ದೂದ್ ಸಾಗರ್

Spread the love
Share Button

‘ದೂದ್ ಸಾಗರ್’ ಎಂಬ ಹೆಸರು ಕಿವಿಗೆ ಬಿದ್ದಾಗ ಇದು ಯಾವುದೋ ಸಿನೆಮಾ ಕತೆ ಅಥವಾ ಹೋಟೆಲ್ ಇರಬಹುದು ಎಂಬು ಅರ್ಥೈಸಿದರೆ ತಪ್ಪು. ಇದು ಪ್ರಕೃತಿಪ್ರೇಮಿಗಳಿಗೆ ಹಾಗೂ ವಿಭಿನ್ನ ರೀತಿಯ ಚಾರಣವನ್ನು ಬಯಸುವವರಿಗೆ ಇಷ್ಟವಾಗುವ ತಾಣ. ನಮ್ಮ ನೆರೆಯ ಗೋವಾದಲ್ಲಿ ಹರಿಯುವ ಮಾಂಡೋವಿ ನದಿಯು ಸೃಷ್ಟಿಸಿರುವ ದೂದ್ ಸಾಗರ ಜಲಪಾತವು ನಾಲ್ಕು ಹಂತಗಳಲ್ಲಿ ನೀರನ್ನು ಚಿಮ್ಮಿಸುತ್ತದೆ. ಹೀಗೆ ಧುಮುಕುವ ಜಲಪಾತವು ಹಾಲಿನಂತೆ ಕಾಣಿಸುವುದರಿಂದ ದೂದ್ ಸಾಗರ್ ಎಂಬ ಅನ್ವರ್ಥ ನಾಮ ಪಡೆದುಕೊಂಡಿದೆ. ಇದು ಗೋವಾದ ಪಣಜಿಯಿಂದ 60  ಕಿ.ಮೀ ದೂರದಲ್ಲಿದೆ.

ದೂದ್ ಸಾಗರವನ್ನು ತಲಪಲು ರೈಲ್ ಅಥವಾ ಬಸ್ ಮಾರ್ಗದಲ್ಲಿ ಪ್ರಯಾಣಿಸಬೇಕು. ಗೋವಾದ ಪಣಜಿಯಿಂದ ಬರುವುದಾದರೆ, ‘ಕೊಲ್ಲೆಮ್’ ಎಂಬ ಸ್ಟೇಷನ್ ಮೂಲಕ ಬರಬೇಕು. ಕರ್ನಾಟಕದ ಕಡೆಯಿಂದ ಹೋಗುವುದಾದರೆ ‘ಕಾಸಲ್ ರೋಕ್’ ಸ್ಟೇಷನ್ ಮೂಲಕ್ ಹಾದು ಹೋಗಬೇಕು. ದೂದ್ ಸಾಗರ್ ನಲ್ಲಿಯೂ ರೈಲು ಒಂದು ನಿಮಿಷ ನಿಲ್ಲುವುದಾದರೂ ಇಲ್ಲಿ ಟಿಕೆಟ್ ಕೊಡುವ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ಮುಂಚಿತವಾಗಿ ಟಿಕೆಟ್ ಖರೀದಿಸಬೇಕು.

ಒಕ್ಟೋಬರ್ ತಿಂಗಳಿನಲ್ಲಿ ಕೂಡ ಬಹಳಷ್ಟು ನೀರನ್ನು ಹೊಂದಿದ್ದು ಸುಂದರವಾಗಿದ್ದ ದೂದ್ ಸಾಗರವು, ಮಳೆಗಾಲದಲ್ಲಿ ಇನ್ನಷ್ಟು ನೀರು ತುಂಬಿ ರಮಣೀಯವಾಗುತ್ತದೆ. ಜಲಪಾತದ ಕೆಳಭಾಗಲ್ಲಿ ನೀರಿಗೆ ಇಳಿದು ಸಂಭ್ರಮಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ನೀರಿನ ಆಳ, ರಭಸ ಗಮನಿಸಿಕೊಂಡು ನೀರಿಗೆ ಇಳಿಯುವುದು ಒಳ್ಳೆಯದು. ನಾಲ್ಕು ಹಂತಗಳಿರುವ ಈ ಜಲಪಾತದ ಒಟ್ಟೂ ಎತ್ತರ 310  ಮೀಟರ್ ಹಾಗು ಅಂದಾಜು 30 ಮೀಟರ್  ಅಗಲವಿದ್ದು, ಇದು ಭಾರತಸಲ್ಲಿ 5 ನೆಯ ದೊಡ್ಡ ಜಲಪಾತವಾಗಿದೆ.

ಚಾರಣಕ್ಕೆ ಹಲವಾರು ದಾರಿಗಳಿವೆಯಾದರೂ ‘ಕಾಸಲ್ ರೋಕ್’ ನಿಂದ ರೈಲ್ವೇ ಟ್ರ್ಯಾಕ್ ಮೇಲೆ 14 ಕಿ.ಮಿ ನಡೆದು ದೂದ್ ಸಾಗರ್ ತಲಪವುದು ಹೆಚ್ಚಿನವರ ಅಯ್ಕೆ. ಇದಕ್ಕೆ ಕಾರಣ, ಈ ದಾರಿಯಲ್ಲಿ ಉತ್ತಮ ನಿಸರ್ಗ ಸಿರಿಯಿದೆ ಹಾಗೂ ಕೊಂಕಣ ರೈಲ್ವೇಯ ಸುರಂಗ ಮಾರ್ಗದಲ್ಲಿ ನಡೆಯುವ ಅವಕಾಶ ಸಿಗುತ್ತದೆ. ರೈಲ್ ಹಳಿ ಮೇಲೆ ನಡೆಯುವುದು ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದುದಕ್ಕೆ ಅವಕಾಶವಿದೆ.

ದೂದ್ ಸಾಗರ್ ಬಗ್ಗೆ ಪ್ರಚಲಿತವಿರುವ ದಂತಕತೆಯ ಪ್ರಕಾರ, ಹಿಂದೆ, ಇಲ್ಲಿಗೆ ಪಕ್ಕದ ಅರಮನೆಯಲ್ಲಿ ರಾಜಕುಮಾರಿಯೊಬ್ಬಳು ವಾಸವಿದ್ದಳು. ಇಲ್ಲೊಂದು ಸುಂದರ ಸರೋವರವಿತ್ತು. ರಾಜಕುಮಾರಿಯು ಪ್ರತಿದಿನ ಸರೋವರಕ್ಕೆ ಬಂದು ಸ್ನಾನ ಮಾಡಿದ ನಂತರ, ಚಿನ್ನದ ಹೂಜಿಯಲ್ಲಿ ತಾನು ತಂದಿದ್ದ ಸಿಹಿಹಾಲನ್ನು ಕುಡಿಯುತ್ತಿದ್ದಳಂತೆ. ಹೀಗೆ ಒಂದು ದಿನ ಸ್ನಾನ ಮಾಡಿ ಹಾಲು ಕುಡಿಯುತ್ತಿರುವಾಗ, ಪಕ್ಕದ ಕಾಡಿನ ಮರೆಯಲ್ಲಿ, ರಾಜಕುಮಾರನೊಬ್ಬ ತನ್ನನ್ನು ನೋಡುತ್ತಿರುವುದನ್ನು ಗಮನಿಸಿದಳಂತೆ. ಮುಜುಗರಗೊಂಡ ಆಕೆ ಹೂಜಿಯ ಹಾಲನ್ನು ಚೆಲ್ಲಿ, ಅಪಾರದರ್ಶಕತೆಯನ್ನು ಸೃಷ್ಟಿಸಿ ತನ್ನ ಗೌರವವನ್ನು ಕಾಪಾಡಿಕೊಂಡಳಂತೆ. ಹೀಗೆ ಹರಿದ ಹೂಜಿಯ ಹಾಲು ‘ದೂದ್ ಸಾಗರ್‘ ಎಂದ ಹೆಸರು ಪಡೆಯಿತಂತೆ.

ಮೈಸೂರಿನ ಯೂತ್ ಹಾಸ್ಟೆಲ್ ಅಸೋಸಿಯೇಶನ್, ಗಂಗೊತ್ರಿ ಘಟಕವು , ಒಕ್ಟೊಬರ್ 18-19 ರಂದು ಆಯೊಜಿಸಿದ್ದ ಈ ಕಾರ್ಯಕ್ರಮದಲ್ಲಿ 102 ಜನ ಭಾಗವಹಿಸಿದ್ದೆವು. 2 ಬಸ್ ತುಂಬಾ ಜನ ಮೈಸೂರಿನಿಂದ ಸುಮಾರು ಸಂಜೆ 5 ಘಂಟೆಗೆ ಹೊರಟೆವು. ಆಗ ತಾನೇ ದಸರಾ ಮುಗಿದಿದ್ದ ನೆನಪೋ ಎಂಬಂತೆ, ನಮ್ಮ ತಂಡದ ಕೆಲವರು, ಬಸ್ ಪ್ರಯಾಣದುದ್ದಕ್ಕು ಹಾಡು -ನೃತ್ಯ ಸಂಯೋಜನೆಯಿಂದ ಬಸ್ ನಲ್ಲಿ ‘ಯುವ ದಸರಾ’ ವನ್ನು ಸೃಷ್ಟಿಸಿದ್ದರು.ನಾವೇನು ಕಡಿಮೆ ಎಂಬಂತೆ ಹಿರಿಯ ಯೂಥ್ ಗಳು ಸಾಥ್ ಕೊಟ್ಟಿದ್ದರು.

ನಮ್ಮ ಆಯೋಜಕರ ಆಯ್ಕೆ ಕಸಲ್ ರೋಕ್ ಮೂಲಕ ಆಅಗಿತ್ತು. ಅಲ್ಲಿನ ಅತಿಥಿ ಗೃಹವನ್ನು ಮುಂಚಿತವಾಗಿ ಕಾದಿರಿಸಿದ್ದುದು ನಮಗೆ ಅನುಕೂಲವಾಯಿತು. ಊಟ ತಿಂಡಿಯ ಜವಾಬ್ದಾರಿ ಹೊತ್ತಿದ್ದ ಶ್ರೀ ಜಿ.ಡಿ. ಸುರೇಶ್ ಅವರ ನೇತೃತ್ವದಲ್ಲಿ, ಬಹಳ ಅಚ್ಚುಕಟ್ಟಾಗಿ, ರುಚಿ-ರುಚಿ, ಬಿಸಿ-ಬಿಸಿ ಊಟ ತಿಂಡಿ ನಮ್ಮೆದುರೇ ತಯಾರಾಗುತ್ತಿತ್ತು. ತಮ್ಮ ವಾಹನದಲ್ಲಿ ಅಡುಗೆಯ ಪರಿಕರಗಳನ್ನೂ ಜೋಡಿಸಿಕೊಂಡು, ಆಯಾಯ ಸ್ಥಳದಲ್ಲಿ ಇರುವ ಅನುಕೂಲತೆಗಳನ್ನು ಬಳಸಿಕೊಂಡು ನಳಪಾಕ ಸಿದ್ಧಪಡಿಸುತ್ತಿದ್ದರು.

ಹಸಿರು ಕಾಡಿನ ಮಧ್ಯೆ ಹಾದು ಹೋಗಿರುವ ಈ ರೈಲ್ ಮಾರ್ಗದಲ್ಲಿ ಹಳಿಯುದ್ದಕ್ಕೂ ಹಲವಾರು ಸುರಂಗಗಳು ಎದುರಾಗುತ್ತವೆ. ರೈಲ್ ಹಳಿ ಮೇಲೆ ನಡೆಯುವುದು ಎಷ್ಟು ಕಷ್ಟ ಎಂದು 1-2 ಕಿ.ಮಿ. ನಡೆದಾಗ ಅರ್ಥವಾಯಿತು. ಜಲ್ಲಿ ಕಲ್ಲುಗಳ ಮೇಲೆ ಕಾಲು ಉಳುಕದಂತೆ ಜಾಗರೂಕತೆ ವಹಿಸಬೇಕು. ಸಮಾನ ಅಂತರದಲ್ಲಿರುವ ರೈಲ್ ಪಟ್ಟಿಯ ಮೇಲೆ ನಡೆಯುವಾಗ ಒಂದು ಲಯ/ಗತಿ ಬೇಕು. ಜತೆಗೆ ರೈಲ್ ಪಟ್ಟಿಯಲ್ಲಿ ಇರುವ ಕೊಳಕು ಪಾದಕ್ಕೆ ಹತ್ತದಂತೆ ಗಮನ ಹರಿಸುತ್ತಲೇ ಇರಬೇಕು!

ಹೀಗೆ ನಡೆಯುತ್ತಾ ಮುಂದೆ ಹೋದಂತೆ ಕೆಲವು ಟ್ರೈನ್ ಗಳು ಎದುರಾದುವು. ಅಲ್ಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ಯಾಂಗ್ ಮೆನ್ ಕಾಣಸಿಕ್ಕಿದರು. ಕೆಲವರನ್ನು ಮಾತಿಗೆಳೆದಾಗ, ಅವರ ಕೆಲಸ ತುಂಬಾ ತ್ರಾಸದಾಯಕವಾದದ್ದು ಎಂದು ಅನಿಸಿತು. ಬಿಸಿಲಿರಲಿ, ಮಳೆಯಿರಲಿ, ಸಾಮಾನ್ಯವಾಗಿ ನಿರ್ಜನವಾದ ರೈಲ್ ಹಳಿಯ ಮೇಲೆ, ಭಾರವಾದ ಸುತ್ತಿಗೆಯಂತಹ ಉಪಕರಣ ಹೊತ್ತುಕೊಂಡು, 8 ಕಿ. ಮೀ ದೂರ ಹಳಿಯನ್ನು ಪರಿಶೀಲಿಸುತ್ತಾ ನಡೆಯಬೇಕು. ಏನಾದರೂ ಲೋಪ-ದೋಷ ವಿದ್ದರೆ ತತ್ಕ್ಷಣ ಸರಿಪಡಿಸಬೇಕು. ಚುಕ್-ಪುಕ್ ರೈಲ್ ನಲ್ಲಿ ಆರಾಮವಾಗಿ ಪ್ರಯಾಣಿಸುವ ನಮ್ಮ ಸುರಕ್ಷತೆಯ ಹಿಂದೆ ಈ ಬಡ ಗ್ಯಾಂಗ್ ಮನ್ ಗಳ ಕಠಿಣ ಶ್ರಮವಿರುತ್ತದೆಯೆಂದು ಈಗ ತಾನೆ ಅರಿವಾಯಿತು. ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್!

ತಂಡದ ಕೆಲವರು ಉತ್ಸಾಹದಿಂದ ನಡೆದರು, ಇನ್ನು ಕೆಲವರು ಅರಂಭಶೂರತ್ವ ಪ್ರದರ್ಶಿಸಿ ಆಮೇಲೆ ನಿಧಾನಗತಿಗೆ ಶರಣಾದರು, ಇನ್ನೂ ಕೆಲವು ಜಾಣರು ಅಗಿಂಗಾಗ್ಗೆ ಸಿಗುತ್ತಿದ್ದ ಗೂಡ್ಸ್ ಟ್ರೈನ್ ಹತ್ತುವ ಚಾಲಾಕಿತನ ತೋರಿಸಿದರು! ಟ್ರೈನ್ ಬರುವ ಸಂಕೇತ ಸಿಕ್ಕಿದಾಗ ಸುರಂಗ ಮಾರ್ಗದಲ್ಲಿ ನಡೆಯಬೇಡಿರೆಂದು ನಮಗೆ ಆಯೋಜಕರು ಮುನ್ನೆಚ್ಚರಿಕೆ ಕೊಟ್ಟಿದ್ದರು. ಯಾಕೆಂದರೆ, ಸುಮಾರು 30 ರಿಂದ 80ರ ವರೆಗೆ ಇರುತ್ತಿದ್ದ ಬೋಗಿಗಳು ಸುರಂಗ ಮಾರ್ಗದಲ್ಲಿ ಭಡಭಡನೆ ಹಾದುಹೋಗುವಾಗ ಉಂಟಾಗುವ ಶಬ್ದಕ್ಕೆ ನಮ್ಮ ಕಿವಿತಮ್ಮಟೆ ಕಿತ್ತು ಹೋಗುವಂತಾಗುತ್ತದೆ!

Water Jhari

ದಾರಿಯಲ್ಲಿ ಅಲ್ಲಲ್ಲಿ ಸಣ್ಣ-ಪುಟ್ಟ ನೀರಿನ ಝರಿಗಳು ಕಾಣ ಸಿಕ್ಕಿದುವು. ಅದೆಷ್ಟು ಬಾರಿ ನಮ್ಮ ಬಾಟಲಿಗೆ ನೀರು ತುಂಬಿಸಿಕೊಂಡೆವೋ ಗೊತ್ತಿಲ್ಲ, ಸಿಹಿನೀರು ಕುಡಿದಷ್ಟು ಸಾಲದು ಎನಿಸಿತ್ತು. ದಾರಿಯುದ್ದಕ್ಕೂ ಸೌತೆಕಾಯಿ ತಿಂದೆವು, ಫೊಟೊ ಕ್ಲಿಕ್ಕಿಸಿದೆವು, ಬಂದು-ಹೋಗುತ್ತಿದ್ದ ಟ್ರೈನ್ ಗಳ ಬೋಗಿಗಳನ್ನು ಎಣಿಸಿದೆವು, ಕೀಟಲೆ ಮಾತುಗಳು,ಅಣಕು ಹಾಡುಗಳು…..ಇತ್ಯಾದಿಗಳಿಂದ ಸಂಪನ್ನಗೊಂಡ ನಮ್ಮ ತಂಡ ದೂದ್ ಸಾಗರ್ ತಲಪಿದಾಗ ಸುಮಾರು 3 ಘಂಟೆ ಆಗಿತ್ತು.

dud sagar2

ದೂದ್ ಸಾಗರ್

ಮಧ್ಯಾಹ್ನದ ಊಟಕ್ಕೆಂದು ಕೊಟ್ಟಿದ್ದ ಚಿತ್ರಾನ್ನ, ಸಿಹಿ ಸವಿದೆವು. ನಂತರ ಕೆಲವರು ಜಲಪಾತದ ನೀರಿಗೆ ಇಳಿದರು. ಹಿಂತಿರುಗಿ ಬರಲು ಟ್ರೈನ್ ನಿಗದಿತ ಅವಧಿಗೆ ಬಾರದೆ ಇದ್ದುದರಿಂದ ನಾವು ದೂದ್ ಸಾಗರ್ ರೈಲ್ವೇ ಸ್ಟೇಶನ್ ನಲ್ಲಿ ಒಂದು ತಾಸು ಕಾದೆವು. ಕೊನೆಗೂ 6 ಘಂಟೆಗೆ ಟ್ರೈನ್ ಬಂತು. ಎಲ್ಲರೂ ಅದರಲ್ಲಿ ಪ್ರಯಾಣಿಸಿ ಕಾಸಲ್ ರೋಕ್ ತಲಪಿದೆವು. ರಾತ್ರಿಯ ಊಟಕ್ಕೆ ಅನ್ನ, ಸಾಂಬಾರ್, ತಿಳಿಸಾರು, ಸಿಹಿ ಇತ್ತು. ಈಗ ಎಲ್ಲರಿಗೂ ಸುಸ್ತಾಗಿತ್ತು, ಆದರೆ ಚಾರಣ ಪೂರೈಸಿದ ತೃಪ್ತಿ ಇತ್ತು. ಹೀಗೆ ನಮ್ಮ ದೂದ್ ಸಾಗರ್ ಚಾರಣ ಕೊನೆಗೊಂಡು ನಮ್ಮ ಮುಂದಿನ ಗಮ್ಯ ಸ್ಥಾನವಾಗಿದ್ದ ಜೋಗ ಜಲಪಾತದೆಡೆಗೆ ಪ್ರಯಾಣ ಮುಂದುವರಿಯಿತು.

 

– ಹೇಮಮಾಲಾ.ಬಿ . ಮೈಸೂರು

2 Responses

  1. Ghouse says:

    ಹ್ಮ್ಮ್ಮ್….ಮಿತ್ರರೇ ಇದೆ ನೇವು “ಚೆನ್ನೈ ಎಕ್ಸ್ಪ್ರೆಸ್” ಚಲನ ಚಿತ್ರದಲ್ಲಿ ನೋಡುವುದು. ನಿಜವಗಲ್ಲೂ ಇದ್ದು ಜೀವನದಲ್ಲಿ ಒಂದು ಸಲ ಆದರು ನೋಡಬೇಕಾದ ಸ್ಥಳ ಮತ್ತು ಅನುಭವ.

  2. ನಾನು ಸೆಪ್ಟೆಂಬರ್ ನಲ್ಲಿ ಹೋಗಲು ಯೋಚಿಸಿದ್ದೇನೆ. ಒಳ್ಳೆ ಸಾಹಸ ನಿಮ್ಮದು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: