ಹನಿ…ಹನಿ….ಕವನ
1. ಅಂದು – ಇಂದು
ಅಂದು ನಾನು ಹೂ
ನನ್ನವರು ದುಂಬಿ
ಇಂದು ನಾನು ಬಾಡಿದ ಹೂ. . .
ನನ್ನವರು ಪರಾವಲಂಬಿ.
2. ಕಾಲ
ನಿನ್ನ ನೆನಪುಗಳ ತತ್ತಿಗಳ
ಎನ್ನೆದೆಯ ಗೂಡಲ್ಲಿ ಬಚ್ಚಿಟ್ಟುಕೊಂಡು
ಜೀವಂತವಾಗಿರಿಸಿದ್ದೆ
ಕೊಟ್ಟು ಪ್ರೀತಿಯ ಕಾವು . . .
ಆದರೇನು ಮಾಡಲಿ . . .
ನುಂಗುತ್ತಿದೆ ಒಂದೊಂದೇ ತತ್ತಿಗಳ
ಕಾಲವೆಂಬ ಹೆಬ್ಬಾವು
3. ದಾಹ
ಕೊನೆಗೂ ಅರಿಯಲೆ ಇಲ್ಲ
ನೀ ನನ್ನ ದಾಹ. .
ನಿನ್ನ ಪ್ರೀತಿಯ
ಗುಟುಕೊಂದೇ ಸಾಕಿತ್ತು
ಬದುಕಿರಲು ಈ ದೇಹ. . .
4. ಗು(ಕು)ಳಿ
ನನ್ನಾಕೆ ಮುಗುಳು ನಕ್ಕರೆ
ತುಂಬಾ ಲಕ್ಷಣ
ಕಾರಣ . . .
ಕೆನ್ನೆಯ ಮೇಲಿನ ಗುಳಿ . . .
ಆದರೆ . . .
ತುಟಿಯರಳಿಸಿ ನಕ್ಕರೆ
ದಂಗಾಗುವುದು ಒಂದು ಕ್ಷಣ
ಕಾರಣ . . .
ಬಾಯಿ ತುಂಬಾ ದಂತ ಕುಳಿ.
5.ಮಾತು
ಖಡ್ಗಕ್ಕಿಂತ ಹರಿತವಾಯಿತಲ್ಲ
ನಿನ್ನ ಮಾತು. . .
ಗಾಯಗೊಳಿಸದೆ ತನುವ
ಘಾಸಿಗೊಳಿಸಿತಲ್ಲ ಮನವನ್ನಿರಿದು.
6.ರಕ್ತ-ಕಣ್ಣೀರು
ಕಣ್ಣೀರು . . .
ನಿನ್ನ ಚುಚ್ಚು ಮಾತಿನಿಂದ
ಗಾಯಗೊಂಡ ಮನಸ್ಸಿನಿಂದ
ತೊಟ್ಟಿಕ್ಕುವ
ನೆತ್ತರು. . . .
7.ಕಠಿಣ
ಒಪ್ಪಿಕೊಳ್ಳುತ್ತೇನೆ
ನನ್ನ ಮನಸ್ಸು ಕಠಿಣ
ಗಟ್ಟಿ ಮಂಜುಗಡ್ಡೆ
ನಿನ್ನ ಬಿಸಿಯಪ್ಪುಗೆಯೊಂದೇ ಸಾಕು
ಅದು ಕರಗಲು
ನೀರಾಗಿ ಹರಿಯಲು
-ಜಿ.ಎನ್.ಡಿ.ರಾವ್
03/02/2014
ಒಳ್ಳೆಯ ಕವಿತೆಗಳು.ಇನ್ನೂ bareyiri