ಮಣಿಪಾಲದ ಮಧುರ ನೆನಪುಗಳು..ಭಾಗ 12

Share Button

ಕೋಟ ಕಾರಂತರ ಆಡುಂಬೊಲದಲ್ಲಿ

ಗ್ರಾಮ ಸಂಸ್ಕೃತಿಯ ವಿಶ್ವ ದರ್ಶನ ಪಡೆದ ಅತ್ಯದ್ಭುತ ಅನುಭವದ ಮೂಟೆಯ ಜೊತೆಗೆ ಅಲ್ಲಿಯ ಹಣಕಾಸಿನ ವ್ಯವಸ್ಥೆಯ ಬಗೆಗಿನ ತೊಂದರೆಗಳನ್ನು ಯೋಚಿಸಿ, ಮನದಾಳದ ಮೂಲೆಯಲ್ಲಿ ಸಣ್ಣ ನೋವನ್ನು ತುಂಬಿಕೊಂಡು ಹೊರಟಾಗ ತಾಳ ಹಾಕುತ್ತಿರುವ ನಮ್ಮೆಲ್ಲರ ಉದರವು ತನ್ನ ಇರವನ್ನು ನೆನಪಿಸಿತು. ಮೊದಲೇ ನಿರ್ಧಾರವಾಗಿದ್ದಂತೆ, ಮಧ್ಯಾಹ್ನದ ಸುಗ್ರಾಸ ಭೋಜನವು ನಮ್ಮ ಕುಟುಂಬ ಸ್ನೇಹಿತರ ಮನೆಯಲ್ಲಿ ನಮಗಾಗಿ ಕಾಯುತ್ತಿತ್ತು. ಪ್ರೀತಿಯ ಆಮಂತ್ರಣದಂತೆ, ಅವರ ಮನೆಯ ಆತ್ಮೀಯ ಬಂಧುಗಳೊಡನೆ ಸಿಹಿಯುಂಡು, ಒಂದೆರಡು ತಾಸು ಅಲ್ಲಿದ್ದು, ನಮ್ಮ ಮುಂದಿನ ಪಯಣಕ್ಕೆ ಸಜ್ಜಾದೆವು.. ಸುಮಾರು 25 ಕಿ.ಮೀ.ದೂರದ ಕೋಟಕ್ಕೆ.

ಕಡಲ ತಡಿಯ ಭಾರ್ಗವ ನೆಂದು ಹೆಸರಾದ ಡಾI ಶಿವರಾಮ ಕಾರಂತರ ಹುಟ್ಟೂರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕೋಟವೆಂಬ ಪುಟ್ಟ ಊರು. ನಡೆದಾಡುವ ವಿಶ್ವಕೋಶವಾಗಿದ್ದ ಅವರು ಕೈಯಾಡಿಸದ ರಂಗವೇ ಇಲ್ಲವೆನ್ನಬಹುದು.. ಕಾದಂಬರಿ, ಯಕ್ಷಗಾನ, ನಾಟಕ ಇತ್ಯಾದಿಗಳಲ್ಲಿ ಕನ್ನಡದ ಕಾದಂಬರಿ ಮೂಕಜ್ಜಿಯ ಕನಸುಗಳು ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ಗಳಿಸಿಕೊಟ್ಟ ಕೃತಿಯಾಗಿದೆ. ಅವರ ಎಲ್ಲಾ ಕೃತಿಗಳೂ ನಮ್ಮ ಮನೆಯ ಪುಟ್ಟ ಗ್ರಂಥಾಲಯದಲ್ಲಿ ಕುಳಿತಿವೆ..ಹಾಗೆಯೇ ನಮ್ಮೂರು ಪುತ್ತೂರು ಕೂಡಾ ಅವರ ಕರ್ಮಭೂಮಿಯಾಗಿತ್ತು ಎಂಬುದು ಹೆಮ್ಮೆಯ ವಿಷಯ. ಅವರ ಮೇಲಿನ ಗೌರವಾದರಗಳು ಅವರ ಹುಟ್ಟೂರನ್ನು ಕಾಣುವ ಆಸೆಯನ್ನು ಇಮ್ಮಡಿಗೊಳಿಸಿತ್ತು.  ಅಲ್ಲಿರುವ ಕಾರಂತ ಸ್ಮಾರಕ ಭವನವು ಸಾರ್ವಜನಿಕರಿಗಾಗಿ ತೆರೆಯುವ ವೇಳೆ ಇತ್ಯಾದಿಗಳನ್ನು ಅಂತರ್ಜಾಲದ ಮೂಲಕ ಮೊದಲೇ ತಿಳಿದುಕೊಂಡಿದ್ದೆವು.ಮಣಿಪಾಲದಿಂದ ಅವರ ಹುಟ್ಟೂರು ಕೋಟಕ್ಕೆ ತಲಪಿದಾಗ  ಮಧ್ಯಾಹ್ನ ಗಂಟೆ ನಾಲ್ಕು.

ಮುಖ್ಯದ್ವಾರದ ಬಳಿಯಲ್ಲಿ ಮಲ್ಲಿಗೆ ಹಾರ ಧರಿಸಿ, ಶುಭ್ರ ಶ್ವೇತ ವಸ್ತ್ರಧಾರಿ ಕಾರಂತರು ಕುಳಿತ ಭಂಗಿಯ ಮಾನವ ಗಾತ್ರದ ಮೂರ್ತಿಯು ನಮ್ಮನ್ನು ಸ್ವಾಗತಿಸಿತು. ಮುಂದಕ್ಕೆ ಹೋಗುತ್ತಿದ್ದಂತೆ ಎಡಪಕ್ಕದಲ್ಲಿದೆ ವಿಶಾಲವಾದ ಚಂದದ ನೀರಕೊಳ. ಎದುರುಗಡೆಗೆ ಹಸಿರುಸಿರಿಯ ನಡುವೆ ಸಿಂಗಾರಗೊಂಡು ನಿಂತಿದೆ. ಎರಡಂತಸ್ತಿನ ಚಂದದ ಕಾರಂತ ಸ್ಮಾರಕ ಭವನ.  ಕಟ್ಟಡದ ಸುತ್ತಲೂ ಸುಂದರ ಹೂದೋಟ, ಅದರಲ್ಲಿ ಬಿರಿದರಳಿ ನಗುವ ಹೂಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ. ಮುಂದಕ್ಕೆ ಬಲಗಡೆಗೆ, ಕಟ್ಟಡದ ಮುಖ್ಯದ್ವಾರದ ಬಳಿ  ಜ್ಞಾನಪೀಠ ಪ್ರಶಸ್ತಿ ಭಾಜನವಾದ ಪುಸ್ತಕದ ದೊಡ್ಡದಾದ ಎರಕ ರೂಪವು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಅಲ್ಲದೆ,ಕಟ್ಟಡದ ಎದುರುಗಡೆಗೆ ಮಾನವ ಗಾತ್ರದ ಹಲವಾರು ಸುಂದರ ಕಲಾಕೃತಿಗಳು ಮನಸೆಳೆಯುತ್ತವೆ. ಅವುಗಳಲ್ಲಿ,  ಡೋಲು ಬಡಿಯುವ ರೈತನ ತೀವ್ರ ರೋಷದ ಮುಖ ಭಾವವು, ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯ ಚೋಮನ ಪಾತ್ರವನ್ನು ಪ್ರತಿನಿಧಿಸುತ್ತದೆ.  ಪಕ್ಕದಲ್ಲಿರುವ ಸುಂದರ ಜೋಕಾಲಿಯ ಮೇಲೆ ಕುಳಿತ ಯಕ್ಷ ದಂಪತಿಗಳು ಆನಂದದ ಕ್ಷಣಗಳಲ್ಲಿ ಲೀನವಾಗಿದ್ದರು. ಅಲ್ಲೇ ಹಿಂಬದಿಯಲ್ಲಿ ತನ್ನ ಜೋಡೆತ್ತಿನ ಬಂಡಿಯಲ್ಲಿ ಸಾಕಷ್ಟು ಹುಲ್ಲನ್ನು ತುಂಬಿಕೊಂಡು ರೈತನು ತನ್ನ ಹೊಲಕ್ಕೆ ಹೊರಟು ನಿಂತಿದ್ದ. ಎಲ್ಲಾ ಮೂರ್ತಿಗಳ ಮುಖಭಾವ, ಭಂಗಿ, ಬಣ್ಣ ಸಂಯೋಜನೆ, ಸಾಂದರ್ಭಿಕ ದೃಶ್ಯ ಜೋಡಣೆಗಳು ಒಂದಕ್ಕಿಂತ ಒಂದು ಸುಂದರವಾಗಿವೆ.

ಮುಂದಕ್ಕೆ, ಕಟ್ಟಡದೊಳಗೆ ಹೋಗುತ್ತಿದ್ದಂತೆ, ಬಲಗಡೆಯ ದೊಡ್ಡ ಹಜಾರದ ಎರಡೂ ಪಕ್ಕಗಳಲ್ಲಿ, ನೆಲದ ಮೇಲೆ, ಕಾರಂತರ ಭುಜದ ಮೇಲಿನ ವಿವಿಧ ಭಂಗಿಗಳ ಮೂರ್ತಿಗಳು ಎತ್ತರದ ಪೀಠದ ಮೇಲೆ ಇರಿಸಲ್ಪಟ್ಟಿದೆ. ಗೋಡೆಗಳ ಮೇಲೆ, ಅವರು ತೊಡಗಿಸಿಕೊಂಡಿದ್ದ  ವಿವಿಧ ರಂಗಕಲೆಗಳ ಮೇಲೆ ಬೆಳಕು ಚೆಲ್ಲುವಂತಿರುವ ದೊಡ್ಡದಾದ ಫೋಟೋಗಳು ಮನ ತುಂಬುತ್ತವೆ. ಅದೇ ಹಜಾರದ ಕೊನೆಯಲ್ಲಿ ಹತ್ತಾರು ಪುಟಾಣಿ ಮಕ್ಕಳಿಗೆ ಚಿತ್ರ ರಚನೆಯನ್ನು ಕಲಿಸುತ್ತಿದ್ದರು; ಆ ಹಜಾರವು ಅವರ ಕಲರವದಿಂದ ತುಂಬಿತ್ತು. ಅಲ್ಲಿ ಮಕ್ಕಳಿಗಾಗಿ ದಿನಾ ಸಂಜೆ ಚಿತ್ರಕಲೆ, ಬರಹ, ಭಾಷಣ, ನಾಟಕ, ಯಕ್ಷಗಾನ ಇತ್ಯಾದಿಗಳ ಕಾರ್ಯಾಗಾರಗಳು ಉಚಿತವಾಗಿ ನಡೆಸಲ್ಪಡುತ್ತದೆ.  

ಕಟ್ಟಡದ ಮೊದಲನೇ ಮಹಡಿಯೊಳಗೆ ಅಡಿಯಿಟ್ಟೊಡನೆ ಅಲ್ಲಿಯ ದೃಶ್ಯವು ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯತ್ತದೆ.  ಕಾರಂತರ ವಿವಿಧ ಭಂಗಿಗಳ ಮಾನವ ಗಾತ್ರದ ಮೂರ್ತಿಗಳು ನಮ್ಮನ್ನು ಮೂಕರಾಗಿಸುವುದು ಸುಳ್ಳಲ್ಲ. ಒಂದೆಡೆ ತಾತನು ಹೇಳುವ ಚಂದದ ಕತೆಯನ್ನು ಆತನ ಮೊಮ್ಮಗನು ಏಕಾಗ್ರಚಿತ್ತದಿಂದ ಕೇಳುವ ನೋಟ ನಿಜಕ್ಕೂ ಅಹ್ಲಾದಕರ. ಮೂಕಜ್ಜಿಯು  ಪುಟ್ಟ ಮಕ್ಕಳಿಬ್ಬರಿಗೆ ಕತೆ ಹೇಳುತ್ತಾ ಉಯ್ಯಾಲೆಯಲ್ಲಿ ಕುಳಿತ ದೃಶ್ಯಾವಳಿಯಂತೂ ಜೀವಂತಿಕೆಯಿಂದ ಕೂಡಿದೆ.

ಅಲ್ಲೇ ಪಕ್ಕದಲ್ಲಿರುವ ಗ್ರಂಥಾಲಯದಲ್ಲಿ ಕಾರಂತರು ಬರೆದ ಎಲ್ಲಾ ಪುಸ್ತಕಗಳು ಓದಲು ಮತ್ತು ಮಾರಾಟಕ್ಕೆ ಲಭ್ಯವಿದೆ. ಮಹಡಿಯ ಇನ್ನೊಂದು ಪಕ್ಕದಲ್ಲಿ  ಸುಮಾರು ಮೂನ್ನೂರು ಮಂದಿ ಆಸೀನರಾಗಬಹುದಾದಂತಹ ಒಳ ಸಭಾಂಗಣವಿದೆ. ಇದರ ವೇದಿಕೆಯು  ಕೆಳಗಡೆಗಿದ್ದು, ಆಸನಗಳು ಅದರ ಎದುರುಗಡೆಗೆ ಎತ್ತರದಲ್ಲಿ ಅರ್ಧ ವೃತ್ತಾಕಾರದ ಸಾಲುಗಳಲ್ಲಿವೆ. ಆಗಾಗ ಇಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾರಂತರ ನೆನಪಲ್ಲಿ ರೂಪುಗೊಂಡ ಈ  ಅಚ್ಚುಕಟ್ಟಾದ, ಸುಸಜ್ಜಿತ ಸಭಾಂಗಣವನ್ನು ನೋಡುವಾಗ ಹೆಮ್ಮೆಯೆನಿಸಿತು.

ಸಂಗ್ರಹಾಲಯದಲ್ಲಿ ಡಾ ಕಾರಂತರ ಕುರಿತಾದ ಹಲವಾರು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಅವರ ಕಾದಂಬರಿಗಳ ಆಶಯದ ದೊಡ್ಡ ದೊಡ್ಡ ಭಿತ್ತಿ ಚಿತ್ರಗಳು, ಯಕ್ಷಗಾನದ ದಿರಿಸುಗಳು, ಕಾದಂಬರಿಗಳ ಹಳೆಯ ಪ್ರತಿಗಳು, ಕಾರಂತರು ರಚಿಸಿದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ ಮತ್ತಿತರ ವಸ್ತುಗಳನ್ನೊಂಡ ಸುಂದರ ವಸ್ತು ಸಂಗ್ರಹಾಲಯ ಇದು.

ನಮ್ಮೂರ ಹೆಮ್ಮೆಯ ಮಹಾವ್ಯಕ್ತಿಯಾಗಿದ್ದ ಶಿವರಾಮ ಕಾರಂತರ ಜನ್ಮಭೂಮಿಯ ಭೇಟಿಯು ನಮ್ಮಲ್ಲಿ ಧನ್ಯತಾಭಾವವನ್ನು ಉಂಟು ಮಾಡಿತ್ತು. ಅದಾಗಲೇ ಸಂಜೆಯ ಸೂರ್ಯನು ಕೆಂಬಣ್ಣ ತಾಳಲಾರಂಭಿಸಿದ್ದ. ಮುಂದಕ್ಕೆ, ಪಣಂಬೂರು ಕಡಲ ಕಿನಾರೆಯಲ್ಲಿ ಸೂರ್ಯಾಸ್ತ ವೀಕ್ಷಿಸಿ ಮನೆಗೆ ಮರಳುವಾಗ, ಸಂಸ್ಕೃತಿ ಗ್ರಾಮದ ರೂವಾರಿ, ಎಣೆಯಿಲ್ಲದ ಧೀಶಕ್ತಿಯನ್ನು ಹೊಂದಿದ್ದ ಶೆಣೈಯವರ ಕರ್ತೃತ್ವ ಶಕ್ತಿಯಿಂದ ರೂಪುಗೊಂಡ ಅಭೂತಪೂರ್ವ ಕಲಾಗ್ರಾಮದ ಬಗ್ಗೆ ಮನದೊಳಗೆ  ಅಭಿಮಾನ ತುಂಬಿ ತುಳುಕುತ್ತಿತ್ತು. ಹಾಗೆಯೇ ನಾಡಿನ ಹೆಮ್ಮೆಯ ಕಾರಂತರ ನೆನಪಿಗಾಗಿ ನಿರ್ಮಿಸಿದ ಚಂದದ ಸ್ಮಾರಕ ಭವನದ ವೀಕ್ಷಣೆಯು ಮನಸ್ಸಿಗೆ ತೃಪ್ತಿಯನ್ನು ನೀಡಿತ್ತು…

ಮುಗಿಯಿತು.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=34061

ಶಂಕರಿ ಶರ್ಮ, ಪುತ್ತೂರು.

8 Responses

  1. ನಾಗರತ್ನ ಬಿ. ಅರ್. says:

    ಮಣಿಪಾಲದ ಮಧುರ ನೆನಪುಗಳ ಮೆರವಣಿಗೆ ಬಹಳಷ್ಟು ವಿಚಾರಗಳ ಅನಾವರಣ ವಾಗಿತ್ತು.ಅದನ್ನು ನಿರೂಪಿಸಿದ ರೀತಿಯು ಸೊಗಸಾಗಿ ಮೂಡಿ ಬಂತು.ಆ ಕಡೆಗೆ ಹೋದಾಗ ಅವೆಲ್ಲಾವನ್ನು ನೋಡಿ ಕಣ್ಣು ತುಂಬಿಸಿಕೊಂಡು ಬರಬೇಕೆಂಬ ಹಂಬಲ ಹುಟ್ಟು ಹಾಕಿದ ನಿಮ್ಮ ಲೇಖನ ಕ್ಕೆ ನನ್ನ ದೊಂದು ಹೃತ್ಪೂರ್ವಕ ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

  2. ನಯನ ಬಜಕೂಡ್ಲು says:

    ತುಂಬಾ ಸೊಗಸಾಗಿ ಮೂಡಿ ಬಂತು ಎಲ್ಲಾ ನೆನಪುಗಳು. ಪ್ರತಿ ಕಂತನ್ನು ಓದಿ ಆದ ಮೇಲೂ ಸ್ವತಃ ಅಲ್ಲೆ ಇದ್ದು ಎಲ್ಲವನ್ನು ನೋಡಿ ಆನಂದಿಸಿದ ಭಾವ.

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

  3. Hema says:

    ಲೇಖನ ಸರಣಿ, ಸೊಗಸಾಗಿ, ಮಾಹಿತಿಯುಕ್ತವಾಗಿ ಮೂಡಿ ಬಂತು. ಧನ್ಯವಾದಗಳು

    • . ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಹಾಗೂ ಈ ಸರಣಿ ಲೇಖನಗಳನ್ನು ಪ್ರೀತಿಯಿಂದ ಪ್ರಕಟಿಸಿ ಪ್ರ್ರೋತ್ಸಾಹಿಸಿದ ತಮಗಿದೋ ಆದರದ ನಮನಗಳು.

  4. Savithri bhat says:

    ಮಣಿಪಾಲದ ಮಧುರ ನೆನಪುಗಳ ಲೇಖನ ಓದುತ್ತಾ ಹೋದಂತೆ ನಾನೂ ಅಲ್ಲಿಗೆ ಹೋದ ಅನುಭವ ತಂದಿತು..ಧನ್ಯವಾದಗಳು

  5. Padma Anand says:

    ಲೇಖನ ಸರಣಿಯ ಪ್ರತಿಯೊಂದು ಲೇಖನವೂ ಮಾಹಿತಿಪೂರ್ಣವಾಗಿತ್ತು, ಕಣ್ಣಿಗೆ ಕಟ್ಟುವಂತಿತ್ತು, ಮುಂದಿನ ಕಂತಿಗಾಗಿ ಕಾಯುವಂತಿತ್ತು, ಪರಂಪರೆಯ ವಿಶ್ವದರ್ಶನವಾದ ಒಂದು ಮಾದರಿಯಂತೆ ಸೊಗಸಾಗಿ ಹರಿದುಬಂತು. ತುಂಬು ಮನದ ಅಭಿನಂದನೆಗಳು ನಿಮಗೆ.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: