ಮೃಗಾಲಯದಲ್ಲಿ ಒಂದು ದಿನ…
ನಮಗೆ ಪ್ರಾಣಿಗಳನ್ನು ನೋಡಬೇಕೆಂದು ಬಹಳ ಆಸೆ ಇತ್ತು. ನಮ್ಮೂರಿನ ಬಳಿ ಚಿಕ್ಕ ಅರಣ್ಯವಿದೆ. ಅದರಲ್ಲಿ ಹಂದಿಗಳು ಮಾತ್ರ ಇವೆ. ಆದರೆ ನಮಗೆ ಹುಲಿ, ಸಿಂಹಗಳನ್ನು ನೋಡಬೇಕೆಂಬ ಆಸೆ ಇತ್ತು. ನಮಗೆ ರಜೆ ಬಂದಾಗ ನಾವು ನಮ್ಮೂರಿನ ಬೆಟ್ಟಕ್ಕೆ ಹೋಗುತ್ತೇವೆ. ಅಲ್ಲಿ ಹಂದಿಗಳು, ನವಿಲುಗಳು, ಹಾವುಗಳು, ಮೊಲಗಳು ಝರಿಗಳು, ಪಕ್ಷಿಗಳು ಮುಂತಾದ ಪ್ರಾಣಿಗಳು ಇರುತ್ತವೆ. ನಮಗೆ ಒಮ್ಮೆಯಾದರೂ ಜೂ಼ ಗೆ ಹೋಗಬೇಕೆಂಬ ಆಸೆ. ಇದೇ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಪ್ರವಾಸ ಹೊರಟರು. ನಮಗೆ ತುಂಬಾ ಖುಷಿಯಾಯಿತು. ಏಕೆಂದರೆ ನಾವೆಲ್ಲ ಜೂ಼ಗೆ ಹೋಗುತ್ತೇವೆಂದು. ನಂತರ ನಾವೆಲ್ಲ ಪ್ರವಾಸ ಹೋದೆವು. ನಾವು ಹೊರಟಿದ್ದ ಬಸ್ಸಿನಲ್ಲಿ ನನ್ನ ಪಕ್ಕದಲ್ಲಿದ್ದದ್ದು ನನ್ನ ಸ್ನೇಹಿತ. ನಾವು ಮೈಸೂರಿಗೆ ಹೋದೆವು. ಅಲ್ಲಿ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ಕೊಟ್ಟೆವು. ನಂತರ ಟಿಕೆಟ್ ತೆಗೆದುಕೊಂಡು ಪ್ರಾಣಿಗಳನ್ನು ನೋಡಲು ಹೊರಟೆವು.
ನಾವು ಮೊದಲು ಸಿಂಹವನ್ನು ನೋಡಲು ಹೊರಟೆವು. ಅಲ್ಲಿ ಗಂಡು ಮತ್ತು ಹೆಣ್ಣು ಸಿಂಹಗಳೆರೆಡೂ ಇದ್ದವು. ಸಿಂಹವನ್ನು ಕಾಡಿನ ರಾಜ ಎನ್ನಲಾಗುತ್ತದೆ. ನಂತರ ಸಿಂಹವು ಘರ್ಜನೆ ಮಾಡಿತು. ಆಗ ನಮಗೆಲ್ಲ ಭಯವಾಯಿತು.
ನಂತರ ನಾವು ಹುಲಿಯನ್ನು ನೋಡಲು ಹೊರಟೆವು. ಅಲ್ಲಿ ಎಂಟು ಹುಲಿಗಳಿದ್ದವು. ಹುಲಿಯು ನಮ್ಮ ರಾಷ್ಟ್ರ ಪ್ರಾಣಿ. ಎಂಟು ಹಳುಗಳಲ್ಲಿ ಐದು ಹುಲಿಗಳು ಓಡಾಡುತ್ತಿದ್ದವು ಮತ್ತು ಮೂರು ಹುಲಿಗಳು ಮಲಗಿದ್ದವು. ಒಂದು ಹುಲಿಗೆ ಜ್ವರ ಬಂದಿದೆ ಅನಿಸುತ್ತಿತ್ತು. ಹುಲಿಗೆ ಪ್ರಾಣಿ ಸಂಗ್ರಹಾಲಯದ ವೈದ್ಯರು ಬಂದೂಕಿನಿಂದ ಚುಚ್ಚುಮದ್ದನ್ನು ಹಾಕುತ್ತಿದ್ದರು. ಆಗ ನಾವೆಲ್ಲ ವೈದ್ಯರನ್ನೋಗಿ ಕೇಳಿದೆವು, “ನೀವು ಬಂದೂಕಿನಿಂದ ಅದಕ್ಕೆ ಹೊಡೆಯುತ್ತೀರಲ್ಲ, ಅದು ಸತ್ತು ಹೋಗುವುದಿಲ್ಲವೇ…” ಎಂದು. ಆಗ ವೈದ್ಯರು ಹೇಳಿದರು, “ನಾವು ಔಷಧಿ ಕೊಡುತ್ತಿರುವುದು ಹೇಗೆಂದರೆ ಬಂದೂಕಿನಲ್ಲಿರುವ ಬುಲೆಟ್ಟಿನಲ್ಲಿ ಔಷಧಿಯನ್ನು ತುಂಬುತ್ತೇವೆ. ಈ ಬುಲೆಟ್ಟು ಮುಂದೆ ಚೂಪಾಗಿ, ಹಿಂದೆಯೆಲ್ಲಾ ಪೆನ್ನಿನ ಟ್ಯೂಬಿನಂತೆ ಇರುತ್ತದೆ. ಅಂತಹ ಬುಲೆಟ್ಟಿನಿಂದ ಗುರಿಯಿಟ್ಟು ಬಿಡುತ್ತೇವೆ. ಈ ಬುಲೆಟ್ಟಿನಲ್ಲಿರುವ ಔಷಧಿ ಹುಲಿಯ ಮೇಯ್ಯೊಳಗೆ ಹೋಗುವವರೆಗೂ ಅದು ಹಾಗೆಯೇ ಇರುತ್ತದೆ. ಇದರಲ್ಲಿ ಔಷಧಿ ಖಾಲಿಯಾದಾಕ್ಷಣವೇ ಅದು ಬಿದ್ದು ಹೋಗುತ್ತದೆ..”ಎಂದು ಹೇಳಿದರು. ನಮ್ಮ ರಾಜ್ಯ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ.
ಆಮೇಲೆ ನಮ್ಮ ಹೆಜ್ಜೆಗಳು ಚಿರತೆಯತ್ತ ಸಾಗಿದವು. ಚಿರತೆಯು ರೈಲಿನ ವೇಗದಷ್ಟು ಜೋರಾಗಿ ಓಡುತ್ತದೆ. ಇದಕ್ಕೆ ಬೇಟೆ ತುಂಬ ಸುಲಭವಾಗಿ ಸಿಗುತ್ತದೆ. ಒಂದು ಚಿರತೆಯು ಮಾಂಸವನ್ನು ತಿನ್ನುತ್ತಿತ್ತು. ಇನ್ನೊಂದು ಚಿರತೆ ಬಂದು ಅದು ತಿನ್ನುತ್ತಿದ್ದ ಮಾಂಸದಲ್ಲಿ ಒಂದು ಚೂರನ್ನು ಕಸಿದುಕೊಂಡು ಹೋಯಿತು. ಎರೆಡೂ ಸೇರಿ ಮಾಂಸವನ್ನು ಖಾಲಿ ಮಾಡಿದವು. ಅಲ್ಲಿದ್ದ ಚಿರತೆಯೊಂದು ಮಲಗಿಕೊಂಡಿತು. ಹಾಗೆಯೇ ಮುಂದೆ ಸಾಗುತ್ತಾ ಆನೆಗಳ ಕಡೆ ಹೊರಟೆವು.
ಆನೆ ನಮ್ಮ ರಾಜ್ಯ ಪ್ರಾಣಿ. ಅಲ್ಲಿದ್ದ ಆನೆಗಳು ತೊಟ್ಟಿಯಲ್ಲಿದ್ದ ನೀರನ್ನು ಎರಚಿಕೊಂಡು ಸ್ನಾನ ಮಾಡುತ್ತಿದ್ದವು. ಆನೆಯ ದಂತಗಳನ್ನು ಬೇಟೆಯಾಡಬಾರದು. ಇದು ಕಾನೂನಿಗೆ ವಿರುದ್ಧವಾಗುತ್ತದೆ. ಆನೆಯು ಮರದ ಎಲೆಗಳನ್ನು ತಿನ್ನುತ್ತದೆ.
ಹಾಗೆಯೇ ನಾವು ಮುಂದೆ ಹೋಗುತ್ತಿದ್ದಾಗ ಜಿರಾಫೆಗಳು ಕಾಣಿಸಿದವು. ಜಿರಾಫೆಗಳ ಕತ್ತು ಎಂಟ್ಹತ್ತು ಅಡಿ ಉದ್ದವಾಗಿತ್ತು. ಇದು ಉದ್ದವಾದ ಮರಗಳ ಎಲೆಗಳನ್ನು ತಿನ್ನುತ್ತದೆ.
ಹಾಗೆಯೇ ಮುಂದೆ ಹೋಗುತ್ತಿದ್ದ ಹಾಗೆ ಹಾವುಗಳನ್ನು ಕಂಡೆವು. ಹಾವುಗಳಲ್ಲಿ ಅನಕೊಂಡ, ವಿಷದ ಹಾವು ಮತ್ತು ಅನೇಕ ಬಗೆಯ ಹಾವುಗಳು ಇದ್ದವು. ಹಾವುಗಳನ್ನು ನೋಡುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಹಾವುಗಳು ಕಪ್ಪೆ ಮೊಟ್ಟೆಗಳನ್ನು ತಿನ್ನುತ್ತವೆ. ಹಾವುಗಳು ಕಚ್ಚಿದರೆ ನಾವು ಬದುಕುತ್ತೇವೇ ಎಂದು ನಂಬಿಕೆ ಇರುವುದಿಲ್ಲ. ನಾವು ಹಾವುಗಳ ಹತ್ತಿರ ಕಚ್ಚಿಸಿಕೊಳ್ಳಬಾರದು. ಹಾವುಗಳಿಗೆ ನಾವು ತೊಂದರೆ ಕೊಡಬಾರದು.
ಹಾಗೆಯೇ ನಮ್ಮ ಹೆಜ್ಜೆಗಳು ಜಿಂಕೆಗಳ ಬಳಿಗೆ ಸಾಗಿದವು. ಈ ಜಿಂಕೆಗಳಲ್ಲಿ ಒಂದು ಬಿಳಿ ಜಿಂಕೆ ಇತ್ತು. ಇದು ನೋಡುವುದಕ್ಕೆ ತುಂಬಾ ಮುದ್ದಾಗಿ ಕಾಣುತ್ತಿತ್ತು. ಇವುಗಳಲ್ಲಿ ಕೊಂಬುಗಳು ಇರುವವು ಎಂದು ನಾವು ತಿಳಿದಿದ್ದೆವು ಮತ್ತು ನಾವು ಅನೇಕ ಪ್ರಾಣಿಗಳನ್ನು ನೋಡಿದೆವು.
ಆನಂತರ ನಾವೆಲ್ಲ ಬಸ್ಸಿನೊಳಗೆ ಹೋಗಿ ಕುಳಿತುಕೊಂಡೆವು. ಬಸ್ಸು ನಂತರ ಎಲ್ಲಿಯೂ ನಿಲ್ಲಿಸಲಿಲ್ಲ. ನಮ್ಮ ಶಾಲೆಯ ಹತ್ತಿರ ರಾತ್ರಿ ಎರೆಡು ಗಂಟೆಗೆ ನಿಲ್ಲಿಸಿತು. ನಂತರ ನಾವೆಲ್ಲ ಶಾಲೆಯಲ್ಲಿ ನಿದ್ದೆ ಹೋಗದೆ ನಮ್ಮ ಪ್ರವಾಸ ಹೇಗಿತ್ತು ಎಂದು ಚರ್ಚಿಸಿದೆವು. ಮತ್ತೊಮ್ಮೆ ಹೋಗಲು ಇಷ್ಟವಾಯಿತು.
– ಮನೋಜ್
7ನೇ ತರಗತಿ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತೊಂಡೇಭಾವಿ ರೈಲ್ವೇ ಸ್ಟೇಶನ್ , ಗೌರಿಬಿದನೂರು
ಏ ಹುಡುಗಾ……..
ಮಲಗಿದ್ದ ಹುಲಿಯನ್ನು ಕಂಡು ಕಲ್ಲು ಹೊಡೆದು ಎಬ್ಬಿಸೋಣ ಅಂತ ಅನ್ನಿಸ್ಲಿಲ್ವೇನೋ ….?
ಖಂಡಿತಾ ಅನ್ಸಿರುತ್ತೆ , ಯಾಕೆ ಹೇಳು … ನಿನ್ ವಯಸ್ಸೇ ಅಂತದ್ದು, ತುಂಟಾಟ ಮಾಡೋ ಪ್ರಾಯ, ಟೀಚರ್ ಕೈಲಿ ತಗ್ಲಾಕ್ಕೊಂಡ್ರೆ ಕಷ್ಟ ಅಂತ ಸುಮ್ನೆ ಡಿಸೆಂಟ್ ಆಗಿ ಬಂದಿರ್ತೀರಿ ಹೌದು ತಾನೇ …..?
ಸುಮ್ನೆ ತಮಾಷೆಗಂದೆ ಪುಟ್ಟಾ…, ನಿನ್ನ ಪ್ರವಾಸದ ಅನುಭವಗಳನ್ನು ಬಹಳ ಚೆನ್ನಾಗಿ ಬರ್ದಿದ್ದೀ . ನಿನ್ನ ಬರಹ ಓದುತ್ತಾ ನನ್ಗೆ ನನ್ನ ಬಾಲ್ಯ ನೆನಪಾಯಿತು . ಹೀಗೇನೆ ಬೇರೆ ಬೇರೆ ವಿಚಾರಗಳನ್ನು ಮುಂದೆಯೂ ಬರೆಯುತ್ತಿರು . All the Best.
ಚೆಂದಕೆ ಬರೆದಿರುವಿ ಪುಟ್ಟ, ಹೀಗೆಯೇ ಆಗಾಗ ಬರೆಯುತ್ತಿರು, ಒಳ್ಳೆಯದಾಗಲಿ
ಪ್ರವಾಸ ಲೇಖನ ಚೆನ್ನಾಗಿ ಬರೆದಿದ್ದೀಯ ಪುಟ್ಟಾ…ಶುಭವಾಗಲಿ
ಹಾಯ್ ಮನೋಜ್ , ನೀನು ಸಿಂಹದ ಘರ್ಜನೆ ಕೇಳಿದೆ ; ಹುಲಿಗೆ ಚುಚ್ಚುಮದ್ದು ಮದ್ದು ಕೊಡುವುದು ನೋಡಿದೆ ; ಒಂದು ಚಿರತೆ ಇನ್ನೊಂದು ಚಿರತೆಯ ಬಾಯಿಯಿಂದ ಮಾಂಸ ಕಿತ್ತುಕೊಂಡು ಹೋಗುವುದು ನೋಡಿದೆ . ಇವೆಲ್ಲಾ “ಝೂ” ಗೆ ಹೋದವರೆಲ್ಲರಿಗೂ ಯಾವಾಗಲೂ ಸಿಗದ ಅಪರೂಪದ ಅನುಭವಗಳು. ಈ ವಿಷಯದಲ್ಲಿ ನೀನು ಲಕ್ಕೀ.
ಮನೋಜ್, ಪ್ರಾಣಿ ಸಂಗ್ರಹಾಲಯದ ಬಗ್ಗೆ ನೀನು ಬರೆದ ಪ್ರವಾಸ ಲೇಖನ ಚೆನ್ನಾಗಿದೆ. ಇನ್ನೂ ಬೇರೆ ಕಡೆಗಳಿಗೆ ಪ್ರವಾಸ ಹೋದರೆ ಅವುಗಳನ್ನೂ ಬರೆಯುವ ಅಭ್ಯಾಸ ಮಾಡುವಿಯಲ್ಲಾ.. Good luck.