ಮನಸು ಮಾಯೆ

Spread the love
Share Button

‘ಮನಸು ಮಾಯೆ’, ‘ಮಾಯಾಕನ್ನಡಿ’ – ಹೌದು ಕನಸೆಂಬೋ ಕುದುರೆಯನೇರಿ ದೌಡಾಯಿಸುವ ಮನಸಿನ ತಾಕಲಾಟಗಳು, ದ್ವಂದ್ವಗಳನ್ನು ಹೇಳತೀರದು. ಮನಸ್ಸಿಲ್ಲದೆ ಮಾಡುವ ವೃತ್ತಿ, ಮನಸ್ಸಿಲ್ಲದ ಓದು ಹೆಚ್ಚೇಕೆ ಮನಸ್ಸಿಲ್ಲದೆ ತೊಡಗಿಸಿಕೊಳ್ಳುವ ಹವ್ಯಾಸಗಳು ಕೂಡಾ ಧೋ ಎಂದು ಸುರಿಯುವ ಮಳೆಯಂತೆ ರಚ್ಚೆ ಹಿಡಿದು ಕಿರಿಕಿರಿ ಹುಟ್ಟಸಬಲ್ಲವು. ಮನಸ್ಸು, ಮನಸಿನ ಉಪದ್ಯಾಪಗಳು, ಮಾನಸಿಕ ತುಮುಲಗಳು ರಸವತ್ತಾಗಿರುವಷ್ಟೇ ವಿಲಕ್ಷಣವಾಗಿರುವುವು ಕೂಡಾ. ಜೋತುಬಿದ್ದ ಹೆಗಲಿನೊಂದಿಗೆ ಸೋತ ಕಾಲೆಳೆಯುತ್ತ ನಡೆಯುವ ಜೀವ ಉತ್ಸಾಹದ, ಧನಾತ್ಮಕ ಸುಳಿವೊಂದು ಸಿಕ್ಕ ಕೂಡಲೇ ಛಂಗನೆ ನೆಗೆಯುವ ಜಿಂಕೆ ಮರಿಯಂತಾಗುತ್ತದೆ. ಉತ್ಸಾಹದಿಂದ ಪುಟಿವ ಮನಸ್ಸು ಕುಗ್ಗಿ ಕುಸಿಯಲು ಒಂದು ಚಿಕ್ಕ ಕಮೆಂಟು ಸಾಕು. ಒಟ್ಟಿನ ಮೇಲೆ ಮಾನಸ ಸರೋವರ . . ಇದು ಮಾನಸ ಸರೋವರ . . ಎಂಬ ಪುಟ್ಟಣ್ಣ ಕಣಗಾಲರ ಸಿನೆಮಾದ ಟೈಟಲ್ ಸಾಂಗ್ ಯಾವ ಕಾಲಕ್ಕೂ ಪ್ರಸ್ತುತ.

ಈ ನಿಟ್ಟಿನಲ್ಲಿ ಮಹಿಳೆಯರ ಸಮಸ್ಯೆಗಳು ಹೆಚ್ಚು ಸಂಕೀರ್ಣ ಹಾಗೂ ಸಾಮಾಜಿಕ ಜನ್ಯವಾಗಿವೆ. ಅವರ ಹೆಚ್ಚಿನ ನೋವು, ಕೋಪ ತಾಪಗಳಿಗೆ ಸಾಮಾಜಿಕ ನಿರ್ಬಂಧಗಳು, ರೂಢಿಗತ ಒತ್ತಡ, ನಿರೀಕ್ಷೆಗಳು ಕಾರಣ. ಇನ್ನೊಂದು ಕಾರಣ ಜಗತ್ತಿನಿಂದ, ಜನರಿಂದ, ಸ್ವತಹ ತಮ್ಮಿಂದಲೇ ಅತಿಯಾದ ನಿರೀಕ್ಷೆ. ಪ್ರೀತಿಯೋ, ಪ್ರೇಮವೋ, ಜವಾಬ್ದಾರಿಯುತ ವರ್ತನೆಯೋ, ಗೌರವಾದರಗಳೋ, ಸಿಗದಿದ್ದಾಗ ಧಗ್ಗನೆ ಉರಿದೇಳುವ ಆಕ್ರೋಶ, ಆವೇಶ. ಇನ್ನೂ ಮುಂದಿನ ಹೆಜ್ಜೆಯೆಂದರೆ ತಾವೂ ನೊಂದುಕೊಂಡು, ಇತರರೆಲ್ಲರೂ ತಮ್ಮ ಬಗ್ಗೆ ಏನನ್ನೋ ಆಡಿಕೊಳ್ಳುತ್ತಿದ್ದಾರೆಂದು, ಕುತಂತ್ರದಿಂದ ಯೋಜನೆ ಹಾಕುತ್ತಿದ್ದಾರೆಂದೇನೋ ತಿಳಿದುಕೊಳ್ಳುವುದು. ಈ ಆವೇಶ, ಕ್ರೋಧಗಳು ತಣ್ಣಗಾದಾಗಲಷ್ಟೇ ಈ ಜಗತ್ತಿನ ಜನರಿಗೆಲ್ಲ ತಮ್ಮ ತಮ್ಮ ಸಮಸ್ಯೆಗಳೇ ದೊಡ್ಡವೆಂದೂ ಇನ್ನೊಬ್ಬರ ಬಗ್ಗೆ ತಮ್ಮ ಅಮೂಲ್ಯವಾದ ಸಮಯ ವ್ಯಯಿಸಲು ತಾಳ್ಮೆಯಾಗಲಿ, ಸಹನೆಯಾಗಲಿ ಇಲ್ಲವೆಂದೂ ಅರಿವಾಗ ತೊಡಗುತ್ತದೆ.

ಹಾಗಿದ್ದರೂ ಮಾನಸಿಕ ಸಮಸ್ಯೆಗಳು, ಭಾವನಾತ್ಮಕ ಗೊಂದಲಗಳು ಮಹಿಳೆಯರಿಗೆ ಜಾಸ್ತಿ ಎನ್ನುವುದು ಶರ್ತಸಿದ್ಧ. ಅವರು ಧರಿಸುವ ಬಟ್ಟೆ ಬರೆ, ನಡೆನುಡಿಗಳಿಂದ ಹಿಡಿದು ಅವರ ಮಾತುಕತೆ, ವರ್ತನೆ ಎಲ್ಲವನ್ನೂ ಭೂತಕನ್ನಡಿಯಲ್ಲಿ ನೋಡಲಾಗುತ್ತವೆ ಹಾಗೂ ಕೆಲವು ಬಡಪಾಯಿಗಳು ತಮ್ಮ ಅಪ್ರಬುದ್ಧ ವರ್ತನೆಯಿಂದಲೋ ಚೆಲ್ಲು ಚೆಲ್ಲಾದ ನಡವಳಿಕೆಯಿಂದಲೋ ಉಳಿದವರ ಮಾತಿಗೆ ಗ್ರಾಸವಾಗುತ್ತಾರೆ. ಇನ್ನೊಬ್ಬ ಮನುಷ್ಯನಿಗೂ ತನಗೆ ಬೇಕಾದ ಹಾಗೆ ಬದುಕುವ ಹಕ್ಕಿದೆ ಎನ್ನುವುದನ್ನು ಅಲಕ್ಷಿಸುವ ಈ ಸಮಾಜದಲ್ಲಿ ಮೃದು ಮನಸ್ಸಿನವರು, ತೀರಾ ಸೂಕ್ಷ್ಮ ಮನೋಭಾವದವರು ಮಾತಿನ ಆಘಾತವನ್ನು ಕೂಡಾ ತಡೆದುಕೊಳ್ಳಲಾರರು. ಇದೇ ಅನೇಕ ಮಾನಸಿಕ ಸಮಸ್ಯೆಗಳಿಗೆ, ತಲ್ಲಣಗಳಿಗೆ, ಕೌಟುಂಬಿಕ ಕ್ಷೆಭೆಗಳಿಗೆ, ವಿಘಟನೆಗಳಿಗೆ ಕಾರಣವಾಗುತ್ತದೆ.

ಸಾಹಿತ್ಯ, ಚಲನಚಿತ್ರದಂತಹ ಅಭಿವ್ಯಕ್ತಿ ಮಾದ್ಯಮಗಳೂ ಈ ಕ್ಷೇತ್ರವನ್ನು ಖಂಡಿತವಾಗಿ ಪ್ರತಿ ನಿಧೀಕರಿಸಿವೆ. ಕನ್ನಡದ ತ್ರಿವೇಣಿಯವರನ್ನು ಮೊದಲುಗೊಂಡು ಇಂಗ್ಲಿಷಿನ ಅನಿತಾದೇಸಾಯಿಯವರು ಹೀಗೆ ಹೆಣ್ಣಿನ ಆಂತರಿಕ ಜಗತ್ತಿನ ವಿಕ್ಷಿಪ್ತತೆಯನ್ನು ಅಣುವಣುವಾಗಿ ಕೊಲ್ಲುವ ಖಿನ್ನತೆಯ ಅನುಭೂತಿಯನ್ನು ಅನೇಕ ಲೇಖಕಿಯರು ತೀವ್ರವಾಗಿ, ಸಾಂದ್ರವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. (ವೈದೇಹಿಯವರ ‘ಅಕ್ಕು’ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು) ‘ಶರಪಂಜರ’, ‘ಆಪ್ತಮಿತ್ರ’ದಂತಹ ಮೂವಿಗಳು ಕೂಡ ಈ ರೀತಿಯ ಸುಪ್ತ ಪ್ರಜ್ಞೆಯ ಅನನ್ಯ ವಿಶಿಷ್ಟತೆಗಳನ್ನೂ, ಮನೋ ಜಗತ್ತಿನ ವಿಲಕ್ಷಣ ವ್ಯಾಪಾರಗಳನ್ನು, ಅದುಮಿಟ್ಟ ಆಕಾಂಕ್ಷೆಗಳನ್ನು ಮನೋಜ್ಞವಾಗಿ ತೆರೆದಿರಿಸುತ್ತವೆ. ಖ್ಯಾತ ಮನೋ ವಿಶ್ಲೇಷಕ ಸುಧೀರ್ ಕಾಕರ್ ಅವರು ಭಾರತೀಯ ಕೌಟುಂಬಿಕ ಪರಿಸ್ಥಿತಿಯನ್ನು, ಸಾಮಾಜಿಕ ನಿರ್ಬಂಧಗಳನ್ನು, ಕಟ್ಟುಪಾಡುಗಳನ್ನು ಈ ರೀತಿಯ ಭಾವನಾತ್ಮಕ ಭುಗಿಲೇಳುವಿಕೆಗೆ ಕಾರಣ ಎಂದು ಹೇಳುತ್ತಾರೆ. ಅವರ ಪ್ರಕಾರ ಮೈಯಲ್ಲಿ ದೆವ್ವ ಬರುವುದು, ಹಿಸ್ಟೀರಿಯಾ, ಖಿನ್ನತೆ ಈ ತರದ ಖಾಯಿಲೆಗಳು ಮಹಿಳೆಯರಲ್ಲಿ ಜಾಸ್ತಿ. ಅವುಗಳನ್ನು ಗುಣಪಡಿಸುವ ಮೆಕ್ಯಾನಿಸಂ ಕೂಡಾ ನಮ್ಮ ಪರಂಪರೆಯಲ್ಲೇ ಇದೆ. ನಮ್ಮ ಸಮಾಜದಲ್ಲಿ ಧಾರ್ಮಿಕತೆ, ದೈವ ನಂಬಿಕೆ ಜಾಸ್ತಿ. ಯಾವುದೋ ಅತೀತ ಶಕ್ತಿಯ ಹೆಸರಿನಲ್ಲಿ ತಮಗಾದ ಅನ್ಯಾಯಗಳತ್ತ ಗಮನ ಸೆಳೆಯಲು, ತನ್ನ ವ್ಯಕ್ತಿತ್ವಕ್ಕಾದ ಹಾನಿಯನ್ನು, ಅವಮಾನವನ್ನು ಸರಿಪಡಿಸಿಕೊಳ್ಳಲು, ಓರ್ವ ವ್ಯಕ್ತಿಯಾಗಿ ತನಗೆ ಸಿಗಬೇಕಾಗಿ ಗೌರವ, ಪ್ರೀತಿ, ಆಪ್ತತೆಗಳನ್ನು ಮರಳಿ ಗಳಿಸಿಕೊಳ್ಳಲು ಈ ರೀತಿಯ ನಂಬಿಕೆಗಳು ಸಹಕರಿಸುತ್ತವಂತೆ (ಇದನ್ನು ದುರುಪಯೋಗ ಪಡಿಸಿಕೊಳ್ಳುವ ಅಸಂಖ್ಯಾತ ಬಾಬಾಗಳು, ಸ್ವಾಮೀಜಿಗಳು, ಯೋಗಿಗಳು ಹುಟ್ಟಿಕೊಂಡಿರುವುದು ಬೇರೆ ವಿಷಯ).

 

woman - society

 

ಈ ಸಮಾಜದ ದುರಂತಗಳನ್ನು ತಿದ್ದುವುದು, ಹೆಣ್ಣನ್ನು ಶೋಷಣೆಗೊಳಿಸುವ ಅಂಶಗಳನ್ನು ನಿವಾರಿಸುವುದು ಮನುಷ್ಯಮಾತ್ರರಿಂದ ಅಸಾಧ್ಯವಾದುದರಿಂದ ನಮ್ಮನ್ನು ನಾವೇ ತಿದ್ದಿಕೊಳ್ಳುವುದು, ಸಾಧ್ಯವಾದಲ್ಲಿ ನಾವೂ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವುದು (ಸಮಾಜದ ಸತ್ಪ್ರಜೆಯಾಗುವುದೂ ದೇಶದ ಹಿತದೃಷ್ಟಿಯಿಂದ ಕೊಡುಗೆಯೇ) ಇತ್ಯಾದಿ ಜೀವನದಲ್ಲಿ ಅಷ್ಟಿಷ್ಟು ಸಾರ್ಥಕ್ಯ ಪಡೆಯಬಹುದೇನೋ..
 
 
 

– ಜಯಶ್ರೀ ಬಿ.ಕದ್ರಿ

(ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)

  04/02/2014

3 Responses

  1. Purnima says:

    True. Women are strong by birth. The patriarchal and feudal values of our society make them weak. As you said the solution lies in women themselves. They have to become strong.

  2. we cont imagine a society without woman , she is the mother teacher wife, , well written article Neelamma

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: