ಜನಪ್ರಿಯ ಸಾಹಿತ್ಯವೂ ಕನಸು ಬಿತ್ತುವ ಪರಿಯೂ

Spread the love
Share Button

ಹೈಸ್ಕೂಲು ಹಂತದ ಯಂಗ್ ಅಡಲ್ಟ್ ಗಳಾಗಿದ್ದಾಗ  ನಾವು ಸಾಯಿಸುತೆ, ಹೆಚ್.ಬಿ.ರಾಧಾದೇವಿ, ಉಷಾ ನವರತ್ನರಾಂ ಹೀಗಿರುವ ಜನಪ್ರಿಯ ಸಾಹಿತಿಗಳ ಕಾದಂಬರಿಗಳನ್ನು ಕದ್ದುಮುಚ್ಚಿ ಓದುತ್ತಿದ್ದೆವು ಹಾಗೂ ಅವು ನಮ್ಮ ಪಾಲಿಗೆ ಅವು ದೊಡ್ಡವರ ಜಗತ್ತಿಗೆ ಬೆಳಕಿಂಡಿಗಳಾಗಿದ್ದವು. ನವಿಲು ಬಣ್ಣದ ರೇಶಿಮೆ ಸೀರೆ, ಗೇಣಗಲದ ಬಾರ್ಡರ್ ಸೀರೆ. ಅವರೆಕಾಳು, ಉಪ್ಪಿಟ್ಟು, ಆಂಬೊಡೆ ಇತ್ಯಾದಿ ವಿವರಗಳನ್ನೊಳಗೊಂಡ ಆ ಕಾದಂಬರಿಗಳಲ್ಲಿ ಹೀರೋಯಿನ್ ಮದುವೆಯಾಗುವುದರೊಂದಿಗೆ ಕಾದಂಬರಿ ಸುಖಾಂತ್ಯವಾಗುತ್ತಿತ್ತು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಂ,ಕೆ ಇಂದಿರಾ, ತ್ರಿವೇಣಿ ಹೀಗೆ ಗಂಭೀರ ಸಾಹಿತಿಗಳನ್ನು ಓದುವವರು ಆಗಿನ ಕಾಲದಲ್ಲೂ ಈಗಲೂ ಬಹುಶ: ವಿರಳ, ಆಳವಾದ ಜೀವನಾನುಭವ, ಬರಹದ ಸಾಂದ್ರತೆ ಇವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ ಅವು ಕೂಡ ಜೀವನದ ಫೋಟೋಗ್ರಾಫಿಕ್ ಝಲಕ್ಗಳೇ. ಗುಲಾಬಿ ಪಕಳೆಗಳು ಉದುರಿದಂತೆ, ಪಾರಿಜಾತದ ಮೊಲ್ಲೆ ಮೊಗ್ಗುಗಳು ಮಧುರ ಸುವಾಸನೆ ಪಸರಿಸಿದಂತೆ ಮೆಲ್ಲನೆ ಆವರಿಸಿಕೊಳ್ಳುವ ಪ್ರೀತಿ ಪ್ರೇಮದ ಪ್ರಸಂಗಗಳು, ದಾಂಪತ್ಯದ ಬಗೆಗಿನ ರಮ್ಯ ಕಲ್ಪನೆಗಳು ಹೀಗೆ ಝಲ್ಲನೆ ಪುಳಕಗೊಳಿಸುತ್ತ ಹಗಲುಗನಸಿನ ಸಾಮ್ರಾಜ್ಯದಲ್ಲಿ ಮೈಮರೆಸಿ ಬಿಡುವ ಶಕ್ತಿ ಆ ಕಾದಂಬರಿಗಳಿದ್ದವು,

ಹಾಗಿದ್ದರೂ ಅವು ಒಂದು ರೀತಿಯ ಲೈಟ್ ರೀಡಿಂಗ್, ಜೀವನದ ಸಂಕೀರ್ಣ ಮಜಲುಗಳಾಗಲಿ, ಅನಿಶ್ಚಿತತೆ, ದ್ವಂದ್ವಗಳ ಚಿತ್ರಣಗಳಾಗಲಿ, ಎದೆ ನಡುಗಿಸುವ ದುರಂತಗಳ, ಜೀವನ ದರ್ಶನಗಳ ಗಾಢ, ದಟ್ಟ ಅನುಭವಗಳಾಗಲಿ ಅವುಗಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ.

reading

ಇಂಗ್ಲೀಷ್ ವಿದ್ಯಾಭ್ಯಾಸದ ಹೊಡೆತದಿಂದಾಗಿ ಮುಂದಿನ ಜನರೇಶನ್ನಲ್ಲಿ ಕನ್ನಡದ ಕಥೆ, ಕಾದಂಬರಿಗಳಿಗೆ ಓದುಗರ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಆಗಬಹುದು. ( ಹಾಗಿದ್ದರೂ ಬ್ಲಾಗ್, e-journal ಗಳು ಈ ನಿಟ್ಟಿನಲ್ಲಿ ಸ್ವಾಗತಾರ್ಹ) ಯುವಜನತೆ ಹೆಚ್ಚಾಗಿ ಓದುವುದು ರಿಲ್ಯಾಕ್ಸೇಶನ್ ಗೋಸ್ಕರ, ಮಿಲ್ಸ್ & ಬೂನ್ಸ್ ರೊಮ್ಯನ್ಸ್ನಿಂದ ಪ್ರಾರಂಭಿಸಿ ಅಗಾಥ ಕ್ರಿಸ್ಟಿ, ಸಿಡ್ನಿ ಶೆಲ್ಡನ್ ಹೀಗೆಲ್ಲ, ಇನ್ನು ಎಳೆಯ ಮಕ್ಕಳಿಗೆ ಎನಿಡ್ ಬ್ಲೈಡನ್, ನ್ಯಾನ್ಸಿಡ್ರೂ, ಹ್ಯಾರಿಪಾಟರ್ ಹೀಗೆ ಅವರ ಪ್ರಪಂಚ.

ಟಿವಿ, ಕಂಪ್ಯೂರ್, ವೀಡಿಯೋ ಗೇಮ್ ಎಲ್ಲ ಇದ್ದರೂ ಓದಿನ ಆನಂದವೇ ಬೇರೆ. ಅದು ನಮ್ಮ ವೈಯಕ್ತಿಕ ವಲಯ ನಮ್ಮ ಆಲೋಚನೆಗಳು, ಭಾವ ಪ್ರಪಂಚವನ್ನು ನಾವೇ ಸೃಷ್ಟಿಸಿಕೊಳ್ಳುವ ಪ್ರಕ್ರಿಯೆ ದೈನಂದಿನ ಒತ್ತಡ, ಸಂಕಷ್ಟಗಳನ್ನು ಕೊಂಚಕಾಲ ಮರೆಯಲೂ ಓದು ಸಹಕಾರಿ. ಜಯಪ್ರಿಯ ಸಾಹಿತ್ಯದಲ್ಲೂ ಬೇರೆ ಬೇರೆ ಪ್ರಕಾರಗಳು ಬೆಳೆದು ಬರುವುದನ್ನು ಗಮನಿಸಬಹುದು. ಒಂದು ಕಾಲಕ್ಕೆ ಯಂಡಮೂರಿಯವರ ಸಾಹಿತ್ಯವನ್ನು ಓದುತ್ತಿದ್ದ ಹಾಗೆಯೇ ಯುವ ಸಮುದಾಯ ಚೇತನ್ ಭಗತ್ರನ್ನು, ತಪ್ಪಿದರೆ ಪೂರ್ಣಚಂದ್ರ ತೇಜಸ್ವಿಯವರನ್ನು ಓದುತ್ತಿರುತ್ತದೆ.(ವಿಕ್ರಮ್ ಸೇಠ್, ಅರವಿಂದ ಅಡಿಗ, ಝಂಪಾಲಹಿರಿ ಇವರ ಹೆಸರುಗಳು ಕ್ಷಿಜ್ ನಲ್ಲಿನ ಪ್ರಶ್ನೋತ್ತರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಯುವತಿಯರಿಗೋಸ್ಕರವೇ ಬರೆಯಲ್ಪಡುವ chic literature ಬರೆಯುವ ಕವಿತಾದಾಸ್ವಾನಿ, ಸ್ವಾತಿಕೌಶಲ್ ಹೀಗಿರುವ ಬರಹಗಾರ್ತಿಯರು ಬೇರೆ.

ತಾಜ್, ಒಬೆರಾಯ್ ನಂತಹ ಹೋಟೆಲ್ ಗಳಲ್ಲಿ ಲಂಚ್ ಮಾಡುವ, ಪ್ಲೇನ್ ಗಳಲ್ಲಿ ಲಂಡನ್ , ಸ್ವಿಜರ್ಲೆಂಡ್ ಗಳಿಗೆ  ಹೋಗುವ ಇವರ ಕಥೆಗಳಲ್ಲಿನ ಹೀರೋಯಿನ್ ಕೂಡ ನಮ್ಮಂತೆ ಭಾವನೆಗಳನ್ನು ಅನುಭವಿಸುತ್ತಾಳೆ (ಪ್ರೀತಿ, ಪ್ರೇಮ, ಅಂತ:ಕರಣ, ದು:ಖ ಇತ್ಯಾದಿ) ಎನ್ನುವುದೇ ಆಶ್ಚರ್ಯ ಈ ಕಥೆಗಳನ್ನು ಓದುತ್ತಾ ಮಧ್ಯಮ ವರ್ಗದ ಯುವತಿ ಕೆಲ ಕ್ಷಣಗಳಾದರೂ ನಲ್ಲಿಯ ಬಳಿ ಕ್ಯೂ ನಿಂತು ನೀರು ತುಂಬಬೇಕಾದ, ನೆಲ ಒರಸಬೇಕಾದ, ಬಸ್ಸಿನಲ್ಲಿ ಒದ್ದಾಡಿಕೊಂಡು ಕೆಲಸಕ್ಕೆ ಹೋಗಬೇಕಾದ, ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕಾದ ಅನಿವಾರ್ಯತೆಗಳನ್ನು ಮರೆಯುತ್ತಾಳೆ.

ಹೆಚ್ಚು ಕಡಿಮೆ ಇದನ್ನೇ ನಮ್ಮ ಸೀರಿಯಲ್ಗಳೂ ಕೊಡುತ್ತದೆ. ಮನೆಯಲ್ಲಿರುವಾಗ ಕೂಡ ಬಾರ್ಡರ್ ಸೀರೆ, ಬ್ರೊಕೇಡ್ ಟಿಶ್ಯೂ ಡ್ರೆಸ್ಗಳನ್ನು ಹಾಕಿಕೊಂಡಿರುವ ಆ ಮಹಿಳಾ ಮಣಿಗಳು ಕುಕ್ಕರ್ ಸೀದು ಹೋಯಿತೆಂದೋ, ತೊಗರಿಬೇಳೆಗೆ ಬೆಲೆ ಜಾಸ್ತಿಯಾಯಿತೆಂದೋ ವರಿ ಮಾಡುವುದನ್ನು ನಾನು ನೋಡಿಲ್ಲ. (ಯಾರದೋ ಗಂಡನನ್ನು ಬಲೆಗೆ ಬೀಳಿಸುವ, ಇನ್ಯಾವಳದೋ ಪರ್ಸನಲ್ ಲೈಫಿನ ಬಗ್ಗೆ ಕುತೂಹಲ ಹೀಗೆಲ್ಲ ಅವರ ಜಗತ್ತು) ಹಾಗಿದ್ದರೂ ನನ್ನನ್ನೂ ಸೇರಿಸಿದಂತೆ ವಿರಾಮವಿದ್ದಾಗಲೆಲ್ಲಾ ಹೆಂಗಳೆಯರು ಅವುಗಳನ್ನು ನೋಡುತ್ತಾರೆ. ಭಾರತೀಯ ಸಂಸ್ಕೃತಿಯ ಮೌಲ್ಯಗಳಾದ ತಾಳ್ಮೆ, ಸಹನೆ, ಸ್ತ್ರೀತನ (ಹಾಗಂದರೇನು?) ಇತ್ಯಾದಿ ಮೌಲ್ಯಗಳನ್ನು ಪ್ರತಿವಾದಿಸುತ್ತಲೇ ಅಳುಮುಂಜಿತನವನ್ನು ಒಳ್ಳೆಯತನವೆಂದೂ, ವಾಚಾಮಗೋಚರವಾಗಿ ತನ್ನನ್ನು ಬಯ್ಯುತ್ತಿದ್ದರೂ ಮೌನವಾಗಿ ಸಹಿಸಿಕೊಳ್ಳುವುದು (ಕಣ್ಣಿನಿಂದ ಎರಡೇ ಎರಡು ಒಂದು ಹನಿ ನೀರು, ನಿಶ್ಚಬ್ದದೊಂದಿಗೆ) ಗುಣವಂತೆಯ ಲಕ್ಷಣವೆಂದೂ ಇವು ಚಿತ್ರಿಸುತ್ತವೆ.

dreams

ಬದುಕು ಸೀರಿಯಲ್ಲುಗಳಲ್ಲಿರುವಂತೆ ಭ್ರಾಮಕ ಜಗತ್ತು ಅಲ್ಲ, ಟಾಲ್ಸ್ಟಾಯ್ನ ಅನ್ನ ಕರೆನಿನಾದಂತೆ ಸಂಕೀರ್ಣ ಭಾವನಾತ್ಮಕ ಸಂಬಂಧಗಳ ವ್ಯೂಹವೂ ಅಲ್ಲ. ಕಾಮನ್ಸೆನ್ಸ್ (ಅದು ಈಗೀಗ ಬಹಳ ಅನ್ಕಾಮನ್) ಹಾಗೂ ಆತ್ಮಸಾಕ್ಷಿಯಂತೆ ನಡೆದರೆ ಬದುಕು ಇಬ್ಬನಿಯ ಹನಿಯಂತೆ ಕರಗಿಹೋಗಲಾರದು ಹಾಗೂ ನಾವೂ ಹೆಜ್ಜೆ ಗುರುತನ್ನು ಮೂಡಿಸಬಹುದೇನೋ.

ಜಯಶ್ರೀ.ಬಿ. ಕದ್ರಿ

 

 

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: