ಮನಸು ಪಂಜರದೊಳಿಲ್ಲ

Spread the love
Share Button

confusion

ಯುವಜನತೆಯಿರಬಹುದು, ಮಧ್ಯಮ ವಯಸ್ಕ ಅಥವಾ ಹಿರಿಯ ನಾಗರಿಕರಿರಬಹುದು, ಎಲ್ಲರಿಗೂ ನಾನಾ ಲೋಕ ವ್ಯವಹಾರಗಳಲ್ಲಿ ಯಾವುದು ಬೇಕು, ಯಾವುದು ಬೇಡ ಎಂಬ ಗೊಂದಲ ಒಂದಿಲ್ಲೊಂದು ದಿನ ಕಾಡದೆ ಇರುವುದಿಲ್ಲ. ಯಾಕೆಂದರೆ ಬದುಕು ಎಷ್ಟೋ ಸಲ ನಾವು ಅಂದುಕೊಂಡಂತೆ ಇರುವುದಿಲ್ಲ. ಕನಸುಗಳು ಒಂದು ರೀತಿಯಿದ್ದರೆ, ನನಸಾಗುವುದು ಬೇರೆಯೇ ಆಗಿರುತ್ತದೆ. ಆದರೂ ಬದುಕುವ ಕಲೆಯಲ್ಲಿ ಮಾಗಲೇಬೇಕು. ತೊಂದರೆ, ಚಿಂತೆಗಳ ಕಂತೆಗಳನ್ನು ನಿವಾರಿಸುತ್ತಾ ಈಸಬೇಕು ಮತ್ತು ಜೈಸಬೇಕು. ಆದರೆ ನಾನಾ ಬಗೆಯ ಗೊಂದಲಗಳನ್ನು ಎದುರಿಸುವುದು ಹೇಗೆ?

ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿ ಶಂಕರ್ ಗುರೂಜಿಯವರ ಬಳಿ ಒಬ್ಬರು,  “ನಾನು ನನ್ನ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೀಡಾಗುತ್ತೇನೆ. ನಾನೇನು ಮಾಡಬೇಕು?” ಇದಕ್ಕೆ ಶ್ರೀ ಶ್ರೀ ಹೀಗೆನ್ನುತ್ತಾರೆ- “ ಗೊಂದಲ ಅಥವಾ ಕನ್‌ಫ್ಯೂಷನ್ ಒಳ್ಳೆಯದು. ಎಲ್ಲ ಸಂದರ್ಭಗಳಲ್ಲೂ ಗೊಂದಲಕ್ಕೀಡಾಗುವುದಕ್ಕೆ ಆತಂಕ ಬೇಡ. ನೀವು ಪ್ರಗತಿ ಹೊಂದುತ್ತಿರುವುದರ ಸೂಚನೆಯದು. ಒಂದು ಕಲ್ಪನೆ ಇಲ್ಲವೇ ಐಡಿಯಾ ಮುರಿದು ಬಿದ್ದು, ಮತ್ತೊಂದು ಇನ್ನೂ ಅಂತಿಮವಾಗಿಲ್ಲ ಎನ್ನುವ ಸಂದರ್ಭವದು. ಅದೊಂದು ತಾತ್ಕಾಲಿಕ ಸ್ಥಿತಿಯಷ್ಟೇ. ಅದೂ ಮುರಿದಾಗ ಗೊಂದಲ ಮರುಕಳಿಸುತ್ತದೆ. ನಂತರ ಮತ್ತೊಂದಕ್ಕೆ ನೀವು ಮುಂದುವರಿಯುತ್ತೀರಿ. ಆದ್ದರಿಂದ ಇದು ಬೆಳವಣಿಗೆಯ ಲಕ್ಷಣ. ಮನಸ್ಸಿನಲ್ಲಿ ಗೊಂದಲ ಇದ್ದಾಗಲೇ ಯಾವುದಾದರೂ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ಯಾವುದೇ ಗೊಂದಲ ಇಲ್ಲದಿದ್ದಾಗ ಯಾವುದೇ ನಿರ್ಧಾರ ಇರುವುದಿಲ್ಲ. ಹೆಚ್ಚು ನಿರ್ಧಾರಗಳಿದ್ದಾಗ ಹೆಚ್ಚು ಗೊಂದಲ ಸಹಜ. ಆದರೆ ಇದರ ಫಲಶ್ರುತಿಯಾಗಿ ನೋವು ಮತ್ತು ಆನಂದದ ಸಾಗರದಲ್ಲಿ ಈಜಾಡುವಿರಿ. ಜೀವನದಲ್ಲಿ ಹೊಸ ಸಾಧನೆ, ಎತ್ತರಕ್ಕೇರುವಿರಿ. ನಿಮ್ಮ ಒಳ ಹೊರಗುಗಳಲ್ಲಿ ನಂಬಿಕೆ, ಶ್ರದ್ಧೆ, ವಿಶ್ವಾಸ, ಸಾಹಸ ಪ್ರವೃತ್ತಿ, ಪ್ರೀತಿ, ಆನಂದ ತುಂಬಿ ತುಳುಕುತ್ತದೆಎಷ್ಟು ಸೊಗಸಾದ ವಿವರಣೆ ಅಲ್ಲವೇ.

ಭಾರತದ ಮೇರು ಉದ್ಯಮಿ ರತನ್ ಟಾಟಾ ಯಾರಿಗೆ ಗೊತ್ತಿಲ್ಲ ? ಆದರೆ ಅವರೂ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ, ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಓದು ಆರಂಭಿಸಿದಾಗ ತೀವ್ರ ಗೊಂದಲ, ಅವಮಾನಗಳನ್ನು ಎದುರಿಸಿದ್ದರಂತೆ. ಆ ದಿನಗಳನ್ನು ಜೀವಮಾನದಲ್ಲಿ ಎಂದಿಗೂ ಮರೆಯಲಾರೆ ಎನ್ನುತ್ತಾರೆ ರತನ್ ಟಾಟಾ. ಆಗ ಹಾರ್ವರ್ಡ್ ಕ್ಯಾಂಪಸ್‌ನಲ್ಲಿದ್ದ ಪ್ರತಿಭಾನ್ವಿತ ಮತ್ತು ಪ್ರಭಾವಿ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳು, ಅವರ ಉನ್ನತ ಮಟ್ಟದ ಇಂಗ್ಲಿಷ್ ಜ್ಞಾನವನ್ನು ಕಂಡು ರತನ್ ಟಾಟಾಗೆ ತಮ್ಮ ಬಗ್ಗೆ ಕಸಿವಿಸಿ, ಕೀಳರಿಮೆ, ಅನಿಶ್ಚಿತತೆ ಉಂಟಾಗಿತ್ತಂತೆ. ಆದರೆ ನಂತರದ ದಿನಗಳಲ್ಲಿ ಮನಸ್ಸಿನ ಗೊಂದಲ ಕ್ರಮೇಣ ತಿಳಿಯಾಯಿತು. ಅಲ್ಲಿನ ವ್ಯಾಸಂಗ ನನ್ನಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿತು. ಭವಿಷ್ಯದ ಬಗ್ಗೆ ಸ್ಪಷ್ಟತೆಯನ್ನು ಮೂಡಿಸಿತು ಎನ್ನುತ್ತಾರೆ ಟಾಟಾ.

confidence

ಅಮೆರಿಕದಲ್ಲಿ 19 ನೇ ಶತಮಾನದ ಆದಿಯಲ್ಲಿ ಬಾಳಿ ಬದುಕಿದ ಡೇಲ್ ಕಾರ್ನೆಗಿ ಬಡ ರೈತ ಕುಟುಂಬದಲ್ಲಿ ಹುಟ್ಟಿದವರು. ಮಿಸ್ಸೋರಿಯಲ್ಲಿ ಬಾಲ್ಯವನ್ನು ಕಳೆದ ಕಾರ್ನೆಗಿ, ಪ್ರತಿ ದಿನ ಬೆಳಗ್ಗೆ 4 ಗಂಟೆಗೆಲ್ಲ ಎದ್ದು ದನಗಳ ಹಾಲು ಹಿಂಡಲು ಹೋಗುತ್ತಿದ್ದರಂತೆ. ಕಾಲೇಜು ವಿದ್ಯಾಭ್ಯಾಸದ ಬಳಿಕ ಕೆಲ ಕಾಲ ಸೇಲ್ಸ್ ಬಾಯ್ ಕೂಡ ಆಗಿದ್ದ ಕಾರ್ನೆಗಿ ನ್ಯೂಯಾರ್ಕ್‌ನಲ್ಲಿ ನಿರುದ್ಯೋಗಿಯಾಗಿಯೂ ದಿನ ದೂಡುತ್ತಾರೆ. 1914 ರ ವೇಳೆಗೆ ಅವರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ವಾಗ್ಮಿಯಾಗಿ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿದರು. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ದೊಡ್ಡ ತಜ್ಞರಾಗಿ ಬೆಳೆದರು. 1936 ೬ರಲ್ಲಿ ಕಾರ್ನೆಗಿ ಬರೆದ ` ಸ್ನೇಹಿತರನ್ನು ಗಳಿಸುವುದು ಹೇಗೆ ಮತ್ತು ಜನರನ್ನು ಪ್ರಭಾವಿತಗೊಳಿಸುವುದು ಹೇಗೆ? ಎಂಬ ಶೀರ್ಷಿಕೆಯ ಪುಸ್ತಕ ಭಾರಿ ಜನಪ್ರಿಯವಾಗಿದೆ. ವಿಶ್ವಾದ್ಯಂತ ಇದರ ೩ ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿದೆ.

ಡೇಲ್ ಕಾರ್ನೆಗಿಯವರು ವ್ಯಕ್ತಿತ್ವ ವಿಕಸನ ಕುರಿತ ತಮ್ಮ ಕೃತಿಯೊಂದರಲ್ಲಿ  “ಯೌವನದಲ್ಲಿದ್ದಾಗ ಬಡತನ, ನಿರಾಶೆ, ಅತಂತ್ರ ಭವಿಷ್ಯವನ್ನು ನೆನೆದು ಕಂಗಾಲಾಗಿದ್ದೆ. ನಿರುದ್ಯೋಗದ ಭೂತ ಕಾಡುತ್ತಿತ್ತು. ನ್ಯೂಯಾರ್ಕ್‌ನಲ್ಲಿ ಯಾವ ಕೆಲಸವೂ ಸಿಗದೆ ತಲ್ಲಣದಿಂದ ನರಳಿದ್ದೆ. ಜಿರಳೆಗಳಿಂದ ತುಂಬಿದ್ದ ಹಳೆಯ ಸಣ್ಣ ಕೊಳಕು ಕೊಠಡಿಯಲ್ಲಿ ದಿನ ದೂಡುತ್ತಿದ್ದೆ. ಚಿಂತೆ, ಹತಾಶೆ, ಸಿಟ್ಟು, ಅಸಹನೆ, ಅಪಮಾನದಿಂದ ಕುಗ್ಗಿ ಹೋಗಿದ್ದೆ. ಇದೇನಾ ಬದುಕು? ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಕಾಲೇಜು ದಿನಗಳಲ್ಲಿ ಕರಗತವಾಗಿದ್ದ ಓದಿನ ಹವ್ಯಾಸ ಮಾತ್ರ ಬಿಟ್ಟಿರಲಿಲ್ಲ. ಅದುವೇ ಪುಸ್ತಕ ಬರೆಯಲೂ ಪ್ರೇರೇಪಣೆಯಾಯಿತು. ಬದುಕಿನಲ್ಲಿ ದುಡ್ಡು ಮಾಡಬೇಕೆಂಬ ಮಹದಾಸೆ ಇರಲಿಲ್ಲ. ಆದರೆ ಬದುಕು ಸೃಜನಶೀಲವಾಗಿರಬೇಕು, ಅರ್ಥಪೂರ್ಣವಾಗಿರಬೇಕು ಎಂದು ಬಯಸುತ್ತಿದ್ದೆ . ಕೊನೆಗೊಂದು ದಿನ ಉಪಾಯವೊಂದು ಹೊಳೆಯಿತು. ವಯಸ್ಕರ ರಾತ್ರಿಯ ಶಾಲೆಗಳಲ್ಲಿ ಬೋಧಕ ವೃತ್ತಿಯನ್ನು ಆಯ್ಕೆ ಮಾಡಬೇಕು. ಇದರಿಂದ ಹಗಲು ಸಾಕಷ್ಟು ಸಮಯ ಸಿಗುತ್ತದೆ. ಆಗ ಸಮೃದ್ಧವಾಗಿ ಓದಬೇಕು. ಉಪನ್ಯಾಸಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಕಾದಂಬರಿ, ಸಣ್ಣ ಕತೆಗಳನ್ನು ಬರೆಯಬೇಕು ಎಂದು ನಿರ್ಧರಿಸಿದೆ. ಬರೆಯುವುದಕ್ಕೋಸ್ಕರ ಜೀವಿಸಬೇಕು ಮತ್ತು ಜೀವನಕ್ಕಾಗಿ ಬರೆಯಬೇಕು ಎಂದು ತೀರ್ಮಾನಿಸಿದೆ” ಎನ್ನುತ್ತಾರೆ.

confusion-2

ಈ ಹಾದಿಯಲ್ಲಿ ಒಂದೊಂದೇ ಮೆಟ್ಟಿಲನ್ನೇರಿದ ಡೇಲ್ ಕಾರ್ನೆಗಿ ಜಗತ್ಪಸಿದ್ಧ ಕೃತಿಗಳನ್ನು ಬರೆದರು.  ” ಸ್ವತಃ ನನ್ನನ್ನು ತೀವ್ರವಾಗಿ ಕಾಡುತ್ತಿದ್ದ ಚಿಂತೆಗಳು ಸಮಾಜದಲ್ಲಿ ಅನೇಕ ಮಂದಿಗೂ ಕಾಡುತ್ತಿರುವುದನ್ನು ಕಂಡೆ. ಹೀಗಾಗಿ ಚಿಂತೆಯನ್ನು ದೂರ ಮಾಡುವುದು ಹೇಗೆ ಎನ್ನುವುದೇ ನನ್ನ ಸಂಶೋಧನೆಯ ವಸ್ತುವಾಯಿತು. ಹೇಗೆ? ಮೊದಲಿಗೆ ಚಿಂತೆಯ ಬಗ್ಗೆ ವಿಶ್ವದ ಪ್ರಮುಖ ತತ್ತ್ವ ಶಾಸ್ತ್ರಜ್ಞರು ಏನು ಹೇಳಿದ್ದಾರೆ ಎಂಬುದನ್ನು ಓದಿದೆ. ಕನ್‌ಫ್ಯೂಷಿಯಸ್‌ನಿಂದ ಚರ್ಚಿಲ್ ತನಕ ನೂರಾರು ಮಂದಿಯ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿದೆ. ಹೆನ್ರಿ ಫೋರ್ಡ್, ಎಲೆನಾರ್ ರೂಸ್‌ವೆಲ್ಟ್ ಸಹಿತ ಅನೇಕ ಘಟಾನುಘಟಿಗಳನ್ನು ಸಂದರ್ಶಿಸಿದೆ. ನಂತರ `ಹೌ ಟು ಸ್ಟಾಪ್ ವರೀಂಗ್ ಆಂಡ್ ಸ್ಟಾರ್ಟ್ ಲಿವಿಂಗ್’ ಬರೆದೆ” ಎನ್ನುತ್ತಾರೆ ಕಾರ್ನೆಗಿ. ನೀವು ಮಾಡುವ ಕೆಲಸದಲ್ಲಿ ನಂಬಿಕೆ ಇದ್ದರೆ, ಅದನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ. ಜಗತ್ತಿನಲ್ಲಿ ನಡೆದಿರುವ ಅದ್ಭುತ ಕೆಲಸಗಳೆಲ್ಲ ಮೊದಲು ಅಸಾಧ್ಯವೆಂದೇ ಭಾಸವಾಗಿವೆ. ನೀವು ಯಾವುದನ್ನು ಯೋಚಿಸುತ್ತೀರೋ, ಅದು ಕೆಲಸವಾಗಬೇಕು ಅಷ್ಟೇ-ಎನ್ನುತ್ತಾರೆ ಅವರು. ಜಾಗತೀಕರಣದ ಪರಿಣಾಮ ಇಡೀ ಜಗತ್ತು ಒಂದು ಹಳ್ಳಿಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಅಮೆರಿಕದ ಖ್ಯಾತ ಚಿಂತಕ, ಲೇಖಕ ಕಾರ್ನೆಗಿಯವರ ಮಾತು ಅಕ್ಷರಶಃ ನಿಜವಾಗಿದೆ.

ಮನಸ್ಸು ಗೊಂದಲದಲ್ಲಿ ಇದ್ದಾಗ ಪರಿಹರಿಸಲು ಪ್ರೇರೇಪಿಸುತ್ತದೆ. ಅದುವೇ ಅರಿವಿನ ಅನ್ವೇಷಣೆಗೆ ಕಾರಣ ವಾಗುತ್ತದೆ. ಇಲ್ಲದಿದ್ದರೆ ಚಿಂತೆಯಾಗಿ ಉಳಿದುಕೊಳ್ಳುತ್ತದೆ.ಕಳೆದು ಹೋಗಿರುವ ನಿನ್ನೆ ಏನಾಯಿತು ಅಥವಾ ನಾಳೆ ಏನಾಗಬಹುದೆಂದು ಎಂಬ ಚಿಂತೆ ಬೇಡ ಎಂದಲ್ಲ. ಆದರೆ ಅದನ್ನು ಎರಡೂ ಕಡೆಗಳಿಂದ ಕಾಲ್ಪನಿಕವಾಗಿ ಕತ್ತರಿಸಿದರೆ ಕೊನೆಗೆ ಇಂದು ಮತ್ತು ಈ ಕ್ಷಣ ಮಾಡಬೇಕಾದ್ದೇನು ಎನ್ನುವ ಯೋಚನೆ ಉಳಿಯುತ್ತದೆ. ನಿನ್ನೆ ಮತ್ತು ನಾಳೆಗಳ ಚಿಂತೆಯ ಭಾರ ಸಾಧ್ಯವಾದಷ್ಟು ಹಗುರವಾಗುತ್ತದೆ.

 

.
 – ಕೇಶವಪ್ರಸಾದ. ಬಿ. ಕಿದೂರು
(ವಿಜಯ ಕರನಾಟಕದಲ್ಲಿ ಪ್ರತಕಟಿತ ಬರಹ)

 

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: