆ ” ಎಂಸಿಎ, ಎಂಎಸ್ಸಿ, ಬಿಟೆಕ್ ಅನ್ನುವುದು ಸಾಮಾನ್ಯ. ಆದರೆ ಅವರು ಎಲ್ಲಿಗೆ ಹೋಗುತ್ತಾರೆ? ಅಂತಿಮವಾಗಿ ಹಣ ಗಳಿಸಲು ಯತ್ನಿಸುತ್ತಾರೆ. ನಾನು ಹೇಳುವುದೇನೆಂದರೆ, ಎಂಜಿನಿಯರ್ಗಳು ತಮ್ಮ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ಶೋಧಿಸಬೇಕು. ನೀವು ಪೆನ್ನನ್ನು ತಯಾರಿಸುತ್ತಿದ್ದರೆ, ಅತ್ಯಂತ ಪ್ರಾಮಾಣಿಕವಾಗಿ ಮುಂದುವರಿಯಿರಿ. ಇತರ ಪೆನ್ನುಗಳಿಗಿಂತ ಉತ್ತಮವಾದ ಲೇಖನಿಯನ್ನು ಸೃಷ್ಟಿಸಿ. ತನ್ನಿಂತಾನೆ ಹೆಸರು ಬರುತ್ತದೆ. ಪೆನ್ನು ಕೊಯಮತ್ತೂರಿನಲ್ಲಿ ಮಾರಾಟವಾಗುತ್ತದೆ. ನಂತರ ಸನಿಹದ ರಾಜ್ಯಗಳಿಗೆ ವಿಸ್ತರಿಸುತ್ತದೆ. ನಂತರ ಭಾರತ, ಏಷ್ಯಾ. ಹಣ ಉಪ ಉತ್ಪನ್ನವಾಗಿ ಬಂದು ಸೇರುತ್ತದೆ. ಭಿನ್ನವಾಗಿ ಚಿಂತಿಸಿ. ನಾನೇನು ಮಾಡುತ್ತಿದ್ದೇನೆ? ಉಪಕರಣಗಳನ್ನು ಮಾಡುತ್ತಿಲ್ಲ. ಸಣ್ಣ ಸಮಸ್ಯೆಗೆ ಪರಿಹಾರ ಕೊಡುತ್ತಿದ್ದೇನೆ. ಮನುಷ್ಯರಿಗೆ ಅನೇಕ ತೊಂದರೆಗಳಿರುತ್ತವೆ. ಅವುಗಳಲ್ಲಿ ಒಂದಕ್ಕಾದರೂ ಪರಿಹಾರ ಕೊಡಬಹುದು. ಅದು ನಿಮಗೆ ದಕ್ಕುವ ಅವಕಾಶ.
ಕೊನೆಯ ಸಲಹೆ ಏನೆಂದರೆ, ಸರಳವಾಗಿ ಬದುಕಿ, ನಿಮ್ಮ ಅಗತ್ಯಗಳು ಸರಳವಾಗಿರಲಿ. ದಿನದ ಇಪ್ಪತ್ತನಾಲ್ಕು ಗಂಟೆಯೂ ಸಂತಸದಲ್ಲಿರಲು ನಿಮಗೇನೂ ಬೇಕಾಗಿರುವುದಿಲ್ಲ. ಅದು ನಿಮ್ಮ ಜನ್ಮಸಿದ್ಧ ಹಕ್ಕು.
(ರಶ್ಮಿ ಬನ್ಸಾಲ್ ಅವರ ಟೇಕ್ ಮಿ ಹೋಮ್ ಪುಸ್ತಕದಲ್ಲಿ ಓದಿದ ಸಾಲುಗಳು)
-ಕೇಶವ ಪ್ರಸಾದ. ಬಿ. ಕಿದೂರು.
07/02/2014