ಕಥೆ ಎಂದರೇ ಜಗತ್ತಿನ ಅತ್ಯಂತ ದೊಡ್ಡ ಸುಳ್ಳಂತೆ……

Spread the love
Share Button

 

 

ಎರಡು ದಿನಗಳ ರಾಜ್ಯಮಟ್ಟದ ಕಥಾಯಾನ ಶಿಬಿರಕ್ಕಾಗಿ ದಿನಾಂಕ 09-06-2018 ರಂದು ಬೆಳಿಗ್ಗೆ ಕೈಗಾ ವಸತಿ ಸಂಕೀರ್ಣದ ಸೆಮಿನಾರ ಹಾಲನಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಬಂದ ಶಿಬಿರಾರ್ಥಿಗಳು ಸಾಹಿತ್ಯ ಕಮ್ಮಟದಲ್ಲಿ ಸಮಾವೇಶಗೊಂಡಿದ್ದರು. ಜನಜಾಗ್ರತಿ ಸಮೀತಿಯ ಕೈಗಾ ಹಾಗೂ ಸಹ್ಯಾದ್ರಿ ಕನ್ನಡ ಸಂಘ, ಕೈಗಾ ಜಂಟಿಯಾಗಿ ಆಯೋಜಿಸಿದ ಈ ಶಿಬಿರಕ್ಕೆ ಕೆಲ ಶಿಬಿರಾರ್ಥಿಗಳು ಹಿಂದಿನ ದಿನವೇ ಬಂದು ತಮ್ಮ ಉಪಸ್ಥಿತಿ ತೋರಿದರೆ, ಇನ್ನೂ ಕೆಲವು ಶಿಬಿರಾರ್ಥಿಗಳು ಬೆಂಗಳೂರಿನಿಂದ ಬೆಳಿಗ್ಗೆ 9  ಗಂಟೆಗೆ ಕೈಗಾಕ್ಕೆ ಬರುವ ಬಸ್ಸಿಗಾಗಿ ಕಾಯಬೇಕಾಗಿ ಬಂತು. ನಿರಂತರ ಮಳೆಯಿಂದಾಗಿ ಎರಡು ಗಂಟೆ ವಿಳಂಬವಾಗಿ ಬಂದ ಬಸ್ಸಿನಲ್ಲಿದ್ದ ಶಿಬಿರಾರ್ಥಿಗಳ ಆಗಮನದ ನಂತರ ಅವರ ವಸತಿ ಉಪಹಾರವೆನ್ನುತ್ತಿದ್ದಂತೆ ಕಾರ್ಯಕ್ರಮದ ಉದ್ಘಾಟನೆ 11-30 ಕ್ಕೆ ಬಂದು ನಿಂತಿತು. ಅಲ್ಲಿಯವರೆಗೆ ಸಮಯ ವ್ಯಯಿಸುವುದು ಬೇಡವೆಂದ ಆಯೋಜಕರು ಶಿಬಿರಾರ್ಥಿಗಳಿಗೆ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಅಷ್ಟರಲ್ಲಿಯೇ ಉಳಿದ ಶಿಬಿರಾರ್ಥಿಗಳು ಬಂದು ಸೇರುತ್ತಿದ್ದಂತೆ ಎಲ್ಲರ ಪರಿಚಯದ ಜೊತೆಗೆ ಅಂದಿನ ಮುಖ್ಯ ಅತಿಥಿಗಳು ಹಾಗೂ ಕೈಗಾ  3-4 ಘಟಕದ ಸ್ಥಾನಿಕ ನಿರ್ದೇಶಕರಾದ ಶ್ರೀ ಜೆ ಆರ್ ದೇಶಪಾಂಡೆ, ಜನಜಾಗೃತಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಮ್ ಶೇಷಯ್ಯ, ವಿಶೇಷ ಅಹ್ವಾನಿತರಾದ ದಾಂಡೆಲಿಯ ಒಡನಾಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಬಿ ಎನ್ ವಾಸರೆ ಹಾಗೂ ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಜೀತೇಂದ್ರರವರನ್ನು ನಿರೂಪಕರಾದ ಶ್ರೀ ಎಸ್ ಆರ್ ಎನ್ ಮೂರ್ತಿ ಶಿಬಿರಾರ್ಥಿಯಾದಿಯಾಗಿ ಸ್ವಾಗತಿಸುತ್ತ, ವೇದಿಕೆ ಅಹ್ವಾನ ಕೊಡುತ್ತಿದ್ದಂತೆ ಗಣ್ಯರು ದೀಪ ಬೆಳಗಿಸಿ ಶಿಬಿರವನ್ನು ವಿದ್ಯುಕ್ತವಾಗಿ ಉದ್ಘಾಟನೆಗೊಳಿಸಿದರು.

ಉದ್ಘಾಟನಾ ಭಾಷಣ ಮಾಡಿದ ಶ್ರೀ ಜೆ. ಆರ. ದೇಶಪಾಂಡೆಯವರು, ‘ರವಿ ಕಾಣದನ್ನು ಕವಿ ಕಂಡ, ಎನ್ನುವಂತೆ ಹೊಸತನಕ್ಕೆ ಜೀವಕೊಡುವ ಶಕ್ತಿ ನಿಮ್ಮಂತಹ ಬರಹಗಾರರಿಗಿದೆ. ಈ ಶಿಬಿರದಿಂದಾಗಿ ನಿಮ್ಮಲ್ಲಿಯ ಬರಹದ ಶಕ್ತಿ ಹೆಚ್ಚಾಗಬಹುದು, ನಿಮ್ಮೆಲ್ಲರಿಗೂ ಶುಭವಾಗಲಿ. ಈ ಆಯೋಜನೆಯಲ್ಲಿ ನಿಮ್ಮ ಶಕ್ತಿ ಜಾಗೃತಿಯ ಜೊತೆಗೆ ನಮ್ಮದೂ ಒಂದು ಸ್ವಾರ್ಥವಿದೆ ಎಂದರು. ಅದೇನೆಂದರೆ ಈ ಶಿಬಿರದ ಮಧ್ಯದಲ್ಲಿ ನಮ್ಮ ಇಲಾಖಾ ಅಧಿಕಾರಿಗಳು ನಮ್ಮ ಸಂಸ್ಥೆಯ ಘಟಕಗಳ ಚಾಲನೆ, ನಿರ್ವಹಣೆ ಹಾಗೂ ಕಾರ್ಯ ವೈಖರಿ ಮತ್ತು ಸುತಕ್ಷಾ ವ್ಯವಸ್ಥೆಯ ಬಗ್ಗೆ ತಿಳಿಸಲಿದ್ದಾರೆ. ನಿಮಗೆ ಗೊಂದಲವಿರುವ ವಿಷಯಗಳಿಗೆ ಅವರು ಸಮರ್ಪಕವಾಗಿ ಉತ್ತರ ನೀಡಲಿದ್ದಾರೆ. ಅಲ್ಲದೆ ಈ ಶಿಬಿರದ ನಂತರ ನೀವು ನಮ್ಮ ಪ್ಲಾಂಟಿಗೆ ಭೇಟಿ ನೀಡಿ ಪ್ರತ್ಯಕ್ಷವಾಗಿ ನೋಡಿ ತಿಳಿದು ಇದರ ಬಗ್ಗೆ ಜನರಲ್ಲಿ ಇರುವ ಉಹಾಪೋಹಗಳು ನಿಮ್ಮ ಹರಿತವಾದ ಬರಹಗಳ ಮೂಲಕ ನಿವಾರಿಸುವಿರೆಂದು ಭಾವಿಸುತ್ತೇನೆ. ಎಂದು ನುಡಿದರು. ನಂತರ ಆಶಯ ಭಾಷಣ ಮಾಡಿದ ಶ್ರೀ ಬಿ ಎನ್ ವಾಸರೆ ಇಂತಹದೊಂದು ಸಾಹಿತ್ಯ ಕಮ್ಮಟ ನಮ್ಮ ದಾಂಡೆಲಿಯಲ್ಲಿ ಮಾಡುವುದಕ್ಕೆ ಸಂಚಾಲಕರನ್ನು ವಿನಂತಿಸಿದರು. ಜನಜಾಗೃತಿ ಸಮೀತಿಯ ಅಧ್ಯಕ್ಷರಾದ ಶ್ರೀ ಶೇಷಯ್ಯನವರು ಮಾತಾಡಿ ಜನರಲ್ಲಿ ನಮ್ಮ ಕೈಗಾ ಪ್ಲಾಂಟಿನ ಬಗ್ಗೆ ತುಂಬಾ ಅನುಮಾನಗಳಿವೆ ಅವುಗಳನ್ನು ನಿಮ್ಮಂತಹ ಬರಹಗಾರರಿಂದ ಮಾತ್ರ ನಿವರಿಸಲು ಸಾಧ್ಯ ಹಾಗಾಗಿ ನಮ್ಮ ಬಗ್ಗೆ ತಿಳಿದು ಜನರಿಗಿರುವ ತಪ್ಪು ಅಭಿಪ್ರಾಯಗಳನ್ನು ತಿಳಿಹೇಳುವ ಜವಬ್ದಾರಿ ನಿಮಗಿದೆ. ಅದೇ ನಾವು ನಿಮ್ಮಿಂದ ಮಾಡುವ ನಿರೀಕ್ಷೆ. ಎಂದರು.

 

ಆಗಲೇ ಗಂಟೆ 11:50 ಆಗಿತ್ತು. ಹೆಚ್ಚು ಸಮಯ ತೆಗೆದುಕೊಳ್ಳಲು ಇಷ್ಟಪಡದ ನಿರೂಪಕರು ಅಂದಿನ ಮೊದಲ ಸಂಪನ್ಮೂಲ ವ್ಯಕ್ತಿಯಾದ ಬೆಂಗಳೂರಿನ ಶ್ರೀಮತಿ ಡಾ|| ಪಿ ಚಂದ್ರಿಕಾ ಅವರನ್ನು ಅಹ್ವಾನಿಸಲಾಯಿತು. ಕವನದ ಸಹಿತ್ಯಕ ಪರಿಭಾಷೆ ಮತ್ತು ಕವಿತೆಯ ಆಶಯ, ತಾಂತ್ರಿಕತೆ ಕಾವ್ಯ ಕಟ್ಟುವ ಶೈಲಿಯ ಬಗ್ಗೆ ಮಾತನಾಡವವರಾಗಿದ್ದ ಶ್ರೀಮತಿ ಚಂದ್ರಿಕಾರವರು ‘ಕಾವ್ಯ ಕಟ್ಟುವುದಲ್ಲ, ಅದು ಹುಟ್ಟುವುದು’ ಎಂದೆನುತ್ತ ಅನೇಕ ಕವಿಗಳ ಕಾವ್ಯಗಳ ಬಗ್ಗೆ ಮಾತನಾಡಿದರು ಕಂಬಾರರ ‘ಮುಖವೇ ನೋಡಬೇಕೆಂದರೆ ಕನ್ನಡಿ ಬೇಡ, ಕೆರೆ, ಕುಂಟೆ, ಬಾವಿಯಲ್ಲಿ ನೋಡು’ ಎಂಬ ಕವಿಯ-ಕವಿತೆಯ ಮಾರ್ಮಿಕತೆಯ ಬಗ್ಗೆ ಮಾತನಾಡಿದರು. ಸಂವೇದನೆ ಹುಟ್ಟುವುದರ ಬಗ್ಗೆ ಮಾತನಾಡಿದ ಚಂದ್ರಿಕಾರವರು ಕುವೆಂಪುರವರು ಬರೆದ ಚಿಟ್ಟೆ ರೆಕ್ಕೆ ಬಡಿದರೆ ನಿಹಾರಿಕದಾಚೆಯ ಸಂವೇದನೆಯ ಬಗ್ಗೆ ತಿಳಿಸುತ್ತ ಈ ಮಣ್ಣು ನೀರು ಗಾಳಿಬೆಳಕಿನ ಮಹತ್ವದ ಬಗ್ಗೆ ಮಾತನಾಡುತ್ತ, ನೀರು ಎಂದರೆ ನಮಗೆ ಬರೀ ನೀರು ಆದರೆ ಅದೇ ನೀರನ್ನು ಬೇಂದ್ರೆಯವರ ಕಲ್ಪನೆಯಲ್ಲಿ ಮೂಡಿಬಂದದ್ದು, ‘ಹರನ ಜೆಡೆಯಿಂದ ಹರಿಯ ಉಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ’ ಎನ್ನುವ ವರಕವಿಯ ಪ್ರಸಿದ್ದ ಕವಿತೆಯ ಬಗ್ಗೆ ಮಾತನಾಡಿ ಕವಿತೆಯ ಮಹತ್ವ ಸಾರಿದರು. ಹಾಗಾಗಿ ಕವಿತೆ ಕಟ್ಟುವುದಲ್ಲ ಅದು ಹುಟ್ಟಬೇಕು ಎನ್ನುವ ಅವರ ಮೊದಲ ಪಂಕ್ತಿ ಮತ್ತೊಮ್ಮೆ ಉಚ್ಚರಿಸುತ್ತ ತಮ್ಮ ಅವಧಿ ಮುಗಿಸಿದರು.

ದಿನದ ಎರಡನೇಯ ಅವಧಿಗಾಗಿ ಖ್ಯಾತ ಅಂಕಣಕಾರ ಶ್ರೀ ರೋಹಿತ ಚಕ್ರತೀರ್ಥರು ಅಂಕಣ ಬರಹ ಮತ್ತದರ ನಿರಂತರತೆ ವಿಶೇಷತೆ, ಆಯ್ಕೆ, ವಸ್ತು, ನಿಷ್ಟತೆ ಮತ್ತು ಬರಹದ ಬದ್ಧತೆ ಬಗ್ಗೆ ಮಾತನಾಡಲಿಕ್ಕಿತ್ತು. ಡಾ|| ಚಂದ್ರಿಕಾರವರ ಮಾತಿನ ನಂತರ ಚಹಾ ವಿರಾಮವಾಯಿತು. ನಂತರ ಸರಿಯಾಗಿ 1 ಗಂಟೆಗೆ ಶ್ರೀಯುತ ರೋಹಿತರ ವಿಷಯ ಪ್ರಾರಂಭವಾಯಿತು. ಅಂಕಣ ಹೇಗೆ ಬರೆಯಬೇಕೆಂಬುದರ ಬಗ್ಗೆ ಮಾತನಾಡಲು ನನಗೆ ಆಯೋಜಕರು ವಿಷಯ ನೀಡಿದ್ದಾರೆ. ‘ಬರಹ ಎಂಬುವುದು ತುಂಬಾ ಸರಳ, ಒಂದು ಹಾಳೆ ತೆಗೆದುಕೊಂಡು ಅದನ್ನು ಎಡಭಾಗದಲ್ಲಿ ಮಡಿಚಿ ಬಲಗೈಯಿಂದ ಎಡಭಾಗದ ಮೇಲಿನ ಮೂಲೆಯಿಂದ ಬರೆಯಲು ಶುರುಮಾಡಬೇಕು’ ಎಂದು ತಮಾಷೆಯಾಗಿ ಮಾತನ್ನು ಆರಂಭಿಸಿದರು. ಕವಿತ್ವ ಎಂದರೆ ಅದೊಂದು ಧ್ಯಾನಸ್ಥ ಸ್ಥಿತಿ, ಶಬ್ದ ಹಾಗೂ ಅರ್ಥ ಅದನ್ನೆ ಕಾಳಿದಾಸ ವಾಗಾರ್ಥ ಎಂದು ಉಚ್ಛರಿಸಿದರು. ಎರಡು ಪ್ರಕಾರದ ಸಾಹಿತ್ಯಗಳಿವೆ ಒಂದು ಅರ್ಥವಾಗುವ ಸಾಹಿತ್ಯ, ಇನ್ನೊಂದು ಅರ್ಥವಾಗದ ಸಾಹಿತ್ಯ ಎಂದರು. ನಾವು ಯಾವುದೇ ರೀತಿಯ ಬರಹದಲ್ಲಿ ತೊಡಗಿಸಿಕೊಂಡರೆ ಮುಖ್ಯವಾಗಿ ಮೂರು ವಿಷಯ ಒಳಗೊಂದಿರಬೇಕು. 1) ಮಾಹಿತಿಯುಕ್ತವಾಗಿರಬೇಕು 2) ಜ್ಞಾನದಿಂದ ಕೂಡಿರಬೇಕು 3) ಓದಿನ ನಂತರ ಚಿಂತನೆಗೆ ಹಚ್ಚುವಂತಿರಬೇಕು ಎನ್ನುವ ಮೂಲ ವಿಷಗಳನ್ನು ಸರಳವಾಗಿ ತಿಳಿಸಿದರು. ಅಲ್ಲದೆ ಬರಹಕ್ಕೆ ವಿಷಯದ ಮೇಲೆ ಹಿಡಿತವಿರಬೇಕು, ಬರಹದ ಉದ್ದೇಶ ಆತ್ಮಸಂತೋಷದ ಜೊತೆಗೆ ಸಮಾಜದ ಸಂತೋಷ ಕೂಡ ಒಳಗೊಂಡಿರಬೇಕು. ಹಾಗೂ ಬರಹಗಾರ ಕಷ್ಟ ಪಟ್ಟು ಬರೆದರೂ ಸಹ, ಓದುವವ ಕಷ್ಟಪಟ್ಟು ಒದುವಂತಿರಬಾರದು. ಬರಹಕ್ಕೆ ಸಂಬಂದಿಸಿದಂತೆ ಹೊಸತನದೊಂದಿಗೆ ಅಪಾರ ಶಬ್ದಭಂಡಾರದ ಜೊತೆಗೆ ಪೂರಕವಾದ ಬಿಂದುಗಳನ್ನು ಮಾಡಿಕೊಂಡು ಅದರ ಪ್ರಕಾರ ನೀವು ಬರೆಯುತ್ತ ಹೋದರೆ ಉತ್ತಮ ಬರಹ ನಿಮ್ಮದಾಗುತ್ತದೆ. ಎನ್ನುತ್ತ ತಾವು ಮೊನ್ನೆಯಷ್ಟೆ ಬರೆದು ಪ್ರಕಟವಾದ ಕಣಜದ ಹುಟ್ಟಿನ ಬಗ್ಗೆ ವೈಜ್ನಾನಿಕ ಅಂಕಣದ ಬಗ್ಗೆ ಅದ್ಭುತವಾಗಿ ವಿವರಿಸಿದರು. ಹೀಗೆ ಒಬ್ಬ ಬರಹಗಾರನಿಗೆ ಬೇಕಾಗುವ ಕನಿಷ್ಟ ಅಗತ್ಯತೆಗಳನ್ನು ಸರಳವಾಗಿ ವಿವರಿಸಿ ಶಿಬಿರಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು. ಸಾಯಂಕಾಲ ಬೆಂಗಳೂರಿಗೆ ಹೋಗಬೇಕಾಗಿದ್ದ ಶ್ರೀ ರೋಹಿತ ಚಕ್ರತೀರ್ಥರನ್ನು ಗೌರವಿಸಿ ಬಿಳ್ಕೊಡಲಾಯಿತು.

ಮಧ್ಯಾಹ್ನದ 3 ಗಂಟೆಗೆ ಭೋಜನದ ನಂತರದ ಅವಧಿ ಅಂಕಣಕಾರ ಶ್ರೀ ಸಂತೋಷಕುಮಾರ ಮೆಹೆಂದಳೆಯವರದಾಗಿತ್ತು. ಕಥೆಗಳ ಪ್ರಕಾರ ಸ್ವರೂಪ, ಕಥಾವಸ್ತುಗಳ ಆಯ್ಕೆ, ಬರಹದ ತಂತ್ರಜ್ನಾನ, ಎಂಬ ವಿಷಯದ ಮೇಲೆ ಮಾತನಾಡಿದರು. ಕಥೆಯ ಬಗ್ಗೆ ಹೇಳಬೇಕಾದ ಅಂಕಣಕಾರರು ನಿಮ್ಮ ಪ್ರಕಾರ ಕಥೆಯಂದರೇನು? ಎಂದು ಶಿಬಿರಾರ್ಥಿಗಳಿಗೆ ನೇರ ಪ್ರಶ್ನೆ ಮಾಡುವುದರ ಮೂಲಕ ಸಭೆಯ ಮುಂದೆ ಗಟ್ಟಿಯಾಗಿ ನಿಂತರು. ಶಿಬಿರಾರ್ಥಿಗಳು ತಮಗೆ ತೋಚಿದ ರೀತಿಯಲ್ಲಿ ಉತ್ತರಿಸಿದರು. ಕೊನೆಗೆ, ಸಾವಿರಾರು ಕಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕವಿಯೊಬ್ಬರ ಹೇಳಿಕೆಯಂತೆ, ‘ಜಗತ್ತಿನ ಅತ್ಯಂತ ದೊಡ್ಡ ಸುಳ್ಳೆಂದರೆ ಕಥೆ’ ಎಂಬ ಮಾಸ್ತಿಯವರ ಉಕ್ತಿಯ ಸಾಲನ್ನು ಸಭೆಯ ಮುಂದಿಟ್ಟರು. ಅಲ್ಲದೆ ತಾವೇ ಪಟ್ಟಿ ಮಾಡಿದ 15 ರಿಂದ 20 ಕಥಾ ಪ್ರಕಾರಗಳನ್ನು ಓದಿ ಹೇಳಿದರು, ಇದಲ್ಲದೆ ಇನ್ನೂ ಹೆಚ್ಚಿನ ಪ್ರಕಾರಗಳು ಉಂಟು ಎಂದಾದರೆ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ಎನ್ನುತ್ತಿದ್ದಂತೆ ವೇದಿಕೆಯ ಮೇಲೆ ಮುಂದಿನ ಅವಧಿಗಾಗಿ ಆಸೀನರಾಗಿದ್ದ ಜನಮಾಧ್ಯಮ ಪತ್ರಿಕೆಯ ಸಂಪಾದಕ ಶ್ರೀ ಅಶೋಕ ಹಾಸ್ಯಗಾರ ಐತಿಹಾಸಿಕ, ಪೌರಾಣಿಕ ಕಥೆಗಳು ಸಹ ಉಂಟೆಂದು ಶ್ರೀ ಮೆಹೆಂದಳೆಯವರ ಕಥೆಗಳ ಪಟ್ಟಿಗೆ ಸೇರಿಸಿದರು. ಕಥೆ ಹುಟ್ಟುವ ಮುಂಚೆ ಶಿರೋನಾಮೆ ನಿರ್ಧರಿಸಿ ಕಥೆ ಪ್ರಾರಂಭಿಸಬೇಕು, ಆ ತಂತ್ರವನ್ನೇ ತಾನು ಬಳಸುವುದು. ಎಂದೆನುತ, ಕಥೆಯ ಹೆಸರು ಕಥೆಯ ಓದುವ ಮುನ್ನವೇ ಅದರ ರಹಸ್ಯ ಬಿಟ್ಟುಕೊಡಬಾರದು ಅದಕ್ಕೆ ಉದಾಹರಣೆಯಾಗಿ ತಮ್ಮದೆ ರಚನೆಯ ನಾಲ್ಕಾರು ಹೆಸರುಗಳನ್ನು ನೀಡಿದರು. ರಾಕ್ಷಸ, ಬೇಲಿ ಮೇಲಿನ ನೀಲಿ ಹೂ, ಇತ್ಯಾದಿ. ತಮ್ಮ ಅವಧಿಯುದ್ದಕ್ಕೂ ಉದಾಹರಣೆಗಾಗಿ ತಮ್ಮದೇ ರಚನೆಗಳನ್ನು ಸೂಚಿಸುತಿದ್ದರು. ಬೇರೆ ಕವಿಗಳ ರಚನೆಗಳನ್ನು ಹೆಸರಿಸಿದರೆ ಈ ಅವಧಿಗೆ ಇನ್ನೂ ಹೆಚ್ಚಿನ ಕಳೆ ಕಟ್ಟುತ್ತಿತ್ತೇನೊ!

ಚಹಾ ಪಾನೀಯನಂತರ 4:20 ಕ್ಕೆ ವಿಶೇಷ ಪುರವಣಿ ಮತ್ತು ವಿಶೇಷಾಂಕಗಳಿಗಾಗಿ ಸಾಪ್ತಾಹಿಕ ಪತ್ರಿಕೆಗಳಿಗೆ ಬರಹ ಎಂಬ ವಿಷಯದ ಮೇಲೆ ಜನಮಾಧ್ಯಮ ಪತ್ರಿಕೆಯ ಸಂಪಾದಕ ಶ್ರೀ ಅಶೋಕ ಹಾಸ್ಯಗಾರರ 4 ನೇ ಅವಧಿ ಪ್ರಾರಂಭವಾಯಿತು. ಮುಖ್ಯವಾಗಿ ಬರಹದಲ್ಲಿ ಮೂರು ಆಯಾಮಗಳಿವೆ ಎಂದು ಮಾತು ಮುಂದುವರೆಸಿದರೂ ಸಹ ಆ ಆಯಾಮಗಳ ಬಗ್ಗೆ ತಿಳಿಗೊಳಿಸಲೇ ಇಲ್ಲ. ಬಹುಶ್ಯ ನೀವೂ ಪತ್ರಿಕೆಗೆ ಏನೆ ಬರೆದರೂ ಅದು ಆಯಾ ಕಾಲಕ್ಕೆ ಪೂರಕವಾಗಿರಬೇಕು. ಉದಾಹರಣೆಗೆ ಶರತ‌ಋತುವಿಗೆ ಪೂರಕವಾದ ಲೇಖನ ನೀವು ಜೂನ ತಿಂಗಳಿನಲ್ಲಿ ಕಳಿಸಿದರೆ ಅಸಂಬದ್ಧ ಎನಿಸುವುದಿಲ್ಲವೇ? ಹಾಗೇನೆ ಚೈತ್ರಮಾಸದ ನಿಸರ್ಗದ ಬಗ್ಗೆ ಬರೆದರೆ ಅದನ್ನು ಮಾರ್ಚ ಅಥವಾ ಎಪ್ರಿಲ ತಿಂಗಳಿನಲ್ಲಿ ಪ್ರಕಟಿಸಲಾಗುತ್ತದೆ. ಹೀಗೆ ನೀವು ಯಾವುದನ್ನೆ ಬರೆಯಿರಿ ನಾನು ನನ್ನ ಪತ್ರಿಕೆಯಲ್ಲಿ ಮುದ್ರಿಸುತ್ತೇನೆ. ಬರಹಗಳು ಚರ್ಚಿತ ವಿಷಯವಾಗಿದ್ದರೆ ಪ್ರಕಟಿಸಲು ಹಾಗೂ ವಾಚಕರಿಗೂ ಓದಲು ತುಂಬಾ ಆಪ್ತವಾಗಿರುತ್ತದೆ. ಉದಾ:- ಇತ್ತಿಚಿಗಷ್ಟೆ ಸಂಶೋಧನೆಯೊಂದರ ಪ್ರಕಾರ ದ್ರಾವಿಡ ಭಾಷೆಗೆ ನಾಲ್ಕುವರೆ ಸಾವಿರ ವರ್ಷಗಳ ಇತಿಹಾಸವಿದೆ, ಎನ್ನುವುದನ್ನು ಮಹನೀಯರೊಬ್ಬರು ಸಂಶೋಧಿಸಿದರು. ಹಾಗಾದರೆ ದ್ರಾವಿಡ ಭಾಷೆಗಳಲ್ಲೆ ಒಂದಾದ ಕನ್ನಡಕ್ಕೂ ಕೂಡಾ ಅಷ್ಟೆ ವರ್ಷಗಳ ಧೀರ್ಘ ಇರಿಹಾಸವಿದೆ ಎಂದು ಖಚಿತವಾಯಿತು. ಆದರೆ ಅದಕ್ಕೆ ಪೂರಕವಾದ ದಾಖಲೆಗಳಿವೆಯೇ? ನಮ್ಮಲ್ಲಿ ಲಭ್ಯವಿರುವ ದಾಖಲೆಗಳು ಕೇವಲ 1500  ವರ್ಷಗಳ ಹಳೆಯದು, ಅದಕ್ಕೂ ಹಿಂದಿನ ಯಾವುದೇ ಪುರಾವೆಗಳು ನಮ್ಮಲಿಲ್ಲ. ಇಂತಹ ಅನೇಕ ವಿದವಾದ ಇತಿಹಾಸ ಅಥವ ವಿಷಯದ ಮೇಲೆ ಬೆಳಕು ಚೆಲ್ಲುವಂತಹ ಲೇಖನಗಳು ಇದ್ದರೇ ಸಾಪ್ತಾಹಿಕ ಪುರವಣಿಯಲ್ಲಿ ಹಾಕಲು ತುಂಬಾ ಅನುಕೂಲವಾಗುತ್ತದೆ. ಎನ್ನುವಂತಹ ಅನೇಕ ವಿಚಾರಗಳನ್ನು ವಿವರಿಸುತ್ತ ಮಾತಿಗೆ ವಿರಾಮ ನೀಡಿದರು.

ಈ ದಿನದ ಕಾರ್ಯಸೂಚಿ ಅವಧಿಯ ಪ್ರಕಾರ ಐದನೇ ಅವಧಿಗಾಗಿ ಮತ್ತೊಬ್ಬ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿ ಶ್ರೀ ಉದಯ ಪುರಾಣಿಕರ ಕನ್ನಡ ಸಾಹಿತ್ಯದಲ್ಲಿ ಸಾಫ಼್ಟವೇರ್ ಹಾಗೂ ತಂತ್ರಜ್ನಾನದ ಬಳಕೆ ಎನ್ನುವ ವಿಷಯದ ಮೇಲೆ ಮಾತನಾಡುವುದಿತ್ತು. ಆದರೆ ಬೆಳಗಿನ ಕಾರ್ಯಕ್ರಮದ ವಿಳಂಬತೆಯಿಂದಾಗಿ ಸಮಯದ ಅಭಾವತೆಯಿಂದಾಗಿ ಅವರ ವಿಷಯವನ್ನು ನಾಳೆಗೆ ಮುಂದೂಡಲಾಯಿತು. ಮಾರನೆ ದಿನದ ಎರಡನೇಯ ಅವದಿಯನ್ನೇ ಈ ದಿನದ ಕೊನೆಯ ಅವಧಿಯಾಗಿ ಮುಂದುವರೆಸಲಾಯಿತು. ಶ್ರೀ ಸಂತೋಷಕುಮಾರ ಮೆಹೆಂದಳೆಯವರ ಸಾರಥ್ಯದಲ್ಲಿಯೇ ಪತ್ರಿಕೋದ್ಯಮ, ಪುಸ್ತಕ ಪ್ರಕಟಣೆ, ಮಾರಾಟ, ಎಂಬ ಈ ಅವಧಿ ಮುಂದುವರೆಯಿತು. ಲೇಖಕರು ತಾವು ಬರೆದ ಪುಸ್ತಕ ಪ್ರಕಟಣೆಗಾಗಿ ಎಷ್ಟೊಂದು ಕಷ್ಟ ಅನುಭವಿಸುತ್ತಾರೆ? ಅದಕ್ಕೆಲ್ಲ ಪರಿಹಾರವೇನು ಈ ಲೇಖಕನು ಹೇಗೆ ವರ್ತಿಸಬೇಕು? ಎಂಬೆಲ್ಲ ವಿಷಯವನ್ನು ವಿವರಿಸಿದರು. ಒಬ್ಬ ಆಟೊ ಚಾಲಕ ನಿಗದಿತ ಸ್ಥಳಕ್ಕೆ ಬರಬೇಕೆಂದರೆ ನಿಗದಿತ ಹಣ ಸಂದಾಯಮಾಡಿ ಎಂದು ಕೇಳುತ್ತಾನೆ. ಇಂತಹ ಸಂಧರ್ಭದಲ್ಲಿ ಒಬ್ಬ ಲೇಖಕ ತಾನು ಬರೆದ ಬರಹಕ್ಕೆ ಅಥವಾ ಪುಸ್ತಕಕ್ಕೆ ಇಷ್ಟೆ ಬೆಲೆಯಾಗುತ್ತದೆ ಎಂದು ತನ್ನತನವನ್ನು ತೋರಲು ಯಾಕೆ ಹಿಂಜರಿಯಬೇಕು? ಎಂದು ಪ್ರಶ್ನೆಯಾಗಿ ನಿಂತು, ನಾನಂತೂ ಒಂದು ಶಬ್ದಕ್ಕೆ ಒಂದು ರೂಪಾಯಿಯಂತೆ ಆದರೆ ಮಾತ್ರ ನಾನು ಬರೆಯುತ್ತೇನೆ. ಎಂದು ಬೇಡಿಕೆ ಇಟ್ಟು ಆ ಬೇಡಿಕೆಯಲ್ಲಿ ತಮ್ಮ ಬದ್ಧತೆಯನ್ನು ತೋರುತ್ತ, ತಮ್ಮ ಧಾಡಸಿತನದ ಮಾತಿನಿಂದ ಗಟ್ಟಿಯಾಗಿ ನಿಂತು ಬರಹಗಾರನಿಗೆ ಹುಮ್ಮಸ್ಸನ್ನು ನೀಡುತ್ತ ಸುಮಾರು ಒಂದುವರೆ ಗಂಟೆಗೂ ಹೆಚ್ಚು ಮಾತನಾಡಿದರು.

ಎರಡನೆಯ ದಿನದ ಅವಧಿಗಾಗಿ ದಿನಾಂಕ 10-06-2018 ರಂದು ಬೆಳಿಗ್ಗೆ ಸರಿಯಾಗಿ 9-30 ಕ್ಕೆ ಕಮ್ಮಟ ಪ್ರಾರಂಭವಾಯಿತು. ದಿನದ ಮೊದಲ ಅವಧಿಗಾಗಿ ನಿರೂಪಕರು ಶ್ರೀ ಉದಯ ಪುರಾಣಿಕ ಅವರನ್ನು ಆಹ್ವಾನಿಸಿದರು. ಶ್ರೀಯುತರು ಕನ್ನಡ ಸಾಹಿತ್ಯಕ್ಕೆ ಸಾಫ಼್ಟವೇರ್ ಬಳಕೆ ಮತ್ತು ತಂತ್ರಜ್ನಾನದ ಮಹತ್ವ ಎನ್ನುವ ವಿಷಯದ ಮೇಲೆ ಮಾತನಾಡಿದರು. ದೇಶದ ನಾನಾ ಸಂಸ್ಥೆಯಲ್ಲಿನ ಡಿಜಿಟಲ್ ವ್ಯವಸ್ಥೆಯನ್ನು ಕನ್ನಡಿಕರಣಗೊಳಿಸಿದರ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಎ ಟಿ ಎಮ್‌ನಲ್ಲಿ ಸರಕಾರಿ ವ್ಯವಸ್ಥೆಯಲ್ಲಿ, ನಾನಾ ವಿಧದ ಸಂಘ ಸಂಸ್ಥೆಯಲ್ಲಿ ಡಿಜಿಟಲ್ ಕನ್ನಡ ಭಾಷೆ ಪರಿಚಯಸಿದರ ಬಗ್ಗೆ ತಿಳಿಸಿದರು. ಇಂದಿನ ಯುಗದಲ್ಲಿ ಸಾಫ಼್ಟವೇರ ನಲ್ಲಿ ನನ್ನ ಜವಬ್ದಾರಿ ಏನಿದೆ ಎಂದು ಪ್ರತಿಯೊಬ್ಬರು ಯೋಚಿಸಬೇಕಾಗಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಯುತರು ಗೂಗಲ್ ನಕ್ಷೆಯಲ್ಲಿ ನಿಮಗೆ ಗೊತ್ತಿರುವ ಹಾಗೂ ತಪ್ಪಾಗಿ ಅಚ್ಚಾಗಿರುವ ಹೆಸರುಗಳನ್ನು ಕನ್ನಡದಲ್ಲಿ ಸರಿಪಡಿಸಿ ಆ ಸಂಸ್ಥೆಗೆ ಕಳಿಸಿ ಇದೇ ನೀವು ಇಂದು ಕನ್ನಡಕ್ಕಾಗಿ ಮಾಡಬೆಕಾದ ಕೆಲಸ. ಇದರಿಂದಾಗಿ ಕನ್ನಡ ಡಿಜಿಟಲ ಲೋಕ ಸಂಭ್ರಮಿಸುತ್ತದೆ  ಎಂದು ತಿಳಿಸಿದರು.

ಎರಡನೆಯ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ರಾಜಶೇಖರ್ ಮಠಪತಿ (ರಾಗಂ) 10-45 ಕ್ಕೆ ಕಾದಂಬರಿ, ಪ್ರಕಾರಗಳು, ಗಾತ್ರ, ಪಾತ್ರ, ಪೋಷಣೆ, ಕಥಾನದ ನಿರೂಪಣೆ, ನಿರಂತರತೆ, ಹಾಗೂ ವೇಗ ಎಂಬ ವಿಷಯದ ಮೇಲೆ ಮಾತನಾಡಿದರು. ನಾನೇನಿದ್ದರು ಕವಿತೆ ಕಟ್ಟುವವನು. ಅದನ್ನು ಶ್ರೀಮತಿ ಚಂದ್ರಿಕಾರವರು ಈಗಾಗಲೇ ಹೇಳಿ ನನ್ನನ್ನು ಹಗುರಗೊಳಿಸಿದ್ದಾರೆ. ಆದರೇ ನಾನು ಕಾದಂಬರಿ ಬರೆಯಲೇ ಇಲ್ಲ ಹೀಗಿದ್ದ ಮೇಲೆ ಅದರ ಬಗ್ಗೆ ಹೇಗೆ ಹೇಳಲಿ? ಎಂದು ತಾವೇ ರಚಿಸಿದ ಅನೇಕ ಪುಸ್ತಕಗಳ ಜೊತೆಗೆ ಜಗತ್ತಿನ ಅನೇಕ ಭಾಷೆಯ ಪುಸ್ತಕಗಳ ಬಗ್ಗೆ ಮಾತನಾಡಿದರು. ಇಂಗ್ಲೆಂಡಿನ ಪ್ರಖ್ಯಾತ ಲೇಖಕ ಡಬ್ಲು ಬಿ ಎಸ್, ಫುಕ್ರಿ, ಹಾಗೂ ಈ ನಾಡಿನ ಜೈನ ಸಹಾನಿ, ಹರಿವಂಶ ಬಚ್ಚನ್, ಹಿಂದಿ ಚಿತ್ರರಂಗದ ಖ್ಯಾತ ಕೆ, ಅಬ್ಬಾಸ್, ಪ್ರೇಮಚಂದರ ಗೋದಾನದ ಬಗ್ಗೆ ಮಾತನಾಡುತ್ತ, ಓಲ್ಡ ಮ್ಯಾನ್ ಐಂಡ್ ಸೀ, ಟ್ರೈನ್ ಟು ಪಾಕಿಸ್ಥಾನ್, ಅಜಾದಿ, ಹಾಗೂ ತಮ್ಮ ರಚನೆಯ ಹೆಣ್ಣು ಹೇಳಿದ ಅರ್ಧ ಸತ್ಯ ಪುಸ್ತಕದಲ್ಲಿನ ಕೆಂಪುದೀಪದ ಸತ್ಯ ಘಟನೆಯ ಹಾಗೂ ಇನ್ನೂ ಅನೇಕ ಪುಸ್ತಕಗಳ ಬಗ್ಗೆ ಮಾತನಾಡಿದರು. ಆದರೇ ಕಾದಂಬರಿ ಹೇಗೆ ರಚನೆಯಾಗುತ್ತದೆ, ರಚನೆಯ ತಂತ್ರಗಳೇನು? ಎನ್ನುವ ವಿಷಯ ಹೊರಬರಲೇ ಇಲ್ಲ. ಇಲ್ಲಿ ಆಯೋಜಕರು ತಪ್ಪಿದರೊ ಅಥವಾ ಸಂಪನ್ಮೂಲ ವ್ಯಕ್ತಿಗಳು ಕಳೆದುಹೋದರು ಗೊತ್ತಿಲ್ಲ. ಅದರೇ ಆ ಕಾದಂಬರಿಯ ರಚನೆಯ ಬಗ್ಗೆ ತುಂಬಾ ಕೂತೂಹಲವಿರಿಸಿಕೊಂಡಿದ್ದ ಶಿಬಿರಾರ್ಥಿಗಳಿಗೆ ಸ್ವಲ್ಪ ನಿರಾಸೆಯಾಗಿದ್ದಂತೂ ಸತ್ಯ.

ಮಧ್ಯಾಹ್ನ 12  ಗಂಟೆಗೆ ಶ್ರೀ ಶ್ರೀನಿವಾಸ ಪಂಚಮುಖಿ, ಸುಬ್ರಮಣ್ಯಕುಮಾರ ಹಾಗೂ ಎಸ್ ಕೆ ಸುಬ್ರಮಣ್ಯರವರಿಂದ ಕೈಗಾ ಅಣುಸ್ಥಾವರ ತಾಂತ್ರಿಕತೆ, ಸುರಕ್ಷತೆ, ವಿಧ್ಯತ್ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಲಾಯಿತು. ತಮಗೆ ಇರುವ ಅನೇಕ ಸಂಶಯಗಳನ್ನು ಶಿಬಿರಾರ್ಥಿಗಳಿ ಕೇಳಿ ತಿಳಿದುಕೊಂಡರು. ನಾಳೆ ತಾವೆಲ್ಲರೂ ಪ್ಲಾಂಟಿಗೆ ಬನ್ನಿ, ಅಲ್ಲಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯ ಮಾಡಿಕೊಡಲಾಗುವುದು. ಎನ್ನುತ್ತ ಮಧ್ಯಾಹ್ನದ ಊಟಕ್ಕೆ ವಿರಾಮ ನೀಡಲಾಯಿತು.

ಭೋಜನದ ನಂತರ ಮಧ್ಯಾಹ್ನ 3 ಗಂಟೆಗೆ ಅಂತರಾಷ್ಟ್ರೀಯ ಪ್ರಶಸ್ಥಿಯನ್ನು ಮುಡಿಗೇರಿಸಿದ ಶಿರಸಿಯ ಖ್ಯಾತ ಛಾಯಾಚಿತ್ರಗಾರ ಶ್ರೀ ನಾಗೆಂದ್ರ ಮುತ್ಮುರ್ಡುರವರು ಛಾಯಚಿತ್ರವೆಂದರೇನು, ಅದು ಏನು ತಿಳಿಸುತ್ತದೆ, ಯಾವ ಕಥೆ ಹೇಳುತ್ತದೆ. ಚಿತ್ರ ಪಡೆಯುವಲ್ಲಿ ಕತ್ತಲು ಬೆಳಕಿನಾಟದ ಕರಾಮತ್ತನ್ನು ತಮ್ಮ ಚಿತ್ರಗಳ ಮೂಲಕ ಅಂದವಾಗಿ ಪ್ರದರ್ಶಿಸಿದರು. ಅಂಕಣಕ್ಕೆ ಅಥವಾ ಲೇಖನಕ್ಕೆ ಉಪಯುಕ್ತವಾದ ಚಿತ್ರ ಹೇಗೆ? ಅದರ ಶ್ರಮ, ಸಹನೆಯ ಬಗ್ಗೆ ಪರದೆಯ ಮೇಲೆ ತಮ್ಮ ಕ್ಯಾಮರದಲ್ಲಿ ಸೆರೆಸಿಕ್ಕ ಅಂದವಾದ ಚಿತ್ರಗಳ ದರ್ಶನ ಮಾಡಿಸಿದರು.

ಕಾರ್ಯಕ್ರಮದ ಕೊನೆಯ ಸಂಪನ್ಮೂಲ ವ್ಯಕ್ತಿಯಾಗಿ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕರಾದ ಶ್ರೀ ಗಂಗಾಧರ ಹಿರೇಗುತ್ತಿಯವರು ಪತ್ರಿಕೆಗಳಿಗೆ ಲೇಖನ, ರಚನೆ, ಮುದ್ರಣ, ಸಾಪ್ತಾಹಿಕ ಪುಟದ ಬರಹ ಹಾಗೂ ನಿರ್ವಹಣೆ ಬಗ್ಗೆ ಮಾತನಾಡಿದರು. ಶ್ರೀಯುತರು ಸಹ ತಾವು ನಡೆದು ಬಂದ ದಾರಿಯ ಬಗ್ಗೆನೇ ಹೆಚ್ಚು ಕಾಲ ವ್ಯಯಿಸಿದರು ಎಂದೇ ಹೇಳಬೇಕು. ಶಿಬಿರಾರ್ಥಿಗಳೊಬ್ಬರು ಪ್ರಬಂಧ, ಅಂಕಣ, ಕಥೆಗಳನ್ನು ಹೆಗೆ ವರ್ಗೀಕರಿಸುವಿರಿ ಎಂಬ ಪ್ರಶ್ನೆಗೆ ಮತ್ತೇನೇನೊ ಹೇಳುತ್ತ ವಿಷಯಾಂತರಿಸಿ ಸಾಯಂಕಾಲ  5-15  ಕ್ಕೆ ತಮ್ಮ ಮಾತಿಗೆ ಇತಿಶ್ರೀ ಹೇಳಿದರು.

ಸಾಯಂಕಾಲ 6  ಗಂಟೆಗೆ ಸಮಾರೋಪ ಕಾರ್ಯಕ್ರಮ ನಿಶ್ಚಯಿಸಲಾಗಿತ್ತು. ಶೇಷ ಭಾಗದ 45 ನಿಮಿಷಗಳನ್ನು ಶಿಬಿರಾರ್ಥಿಗಳ ಅಭಿಪ್ರಾಯಗಳಿಗೆ ಅವಕಾಶ ನೀಡಲಾಯಿತು. ಒಟ್ಟರೆಯಾಗಿ ಬಂದ ಅಭಿಪ್ರಾಯ ಹೀಗಿತ್ತು ಶಿಬಿರದಲ್ಲಿನ ಶಿಸ್ತು, ಊಟ, ವಸತಿ, ಅವಧಿಗಳು, ಸಂಪನ್ಮೂಲ ವ್ಯಕ್ತಿಗಳ ಸ್ಪೂರ್ತಿದಾಯಕ ಮಾತು, ಸಂಚಾಲಕ ಶ್ರೀ ಸಂತೋಷಕುಮಾರ ಮೆಹೆಂದಳೆಯವರ ಶಿಸ್ತು, ಸ್ವಯಂಸೇವಕರಾದ ಶ್ರೀ ಎಸ್ ಆರ್ ಎನ್ ಮೂರ್ತಿ, ಶಿವಕುಮಾರ ಸೋಗಿ, ನಿರಂಜನ ಮೂರ್ತಿ, ಪ್ರಶಾಂತಯ್ಯ ಮಠ ಮುಂತಾದವರ ಚುರುಕುತನ, ತುಂಬಾ ಆಪ್ತವಾಗಿತ್ತು. ಈ ಶಿಬಿರ ಎರಡರಿಂದ ರಿಂದ ಮೂರು ದಿನಗಳಿಗೆ ವರ್ಧಿಸಿದರೆ ತುಂಬಾ ಚನ್ನಾಗಿತ್ತು ಎಂದು ಅನೇಕರು. ಕೈಗಾ ಅಣುಸ್ಥಾವರದ ಬಗ್ಗೆ ನೀಡಿದ ಮಾಹಿತಿ ಮತ್ತು ಇಲ್ಲಿನ ಸುರಕ್ಷತೆಯ ಬಗ್ಗೆ ಪರಿಸರ ಕಾಳಜಿಯ ಕ್ರಮ ನಿಜವಾಗಿಯೂ ಶ್ಲಾಘನೀಯ. ಕೆಲವರಂತು ತಮ್ಮ ವಿಧ್ಯಾರ್ಥಿ ಜೀವನದಲ್ಲಿನ ಅನುಭವಗಳನ್ನು ಹಂಚಿಕೊಂಡರು. ‘ಈಗ 20  ರಿಂದ 25  ವರ್ಷಗಳ ಹಿಂದೆ ಕೈಗಾ ಅಣುಸ್ಥಾವರ ವೆಂದರೆ ಅದೊಂದು ಭಯಾನಕ, ಅಪಾಯಗಳ ಸರಮಾಲೆಯೇ ಇಲ್ಲಿದೆ, ಎನ್ನುವಂತಹ ವಿಚಾರವನ್ನು ಅಂದಿನ ಆಂದೋಲನದಲ್ಲಿ ಭಾಗಹಿಸಿದ ಮುಂಚೂಣಿಯಲ್ಲಿರುವ ನಾಯಕರುಗಳು ನಮ್ಮ ತಲೆಯಲ್ಲಿ ತುಂಬಿದ್ದರು. ಹಾಗಾಗಿ ನಾವುಗಳು ಸಹ ಹಿಂದೊಮ್ಮೆ ಕೈಗಾ ನಿರ್ಮಾಣಕ್ಕೆ ದಿಕ್ಕಾರ ಹೇಳಿದವರೆ, ಆದರೇ ಈಗ ಇಲ್ಲಿನ ಸತ್ಯಗಳನ್ನು ಕೇಳಿ ನೋಡಿದಾಗ, ಜನರಲ್ಲಿರುವ ತಪ್ಪು ಅಭಿಪ್ರಾಯಗಳೇನೆಂದು ಅರ್ಥವಾಗುತ್ತಿದೆ. ಅಲ್ಲದೆ ಕೇಂದ್ರ ಸರಕಾರದ ಈ ಬೃಹತ ಉಧ್ಯಮೆಯ ಬಗ್ಗೆ ಹೆಮ್ಮೆಪಡುತ್ತ ಇದರ ಬಗ್ಗೆ ಜನರಗಿರುವ ತಪ್ಪು ಅಭಿಪ್ರಾಯಗಳನ್ನು ಸರಿಗೊಳಿಸುವ ಮಹತ್ತರ ಜವಾಬ್ದಾರಿಯ ಅಳಿಲು ಸೇವೆಯೂ ಸಹ ನಮ್ಮ ಮೇಲಿದೆ’ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಬಂದ ಶ್ರೀ ಉದಯ ಪುರಾಣಿಕರವರು ಸಹ ಕೈಗಾದ ಬಗ್ಗೆ ಈ ಹಿಂದೆ 3 ಅಂಕಣಗಳನ್ನು ಪತ್ರಿಕೆಗೆ ಬರೆದದ್ದನ್ನು ಸ್ಮರಿಸುತ್ತ  ‘ಈ ಶಿಬಿರದ ಅವಧಿ 2 ದಿನಕ್ಕೆ 3 ದಿನಕ್ಕೆ ಹೆಚ್ಚಿಸಿದರೆ ಇನ್ನೂ ಅನುಕೂಲವಾಗುತ್ತದೆ’ ಎಂದರು. ಹೀಗೆ ಪ್ರತಿಯೊಬ್ಬರ ವಿಧವಿಧವಾದ ಅಭಿಪ್ರಾಯ ಪಟ್ಟರು.

ಸಾಯಂಕಾಲ 6 ಗಂಟೆಗೆ ಸಮಾರೋಪ ಕಾರ್ಯಕ್ರಮದ ಅತಿಥಿಗಳು ಹಾಗೂ ಕೈಗಾ ಸ್ಥಳ ನಿರ್ದೇಶರಾದ ಶ್ರೀ ಸಂಜಯಕುಮಾರ ಸ್ಥಾನಿಕ ನಿರ್ದೇಶಕರಾದ ಶ್ರೀ ದೇಶಪಾಂಡೆ, ಜನಜಾಗೃತಿ ಸಮೀತಿಯ ಅಧ್ಯಕ್ಷರಾದ ಶ್ರೀ ಎಮ್ ಶೇಷಯ್ಯ, ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಜೀತೇಂದ್ರಕುಮಾರ ಹಾಗೂ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕರಾದ ಹೀರೆಗುತ್ತಿಯವರು ವೇದಿಕೆಯ ಮೇಲೆ ಆಸೀನರಾದರು. ನಂತರ ಸಮಾರೋಪ ಭಾಷಣ ಮಾಡಿದ ಶ್ರೀ ಸಂಜಯಕುಮಾರ ‘ಕೈಗಾದ ಬಗ್ಗೆ ನೀವು ಕೇವಲ ಪರದೆಯ ಮೇಲೆ ಮಾತ್ರ ನೋಡಿದ್ದಿರಿ. ನಾಳೆ ತಾವು ಕೈಗಾ ಬಂದು ಅಲ್ಲಿನ ಕೆಲಸ ಕಾರ್ಯ ಹಾಗೂ ಸುರಕ್ಷತೆಯ ಬಗ್ಗೆ ಪ್ರತ್ಯಕ್ಷ ನೋಡಿ, ಪರಿಸರ ಸ್ನೇಹಿಯಾದ ನಮ್ಮ ಘಟಕಕ್ಕೆ ಭೆಟಿ ನೀಡಿದಾಗ ಪಾತರಗಿತ್ತಿಗಾಗಿಯೇ ನಿರ್ಮಿಸಿದ (ಚಿಟ್ಟೆ) ಪ್ರತ್ಯೇಕ ಹೂಬನ ನೋಡಿ, ಎಂದು ಶಿಬಿರಾರ್ಥಿಗಳಿಗೆ ಆಹ್ವಾನ ನೀಡಿದರು. ಆನಂತರ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಶುಭ ವಿದಾಯದೊಂದಿಗೆ ಬೀಳ್ಕೊಡಲಾಯಿತು. ಕಾರ್ಯಕ್ರಮದ ನಂತರ ಅಗಲುವಿಕೆಯಿಂದಾಗಿ ಎಲ್ಲರ ಮನಸ್ಸುಗಳು ಭಾರವಾದಂತೆ ತೋರುತ್ತಿತ್ತು. ಕನ್ನಡದ ಆಡು ಮಾತಿನಂತೆ ‘ಭೇಟಿ ಸಹಜ ವಿದಾಯ ಅನಿವಾರ್ಯ’ ಎನ್ನುವ ಮನಸ್ಸುಗಳು, ತಮ್ಮನ್ನೇ ತಾವು ಸಮಾಧಾನ ಪಡಿಸಿಕೊಳ್ಳುತ್ತ ತಂತಮ್ಮ ವಸತಿಯ ಕಡೇಗೆ ಹೆಜ್ಜೆ ಹಾಕಿದವು.
.

-ಶರಣಬಸಪ್ಪ ಅ ಕಾಂತಿ, ಕೈಗಾ
.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: