ಕನಸಿನೂರಿನ ಹಾದಿ: ಕವನ ಸಂಕಲನ

Share Button

Kanasinurian payana-cover

ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜು ನಮ್ಮ ನೆಚ್ಚಿನ ತಾಣ. ಮೌಲ್ಯಮಾಪನ, ಸಾಹಿತ್ಯ ಸಮಾರಂಭಗಳು, ಯುವಜನೋತ್ಸವಗಳು ಹೀಗೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈದ  ಈ ಕಾಲೇಜು ನಾಡಿಗೆ ಅನೇಕ ಧೀಮಂತ ಸಾಹಿತಿಗಳನ್ನು, ಕಲಾವಿದರನ್ನು, ರಾಜಕರಣಿಗಳನ್ನು ಕೊಟ್ಟಿದೆ. ಇದೇ ಹಾದಿಯಲ್ಲಿರುವ ಎಳೆ ಚಿಗುರು ಮೊಹಮ್ಮದ್ ಶರೀಫ಼್. ಸಾಹಿತ್ಯದಿಂದ ಯುವ ಜನತೆ ದೂರವಾಗುತ್ತಿದೆಯೇನೋ ಎಂಬ ವಾಸ್ತವ ಆತಂಕದೊಂದಿಗೆಯೇ ಈ ರೀತಿಯ ಪುಟ್ಟ ಪ್ರತಿಭೆಗಳು ತಮ್ಮ ಪ್ರಯತ್ನದ ಪ್ರಾಮಾಣಿಕತೆಯಿಂದಲೇ , ಒಂದು ರೀತಿಯ ನಿಷ್ಕಳಂಕ ಮುಗ್ಧತೆಯಿಂದಲೇ ಗಮನ ಸೆಳೆಯುತ್ತವೆ.

ಒ.ಎಲ್. ನಾಗಭೂಷಣ ಸ್ವಾಮಿಯವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ಕವಿಗಳು ಓದುಗರ ಮನಸ್ಸಿನಲ್ಲಿ ಉಳಿಯುವುದಾದರೆ ಅದು ಎರಡು ಕಾರಣಕ್ಕಾಗಿ: ನಮ್ಮ ಸುತ್ತಲ ಬದುಕನ್ನು ನೋಡುವುದಕ್ಕೆ, ಅರಿಯುವುದಕ್ಕೆ, ಅನುಭವಿಸುವುದಕ್ಕೆ ನೋಟದ ಹೊಸ ಕೋನವೊಂದನ್ನು ಒದಗಿಸುತ್ತಾರೆ ಅನ್ನುವುದು ಒಂದು ಕಾರಣ; ಹಾಗೆ ಕಂಡದ್ದನ್ನು ಹೇಳುವುದಕ್ಕೆ ತಕ್ಕ ನುಡಿಗಳನ್ನು ನಮಗೆ ಒದಗಿಸಿ ಕೊಡುತ್ತಾರೆ ಅನ್ನುವುದು ಇನ್ನೊಂದು ಕಾರಣ. ಒಟ್ಟು ೫೮ ಕವಿತೆಗಳಿರುವ ಈ ಕವನ ಸಂಕಲನದಲ್ಲಿ ಹದಿ ಹರಯದ ಯುವ ಮನಸುಗಳಿಗೆ ಸಹಜವಾದ ಪ್ರೀತಿ, ಪ್ರೇಮ, ವಿರಹಗಳಲ್ಲದೆ ಪ್ರಚಲಿತ ರಾಜಕೀಯ, ಧರ್ಮ, ವಿದ್ಯೆ ಮುಂತಾದ ವಿಷಯಗಳನ್ನೂ ಗಮನಿಸಿರುವುದು ಅರಿವಾಗುತ್ತದೆ. ರೈತನ ಬವಣೆಯನ್ನು ಆರ್ತವಾಗಿ ಗಮಸಿದ ‘ಅನ್ನದಾತ’ ಕವಿತೆಯ

ಉರಿವ ಬಿಸಿಲಿಗೆ ಸುರಿವ ಬೆವರನ್ನು
ನೆಲಕೆ ಹನಿಸಿ ಹಸಿರ ಹರಡುವಾತ’

ಸಾಲುಗಳು, ಭಯೋತ್ಪಾದನೆಯ ಬಗ್ಗೆ ಬರೆದ ‘ಗಾಝಾದಲ್ಲಿ ನನ್ನ ಮನ’, ಭ್ರಾತೃತ್ವದ ಅನನ್ಯತೆಯನ್ನು ಪ್ರತಿಪಾದಿಸುವ ‘ಐಕ್ಯತೆ’, ಆಧುನಿಕ ಜಗತ್ತಿನ ಸ್ವಾರ್ಥ, ವಂಚನೆ, ಹಿಂಸೆಗಳನ್ನು ಕಂಡು ಮರುಗುವ ‘ಇದೆಂತಹ ಕಾಲ?’ ಕವಿತೆಗಳು ಶರೀಫ಼ನ ಸಾಮಾಜಿಕ ಕಳಳಿಯನ್ನು, ನೋವಿಗೆ ಮಿಡಿವ ಅಂತ;ಕರಣವನ್ನು ಪ್ರತಿಫಲಿಸುತ್ತವೆ.

ಕೆಲವು ಕವಿತೆಗಳಲ್ಲಿ ಶರೀಫ಼ರು ಜನಪ್ರಿಯ ಗೀತೆಗಳ ಸೊಲ್ಲನ್ನು , ಲಯವನ್ನು ಅನುಕರಿಸುತ್ತಿರುವಂತೆ ಭಾಸವಾಯಿತು. ಈ ಎಳೆಯ ವಯಸ್ಸಿನಲ್ಲಿಯೇ ‘ಸಾವು’, ಬದುಕಿನ ಮೌಲ್ಯ, ಜೀವನದ ಖಾಲಿತನ ಇವನ್ನೆಲ್ಲ ಚಿಂತಿಸಿ, , ಮಥಿಸಿ ಬರೆದ ‘ವಿಧಿ ಲಿಖಿತ’. ಈ ಕವಿತೆಯ ಪ್ರಬುದ್ಧತೆ, ಧನಾತ್ಮಕ ದೃಷ್ಟಿಕೋನ ಇಷ್ಟವಾಯಿತು. ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ತಮ್ಮ ಮೇಲಿನ ತಣ್ಣನೆಯ ಕ್ರೌರ್ಯವನ್ನು ತಾಳಲಾರದೆ ಕುಗ್ಗುವ ಅಕ್ಕ ತಂಗಿಯರ ಮೇಲಿನ ಅನುಕಂಪ, ಕಳ ಕಳಿ ‘ವರ್ತಮಾನ’, ಬೋನ್ಸಾಯ್ ಮತ್ತು ಹೆಣ್ಣು’ ಕವಿತೆಗಳಲ್ಲಿ ಗೋಚರಿಸುತ್ತವೆ.

ಇನ್ನು
‘ಯಾಕಿರಬಹುದು?
ಈ ಭೂಮಿ-ಬದುಕು
ಈ ಹುಟ್ಟು-ಸಾವು, ನಲಿವು ನೋವು
ಯಾಕಿರಬಹುದು
ಸಕಲ ಚರಾಚರಗಳ ಸೃಷ್ಟಿ ? ಹೀಗೆ ವಿಶ್ವದ ವಿಸ್ಮಯಗಳ ಬಗ್ಗೆ ಕವಿ ತನಗೆ ತಾನೇ ಹಾಕಿಕೊಂಡ ಪ್ರಶ್ನೆಗಳು, ಸಾಂತ್ವನಗಳು ‘ಪ್ರಶ್ನೆ’, ಶೂನ್ಯ’, ‘ಧರ್ಮ ಮತ್ತು ಬದುಕು’, ‘ನಾನು ಯಾರು’? ‘ಜಯದ ಕನಸು’ ಈ ಕವನಗಳಲ್ಲಿವೆ.

ತನ್ನ ಅನುಭವದ ಪ್ರಾಮಾಣಿಕತೆಯಿಂದ ಮನ ಸೆಳೆವ ಇನ್ನೊಂದು ಕವನ ‘ಅವಳಿರದ ಕೊಡೆಯೊಳಗೆ’. ಪ್ರೀತಿ, ಪ್ರೇಮ, ವಿರಹ, ಅಸಹಾಯಕತೆಗಳನ್ನೆಲ್ಲ ಅತ್ಯಂತ ಸಾಂದ್ರವಾಗಿ ಮೆಲು ನುಡಿಯಲ್ಲಿ, ಒಂದು ಬಗೆಯ ವಿಷಣ್ಣ ಮೌನದಲ್ಲಿ ತನಗೆ ತಾನೆ ಹಾಡಿಕೊಂಡ ಕವಿತೆ ಇದು.

ಇಳಿ ಸಂಜೆ ಹೊತ್ತಿನಲ್ಲಿ
ತಿಳಿ ಬಾನ ಗಲ್ಲದ ಮೇಲೆ
ಆ ಸೂರ್ಯ ಮುತ್ತಿಟ್ಟಾಗ
ಮೂಡಿತ್ತು ಕಾಮನಬಿಲ್ಲು  ಪ್ರಣಯದ ಕಲ್ಪನೆ ತೆರೆದಿಟ್ಟರೆ ,

ಕೊಡೆ ಹಿಡಿಯಲು ಕೈಗಳೆ ಬರುತ್ತಿಲ್ಲ
ಮೇಲೊಂದು ಕೈಯಿಡಲು ಜೊತೆಗಿಂದು ಅವಳಿಲ್ಲ’

ಸಾಲು ತನ್ನ ಭಾವದ ಸೆಳಕಿನಿಂದ, ಕಳೆದುಕೊಂಡ ಮನದ ಏಕಾಕಿತನದ ಮೌನದಿಂದ ನಮ್ಮ ಮನದಾಳಕ್ಕಿಳಿಯುತ್ತದೆ.

Kanasinurina payana

ಇವಲ್ಲದೆ ‘ತಾಯಿ’, ‘ಪೇಶಾವರದ ಕಂದಮ್ಮಗಳಿಗೆ’, ‘ಜೀವದ ಬೆಲೆ’, ಜಗದಳೊಂದೆ ಭಾರತ’, ಬಾಳ ಬುತ್ತಿ’ ಹೀಗೆ ಬೇರೆ ಬೇರೆ ಲಹರಿಗಳಲ್ಲಿ ಬರೆದ ಕವಿತೆಗಳಿವೆ. ಸಂಕಲನದ ಕೊನೆಯ ಕವಿತೆ ‘ಕನಸಿನೂರಿನ ಹಾದಿ’ ಕವಿಗೆ ತನ್ನ ಗುರಿ ತಲುಪುವ ವಿಶ್ವಾಸವನ್ನು, ಒಂದು ರೀತಿಯ ಆದರ್ಶ ಜಗತ್ತನ್ನು ಸೃಜಿಸಬಹುದಾದ ಸಾಧ್ಯತೆಯನ್ನು , ಯೌವನಕ್ಕೆ ಸಹಜವಾದ ಹುಮ್ಮಸ್ಸನ್ನು ಪ್ರತಿಬಿಂಬಿಸುತ್ತದೆ.

ಶರೀಫ಼ರ ಅನೇಕ ಕವಿತೆಗಳಲ್ಲಿ ಗೇಯತೆ, ಲಯ ಇದೆ. ಕೆಲವು ಕವಿತೆಗಳಲ್ಲಿ ದಾರ್ಶನಿಕನ ಒಳ ನೋಟಗಳಿವೆ, ನಿಟ್ಟುಸಿರುಗಳಿವೆ. ಕಾವ್ಯದ ಹೆಚ್ಚಿನ ಓದು, ವೈಚಾರಿಕ ಸ್ಪಷ್ಟತೆ, ತನಗನಿಸಿದ್ದನ್ನು ವಾಚ್ಯವಾಗಿಸದೆ ಕಲೆಯಾಗಿಸುವ ಶಕ್ತಿಯನ್ನು ತಂದುಕೊಡಬಹುದು. ಇನ್ನೂ ಎಳೆ ಹರಯದಲ್ಲಿರುವ ಶರೀಫ಼ರಿಗೆ ಸಾಧ್ಯತೆಗಳು ತೆರೆದುಕೊಂಡು ಅವರ ಅರಿವಿನ ಹಾದಿ ನಿಚ್ಚಳವಾಗಲಿ, ತಮ್ಮ ಅನುಭವ ಸಮೃದ್ಧವಾದಂತೆ ಸಮತೂಕದ ದೃಷ್ಟಿಯಿಂದ ಇನ್ನಷ್ಟು ಕಾವ್ಯ ರಚಿಸಲಿ ಎಂದು ಹಾರೈಕೆ.

.
 – ಜಯಶೀ ಬಿ ಕದ್ರಿ 

 

5 Responses

  1. H Pattabhirama Somayaji says:

    ಕನಸುವವರಿಗೆ ಕಾದಿರುವುದು ನನಸೇ—ಪಟ್ಟಾಭಿರಾಮ ಸೋಮಯಾಜಿ

  2. Mahammad Shareef says:

    Thank you very much to Surahonne editor, Hemamala mam. And also thanks to Jayashree B Kadri mam for your review.

  3. Hema says:

    ಎಳೆಯ ವಯಸ್ಸಿನಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಮೊಹಮ್ಮದ್ ಶರೀಫ್ ಅವರಿಗೆ ಅಭಿನಂದನೆಗಳು. ನಿಮ್ಮ ಕನಸು-ಮನಸು-ಲೇಖನಿಯಿಂದ ಇನ್ನಷ್ಟು ಕವನ/ಬರಹಗಳು ಮೂಡಿ ಬರಲಿ..

  4. Anantha Indaje says:

    ಪುಸ್ತಕ ಓದಬೇಕೆನಿಸುವ ವಿಮರ್ಶಗೆ ಶರಣು….!!

Leave a Reply to Mahammad Shareef Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: