ಯಕ್ಷ-ಗಾನ-ಸಿರಿ

Spread the love
Share Button
Shruti

ಶ್ರುತಿ ಶರ್ಮಾ, ಕಾಸರಗೋಡು.

 

ಬಂದಳು.. ನಸುನಗೆಯಿಂದ…!” ಸ್ಪಷ್ಟ, ಸ್ವಚ್ಛ ಶುದ್ಧ ‘ಅಭೇರಿ’ಯ ಅಂತರಂಗವನ್ನೇ ಕಲಕುವ ಆರಂಭವು ’ಯಕ್ಷ-ಗಾನ ವೈಭವ’ದ ಸಭೆಯನ್ನು ಒಮ್ಮಿಂದೊಮ್ಮೆಗೇ ತಟಸ್ಥವಾಗಿಸಿತ್ತು, ಆಳ್ವಾಸ್ ನುಡಿಸಿರಿಯ ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ! ಜೊತೆಗೆ ಸುತ್ತ ನಾಲ್ಕಂಕದ ನಾಲ್ಕೂ ಮಹಡಿಯ ಕಟ್ಟಡದಲ್ಲಿ ಸುತ್ತುತ್ತಿದ್ದವರು ಅಲ್ಲಲ್ಲೇ ಸ್ಥಬ್ಧವಾಗಿ ನಿಂತು ವೀಕ್ಷಿಸತೊಡಗಿದುದರೊಡನೆ ಸಭೆ ಪೂರ್ಣವಾಗಿ ಭಾಗವತರ ವಶಕ್ಕೊಳಗಾಗಿತ್ತು. ಪಟ್ಲಗುತ್ತು ಸತೀಶ್ ಶೆಟ್ಟರ ಕಂಚಿನ ಕಂಠದ ಅದ್ಭುತ ಹಾಡುಗಾರಿಕೆಯಲ್ಲಿ ಸುಂದರ ಸುಮಧುರ ಯಕ್ಷಗಾನ ಪದವೊಂದು ಸಾಹಿತ್ಯದ ಶೃಂಗಾರ, ರಾಗದ ಕರುಣ ರಸಗಳಿಂದ ಮಿಳಿತವಾಗಿ ಕೇಳುಗರನ್ನು ತಲ್ಲೀನರಾಗಿಸುವಲ್ಲಿ ಯಶಸ್ವಿಯಾಗಿತ್ತು.

ಕಾರ್ಯಕ್ರಮ ಮುಂದುವರಿದಂತೆ ಹೌಸ್ಫ಼ುಲ್ ಆದ ಸಭೆಯಲ್ಲಿ ಕುರ್ಚಿಗಾಗಿ ಪರದಾಡುವ ಕಷ್ಟ ತೆಗೆದುಕೊಳ್ಳದೆ ನಿಂತೇ ವೀಕ್ಷಿಸುತ್ತಿದ್ದ ಕಲಾರಾಧಕರಲ್ಲಿ ದೊಡ್ಡ ಭಾಗ ಯುವಜನತೆ. ಗಂಡುಮೆಟ್ಟಿನ ಕಲೆಯ, ಅದೂ ತೆಂಕು ತಿಟ್ಟಿನ ಭರದ ಗಾನದ ಜೊತೆ ಶಾಸ್ತ್ರೀಯ ಸಂಗೀತದ ಪಿಟೀಲು, ಮೃದಂಗ ಹಾಗೂ ವೇಣುವಾದನ ಜೊತೆಗೂಡಿದ್ದು ವಿಶೇಷವಾಗಿತ್ತು. ಹೆಸರಾಂತರಾದ ಶ್ರೀ ಬಲಿಪ ನಾರಾಯಣ ಭಗವತರು, ಶ್ರೀ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಶ್ರೀ ಪಟ್ಲಗುತ್ತು ಸತೀಶ್ ಶೆಟ್ಟಿ ಇವರ ಭಾಗವತಿಕೆಯೊಂದಿಗೆ ಚೆಂಡೆಯಲ್ಲಿ ಶ್ರೀ ಚೈತನ್ಯ ಪದ್ಯಾಣ, ಮದ್ದಳೆಯಲ್ಲಿ ಶ್ರೀಯುತ ಪದ್ಮನಾಭ ಉಪಾಧ್ಯಾಯ, ಚಕ್ರತಾಳದಲ್ಲಿ ಶ್ರೀ ಪೂರ್ಣೇಶ್ ಆಚಾರ್ಯ ಅವರ ಸಹಕಾರವಿತ್ತು. ಮೃದಂಗದಲ್ಲಿ ಶ್ರೀ ಬಿ. ಮುರಳೀಧರ ರಾವ್, ವಯೋಲಿನ್ನಲ್ಲಿ ಶ್ರೀ ರವಿ ಕುಮಾರ್ ಮೈಸೂರು, ಕೊಳಲಿನೊಂದಿಗೆ ಶ್ರೀ ಲೋಕೇಶ್ ಸಲಿಯಾನ್ ಇವರು ಸಾಥ್ ನೀಡಿದ್ದರು.

ತಮ್ಮ ತಮ್ಮ ಜಂಗಮವಾಣಿಗಳನ್ನು ಹೊರತೆಗೆದು ರೆಕಾರ್ಡಿಂಗ್ ಬಟನ್ ಅದುಮಿಡುಡುತ್ತಿದ್ದ ಸಭಿಕರಲ್ಲಿ ಹಾಡುಗಳನ್ನು ಮತ್ತೆ ಮತ್ತೆ ಆಸ್ವದಿಸಬೇಕೆಂಬ ಆಸೆಯ ಕಲಾವಂತಿಕೆಯ ಜೊತೆಗೆ ಎಷ್ಟರ ಮಟ್ಟಿಗಿನ ಕಲಾರಾಧಕತೆಯಿತ್ತೆಂಬುದು ತಿಳಿಯುತ್ತದೆ. ’ಬಂದಳು.. ನಸುನಗೆಯಿಂದ.. ಓಲಾಡಿ…” ಮುಂದುವರಿದಂತೆ  ಗಮನೀಯವೆನಿಸಿದ್ದು ಗಾಯನದಲ್ಲಿದ್ದ ರಾಗದ ಶುದ್ಧಭಾವ! ಸಾಹಿತ್ಯ ಸ್ಪಷ್ಟ-ಸ್ಪಷ್ಟ! ತೆಂಕುತಿಟ್ಟಿನ ಅಬ್ಬರತೆಯಲ್ಲಿ ಭಾವವು ಮಸುಕಾಗಲಿಲ್ಲ, ಪಿಟೀಲು, ಕೊಳಲಿನ ಸಾಥ್ ಪರಿಪೂರ್ಣವಾಗಿಸಿದ ಶುದ್ಧ ’ಯಕ್ಷ-ಗಾನ’ ಅಪೂರ್ವವಾಗಿ ಮೂಡಿ ಬಂದಿತ್ತು. ಶಿಳ್ಳೆಹೊಡೆಯಲು ತಿಳಿಯದ ಕೆಲ ಅಜ್ಜಂದಿರು ಪಕ್ಕದಲ್ಲಿದ್ದ ಹುಡುಗರನ್ನು ತಟ್ಟಿ ಹುರಿದುಂಬಿಸಿ ಶಿಳ್ಳೆಹೊಡೆಸಿ ಚಪ್ಪಾಳೆ ಹಾಕುತ್ತಿದ್ದ ದೃಶ್ಯವು ನಿಜಕ್ಕೂ ವಿಶೇಷ! ಅದು ’ಯಕ್ಷ-ಗಾನ-ವೈಭವ’ ಜನದ ಮನ ಮುಟ್ಟಿದ್ದು ಸಾರುತ್ತಿತ್ತು.

ಮಂದ್ರದ ರಿಷಭದಿಂದ ತೊಡಗಿ ತಾರಕದ ನಿಷಾದ ದವರೆಗೆ ತಡೆಯಿಲ್ಲದೆ ಮನದುಂಬಿ ಭಾಗವತರು ಗಾನಾಮೃತವನ್ನು ಹರಿಸುತ್ತಿದ್ದರೆ, ಪಕ್ಕವಾದ್ಯಗಳು ಅದಕ್ಕೆ ತಕ್ಕುದಾಗಿ ಪರಸ್ಪರ ಸಂಭಾಷಣೆಯಲ್ಲಿ ತೊಡಗಿದಂಥ ಹೊಂದಾಣಿಕೆಯಿತ್ತು.

Yakshasiri

 

ಶ್ರೀ ವಾದಿರಾಜ ಕಲ್ಲೂರಾಯರ ಸುಂದರ ನಿರೂಪಣೆಯೊಂದಿಗೆ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯೆನಿಸಿದ್ದು ’ಕುಂಭಕರ್ಣ ಕಾಳಗ’ದ ಕುಂಭಕರ್ಣನನ್ನು ಎದ್ದೇಳಿಸುವ ಹಾಡು. ಇದು ಶ್ರೀ ಬಲಿಪ ನಾರಾಯಣ ಭಾಗವತರಿಂದಲೇ ಪ್ರಸಿದ್ದಿಪಡೆದ ಪದವಾಗಿದ್ದು ಅವರೇ ಪ್ರಸ್ತುತಿಗೈದುದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿತ್ತು.

ಮುಂದೆ ಶ್ರೀ ಪಟ್ಲಗುತ್ತು ಸತೀಶ್ ಶೆಟ್ಟಿ ಹಾಗೂ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರು ಜೊತೆಯಲ್ಲ್ಲಿ ಪ್ರಸ್ತುತಿಗೊಳಿಸಿದ ಮೋಹನ ರಾಗದ ಹಾಡು ’ಆ ಸಮಯದಲಿ…’ ವಿಶಿಷ್ಟವಾದ ಸ್ವರ-ಗಮಕ ಪ್ರಯೋಗಗಳೊಂದಿಗೆ ಮೂಡಿಬಂತು. ವೇದಿಕೆಯಲ್ಲಿ ವಿಶಿಷ್ಟ ಪ್ರತಿಭಾವಂತ ಕಲಾವಿದರೆಲ್ಲರೂ ಸೇರಿ ಗಾಯನಕ್ಕೆ ಮೆರುಗಿತ್ತರೆ, ಅದ್ಭುತವೆಂದೆನಿಸಿದ ಆ ಪ್ರಸ್ತುತಿಗೆ ತಲೆದೂಗದವರೇ ಇಲ್ಲ. ಬೃಂದಾವನ ಸಾರಂಗದಕನ್ನೇ ಸುಗುಣ ಸಂಪನ್ನೆ’, ಹಾಸ್ಯ ರಸ ಪ್ರಧಾನವಾದ ’ಬೇಡಮ್ಮಾ ನಮಗೀ ಕಾಡ ನೌಕರಿ..’, ಪ್ರಸಿದ್ಧ ವಿದ್ಯುನ್ಮತಿ ಕಲ್ಯಾಣವಾಸಂತ ರಾಗದ ’ಹರಿಯ ನೇತ್ರಗಳೆರಡು … ’ ಮತ್ತೆ ಸಭೆಯನ್ನು ರಾಗ ಸಾಗರದಲ್ಲಿ ತೇಲಾಡಿಸಿತು, ಕೃಷ್ಣಾರ್ಜುನ ಕಾಳಗದ ’ಹೋಯಿತು ಹೊತ್ತು ನೋಡು ಭಾವಯ್ಯ..” ಬಲಿಪ ಶೈಲಿಯಲ್ಲಿ ಕೇಳಿ ಆನಂದಿಸಿದಾಗ ಕರತಾಡನದ ಸದ್ದು ಮುಗಿಲಾಚೆ!

ಕಾರ್ಯಕ್ರಮ ಮುಗಿದಾಗ ವೇದಿಕೆಯ ಮೇಲಿನ ಘಟಾನುಘಟಿಗಳ ತಂಡವು ಪೂರ್ಣವಾಗಿ ರಾಗ ಹಾಗೂ ನವ ರಸಗಳ ಭಾವವನ್ನು ಕೇಳುಗರ ಮನಮುಟ್ಟಿಸುವಲ್ಲ್ಲಿ ಸಫಲರಾಗಿದ್ದರೆ ಸಭಿಕರು ನಾವು, ಅಪೂರ್ವ ಅಮೂಲ್ಯವಾದ ಅಷ್ಟು ಹೊತ್ತಿನ ಕಾರ್ಯಕ್ರಮವನ್ನು ಮುಂದಕ್ಕೆ ಮೆಲುಕು ಹಾಕಲು ಧಾರಾಳವಾಗುವಷ್ಟು ರೆಕಾರ್ಡಿಂಗ್ ಗಳನ್ನು ಮಾಡಿಕೊಂಡ ತೃಪ್ತಿಯಿಂದ ಮೇಲೆದ್ದೆವು!

– ಶ್ರುತಿ ಶರ್ಮಾ, ಕಾಸರಗೋಡು.

12 Responses

 1. jayashree b kadri says:

  Oh so nice Shruti. Excellent !

 2. ಉತ್ತಮ ಮಾಹಿತಿಯ ಲೇಖನ

 3. Guru Murthy says:

  Nice mam

 4. Dharanesha H K Bsnl says:

  nice

 5. savithrisbhat says:

  ಆಹಾ ಬರಹವೂ ಅಸ್ಟೆ ಚೆನ್ನಾಗಿ ಮೂ ಡಿಬ೦ದಿದೆ

 6. krishnaveni.kidoor says:

  ನಿಮ್ಮ ವಿವರಣೆ ಓದಿದಾಗ ನಾನೇನು ಕಳೆದುಕೊಂಡೆ ಅಂತ ತುಂಬ ಫೀಲ್ ಆಯಿತು. ಚೆಂಡೆಯವರು ನನ್ನ ಆತ್ಮೀಯರು .ಪಟ್ಲ ನನ್ನೂ ರಿನವರು . ನಾನೂ ಪದ್ಯಾಣದ ನೀರು ಕುಡಿದು ಬೆಳೆದಿದ್ದು. ಅತ್ತ್ಯುತ್ತಮ ಕಾರ್ಯಕ್ರಮ .

 7. Snehaprasan S Sp says:

  ಉತ್ತಮ ಬರಹ . ಕನ್ನಡ ಪದಗಳ ಬಳಕೆ ಸೊಗಸಾಗಿದೆ.

 8. Nayana Bhide says:

  good…liked it.

 9. Shruthi Sharma says:

  ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ವಂದನೆಗಳು..! 🙂

 10. H.S.VATHSALA says:

  ಕನ್ನಡ ಭಾಷೆಯ ಅಭಿಮಾನಿಯಾದ ನಾನು ನಿನ್ನ ಪದಪುಂಜ ಹೊಸೆಯುವ ಸಾಮರ್ಥ್ಯ ಹಾಗು ಸಂಗೀತ-ಸಾಹಿತ್ಯ ಅಭಿರುಚಿ ನಿಜಕ್ಕೂ
  ಶ್ಲಾಘನೀಯ

  • Shruthi Sharma says:

   ನಿಮ್ಮ ಪ್ರತಿಕ್ರಿಯೆ ಓದಿ ಸಂತೋಷವಾಯಿತು.. ಓದಿ ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು.. 🙂

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: