ಪಾತರಗಿತ್ತಿ ಪಿಕ್ನಿಕ್ ಎತ್ತ ಕಡೆಗೆ ?

Spread the love
Share Button

ಆಹಾರಕ್ಕಾಗಿ ಪ್ರಾಣಿಗಳ ವಲಸೆ, ಸಂತಾನೋತ್ಪತ್ತಿಗಾಗಿ ಪಕ್ಷಿಗಳ ವಲಸೆ, ಉದ್ಯೋಗಕ್ಕಾಗಿ ಮನುಷ್ಯರ ವಲಸೆ ಕೇಳಿದ್ದೇವೆ. ಅದರೆ ಬೃಹತ್ಪ್ರಮಾಣದಲ್ಲಿ ಪಾತಾರಗಿತ್ತಿಗಳ ವಲಸೆ ನೊಡಿದ್ದೀರಾ? ಇದ್ದರೂ ಅಪರೂಪ.  ಎಪ್ರಿಲ್  10  ರಂದು ಇಂತಹ ಅಪರೂಪದ ನೈಸರ್ಗಿಕ ಸೊಬಗನ್ನು ನೋಡುವ ಸುಯೋಗ ಮೈಸೂರಿನವರಿಗೆ ಲಭಿಸಿತು. ಬೆಳಗ್ಗೆ ಎಂದಿನಂತೆ ಅಫೀಸಿಗೆ ಹೋಗುತ್ತಿದ್ದಾಗ ದಾರಿಯುದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಪ್ಪು-ನೀಲಿ ಹಾಗೂ ಕಪ್ಪು-ಕಂದು ಬಣ್ಣದ ಚುಕ್ಕೆಗಳುಳ್ಳ ಚಿಟ್ಟೆಗಳು ಯಾರನ್ನೋ ಅನುಸರಿಸಿ ಹೋಗುವಂತೆ ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ಗುಂಪಾಗಿ ಹಾರಾಡುತ್ತಿರುವುದು ನೋಡಿ ಸೋಜಿಗವೆನೆಸಿತು.

 

Butterfly- Black- blueನಮ್ಮ ಮನೆಯಿಂದ ಸುಮಾರು 12 .ಕಿ.ಮಿ ದೂರದ ಫ಼್ಯಾಕ್ಟರಿ ತಲಪುವ ವರೆಗೂ ಈ ಪಾತರಗಿತ್ತಿಗಳ ಪಥಸಂಚಲನ ಮುಂದುವರಿದಿತ್ತು. ಅವುಗಳ ಹಾರಾಟ  ಮಾರ್ಗದಲ್ಲಿ ಅಡ್ಡ ಬಂದ ಕಾರುಗಳ ಗಾಜಿಗೆ ಬಡಿದು ಹಲವಾರು ರೆಕ್ಕೆ ಮುರಿದುಕೊಂಡುವು, ಇನ್ನು ಕೆಲವು ಸ್ಚೂಟರ್ ಸವಾರರ ಕಿವಿ ಹೊಕ್ಕವು, ಬಹಳಷ್ಟು ಚಿಟ್ಟೆಗಳು ಹೆಲ್ಮೆಟ್ ಗೆ ಬಡಿದು ತಪತಪನೆ ಬಿದ್ದವು. ಉದ್ಯಾನದ ಹೊಂಗೆ ಮರದ ಗೆಲ್ಲುಗಳಲ್ಲಿಯೂ ಗುಂಪಾಗಿ ರಾರಾಜಿಸುತ್ತಿದ್ದುವು.

 

Black-red Butterflyಒಂದು ಟೊಂಗೆಯನ್ನು ಮೆಲ್ಲನೆ ಜರಗಿಸಿದಾಗ ಮರದಲ್ಲಿ ಕುಳಿತ್ತಿದ್ದ ಸಹಸ್ರಾರು ಚಿಟ್ಟೆಗಳು ಬೆದರಿ ಹಾರಿ ಗಾಳಿಯಲ್ಲಿ ಚಿತ್ತಾರ ಸೃಷ್ಟಿಸಿದುವು. ಇಷ್ಟೊಂದು ಚಿಟ್ಟೆಗಳು ಎಲ್ಲಿಂದ ಬಂದುವು ?  ಯಾಕೆ ಬಂದುವು ? ಎಲ್ಲಿಗೆ ಹೋಗುತ್ತಿವೆ ? ಎಂಬುದು ನಮಗೆ ಬ್ರೇಕಿಂಗ್ ನ್ಯೂಸ್ ಆಗಿತ್ತು!

ಕುತೂಹಲದಿಂದ ಅಂತರ್ಜಾಲ ಜಾಲಾಡಿದಾಗ ಸಿಕ್ಕಿದ ಮಾಹಿತಿಗಳು ಹೀಗಿವೆ:

 • ಚಿಟ್ಟೆಗಳಲ್ಲಿ ಕೆಲವು ಪ್ರಭೇದಗಳು ವಲಸೆ ಹೋಗುತ್ತವೆ. ನಮಗೆ ಕಂಡು ಬಂದ ಚಿಟ್ಟೆಗಳು ‘ ಡಾರ್ಕ್ ಬ್ಲೂ ಟೈಗರ್ ‘ ಮತ್ತು ‘ಡಬಲ್ ಬ್ರಾಂಡೆಡ್ ಕ್ರೋ’ ಎಂಬ ವರ್ಗಕ್ಕೆ ಸೇರಿದವುಗಳು. ಇವು ನೂರಾರು ಮೈಲು ಹಾರಾಡಿ ಸಹ್ಯಾದ್ರಿ ಬೆಟ್ಟಗಳ ಕಡೆಗೆ ಹೋಗುತ್ತದೆ.
 • ರೈತರ ನಂಬಿಕೆಯ ಪ್ರಕಾರ ಚಿತ್ತಾ-ಸ್ವಾತಿ ನಕ್ಷತ್ರದ ಅವಧಿಯಲ್ಲಿ ಚಿಟ್ಟೆಗಳು ಬಲು ಕ್ರಿಯಾಶೀಲವಾಗಿರುತ್ತವೆ. ಮುನ್ಸೂನ್ ಅರಂಭವಾಗುವ ಎಪ್ರಿಲ್ ನಲ್ಲಿ ಮತ್ತು ಹಿಂಗಾರು ಮಳೆಯ ಸೆಪ್ಟೆಂಬರ್ ನಲ್ಲಿ ಈ ರೀತಿಯ ವಲಸೆ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತವೆ.
 • ಚಿಟ್ಟೆಗಳಲ್ಲಿ 1500 ಕ್ಕೂ ಹೆಚ್ಚು ಪ್ರಭೇದಗಳಿವೆ. ಸಹಸ್ರಾರು ಮೈಲಿ ವಲಸೆ ಹೋಗುವ ಜಾತಿಯವೂ ಇವೆ. ಹಿಮಾಲಯದಂತಹ ಚಳಿ ಪ್ರದೇಶಗಳಲ್ಲಿಯೂ ಬದುಕುವ ವರ್ಗಗಳಿವೆ.
 • ಜೀವಸಂಕುಲದಲ್ಲಿ ಚಿಟ್ಟೆಗೆ ಅದ್ಭುತ ಪಾತ್ರವಿದೆ. ಇವು ಮಕರಂದ ಹೀರಲು ಹೂವಿಂದ ಹೂವಿಗೆ ಹಾರುತ್ತಾ, ಪರಾಗಸ್ಪರ್ಶ ಮಾಡಿ ಅಹಾರ ಧಾನ್ಯಗಳ ಬೆಳವಣಿಗೆಗೆ ಕಾರಣವಾಗುತ್ತವೆ. 
 • ಆದರೆ ಮನುಷ್ಯರ ದುರಾಸೆಗೆ ಚಿಟ್ಟೆಗಳೂ ಬಲಿಯಾಗುತ್ತಿವೆ. ಕೆಲವು ಆಲಂಕಾರಿಕ ವಸ್ತುಗಳ ತಯಾರಿಕೆಗೆ ಹಾಗೂ ಗ್ರೀಟಿಂಗ್ ಕಾರ್ಡ್ ಉದ್ಯಮದಲ್ಲಿ ಚಿಟ್ಟೆಗೆ ಬೇಡಿಕೆ ಇವೆ. ದುರದೃಷ್ಟವೇನೆಂದರೆ ಬಡಪಾಯಿ ಚಿಟ್ಟೆಗಳಿಗೆ ವನ್ಯಜೀವಿ  ಕಾನೂನಿನ ಸಂರಕ್ಷಣೆ ಲಭಿಸಿಲ್ಲ.

Butterfly lifecycleಚಿಟ್ಟೆಗಳ ಜೀವನಚಕ್ರದಲ್ಲಿ ಮೊಟ್ಟೆ, ಲಾರ್ವ, ಪ್ಯೂಪಾ ಮತ್ತು ಪತಂಗ ಎಂಬ ಹಂತಗಳು. ಸದಾ ತೇವವಿರುವ ಕೆರೆಯ ಪಕ್ಕದಲ್ಲಿ, ಸಣ್ಣ ಗಿಡಗಳಲ್ಲಿ ಚಿಟ್ಟೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಂದ ‘ಲಾರ್ವ’ ಹೊರಬರುತ್ತದೆ. ಲಾರ್ವಾ ಬೆಳೆಯುತ್ತಾ ಕೋಶಾವಸ್ಥೆ ತಲಪುತ್ತದೆ. ಇದನ್ನು ‘ಪ್ಯೂಪಾ’ ಎಂದು ಕರೆಯುತ್ತಾರೆ. ಪ್ಯೂಪಾ ಬಣ್ಣ ಬಣ್ಣದ ಪತಂಗವಾಗಿ  ರೂಪಾಂತರಗೊಳ್ಳುತ್ತದೆ. ಲಾರ್ವಾ ಮತ್ತು ಪ್ಯೂಪಾ ಹಂತದಲ್ಲಿ ಚಿಟ್ಟೆಗೆ ತೇವವಿರುವ ಜಾಗದಲ್ಲಿ ಪುಟ್ಟ ಗಿಡಗಳ ಆಶ್ರಯ ಬೇಕು. ಬಲಿತ ಮೇಲೆ ಆಹಾರಕ್ಕಾಗಿ ಮಕರಂದ ಸಿಗುವ, ಹೂ ಬಿಡುವ ಸಸ್ಯಗಳು ಬೇಕು.

 

Butterflyಮನೆಯ ಪುಟ್ಟ ಉದ್ಯಾನದಲ್ಲಿ, ಸ್ವಲ್ಪ ಜಾಗವನ್ನು ಮೀಸಲಿರಿಸಿ, ಕನಿಷ್ಟ ಆ ಜಾಗದಲ್ಲಿಯಾದರೂ ಯಾವುದೇ ಕ್ರಿಮಿನಾಶಕವನ್ನು ಬಳಸದೆ, ಪ್ರಾಕೃತಿಕವಾಗಿ ಇರಗೊಟ್ಟು, ತೇವಾಂಶ ಇರುವಂತೆ ನೋಡಿಕೊಂಡರೆ, ಇಂತಹ ಜಾಗದಲ್ಲಿ ಕೆಲವು ನಿಸರ್ಗದತ್ತ ಸಣ್ಣ ಪುಟ್ಟ ಗಿಡಗಳು ತಾನಾಗಿ ಬೆಳೆಯುತ್ತವೆ. ಇಂತಹ ಗಿಡಗಳಲ್ಲಿ ಚಿಟ್ಟೆಗಳ ಲಾರ್ವ ಆಶ್ರಯ ಪಡೆಯುತ್ತವೆ. ಇವೇ ಮುಂದೆ ಪಾತರಗಿತ್ತಿಗಳಾಗುತ್ತವೆ.

ಹೀಗೆ, ಚಿಟ್ಟೆಗಳ ಸಂರಕ್ಷಣೆಗೆ ನಾವೂ ಅಳಿಲು ಸೇವೆ  ಮಾಡಬಹುದು!

 

– ಹೇಮಮಾಲಾ. ಬಿ. ಮೈಸೂರು

 

5 Responses

 1. Jennifer Shawn says:

  That was another good artice by you Hema!

 2. jayashree says:

  nice.beautifully presented in a simple language.

 3. Ghouse says:

  Very well narrated as usual. Nice to read this article.

 4. savithri s.bhat says:

  ಪಾತರಗಿತ್ತಿ ಗಳ ದಿಬ್ಬಣ ಅವುಗಳ ಜೀವನಚಿತ್ರಣ ಮಾಹಿತಿ ಚೆನ್ನಾಗಿ ವಿವರಿಸಿದೀರಿ ಸಣ್ಣ ಕ್ಲಾಸಿನಲ್ಲಿ ಓದಿದ್ದು ನೆನಪಾಯಿತು

 5. ನಾನು ಸಹ , ಸಾವಿರಾರು ಚಿಟ್ಟೆ ಗಳನ್ನೂ ನೋಡಿ ಆನಂದ ಪಟ್ಟೆ, ಸುಂದರ ಅನುಭವ ,ಲೇಖನ ಮಾಹಿತಿಗಳೊಂದಿಗೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: