ಮಧ್ಯಮವರ್ಗದ ನೆಚ್ಚಿನ ಪಲ್ಲಕ್ಕಿಯ ಚುಕುಬುಕು ಜೋಗುಳ

Share Button

Vinayakumar

 

ಇತ್ತೀಚೆಗೊಮ್ಮೆ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲು ಹೊರಡುವ ಸಮಯಕ್ಕೆ ಸರಿಯಾಗಿ ಮಹಿಳೆಯೊಬ್ಬರು ಬಂದವರೇ, ’ಇಲ್ಲಿ ಕೂರಬಹುದೇ? ರಿಸರ್ವೇಷನ್ ಇಲ್ಲಾ ತಾನೇ?’ ಎಂದು ವಿಚಾರಿಸಿದರು. ’ಬೆಂಗಳೂರಿನವರೆಗಂತೂ ಇಲ್ಲ’ ಎಂದು ಖಾತರಿ ಪಡಿಸಿದ ನಂತರ ಸಮಾಧಾನರಾಗಿ ತಮ್ಮ ಇಬ್ಬರು ಮಕ್ಕಳನ್ನು ಹಾಗೂ ತಾಯಿಯನ್ನು ಕರೆತಂದು ಕೂರಿಸಿದರು.  ಮಕ್ಕಳಿಬ್ಬರೂ ಇದ್ದ ಒಂದು ಕಿಟಕಿಯ ಬದಿಯ ಆಸನಕ್ಕಾಗಿ ಪೈಪೋಟಿ ನಡೆಸಿ ಜಗಳವಾಡುತ್ತಿದ್ದರು. ಅವರಿಬ್ಬರಲ್ಲಿ ದೊಡ್ಡವಳು ಅಕ್ಕ ’ಮಾನ್ವಿ’, ಚಿಕ್ಕವನು ತಮ್ಮ ’ಸಾತ್ವಿಕ್’. ಇವರಿಬ್ಬರ ಕಿತ್ತಾಟವನ್ನು ನೋಡಿ ನನ್ನ ಬಾಲ್ಯ ನೆನಪಾಯಿತಾದರೂ, ಒಮ್ಮೆಲೇ ಅವರನ್ನು ಸಮಾಧಾನ ಪಡಿಸಿ, ಮಾನ್ವಿಯನ್ನು ನನ್ನ ಪಕ್ಕದಲ್ಲಿ ಕೂರಿಸಿಕೊಂಡೆ. ಮಾನ್ವಿಯ ಖುಶಿಯನ್ನು ಕಂಡ ಅಜ್ಜಿ, “ಅವಳ ಗಣೇಶ್ ಮಾವನ ನೆನಪಾಗಿರ್ಬೇಕು. ಹಾಗೇ ಇದಾರೆ!” ಎಂದರು. ಇನ್ನು ಇವರ ಪೈಪೋಟಿ ತಿಂಡಿಗಳ ವಿಚಾರವಾಗಿ. ಅಮ್ಮನಿಂದ ಕ್ರೀಂ ಬಿಸ್ಕತ್ ಪ್ಯಾಕ್ ಪಡೆದ ಮಗು ಸಾತ್ವಿಕ್, ಪ್ಯಾಕ್ ಹರಿದು ಅಕ್ಕನಿಗೊಂದು ಬಿಸ್ಕತ್ ಕೊಟ್ಟಿತು. ಮಾನ್ವಿ ಇನ್ನೊಂದು ಬಿಸ್ಕತ್ ಕೇಳಲು, ಸಾತ್ವಿಕ್ ನಿರಾಕರಿಸಿತು. ದಾರಿ ಕಾಣದ ಮಾನ್ವಿ, ಕೈಲಿದ್ದ ಒಂದು ಬಿಸ್ಕತ್ತನ್ನು ’ಮಾವ ತಗೋ!’ ಎಂದೆನಗೆ ತಿನ್ನಿಸಲು ಮುಂದಾದಳು. ಇದನ್ನು ಗಮನಿಸಿದ ಸಾತ್ವಿಕ್, ’ಮಾವ, ಅವಳದು ಬೇಡ! ಇದು ತಗೋ’ ಎಂದು ಇನ್ನೊಂದು ಬಿಸ್ಕತ್ ಕೊಡಲು ಮುಂದಾಯಿತು. ಈ ಮಕ್ಕಳು ಕೊಟ್ಟ ಪ್ರೀತಿ, ಅಕ್ಕರೆಗೆ ಹೃದಯ ತುಂಬಿ ಬಂತೆನಗೆ. ಮಕ್ಕಳನ್ನು ನೋಡಿ ಖುಷಿಯ ಜೊತೆಗೆ ಹೆಮ್ಮೆ ಪಟ್ಟರು ತಾಯಿ. ಮಾನ್ವಿಗೆ ಆರು ವರ್ಷ ಪ್ರಾಯವಾದರೆ, ಸಾತ್ವಿಕನಿಗೆ ನಾಲ್ಕು. ಬಂದ ಹತ್ತು ನಿಮಿಷಗಳಲ್ಲಿ ಇಷ್ಟು ಆತ್ಮೀಯತೆಯೇ? ಅದೆಷ್ಟು ಸಲೀಸಾಗಿ ‘ಮಾವ’ ಎಂದು ಕರೆದರು. ತಮ್ಮೊಳಗಿನ ಪ್ರೀತಿ ಹಂಚಿದರು!. ನನ್ನಿಂದ ಅದಕ್ಕೆ ಪ್ರತಿಯಾಗಿ ಒಂದು ಪ್ರೀತಿಯ ಅಪ್ಪುಗೆಯ ಜೊತೆಗೆ ಬ್ಯಾಗಿನಲ್ಲಿದ್ದ ಚಾಕೊಲೇಟ್ಗಳನ್ನು ಕೊಡಲಾಯಿತಷ್ಟೆ. ರೈಲು ಒಂದೊಂದು ಊರು ತಲುಪಿದಾಗಲೂ ಅಜ್ಜಿಯ ಮನೆಯಿನ್ನಷ್ಟು ಸಮೀಪಿಸಿತೆಂಬ ಸಂಭ್ರಮ ಮಕ್ಕಳಿಗೆ. ರೈಲುಗಳಲ್ಲಿ ನಿತ್ಯ ಇಂತಹ ನೂರಾರು ಅನುಭವಗಳು ಕಾಣಸಿಗುತ್ತವೆ.

ಕಳೆಯುವ 3-4  ಗಂಟೆಗಳ ಪ್ರಯಾಣದ ಸಮಯದಲ್ಲಿ,  ಪರಸ್ಪರ ಪರಿಚಯಗಳೊಂದಿಗೆ ಹರಟಲಿಚ್ಛಿಸುವವರು ಒಂದೆಡೆಯಾದರೆ, ಯಾವುದೋ ದಿನಪತ್ರಿಕಯನ್ನೊ, ನಿಯತಕಾಲಿಕೆಯನ್ನೋ ಅಥವಾ ಇನ್ನಾವುದೋ ಕಾದಂಬರಿಯನ್ನು ಹಿಡಿದಿರುವ, ಕಿವಿಗೆ ಇಯರ್ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಮೈಮರೆಯುತ್ತಾ ಏಕಾಂತವನ್ನು ಬಯಸುವವರು ಇನ್ನೊಂದೆಡೆ. ಈ ಮಧ್ಯೆ ನಿತ್ಯ ಸಂಚಾರಕ್ಕಾಗಿ ರೈಲನ್ನೇ ಅವಲಂಬಿಸಿರುವ  ಉದ್ಯೋಗಿಗಳೆಷ್ಟೋ. ರೈಲು ಹೊಕ್ಕಿದೊಡನೆಯೇ ತಮಗೊಂದು ಆಸನವನ್ನು ಹುಡುಕಿಕೊಂಡು, ನಂತರ ನಿತ್ಯ ಪ್ರಯಾಣದಲ್ಲಿ ಸ್ನೇಹಿತರಾದವರಿಗೂ ಆಸನಗಳನ್ನು ಮೀಸಲಿಡಿಸಿ, ಎಲ್ಲರೂ ಬಂದನಂತರ ಖುಷಿಯಾಗಿ ಹರಟುತ್ತಾ, ಮನೆಯಿಂದ ಕಟ್ಟಿಕೊಂಡು ಬಂದ ಬುತ್ತಿಯನ್ನು ಬಿಚ್ಚಿ ಎಲ್ಲರೊಡನೆ ಹಂಚಿಕೊಂಡು ತಿನ್ನುತ್ತಾ, ಒಬ್ಬರ ಕಾಲನ್ನೊಬ್ಬರು ಎಳೆದು ವಿನೋದವನ್ನನುಭವಿಸುತ್ತಾ,  ನಿತ್ಯ ಪ್ರಯಾಣದ ದಣಿವೆಗಳನ್ನು ಮರೆಯುವರು. ಇಂತಹ ಚಿತ್ರ ಮಹಿಳಾ ವರ್ಗದಲ್ಲಿಯೂ ನಿತ್ಯ ಕಾಣಸಿಗುತ್ತದೆಯಾದರೂ, ಕೊಂಚ ಭಿನ್ನ ಹಾಗೂ ಆಕರ್ಷಣೀಯ. ಅವರ ಪ್ರಪಂಚವೇ ಹಾಗಲ್ಲವೇ, ಇವರಿಗಾಗಿಯೇ ಬರುವ ಮಲ್ಲಿಗೆ ಮೊಗ್ಗುಗಳನ್ನು ಚೌಕಾಶಿ ಮಾಡಿ ಕೊಂಡುಕೊಂಡು, ಸ್ನೇಹಿತೆಯರೊಂದಿಗೆ ಮನೆಯ ಸಕಲ ಸಮಾಚಾರಗಳನ್ನೂ, ನೋವು ನಲಿವುಗಳನ್ನೂ ಹಂಚಿಕೊಳ್ಳುತ್ತಾ, ನಯವಾಗಿ ಪೋಣಿಸಿಕಟ್ಟಿದ ಹೂವಿನ ಎಳೆಗಳನ್ನು ಸಂತೋಷದಿಂದ ಮುಡಿಯುವ ಇವರ ಮುಖದ ಭಾವವನ್ನು ನೋಡಿ ದೇವಕನ್ಯೆಯರೂ ಅಸೂಯೆ ಪಟ್ಟಾರು. ಇನ್ನು ಸಂಜೆ ಕೆಲಸದಿಂದ ಹಿಂದಿರುಗುವಾಗ ರಾತ್ರಿಯ ಅಡುಗೆಯ ಯೋಚನೆ. ರೈಲಿನಲ್ಲಿ ಸಿಗುವ ಸೊಪ್ಪು, ತರಕಾರಿ, ಕಾಳುಗಳನ್ನು ಕೊಂಡು ಬಿಡಿಸಿಕೊಂಡು ಅರ್ಧ ಕೆಲಸವನ್ನು ಮುಗಿಸಿಕೊಂಡೆವೆಂದು ಸಮಾಧಾನ ಪಡುವರು. ಇನ್ನು ನಿತ್ಯ ಸಂಚರಿಸುವ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸರದಿ. ಇವರಷ್ಟು ಲವಲವಿಕೆಯಿಂದ ಸಂಚರಿಸುವವರಿಲ್ಲ. ಸ್ಲೀಪರ್ ಹಲಗೆಗಳಿರುವುದೇ ತಮಗಾಗಿಯೆಂದು ಭಾವಿಸಿ, ಅದರ ಮೇಲೆ ಹೊಕ್ಕು, ಹರಟೆ ಹೊಡೆಯುತ್ತಲೋ, ಅಂತ್ಯಾಕ್ಷರಿಯೋ ಇನ್ನಾವುದೋ ಆಟವನ್ನು ಆಡುತ್ತಲೋ ಕಾಲಕಳೆಯುವರು. ಇವರ ನಿತ್ಯ ವೈರಿಗಳೆಂದರೆ ಹಿರಿಯ ನಾಗರಿಕರೇ ಸರಿ. 🙂   ಇವರ ಸಂತೋಷದಲ್ಲಾಗುವ ಗದ್ದಲಗಳನ್ನು ಸಹಿಸಲಾರದೆ ಒಂದೊಮ್ಮೆ ಗದರಿಸುವರು.ಅವರ ಬೈಗುಳ ಇವರಿಗೆ ಕೇಳುವುದಾದರೂ ಹೇಗೆ?

Indian_Rail

ಮಧ್ಯಮ ವರ್ಗದ ಜನತೆಗೆ ಪ್ರಯಾಣವೆಂದರೆ ಆರ್ಥಿಕವಾಗಿಯೂ ಅನುಕೂಲತೆಯ ದೃಷ್ಠಿಯಿಂದಲೂ ಪ್ರಥಮ ಆಯ್ಕೆ ರೈಲು. ಭಾರತದ ಅತಿ ಹೆಚ್ಚು ನೌಕರರನ್ನುಳ್ಳ ಬಹು ದೊಡ್ಡ ಇಲಾಖೆ ರೈಲ್ವೇ. ಇಷ್ಟೇ ಅಲ್ಲದೆ ದಿನ ನಿತ್ಯ ರೈಲನ್ನೇ ತಮ್ಮ ಜೀವನೋಪಾಯಕ್ಕೆ ದಾರಿಯನ್ನಾಗಿ ಮಾಡಿಕೊಂಡಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. ಮದ್ದೂರು ವಡೆ, ಚಹಾ, ಕಾಫ಼ಿ, ದೋಸೆಯಂತಹ ತಿನಿಸುಗಳನ್ನು ರೈಲ್ವೇ ಇಲಾಖೆಯ ಪರವಾಗಿ ಮಾರುವವರು, ಕಡಲೇಕಾಯಿ, ಚುರುಮುರಿ, ಸೌತೆಕಾಯಿ,ಕಿತ್ತಳೆ ಸಪೋಟದಂತಹ ತಿನಿಸುಗಳನ್ನು ಮಾರುವ ಖಾಸಗಿ ವ್ಯಾಪಾರಿಗಳು, ಮಕ್ಕಳ ಆಟಿಕೆಗಳು,ಕೀ ಬಂಚುಗಳು, ಕಾರ್ಡ್ ಕವರ್ ಗಳು, ಕಿರು ಪುಸ್ತಕಗಳು ಹೀಗೆ ಹಲವಾರು ವಸ್ತುಗಳನ್ನು ಮಾರಿಕೊಂಡು ಜೀವನ ಸಾಗಿಸುವವರು ಒಂದೆಡೆಯಾದರೆ, ಅಂಗವೈಕಲ್ಯತೆಯಿಂದಲೋ, ಮುಪ್ಪಿನಿಂದಲೋ, ಬೇಡಿ ತಿನ್ನುವ ಹಲವು ಜನ, ಸಮಾಜದಿಂದ ತಿರಸ್ಕರಿಸಲ್ಪಟ್ಟು, ಬೇಡಿ ತಿನ್ನುವುದನ್ನು ಬಿಟ್ಟರೆ ಹೊಟ್ಟೆಪಾಡಿಗೆ ಬೇರೆ ದಾರಿ ಕಾಣದ ಮಂಗಳಮುಖಿಯರು ಇನ್ನೊಂದೆಡೆ. ಹೀಗೆ, ರೈಲುಗಳು ಸಾವಿರಾರು ಜೀವಗಳಿಗೆ ನಿತ್ಯ ಆಶ್ರಯ ತಾಣವಾಗಿದೆ.

ರೈಲಿನ ಪ್ರಯಾಣ ನನಗೆ ಹೊಸದೇನಲ್ಲ. ಚಿಕ್ಕಂದಿನಿಂದಲೂ ಬೇಸಿಗೆ, ದಸರೆ ರಜೆಗಳಿಗೆ ಅಜ್ಜಿಯ ಮನೆಗೆ ಹೋಗುತ್ತಿದ್ದುದು ರೈಲಿನಲ್ಲೇ. ನಮ್ಮ ತಾತ ರೈಲ್ವೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದರಿಂದಲೋ ಏನೋ, ಬಸ್ಸಿಗಿಂತಲೂ ಹೆಚ್ಚು ರೈಲು ಪ್ರಯಾಣ ಮಾಮೂಲಿಯಾಗಿತ್ತು. ಇದರ ಜೊತೆಗೆ ರೈಲಿನೊಂದಿಗಿನ ನಮ್ಮ ಆತ್ಮೀಯತೆಯೂ ಅಷ್ಟೇ ಹೆಚ್ಚೆಂದರೆ ತಪ್ಪಾಗಲಾರದು. ಹಾಗೆಯೇ ನನಗೂ ನನ್ನ ತಂಗಿಗೂ ರೈಲಿನ ಪ್ರಯಾಣವೆಂದರೆ ಒಂದು ಮದ್ದೂರು ವಡೆ ಸವಿಯುವುದು ಪ್ರಮುಖವಾದ ವಿಚಾರವಾಗಿದ್ದುದೇ ಸರಿ. ದೊಡ್ಡವನಾದಂತೆ ಸ್ನೇಹಿತರೊಂದಿಗೆ ಪ್ರವಾಸಗಳಿಗೂ ಅನೇಕ ಬಾರಿ ರೈಲನ್ನೇ ಅವಲಂಬಿಸಿದ್ದಿದೆ. ಕೆಲಸಕ್ಕೆ ಸೇರಿದ ನಂತರ ವಾರಕ್ಕೊಮ್ಮೆ ರೈಲು ಪ್ರಯಾಣ ಮಾಮೂಲಾಗಿತ್ತು. ಇಂದು ಮತ್ತೊಮ್ಮೆ ವಿದ್ಯಾಭ್ಯಾಸಗಲ್ಲಿ ತೊಡಗಿ ಮತ್ತೊಮ್ಮೆ ರೈಲಿನ ಮೊರೆ ಹೋಗಿದ್ದೇನೆ. ಸಮಮನಸ್ಕರೊಂದಿಗಿನ ವಿಚಾರ ವಿನಿಮಯ, ಪುಟ್ಟ ಚಿನ್ನಾರಿಗಳೊಂದಿಗಿನ ಪ್ರೀತಿಯ ಒಡನಾಟ, ಹೀಗೆ ಪ್ರತಿ ಪ್ರಯಾಣದಲ್ಲೂ ನೆನಪಿನ ಜೋಳಿಗೆ ತುಂಬುತ್ತಲೇ ಇರುತ್ತದೆ. ಇನ್ನು ವೃದ್ಧರು ಸಿಕ್ಕಿದರೆಂದರೆ  ಲ್ಯಾಪ್-ಟಾಪಿನಲ್ಲಿರುವ ಯಾವುದಾದರೂ  ಅಣ್ಣಾವ್ರ ಸಿನಿಮಾ ಪ್ರದರ್ಶಿಸಿದೆನೆಂದರೆ, ಅವರ ಆನಂದ ಬಣ್ಣಿಸಲಸಾಧ್ಯ. ಇದರಿಂದಾಗುವ ನಷ್ಟ ರೈಲಿನ ಸಣ್ಣ ವ್ಯಾಪಾರಿಗಳಿಗೆ. ಪರಿಚಯವಿರುವ ಮದ್ದುರು ವಡೆ, ದೋಸೆ ವ್ಯಾಪಾರಿಗಳು, “ಸಾರ್, ನೀವ್ ಯಾವಾಗ್ಲೂ ನಮ್ ವ್ಯಾಪಾರಕ್ಕೆ ಕಲ್ ಹಾಕ್ತೀರ ನೋಡಿ.” ಎನ್ನುತ್ತಾ ಕದಲದೇ ನಿಲ್ಲುವರು. ಈ ಎಲ್ಲಾ ಪರಿಚಯಗಳು, ಒಡನಾಟಗಳು, ನಮ್ಮ ನಮ್ಮ ನಿಲ್ದಾಣಗಳು ತಲುಪಿದ ನಂತರ ಬರಿಯ ನೆನಪಾಗಿ ಉಳಿಯುವುದು ವಾಸ್ತವ.

 

– ವಿನಯ್ ಕುಮಾರ್, ಮೈಸೂರು.

 

 

8 Responses

  1. Niharika says:

    ರೈಲು ಪ್ರಯಾಣ ನಿಜಕ್ಕೂ ಚಂದ.. ಚೆನ್ನಾಗಿ ಅದನ್ನು ವಿವರಿಸಿದ್ದೀರಿ!

  2. Hema says:

    ಬರಹ ಬಹಳ ಚೆನ್ನಾಗಿದೆ. ಮೈಸೂರು-ಬೆಂಗಳೂರು ನಡುವೆ ರೈಲಿನಲ್ಲಿ ಹಲವು ಬಾರಿ ಪ್ರಯಾಣಿಸಿರುವ ನನಗೆ ನಿಮ್ಮ ಲೇಖನವು ಈ ದಾರಿಯ ರೈಲಿನಲ್ಲಿ ಸಿಗುವ ‘ಮದ್ದೂರು ವಡೆ ‘ಯಷ್ಟೇ ರುಚಿಯೆನಿಸಿತು!

  3. Sneha Prasanna says:

    ವಾವ್…ಒಳ್ಳೆಯ ಅನುಭವ.. ಉತ್ತಮವಾದ ನಿರೂಪಣೆ ಹೀಗೆ ಬರೆಯುತ್ತಿರಿ .

  4. ಹೌದು ! ನಾನೂ ಹೆಚ್ಚಾಗಿ ರೈಲು ಪ್ರಯಾಣ ವನ್ನೇ ಮಾಡುವುದು ! ರೈಲಿನಲ್ಲಿ ಮಾರುವ ಮಲ್ಲಿಗೆ ಹೂವಿನ ಪೊಟ್ಟಣ ವನ್ನು ಒಮ್ಮೆ ಖರೀದಿಸಿ ಬ್ಯಾಗಿನಲ್ಲಿ ಇಡುವಾಗ ,ಹಿರಿಯರೊಬ್ಬರು ಅದರಲ್ಲಿ ಬಿಡಿ ಮಲ್ಲಿಗೆಯ ಜೊತೆ ದಾರವೂ ಇದೆ ನೋಡಿ ಎಂದರು ! ಇದನ್ನು ಗಮನಿಸದೆ ಇದ್ದ ನನಗೆ ,ಹೂವು ಕಟ್ಟುತ್ತಾ ,ದಾರಿ ಸಾಗಿದ್ದೇ ಗೊತ್ತಾಗಲಿಲ್ಲ ! ಒಂದು ಅದ್ಭುತ ಅನುಭವ !
    ಹಾಗೇ ನಿತ್ಯವೂ ಪ್ರಯಾಣಿಸುವ ಕೆಲವರು ,ತಮಗೆ ಮತ್ತು ತಮ್ಮ ಗೆಳಯರಿಗೆ ಜಾಗ ಹಿಡಿದು ,ಇಸ್ಪೀಟು ಆಟ ಆಡುತ್ತಾ ,ಹೆಂಗಸರು ಮತ್ತು ಮಕ್ಕಳಿಗೆ ಕಿರಿ ಕಿರಿ ಉಂಟುಮಾಡುತ್ತಾರೆ 🙁

  5. ರೂಪೇಶ್ ಹಿರಿಯಣ್ಣ says:

    ಬಹಳ ಚೆನ್ನಾಗಿದೆ

  6. sowbhagya says:

    ವೆರಿ ನೈಸ್ article

  7. ಸವಿತ.ಎಂ says:

    ನಿರೂಪಣೆ ಬಹಳ ಚೆನ್ನಾಗಿದೆ, ರೈಲು ಪ್ರಯಾಣ ವಿಶಿಷ್ಟ ಅನುಭವ ನೀಡುತ್ತದೆ, ಎಲ್ಲ ವಯೋಮಾನದವರ ಮನಸ್ಥಿತಿಗಳನ್ನು ಅರ್ಥೈಸಿಕೊಂಡು ನಿಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿರುವ ನಿಮ್ಮ ಬರವಣಿಗೆ ಅಭಿನಂದನೀಯ, ಶ್ಲಾಘನೀಯ

Leave a Reply to sowbhagya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: