ಬೊಗಸೆಬಿಂಬ

ಒಂದು ನಿಧಾನದ ಧ್ಯಾನ

Share Button

ಒಂದು ನಿಧಾನವಾದ ಗಾಳಿ ಅಲ್ಲಿ ಚಾಚಿರುವ ಮುಳಿ ಹುಲ್ಲುಗಳ ಮೇಲೆ ಹಾದು ಹಾಗೆಯೇ ಅಲ್ಲಿರುವ ಗಾಳಿ ಮರಗಳೆಡೆಯಿಂದ ಸುಂಯನೆ ಬೀಸುತ್ತಿದೆ. ಅಲ್ಲಿಯೇ ಕೆಂಪಗೆ ಚಿಗುರಿದ ಮಾವಿನ ಮರದ ಎಲೆಗಳು ಲಘುವಾಗಿ ಕಂಪಿಸಿ ಮತ್ತೆ ಸ್ತಬ್ಧ. ಅಲ್ಲಿಯ ತಿಳಿಗೊಳದ ಮೇಲೆಸೆದ ಕಲ್ಲು ಕೂಡ ಅಲೆಗಳನೆಬ್ಬಿಸಿ ಮತ್ತೆ ಮೌನವಾಗುವುದು. ಇದು ನಮ್ಮ ಊರಿನಲ್ಲಿನ ಹಳ್ಳಿ ಮನೆಯ ಪಕ್ಕದಲ್ಲಿ ದಿನವೂ ಕಾಣುವ ದೃಶ್ಯವಾಗಿತ್ತು. ಅಂಗಳದಲ್ಲಿನ ಕೆಂಪನೆಯ ದಾಸವಾಳದ ಗೆಲ್ಲುಗಳು, ಗಾಳಿಗೆ ಅಲುಗಿ ಮುದುಡಿದ ಹೂವುಗಳು, ಅರಳುವ ಮೊಗ್ಗುಗಳು ಎಂದೆಲ್ಲ ನಿಶ್ಶಬ್ದವಾಗಿ ನಿಲ್ಲುವುವು. ಹೀಗಿತ್ತು ಒಂದು ಕಾಲದ ಜೀವನ ಶೈಲಿ. ಈಗ ಹಾಗಿಲ್ಲ. ನಮಗೆಲ್ಲ ಧಾವಂತ; ಗೆಲ್ಲುವ ತವಕ. ‘ನಿಧಾನ’ ಎನ್ನುವುದೇ ನಮಗೆ ಸಮಯ ವ್ಯರ್ಥವೆನಿಸುತ್ತದೆ. ನಿಜವಾಗಿ ಅದು ಹಾಗಲ್ಲ; ಒಂದು ನಿಧಾನವೆಂಬ ವ್ಯವಧಾನ ನಮ್ಮೆಲ್ಲರ ಅಗತ್ಯವೇ ಆಗಿದೆ.

‘ನಿಧಾನ’ವೆಂಬ ನಿದಾನವೇ ನಮ್ಮೆಲ್ಲಾ ಶಾರೀರಿಕ, ಮಾನಸಿಕ ಯಾತನೆಗಳಿಗೆ ಮದ್ದು. ‘ಯೋಗ’ ಕಲಿಯುವವರಿಗೆ ಮೊದಲು ಅರಿವಾಗುವುದೇ ಅದು. ಮೊದ ಮೊದಲಂತೂ ಉಸಿರಾಟ ಕೂಡ ನಿಧಾನವಾಗಿ ಮಾಡದೇ ಇರುವ ಧಾವಂತ. ನಿಧ ನಿಧಾನವಾಗಿ ಕಾಯುವ, ಕಾನ್ಶಿಯಸ್ ಆಗಿ ನಿಧಾನಿಸುವ ಹದವನ್ನು ಯೋಗ, ಧ್ಯಾನ ನಮಗೆ ಕಲಿಸಿ ಕೊಡುತ್ತದೆ. ಒಂದು ಹೂವಿನ ಮೊಗ್ಗೆ ನಿಧಾನವಾಗಿ ಬಿರಿಯುವಂತೆ, ಒಂದು ತಂಗಾಳಿ ನವಿರಾಗಿ ನಸು ಬಿಸುಪನ್ನು ತಬ್ಬಿಕೊಳ್ಳುವಂತೆ, ಒಂದು ಬೊಚ್ಚು ಬಾಯಿಯ ಕಂದ ಕಣ್ಣಗಲಿಸಿ ನಕ್ಕಂತೆ, ನಮ್ಮ ನಿಮ್ಮೆಲ್ಲರ ಎದೆಯೊಳಗಿನ ಪ್ರಸನ್ನತೆಯನ್ನು ನಾವು ಆವಾಹಿಸಿಕೊಳ್ಳಬೇಕಾಗಿದೆ.

ಧಾವಂತದಿಂದ ಮೌನ ಜೀವಂತಿಕೆಗೆ ಮರಳುವುದು ಸುಲಭವೇನು ಅಲ್ಲ. ನಮಗೆ ಗಾಬರಿಯಾಗುತ್ತಿರುತ್ತದೆ. ಈ ಪ್ರಪಂಚದಲ್ಲಿ ನಾವೆಲ್ಲಿ ಬಾಕಿ ಅಗುತ್ತೇವೆಯೋ ಎಂದು. ಇಲ್ಲಿ ನಾವು ಗಮನಿಸಬೇಕಿರುವುದು, ಹೇಗೆ ಗರಗಸವೊಂದನ್ನು ಹರಿತಗೊಳಿಸದೇ ಇದ್ದಲ್ಲಿ ಅದು ಹೇಗೆ ಮೊಂಡಾಗುವುದೋ ಅದೇ ರೀತಿ ಒಂದು ರೀತಿಯ ಆಂತರಿಕ ಶಾಂತಿ, ನೆಮ್ಮದಿ ಇಲ್ಲವಾದಲ್ಲಿ ನಾವೂ ಸಮರ್ಥವಾಗಿ ಬಾಳಲು, ನಮ್ಮ ಸಾಧ್ಯತೆಗಳನ್ನು ದುಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು. ನಿಧಾನವಿಲ್ಲದ ಕಾರಣವೇ ಈ ಜಗತ್ತಿನಲ್ಲಿ ಅಪಘಾತಗಳು, ಅಸಹಜ ಸಾವುಗಳು, ಮಾನಸಿಕ ದುರಿತಗಳು, ಕೌಟುಂಬಿಕ ಕಲಹಗಳು, ವ್ಯಾವಹಾರಿಕ ಮನಸ್ತಾಪಗಳು, ದು:ಖ, ರೋಗ ರುಜಿನಗಳು ಸಂಭವಿಸುತ್ತವೆ. ನಿಧಾನವಿಲ್ಲವಾದಲ್ಲಿ ಒಂದಲ್ಲ ಒಂದು ದಿನ ನಮ್ಮ ಮಾನಸಿಕ ಸ್ವಾಸ್ಥ್ಯ ಕಂಗೆಡುವುದು ಹೌದು.

ಈ ಕಿರಿ ಕಿರಿಯ, ಗದ್ದಲದ ಪ್ರಪಂಚದಲ್ಲಿ ಒಂದು ಬೊಗಸೆ ಮೌನವನ್ನು ನಮ್ಮದಾಗಿಸಿಕೊಳ್ಳಲು ನಮಗೆ ಸಾಧ್ಯವಾಗಬೆಕು. ಹೇಗೆ? ಹೆಚ್ಚಿನವರೂ ಎದೆಯ ಗಾಯಗಳಿಗೆ ಮುಲಾಮು ಹಚ್ಚಿಕೊಳ್ಳಲಾಗದೆ ಕುಡಿತ, ಸಿಗರೇಟ್, ಇನ್ನಿತರ ಚಟಗಳು, ಖಿನ್ನತೆ, ಮೂಡಿಯಾಗಿವುದು ಹೀಗೆಲ್ಲ ತಳಮಳಗಳಿಂದ ನರಳುತ್ತಿರುತ್ತಾರೆ. ಇನ್ನುಳಿದವರು ಪುಸ್ತಕ, ಸಂಗೀತ, ಆಧ್ಯಾತ್ಮ, ಹೀಗೆಲ್ಲ ತಮ್ಮ ತಮ್ಮ ಅಮಲನ್ನು ಹುಡುಕಿಕೊಳ್ಳುತ್ತಿರುತ್ತಾರೆ.

ನಮ್ಮ ದೈನಂದಿನ ಜೀವನ್ಕೊಂದು ಶಿಸ್ತಿನ ಚೌಕಟ್ಟು, ಸಮಯದ ನಿಭಾವಣೆ, ಧನಾತ್ಮಕ ದೃಷ್ಟಿಕೋನ ಇಷ್ಟಿದ್ದರೆ, ಹಳೆಯ ನೆನಪುಗಳಿಂದ ಘಾಸಿಗೊಳ್ಳದೆ ಅವುಗಳಿಂದ ಪಾಠ ಕಲಿತು, ಸಾಧ್ಯವಾದರೆ ಅವನ್ನು ಮರೆತು, ಆಶಾ ಭಾವದಿಂದ ಬದುಕುವುದೇ ನಿಧಾನದ ನಿದಾನ. ರನ್ನಿಂಗ್ ರೇಸ್ ನಲ್ಲಿ ಮೊದಲೇ ಜೋರಾಗಿ ಓಡಿ ಎನರ್ಜಿ ಕಳೆದುಕೊಳ್ಳದೆ ಇರುವಂತೆ, ನಾವು ಕೂಡ ಆತ್ಮ ಶಕ್ತಿಯನ್ನು ಕಾಯ್ದುಕೊಳ್ಳಬೇಕು. ಅದು ನಿಧಾನಿಸಲು ಅರಿಯುವುದರಿಂದ, ಪ್ರಯತ್ನ ಪೂರ್ವಕವಾಗಿ ಮೌನವಾಗಿ, ಶಾಂತವಾಗಿ ಇರುವುದರಿಂದ ಸಾಧ್ಯ.

-ಜಯಶ್ರೀ ಬಿ. ಕದ್ರಿ

8 Comments on “ಒಂದು ನಿಧಾನದ ಧ್ಯಾನ

  1. ನಿಧಾನ ಹಾಗೂ ಧಾವಂತಗಳನ್ನು ಸಂದರ್ಭಕ್ಕೆ ಸರಿಯಾಗಿ ರೂಢಿಸಿಕೊಳ್ಳಬೇಕು. ನಾನು ಕಾರು ಕಲಿಯುವ ಸಂದರ್ಭದಲ್ಲಿ ಕೆಲವು ಕಿಲೋಮೀಟರ್ ಗಳಷ್ಟು ದೂರ ನಿಧಾನವಾಗಿ ಕಾರು ಚಲಾಯಿಸುತ್ತಿದ್ದೆ . ವಯಸ್ಸಾದ ಮೇಲೆ ಕಲಿಯಬೇಕಾದರೆ ಅದು ಅಗತ್ಯ. “ತರಿಕೆರಿ ಎರಿಮೇಲೆ….” ನಿಧಾನವಾಗಿ ಅಭ್ಯಾಸ ಮಾಡಿದರೆ ಶುದ್ಧ ಉಚ್ಛಾರದಲ್ಲಿ ಹೇಳಲು ಸಾಧ್ಯವಾಗುತ್ತದೆ. ನಿಧಾನದ ಅವಶ್ಯಕತೆಯನ್ನು ಚೆನ್ನಾಗಿ ಹೇಳಿದಿರಿ

  2. ಲೇಖನ ತುಂಬ ಆಪ್ಯಾಯಮಾನವೆನಿಸಿತು. ಹಲವಾರು ವಿಚಾರಗಳಲ್ಲಿ “ನಿಧಾನವೇ ಪ್ರಧಾನ” ಎಂಬ ಮಾತು ಅತ್ಯಂತ ಸೂಕ್ತವೆನಿಸುತ್ತದೆ 🙂

  3. ತುಂಬಾ ಸುಂದರವಾದ ಬರಹ . ಒಂದೊಂದು ಮಾತೂ ಸತ್ಯ. ಇತ್ತೀಚಿನ ದಿನಗಳಲ್ಲಿ ನಿಧಾನ ಅನ್ನೋ ವ್ಯವಧಾನವೇ ಇಲ್ಲ ಯಾರಿಗೂ, ಯಶಸ್ಸೆಂಬ ಕುದುರೆಯ ಹಿಂದಿನ ಓಟ ಆಗಿದೆ ಬದುಕು .

  4. ಪ್ರಸ್ತುತ ಬದುಕಿಗೆ ಸೂಕ್ತ ಬರಹ. ತುಂಬಾ ಖುಷಿಕೊಟ್ಟಿತು

  5. ಸಕಾಲಿಕ ಬರಹ. ಮೌನ..ನಿಧಾನ..ಇದೆಲ್ಲವೂ ಜೀವನದ ಆರೋಗ್ಯಕ್ಕೆ ಒಳ್ಳೆಯ ಟಾನಿಕ್ ಗಳು.

  6. ಇಂದಿನ ಧಾವಂತದ ಬದುಕಿನಲ್ಲಿ ನಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ..ಬಹಳ ಚೆನ್ನಾಗಿ ಹೇಳಿದ್ದೀರಿ

  7. ನಿಜ.. ಪ್ರಯತ್ನಪೂರ್ವಕ ಮೌನ ಸಿದ್ಧಿಸಿಕೊಳ್ಳಬೇಕು. ವಿಚಾರಕ್ಕೆ ಮನಸ್ಸನ್ನು ಪ್ರೇರೇಪಿಸುವಂತಿದೆ ನಿಮ್ಮ ಬರಹ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *