ಎಳನೀರು ….ಎಳನೀರು….
ಇನ್ನೂ ಎಪ್ರಿಲ್ ಆರಂಭವಾಗಿಲ್ಲ. ಆಗಲೇ ಬಿಸಿಲ ಝಳ. ತಣ್ಣನೆಯ ಪಾನೀಯಗಳು, ಎಳನೀರು, ನೀರು ಮಜ್ಜಿಗೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹೆಚ್ಚಿಟ್ಟ ಕಲ್ಲಂಗಡಿ ಹಣ್ಣು, ಎಳೆಸೌತೆಕಾಯಿ ಕ್ಷಣಾರ್ಧದಲ್ಲಿ ಖಾಲಿಯಾಗುತ್ತವೆ. ಬೆಳಗಿನ ‘ಗುಡ್ ಮಾರ್ನಿಂಗ್’ ನ ಜತೆಗೆ ‘ನಿನ್ನೆ ವಿಪರೀತ ಸೆಕೆ ಇತ್ತು ಅಲ್ವಾ’ ಎಂಬ ಮಾತಿನಿಂದ ದಿನಚರಿ ಆರಂಭವಾಗುತ್ತಿದೆ. ಉಷ್ಣವಲಯದಲ್ಲಿರುವ ಎಲ್ಲಾ ಊರುಗಳಲ್ಲೂ ಇದೇ ಕಥೆ.
ಕಳೆದ ಏಪ್ರಿಲ್ ತಿಂಗಳ ಬಿಸಿಲಿನಲ್ಲಿ ಸಿಂಗಾಪುರದ ಸೆಂಟುಸ ದ್ವೀಪದಲ್ಲಿದ್ದೆ. ಎಳನೀರು ಮಾರುವ ಗಾಡಿಯೊಂದನ್ನು ಕಂಡಾಗ ಕೊಳ್ಳೋಣವೆಂದು ಹತ್ತಿರ ಹೋದೆ. ಅಚ್ಚುಕಟ್ಟಾದ ಗಾಡಿಯಲ್ಲಿ, ಮಂಜುಗಡ್ಡೆಯ ಮಧ್ಯೆ ಇರಿಸಿದ ಎಳನೀರುಗಳು ಆಕರ್ಷಕವಾಗಿದ್ದುವು.
ದುಬಾರಿ ಎನಿಸಿದರೂ ನಾಲಕ್ಕು ಸಿಂಗಾಪುರ್ ಡಾಲರ್ (ಸುಮಾರು ನೂರಿಪ್ಪತ್ತು ರುಪಾಯಿ) ತೆತ್ತು ಒಂದು ಎಳನೀರು ಕೊಂಡು ಕೊಂಡೆ. ಎಳನೀರನ್ನು ಒಂದು ಪುಟ್ಟ ತಟ್ಟೆಯಲ್ಲಿ ಇರಿಸಿ,ಅದರ ಮೇಲೆ ಸಣ್ಣದಾದ’ಛತ್ರಿ’ಯನ್ನು ಜೋಡಿಸಿದರು. ಎಂಥ ಸುಂದರ ಜೋಡಣೆ! ಪ್ರವಾಸಿಗಳನ್ನು ಸೆಳೆಯುವ ಮಾರ್ಕೆಟಿಂಗ್ ತಂತ್ರ!
ಮೈಸೂರಿನಲ್ಲಿ ಸೈಕಲ್ ಮೇಲೆ ಹೊರಲಾರದಷ್ಟು ಎಳನೀರು ಕಾಯಿಗಳನ್ನು ಹೇರಿಕೊಂಡು, “ಎಳ್ನೀರು..ಎಳ್ನೀರು…ಬೇಕಾ” ಎಂದು ರಾಗವಾಗಿ ಹೇಳುತ್ತಾ, ದಾರಿಯುದ್ದಕ್ಕೂ ಕೇಳಿದವರಿಗೆ ಎಳನೀರನ್ನು ಕೊಚ್ಚಿಕೊಟ್ಟು ಅದರ ಚಿಪ್ಪನ್ನು ಅಲ್ಲಲ್ಲೇ ಎಸೆದು ಹೋಗುವವರನ್ನು ನೆನಪಾಯಿತು. ಯಾವುದೇ ದೇಶದಲ್ಲಿ , ಪ್ರವಾಸೋದ್ಯಮವನ್ನು ಬೆಳೆಸಲು ಸಣ್ಣ ಪುಟ್ಟ ವಿಚಾರಗಳಿಗೂ ಪ್ರಾಮುಖ್ಯತೆ ನೀಡಿದರೆ ಮಾತ್ರ ಸಾಧ್ಯ ಅನಿಸಿತು.
– ಹೇಮಮಾಲಾ. ಬಿ. ಮೈಸೂರು
21/03/2014
ನೈಸ್ ಆರ್ಟಿಕಲ್
ಒಳ್ಳೆಯ ಮಾರ್ಕೆಟಿಂಗ್ ತಂತ್ರ. ಕಾಸಿಗೆ ತಕ್ಕ ಕಜ್ಜಾಯ.
ವ್ವಾವ್ ಸಿ೦ಗಾಪುರದಲ್ಲಿ ಎಳನೀರು ಕುಡಿದಿರಿ?
ಬೆಳೆಸಿದವರಿಂದ ಖರೀದಿಸುವಾಗ ಅಗ್ಗದ ದರ . ಮಾರುವಾಗ ಏರಿದ ದರ .ಲಾಭವೆಲ್ಲ ಮಧ್ಯವರ್ತಿಗಳದು . ಬರಹ ಉತ್ತಮ .