ಅಣ್ಣನೆಂಬ ಅಪ್ಪನ ನೆನಪುಗಳು

Share Button


ಬಹಳ ವರ್ಷಗಳ ಹಿಂದೆ ಒಂದು ದಿನ ನಮ್ಮಮ್ಮ ತಮ್ಮ ಮೂರೂ ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಇದ್ದಾಗಲೇ, ಅಣ್ಣ ಸ್ಕೂಟರನ್ನು ಆಚೆ ತೆಗೆದು ತಮ್ಮ ಫ್ಯಾಕ್ಟರಿ ಗೆ ಹೊರಟವರು  ,   “ಶಾಂತಿ,ಶಾಂತಿ,ಒಂಚೂರು ಬಾರೆ ಇಲ್ಲಿ,ಅಗ್ಲಿಂದ ತಲೆ ಕಡಿತಾ  ಇದೆ,ಎಷ್ಟು ಕೆರೆದ್ರು ಹೋಗ್ತಿಲ್ಲ”ಅಂತ ಕೂಗಿ ಕೊಂಡಾಗ,ಅಮ್ಮ ಗೊಣಗುತ್ತಲೇ”ಹುಡುಗ್ರು ನ ಹೆಂಗೋ ಹೊರಡಿಸಿ ಬಿಟ್ರೂ,ನಿಮ್ಮನ್ನ ಹೊರದಡಸೋದೆ  ಕಷ್ಟ”ಅಂತ ಗೊಣಗುತ್ತಾ ಹೊರಗೆ ಹೋಗಿ ನೋಡಿದರೆ,ತಾವು ಹಾಕಿಕೊಂಡಿದ್ದ ಹೆಲ್ಮೆಟ್ ಮೇಲೆ ತಲೆ ಕೆರೆಯತ್ತ ನಿಂತಿದ್ದ ಅಣ್ಣ ಕಂಡ ಕೂಡಲೇ,ಅರ್ಧ ನಗು ,ಅರ್ಧ ಸಿಟ್ಟಿನಿಂದ,”ಅಯ್ಯೋ,ನಿಮ್ ಹಾಳು  ಮರೆವೇ, ಮೊದಲು ಹೆಲ್ಮೆಟ್ ತೆಗೀರಿ”ಅಂದಾಗ ಅಣ್ಣನಿಗೆ ಜ್ಞಾನೋದಯ ವಾಗಿ,ಹಲ್ಲು ಕಿರಿಯುತ್ತ ತಮ್ಮ ತಲೆ ಕೆರೆತ ಸರಿ ಮಾಡಿಕೊಂಡು ಹೊರಟು ಹೋದರು.

ಅಣ್ಣ ಅಂದ್ರೆ ನಮ್ಮಪ್ಪ.ಕರ್ನಾಟಕದಲ್ಲಿ ಎಷ್ಟೊಂದು ಕಡೆ,ವಿಶೇಷವಾಗಿ ಮೈಸೂರು,ಹಾಸನ,ಮಂಡ್ಯ ಕಡೆ ತಂದೆಗೆ ಅಣ್ಣ ಅಂತ ಕರೆಯೊ ರೂಡಿಯಿದೆ.ಹಾಗಾಗಿ ಮೈಸೂರು ಕಡೆಯವರಾದ ನಮಗೂ ಕೂಡ ನಮ್ಮಪ್ಪ, ಬಿ.ರಾಜಣ್ಣ,ಅಂತ *ಅವರ* ಹೆಸರು, ಅಣ್ಣನಾಗಿಬಿಟ್ರು. ಅಣ್ಣ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿದ್ದರೂ ಕನ್ನಡ ಭಾಷೆ ಹಾಗೂ ಸಾಹಿತ್ಯದಲ್ಲಿ ಅಪಾರ ಒಲವು ಹೊಂದಿದ್ದವರು. ಅಷ್ಟು ಹೆಸರು ಮಾಡಲಿಲ್ಲವಾದರೂ ,ಕವಿ ಮತ್ತು ಕಥೆಗಾರರಾಗಿದ್ದರು.ಎರಡು ಕಥಾ ಸಂಕಲನ ಹಾಗೂ ಮೂರು ಕವಿತೆಗಳ ಸಂಗ್ರಹ ಹೊರ ತಂದಿದ್ದರು.

ಅಣ್ಣನ ಮೊದ ಮೊದಲ ನೆನಪು ಗಳೆಂದರೆ ದಿನವೂ ಬೆಳಿಗ್ಗೆ ಸೈಕಲ್ ಏರಿ ಫ್ಯಾಕ್ಟರಿಗೆ ಹೋಗಿ ಸಂಜೆ  ವಾಪಸ್ಸು ಬರುವಾಗ ತರುವ ಹಣ್ಣು ತಿಂಡಿಗಳಿಗೆ ನಾವು ಮನೆಯ ಮೆಟ್ಟಿಲಲ್ಲಿ ಕುಳಿತು ಕಾಯುವುದು.ಬಂದವರು ಸೈಕಲ್ ನಿಲ್ಲಿಸಿ ತಮ್ಮ ದಟ್ಟ ಅನಂತ್ ನಾಗ್ ಕ್ರಾಪನ್ನು  ಎಡಗೈನಿಂದ ತೀಡಿ ಕೊಳ್ಳುತ್ತಾ  ಬರುತ್ತಿದ್ದದ್ದು ಇಂದಿಗೂ ಕಣ್ಣಲ್ಲಿ ಕಟ್ಟಿದಂತಿದೆ. ಬಂದವರನ್ನು ನಾವು ಮೂವರೂ ಮುತ್ತಿಗೆ ಹಾಕಿದಾಗಾ”ಇರ್ರೋ ಹುಡುಗ್ರಾ,ಈಗ ಬಂದೆ” ಅಂತ ಹೇಳಿ,ಕೈಕಾಲು ತೊಳೆದು ಬಂದ ಮೇಲೆ ಮಕ್ಕಳ ಜೊತೆ ಆಟ.  ಮೂರೂ ಮಕ್ಕಳ ಮೇಲೆ ಅಪಾರ ಮಮತೆ,ಜೊತೆಗೆ ಒಬ್ಬಳೇ ಮಗಳು ಅನ್ನೋ ಮುದ್ದು ನನ್ನ ಮೇಲೆ.ಅಮ್ಮ ಆಗಾಗ “ಅಪ್ಪ ಮಗಳು ಬಣ್ಣ ,ಬುದ್ದಿ ಎಲ್ಲಾ ಒಂದೇ” ಅಂತ ಅಣಕಿಸಿದರೆ “ಹೂಂ ಕಣೇ,ನಮ್ಮಬಣ್ಣ, ಅಚ್ಚ ಈ ಮಣ್ಣಿನ ಬಣ್ಣ” ಅಂತ ಹೆಮ್ಮೆಯಿಂದ ಹೇಳೋರು ಕನ್ನಡದ ಕಟ್ಟಾಭಿಮಾನಿ ನಮ್ಮಣ್ಣ.

ಅಣ್ಣ ಕನ್ನಡದ ಕಟ್ಟಭಿಮಾನಿ ಅಂದ್ರೆ ಕಟ್ಟಾಭಿಮಾನಿ ಆದ್ದರಿಂದ ನಾವು ಮೂವರೂ ಓದಿದ್ದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ. ಅವರ ಕನ್ನಡ ಅಭಿಮಾನ ಹೇಗೆ ಅಂದರೆ ಸಾಧ್ಯವಾದಷ್ಟು ಮನೆಯಲ್ಲಿ ಕನ್ನಡ ಪದಗಳನ್ನೇ  ಬಳಸ ಬೇಕಿತ್ತು. ಯಾವಾಗಲೂ ಬ್ಯಾಗ್ ಅವರಿಗೆ ಚೀಲವೆ, ಪ್ಯಾಕ್ಕು ಪೊಟ್ಟಣ,ಪೇಪರ್ ಗೆ  ಕಾಗದ, ವಾಚ್ ಗೆ  ಗಡಿಯಾರ, ಟವಲ್ ಗೆ ಚೌಕ ,ಹೀಗೆ ನಮಗೆಲ್ಲ ಸಾಮಾನ್ಯವಾಗಿ ರೂಡಿಯಲ್ಲಿರುವ ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಪದಗಳನ್ನು ಸಲೀಸಾಗಿ ಬಳಸೋರೂ. ಕೆಲವು ಇಂಗ್ಲಿಷ್ ಪದಗಳಿಗೆ ತಮ್ಮದೇ ಆದ ವಿಶೇಷ ನಾಮಕರಣ ಬೇರೆ,ಅದರಂತೆ ಅಷ್ ಟ್ರೆ ಬೂದಿ ಬಟ್ಟಲು,ವಾಲ್ ಕ್ಲಾಕ್ ಗೋಡೆ  ಗಡಿಯಾರ ,ಫುಟ್ ರಗ್ ಕಾಲ್ ವರಸು ಹೀಗೆ,ಎಷ್ಟೊಂದು ನಾಮಕರಣಗಳು ನಗೆ ಬರೆಸುವಂತವು ಇವೆ. ಸ್ವೆಟರ್ ಗೆ ಬೆವರುಕ ಅಂತ, ಶಾಕ್ ಅಬ್ಸರ್ಬರ್ ಗೆ ಕುಲುಕು ಮುಕ್ಕ , ಸ್ಕ್ರೂ  ಡ್ರೈವರ್ ಗೆ ತಿರುಪು ತಿರ್ಗ, ಅಂತೆಲ್ಲಾ ಹೆಸರಿಟ್ಟದ್ದು ಇಂದಿಗೂ ನನಗೆ
ಬಲು ಮೋಜೆನಿಸುತ್ತದೆ.

ಕನ್ನಡ ಮಾತಾಡೋದು ಮಾತ್ರ ಅಲ್ಲ ಕಡ್ಡಾಯವಾಗಿ ಕನ್ನಡ ವೃತ್ತ ಪತ್ರಿಕೆಗಳನ್ನೂ, ಮಕ್ಕಳ ಕಥೆಗಳನ್ನೂ  ಓದಬೇಕಿತ್ತು. ರಜೆ ಬಂದರೆ ಸಾಕು ನನಗೆ ಮತ್ತು ನನ್ನಣ್ಣ ಮನುವಿಗೆ ಅಂತ ರಾಶಿ ರಾಶಿ ಅಮರ ಚಿತ್ರ ಕಥೆಗಳು,ಜಾತಕ ಕಥೆಗಳು,ರಾಮಾಯಣ ಮಹಾಭಾರತ ಎಲ್ಲಾ ತಂದು ಓದಿನ ಹುಚ್ಚು ಹಿಡಿಸಿ ಬಿಟ್ಟರು.ಜೊತೆಗೆ ಓದಿರುವ ಚಂದಮಾಮ,ಬಾಲಮಿತ್ರ, ಬೊಂಬೇಮನೆ ಅಂತ ಮಕ್ಕಳ ಪತ್ರಿಕೆಗಳು ಅಪಾರ.

ನಮಗಂತೂ ಶಾಲೆಯ ಓದಿನ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ,ಯಾವ ಹೋಂ ವರ್ಕ್,ಮಾರ್ಕ್ಸ್,ಅಂತ ತಲೆ ಕೆಡಿಸಿ ಕೊಳ್ಳುತ್ತಿರಲಿಲ್ಲ. ಒಟ್ಟಾರೆ ದಿನಾ ಸ್ಕೂಲಿಗೆ ಹೋಗಬೇಕು, ವರ್ಷಾ ವರ್ಷಾ ತಪ್ಪದೇ ಉತ್ತೀರ್ಣ ರಾಗಬೇಕುಅಷ್ಟೇ. ಎಷ್ಟೋ ಸಾರಿ ಅವರ ಗೆಳೆಯರು ಯಾರಾದರೂ ಮನೆಗೆ ಬಂದಾಗ “ಮಕ್ಳು ಏನ್ ಓದುತ್ತಿದ್ದಾರೆ “ಅಂದ್ರೆ,ನಮ್ಮನ್ನೇ ಕರೆದು “ಹೇಳ್ರೋ ಹುಡುಗ್ರ”  ಅನ್ನೋರು. ನಾವೆಲ್ಲ ಕಾಲೇಜ್ ಮೆಟ್ಟಿಲು ಹತ್ತಿದ ಮೇಲೆಯೇ ಅವರಿಗೆ ಯಾರ್ ಯಾರ್ ಏನೇನು ಓದುತ್ತಿದ್ದಾರೆ ಅನ್ನೋದರ ಮೇಲೆ ಗಮನ ಬಂದದ್ದು. ನಾವು ಮೂವರು ರಜೆ ಬಂದರೆ ಸಾಕು ಹೊರಗೆ ಆಟಕ್ಕೆ ಅಂತ ಹೋದರೆ ಮನೇ ಸೇರುತ್ತಲೇ ಇರಲಿಲ್ಲ. ಆಟ  ಆಡಿಕೊಂಡು ಇಡೀ ಅರ್ಧ ಭದ್ರಾವತಿ ಸುತ್ತಿ ಬಂದರೂ ಏನೂ ಹೇಳ್ತಿರಲಿಲ್ಲ. ಅಮ್ಮ ಬೈದರೂ  “ಆಡೋ ವಯಸ್ಸು ಮಕ್ಳು  ಆಡಿಕೊಳ್ಳಲಿ ಬಿಡು” ಅಂತ ಅಮ್ಮನಿಂದ ಬಚಾವ್ ಮಾಡುತ್ತಿದ್ದರು.

ನಮ್ಮಣ್ಣ ಮನು ಅಂತೂ ಗೋಲಿ,ಬುಗುರಿ ಆಟಗಳಲ್ಲಿ ನಮ್ಮ ಏರಿಯಾದ ದೊಡ್ಡ ಚಾಂಪಿಯನ್.ಆಗ ಪಾಂಡ್ಸ್ ಪೌಡರ್ ಗಳ ದೊಡ್ಡ ದೊಡ್ಡ ಟಿನ್ ಡಬ್ಬಗಳು ಬರುತ್ತಿದ್ದವು,ಅವುಗಳು ಖಾಲಿಯಾದ ಬಳಿಕ ಆ ಡಬ್ಬಗಳ ತುಂಬಾ ಮನುವಿನ ಗೋಲಿಗಳ ಖಜಾನೆ ತುಂಬಿ ತುಳುಕುತ್ತಿತ್ತು. ಬುಗುರಿಗಳಂತೂ ಅವನ ಚಡ್ಡಿ ಜೋಬಿನಲ್ಲಿ ತುರುಕಿ ಕೊಂಡಿರುತ್ತಿದ್ದವು.ಅಮ್ಮ “ಯಾವಾಗ್ಲೂ ಗೋಲಿ ಬುಗುರಿ ಅಂತಾನೆ ನೋಡ್ರಿ ” ಅಂತ ದೂರಿದರೆ ಅಣ್ಣ,ಅವನ ಆಟ  ಎಲ್ಲ ನೋಡಿ “ಎಷ್ಟು ಚೆನ್ನಾಗಿ ಗುರಿ ಇಡ್ತಾನೇ ನೋಡೇ” ಅಂತ ಖುಷಿ  ಪಡೋದೆ! ಅದೂ ಸಾಲದು ಅಂತ ಜೊತೆಯಲ್ಲಿ ಸೇರಿ ಬುಗುರಿ ಆಡಿ ,ಆಡುವ ಬುಗುರಿಯನ್ನು ಅಂಗೈ ಮೇಲೆ ಎತ್ತಿ ಕೊಳ್ಳುವ ರೀತಿಯನ್ನೂ ಹೇಳಿಕೊಟ್ಟಾಗ ಅಮ್ಮ “ಹೋಗಿ ಹೋಗಿ ನಿಮಗೆ ಹೇಳಿದ್ನಲ್ಲ,ಮಕ್ಕಳಿಗೆ ಬುದ್ದಿ ಹೇಳಿ ಅಂದ್ರೆ ನೀವೇ ಮಕ್ಕಳ ಹಂಗೇ ಅಡ್ತಿರಲ್ಲಾ” ಅಂತ ಬೈದು ಸುಮ್ಮನಾಗಿದ್ದೂ ಇದೆ.

ನನ್ನ ತಮ್ಮ ಸಂತೋಷನಂತೂ ಹುಟ್ಟಾ ಸಾಹಸಿ,ಚಿಕ್ಕಂದಿನಿಂದ ಆತ ಮಾಡಿರುವ  ತುಂಟಾಟಗಳಿಗೆ ಲೆಕ್ಕವೇ ಇಲ್ಲ. ಊರಲ್ಲಿ ತೆಂಗಿನ ಮರ ಹತ್ತಿ  ಅಷ್ಟುದ್ದದಿಂದಲೂ ಜಾರೋದು, ಕಣ್ಣು ಮುಚ್ಚಿಕೊಂಡು ಸೈಕಲ್ ಹೊಡೆಯೋದು, ನಾಲ್ಕನೇ ಕ್ಲಾಸ್ ನಲ್ಲಿದ್ದಾಗಲೇ ಅಪ್ಪನ ಸ್ಕೂಟರ್ ಓಡಿಸಲು ಪ್ರಯತ್ನ ಪಟ್ಟಿದ್ದು, ಎಂಟನೇ ಕ್ಲಾಸ್ ಗೆಲ್ಲ ದೊಡ್ಡದೊಂದು ಕಾಲುವೆಯಲ್ಲಿ ಬಿದ್ದು ಸ್ನೇಹಿತರಿಂದ ಈಜು ಕಲಿತದ್ದು ಎಲ್ಲ ಅಪ್ಪನಿಗೆ ಮುದ್ದಿನ ವಿಷಯಗಳೇ. “ನನ್ನ ಕಿರಿ ಮಗ ಅಸಾಧ್ಯ ಸಾಹಸಿ” ಎಂದು ಎಲ್ಲಾ ಸ್ನೇಹಿತರ ಹತ್ತಿರ ಕೊಚ್ಚಿಕೊಂಡು ಹೇಳೋರು. ಅಷ್ಟೊಂದು ಮುಕ್ತವಾಗಿ ಯಾವ ಅಡೆ ತಡೆಗಳು ಇಲ್ಲದ ಬಾಲ್ಯ ನಾವು ಮೂವರದೂ ಆಗಿತ್ತು.
.
ನಾವಿನ್ನೂ ಚಿಕ್ಕವರಿದ್ದಾಗ ಅವರ ಹತ್ರ ಒಂದು ಅಟ್ಲಾಸ್ ಸೈಕಲ್ ಇತ್ತು. ಈಗ ಹೇಗೆ ಸಾಮಾನ್ಯವಾಗಿ ಎಲ್ಲರ ಮನೇಲಿ ಬೈಕ್ ಕಾರ್ ಇರ್ಥವೋ ಆಗ ಸೈಕಲ್,ಸ್ಕೂಟರ್ ಇರ್ತಿದ್ವು. .ಭಾನುವಾರ ಬಂದ್ರೆ ಸಾಕು ನಾವು ಮೂವರನ್ನೂ ಅದರ ಮೇಲೆ ಹೇರಿಕೊಂಡು ಪಾರ್ಕು,ಸ್ನೇಹಿತರ ಮನೆ ಅಂತ ಸವಾರಿ ಹೊರಡೋರು. ಸೈಕಲ್ ಸಾಲದಷ್ಟು ನಾವು ದೊಡ್ಡವರಾದಾಗ ಸ್ಕೂಟರ್ ತೊಗೊಂಡು,ಅದರಲ್ಲಿ ಅಮ್ಮ ಅಣ್ಣ ನಾವು ಮೂವರು, ಇಡುಕಿರಿಸಿಕೊಂಡು ಕುಳಿತು ಭದ್ರಾವತಿ ಸುತ್ತಾ ಮುತ್ತಾ ಇದ್ದ ನೊಡತಕ್ಕಂತ ಜಾಗಗಳಿಗೆಲ್ಲ ಸುತ್ತಿದ್ದೇ ಸುತ್ತಿದ್ದು.

ಆಗೆಲ್ಲ ಏನೂ ಈಗಿನಂತೆ ಫರ್ನೀಚರ್ ಗಳು ಯಾರೂ ಹೆಚ್ಚಾಗಿ ಗುಡ್ಡೆ ಹಾಕಿ ಕೊಳ್ತಿರಲಿಲ್ಲ.ಮಂಚ,ಒಂದು ನಾಲ್ಕು ಕುರ್ಚಿ, ಒಂದು ಮೇಜಿದ್ದರೆ ಅದೇ ಹೆಚ್ಚಾಗಿ ಹೋಗುತ್ತಿತ್ತು. ನಾವೆಲ್ಲಾ ನೆಲದ ಮೇಲೆ ಚಾಪೆ ಹಾಸಿಕೊಂಡು ಅದರ ಮೇಲೆ ಕುಳಿತೇ ನಮ್ಮ ಓದು ಬರಹ ಎಲ್ಲಾ ಮಾಡಿಕೊಳ್ಳುತ್ತಿದ್ವು.  ಹೀಗೆ ಒಂದಿನ ನಾವು ಕೂತು ಬರೆದು ಕೊಳ್ಳುತ್ತಿದ್ದಾಗಾ ಅಣ್ಣನೂ ಬಂದು ಕುಳಿತು ಕೊಂಡು, “ನೋಡ್ರೋ ಈಗೊಂದು ತಮಾಷೆ ತೋರಿಸ್ತೀನಿ, ನಾನು ಸಿಗರೇಟ್ ಸೇದುವಾಗ ಕಣ್ಣಲ್ಲಿ ಹೊಗೆ ಬಿಡ್ತೀನಿ, ನೀವೆಲ್ಲರೂ ನನ್ನ ಕಣ್ಣನ್ನೇ ನೋಡ್ತೀರ ಬೇಕು” ಅಂತ ಹೇಳಿದಾಗ ನಾವು ಕಣ್ಣು ಬಾಯಿ ಬಿಟ್ಟುಕೊಂಡು ಅವರ ಕಣ್ಣನ್ನೇ ನೋಡುತ್ತ ಕುಳಿತರೆ, ಒಂದೆರಡು ನಿಮಿಷದ ನಂತರ ನನ್ನ ಕೈ ಏನೋ  ಚುರು ಚುರು  ಅಂತಿದೆ ಅಂತ ನೋಡಿದ್ರೆ ಅಪ್ಪನ ಸಿಗರೇಟ್ ನನ್ನ ಕೈಗೆ ತಗುಲುತ್ತಿದೆ! ಆಗ ” ಅಣ್ಣ ನೀನು ಬರೀ ಮೋಸ ” ಅಂತ ಬೆನ್ನಿಗೆ ಗುದ್ದಿ ಗುದ್ದಿ ಇಟ್ಟಾಗ ಅವರಿಗೆ ನಗುವೇ ನಗು.

ಬರಹಗಾರ ಆಗಿದ್ದ ಅಣ್ಣನಿಗೆ ಸಹಜವೆನ್ನುವಂತೆ ಎಷ್ಟೋ ಬರಹಗಾರರಿಗೆ ಇರುವಂತೆ ಸಿಗರೇಟ್ ಬೀಡಿ ಸೇದುವ ಚಟ ಬಂದುಬಿಟ್ಟಿತ್ತು. ಆದರೆ ನಮಗೆಲ್ಲ ಏನು ಅದು ಕೆಟ್ಟದ್ದು ಅಂತ ಆಗ ಅನ್ನಿಸ್ತನೆ ಇರ್ಲಿಲ್ಲ. ಅದಲ್ಲದೆ ಯಾವುದೋ ಪಿಚ್ಚರ್ ನಲ್ಲಿ ಹೀರೋ ಸಿಗರೇಟ್ ಸೇದಿ ಉಂಗುರ ಉಂಗುರವಾಗಿ ಹೊಗೆ ಬಿಡೋದು ನೋಡಿ  ಮನೆಗೆ ಬಂದು “ಅಣ್ಣಾ,ನೀನು ಉಂಗುರ ಹೊಗೆ ಮಾಡು ” ಅಂತ ಪೀಡಿಸಿ,ಅವರು ನಕ್ಕು ಹಾಗೆ ಮಾಡಿ ತೋರಿಸಿದಾಗಾ,”  ಇದನ್ನೇ ಕಲಿಸಿ ಮಕ್ಳಿಗೆ ” ಅಂತ ಅಮ್ಮ ಬೈದರೆ “ಹೋಗ್ಲಿ ಬಿಡು, ತಿಳ್ಕೊಳ್ಳ್ಳೋ ಕಾಲಕ್ಕೆ  ಒಳ್ಳೇದು ಕೆಟ್ಟದ್ದು ಅವ್ರಿಗೇ ಗೊತ್ತಾಗುತ್ತೆ” ಅಂತ ನಮ್ಮ ಪರವೇ ಅವರ ವಾದ.

ರಾತ್ರಿ ಮಲಗುವಾಗ ತಮ್ಮ ಆಕಡೆ ಒಬ್ರು ಈಕಡೆ ಒಬ್ರು ನಾನೂ, ಮನುನಾ ಮಲಗಿಸಿಕೊಂಡು, ಮೈ ಮೇಲೆ ಕೈಕಾಲು ಹೇರಿಸಿಕೊಂಡು, ಪುಟ್ಟ ತಮ್ಮ ನನ್ನು ಹೊಟ್ಟೆ ಮೇಲೆ ಮಲಗಿಸಿಕೊಂಡು ಅಣ್ಣ ಕಥೆ ಹೇಳುವಾಗ,  ಅವರ ಬೀಡಿ ಸಿಗರೇಟ್,ತಲೆಯ ಕೊಬ್ಬರಿ ಎಣ್ಣೆಯ ಕಮಟು, ಶಾಲಿನ ಬೆವರಿನ ವಾಸನೆ ಇದೆಲ್ಲಾ ಸೇರಿ  ಅವರದೇ ಆದ ಒಂದು ವಿಶಿಷ್ಟ ಪರಿಮಳ ಮೂಸುತ್ತಾ, ಕಥೆಗೆ ಹೂಂಗುಟ್ಟುತ್ತ ಕೇಳಿಸಿಕೊಳ್ಳುತ್ತಾ ಇದ್ದದ್ದೇ ಒಂದು ಸುಖ. ಹಾಗೆ ಹೇಳುತ್ತಿದ್ದ ಕಥೆಗಳಲ್ಲಿ ನಾವು ಮಕ್ಕಳನ್ನೇ ಪಾತ್ರಧಾರಿಗಳಾಗಿಸಿ, ಹುಟ್ಟಿಸಿಕೊಂಡು ಕಥೆ ಹೇಳೋದ್ರಲ್ಲಿ ಅಣ್ಣ ಎತ್ತಿದ ಕೈ. ಹಾಗೆ  ಕೇಳಿದ ಕಥೆಗಳನ್ನ ಇನ್ನೂ  ಉಪ್ಪು ಖಾರಾ ಹಾಕಿ ಮಾರನೇ ದಿನ ಶಾಲೆಯಲ್ಲಿ ಕಥೆ ಹೇಳೊ ಸಮಯದಲ್ಲಿ ನಾನು ಹೇಳಿದ್ದೇ ಹೇಳಿದ್ದು.

ಸಮಾಜವಾದಿ ಲೇಖಕರಾಗಿದ್ದ ಅಣ್ಣ ಮನೆಯಲ್ಲೂ ಕಡ್ಡಾಯವಾಗಿ ತಮ್ಮ ಆಲೋಚನೆಗಳನ್ನು ಪಾಲಿಸುತ್ತಿದ್ದರು.ನಾಸ್ತಿಕರಾಗಿದ್ದ ಅವರು ಎಂಥಾ ಕಷ್ಟ ಕಾಲದಲ್ಲೂ ದೇವರ ಮೊರೆ ಹೊಕ್ಕವರಲ್ಲ .ಯಾವುದೇ ವ್ರತ ಪೂಜೆ ಪುನಸ್ಕಾರ  ಮಾಡಿಸಿದವರಲ್ಲ. ಹಾಗಂತ ಅಮ್ಮ ಪ್ರತಿದಿನ ಮನೆಯಲ್ಲೇ ಮಾಡುತ್ತಿದ್ದ ದೇವರ ಪೂಜೆಗೂ ಅಡ್ಡ ಬಂದವರಲ್ಲ. “ಅವಳ ನಂಬಿಕೆ ಅವಳಿಗೇ” ಅನ್ನೋ ಉದಾರತೆ.  ಅಮ್ಮನನ್ನು ಒಂದು ದಿನವಾಗಿ ಬೈದದ್ದು ಇರಲಿ ಏರು ಧ್ವನಿಯಲ್ಲಿ ಮಾತನಾಡಿಸಿದ್ದನ್ನೂ ನಾವು ಕಂಡಿಲ್ಲ. ಅಮ್ಮನ ಹಿಂದೆ ಮೂರೋತ್ತು “ಶಾಂತಿ ಶಾಂತಿ “ಅಂತ ಸುತ್ತಿಕೊಂಡು  ಇರುತ್ತಿದ್ದರು. ಅಮ್ಮ ಕಾಲುಂಗುರ, ಕಾಲಿನ ಗೆಜ್ಜೆ ಹಾಕಲು ಅವರು ಎಂದೂ ಬಿಡಲಿಲ್ಲ .ಅವರ  ಪ್ರಕಾರ  ಕಾಲುಂಗುರ ಗುಲಾಮ ಗಿರಿಯ ಸಂಕೇತವಾಗಿತ್ತು. ಊರ  ಕಡೆ ಕುರಿ, ಹಸುಗಳಿಗೆ ಕಿವಿಗೆ ಉಂಗುರ ಹಾಕಿ ಗುರುತು ಮಾಡುತ್ತಾರೆ ನೋಡಿ ಅದೇ ರೀತಿ ಇದೂ ಕೂಡ ಅಂತ ಅವರ  ಅಭಿಪ್ರಾಯ.

ಅಮ್ಮನ ಜೊತೆ ಅವರು ಮಾತನಾಡದ ವಿಷಯವೇ ಇಲ್ಲ.ತಮ್ಮ ಆಫೀಸ್ ಕೆಲ್ಸ,ಬರವಣಿಗೆ, ಸ್ನೇಹಿತರು, ಊರ ನೆಂಟರು ರಾಜಕೀಯ ಎಲ್ಲವನ್ನೂ ಅಮ್ಮನ ಕಿವಿಗೆ ತುಂಬಬೇಕು. ಅಮ್ಮನಿಗಂತೂ ಅಣ್ಣನೇ ಅವರ ಸರ್ವಸ್ವ. ಇಬ್ಬರೂ ಪರಸ್ಪರ ಕಾಲು ಎಳೆದು ಕಿಚಾಯಿಸೋದ್ರಲ್ಲು ಏನೂ ಕಮ್ಮಿ ಇರಲಿಲ್ಲ. ಆಗ ಊರಿನ ಅಜ್ಜಿ ಮನೆಯವರೊಂದಿಗೆ ಇದ್ದ ಏಕೈಕ ಸಂಪರ್ಕ ಮಾಧ್ಯಮ ಅಂದರೆ ಪತ್ರ ವ್ಯವಹಾರವೊಂದೇ. ಕಾಗದ  ಬರೆಯೋದು ಅನ್ನೋರು.ವಾರಕ್ಕೊಂದಾದರೂ ಊರಿಂದ ಕಾಗದ ಬರೋದು ಇಲ್ಲಾ ನಾವೇ ಬರೆಯೋವು. ಊರಿಂದ ಸಾಮಾನ್ಯವಾಗಿ ನಮ್ಮಜ್ಜಿ,ಅವ್ವ ಅಂತ ನಾವೆಲ್ಲ ಕರೀತಿದ್ದ ತಿಮ್ಮಮ್ಮ ಕಾಗದ ಬರೆಯೋರು. ಆ ಕಾಲದಲ್ಲೇ ಎಲ್ ಎಸ್ ಪಾಸಾಗಿದ್ದ, ನಮ್ಮ*ವ್ವ*ಚೆನ್ನಾಗಿಯೇ ಕನ್ನಡ ಓದೋರು ಬರೆಯೋರೂ. ಆದರೆ ಹಳೇ ಕಾಲದವರಲ್ವ ಅಕ್ಷರಗಳು ಮಾತ್ರ ಮೋಡಿ ಅಕ್ಷರಗಳಾಗಿ ಅಮ್ಮನನ್ನು ಬಿಟ್ರೆ ಇನ್ಯಾರಿಗೂ ಅರ್ಥ ಆಗುತ್ತಿರಲಿಲ್ಲ. ಅವ್ವನ ಕಾಗದ ಬಂದ್ರೆ ಅಣ್ಣ “ನೋಡೇ ಶಾಂತಿ,ನಿಮ್ಮವ್ವನ ಹಲ್ಮಿಡಿ ಶಾಸನ ಬಂದಿದೆ, ಓದಿ ಹೇಳು” ಅಂತ ರೇಗಿಸಿದರೆ ಅಮ್ಮ,”ನಮ್ಮವ್ವನಿಗೆ ಹಲ್ಮಿಡಿ ಶಾಸನ ಕೆತ್ತೋ ಕಾದ್ರು ಗೊತ್ತು,ನಿಮ್ಮವನಿಗೆ ಅದೂ ಬರೋಲ್ಲ,ಗಾಡಿ ಕಪ್ಪಿನ ಹೆಬ್ಬೆಟ್ಟು” ಅಂತ ಅಣ್ಣನ ಕಾಲೆಳೆದರೆ ಅಣ್ಣನಿಗೆ ನಗು.

ಅಪಾರ  *ಸ್ನೇಹಿತರ*  ಬಳಗ  ಹೊಂದಿದ್ದ ಅಣ್ಣ ಯಾವತ್ತೂ ಜಾತಿ, ಧರ್ಮ, ವರ್ಗ ಅಂತ ಭೇದ ಮಾಡಿದವರೇ ಅಲ್ಲ. ನಾವು ಮಕ್ಕಳಿಗೂ ಅದನ್ನೇ ಕಲಿಸಿದ್ದರು. ಆಗ ಭದ್ರಾವತಿ ,ಶಿವಮೊಗ್ಗಗಳಲ್ಲಿ  ಜರುಗುತಿದ್ದ  ಎಷ್ಟೊಂದು  ಪ್ರಗತಿಪರ ಚಳುವಳಿಗಳಲ್ಲಿ ಗೆಳೆಯರೊಂದಿಗೆ ಭಾಗವಹಿಸುತ್ತಿದ್ದ, ಕವಿಗೋಷ್ಠಿಗಳಲ್ಲಿ ಕವನ ವಾಚಿಸುತ್ತಿದ್ದ, ಪತ್ರಿಕೆಗಳಲ್ಲಿ ಕಥೆ ಪ್ರಕಟವಾಗುತ್ತಿದ್ದ, ಆಕಾಶವಾಣಿಯಲ್ಲಿ  ಎಷ್ಟೊಂದು  ಚಿಂತನೆಗಳನ್ನ ಓದುತಿದ್ದ ನಮ್ಮಣ್ಣ ನಮಗೆ ಹೀರೋನೇ  ಆಗಿಬಿಟ್ಟಿದ್ದರು.

ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿದ್ದರೂ ಅಪ್ಪಟ ಪ್ರಾಮಾಣಿಕವಾಗಿ ಬದುಕಿದವರು. ಎಂದಿಗೂ ಒಂದು ಪೈಸಾ ಕೂಡ ಲಂಚಕ್ಕೆ ಅಂತ ಆಸೆ ಪಟ್ಟವರಲ್ಲ.ಚೀಟಿ ಬಡ್ಡಿ ವ್ಯವಹಾರ ಅಂತೆಲ್ಲಾ ಎಷ್ಟೊಂದು ಜನ ಸಂಬಳಗಾರರು ಹಣ ಮಾಡುವ ಮಾರ್ಗ ಹಿಡಿದಿದ್ದರೂ  ಅಂತಹದಕ್ಕೆಲ್ಲ ಅವರು ತೀವ್ರ ವಿರೋಧಿ. ಅಪಾರವಾಗಿ ಸಾಹಿತ್ಯವನ್ನ ಓದಿಕೊಂಡಿದ್ದ ಅವರು ಕುವೆಂಪುರವರ  ಕಟ್ಟಾ ಅಭಿಮಾನಿ. ಗಾಂಧಿವಾದದ ಪ್ರೇಮಿ. ತಮ್ಮ ನೆಂಟರಿಷ್ಟರಲ್ಲಿ,ಗೆಳೆಯರಲ್ಲಿ ಯಾರಿಗೆ ಕಾಯಿಲೆ ಬಂದರೂ ಅವರು ಹೋಗಿ ಕಷ್ಟ ಸುಖ ವಿಚಾರಿಸಲೇ ಬೇಕು. ಹೀಗೆ ಅಪಾರ ಜೀವನ ಪ್ರೀತಿಯಿಂದ ಬದುಕಿದವರು.

ಆದರೆ ಎಲ್ಲವೂ  ಹೀಗೆ  ಸುಖವಾಗಿ ಸಾಗಿ ಹೋದರೆ ಮನುಷ್ಯ ನನ್ನು  ಹಿಡಿಯಲಾದೀತೆ? ಹಾಗೆಯೇ ನಮ್ಮ ಮನೆಗೂ ಯಾರ ದೃಷ್ಟಿ ಬಡಿಯಿತೋ ನಮ್ಮಮ್ಮ ದುರದೃಷ್ಟವಶಾತ್  ಕಾಯಿಲೆ ಬೀಳಲು  ಶುರುವಾಗಿ ನಾಲ್ಕೈದು ವರ್ಷಗಳ ಕಾಲ ನರಳಿ ನಂತರ ಹೋಗಿ ಬಿಟ್ಟರು .ಅಮ್ಮನೊಂದಿಗೆ ಅಷ್ಟೊಂದು ಚೆನ್ನಾಗಿದ್ದ ಅಣ್ಣನನ್ನು ಅವರ ಸಾವು ಅಲ್ಲಾಡಿಸಿಬಿಟ್ಟಿತು. ಅಪಾರವಾಗಿ  ಡಿಸ್ಟರ್ಬ್ ಆದ ಅಣ್ಣ ನಮಗೆ ತಿಳಿಯದೇ ಇರುವ ಅಣ್ಣನಾಗಿ ಬದಲಾಗಿ ಬಿಟ್ಟರು. ಆಗ ಕೆಲವು ವರ್ಷಗಳು ಅಣ್ಣನೊಂದಿಗೆ ನಾವು ಮೂವರ ಸಂವಹನ ಸಂಪರ್ಕಗಳು ತಪ್ಪಿಯೆ ಹೋಯಿತು. ಎಷ್ಟೊಂದು ತಪ್ಪು ಗ್ರಹಿಕೆ, ಅಪನಂಬಿಕೆಗಳು, ಚಾಡಿಗಳು ಅಣ್ಣ ಮತ್ತು ನಮ್ಮ ಮಧ್ಯೆ ದೊಡ್ಡ ಕಂದಕವನ್ನೇ ತೋಡಿಬಿಟ್ಟವು. ಆ ಕಷ್ಟ ಕಾಲಗಳ ಮರೆಯುವುದು ಕಷ್ಟ ಸಾಧ್ಯವೇ. ಆದರೂ ಎಳವೆಯಲ್ಲಿ ಪ್ರೀತಿಯ ಸಾಗರವೇ  ಆಗಿದ್ದ  ಅಣ್ಣನನ್ನು  ಕೆಲವು ವರ್ಷಗಳ ಅಶಾಂತಿಗಾಗಿ ದೂರುವುದು ತಪ್ಪಾಗಬಹುದು ಎಂದು ಈಗ, ನಾವೆಲ್ಲಾ ತಂದೆ ತಾಯಂದಿರು ಆದ ಬಳಿಕ ಅನ್ನಿಸುತ್ತದೆ. ಆಗ ನಾವೆಲ್ಲಾ ಇನ್ನೂ ಹದಿಹರೆಯದವರು,ಓದು ಮುಗಿದಿರಲಿಲ್ಲ,ಕೆಲಸ ಸಿಕ್ಕಿರಲಿಲ್ಲ, ಮನೆಯಲ್ಲಿ ಅಶಾಂತಿ, ಅದರಿಂದ ಬಂದ ಅಭದ್ರತೆ ಇದೆಲ್ಲದರಿಂದ, ಅಣ್ಣ ತನ್ನ ಲೋಕದಲ್ಲೇ ಮುಳುಗಿ ಹೋಗಿ ನಮ್ಮ ಕಡೆ ಗಮನ ಹರಿಸಲಿಲ್ಲ ಅನ್ನೋ ಕೋಪ ಬಹಳ ವರ್ಷ ನಾವು ಮೂವರಿಗೂ ಇತ್ತು.

ನನ್ನ ಮದುವೆಯಾಗಿ ನನ್ನ ಮಕ್ಕಳು ಹುಟ್ಟಿದ ಬಳಿಕ ಅಣ್ಣ ಮತ್ತೆ ಮೃದುವಾದರು.ಬೀಡಿ ಸಿಗರೇಟ್ ಸೇದುತ್ತಾ ಇದ್ದ ಅವರು ಮಕ್ಕಳ ಮುದ್ದಿನ “ಬೆಂಕಿ ತಾತ ” ಆದರು. ನಿವೃತ್ತರಾದ ಬಳಿಕವೂ ಓದು ಬರವಣಿಗೆ ಮುಂದುವರೆಸಿ,ಎರಡು ಕವನ ಸಂಕಲನ  ಹೊರತಂದರು, ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿ ಕವನ ವಾಚಿಸಿದ್ದು ಅವರಿಗೆ ಅಪಾರ ಖುಷಿ ಕೊಟ್ಟಿತ್ತು. ಜಾನಪದ  ವಿಶ್ವವಿದ್ಯಾನಿಲಯಕ್ಕು ಕೆಲ ದಿನ ಕೆಲಸ ಮಾಡಿ ನಿವೃತ್ತ ಜೀವನದಲ್ಲೂ ಉತ್ಸಾಹದಿಂದ ತಮ್ಮನ್ನು ತಾವು ಎಷ್ಟೊಂದು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. “ಓದು ಬರಹ ಇಲ್ಲದೆ ಹೋಗಿದ್ರೆ ನಾನು ಬದುಕಲು ಆಗುತ್ತಲೇ ಇರಲಿಲ್ಲ ಕಣಮ್ಮ” ಅಂತ ಎಷ್ಟೋ ಬಾರಿ ಹೇಳಿದ್ದಿದೆ. ಓದಲು ಕುಳಿತರೆ ತಪಸ್ಸಿಗೆ ಕುಳಿತ ಹಾಗೆ ಏಕಾಗ್ರಚಿತ್ತದಿಂದ ಓದುತ್ತಿದ್ದ ಅಣ್ಣ ನನ್ನ ಮಕ್ಕಳಿಗೆ  ಒಂದು  ಅಚ್ಚರಿಯೇ.  ನನ್ನ ಮಗಳಂತೂ “ತಾತ, ನಮ್ಮ ತಾತ ರೈಟರ್, ನಮ್ಮ ತಾತನ ತರಹ ತಾತ ಯಾರಿಗೂ ಇಲ್ಲ ಅಂತ ನಮ್ಮ ಸ್ಕೂಲ್ ನಲ್ಲೆಲ್ಲ ಹೇಳಿದ್ದೀನಿ” ಅಂತ ಅವರು  ತೀರಿಕೊಳ್ಳುವ ಒಂದು ವಾರ ಮುಂಚೆ ನಮ್ಮ ಮನೆಗೆ ಬಂದಿದ್ದಾಗ ಹೇಳಿದ್ದಕ್ಕೆ ಅವರ ಕಣ್ಣಲ್ಲಿ ನಿರೂರಿಬಿಟ್ಟಿತ್ತು. ತಮ್ಮನ ಮಗಳು ಹುಟ್ಟಿದಾಗ ವಂಶದ ಕುಡಿ ನೋಡಿದ ಸಂತಸ.

ಈಗ  ನಾವು  ಮೂವರಿಗೂ  ಸಾಕಷ್ಟು ವಯಸ್ಸಾಗಿ, ಸಾಕಷ್ಟು ಜೀವನವೆಂಬ ಶಾಲೆಯಲ್ಲಿ ಪಾಠ ಕಲಿತ ಬಳಿಕ ,ಅಪ್ಪನನ್ನು ನಾವೂ ಕೂಡ ವಸ್ತು ವ್ಯಾಮೋಹದ ಜಗತ್ತಿನ ಅಳತೆಗೋಲಲ್ಲಿ ಅಳೆಯಬಾರದಿತ್ತೇನೋ  ಅನಿಸುತ್ತದೆ. ಕಹಿಯೆಲ್ಲ ಕರಗಿ ಮಧುರ ಬಾಲ್ಯದ ಸಿಹಿ ನೆನಪುಗಳೇ ಸಾಕು ಅನಿಸುತ್ತದೆ.  ಅಮ್ಮ ತೀರಿಕೊಂಡ ಬಳಿಕ  ಅಣ್ಣನ  ಮೇಲೆ  ಎಷ್ಟೇ  ಮುನಿಸಿದ್ದರೂ ಅಮ್ಮನ ಹಾಗೆ *ಅಣ್ಣನೂ* ಕೂಡ ಒಂದಲ್ಲ ಒಂದು ದಿನ ತೀರಿ ಹೋಗಬಹುದು ಅಂತ ಒಂದು ದಿನವೂ ನನಗೆ ಅನ್ನಿಸಿಯೆ ಇರಲಿಲ್ಲ. ಒಂದು
ಮದುವೆಯಲ್ಲಿ  ತಮ್ಮ ಮೊಮ್ಮಗಳ ಕಳಿಸಿ  ಕೊಡುವಾಗ ತಾತ ಒಬ್ಬರು ಅಳುವುದನ್ನು ನೋಡಿದಾಗ, ನನ್ನ ಮಗಳನ್ನು ಮದುವೆ ಮಾಡಿ ಕೊಟ್ಟಾಗಲೂ ಅಣ್ಣ  ಹೀಗೆ  ಅಳಬಹುದೇನೋ ಅನ್ನಿಸಿತ್ತು. ಆದರೆ ಅದನ್ನೆಲ್ಲ ಹುಸಿಗೊಳಿಸುವ ಹಾಗೆ ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ತೀರಿಕೊಂಡರು.

ಈಗ  ನಾವು   ಮಕ್ಕಳೆಲ್ಲಾ   ಚೆನ್ನಾಗಿ   ಸೆಟಲ್   ಆಗಿ ಬದುಕುತ್ತಿ ರುವಾಗ ಅವರಿರಬೇಕಿತ್ತು  ಅಂತ ದಿನಾ ಅನ್ನಿಸುತ್ತದೆ.ಅಣ್ಣ ಕೊಟ್ಟು ಹೋಗಿರುವ ಅಮೂಲ್ಯ ಕೊಡುಗೆಯಾದ ಸಾಹಿತ್ಯದ  ಓದುಬರಹ  ನನ್ನ ಬದುಕಿಸುತ್ತಿದೆ!

-ಸಮತಾ.ಆರ್
 

18 Responses

  1. Arpitha says:

    Beautifully penned

  2. pushpa says:

    Adbutha lakana

  3. padma says:

    I think you used lockdown period for good purpose. Hats off to your talent. Nice family story.

  4. ನಯನ ಬಜಕೂಡ್ಲು says:

    ಸುಂದರ ನೆನಪುಗಳು

  5. Latha v.p. says:

    Very nice

  6. Veena says:

    Superrrr

  7. ಶಂಕರಿ ಶರ್ಮ says:

    ಅಪ್ಪನ ನೆನಪಿನ ಕಂಪು ಲೇಖನವಿಡೀ ಹರಡಿದೆ. ಓದು, ಬರಹಗಳು ಜೀವನೋತ್ಸಾಹ ತುಂಬುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.. ಚಂದದ ಬರಹ..ಧನ್ಯವಾದಗಳು.

  8. dayananddiddahallidc@gmail.com says:

    Super article, hat’s off to memory and style of deliverying things. Keep it up

  9. Roopa Shree a says:

    Good keep it up

  10. dayananddiddahallidc@gmail.com says:

    Super article, style of deliverying things is excellent

  11. ಸುನೀತ says:

    ಅದ್ಭುತ ಸಮತಾ…

  12. Samatha says:

    ಓದಿ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

  13. Hema says:

    ಬಲು ಸೊಗಸಾದ ಬರಹ

  14. Anonymous says:

    ಆಪ್ತವಾದ ಬರೆಹ

  15. Anonymous says:

    ಬಹಳ ನೈಜವಾಗಿ ಮನಸಿನ ಭಾವನೆ ಮತ್ತು ಅನುಭವಗಳನ್ನು ಹಂಚಿದ್ದೀರಿ.

  16. ಸವಿತಾ says:

    Nimma lekanada ಉದ್ದಕ್ಕೂ ನನ್ನ ಅಣ್ಣ.. ನನ್ನ ಕಣ್ಣ್ ಮುಂದೆ ಬಂದಂತಾಯಿತು….. ತುಂಬಾ ಸುಂದರವಾಗಿದೆ ಸಮತ

  17. Anonymous says:

    Wonderful

  18. Radha.N.G says:

    really it is very interested.i remembered my father while reading this

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: