ದಾಂಪತ್ಯ

Share Button

“ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತೆಂದೆತ್ತ ಸಂಬಂಧವಯ್ಯ” ಎನ್ನುವಂತೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಹೆಣ್ಣು ಗಂಡು ವಿವಾಹ ಎಂಬ ಬಂಧನಕ್ಕೊಳಗಾಗಿ ಸತಿ ಪತಿಗಳಾಗಿ ಪರಸ್ಪರ ಪ್ರೀತಿ, ಪ್ರೇಮ, ಆದರದಿಂದ ಹೊಂದಿಕೊಂಡು ಬಾಳುವುದೇ ಒಂದು ಆದ್ಭುತ ಎನಿಸುತ್ತದೆ. ರಕ್ತ ಸಂಬಂಧಿಗಳಾದ ಕಾರಣಕ್ಕೆ ಅಣ್ಣ ತಮ್ಮ, ಅಕ್ಕ ತಂಗಿ, ತಂದೆ ತಾಯಿ ಹೀಗೆ ಒಟ್ಟಾಗಿ ಬದುಕುವುದು ಅಚ್ಚರಿ ಎನಿಸದು. ಆದರೆ ಬೇರೆ ಬೇರೆ ಪರಿಸರ, ಕುಟುಂಬದಲ್ಲಿ ಬೆಳೆದ ಎರಡು ಜೀವಗಳು ಒಂದಾಗಿ ಬಾಳುವುದಿದೆಯಲ್ಲ ಅದು ಅತ್ಯಂತ ವಿಸ್ಮಯಕಾರಿ.

ವಿವಾಹ ಬಂಧನಕ್ಕೆ ಕಾಲಿಟ್ಟ ಗಳಿಗೆಯಿಂದಲೇ ದಂಪತಿಗಳು ಒಬ್ಬರಿಗೊಬ್ಬರೂ ಅನಿವಾರ್ಯವಾಗಿ ಬಿಡುತ್ತಾರೆ. ಆ ನಂತರ ಹುಟ್ಟುವ ಪ್ರೀತಿ ಶಾಶ್ವತವಾದದ್ದು. ಪರಸ್ಪರ ಪ್ರೀತಿಸಿಕೊಳ್ಳುವ ಆ ಅನುಭವ ಅಭೂತಪೂರ್ವವಾದದ್ದು, ಹಾಗೂ ಅವರ್ಣಿಯವಾದದ್ದು. ಸತಿ ಪತಿಗಳಿಬ್ಬರೂ ಪರಸ್ಪರ ಒಬ್ಬರನೊಬ್ಬರು ಪ್ರೀತಿಸಬೇಕು. ಪ್ರೀತಿಯಿಂದ ಎಲ್ಲವನ್ನು ಜಯಿಸಬಹುದು. ಜೀವನವನ್ನು ಸುಂದರಗೊಳಿಸಬಹುದು. ವಿವಾಹದಿಂದ ಸತಿಪತಿಯ ಮಿಲನವಷ್ಟೆ ಅಲ್ಲದೆ ಕುಟುಂಬಗಳ ಮಿಲನ ಕೂಡಾ ಹೌದು.
“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒರ್ವ ಸಿಪಾಯಿ” ಎಂದು ಕವಿಗಳು ಹಾಡಿದ್ದರೆ, “ಬೆಚ್ಚನೆಯಾ ಮನೆಯಾಗಿ, ವೆಚ್ಚಕ್ಕೆ ಹೊನ್ನಾಗಿ, ಇಚ್ಛೆಯನರಿತು ನಡೆವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ” ಹೀಗೆ ಗಂಡನ ಇಚ್ಛೆಯನರಿತು ನಡೆವ ಹೆಂಡತಿ ಇದ್ದರೆ ಸ್ವರ್ಗ ಎಂದು ಸರ್ವಜ್ಞ ಹೇಳಿದ್ದಾನೆ. ಆದರೆ ಹೆಂಡತಿ ಮಾತ್ರ ಗಂಡನ ಇಚ್ಛೆಯಂತೆ ನಡೆದರೆ ಸಾಲದು. ಗಂಡ ಕೂಡಾ ಹೆಂಡತಿಯ ಇಚ್ಛೆಯನರಿತು ನಡೆದರೆ ಮಾತ್ರ ಆ ಸಂಸಾರ ಸ್ವರ್ಗಕ್ಕೆ ಕಿಚ್ಚು ಹಚ್ಚುವುದು. ಬದುಕೆಂದರೆ ಒಂದು ಬಂಡಿಯಂತೆ. ಅದರ ಎರಡು ಚಕ್ರಗಳೇ ದಂಪತಿಗಳು. ಎರಡೂ ಚಕ್ರಗಳು ಸಮನಾಗಿ ಸಾಗಿದರಷ್ಟೆ ಬಂಡಿ ಮುಂದೆ ಮುಂದೆ ಹೋಗಲು ಸಾಧ್ಯ. ಒಂದು ಚಕ್ರ ಸಡಿಲಾದರೂ ಬಂಡಿ ಸಮರ್ಪಕವಾಗಿ ಮುಂದೆ ಹೋಗಲಾರದು.

ಸಂಸಾರದಲ್ಲಿ ಸತಿ ಪತಿಗಳಿಬ್ಬರೂ ಸಮಾನರು. ಇವರು ದಂಪತಿಗಳೆ ಆದರೂ ಇಬ್ಬರೂ ಪ್ರತ್ಯೇಕ ಮನುಷ್ಯರು. ಪ್ರತ್ಯೇಕ ವ್ಯಕ್ತಿತ್ವ ಹೊಂದಿದವರು.ಇಬ್ಬರಿಗೂ ವಿಭಿನ್ನ ಅಭಿರುಚಿಗಳಿರುತ್ತವೆ, ವಿಭಿನ್ನ ಭಾವನೆಗಳಿರುತ್ತವೆ. ಒಬ್ಬರು ಇನ್ನೊಬ್ಬರಿಂದ ಆತಿಯಾಗಿ ನಿರೀಕ್ಷಿಸುವುದು ತರವಲ್ಲ. ಕಾರಣ ಒಬ್ಬರಿಂದ ಮತ್ತೊಬ್ಬರ ನಿರೀಕ್ಷೆಗಳಿಗೆ ಮಿತಿ ಇರುತ್ತದೆ. ಗಂಡನಿಗೂ, ಹೆಂಡತಿಗೂ ಅವರದೆ ಆದ ಆಲೋಚನೆಗಳಿರುತ್ತವೆ. ಆಕಾಂಕ್ಷೆಗಳಿರುತ್ತವೆ. ಮದುವೆಯು ವ್ಯಕ್ತಿ ಸ್ವತಂತ್ರಕ್ಕೆ ಎಂದೂ ಅಡ್ಡಿಮಾಡಬಾರದು. ಹೆಂಡತಿ ಗಂಡನ ಗುಲಾಮಳಲ್ಲ, ಗಂಡಾ ಹೆಂಡತಿಯಾ ಅಡಿಯಾಳಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಸತಿ ಪತಿಗಳು ಪರಸ್ಪರ ಗೌರವ, ಪ್ರೀತಿ, ಸ್ನೇಹ ತೋರಿದಾಗ ಮಾತ್ರಾ ದಾಂಪತ್ಯ ಮಧುರ ಕಾವ್ಯವಾಗುವುದು. ವಿವಾಹ ಬಂಧನ ಅಮರ ಪ್ರೇಮವಾಗುವುದು. ಸತಿಯ ಆಶಯಗಳಿಗೆ ಪತಿ ಬೆಲೆ ಕೊಡ ಬೇಕು. ಪತಿಯ ಆಕಾಂಕ್ಷೆಗಳಿಗೆ ಸತಿ ಮಹತ್ವ ಕೊಡಬೇಕು. ಯಾರೂ ಯಾರಿಂದಲೂ ಅತಿಯಾಗಿ ನಿರೀಕ್ಷಿಸಬಾರದು.

ಚಿತ್ರಮೂಲ: ಅಂತರ್ಜಾಲ

ದಾಂಪತ್ಯದ ಉಳಿಯುವಿಕೆಗಾಗಿ ಪರಸ್ಪರ ಅರ್ಪಣ ಮನೋಭಾವನೆ ಬೇಕಾಗುತ್ತದೆ. ಕೆಲವೊಂದು ತ್ಯಾಗ ಕೂಡ ಈ ದಾಂಪತ್ಯ ಗೀತೆ ಬಯಸುತ್ತದೆ. ಒಬ್ಬರ ನೋವು ಮತ್ತೊಬ್ಬರದ್ದಾಗಿ, ನಲಿವುಗಳಲ್ಲಿ ಪಾಲುದಾರರಾಗುವ ಈ ವೈವಾಹಿಕ ಬದುಕು ಸುಮಧುರ ಸುಂದರ ದೃಶ್ಯ ಕಾವ್ಯ. ನಿನ್ನೊಳಗೆ ನಾನು, ನನ್ನೊಳಗೆ ನೀನು ನಾವಿಬ್ಬರೊಂದಾಗಿ ನೀ ನನಗೆ, ನಾ ನಿನಗೆ ಜೇನಾಗುವ, ದಾಂಪತ್ಯದ ರಸಗಂಗೆಯಲಿ ತೇಲಾಡುವ ಎನ್ನುವ ಭಾವ ಮೊಳೆತಾಗಲೆ ಬದುಕು ರಸಸಂಜೆಯಾಗುತ್ತದೆ. ಸತಿ ಪತಿಗಳ ಒಡನಾಟದ ಹಾಡಿಗೆ ದಾಂಪತ್ಯ ರಸ ದೀವಿಗೆಯಾಗುತ್ತದೆ.

ಸತಿಯಗಲಿ ಪತಿಯಾಗಲಿ ಒಬ್ಬರ ಮೇಲೊಬ್ಬರೂ ತಮ್ಮ ಸಾರ್ವಭೌಮತ್ವ ಹೇರುತ್ತಾ, ನಿರಂಕುಷಾಧಿಕಾರ ತೋರಿದರೆ ಅಲ್ಲಿ ಒಂದು ಜೀವ ನಲುಗಿ ಹೋಗುತ್ತದೆ. ಆಗ ವೈವಾಹಿಕ ಬದುಕು ರಸಹಿಂಡಿದ ಕಬ್ಬಿನಂತಾಗಿ ರಸಹೀನ ಬಾಳಿನಲಿ ಹೂವಿನಂತ ಮನಸ್ಸು ಮುರುಟಿಹೋಗಿ ಬಿಡುತ್ತದೆ. ದಾಂಪತ್ಯ ಸುಮಧುರ ಸಂಬಂಧವಾಗಿ ಉಳಿಯ ಬೇಕಾದರೆ ಸಮಾನತೆ ಕೂಡಾ ಪ್ರೀತಿ ಪ್ರೇಮದಂತೆ ಮೂಲಾಕ್ಷರವಾಗಬೇಕು. ಸುಂದರ ಸುಮಧುರ ದಾಂಪತ್ಯದಲ್ಲಿ ಮಕ್ಕಳ ಪಾತ್ರವೂ ಅತಿ ಮುಖ್ಯ. ಎಷ್ಟೊ ಸಂಬಂಧಗಳು ಒಡೆದು ಹೋದ ಸಂದರ್ಭಗಳಲ್ಲಿ ಮಕ್ಕಳು ಮುರಿದ ಸಂಬಂಧಗಳ ಬೆಸುಗೆಯಾಗಿ ಉಳಿಸಿದುಂಟು. ಮಕ್ಕಳು ದಾಂಪತ್ಯ ಗೀತೆಯ ಚರಣಗಳು.

ದಾಂಪತ್ಯವೆಂಬುದು ಹೂವಿನಲಿ ಗಂಧದಂತೆ, ಕಣ್ಣಿಗೆ ರೆಪ್ಪೆಯಂತೆ, ಕೋಗಿಲೆಗೆ ಗಾನದಂತೆ ಚಂದ್ರನ ತಂಪಿನಂತೆ ,ಹಾಲಿನಲಿ ಬೆರೆತ ಜೇನಿನಂತೆ ಸತಿ ಪತಿಗಳ ಒಲವು ಸೇರಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಇಂತಹ ಅಮರ ದಾಂಪತ್ಯ ಹಿರಿಯರಿಗೆ ಹೆಮ್ಮೆಯಾಗಿ, ಕಿರಿಯರಿಗೆ ಮಾದರಿಯಾಗಿ ಬಾಳಿ ಬದುಕುತ್ತದೆ.

-ಶೈಲಜಾ ಹಾಸನ. 

8 Responses

  1. Archana says:

    Super madam

  2. ನಯನ ಬಜಕೂಡ್ಲು says:

    ಇವತ್ತು ಸಣ್ಣ ಪುಟ್ಟ ಮನಸ್ತಾಪಗಳಿಗೆ ಮುರಿದು ಬೀಳುವ ಮದುವೆ ಎಂಬ ಪವಿತ್ರ ಬಂಧ ಎಷ್ಟು ಅರ್ಥಪೂರ್ಣ ವಾದದ್ದು ಅನ್ನುವುದನ್ನು ಮನಸಿಗೆ ತಟ್ಟುವ ರೀತಿ ಸೊಗಸಾಗಿ ವಿವರಿಸಿದ್ದೀರಿ ಮೇಡಂ.

    • ಶೈಲಜಾ ಹಾಸನ says:

      ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು ನಯನ

  3. ಶಂಕರಿ ಶರ್ಮ says:

    ಚಂದದ ಬರಹ

  4. Chandrika says:

    Nice madam,

  5. ಡಾ.ರಾಧಿಕಾರಂಜಿನಿ says:

    ಶೈಲಜಾ ಮೇಡಂ ದಾಂಪತ್ಯ ಎನ್ನುವುದು ಆರ್ಥ ಕಳೆದುಕೊಂಡಿರುವ ಸಂದರ್ಭದಲ್ಲಿ ಅತ್ಯುತ್ತಮ ಚಿಂತನಾ ಬರಹ ಅಭಿನಂದನೆಗಳು ಮೇಡಂ. ಕೆ.ಎಸ್.ನ. ಅವರ ಮೈಸೂರುಮಲ್ಲಿಗೆ ನೆನಪಿಸಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: