ಈಸಬೇಕು, ಇದ್ದು ಜೈಸಬೇಕು

Spread the love
Share Button

‘ಯಾಕೋ ಬೇಜಾರು’ ಹೀಗೆ ಅಂದುಕೊಳ್ಳದವರಿಲ್ಲ. ಇನ್ನು ಕೆಲವರಿಗೆ ಬೇಜಾರಾದಾಗೆಲ್ಲ ಯಾರೋ ಒಬ್ಬರು ಅವರನ್ನು ಸಂತೈಸುತ್ತ ಬೆಚ್ಚನೆಯ ಆಪ್ತ ಭಾವದಿಂದ ಆರೈಕೆ ಮಾಡುತ್ತಲೇ ಇರಬೇಕು. ಇಲ್ಲಿನ ವಾಸ್ತವವೆಂದರೆ ಜೀವನದುದ್ದಕ್ಕೂ ನಮ್ಮ ಕನಸು ಕನವರಿಕೆಗಳನ್ನು, ನೋವು ನಿರಾಸೆಗಳನ್ನು ಹಂಚಿಕೊಳ್ಳಲು, ಶರತ್ತು ರಹಿತ ಪ್ರೀತಿ ಸುರಿಯಲು ನಮ್ಮದಾದ ಜೀವ ಲಭಿಸಲೇ ಬೇಕೆಂದಿಲ್ಲ. ಹಾಗೆ ನೋಡುವುದಿದ್ದರೆ ಪ್ರತಿಯೊಂದು ಸಂಬಂಧಕ್ಕೂ (ಸ್ನೇಹವನ್ನು ಸೇರಿಸಿ) ಅದರದೇ ಆದ ಡಿಮ್ಯಾಂಡ್ಗಳಿವೆ. ಇಷ್ಟಕ್ಕೂ ಬದುಕೆಂದರೆ ಒಂದಷ್ಟು ಮುಗುಳ್ನಗೆ, ಪ್ರೀತಿಯ ಮಾತುಗಳು, ಕೊರಗಿನ ಕನವರಿಕೆಗಳು, ಝಲ್ಲನೆ ಪುಟಿದೇಳುವ ಉತ್ಸಾಹ ನಿರಾಸೆ ಕಾಮನೆ ಆವೇಶ ಆಕ್ರೋಶಗಳ ಸಂತೆ. ಒಂದಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗುವ ಜೀವಕ್ಕೆ ಎಷ್ಟೊಂದು ಯಾತನೆ, ನೋವುಗಳು ? ಹಾಗೆಂದು ಬದುಕಿನಿಂದ ಪಲಾಯನ ಮಾಡುವಂತಿಲ್ಲ. ನಮ್ಮ ನೋವಿಗೆ ನಾವೇ ಆಯಿಟ್ ಮೆಂಟ್ ಹಚ್ಚಿಕೊಳ್ಳುತ್ತ, ಗಟ್ಟಿಯಾಗುತ್ತ ದೃಢವಾಗಿ ಮುನ್ನಡೆದಲ್ಲಿ ನಾವೂ ಕೆಲವು ಜೀವಗಳಿಗೆ ಸಾಂತ್ವನ ಕೊಡಬಹುದೇನೋ.

ಹೀಗಾಗಿಯೇ ಪ್ರಜ್ಞಾಪೂರ್ವಕವಾಗಿ ಪಾಸಿಟಿವ್ ಆಗಿಯೇ ಯೋಚಿಸಬೇಕಾದ, ನಮ್ಮ ಚಿಂತನ ಕ್ರಮವನ್ನು, ಸೆಲ್ಫ್ಟಾಕ್ ಕೂಡ ಭಾವುಕತೆಯಂಚಿಗೆ ವಿರಮಿಸದಿರಬೇಕಾದ ಅನಿವಾರ್ಯತೆ ನಮಗಿದೆ. ತನ್ನ ಪುಸ್ತಕ ದ ಪವರ್ ಆಫ್ ಪಾಸಿಟಿವ್ ಥಿಂಕಿಂಗ್ ನಲ್ಲಿ ನಾರ್ಮನ್ ವಿನ್ಸೆಂಟ್ ಪೀಲೆ ಧನಾತ್ಮಕ ದೃಷ್ಟಿಕೋನದ ಮಹತ್ವವನ್ನು ಒತ್ತಿ ಹೇಳುತ್ತಾನೆ. ಕಣ್ಣಿಲ್ಲದಾಕೆಯೊಬ್ಬಳಿಗೆ ಅಡಿಗೆ ಮಾಡುವುದು ಸಂಭ್ರಮದ ಕೆಲಸವಂತೆ. ಅಡಿಗೆಯ ಬೇರೆ ಬೇರೆ ಪರಿಮಳ, ರುಚಿಗಳನ್ನು ಆಕೆ ಆಸ್ವಾದಿಸುತ್ತಾಳಂತೆ. ನಾವೆಷ್ಟು ಭಾಗ್ಯವಂತರು! ಸೋಪಿನ ಗುಳ್ಳೆಗಳಲ್ಲಿನ ಕಾಮನಬಿಲ್ಲಿನಿಂದ ಹಿಡಿದು ಆಗಸದ ತಾರೆಗಳವರೆಗೆ, ಕಡಲಿನ ನೀಲಿಯವರೆಗೆ ನಮ್ಮ ಕಲ್ಪನೆಯ ಚಿತ್ತಾರ ಬಿಡಿಸಬಹುದು. ಬೀದಿ ಬದಿಯಲ್ಲಿ ಕಂಕುಳಲ್ಲಿ ಕೂಸನ್ನೆತ್ತಿಕೆಂಡ ಹದಿಹರೆಯದ ಹುಡುಗಿ, ಚಿಂದಿ ಆಯುವ ಮುದುಕಿಯನ್ನು ನೋಡುವಾಗ ನಮಗಿರುವ ಬೆಚ್ಚನೆಯ ಸೂರು, ನಮ್ಮದಾದ ಕುಟುಂಬ ವರ್ಗದ ನೆಮ್ಮದಿ ಮನ ಮುಟ್ಟದಿರದು. ಇಷ್ಟಾಗಿಯೂ ನಮ್ಮಲ್ಲಿ ಹೆಚ್ಚಿನವರಿಗೂ ಯಾವುದೋ ಕಸಿವಿಸಿ, ಅತೃಪ್ತಿ, ಆತಂಕ, ಅತಿಯಾದ ಚಿಂತೆ.ನೆಗೆಟಿವ್ ದೃಷ್ಟಿಕೋನಗಳೇ ಹಾಮರ್ೋನ್ ಏರುಪೇರು, ರಕ್ತದೊತ್ತಡ, ಡಯಾಬಿಟೀಸ್, ಬೊಜ್ಜಿನಂತಹ ಕಾಯಿಲೆಗಳಿಗೆ ಕಾರಣವೆನ್ನುವುದು ವೈಜ್ಞಾನಿಕವಾಗಿ ಪ್ರೂವ್ ಆಗಿರುವ ಸತ್ಯ. ಹಾಗೆಂದು ಸಮಸ್ಯೆಗಳ ತೀವ್ರತೆಯನ್ನು, ಅವುಗಳ ವಾಸ್ತವಿಕವಾದ ಪರಿಣಾಮಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕುವಂತಿಲ್ಲ. ಹಾಗಿದ್ದರೂ ಧನಾತ್ಮಕ ದೃಷ್ಟಿಕೋನದಿಂದ ನಮ್ಮ ಯಾತನೆ, ನೋವಿನ ತೀವ್ರತೆ ಕಡಿಮೆಯಾಗಿ ಅದರಿಂದ ಬೇಗ ಹೊರಬರಬಹುದು, ಅದು ಅನಿವಾರ್ಯ ಕೂಡ.

try again

ಜೀವನದ ವಾಸ್ತವವೇನೆಂದರೆ ಈ ರೀತಿಯ ತತ್ವ ಚಿಂತನೆ ಕೇಳಲು ಚೆನ್ನಾಗಿರುತ್ತದೆಯಾಗಲಿ, ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಪಿಯು ರಿಸಲ್ಟ್ ಎನ್ನುವುದು ಜೀವನ್ಮರಣ ಹೋರಾಟವಾಗಿರುವಾಗ, ಪ್ರಿಯತಮ/ಪ್ರಿಯತಮೆಯ ಒಪ್ಪಿಗೆಯಿಲ್ಲದಿದ್ದರೆ ಜೀವನ ಬರಡು ಎನ್ನುವ ಅಪಕ್ವ ಮನಸ್ಥಿತಿಯಿರುವಾಗ, ಯಾರೋ ಬೈದರೊಂದೋ, ಅವಮಾನಿಸಿದರೆಂದೋ ಬಿಕ್ಕಿ ಬಿಕ್ಕಿ ನೊಂದುಕೊಳ್ಳುವಾಗ ಹತ್ತು ನಿಮಿಷ ಸಾವಧಾನವಾಗಿ ಯೋಚಿಸಿದಲ್ಲಿ ಮನಸ್ಸು ತಹಬಂದಿಗೆ ಬಂದೀತು. ಎಂತಹದೇ ಸಮಸ್ಯೆಯಾದರೂ ಎರಡುವಾರ ಅವಡುಗಚ್ಚಿ ಸಹಿಸಿಕೊಂಡರೆ ಅದೇ ಸರಿ ಹೋಗುತ್ತದಂತೆ.

ಮನಸೆಂಬ ತಿಳಿಗೊಳದಲ್ಲಿ ಅಲೆಗಳನ್ನೆಬ್ಬಿಸುವ, ರಾಡಿಯೆಬ್ಬಿಸುವ ಘಟನೆಗಳು ನಮ್ಮ ಜೀವನದಲ್ಲಿ ನಡೆದೇ ನಡೆಯುತ್ತವೆ. ಹಾಗಿದ್ದರೂ ಕೆಲವು ಘಟನೆಗಳನ್ನು ಹೊರತುಪಡಿಸಿ ಹೆಚ್ಚಿನವುಗಳು ತೀರಾ ಅನಿರೀಕ್ಷಿತವೇನಲ್ಲ. ನಮ್ಮ ನಿರ್ಲಕ್ಷ್ಯ, ಮುಂದಾಲೋಚನೆಯ ಕೊರತೆ, ‘ಚಲ್ತಾ ಹೈ’ ಎನ್ನುವ ಮನೋಭಾವವೇ ನಮ್ಮ ನೋವುಗಳಿಗೆ ಕಾರಣ. ತನ್ನ ಪುಸ್ತಕ ಫಸ್ಟ್ ಥಿಂಗ್ಸ್ ಫಸ್ಟ್ ನಲ್ಲಿ ಸ್ಟೀಫನ್ ಕೋವೆ ನಾಲ್ಕು ವಲಯಗಳನ್ನು ಪ್ರಮುಖವೆಂದು ಗುರುತಿಸುತ್ತಾನೆ. ಅವು ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ವಲಯಗಳು. ಈ ನಾಲ್ಕೂ ವಲಯಗಳಲ್ಲಿ ಒಂದು ವಲಯದಲ್ಲಿನ ಅಸಮತೋಲನವನ್ನು ಇನ್ನೊಂದು ವಲಯದ ಪ್ರಯತ್ನದಿಂದ ಸರಿಪಡಿಸಿಕೊಳ್ಳಬಹುದು. ಉದಾಹರಣೆಗೆ ಧ್ಯಾನ ಮಾಡುವ ಮೂಲಕ ಖಿನ್ನತೆಯಿಂದ ಹೊರಬರುವುದು, ಸ್ಪೋಟ್ಸರ್್, ಯೋಗ, ಜಿಮ್ನಿಂದ ಉತ್ಸಾಹ ಪಡೆದುಕೊಳ್ಳುವುದು ಹೀಗೆ.

ಕುತೂಹಲದಿಂದಲೂ, ಮನಮಿಡಿವ ಅಂತ:ಕರಣದಿಂದಲೂ ನಾನು ‘ಉದಯವಾಣಿ ‘ಯ ಒಂದು ತಿಂಗಳಿನ ಸಾವು ನೋವು ಕಾಲಂ ನೋಡಿದೆ. ನಾಲ್ಕು ದಿನದ ಈ ಬದುಕಿನಲ್ಲಿ ಸಾಯಲು, ಕೊಲೆ ಸುಲಿಗೆ ಆತ್ಮಹತ್ಯೆಗಳಿಗೆ ಎಷ್ಟೊಂದು ಕಾರಣಗಳೆಂದು ಆಶ್ವರ್ಯವಾಗುತ್ತದೆ. ಈ ಬದುಕಿನ ಉದ್ವಿಗ್ನತೆ, ನರಕ ಸದೃಶ ದೈನ್ಯ, ವಿವಶತೆಗಳು ಮನುಷ್ಯರನ್ನೆಷ್ಟು ಕುಗ್ಗಿಸುತ್ತದೆ ಎಂದೂ ಅರಿವಾಗುತ್ತದೆ. ಹಾಗೆಯೇ ನಮಗೆ ಕ್ಷುಲ್ಲಕವಾಗಿ ಕಾಣುವ ವಿಷಯಗಳೇ ಉಳಿದವರಿಗೆ ಎಷ್ಟು ಬೃಹದಾಕಾರವಾಗಿ ಕಾಣಿಸುತ್ತದಲ್ಲವೆಂಬ ಅಚ್ಚರಿ ಕೂಡ. ಮದುವೆಗೆ ಒಲ್ಲೆನೆಂಬ ಯುವತಿಗೆ ಆಸಿಡ್ ಕುಡಿಸುವ ಭೂಪರು, ಹೆಂಡತಿಯನ್ನು ಕೊಚ್ಚಿ ತಂದೂರಿ ಒಲೆಯಲ್ಲಿ ಬೇಯಿಸುವವರು, ಟೀಚರ್ ಬೈದರೆ ಅವರಿಗೇ ಹಲ್ಲೆ ನಡೆಸುವವರು, ಟಿವಿ ರಿಮೋಟ್ ಕೊಡಲಿಲ್ಲವೆಂದೋ, ಹೊಸ ಮಾದರಿ ಬೈಕ್, ಮೊಬೈಲ್ ಕೊಡಿಸಲಿಲ್ಲವೆಂದೋ ಅಪಾಯ ತಂದುಕೊಳ್ಳುವವರು… ಹೀಗೆ ಮನಸ್ಸಿನ ವಿಕಾರಗಳು, ತುಮುಲಗಳು ಕೆಲವೊಮ್ಮೆ ತೀರಾ ಅಸಮಂಜಸ.

postive thinking

ನಮ್ಮ ಹೆಚ್ಚಿನ ದುರಂತಗಳಿಗೆ ಕಾರಣ ನಮ್ಮಲ್ಲಿರುವ ಸೌಭಾಗ್ಯಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು. ಕೈಕಾಲು, ಕಣ್ಣು, ಆರೋಗ್ಯ ಎಲ್ಲವೂ ಸಮರ್ಪಕವಾಗಿರುವಾಗ ನಮಗದರ ಬೆಲೆಯ ಅರಿವಿಲ್ಲ. ನಮ್ಮ ಹೈಟು, ವೈಟು, ಬಣ್ಣ, ಸೌಂದರ್ಯ , ಬುದ್ಧಿಮತ್ತೆ ಎಲ್ಲವನ್ನೂ ಅವರಿವರ ಜತೆ ಕಂಪೇರ್ ಮಾಡಿ ಮುಖ ಸಣ್ಣದಾಗಿಸಿಕೊಳ್ಳುವುದೇ ನಮ್ಮ ಪ್ರಮುಖ ಹಾಬಿ. ಅನಾಥಾಶ್ರಮದಲ್ಲಿರುವ ಎಳೆಯ ಕಂದಮ್ಮಗಳನ್ನು ನೋಡಿದಾಗ, ಪರಿತ್ಯಕ್ತರು, ರೋಗಿಗಳು, ಅಬಲಾಶ್ರಮಗಳಲ್ಲಿರುವವರು, ಒಂದು ಕೊಡ ನೀರಿಗೆ ಮೈಲಿಗಟ್ಟಲೆ ನಡೆಯುವವರು, ಗೊಂಡಾರಣ್ಯದಲ್ಲಿ ವಾಸಿಸುವ ಆದಿವಾಸಿಗಳು, ತಪ್ಪು ಮಾಡಿಯೋ ಮಾಡದೆಯೋ ಜೈಲಿನಲ್ಲಿರುವವರು, ಸಾಲಸೋಲ ಮಾಡಿ ಎಲ್ಲವನ್ನು ಕಳೆದುಕೊಂಡವರು, ಹಗರಣಗಳಲ್ಲಿ ಸಿಲುಕಿ ಸಾರ್ವಜನಿಕ ಅಪಮಾನ ಎದುರಿಸುವವರು ಇವರನ್ನೆಲ್ಲ ನೋಡಿದರೆ ನಮ್ಮ ಸಮಸ್ಯೆಗಳು ತೃಣ ಸಮಾನ. (ತಮಾಷೆಯಾದರೂ ಈ ವಿಷಯದಲ್ಲಿ ನಮ್ಮ ರಾಜಕಾರಣಗಳನ್ನು ಈ ವಿಷಯದಲ್ಲಿ ಮೆಚ್ಚಬೇಕು. ದಿನಬೆಳಗಾದರೆ ಅವರ ಮೇಲಿನ ಆಪಾದನೆಗಳು ಅವರನ್ನೇನೂ ಕುಗ್ಗಿಸುವುದಿಲ್ಲ)

ಬದುಕೆನ್ನುವುದು ದೇವರು ನಮಗಿತ್ತ ವರ. ಕಷ್ಟವೋ ನಷ್ಟವೋ ಅದರಲ್ಲಿ ‘ ಈಸಬೇಕು ಇದ್ದು ಜೈಸಬೇಕು’. ನೆಗೆಟಿವ್ ಆಗಿ ಆಲೋಚಿಸುವುದಕ್ಕಿಂತ ಹಗಲುಗನಸಾದರೂ ಸರಿಯೆ ಕನಸಿನ ಸರಮಾಲೆ ಹೆಣೆಯುವುದೊಳ್ಳೆಯದು. ಯಾಕೆಂದರೆ ಬೆಳಕಿರದ ಹಾದಿಯಲ್ಲಿ ನಡೆಯಬಹುದು; ಆದರೆ ಕನಸಿರದ ಹಾದಿಯಲ್ಲಿ ನಡೆಯಲಾರೆವು.

ಜಯಶ್ರೀ ಬಿ.ಕದ್ರಿ

3 Responses

 1. Shivu says:

  ೆನ್ನಾಗಿದೆ .chennagide

  From
  Shivu.

 2. savithri.s.bhat says:

  Yes, naavu ಈಸಬೇಕು ಇದ್ದು ಜೈಸಬೇಕು

 3. ಡಾ.ಎ.ಮುನಿಶಾಮಪ್ಪ says:

  ನಿರಾಶಾವಾದಿಗಳಿಗೆ ಉತ್ತಮ ಮಾಗ೯ದಶ೯ನವಾಗಿದೆ ಈ ಲೇಖನ. ಲೇಖಕರಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: