ಷೇರುಗಳಲ್ಲಿ ಪಿಎಫ್ ಹೂಡಿಕೆ, ಸಾಮಾನ್ಯನ ನಿವೃತ್ತಿ ಬದುಕಿಗೆ ಲವಲವಿಕೆ?

Spread the love
Share Button

Provident fund

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯಲ್ಲಿನ (ಇಪಿಎಫ್‌ಒ) 6 ಲಕ್ಷ ಕೋಟಿ ರೂ.ಗೂ ಹೆಚ್ಚು ನಿಧಿಯಲ್ಲಿ ನಿರ್ದಿಷ್ಟ ಭಾಗವನ್ನು ಷೇರು ಮತ್ತು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಹಣಕಾಸು ಸಚಿವಾಲಯ ಪರಿಷ್ಕೃತ ಮಾರ್ಗದರ್ಶಿಯನ್ನು ಕಳೆದ ವರ್ಷ ಪ್ರಕಟಿಸಿತ್ತು. ನಿವೃತ್ತಿ ಮತ್ತು ಗ್ರಾಚ್ಯುಯಿಟಿ ಫಂಡ್‌ಗಳಲ್ಲಿ ಶೇ.30 ರಷ್ಟು ಮೊತ್ತವನ್ನು 2015 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪಿಎಫ್ ಹೂಡಿಕೆದಾರರಿಗೆ ಹೆಚ್ಚು ಆದಾಯ ದೊರೆಯುವಂತೆ ಮಾಡುವುದು ಸರಕಾರದ ಇಂಗಿತ. ಆದರೆ ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಹಾಗಾದರೆ ಸಾಮಾನ್ಯ ವೇತನದಾರರಿಗೆ ವಿಶ್ರಾಂತಿಯ ನಿವೃತ್ತಿ ಬದುಕಿಗೆ, ಯಾರಿಗೂ ಹೊರೆಯಾಗದಂತೆ ಬೇಕಾದಷ್ಟು ಆದಾಯದ ಆಸರೆಯನ್ನು ಈ ತೀರ್ಮಾನ ತಂದುಕೊಡಲಿದೆಯೇ? ಷೇರು ಸೂಚ್ಯಂಕಗಳು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿರುವ ಸಂದರ್ಭದಲ್ಲಿ ಇಲ್ಲಿದೆ ವಿವರ.

1. ಹಣಕಾಸು ಸಚಿವಾಲಯದ ಪ್ರಸ್ತಾವ ಏನೆನ್ನುತ್ತದೆ?

ಹಣಕಾಸು ಸಚಿವಾಲಯದ ಪ್ರಸ್ತಾವದ ಪ್ರಕಾರ ಸರಕಾರೇತರ ಭವಿಷ್ಯನಿಧಿ, ಪಿಂಚಣಿ ಮತ್ತು ಗ್ರಾಚ್ಯುಯಿಟಿ ಫಂಡ್‌ಗಳಲ್ಲಿ ಒಟ್ಟು ಶೇ.30 ರಷ್ಟನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಅಥವಾ ಡಿರೈವಟಿವ್‌ಗಳಲ್ಲಿ  ಶೇ.15 ರಷ್ಟನ್ನು (ಡಿರೈವಟಿವ್‌ಗಳಿಗೆ ಸ್ವಂತ ಮೌಲ್ಯ ಇರುವುದಿಲ್ಲ. ಗ್ರಾಹಕ ದರ ಸೂಚ್ಯಂಕ, ಷೇರು ಮಾರುಕಟ್ಟೆ ಸೂಚ್ಯಂಕ, ಸರಕು, ಚಿನಿವಾರ ಪೇಟೆ, ಕರೆನ್ಸಿ, ಬಾಂಡ್, ಬಡ್ಡಿ ದರ, ವಿನಿಮಯ ದರಗಳ ಏರಿಳಿತವನ್ನು ಅವಲಂಬಿಸಿ ಡಿರೈವಟಿವ್‌ನಲ್ಲಿ ಹೂಡಿಕೆಯ ಲಾಭ ನಷ್ಟ ಲೆಕ್ಕಾಚಾರ ನಡೆಯುತ್ತದೆ) ಹೂಡಬಹುದು. ಶೇ. 15 ರಷ್ಟನ್ನು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಲ್ಲಿ (ಇಟಿಎಫ್) ಹೂಡಿಕೆ ಮಾಡಬಹುದು. ಇಟಿಎಫ್‌ಗಳು ಕೂಡ ನಿರ್ದಿಷ್ಟ ಉತ್ಪನ್ನಗಳ ದರ ಸೂಚ್ಯಂಕದ ಏರಿಳಿತವನ್ನು ಅವಲಂಬಿಸಿದೆ.

2. ಸರಕಾರಿ ಸಾಲಪತ್ರಗಳಲ್ಲಿ (ಸರಕಾರಿ ಬಾಂಡ್) ಶೇ.40 ರಷ್ಟು ಹೂಡಿಕೆಗೆ ಅವಕಾಶ

ಸರಕಾರಿ ಸಾಲಪತ್ರ ಅಥವಾ ಬಾಂಡ್‌ಗಳಲ್ಲಿ ಭವಿಷ್ಯನಿಧಿಯ ಶೇ.40 ರಷ್ಟು ಮೊತ್ತವನ್ನು ಹೂಡಿಕೆ ಮಾಡಲು ಹಣಕಸು ಸಚಿವಾಲಯದ ಪ್ರಸ್ತಾವ ಅವಕಾಶ ಕಲ್ಪಿಸಿದೆ. ಯಾವುದೇ ಹೂಡಿಕೆದಾರನಿಗೆ ಸರಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಸುರಕ್ಷಿತವಾಗಿರುತ್ತದೆ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರಗಳು ಬಿಡುಗಡೆಗೊಳಿಸುವ ಸಾಲಪತ್ರಗಳಲ್ಲಿ ಹೂಡಿಕೆದಾರರಿಗೆ ಖಾತರಿಯ ಬಡ್ಡಿ ಆದಾಯ ಸಿಗುತ್ತದೆ.

ಸರಕಾರದ ಸಾಲಪತ್ರಗಳು ಮಾತ್ರವಲ್ಲದೆ ಸರಕಾರಿ ಬಾಂಡ್‌ಗಳಲ್ಲಿಯೇ ಮುಖ್ಯವಾಗಿ ಹೂಡಿಕೆ ಮಾಡುವ, ಸೆಬಿಯ ನಿಯಂತ್ರಣಕ್ಕೆ ಒಳಪಟ್ಟಿರುವ ಮ್ಯೂಚುವಲ್ ಫಂಡ್‌ಗಳಲ್ಲಿ  ಹೂಡಿಕೆಗೆ ಅನುಮತಿ ನೀಡಲಾಗಿದೆ. ಆದರೆ ಇಂತಹ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಒಟ್ಟು ಹೂಡಿಕೆಯ ಶೇ.5 ನ್ನು ಮೀರದಂತೆ ನಿರ್ಬಂಧವಿದೆ. ಸಾರ್ವಜನಿಕ ಬ್ಯಾಂಕ್‌ಗಳು ಬಿಡುಗಡೆ ಮಾಡುವ, ಒಂದು ವರ್ಷಕ್ಕಿಂತ ಕಡಿಮೆ ಇರದ ಅವಧಿಯ ಟರ್ಮ್ ಡೆಪಾಸಿಟ್‌ಗಳಲ್ಲೂ ಪಿಎಫ್ ಹಣವನ್ನು ತೊಡಗಿಸಿಕೊಳ್ಳಬಹುದು.

3. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಎಷ್ಟು?

ದೇಶದ ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಅಥವಾ ಎನ್‌ಎಸ್‌ಇನಲ್ಲಿ (ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್) ನೋಂದಣಿಯಾಗಿರುವ ಕಂಪನಿಗಳ ಷೇರು, ಡಿರೈವಟಿವ್‌ಗಳಲ್ಲಿ ಹಾಗೂ ಮ್ಯೂಚುವಲ್ ಫಂಡ್‌ಗಳ ಈಕ್ವಿಟಿ ಆಧಾರಿತ ಯೋಜನೆಗಳಲ್ಲಿ ಶೇ.15 ರ ತನಕ ಹಣವನ್ನು ಹೂಡಿಕೆ ಮಾಡುವ ಪ್ರಸ್ತಾಪವನ್ನು ಹಣಕಾಸು ಸಚಿವಾಲಯ ಹೊಂದಿದೆ. ಬಿಎಸ್‌ಇ ಅಥವಾ ಎನ್‌ಎಸ್‌ಇನಲ್ಲಿ ನೋಂದಾಯಿತವಾಗಿರುವ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಂಡೆಕ್ಸ್ ಫಂಡ್‌ಗಳಲ್ಲಿ ಶೇ.15 ರ ತನಕ ಪಿಎಫ್ ಹಣದ ಹೂಡಿಕೆಗೆ ಹಾದಿ ಮುಕ್ತಗೊಳಿಸಲಾಗಿದೆ.

4. ಷೇರಿನಲ್ಲಿ ಹೂಡಿಕೆಗೆ ಹಿಂದೆ ಪ್ರಸ್ತಾಪಗಳಿತ್ತೇ?

ಪಿಎಫ್ ಹಣವನ್ನು ಷೇರು, ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಕಳೆದ ಹತ್ತು ವರ್ಷಗಳಲ್ಲಿ ಪ್ರಸ್ತಾಪ ನನೆಗುದಿಯಲ್ಲಿತ್ತು. 2005 ರ ಜನವರಿ 1 ರಂದು ಹಣಕಾಸು ಸಚಿವಾಲಯ ಭವಿಷ್ಯನಿಧಿಯ ಶೇ.5 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಅನುಮತಿ ನೀಡಿತ್ತು. ಆಗ ಸೆನ್ಸೆಕ್ಸ್ 6,420 ಅಂಕಗಳಷ್ಟಿತ್ತು. ಆದರೆ ಇಪಿಎಫ್‌ಒ ಇದಕ್ಕೆ ಒಪ್ಪಿರಲಿಲ್ಲ. 2009 ರ ಏಪ್ರಿಲ್ 1ರ ವೇಳೆಗೆ  ಸರಕಾರ ಶೇ.15ರಷ್ಟು ಹೂಡಿಕೆಗೆ ಪ್ರಸ್ತಾವ ಮಾಡಿತ್ತು. ಆಗ ಮುಂಬಯಿ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 9,708 ಕ್ಕೆ ಏರಿತ್ತು. ಆದರೆ ಇಪಿಎಫ್‌ಒ ಪ್ರತಿಕ್ರಿಯಿಸಿರಲಿಲ್ಲ. 2015 ರ ಏಪ್ರಿಲ್ 1 ರಿಂದ ಈಕ್ವಿಟಿ ಮಾರುಕಟ್ಟೆಗಳಲ್ಲಿ ಶೇ.30ರ ತನಕ ಹೂಡಿಕೆ ಹಣಕಾಸು ಸಚಿವಾಲಯ ಸಮ್ಮತಿಸಿದೆ. ಈಗ ಸೆನ್ಸೆಕ್ಸ್ 30 ಸಾವಿರದ ಅಂಚಿಗೆ ಜಿಗಿದಿದೆ. ಒಂದು ವೇಳೆ ಸೆನ್ಸೆಕ್ಸ್ 9,708 ರಲ್ಲಿದ್ದಾಗ ಪಿಎಫ್‌ನ ಸ್ವಲ್ಪ ಭಾಗವನ್ನು ಈಕ್ವಿಟಿಗಳಲ್ಲಿ ಹೂಡಿದ್ದರೆ ಈ ಹೊತ್ತಿಗೆ ಸಾಕಷ್ಟು ಲಾಭದಾಯಕವಾಗುತ್ತಿತ್ತು. 1980 ರ ಆರಂಭದಲ್ಲಿ ಕೇವಲ 100 ಅಂಕಗಳಷ್ಟಿದ್ದ ಸೆನ್ಸೆಕ್ಸ್ ಈಗ 30,000 ಅಂಕಗಳ ಗಡಿಯಂಚಿಗೆ ಬಂದಿದೆ. ಅಂದರೆ 1980 ರಲ್ಲಿ ನೀವು ಬಿಎಸ್‌ಇನಲ್ಲಿ 100 ರೂ. ಹೂಡಿಕೆ ಮಾಡಿದ್ದರೆ, ಈ ಹೊತ್ತಿಗೆ ಅದರ ಮೌಲ್ಯ ಸುಮಾರು 300 ಪಟ್ಟು ಬೆಳೆಯುತ್ತಿತ್ತು.

5. ವಿರೋಧ ಯಾಕೆ?

ಷೇರು ಮಾರುಕಟ್ಟೆಯಲ್ಲಿ ಇಪಿಎಫ್‌ಒ ಹೂಡಿಕೆಯನ್ನು ಬಹುತೇಕ ಕಾರ್ಮಿಕ ಒಕ್ಕೂಟಗಳು ವಿರೋಸುತ್ತಿವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ  ನಾಯಕರಾಗಿರುವ ಎಂ. ಮಲ್ಲಿಕಾರ್ಜುನ ಖರ್ಗೆಯವರು ವಿರೋಸಿದ್ದು, ಉದ್ಯೋಗಿಗಳು ಕಷ್ಟಪಟ್ಟು ಸಂಪಾದಿಸುವ ಹಣವನ್ನು ಕೇಂದ್ರ ಸರಕಾರದ ಯಾವುದೇ ನಿರ್ದಿಷ್ಟ ಖಾತರಿಯಿಲ್ಲದೆ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಬೇಡ ಎಂದಿದ್ದಾರೆ. ಒಂದು ವೇಳೆ ಹೂಡುವುದೇ ಆಗಿದ್ದಲ್ಲಿ, ಮುಂಬರುವ ದಿನಗಳಲ್ಲಿ ಹೂಡಿಕೆದಾರರಿಗೆ ಹೂಡಿಕೆಯ ಹಣ ನಷ್ಟವಾದರೆ ಕೇಂದ್ರ ಸರಕಾರ ಭರಿಸಿಕೊಡುವ ಖಾತರಿಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ. ಇದು ಬಡವರ ಹಣವಾಗಿದ್ದು, ತೀವ್ರ ಏರಿಳಿತಗಳಿಂದ ಕೂಡಿದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಲ್ಲದು ಎನ್ನುತ್ತಾರೆ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ವೃಜೇಶ್ ಉಪಾಧ್ಯಾಯ.

6. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಈಕ್ವಿಟಿ ಹೂಡಿಕೆಗೆ ಅವಕಾಶ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಈಗಾಗಲೇ ಚಂದಾದಾರರಿಗೆ ಈಕ್ವಿಟಿ ಮಾರುಕಟ್ಟೆಯ ಆಯ್ಕೆಯನ್ನು ಮಾಡಿಕೊಳ್ಳಬಹುದು. ಇದು ಕಡ್ಡಾಯವೂ ಅಲ್ಲ. ಎನ್‌ಪಿಎಸ್‌ನಲ್ಲಿ ಜನತೆ ವೈಯಕ್ತಿಕವಾಗಿಯೂ ಹೂಡಬಹುದು. ಕಾರ್ಪೊರೇಟ್ ವಲಯ ಕೂಡ ಹೊಂದಬಹುದು. ಇದರಲ್ಲಿ ಅನಿವಾಸಿ ಭಾರತೀಯರೂ ಸೇರಿದಂತೆ 18 ರಿಂದ 60 ವರ್ಷ ವಯಸ್ಸಿನ ಎಲ್ಲರಿಗೂ ಹೂಡಿಕೆ ಮಾಡಬಹುದು.

retirement

 

7. ಮುಂದೇನಾಗಬಹುದು?

ಷೇರು ಮಾರುಕಟ್ಟೆ ಅಥವಾ ಈಕ್ವಿಟಿಯಲ್ಲಿ ಹೂಡಿಕೆ ಬಗ್ಗೆ ಇಪಿಎಫ್‌ಒ ಇದುವರೆಗೆ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಶೀಘ್ರದಲ್ಲೇ  ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಕಾರ್ಮಿಕ ಇಲಾಖೆಯ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ. ಒಂದು ವೇಳೆ ಹಣಕಾಸು ಸಚಿವಾಲಯದ ಪ್ರಸ್ತಾಪವನ್ನು ಜಾರಿಗೊಳಿಸಿದರೆ, ಷೇರು ಮಾರುಕಟ್ಟೆಗೆ ವರ್ಷಕ್ಕೆ 6,000 ಕೋಟಿ ರೂ. ಹಣ ಹರಿದುಬರಲಿದೆ. ಇಲ್ಲಿ ಆದಾಯಕ್ಕೆ ಖಾತರಿ ಇಲ್ಲದಿದ್ದರೂ, ಷೇರು ಸೂಚ್ಯಂಕಗಳು ಬೆಳೆದಂತೆ ಪಿಎಫ್ ಚಂದಾದಾದಾರರಿಗೆ ಸಿಗುವ ಆದಾಯ ಕೂಡ ಹೆಚ್ಚಲಿದೆ. ಆದರೆ ಒಂದುವೇಳೆ ಮಾರುಕಟ್ಟೆ ಇಳಿದರೆ ಆದಾಯ ಕಡಿಮೆಯಾಗಬಹುದು. ಹೀಗಿದ್ದರೂ, ದೀರ್ಘಕಾಲೀನ ದೃಷ್ಟಿಯಿಂದ ಷೇರು, ಈಕ್ವಿಟಿ ಮಾರುಕಟ್ಟೆ ಉತ್ತಮ ಪ್ರತಿಫಲ ಕೊಡುತ್ತದೆ ಎನ್ನುತ್ತಾರೆ.

 

 

– ಕೇಶವ ಪ್ರಸಾದ್.ಬಿ.ಕಿದೂರು

(ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ)

1 Response

  1. Agrani Dammangi says:

    Nivheliddu nija adre adralli thodagalu paripoorna dnyana beku aste.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: