ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು

Spread the love
Share Button

Sereyalli kaleda 14 dinagalu

ಸುಮಾರು 15 ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ  ನರಹಂತಕ, ದಂತಚೋರ ಬಿರುದಾಂಕಿತ, ಮೀಸೆನಾಯಕ ವೀರಪ್ಪನ್ ಕೋವಿ ಹಿಡಿದುಕೊಂಡಿರುವ ಚಿತ್ರ, ಡಾ.ರಾಜಕುಮಾರವರನ್ನೂ ಸೇರಿ ಕೆಲವು ಗಣ್ಯರನ್ನು ಅಪಹರಿಸಿದ ಸುದ್ದಿಗಳು, ಅವರ ಬಿಡುಗಡೆಗಾಗಿ ನಡೆಯುತ್ತಿದ್ದ ಚರ್ಚೆಗಳು, ಸರಕಾರದ ಕ್ರಮಗಳು, ಅವನ  ಸಂಗಡಿಗರ ಬಂಧನ, ಅದಕ್ಕವನ ಪ್ರತೀಕಾರ, ವೀರಪ್ಪನ್ ನ ಶೌರ್ಯ ಹಾಗೂ ಕ್ರೌರ್ಯದ ಬಗ್ಗೆ ವರ್ಣರಂಜಿತ ಕಥೆಗಳು…… ಇತ್ಯಾದಿ  ಪ್ರಮುಖ ಸುದ್ದಿಗಳಾಗಿದ್ದುವು..

ಶ್ರವಣ ಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ, ಪುಸ್ತಕ ಮಳಿಗೆಯೊಂದರಲ್ಲಿ, ಪುಸ್ತಕವೊಂದರ ಮುಖಪುಟವನ್ನು ನೋಡಿದಾಕ್ಷಣ‘ಇದು ವೀರಪ್ಪನ್ ಮೀಸೆಯಂತೆ ಇದೆಯಲ್ಲಾ’ ಎಂದು ಗುರುತಿಸಿದೆ. ಪುಸ್ತಕ ತೆರೆದು ನೋಡಿದಾಗ, ಅದು ವೀರಪ್ಪನ್ ಬಗ್ಗೆಯೇ ಆಗಿತ್ತು. ಅವನಿಂದ ಅಪಹರಿಸಲ್ಪಟ್ಟು, ಬಂಡೀಪುರದ ಕಾಡಿನಲ್ಲಿ 14 ದಿನಗಳನ್ನು ಕಳೆದ ಶ್ರೀ ಕೃಪಾಕರ ಮತ್ತು ಶ್ರೀ ಸೇನಾನಿ ಅವರ ರೋಮಾಂಚಕ ಅನುಭವಗಳ ದಾಖಲೆ ಈ ಪುಸ್ತಕ. ಹೆಸರು ಕೇಳಿದರೆ ಮೈನಡುಗುವ ವ್ಯಕ್ತಿಯ ಸೆರೆಯಾಳಾಗಿ, ಕಾಡಿನ ಪ್ರತಿಕೂಲ ವಾತಾವರಣದಲ್ಲಿ, ಕ್ಷಣ-ಕ್ಷಣದ ಅನಿಶ್ಚಿತತೆಯಲ್ಲಿ ಸಾಮಾನ್ಯ ಜನರು ಧೃತಿಗೆಡದಿರಲು ಸಾಧ್ಯವೇ ಇಲ್ಲ. ಆದರೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬಹಳಷ್ಟು ಸಾರಿ ಸಂಚರಿಸಿದ್ದ ಖ್ಯಾತ ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ ಮತ್ತು ಸೇನಾನಿಯವರನ್ನು ಈ ವನವಾಸ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಂಗೆಡಿಸಿಲ್ಲ ಎಂಬುದು ಅವರ ಅನುಭವಗಳ ನಿರೂಪಣೆಯ  ಶೈಲಿಯಿಂದಲೇ ಅರ್ಥವಾಗುತ್ತದೆ.

Krupakar Senani

ಬಹಳ ಆಸಕ್ತಿದಾಯಕದ ಈ ಪುಸ್ತಕವು ವಿಶಿಷ್ಟವಾದ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.  ಕೆಲವೆಡೆ Comic Episode ನಂತೆಯೂ  ಇನ್ನು ಕೆಲವೆಡೆ Adventure Travelogue  ನಂತೆಯೂ  ಇದೆ.  ಒಟ್ಟಾರೆಯಾಗಿ ಸೊಗಸಾದ ಓದನ್ನು ಒದಗಿಸುತ್ತದೆ. ಎಲ್ಲದಕ್ಕಿಂತಲೂ ಹೆಚ್ಚು, ಇನ್ನು ಮುಂದೆ ಇನ್ನು ಯಾರಿಗೂ ಸಿಗಲಾರದ(ಸಿಗಬಾರದ) ಅನುಭವಗಳ ಕಣಜ. ಹಾಗಾಗಿ ಇನ್ನು ಮುಂದೆ ಈ ರೀತಿಯ ಪುಸ್ತಕ ಬರುವುದು ಸಾಧ್ಯವಿಲ್ಲ!

ವೀರಪ್ಪನ್ ನ  ಒತ್ತೆಯಾಳಾಗಿ ಇರುವುದು ‘ಹಾವಿನ ಹೆಡೆಯ ನೆರಳಿನ ಕಪ್ಪೆಯ ತೆರದಿ’ ಎಂದು ಗೊತ್ತಿದ್ದೂ, ಕಾಡಿನ ಬಗ್ಗೆ ಇರುವ ತಮ್ಮ  ಜ್ಞಾನ, ಹಾಸ್ಯ ಪ್ರಜ್ಞೆ, ವೀರಪ್ಪನ್ ತಂಡದ ವನ್ಯಜೀವಿಗಳ ಬಗೆಗಿನ ಜ್ಞಾನ ಮತ್ತು ಆಧುನಿಕತೆಯ ಬಗೆಗಿನ ಅಜ್ಞಾನ…ಇವೆಲ್ಲವನ್ನೂ ವಿವೇಚನೆಯಿಂದ  ಬಳಸಿಕೊಂಡು, ಸಂದರ್ಭಕ್ಕೆ ತಕ್ಕಂತೆ ಬಳಸಿದ ಇವರ ಜಾಣ್ಮೆ ಅದ್ಭುತ. ಕಾಡಿನಲ್ಲಿ ಪಾಠ ಮಾಡಿ…..ನಾಟಕ ಮಾಡಿ. ……ಊಟ ಮಾಡಿ…..ತಾವೂ ಅಂಜದೆ, ಜತೆಗೆ ಸೆರೆಯಾಳಾಗಿದ್ದವರಿಗೂ ಅಡಿಗಡಿಗೆ ಧೈರ್ಯ ತುಂಬಿ, ಕೊನೆಗೆ  ವೀರಪ್ಪನ್ ನಿಂದಲೇ ಶುಭಾಶಯ ಪಡೆದು ನಾಡಿಗೆ ಮರಳಿದ ಚಾಣಾಕ್ಷರಿವರು.

ಅವರಿಗೆ ಒಂದು ಸೆಲ್ಯೂಟ್!   

 

 

(ಚಿತ್ರ: ಅಂತರ್ಜಾಲ)

 

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: