ಸದಾ ಕಾಡುವ ಈ ವರ್ಷದ ಕೊನೆಗಳಿಗೆಯಲಿ…

Share Button

ಹಾಗಯೇ ಸುಮ್ಮನೆ ಹೊಸ‌ವರ್ಷದ ಹೊಸ್ತಿಲಲಿ…ಆಗೇಯೇ ತಾನೇ 2020 ರ ಕೊರೋನಾ ಮಹಾಮಾರಿಯ ಸೆರಮೆನೆಯಿಂದ ಬಿಡುಗಡೆ ಪಡೆದು ಕಲವೇ ದಿನಗಳಾಗಿದ್ದವು. ಅಷ್ಟರಲ್ಲಿ ಹೊಸವರ್ಷದ ಆಗಮನ. ಒಲ್ಲದ ಮನಸ್ಸಿನಿಂದ 2021 ನ್ನು ಬರಮಾಡಿಕೊಳ್ಳಬೇಕಿತ್ತು. ಆದರೂ ಕಾಲ ಎಂದಿಗೂ ನಿಲ್ಲುವುದಿಲ್ಲವೆಂಬ ವೇದಾಂತದೊಂದಿಗೆ ಈ ವರ್ಷದ ಆಗಮನ ಆಗಿಯೇ ಹೋಯಿತು. ಎಷ್ಟೋ ತಿಂಗಳುಗಳಿಂದ ಅಂದರೆ  ಸುಮಾರು  ಎಂಟು ತಿಂಗಳುಗಳಿಂದ ಮನೆಯಲ್ಲಿಯೇ ಕುಳಿತು ಕೊರೋನಾ ಮಹಾಮಾರಿಯ ಆರ್ಭಟವನ್ನು ರಕ್ಕಸರಂತೆ ಕಾಣುವ ಸುದ್ದಿ ವಾಹಿನಿಗಳನ್ನು ನೋಡಿ ನೋಡಿ ಬೇಸರ ಒಂದು ಕಡೆಯಾದರೆ ಅದರಿಂದ ಪರಿತಪಿಸಿದ ಜನರ ಆರ್ತನಾದ ನೋಡುತ್ತಿದ್ದರೆ ಮನಸ್ಸು ಭಾರವಾಗುತ್ತಿತ್ತು. ಎಷ್ಟೋ ಜನರು ತಮ್ಮ ಮನೆಯ ಆಧಾರಸ್ತಂಭದಂತಿದ್ದ ಅಪ್ಪ ಅಮ್ಮ, ಅಣ್ಣ- ತಮ್ಮ, ಅಕ್ಕ-ತಂಗಿ, ಪತಿ-ಪತ್ನಿ, ಸ್ನೇಹಿತರನ್ನು ಕಳೆದುಕೊಂಡಾಗ‌ ಅವರನ್ನು ನೋಡುವ ಪರಿಸ್ಥಿತಿಯಂತು ಹೃದಯವಿದ್ರಾವಕದ ಸ್ಥಿತಿಯಂತೂ ಹೇಳಲೂ ಅಸಾಧ್ಯವೇ..

ಇಲ್ಲೇ ಎಲ್ಲೋ ಹೊರಗಡೆ ಹೋಗಿಬರುತ್ತೇನೆಂದು ಹೇಳಿ ಸುಮ್ಮನೇ ಆಸ್ಪತ್ರೆಗೆ ಹೋಗಿ ಸ್ಬಲ್ಲ ಯಾಕೋ ಜ್ವರ , ಎದುಸಿರಾಟ, ನಾಲಿಗೆಗ ರುಚಿ ಸಿಗುತ್ತಿಲ್ಲವೆಂದು ಹೇಳಿದರೆ ಸಾಕು. ಅವರಿಗೆ ಕೊರೋನಾ ಸರ್ಟಿಫಿಕೇಟ್ ಕಟ್ಟಿಟ್ಟ ಬುತ್ತಿ. ಅಷ್ಟೇ ಅಲ್ಲದೇ  ಯಾರೋ ಕಳ್ಳಕಾಕರನ್ನು ಹುಡುಕಿಕೊಡು ಬರುತ್ತಿರುವ ಪೋಲಿಸರಂತೆ ಅವರ ಮನೆಗೆ ಮುಸುಕುದಾರಿಯಾದ ಸುಮಾರು ಐದುರಿಂದ ಹತ್ತು ಜನ ವೈದ್ಯರ ತಂಡ ಬೇಟಿ ಕೊಡುವಾಗ ಸುತ್ತಮುತ್ತಲಿನ ಮನೆಯವರ ಆತಂಕ ಹೇಳತೀರದು. ಅವರು ಆಗಮನವಾಗುತ್ತಿರುವಾಗಲೇ ಯಾರು ಮನೆಯ ಹತ್ತಿರ ಬರಬೇಡಿ ದೂರ ನಿಲ್ಲಿ …ನಿಮ್ಮ ಮನೆಗೆ ಹೋಗಿ ಎಂದಾಕ್ಷಣ ಅಲ್ಲಿ ಇಲ್ಲಿ ಮನೆಯ ಬಾಗಿಲು ಕಿಟಕಿಗಳ ಇಕ್ಕೆಲಗಳಲ್ಲಿ ಆಗಂತುಕರ ರೀತಿ ನೋಡುವ ಪಿಳಿ ಪಿಳಿ ಕಣ್ಣುಗಳು ಹೊಳೆಯುತ್ತಿದ್ದವು. ಅದಾದ ಮೇಲೆ ಕೊರೋನಾ ರೋಗಿಯಿದ್ದಾರೆಂಬ ಎಚ್ಚರಿಕೆಯ ಸಂದೇಶವನ್ನು ಸಾರುವ ಬಿಳಿಹಾಳೆಯ ಮೇಲೆ ಎದ್ದು ಕಾಣುವಂತೆ ದಪ್ಪ ದಪ್ಪನಾದ ಅಕ್ಷರಗಳಲ್ಲಿ ಬರೆದು ಮನೆಯ ಹೆಬ್ಬಾಗಿಲಿಗೆ ಅಂಟಿಸಿಬಿಟ್ಟರಂತೂ ಆ ಮನೆಯ ಕಡೇ ಅಕ್ಕ ಪಕ್ಕದ ಮನೆಯವರಿರಲಿ ಅಕ್ಕ ಪಕ್ಕದ ಹಳ್ಳಿಯವರು ಕೂಡ ಯಾರು ತಿರುಗಿ ನೋಡುತ್ತಿರಲಿಲ್ಲ.

ಚಿಕಿತ್ಸೆ ಪೂರ್ಣಗೊಂಡು ಕೊರೋನಾದಿಂದ ಮುಕ್ತವಾದರೂ ಕೊರೋನಾದಿಂದ ಮರಣ ಹೊಂದಿದವರ ಸಂಖ್ಯೆಯೇ ಅಧಿಕವಾದಂತೆ ಭಾಸವಾಯಿತು. ಅದು ಜನರಿಗೆ ಸರಿಯಾದ ತಿಳುವಳಿಕೆಯನ್ನು ಕೊಡುವಲ್ಲಿ ಸರ್ಕಾರದ ವಿಫಲತೆಯೋ ಅಥವಾ ನಮ್ಮ ಜನಗಳ ಹುಂಬತನವೋ ಅರಿವಾಗಲೇ ಇಲ್ಲ. ಏಕೆಂದರೆ ಮನೆಯಿಂದ ಹೊರಗಡೆ ಹೋದರೆ ಕೊರೋನಾ ಬಂದುಬಿಡುತ್ತದೆ ಎಂಬ ಭಯದೊಂದಿಗೆ ಮನೆಯಲ್ಲಿಯೇ ಜೈಲುವಾಸಿಯಾದವರಿಗೆ ಸ್ವಲ್ಪವೇ ಜ್ವರ , ಉಸಿರಾಟದ ತೊಂದರೆ ಬಂದಾಗ ಅದನ್ನು ಎದುರಿಸುವ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಯಾರು ಕೂಡ ಮಾಡಲ್ಲಿಲ್ಲ. ಸ್ವಲ್ಪವೇ ಹುಷಾರು ತಪ್ಪಿದರೂ ಹದಿನೈದು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕೊರೋನಾ ರೋಗಿಗಳ   ಮುಂಜಾಗ್ರತೆಗಾಗಿ ನಿರ್ಮಿಸಿದ ತಾಣಗಳಲ್ಲಿ ಕಾಲ ಕಳೆಯಬೇಕಿತ್ತು. ಜೊತಗೆ ದೈನಂದಿನ ನ್ಯೂಸ್ ವಾಹಿನಿಗಳಲ್ಲಿ ಬರುತ್ತಿದ್ದ ವಿಷಯಗಳನ್ನು ನೋಡಿ  ಅಲ್ಲಿ ಚಿಕಿತ್ಸೆ ಇಲ್ಲ ಇಲ್ಲಿ ಬೆಡ್ ಇಲ್ಲ, ಎಲ್ಲ ಇದ್ದರೂ ಈ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳ ಇಲ್ಲ ಎಂಬಂತ ವಿಷಯಗಳಿಂದ ಜರ್ಜರಿತವಾದ ಮನಸ್ಸು, ಈ ಕೊರೋನಾಕ್ಕಿಂತ ಅದರಲ್ಲಿದ ಭಯಕ್ಕೆ ಎಷ್ಟೋ ಜನರು ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡರು.

ಸರಿಯಾಗಿ ಮಾಸ್ಕ್ ಹಾಕಿಕೊಳ್ಳಿ, ಯಾರೊಂದಿಗೆ ಹೆಚ್ಚಿನ ಜನರು ಗುಂಪು ಸೇರಬೇಡಿ , ಕೈಗಳನ್ನು ಆಗಿಂದಾಗೆಯೇ ಸ್ವಚ್ಚಗೊಳಿಸುತ್ತಿರು ಎಂದು ಉದ್ದುದ್ದ ಭಾಷಣಗಳನ್ನು ಅತಿ ಎತ್ತರದ ಮನುಷ್ಯರು ಎಂದುಕೊಂಡವರಿಂದ ಕೊಡಿಸಿದ್ದಾಯಿತು. ಆದರೆ ಒಂದು,  ಎರಡು ತಿಂಗಳುಗಳು ಕಳೆದವು. ಅಂದೇ ದುಡಿದು ಹಸಿವನ್ನು ನೀಗಿಸ ಬದುಕನ್ನು ಸಾಗಿಸುತ್ತಿದ್ದವರ ಬದುಕು ಅಸಹನೀಯವಾಯಿತು. ಎಲ್ಲಿ ಹೋದರೂ ಕೆಲಸವಿಲ್ಲ. ಯಾರು ಯಾರನ್ನೂ ಕೇಳಿದರೂ ಸಹಾಯ ಮಾಡುವ ಮನಸ್ಸಿದ್ದರೂ ಮುಂದೆ ಎಷ್ಟು ದಿನಗಳು ಈ ಕೊರೋನಾದಿಂದ ಬಿಡುಗಡೆ ಎಂಬ ಮಾಹಿತಿಯ ಕೊರತೆಯಿಂದ ತಮ್ಮ ತಮ್ಮಲ್ಲಿರುವ ಸಹಾಯದ ಮನೋಭಾವವನ್ನು ಸಹ ಬದಿಗಿಡುವ ಪರಿಸ್ಥಿತಿ ಉಂಟಾಯಿತು. ಆದರೂ ಮಹಾ ಪುರುಷರೆಂದು ಕೊಂಡವರು ತಮ್ಮ ಕೈಲಿಂದ ಎಷ್ಟು ಸಹಾಯ ಮಾಡಬಹುದು ಅದಕ್ಕಿಂತ ನೂರ ಪಟ್ಟು ಹೆಚ್ಚಾಗಿಯೇ ಸಹಾಯ ಮಾಡಿದ್ದಾರೆಂಬ ಪ್ರತೀತಿ ಉಳಿಯಿತು. ಆದರೆ ಈ ಸಹಾಯ ಎಷ್ಟರವರೆಗೆ ಅಲ್ಲವೆ. ಸಹಾಯ ಕೊಡುವವನಿಗೆ ಒಂದು ಮಿತಿ ಇರುತ್ತದೆ ನಂತರ ಅದೇ ದಾರುಣ ಬದುಕು.

ಹೀಗಾಗುವಷ್ಟರಲ್ಲಿ 2020 ರ ಕೊರೋನಾ ಮಾರಿಯಿಂದ ಮೊದಲ ಮುಕ್ತಿಗೆ ಹೊಸ ವರುಷದ ಆಗಮನ. ಮನೆಯಲ್ಲಿಯೇ ಸುಮಾರು ತಿಂಗಳು ಕಾಲ ಕಳೆದು ಆಗ ತಾನೇ ಕಾಲೇಜಿಗೆ ಆಗಮಿಸಿದರಿಂದ ಎಲ್ಲರ ಮೊಗದಲ್ಲಿ ಸಂತೋಷವೋ ಸಂತಸ. ಆದರೆ ಕಾಲೇಜಿನಲ್ಲಿ ಎಷ್ಟೋ ಚಿರಪರಿಚಿತವಾಗಿದ್ದ ಮನಸ್ಸುಗಳು ಕೂಡ ಈ ಮಾಹಮಾರಿಗೆ ಬಲಿಯಾಗಿದ್ದವು ಎಂಬ ದುಃಖ ಅರಗಿಸಿಕೊಳ್ಳಲಾಗಲಿಲ್ಲ ಎಂಬುದು ಕೊರೋನಾ ಮಾರಿಯ ಮುಕ್ತಿಯನ್ನು, ಹೊಸ ವರ್ಷದ ಆಗಮನವನ್ನು ನುಂಗಿ ಹಾಕಿದವು ಎಂದು ಹೇಳಿದರೆ ಅತಿಶಯೋಕ್ತಿ ಎನಿಸುವುದಿಲ್ಲ.‌

ಆದರೂ ಬಿಡುಗಡೆ ಪಡೆದು ಕಾಲೇಜಿಗೆ ಬಂದರೇ ಅದೇ ಪ್ರೋಗ್ರೇಸ್ ರೀಪೋರ್ಟ ರಂಪಾ ರಾಮಾಯಾಣ ಅದರೊಂದಿಗೆ ಹತ್ತಾರು ರೀತಿಯ ಅರ್ಜಿಗಳನ್ನು ಸಿದ್ದಪಡಿಸಿ ಮೇಲ್ವಿಚಾರಕರ ಬಳಿ ಸಹಿ ಪಡೆದು ಸಲ್ಲಿಸುವಷ್ಟರಲ್ಲಿ 2021 ರ ಜನವರಿಯು ಕಳೆದು ಹೋಗಿತ್ತು.ಇನ್ನೇನು ಪೆಬ್ರವರಿಗೆ ಕಾಲಿಟ್ಟು ಹದಿನೈದು ದಿನಗಳಾಗಿರಬೇಕು. ನ್ಯೂಸ್ ಚಾನೆಲ್ಗಳಲ್ಲಿ ಅದೇ ಮುಖ್ಯ ಸುದ್ದಿ… ಯಾವಾಗ ಬೇಕಾದರೂ ಎರಡನೇ ಲಾಕ್ಡೌನ್ ಘೋಷಿಸಬಹುದು ಜನಗಳೇ ಎಚ್ಚರ ಎಂಬದು. ಅಲ್ಲಿಗೆ 2021 ಕ್ಕೂ ಕೊರೋನಾ ಮಹಾಮಾರಿಯ ಶಾಪ ತಟ್ಟಿತು ಎಂದುಕೊಳ್ಳುವಷ್ಟರಲ್ಲಿ ಮಾರ್ಚ್ 15 ಕ್ಕೆ ಎಲ್ಲ ರೀತಿಯ ಕಾಲೇಜುಗಳನ್ನು ಮುಚ್ಚಬೇಕೆಂಬ ನಿಯಮದೊಂದಿಗೆ ಕಾಲೇಜಿಗೆ ಬೀಗ ಬಿದ್ದಿತು. ಮತ್ತೊಂದು ಭಾರಿ ಮನೆಯಲ್ಲಿಯೇ ಇರುವ ಪರಿಸ್ಥಿತಿ. ಈ ಕಡೆ ಕೊರೋನಾ ಚಿಂತೆಯಾದರೆ ಮತ್ತೊಂದು ಕಡೆ ನಮ್ಮ ಶೈಕ್ಷಣಿಕ ವರ್ಷಗಳ ಕಳೆಯುತ್ತಿರುವ ಚಿಂತೆ. 2020 ಕ್ಕೂ ಮೊದಲೇ ನಮ್ಮ ಶಿಕ್ಷಣವನ್ನು 2021 ಜನವರಿಗೆ ಮುಗಿಸಲೇ ಬೇಕೆಂದು ಶಪಥ ಮಾಡಿದ್ದರೂ ಅದೂ ಮುಗಿಯುವುದು ಆಮೇಲೆ ಆದರೆ ಅದಕ್ಕೆ ಸಂಬಂಧಿಸಿದ ಪೂರಕ ತಯಾರಿಗಳನ್ನು ಮಾಡಲು ಸಹ ಮನಸ್ಸು ಅಶಕ್ತವಾಯಿತು.

ಹಾಗೆಯೇ ಕಳೆದು ಆಗಸ್ಟ್ ವೇಳೆಗೆ ಸ್ವಲ್ಪ ಕೊರೋನಾ ಮಹಾಮಾರಿಯಿಂದ ರಿಯಾಯಿತಿ ದೊರೆತು ಕಾಲೇಜಿಗೆ ಹೋಗುವ ಸನ್ನಿವೇಶ ಸಂದರ್ಭಗಳು ಬಂದೊದಗಿದವು. ಈ ವೇಳೆಗಾಗಲೇ ಹಲಾವಾರು ಜನರು, ವೈದ್ಯರು…….ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಎಷ್ಟೋ ಜನರ ಪ್ರಾಣ ಉಳಿಸಿದ್ದ ವೈದ್ಯರು, ಶುಶ್ರೂಷಕ ತಂಡದವರು ತಮ್ಮ ಮನೆ, ಕುಟುಂಬವನ್ನು ಹತ್ತಾರು ದಿನಗಳು ನೋಡದೆ ಹಗಲಿರುಳೆನ್ನದೆ ತಮ್ಮ ಕರ್ತವ್ಯ ಎಂಬುದಕ್ಕಿಂತ ಹೆಚ್ಚಾಗಿ ಸೇವೆ ಎಂಬಂತೆ ದುಡಿದಿದ್ದಾರೆ. ಎಷ್ಟೋ ಜನ ತಾಯಂದಿರು ತಮ್ಮ ಚಿಕ್ಕ ಹಸುಗೂಸುಗಳನ್ನು ಎಳೆಯ ಕಂದಮ್ಮಗಳನ್ನು ತೊರೆದು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅದೇ ರೀತಿಯಲ್ಲಿ ಪೋಲಿಸ್ ಸಿಬ್ಬಂದಿಗಳು ಕೂಡ ತಮ್ಮ ಕರ್ತವ್ಯದ ಎಲ್ಲೆಯನ್ನು ಮೀರಿ ಜನರನ್ನು ನಿಯಂತ್ರಿಸಿ ಕೊರೋನಾ ಮಹಾಮಾರಿಯನ್ನು ಹತೋಟಿಗೆ ತರುವಲ್ಲಿ ಮಾನವತೆಯನ್ನು ಮೆರೆದಿದ್ದಾರೆ.

ನಿಜವಾಗಿಯೂ 2020ರಲ್ಲಿ ಪ್ರಾರಂಭವಾದ ಕೊರೋನಾ ಮಹಾಮಾರಿಯು ಎಲ್ಲ ರೀತಿಯ ಜನರಿಗೂ ಒಂದು ಪಾಠವನ್ನು ಕಲಿಸಿದೆ. ಎಷ್ಟೇ ಹಣವಿದ್ದರೂ, ಶ್ರೀಮಂತಿಕೆಯಿದ್ದರೂ, ಕಿತ್ತುತಿನ್ನುವ ಬಡತನವಿದ್ದರೂ ಮರಣ ಹೊಂದುವಾಗ ಯಾವುದೇ ಶ್ರೀಮಂತಿಕೆ , ಬಡವ ಬಲ್ಲಿದ ಮೇಲು ಕೀಳು  ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ. ಈ ಕೊರೋನಾ ಮಹಾಮಾರಿಯಿಂದಾಗಿ ಸ್ವಂತ ಅಪ್ಪ ಅಮ್ಮನಿಗೆ ಕೊನೆಯ ಅಂತ್ಯಸಂಸ್ಕಾರವನ್ನು ಮಾಡಲು ಮಕ್ಕಳಿಗೆ, ಕಣ್ಣ ಮುಂದೆಯೇ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗೆ, ಆಗ ತಾನೆಯೇ ವಿವಾಹವಾಗಿದ್ದ ನವ ವಿವಾಹಿತರಿಗೆ, ಅಲ್ಲೊಂದು ಇಲ್ಲೊಂದು ತೊದಲು ಮಾತನಾಡಿ ನಕ್ಕು ನಗಿಸುತ್ತಿದ್ದ ಪುಟ್ಟ ಕಂದಮ್ಮಗಳಿಗೆ …ಯಾರಿಗೆ ಯಾರು ಕೂಡ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಲ್ಲಿಲ್ಲ ಎಂದ ಮೇಲೆ ಎಷ್ಟು ಹಣವಿದ್ದರೇನು ಎಷ್ಟು ಸಂಪತ್ತು ಇಲ್ಲದಿದ್ದರೇನೂ ಅಲ್ಲವೆ?.

ಹೀಗೆ ಕಳೆದು ಹೋಯಿತು ಮಹಾಮಾರಿ ‘ಈಗ ಲೈಪು ಆರಾಮ್ ರಿ’ ಎನ್ನುವಷ್ಟರೊಳಗೆ ಅಂದು ಅಕ್ಟೋಬರ್ 29. ಆಗ ತಾನೆಯೇ ಕಾಲೇಜಿನಲ್ಲಿ ಒಂದು ರೌಂಡು ಹಾಕಿ ಬಿಸಿ ಬಿಸಿ ಕಾಫಿ ಕುಡಿದು ಕೊಠಡಿಗೆ ಆಗಮಿಸಿ ವಿಶ್ರಾಂತಿ ಪಡೆಯೋಣ ಎನ್ನುವಷ್ಟರಲ್ಲಿ ಅಚಾನಕ್ಕಾಗಿ ವಾಟ್ಸಪ್ ಸ್ಟೇಟಸ್ನಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ ನೋಡಿ ಎಂದು ಹೇಳಿದಾಗ , ಏ ಅದೆಲ್ಲಾ ಸುಳ್ಳು ಬಿಡೋ ಮಾರಾಯಾ…ಇದೇ ತರ ಎಷ್ಟು ಜನಕ್ಕೆ ಈ ತರ ಸ್ಟೇಟಸ್ ರೆಡಿ ಮಾಡಿದ್ರು..ಅಂತಾ ಮನಸ್ಸು ಹೇಳುತ್ತಿದ್ದರೂ ಯಾಕೋ ಗೊತ್ತಿಲ್ಲದೆ ಯೂಟ್ಯೂಬ್ನಲ್ಲಿ ಸಿಗುವ ಲೈವ್ ನ್ಯೂಸ್ ನೋಡಿದಾಕ್ಷಣ ನಮ್ಮ ಜಂಘಾಬಲವೇ ಅಡಗಿ ಹೋದಂತಾಯಿತು.

ಕೈ ನಡುಕು, ಮನಸ್ಸು ಭಾರ, ಕಣ್ಣುಗಳ ತುಂಬಾ ನೀರು,  ಅದೇ ಪ್ರಾರ್ಥನೆ …ದೇವರೇ ದಯವಿಟ್ಟು ಒಂದು ಅವಕಾಶ ಕೊಡು…ಎಂದು ಎಷ್ಟೋ ಅಭಿಮಾನಿಗಳು, ಅವರಿಂದ ಸಹಾಯ ಪಡೆದವರು, ಅವರಿಗಿಂತ ಹಿರಿಯರಾಗಿದ್ದರೂ ಅಭಿಮಾನದಿಂದ ಬಹುವಚನದಲೇ ಸಂಬೋಧಿಸುತ್ತಿದ್ದವರೆಲ್ಲರ ಪ್ರಾರ್ಥನೆ  ಆ ದೇವರ  ಅಂತರಾತ್ಮಕ್ಕೆ ಕೇಳಿಸದೇ ಕೊನೆಗೂ ಕಿಂಚಿತ್ತೂ ಕರುಣೆಯೇ ಇಲ್ಲದೆ ದುಃಖದ ಕಡಲಲ್ಲಿ ತೇಲಿ ಸಿ ಬಿಟ್ಟನು. ಎಷ್ಟೋ ಜನಗಳ ಆಪದ್ಬಾಂಧವರಾಗಿದ್ದು ಸಹೃದಯಿ ನಗುಮೊಗದ ಉತ್ಸಾಹಿ ನಮ್ಮ ಅಪ್ಪುವನ್ನು ಕಳೆದು ಕೊಂಡ ದಿನವದು.  ಕಾಣದಂತೆ ಮಾಯವಾದನು ಎಂಬಂತೆ ಹಲವಾರು ಮಕ್ಕಳ ಶಿಕ್ಷಣಕ್ಕೆ ಸಹಾಯ ಹಲವು ಅನಾಥಾಶ್ರಮ ವೃದ್ಧಾಶ್ರಮಗಳು ಗೋಶಾಲೆಗಳು.. ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಪುನೀತ್ ರಾಜಕುಮಾರ್ ಇನ್ನಿಲ್ಲ ಎಂಬ ಸುದ್ದಿಯೇ 2021 ಅತ್ಯಂತ ಘನಘೋರ ಸುದ್ದಿಯಾಗಿಹೋಯಿತು. ಅವರು ಕೈಗೊಂಡ ಕಾರ್ಯಕ್ರಮಗಳನ್ನು ಹಿಂದೆಯೂ ಇಂದಿಗೂ ಮುಂದೆಂದಿಗೂ ಒಂದು ಸರ್ಕಾರವಾಗಲಿ, ಒಂದು ಸಂಸ್ಥೆಯಾಗಲಿ, ಒಬ್ಬ ವ್ಯಕ್ತಿಯಾಗಲಿ ಮಾಡಲು ಸಾಧ್ಯವಿಲ್ಲ. ಅವರ ಕೊಡುಗೆಯನ್ನು ಅವರಿಂದ ಸಹಾಯ ಪಡೆದವರ ಮಾತುಗಳನ್ನು ಕೇಳಿದರೆ ಸಾಕು ಅವರ ವ್ಯಕ್ತಿತ್ವ ಕಣ್ಣ ಮುಂದೆಯೆ ನಡೆದಂತಿದೆ. ಅಷ್ಟು ಅಚ್ಚುಕಟ್ಟಾಗಿ ತಾನು ನಿರ್ವಹಿಸುತ್ತಿದ್ದ ಎಲ್ಲಾ ಕೆಲಸಗಳನ್ನು ತಾವೇ ಸ್ವತಃ ಮಾಡಿದ್ದರೂ ಯಾರಿಂದಲೂ ಪ್ರತಿಫಲಾಪೇಕ್ಷೆಯನ್ನು ಹೊಗಳಿಕೆಯನ್ನು ಬಯಸದ  ಎಂದೆಂದೂ ಬಾಡದ  ಹೂ ಪುನೀತ್ ರಾಜಕುಮಾರ್. ಹೀಗೆ ಅವರ ನೆನಪಿನಲ್ಲೆ ಎರಡು ತಿಂಗಳುಗಳೇ ಕಳೆದರೂ ಅಲ್ಲೊಂದು ಇಲ್ಲೊಂದು ವಾಹಿನಿಗಳಲ್ಲಿ ಸಿಗುವ ಪುನೀತ್ ರಾಜಕುಮಾರ್ ರವರ ವಿಷಯಗಳನ್ನು ನೋಡಿದರೆ ಹೃದಯ ಭಾರವಾಗುತ್ತದೆ. ಛೇ …ಇನ್ನೊಂದಷ್ಟು ದಿನ ನೀವೀರಬೇಕಿತ್ತೆಂದು ಮನಸ್ಸು ಹಂಬಲಿಸುತ್ತದೆ..

ಆದರೆ ವಿಧಿಯಾಟವೇ ಮೇಲಾಗಿ ಹೋಯಿತು. ಒಂದು ಉಲ್ಲೇಖದ ಪ್ರಕಾರ ಗಾಂಧೀಜಿಯವರ ನಂತರ ಅತಿ ಹೆಚ್ಚು ಜನರು ಭಾಗಿಯಾಗಿದ್ದ ಅಂತಿಮ ಸಂಸ್ಕಾರ ದಿನವೆಂದು ಇತಿಹಾಸ ಸೃಷ್ಟಿಸಿತು. ಅದರಂತೆಯೇ ಎಲ್ಲರನ್ನು ಒಂದು ಕಡೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಹ ಜಾಗೃತಿಯನ್ನು ನೀವು ಬೆಳೆಸಿ ಹೋಗಿದ್ದೀರಿ..ನೆಲ, ಜಲ ಭಾಷೆಯ ಹಂಗು ಇಲ್ಲದೆ, ಕಿರಿಯರು ಹಿರಿಯರು ಎಂದು ಪರಿಗಣಿಸದೆ, ಬಡವ ಬಲ್ಲಿದ ಎಂಬ ಭೇದಭಾವವಿಲ್ಲದೆ, ಮಕ್ಕಳಿಂದ ಮುದುಕರವರೆಗೆ ನಿಮ್ಮ ನೃತ್ಯವೇ ಬೇಕು, ನಿಮ್ಮ ಶೈಲಿಯಲ್ಲಿಯೇ ಕುಣಿಯಬೇಕು‌ ಎಂದ ಎಷ್ಟೋ ಮನಗಳ ಹಂಬಲವನ್ನು ನೀವು ಸಾಕಾರಗೊಳಿಸಿದ್ದೀರಿ..ಅವರ ಮನ ಮನದಲ್ಲೂ ಪ್ರತಿ ಮನೆಯಲ್ಲಿಯೂ ನೀವೆ ತುಂಬಿದ್ದೀರಿ. ಚಿಕ್ಕ ಮಗುವಿನಿಂದ ನಟಿಸಿ ನಾಯಕನಟನಾದರೂ ಆ ಮುಗ್ಧ ನಗುವ ನಿಮ್ಮ ಮೊಗದಲ್ಲಿ ಹಾಗೆಯೇ ಉಳಿಸಿಹೋಗಿದ್ದೀರಿ..ಪ್ರತಿ ಕನ್ನಡಿಗನ‌ ಎದೆಯಲ್ಲಿ  ಎಂದೆಂದೂ ಚಿರಸ್ಮರಣೀಯರು ನೀವು…… ನೀವು ನಮ್ಮ ಮನದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತೀರಿ…

ಹೋಗಿ ಬನ್ನಿ ಅಪ್ಪು…

ಈ 2021 ಹೀಗೆ ಕಳೆದುಹೋಯಿತು. ಅಕಸ್ಮಾತ್ ನಡೆದು ಹೋದ ಕೊರೋನಾವೆಂಬ ಆಕ್ಸಿಡೆಂಟಲ್ಲಿ ಎಷ್ಟೋ ಜನರು ಮರೆಯಾಗಿ ಹೋದರು. ಹೋದವರೆಲ್ಲಾ ಚಿರಸ್ಮರಣೀಯರೇ…ಆದರೆ_2022 ಎಂಬ  ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಮತ್ತೆದೂ ಈ ಮರುಕ ನಮ್ಮನ್ನು ತಟ್ಟದಿರಲೆಂದು ಆಶಿಸುತ್ತಾ ಕಳೆದು ಹೋದವರ ಕೃಪಾರ್ಶೀವಾದಗಳೊಂದಿಗೆ ಎಲ್ಲೆಲ್ಲೂ ಒಳಿತೆ ತುಂಬಿರಲಿ, ಮನಸ್ಸು ಎಂದೆಂದಿಗೂ ಒಳಿತನ್ನು ಯೋಚಿಸಲಿ, ಒಳ್ಳೆಯ ಕಾರ್ಯಗಳು ಎಲ್ಲರನ್ನೂ ಹರಸಲೆಂದು ಕೋರುತ್ತಾ..ನಿಮ್ಮವ..

-ದಿವಾಕರ್.ಡಿ ಮಂಡ್ಯ

12 Responses

  1. ನಾಗರತ್ನ ಬಿ. ಅರ್. says:

    ಸದಾಕಾಡುವ ಈ ವರ್ಷ ಕರೋನಾ ಎಂಬ ಮಹಾಮಾರಿ ಯ ಆಗಮನ ಅದರಿಂದ ಆದ ಅನಾಹುತಗಳನ್ನು ವಿವರಿಸಿ ಅದರಿಂದ ಆಕಸ್ಮಿಕ ಅವಘಡ ಗಳಿಗೆ ಸಿಕ್ಕಿ ನರಳಿದವರ ಬಗ್ಗೆ ಸಹಾನುಭೂತಿ ವ್ಯಕ್ತಿ ಪಡಿಸಿ..
    ಈಗ ಬರುವ ಹೊಸವರ್ಷದ ಆಗಮನಕ್ಕೆ ಶುಭ ಕೋರಿ ರುವ ನಿಮ್ಮ ಲೇಖನ ಓದಿಸಿಕೊಂಡು ಹೋಯಿತು.ಧನ್ಯವಾದಗಳು ಸಾರ್

    • ,Divakar D Mandya says:

      ಹೊಸ ವರ್ಷದ ಶುಭಾಷಯಗಳೊಂದಿಗೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಮ್.
      ನಿಜವಾಗಿಯೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೊರೋನಾದಿಂದ ಬೇಸರಕ್ಕೆ ಒಳಗಾದವರೇ ಹೆಚ್ಚು. ಜೊತೆಗೆ ಅಂತಹ ಸಮಯದಲ್ಲಿ ಜನತೆಗೆ ಸಹಾಯಕ್ಕೆ ಸ್ಪಂದಿಸಿದವರೇ ನಿಜವಾದ ಪ್ರಾತಃಸ್ಮರಣೀಯರು ಅಲ್ಲವೇ…

  2. ನಯನ ಬಜಕೂಡ್ಲು says:

    ಕಳೆದ ಕಷ್ಟದ ದಿನಗಳ ಒಂದು ಅವಲೋಕನ

    • ,Divakar D Mandya says:

      ಹೊಸ ವರ್ಷದ ಶುಭಾಶಯಗಳೊಂದಿಗೆ ಧನ್ಯವಾದಗಳು ತಮಗೆ ಮೇಡಮ್. ಎಲ್ಲರಿಗೂ ಕೊರೋನಾ ಕಾಡಿದೆ. ಅದರ ಒಂದು ಅವಲೋಕನದ ಜೊತೆಗೆ ಸಹಾಯಕ್ಕೆ ಸ್ಪಂದಿಸಿದ ಕೊರೋನಾ ವಾರಿಯರ್ಸ್‌ ಗೆ ನಮನ ಸಲ್ಲಿಸಲು ಒಂದು ಅವಕಾಶವಷ್ಟೇ …ಧನ್ಯವಾದಗಳು

  3. . ಶಂಕರಿ ಶರ್ಮ says:

    ಮಹಾಮಾರಿಯ ಅಟ್ಟಹಾಸದ ನಡುವೆ ನಲುಗಿದ ಜನಸಾಮಾನ್ಯರು, ಏತನ್ಮಧ್ಯೆ ಅಕಾಲಿಕವಾಗಿ ದೇವರಪಾದ ಸೇರಿದ ಅಪ್ಪು…ಹೀಗೆ ಎಲ್ಲದರ ನೆನಪುಗಳನ್ನು ಹಸಿಯಾಗಿಸಿತೀ ಬರಹ… ಧನ್ಯವಾದಗಳು.

    • Divakar D Mandya says:

      ಧನ್ಯವಾದಗಳು ಮೇಡಮ್ …ಕೊರೋನಾದ ನಡುವೆ ಅನುಭವಿಸಿದ ಮನದ ತಲ್ಲಣ ಇದುವೇ..

  4. Padmini Hegade says:

    ಅವಲೋಕನ ಚೆನ್ನಾಗಿದೆ

    • Divakar D Mandya says:

      ಧನ್ಯವಾದಗಳು ಮೇಡಮ್… ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ

  5. Padma Anand says:

    ವಸ್ತುನಿಷ್ಡವಾದ ಲೇಖನ ಮನಕಲಕುವಂತಿದೆ. ಎಲ್ಲರಿಗೂ ೨೦೨೨ ಆದರೂ ಒಳಿತನ್ನುಂಟು ಮಾಡಲಿ

    • Divakar D Mandya says:

      ಧನ್ಯವಾದಗಳು ಮೇಡಮ್ …ಸಕಲರಿಗೂ ೨೦೨೨ ರ ಹೊಸ ವರ್ಷವು ಒಳಿತಾಗಲಿ ಎಂಬುದೇ ಎಲ್ಲರ ಹಾರೈಕೆ

  6. ಕರೋನ ಹಾವಳಿಯಿಂದ ನೊಂದವರ ಮನಸ್ಥಿತಿ ಪರಿಸ್ಥಿತಿ ಯ ಚಿತ್ರಣ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು

    • Divakar D Mandya says:

      ಧನ್ಯವಾದಗಳು ಮೇಡಮ್…ನಿಮ್ಮ ಪ್ರತಿಕ್ರಿಯೆಗೆ…ಕೊರೊನಾ ಹಾವಳಿಯ ಕೆಟ್ಟ ಪರಿಣಾಮಗಳನ್ನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಮನಸ್ಸನ್ನು ಒಳಹೊಕ್ಕಿದೆ…ಅಲ್ಲವೇ.

Leave a Reply to Divakar D Mandya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: