ಉದ್ಯೋಗ ಬೇಕೇ…. ಉದ್ಯೋಗ…?

Spread the love
Share Button

ಮತ್ತೆ ಬಂದಿದೆ ಸೆಖೆ, ಸುಡು ಬಿಸಿಲು, ನಮ್ಮನ್ನು ಕಾಯಿಸಿ ಸತಾಯಿಸುವ ಏಪ್ರಿಲ್-ಮೇ ತಿಂಗಳು..! ಅದನ್ನಾದರೂ ತಡೆಹಿಡಿದುಕೊಳ್ಳಬಹುದು ಆದ್ರೆ, ಈ ಶಿಕ್ಷಣ ಸಂಬಂದಿ ಸಮಸ್ಯೆಗಳು ಕಾಡುವ ರೀತಿ ವಿಪರೀತ ಸುಡುತ್ತದೆ..! ಎಸ್ಸ್.ಎಸ್ಸ್.ಎಲ್.ಸಿ. ಮುಗೀತು…ಇನ್ನೇನು? ಪಿ.ಯು.ಸಿ. ಆಯ್ತಲ್ಲ..ಮುಂದೇನು? ಡಿಗ್ರಿ ಮುಗೀತಲ್ಲ..ಶಿಕ್ಷಣದ ಒಂದು ಹಂತವೇ ಮುಗಿದಿದೆ..ಇನ್ನೇನೋ ಏನೋ..! ಹೀಗೇ ಪ್ರತೀ ಹೆಜ್ಜೆ ಮಕ್ಕಳಿಗೂ ಟೆನ್ಶನ್, ಪೋಷಕರಿಗೂ ಟೆನ್ಶನ್..!!

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೋ ಡಿಗ್ರಿ ಮಾಡಿದವನು ಇನ್ಯಾವುದೋ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಕಾರಣ ಅವನ ವಿದ್ಯಾರ್ಹತೆ ಎಷ್ಟೇ ಇದ್ದರೂ ಅವನು ಬಯಸಿದ ಉದ್ಯೋಗ ಸಿಗದೇ ಇರುವುದು. ಯಾವುದೇ ಕೆಲಸ ಸಿಗದಿದ್ದಾಗ, ಸಿಕ್ಕಿದ್ದೇ ಉದ್ಯೋಗವಾಗಿ ಬಿಡುತ್ತದೆ. ತಾವು ಬಯಸಿದ್ದು ಸಿಗದೇ ಇದ್ದಾಗ ಆಗುವ ನಿರಾಸೆ ಸಹಜ, ಹಾಗಾಗಿ ತಾನು ಪಡೆದ ಡಿಗ್ರಿಯನ್ನು ದೂಷಿಸುವುದಾಗಲಿ, ತಮ್ಮ ಹಿಂಬಾಲಕರನ್ನು ವಿದ್ಯಾಭ್ಯಾಸದಿಂದ ವಿಮುಖರನ್ನಾಗಿಸುವುದಾಗಲಿ ಸರಿಯಲ್ಲ. ಎಷ್ಟೋ ಬಾರಿ ಈಗಿನ ಯುವಪೀಳಿಗೆ ಒಮ್ಮೆ ಸಿಕ್ಕಿದ ಉದ್ಯೋಗ ಅದು ಸರಿಯಿಲ್ಲವೆಂದು, ಇನ್ನೊಂದೆಡೆಗೆ ಸೇರಿಕೊಂಡು ಅಲ್ಲೂ ಸರಿಯಾಗಿ ಕೆಲಸ ಮಾಡದೆ ಮತ್ತಿನ್ನೆಲ್ಲೋ ಪರದಾಡುವ ಪರಿಸ್ಥಿತಿ ಬಂದಿದೆ. ಪೋಷಕರೂ ಮರುಗುವ ಕ್ಷಣಗಳೂ ಸಾಮಾನ್ಯ; ಕೆಲವೊಮ್ಮೆ ಶಿಕ್ಷಣ ಕೊಡಿಸಿದ್ದೇ ತಪ್ಪಾಯಿತೇನೋ ಎನ್ನುವಷ್ಟರಮಟ್ಟಿಗೆ ಭಾವನೆಗಳನ್ನು ತೋರ್ಪಡಿಸುತ್ತಾರೆ. ಸಮಾಜ ಬದಲಾವಣೆ ಕಾಣುತ್ತಿದೆ ಅದರೊಂದಿಗೆ ನಾವೂ ಬದಲಾಗಲೇ ಬೇಕು ಇಲ್ಲದಿದ್ದಲ್ಲಿ ನಾವೇ ಹಿಂದುಳಿದು ಬಿಡುತ್ತೇವೆ.

ಇನ್ನು ನೇರವಾಗಿ ವಿಷ್ಯಕ್ಕೆ ಬರೋಣ.. ನಮ್ಮ ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗ ಯಾಕೆ ಸಿಗುತ್ತಿಲ್ಲ..? ಲೆಕ್ಕವಿಲ್ಲದಷ್ಟು ಮಂದಿ ಸಂದರ್ಶನ ಮುಗಿಸಿ ಅಳುಮೋರೆ ಹಾಕಿಕೊಂಡು ಯಾಕೆ ನಿರಾಸೆಯಾಗುತ್ತಾರೆ? ನಾವೆಲ್ಲಿ ತಪ್ಪಿಹೋಗುತ್ತಿದ್ದೇವೆ..? ಈ ಎಲ್ಲಾ ಪ್ರಶ್ನೆಗಳಿಗೂ ನನ್ನ ಅನುಭವದ ಉತ್ತರ ಇಲ್ಲಿದೆ….

ಸಾಮಾನ್ಯವಾಗಿ ನಾವು ಮಾಡುವ ಮೊದಲನೆಯ ತಪ್ಪು “ವಿದ್ಯಾಭ್ಯಾಸದ ಆಯ್ಕೆ”. ಪೋಷಕರಾಗಲೀ, ವಿದ್ಯಾರ್ಥಿಯೇ ಆಗಲಿ ಬೇರೆಯವರ ಒತ್ತಾಯಕ್ಕೆ ಮಣಿದು ಅಥವಾ ಬೇರೆಯವರನ್ನು ಅನುಕರಿಸಿ ಯಾವುದೇ ಕೋರ್ಸ್ ಆಯ್ಕೆ ಮಾಡಿಕೊಳ್ಳಬಾರದು. ಹಾಗೊಂದು ವೇಳೆ ಆಯ್ಕೆ ಮಾಡಿಕೊಂಡಲ್ಲಿ ವಿದ್ಯಾರ್ಥಿ ಅವನ ಕೋರ್ಸ್ ಮುಗಿಸಿದ ಮೇಲೇನು ಮಾಡ್ಬೇಕೂಂತ ಗೊತ್ತಾಗದೇ ಚಡಪಡಿಸುತ್ತಾನೆ. ಹಾಗಾಗಿ ವಿದ್ಯಾರ್ಥಿಯ ಆಸಕ್ತಿಯ ಆಯ್ಕೆಯೇ ಮುಖ್ಯವಾದುದು. ಪೋಷಕರು ಪ್ರಮುಖವಾಗಿ ಗಮನಿಸಬೇಕಾದದ್ದು ಮಕ್ಕಳ ಆಸಕ್ತಿಯ ವಿಷಯಕ್ಕೆ ಮುಂದೆ ಭವಿಷ್ಯವಿದೆಯೇ ಇಲ್ಲವೇ ಎಂದು!

ಎರಡನೆಯ ತಪ್ಪು “ನಿರ್ಲಕ್ಷ”. ಎಸ್ಸ್.ಎಸ್ಸ್.ಎಲ್.ಸಿ. ಯ ಬಳಿಕ ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಂಡರೂ ಹದಿಹರೆಯದ ಕೆಲವು ಆಕರ್ಷಣೆಗಳು ವಿದ್ಯಾರ್ಥಿಯ ಗಮನ ಬೇರೆಡೆ ಹರಿಯುವಂತೆ ಮಾಡಬಹುದು. ಮೊಬೈಲ್, ಫ಼್ರೆಂಡ್ಸ್, ವಾಟ್ಸಪ್, ಫ಼ೇಸ್ಬುಕ್ಕು, ಮಿತಿಗಿಂತ ಅತಿಯಾದ ಬಳಕೆ ಅಥವಾ ಶಿಕ್ಷಣಕ್ಕೆ ಹೊರತಾಗಿ ಬಳಸುವುದೂ, ಕಡಿಮೆ ಅಂಕ ಗಳಿಸಿ ಕೀಳರಿಮೆಗೆ ಒಳಗಾಗುವುದೂ ಮಾಡಬಾರದು. ಪೋಷಕರು ತಮ್ಮ ಮಕ್ಕಳು ದೊಡ್ಡವರಾಗಿದ್ದಾರೆ ಇನ್ನು ನಮ್ಮ ಜವಾಬ್ದಾರಿ ಮುಗೀತು ಹೇಗಿದ್ರೂ ಅವರಷ್ಟಕ್ಕೇ ಓದಿಕೊಳ್ತಾರೆ ಎನ್ನುವ ನಿರ್ಲಕ್ಷ ಕೂಡ ಸಲ್ಲದು. ಖಂಡಿತವಾಗಿ ಬೆಳೆಯುವ ಮಕ್ಕಳನ್ನು ಸ್ನೇಹಿತರಾಗಿ ಕಾಣಿರಿ ಹಾಗೂ ಅವರ ಕನಸಿಗೆ ಧೈರ್ಯ ತುಂಬಿ ಭರವಸೆ ನೀಡಿ.

ಪಿ.ಯು.ಸಿ. ಯ ಆಯ್ಕೆ ತಾನು ಮುಂದೇನು ಓದಬೇಕು ಎನ್ನುವುದರ ಮೇಲೆ ಅವಲಂಬಿತವಾಗಿರಬೇಕು. ಕೆಲವೊಮ್ಮೆ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆಂದು ಅವರಿಗೇ ಸರಿಯಾದ ಅರಿವಿರುವುದಿಲ್ಲ. ಪಿ.ಯು. ಸೈನ್ಸ್ ತಗೊಂಡು ಕಷ್ಟದಲ್ಲೆ ‘ಜಸ್ಟ್ ಪಾಸ್’ ಅಂಕ ಗಳಿಸಿ ಆಮೇಲೆ ಪದೆವಿ ಶಿಕ್ಷಣಕ್ಕೆ ಬಿ.ಎಸ್ಸಿ. ಬೇಡ ಎಂದು ಬಿ.ಕಾಂ. ಆಯ್ಕೆ ಮಾಡಿ ಕೊನೆಗೆ ಅಕೌಟೆಂಟ್ ಕೆಲಸ ಬೇಡ ಅನ್ನುವ ವಿದ್ಯಾರ್ಥಿಗೆ ಏನು ಹೇಳ್ಬೇಕು? ಇಂತಹ ತಪ್ಪುಗಳನ್ನು ತಳಹದಿಯಲ್ಲೇ ತಿದ್ದಬೇಕು. ಮುಂದಾಲೋಚನೆ ಇದ್ದುಕೊಂಡೇ ಪದವಿಯನ್ನೂ ಆಯ್ದುಕೊಳ್ಳಬೇಕು.

ಉದ್ಯೋಗದ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುವುದೇ ಪದವಿಯ ಕೊನೆಯ ವರುಷದ ತರಗತಿಗಳಲ್ಲಿ. ಇಂದಿನ ಪದವಿ ಶಿಕ್ಷಣಕ್ಕೂ ಒಂದು ದಶಕದ ಹಿಂದಿನ ಪದವಿಗೂ ಅಜಗಜಾಂತರ ಅಂತರವಿದೆ. ಮೊದಲು ನಾವೇ ಹುಡುಕಿಕೊಂಡು ಹೋದರೂ ಕೆಲಸ ಸಿಗುತ್ತಿರಲಿಲ್ಲ. ಈವಾಗ “ಕ್ಯಾಂಪಸ್ ಇಂಟರ್ ವ್ಯೂ” ಅಂತ ತಮ್ಮ ಕಾಲ ಬುಡಕ್ಕೇ ಕಂಪೆನಿಗಳು ಬಂದರೂ ಆಯ್ಕೆಯಾಗದ ಪರಿಸ್ಥಿತಿ ಇದೆ. ಆದ್ರೆ ಯಾಕೆ ಹೀಗೆ? ಹೆಚ್ಚುತ್ತಿರುವ ಪದವೀಧರರೇ ನಿರುದ್ಯೋಗದ ಸಮಸ್ಯೆಗೆ ಕಾರಣವಾಗುತ್ತಿದ್ದಾರೆಯೇ? ಖಂಡಿತ ಇಲ್ಲಾ.. ಶಿಕ್ಷಣ ಇಂದಿಗೆ ಅತೀ ಅಗತ್ಯ. ಆದರೆ ಪದವಿ ನಂತರ ವಿದ್ಯಾರ್ಥಿಗಳು ಎಡವುದರಲ್ಲಿ ಅವರದ್ದೇ ತಪ್ಪಿದೆ. ಬೇರ್ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ.

ಪದವಿಯಲ್ಲಿನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು:

  1. ಉದ್ಯೋಗ ಸಂದರ್ಶನಕ್ಕಾಗಿ ಪೂರ್ವತಯಾರಿ ಇಲ್ಲದಿರುವುದು.
  2. ತನಗೇ ಎಲ್ಲಾ ತಿಳಿದಿದೆ, ಸಂದರ್ಶಕರಿಗೇ ಏನೂ ತಿಳಿದಿಲ್ಲ ಎನ್ನುವ ಅಹಂ ಭಾವ.
  3. ಸಂದರ್ಶನ ನೀಡಿ ಸಿಕ್ಕಿರುವ ಕೆಲಸಕ್ಕೂ ಹೋಗದಿರುವುದು ಮತ್ತು ಈ ಕೆಲಸ ತನ್ನ ಸ್ಥಾನಮಾನಕ್ಕೆ ಸರಿಬರುವುದಿಲ್ಲ ಎನ್ನುವ ವಿಚಿತ್ರ ಭಾವನೆ.
  4. ಅತಿಯಾದ ನೀರೀಕ್ಷೆ, ತಾವು ಮಾಡುವ ಖರ್ಚಿಗೂ ತಮಗೆ ಸಿಗುವ ಸಂಬಳಕ್ಕೂ ಅನಾವಶ್ಯಕ ಹೊಂದಾಣಿಕೆ ಮಾಡುವುದು.
  5. ಕಷ್ಟಪಡುವ ಯಾವುದೇ ಕೆಲಸ ಬೇಡ ಎನ್ನುವ ದೋರಣೆ.
  6. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರ್ಲಕ್ಷ್ಯ.

ಮೇಲಿನ ಎಲ್ಲಾ ವಿವರಣೆಯಲ್ಲಿ ಕೇವಲ ತಪ್ಪುಗಳನ್ನೇ ಹೇಳಿದ್ದೇನೆ. ಉದ್ಯೋಗದ ಬಗ್ಗೆ ಸರಿಯಾದ ಮಾಹಿತಿಯೇ ನೀಡಿಲ್ಲ ಎನ್ನಬೇಡಿ. ನಿಜವಾಗಿಯೂ ಉದ್ಯೋಗ ಬೇಕೆಂದಲ್ಲಿ ಮೊದಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ. ಯಾರಾದರೂ ತಪ್ಪು ದಾರಿ ಹಿಡಿಯುತ್ತಿದ್ದಲ್ಲಿ ಅವರನ್ನು ಸರಿ ಮಾಡಿಸುವಲ್ಲಿ ಒಂದು ಸಣ್ಣ ಪ್ರಯತ್ನ ಮಾಡೋಣ. ನಾನು ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಆಳ್ವಾಸ್ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳನ್ನು ತಿದ್ದುವಲ್ಲಿ ಒಂದು ಸಣ್ಣ ಹೆಜ್ಜೆ ಇಟ್ಟಿದ್ದೇನೆ. ಇತ್ತೀಚೆಗೆ ಪದವಿ ವಿದ್ಯ್ಯಾರ್ಥಿಗಳು ಸಂದರ್ಶನ ಎದುರಿಸುವಲ್ಲಿ ಗುಂಪು ಚರ್ಚೆ (Group Discussion) ಕೂಡ ಒಂದು ಭಾಗವಾಗಿದೆ. ಗುಂಪು ಚರ್ಚೆಯನ್ನು ಸುಲಭವಾಗಿ ಎದುರಿಸುವುದು ಹೇಗೆ ಎಂದು ನನ್ನ ವಿದ್ಯಾರ್ಥಿಗಳ ಮೂಲಕ ವಿಡಿಯೋ ಮುಖಾಂತರ ಹೇಳಿದ್ದೇನೆ.

https://youtu.be/HcHaSUFJw6c ಈ ಲಿಂಕ್ ಬಹುಶಃ ನಿಮಗೆ ತುಂಬಾನೆ ಸಹಾಯ ಮಾಡಬಹುದು. ನಿಮ್ಮ ಮುಂದಿನ ಸಂದರ್ಶನಕ್ಕೆ ಶುಭವಾಗಲಿ, ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಸರಿಯಾದ ಉದ್ಯೋಗ ನಮ್ಮ ಜೀವನವನ್ನು ಸುಗಮಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

, .
– ಅಶೋಕ್. ಕೆ. ಜಿ. ಮಿಜಾರ್.

 

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: