’ಗಾಜಿನ’ ಕನಸು ಒಡೆಯುವ ಆತಂಕದಲ್ಲಿ

Share Button

 

ಕುಂಕುಮ ಕೆಂಪು, ಎಲೆ ಹಸಿರು, ಕಡು ಕಪ್ಪು ಗಾಜಿನ ಬಳೆಗಳ ಸಾಲು. ಪುಟ್ಟದಾದ ಬಲ್ಬ್ ಬೆಳಕಲ್ಲಿ ಮಿರ ಮಿರ ಮಿಂಚುವ ಗಾಜಿನ ಬಳೆಗಳು. ನೋಡಲು ಬಲು ಸುಂದರವಾದರೂ ಕೊಳ್ಳಲು ಏಕೋ ಕಷ್ಟವಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿರುವ ಗಾಜಿನ ಬಳೆಗಳ ಕಾರುಬಾರು ಸಂಪೂರ್ಣ ಸ್ಥಗಿತವಾಗಿದೆ ಎಂದು ಅರಿವಾಗುವಷ್ಟರಲ್ಲಿ ಲಕ್ಷದೀಪೋತ್ಸವದ ಮೂರನೇ ದಿನ ಮುಗಿದಿತ್ತು.

ಶೃಂಗೇರಿಯಿಂದ ಗಾಜಿನ ಬಳೆಗಳನ್ನು ಹೊತ್ತು ತಂದ ಹಿರಿಜೀವವೊಂದು ಪಕ್ಕದ ಅಂಗಡಿಗೆ ಮುತ್ತಿಗೆ ಹಾಕುತ್ತಿದ್ದವರನ್ನೆಲ್ಲಾ ಗಾಜಿನ ಬಳೆಗಳತ್ತ ಕರೆಯುತ್ತಿತ್ತು. 56 ವರ್ಷದ ಯಶೋಧ ತಮಗೆ ತಿಳಿದಿರುವ ಒಂದೇ ಕಾಯಕಕ್ಕೆ ಬೇಡಿಕೆ ಇಲ್ಲವೆಂದು ಅರಿತು ಮರುಗುತ್ತಿದ್ದರು. ಪಕ್ಕದ ಅಂಗಡಿಯ ಪ್ಲಾಸ್ಟಿಕ್ ಬಳೆ, ಬ್ರೇಸ್ಲೆಟ್‌ಗಳ ಸೊಬಗಿನ ಮುಂದೆ ಮುರಿದ ಮನಸ್ಸಿನ ನೋವನ್ನು ತೋಡಿಕೊಂಡದ್ದು ಹೀಗೆ.

ಗಾಜಿನ ಬಳೆಗೆ ಬೇಡಿಕೆಯಿಲ್ಲ ಎಂದರೆ ನಮ್ಮ ಜೀವನಕ್ಕೆ ಅರ್ಥವಿಲ್ಲ. 10 ವರ್ಷದ ಮಗುವಿದ್ದಾಗಿನಿಂದಲೂ ಬಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಒಂದಷ್ಟು ಬಳೆ ಮಾರಾಟವಾದರೆ ಎಲ್ಲಾ ಸರಿಹೋಗುತ್ತದೆ ಎಂಬ ನಂಬಿಕೆಯಿತ್ತು. ಮನೆ ಮನೆಗೆ ತೆರಳಿ ಬಳೆ ಮಾರುವ ಕಸುಬಿಗೆ ಮದುವೆ, ಗೌರಿ ಹಬ್ಬ, ಇಂತಹ ಜಾತ್ರೆಗಳೆ ಸೀಜನ್. ದೀಪೋತ್ಸವದಿಂದ ಶುಭಾರಂಭವಾಗಬೇಕಾದ ವ್ಯಾಪಾರ ಹೀಗೆ ದೂಳು ಹಿಡಿಯುತ್ತಿರುವುದು ಬಹಳ ನೋವಾಗುತ್ತಿದೆ. ಎಂದು ಬೇಸರಪಟ್ಟರು.

ಶೃಂಗೇರಿಯಿಂದ ಬಳೆ ಖರೀದಿಗೆ ಶಿವಮೊಗ್ಗಕ್ಕೆ ಹೋಗಬೇಕು. ಅದಲ್ಲದೆ ಅಲ್ಲಿಂದ ಬಸ್ಸು, ಗಾಡಿಗಳಲ್ಲಿ ಗಾಜು ಒಡೆಯದಂತೆ ಜೋಪಾನ ಮಾಡಿ ಇಲ್ಲಿಗೆ ತಂದಿಳಿಸುವುದೇ ಹರಸಾಹಸ. ಆದರೂ ಕೆಲವೊಮ್ಮೆ ಸುಮಾರು ಬಳೆಗಳು ಒಡೆದುಹೋದಾಗ, ನಷ್ಟ ಲೆಕ್ಕ ಮಾಡುವುದೋ ಅಥವಾ ಉಳಿದ ಬಳೆಗಳ ಮಾರಾಟಕ್ಕೆ ಗಮನ ಹರಿಸೋದಾ ಎಂದು ತಿಳಿಯದೇ ಹೋಗುತ್ತದೆ. ನಮ್ಮ ಕಾಲ ಕಳೆದುಹೋಯಿತು. ಆದರೆ ಗಾಜಿನ ಬಳೆಗಳಿಗೆ ಇಂತಹ ದಿನ ಬರಬಹುದು ಎಂದು ಯೋಚಿಸಿರಲಿಲ್ಲ. ಭಗವಂತನು ಇಂದಿನವರೆಗೆ ಅನ್ನಕ್ಕೆ ಕಷ್ಟಪಡಿಸಿಲ್ಲ, ಮುಂದೆಯೂ ಹಾಗೆ ನಡೆಸಿಕೊಂಡು ಹೋಗುತ್ತಾನೆ ಎಂಬ ನಂಬಿಕೆ ಈ ಹಿರಿಜೀವದ್ದು.
.
ಸೀಜನ್‌ನಲ್ಲಿ ಬಳೆ ಮಾರಾಟ, ಉಳಿದ ತಿಂಗಳಲ್ಲಿ ಕೂಲಿ ಕೆಲಸ. ನಮಗೆ ತಿಳಿದಿರುವುದು ಇಷ್ಟೇ. ತಂದೆ-ತಾಯಿ ಕಲಿಸಿದ ಕೆಲಸವನ್ನು ಗಂಡನ ಮನೆಯಲ್ಲಿ ಮುಂದುವರೆಸಿದ್ದೇನೆ. ಇಷ್ಟು ವರ್ಷಗಳ ನಂತರ ಕಸುಬನ್ನು ಬಿಟ್ಟು ಬೇರೊಂದು ವ್ಯಾಪಾರ ಮಾಡಲು ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದರು.

ಆರೇ ಆರು ಕಪ್ಪು ಬಳೆ ಕೊಡಿ ಎಂದಾಗ ಆ ಕಳೆಗುಂದಿದ ಮುಖದಲ್ಲಿ ಮೂಡಿದ ಮಿಂಚು ಕಂಡು ಕಣ್ಣಂಚಿನಲ್ಲೊಂದು ಹನಿ ಹೊಳೆಯಿತು. ಮನಸಾಕ್ಷಿಗೆ ಮೋಸ ಮಾಡದೆ ಕಷ್ಟಗಳನ್ನೂ ಧೈರ್ಯದಿಂದ ಎದುರಿಸುವ ಅವರ ಛಲ ವಿಶೇಷವೆನ್ನಿಸಿತು.
.

ವರದಿ: ಚೋಂದಮ್ಮ ಎ.ಜೆ
ಚಿತ್ರ: ಹರ್ಷಿತ್ ಅಚ್ರಪ್ಪಾಡಿ
ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ ಕಾಲೇಜು, ಉಜಿರೆ

2 Responses

  1. Shruthi Sharma says:

    ಮನ ತಟ್ಟಿತು. ಮನಸ್ಸಾಕ್ಷಿಗೆ ಮೋಸ ಮಾಡದ ಅವರ ಜೀವನಕ್ಕೆ ಯಾವುದೇ ರೀತಿಯ ತೊಂದರೆ ಆಗದೇ ಇರಲಿ ಎಂದು ಹಾರೈಸೋಣ.

  2. ಛೇ! ಊರಿಗೆ ಹೋದಾಗಲೆಲ್ಲ ಚೆಂದದ ಸಾಂಪ್ರದಾಯಿಕ ಗಾಜಿನ ಬಳೆಗೆ ಅಂಗಡಿ-ಅಂಗಡಿ ತಿರುಗುವ ನಮ್ಮಂಥವರಿಗೆ ಈ ಅಜ್ಜಿಯ ಬಳೆಗಳೇಕೆ ಸಿಗುವುದಿಲ್ಲ? ಬೇಡಿಕೆ ಕುಸಿದಿರುವುದು ನಿಜವೇ? ಅಲ್ಲಾ, ಮಧ್ಯವರ್ತಿಗಳ ಕಿತಾಪತಿಯೇ?

Leave a Reply to Sindhu Devi K Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: