ಮಕಾವ್ ನಲ್ಲಿ ‘ಮಕಾವ್ ಗೋಪುರ’ ಮುಖ್ಯ ಆಕರ್ಷಣೆಗಳಲ್ಲೊಂದು. ಇದರ ಒಟ್ಟು ಎತ್ತರ ನೆಲಮಟ್ಟದಿಂದ 338 ಮೀಟರ್. ನೆಲಮಟ್ಟದಿಂದ 233 ಮೀ. ಎತ್ತರದಲ್ಲಿ ಒಂದು ವೀಕ್ಷಣಾ ಮಹಡಿಯಿದೆ. ಇಲ್ಲಿ ನಿಂತರೆ ಮಕಾವ್ ಪಟ್ಟಣದ ವಿಹಂಗಮ ನೋಟವನ್ನು ಸವಿಯಬಹುದು. ಮಕಾವ್ ಟವರ್ ನಲ್ಲಿ, ಗುಂಡಿಗೆ ಗಟ್ಟಿಯುಳ್ಳವರಿಗಾಗಿ ‘ಬಂಗಿ ಜಂಪ್‘ ಎಂದ ಸಾಹಸ ಕ್ರೀಡೆಯ ಅವಕಾಶವಿದೆ. ‘ಬಂಗಿ ಜಂಪ್’ನ್ನು ‘ಗೋಪುರದಿಂದ ಲಂಘನ’ ಎಂದು ಹೇಳಬಹುದು. ಇದು ಎತ್ತರದಲ್ಲಿ, ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿರುವ ‘ಬಂಗಿ ಜಂಪ್’ ಗೋಪುರವಂತೆ.
ಈ ಲಂಘನಕ್ಕೆ, ಸಾಕಷ್ಟು ಸುರಕ್ಷಾ ವ್ಯವಸ್ಥೆಯಿದೆ, ಆದರೂ 233 ಮಿ. ಎತ್ತರದಿಂದ ಕೆಳಗೆ ಜಿಗಿಯುವುದನ್ನು ನೋಡುವಾಗ ಮೈ ಜುಮ್ಮೆನ್ನುತ್ತದೆ.
‘
ಬಂಗಿ ಜಂಪ್ ಮಾಡುವವರು ಸುಮಾರು 4-5 ಸೆಕೆಂಡ್ಸ್ ಗಳ ಕಾಲ ಅತಿವೇಗವಾಗಿ ಗುರುತ್ವಾಕರ್ಷಣೆಗೆ ಅಭಿಮುಖವಾಗಿ ಕೆಳಗೆ ‘ಬೀಳುತ್ತಾರೆ’ ಹಾಗೂ ಗಾಳಿಯಲ್ಲಿ 3-4 ಸಲ ಜೋಲಿ ಹೊಡೆಯುತ್ತಾರೆ. ನೆಲದಿಂದ ಸುಮಾರು 30 ಮೀ ಎತ್ತರ ತಲಪುವಷ್ಟರಲ್ಲಿ,ತಮಗೆ ಕಟ್ಟಲಾದ ಕೇಬೆಲ್ ನ ಮೂಲಕ ವಾಪಸ್ ಮೇಲಕ್ಕೆ ಬರುತ್ತಾರೆ.
‘
ಬಂಗಿ ಜಂಪ್ ಸಾಹಸಕ್ಕೆ 3000 ಮಕಾವ್ ಡಾಲರ್ ಅಂದರೆ ಸುಮಾರು 18000 ರು. ತೆರಬೇಕು. ನಮ್ಮ ಸಹೋದ್ಯೋಗಿಗಳಲ್ಲಿ ಕೆಲವು ಉತ್ಸಾಹಿ ತರುಣರು, ‘ಬಂಗಿ ಜಂಪ್’ ಮಾಡಿ ನಮ್ಮೂರ ಹಮ್ಮೀರರಾದರು. ನನಗಂತೂ ಬಂಗಿ ಜಂಪ್ ಮಾಡುವುದಿರಲಿ, ಬೇರೆಯವರ ಲಂಘನದ ವೀಡಿಯೋ ನೋಡಿಯೇ ತಲೆ ಸುತ್ತು ಬಂದಂತಾಯಿತು . ಇದಲ್ಲದೆ, ವೀಕ್ಷಣಾ ಮಹಡಿಯಲ್ಲಿ, ಗೋಪುರದ ಸುತ್ತಲು ‘ಸ್ಕೈ ವಾಕ್’ ಗೆ ಅವಕಾಶವಿದೆ. ಇದಕ್ಕೆ 100 ಮಕಾವ್ ಡಾಲರ್ ಫೀ. ಇದು ಕೂಡ ಧೈರ್ಯವಂತರಿಗೆ ಮಾತ್ರ. ಇನ್ನೊಂದು ಕಡೆ ಒಂದು ದೊಡ್ಡ ಗಾಜಿನ ಚಪ್ಪಡಿಯಿತ್ತು. ನಾವು ಇದರ ಮೇಲೆ ನಡೆದಾಡಬಹುದು. ನಮ್ಮ ಕಾಲಿನ ಕೆಳಗೆ ಅಂದರೆ 233 ಮೀ. ಆಳದಲ್ಲಿ ರಸ್ತೆಯಲ್ಲಿ ಓಡಾಡುವ ವಾಹನಗಳೂ, ಜನರೂ ಕಾಣಿಸುತ್ತಾರೆ.
.
ನನ್ನ ಸುರಕ್ಷತಾ ಕಾಳಜಿ/ಅಂಜಿಕೆ ಇಲ್ಲೂ ಜಾಗೃತಗೊಂಡಿತು. ಒಂದು ವೇಳೆ ಈ ಗಾಜು ಮುರಿದರೆ…. ನಾನು 233 ಮೀ. ಆಳಕ್ಕೆ ಬಿದ್ದರೆ…… ಎಂದು ಹೆದರಿಸಿತು! “ಅನಾವಶ್ಯಕವಾಗಿ ನೀವು ಹೆದರುತ್ತೀರ, ನೋಡಿ ಏನೂ ಆಗಲ್ಲ” ಎಂದು ಸಹೋದ್ಯೋಗಿಗಳು ಕೆಲವರು ಈ ಗಾಜಿನ ಮೇಲೆ ಬೇಕೆಂದೇ ಯಕ್ಷಗಾನ ಪಾತ್ರಧಾರಿಗಳಂತೆ ಕುಣಿದು, ಗಾಜು ತುಂಬಾ ಭದ್ರವಾಗಿದೆಯೆಂದು ಸಾಬೀತುಗೊಳಿಸಿದರು!!
– ಹೇಮಮಾಲಾ.ಬಿ
ಬಂಗಿ ಜಂಪ್ ಅದ್ಭುತ .ನಿಮ್ಮ ಕಾಳಜಿ ತಪ್ಪಲ್ಲ.ಯಾಕೆ ಅಂದರೆ ಎನಿಥಿಂಗ್ ಮೇ ಹೆಪನ್ ಅಟ್ anytime .
ಲೇಖನ ಇನ್ನೂ ಉದ್ದಕ್ಕಿದ್ದರೆ ಇನ್ನೂ ಜಾಸ್ತಿ ವಿಷಯಾ ಸಿಗುತ್ತಿತು. ನಿಮ್ಮ ಅನುಭವ ಓದುಗರಿಗೆ ಮಜಾ ಕೊಟ್ಟರೆ ಇನ್ನ್ನು reyality ಅದೆಷ್ಟು happy ಆಗಿರಬಹುದು…….?