ಅರಿವಿಗೆ ಬಾರದ ಅಸಮಾನತೆ
ನೂರಾರು ವರ್ಷಗಳಿಂದ ಸ್ತ್ರೀಪುರುಷರ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಸಮಾಜ ಸುಧಾರಕರು ಮತ್ತು ಸ್ತ್ರೀವಾದಿಗಳು ಹೋರಾಡುತ್ತಲೆ ಬಂದಿದ್ದಾರೆ. ಆದರೆ ಇಂದಿಗೂ ನಮ್ಮ ಸಮಾಜ ಪುರುಷ ಪ್ರಧಾನವಾಗಿಯೆ ಉಳಿದಿದೆ. ಇಂದು ಗಂಡು ಹೆಣ್ಣು ಸರಿಸಮಾನರಾಗಿ ಸಾಧನೆ ಮಾಡುತ್ತಿದ್ದರೂ ಗಂಡಿನ ಆಶೋತ್ತರಗಳ ಮೇಲೆಯೇ ಸಮಾಜವು ನಡೆಯುತ್ತಿದೆ. ಬದುಕಿನ ಪ್ರತಿ ವ್ಯವಹಾರವನ್ನೂ ಪುರುಷನ ದೃಷ್ಟಿಕೋನದಿಂದಲೆ ನೋಡುತ್ತ ಬಂದಿರುವುದರಿಂದ ಅಸಮಾನತೆ, ಅನ್ಯಾಯಗಳು ಜನಸಾಮಾನ್ಯರಿಗೆ ಗೋಚರಿಸುವುದೆ ಇಲ್ಲ.
ಪುರುಷ ಪ್ರಧಾನ ಸಮಾಜದಲ್ಲಿ ಬಂಡವಾಳಶಾಹಿಗಳಿಂದ ಹಿಡಿದು ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ವ್ಯವಸ್ಥೆಯತನಕ ಎಲ್ಲರೂ ಹೆಣ್ಣನ್ನು ಪುರುಷನ ಹಿತಾಸಕ್ತಿಯನ್ನು ಪೂರೈಸುವ ವಸ್ತುವಾಗಿ ಬಳಸುತ್ತಾರೆ. ಬಂಡವಾಳಶಾಹಿಗಳು ಮಾಧ್ಯಮಗಳಲ್ಲಿ ಹೆಣ್ಣನ್ನು ಸೌಂದರ್ಯಕ್ಕೆ ಸೀಮಿತಗೊಳಿಸಿ, ಅವಳನ್ನು ತಮಗೆ ಬೇಕಾದ ಹಾಗೆ ಜಾಹಿರಾತುಗಳಲ್ಲಿ, ಅಶ್ಲೀಲ ಚಿತ್ರಗಳಲ್ಲಿ ಬಳಸಿಕೊಳ್ಳುತ್ತಾರೆ. ಗಂಡನ್ನು ಆಕರ್ಷಿಸುವುದೆ ಜೀವನದ ಗುರಿಯೆಂಬಂತೆ ಆಕೆ ತನ್ನ ಸೌಂದರ್ಯವರ್ಧನೆಗಾಗಿ ಜೀವನವಿಡಿ ಸರ್ಕಸ್ ಮಾಡಬೇಕಿರುತ್ತದೆ. ನಾಗರಿಕ ಸಮಾಜದಲ್ಲಿ ಕೂಡ ಹೆಣ್ಣು ಅರೆಬರೆ ಬಟ್ಟೆ ತೊಟ್ಟು, ಅಶ್ಲೀಲ ನೃತ್ಯ, ಹಾವ ಭಾವಗಳನ್ನು ಮಾಡಿ ಗಂಡನ್ನು ಸಂತೋಷ ಪಡಿಸಬೇಕಿರುತ್ತದೆ. ವೈಶ್ಯಾವಾಟಿಕೆ ಕೂಡ ಇಲ್ಲಿ ಹೆಣ್ಣಿಗೆ ಉದ್ಯೋಗವಾಗುತ್ತದೆ!
ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ಹೆಣ್ಣಿನ ಶೋಷಣೆ, ತಾರತಮ್ಯ, ಬಾಲ್ಯವಿವಾಹ, ವರದಕ್ಷಿಣೆ, ಬ್ರೂಣ ಹತ್ಯೆ, ವೈಶ್ಯಾವಾಟಿಕೆಗಳಂತಹ ಅನ್ಯಾಯಗಳನ್ನು ಬದುಕಿನ ಭಾಗಗಳೆಂಬಂತೆ ಜನ ಸ್ವೀಕರಿಸುತ್ತಾರೆ. ಅವುಗಳನ್ನು ವಿರೋಧಿಸಬೇಕೆಂದು ಅವರಿಗೆ ಅನಿಸುವುದಿಲ್ಲ. ಹೆಣ್ಣು ಕುಡಿಯುವುದರಿಂದ, ಸಿಗರೇಟ್ ಸೇದುವುದರಿಂದ ಸಮಾಜ ಹಾಳಾಗುವುದೆಂದು ಬೊಬ್ಬಿಡುವ ಜನ, ಗಂಡು ಕುಡಿದು ಹೆಣ್ಣಿನ ಶೋಷಣೆ ಮಾಡುವುದನ್ನು ಅಪರಾಧವೆಂದು ಪರಿಗಣಿಸುವುದಿಲ್ಲ.
ಕುಟುಂಬದಲ್ಲಿ ಮಹಿಳೆಯ ಪಾತ್ರ ಪುರುಷನ ಅಗತ್ಯಗಳನ್ನು ಪೂರೈಸುವ ತಾಯಿ, ಹೆಂಡತಿ, ಸಹೋದರಿ ಮಾತ್ರ. ಸ್ವಂತ ವ್ಯಕ್ತಿತ್ವವಿರುವ ಸ್ವತಂತ್ರ ವ್ಯಕ್ತಿ ಅಲ್ಲ. ಸಂಸಾರದಲ್ಲಿ ಪುರುಷನನ್ನು ಪ್ರಧಾನ ವ್ಯಕ್ತಿಯಾಗಿ, ಸ್ತ್ರೀಯನ್ನು ಅಧೀನ ವ್ಯಕ್ತಿಯಾಗಿ ಮಾಡಲು ಹೆಣ್ಣಿನ ಮೇಲೆ ಕಟ್ಟುಪಾಡುಗಳನ್ನು ಹೇರಲಾಗುತ್ತದೆ. ಮದುವೆಯಾದ ಮೇಲೆ ಹೆಣ್ಣು ಕೆಲಸ ಮಾಡಬಾರದು, ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ಕುಟುಂಬದ ಸದಸ್ಯರ ಸೇವೆ ಆಕೆಯ ಆದ್ಯ ಕರ್ತವ್ಯವಾಗಿರಬೇಕು, ಹೆಂಡತಿ ಗಂಡನಿಗಿಂತ ಕಡಿಮೆ ಓದಿರಬೇಕು ಮತ್ತು ಕಡಿಮೆ ಸಂಬಳ ತೆಗೆದುಕೊಳ್ಳಬೇಕು ಎಂದೆಲ್ಲ ನಿಯಮಗಳನ್ನು ಮಾಡಿ ಆಕೆಯ ವ್ಯಕ್ತಿತ್ವವನ್ನು ಕುಂಠಿತಗೊಳಿಸಲಾಗುತ್ತದೆ.
ಪುರುಷ ಪ್ರಧಾನ ಸಮಾಜದಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಎಲ್ಲಾ ಕಟ್ಟುಪಾಡುಗಳು ಹೆಣ್ಣಿಗೆ ಸೀಮಿತವಾಗಿರುತ್ತವೆ. ಆದರೆ ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಹೆಣ್ಣಿಗೆ ಎರಡನೆ ಸ್ಥಾನ, ಕೆಲವು ಕಡೆ ಮೈಲಿಗೆ, ನಿಷೇಧ. ಮದುವೆಯಾದ ಹೆಣ್ಣು ಗಂಡನ ಆಸ್ತಿ ಎಂಬಂತೆ ಅವನಿಂದ ತಾಳಿ ಕಟ್ಟಿಸಿ, ಅವಳ ಹೆಸರು ಬದಲಾಯಿಸಿ ಗಂಡನ ಮನೆಗೆ ಕಳಿಸಲಾಗುತ್ತದೆ. ತಗ್ಗಿಬಗ್ಗಿ ನಡಿ, ಸಂಪ್ರದಾಯಗಳನ್ನು ಪಾಲಿಸು, ಸ್ವತಂತ್ರವಾಗಿ ವರ್ತಿಸಬೇಡ ಎಂಬ ನಿಯಮಗಳನ್ನು ಹೆಣ್ಣಿಗೆ ಮಾತ್ರ ವಿಧಿಸಲಾಗುತ್ತದೆ. ಶಾಸ್ತ್ರ, ಪುರಾಣಗಳಲ್ಲಿ ಬರುವ ಹೆಣ್ಣಿನ ಪಾತಿವೃತ್ಯದ ಕತೆಗಳನ್ನು ಈಗಿನ ಕಾಲಕ್ಕೂ ಉದಾಹರಿಸಲಾಗುತ್ತದೆ. ಇವತ್ತಿಗೂ ಸೀತೆ, ಸಾವಿತ್ರಿರೆ ಆದರ್ಶ ಮಹಿಳೆಯರು! ಧಾರ್ಮಿಕ ಲೋಕದಲ್ಲಿ ಮಹಿಳೆ ಎರಡನೆ ದರ್ಜೆಯ ಪ್ರಜೆ.
ಅರಿವಿಗೆ ಬಾರದ ಇಂತಹ ಅಸಮಾನತೆಯಿಂದ ನಮ್ಮ ದೇಶದಲ್ಲಿ ಸಾಮಾನ್ಯ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರವಾಗಿದ್ದರೂ ತಮ್ಮ ಶಕ್ತಿ ಮತ್ತು ತಿಳುವಳಿಕೆ ಗಂಡಸರಿಗಿಂತ ಕಡಿಮೆ ಎಂದು ನಂಬಿರುತ್ತಾರೆ. ತಾವು ಪುರುಷರಿಗಿಂತ ಕಡಿಮೆ ಅರ್ಹತೆ ಉಳ್ಳವರು ಎಂದುಕೊಂಡು ತಮಗರಿವಿಲ್ಲದಂತೆ ಎರಡನೆ ಸ್ಥಾನಕ್ಕಿಳಿಯುತ್ತಾರೆ. ನಿಜವಾದ ಸಮಾನತೆಯ ಅರಿವು ಅವರಿಗೆ ಬರುವುದೆ ಇಲ್ಲ.
ಬದುಕಿನ ಪ್ರತಿ ವ್ಯವಹಾರದಲ್ಲೂ ಕಾಣಿಸುವ ಇಂತಹ ಅಸಮಾನತೆಯ ವಿರುದ್ಧ ಸ್ತ್ರೀಯರು ಧ್ವನಿ ಎತ್ತಬೇಕು. ಹೆಣ್ಣಿಗೆ ದುಡಿಯುವ ಹಕ್ಕು, ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕು ಅವಳು ಹುಟ್ಟುತ್ತಲೆ ಸಂವಿಧಾನದಿಂದ ಸಿಗುತ್ತದೆ. ತನ್ನ ಹಕ್ಕುಗಳನ್ನು ಆಕೆ ಯಾರಿಂದಲೂ ಬೇಡಿ ಪಡೆಯಬೇಕಿಲ್ಲ. ಆರ್ಥಿಕವಾಗಿ ಸ್ವತಂತ್ರವಾಗಿರುವುದು, ಸ್ವಾವಲಂಬಿಯಾಗಿರುವುದು, ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅಸಮಾನತೆ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದು, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತನ್ನನ್ನು ತೊಡಗಿಸಿಕೊಳ್ಳುವುದರ ಮೂಲಕ ಮಹಿಳೆ ಸಮಾನತೆಯನ್ನು ಸಾಧಿಸಬೇಕು.
ಪೂರ್ಣಿಮಾ ಕೆ
ಉತ್ತಮ ಬರಹ 🙂