ಲಹರಿ

 ನಾವೆಷ್ಟು ಸಹೃದಯರು?

Share Button

ಎಷ್ಟೋ ಬಾರಿ ಅಂದುಕೊಂಡಿದ್ದೇನೆ, ಈ ಪ್ರಪಂಚದಲ್ಲಿ ಇರುವ ಸಹಸ್ರಾರು ಜೀವಕೋಟಿಗಳಲ್ಲಿ ‘ಸಹೃದಯತೆ’ ಎಂಬ ಮಾನವೀಯ ಗುಣ ಉಳಿದುಕೊಂಡಿದೆಯೇ? ಯಾಕೆ ನಾವು ಬೇರೆಯವರ ಭಾವನೆಗಳಿಗೆ ಸ್ಪಂದಿಸದೆ, ಸುತ್ತಲಿನ ಜನರ ಬವಣೆಗಳಿಗೆ ಕುರುಡಾಗಿ ಸಂವೇದನಾರಹಿತರಾಗಿರುವುದು? ಹೌದು! ಮಾನಸಿಕ ತಲ್ಲಣಗಳು, ಕೌಟುಂಬಿಕ ಸಂಘರ್ಷ, ಭಾವಾನಾತ್ಮಕ ಗೊಂದಲಗಳು, ಸಾಮಾಜಿಕ ನಿರ್ಬಂಧಗಳು, ವೃತ್ತಿ ಬದುಕಿನ ಒತ್ತಡಗಳು, ಮುಂತಾದ ಅನೇಕ ಸಮಸ್ಯೆಗಳಿಂದ ನಾವು ಬಳಲುತ್ತಿರುವಾಗ ಇನ್ನೊಬ್ಬರ ಬಗ್ಗೆ ಅಮೂಲ್ಯವಾದ ಸಮಯ ವ್ಯಯಿಸಲು ತಾಳ್ಮೆ ಎಲ್ಲಿದೆ? ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರೂ ತಮ್ಮ ತಮ್ಮ ಪ್ರಪಂಚದಲ್ಲಿ ಮುಳುಗಿರುವಾಗ ಪರರ ವಿಚಾರಕ್ಕೆ ತಲೆಕೆಡಿಸುವ ವ್ಯವಧಾನವೆಲ್ಲಿದೆ? ಇನ್ನು ಆಧುನಿಕ ಜಗತ್ತಿನ ಕೊಡುಗೆಯಾದ ಪ್ಲಾಟ್ ಸಂಸ್ಕೃತಿಯಲ್ಲಿ, ಈ ಸಹೃದಯತೆ, ಸಹಾನುಭೂತಿಯ ಪದವನ್ನೇ ನಾವು ಮರೆತಂತಿದೆ. ಪಕ್ಕದ ಮನೆಯವರ ಪರಿಚಯವೇ ಇಲ್ಲದ, ಅವರ ಮುಖವನ್ನೇ ಕಾಣದ ಅದೆಷ್ಟೋ ಜನರನ್ನು ನಾವು ಗಮನಿಸಬಹುದು. ತಮ್ಮ ನೆರೆಹೊರೆಯವರ ಬಗ್ಗೆ ಉದಾಸೀನ ಎನ್ನುವುದಕ್ಕಿಂತಲೂ, ಯಾರ ಬಗ್ಗೆಯೂ ಅನಗತ್ಯ ಹಸ್ತಕ್ಷೇಪ ಮಾಡದೆ, ಪರರ ವಿಚಾರ ತನಗ್ಯಾಕೆ? ಎಂಬ ಧೋರಣೆಯೂ ಇರಬಹುದು. ಮಾತನಾಡಿಸಲು ಸಮಯ ಇಲ್ಲದಿರುವುದೂ ಕಾರಣವಾಗಿರಬಹುದು. ಅಂತೂ ಜನರ ನಡುವೆ ಅಂತರವನ್ನು ಕಾಣುತ್ತೇವೆ. ಮೌನಕ್ಕೆ ಶರಣಾಗುವ ಜನಸಮುದಾಯದಿಂದ ಏನನ್ನು ಅಪೇಕ್ಷಿಸಲು ಸಾಧ್ಯ? ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುವಂತಹ ವಿಶಾಲ ಹೃದಯವಂತಿಕೆ ಇಂದು ಕಣ್ಮರೆಯಾಗುತ್ತಿದೆ.

ಸಹೃದಯತೆಯ ಬಗ್ಗೆ ನನಗಾದ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ. ಎರಡು ತಿಂಗಳುಗಳ ಹಿಂದೆ ನಾನು ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿದಾಗ ನೆಂಟರೊಬ್ಬರ ಮನೆಯಲ್ಲಿ ಮೂರು ವಾರಗಳ ಕಾಲ ತಂಗಿದ್ದೆ. ಆ ನಗರದ ಭವ್ಯತೆ, ಗಗನ ಚುಂಬಿ ಕಟ್ಟಡಗಳು, ಐಷಾರಾಮಿ ಬಂಗಲೆಗಳು, ಮುಖ್ಯವಾಗಿ ಅಲ್ಲಿಯ ಜನರ ಶಿಸ್ತಿನ ಜೀವನ, ಸ್ವಚ್ಛತೆ, ಹಾಗೂ ಹೃದಯವಂತಿಕೆಗೆ ಮರುಳಾಗಿದ್ದೆ. ಅಪರಿಚಿತರಿಗೂ ವಿಶ್ ಮಾಡುವ ಪರಿ, ಹಲೋ, ಹೇಗಿದ್ದಿರಿ? ಎಂದು ಮಾತಾನಾಡಿಸುವ ಸೌಜನ್ಯಕ್ಕೆ ಮಾರು ಹೋಗಿದ್ದೆ. ಅಮೇರಿಕನ್‌ರ ಸಹೃದಯಕ್ಕೆ ಸಾಕ್ಷಿ ಎಂಬಂತೆ ಒಂದು ಪ್ರಸಂಗ ಸಂಭವಿಸಿತು. ನ್ಯೂಯಾರ್ಕ್ ನಲ್ಲಿರುವ ‘ಮೇಸಿಸ್’ ಎನ್ನುವ ಬೃಹತ್ ಶಾಪಿಂಗ್ ಮಾಲ್‌ಗೆ ಹೋಗಿದ್ದೆವು. ಸ್ಟೋರ್‌ವೊಂದರಲ್ಲಿ ವಸ್ತುಗಳನ್ನು ಖರೀದಿಸಿ, ಬಳಿಕ ಬಿಲ್ಲಿಂಗ್ ಕೌಂಟರ್ ಬಳಿ ಹೋದಾಗ, ಅಲ್ಲಿನ ಸಿಬ್ಬಂದಿ ನಮ್ಮಲ್ಲಿ ಸದಸ್ಯತ್ವ ಕಾರ್ಡ್ ಇಲ್ಲದಿರುವ ಕಾರಣ ವಸ್ತುಗಳನ್ನು ಕೊಡಲು ನಿರಾಕರಿಸಿದರು. ನನಗೆ ಸದಸ್ಯತ್ವಕ್ಕೆ ನೋಂದಾವಣೆ ಮಾಡಲು ಮನಸ್ಸಿರಲಿಲ್ಲ. ಅಲ್ಲದೆ ನನ್ನ ಇಷ್ಟದ ಕೆಲವೊಂದು ಬಟ್ಟೆ ಬರೆಗಳು, ಇಲೆಕ್ಟ್ರಾನಿಕ್ ಉಪಕರಣಗಳಿದ್ದವು. ನಿರಾಶೆಯಿಂದ ವಸ್ತುಗಳನ್ನು ಮರಳಿಸಲು ಹೋದಾಗ, ಒರ್ವ ಅಮೇರಿಕನ್ ಮಹಿಳೆ ತನ್ನ ಸದಸ್ಯತ್ವದ ಕಾರ್ಡಾನ್ನು  ನೀಡಿ, ಬಿಲ್ಲಿಂಗ್ ಮಾಡಲು ಹೇಳಿದರು. ಈ ಘಟನೆ ನನ್ನಲ್ಲಿ ತುಂಬಾ ಪರಿಣಾಮ ಬೀರಿತು. ಆ ಮಹಿಳೆಯ ಹೃದಯವಂತಿಕೆಗೆ ನಾನು ಮೂಖಳಾಗಿದ್ದೆ. ಗುರುತು, ಪರಿಚಯವಿಲ್ಲದ ಊರಿನಲ್ಲಿ ನಮ್ಮ ಸಹಾಯಕ್ಕೆ ಬರುವ ವಿದೇಶಿಯರ ಗುಣ ನಿಜಕ್ಕೂ ಅನುಕರಣೀಯ. ಈ ಅನುಭವ ನನ್ನನ್ನು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಲು ಸಹಕಾರಿಯಯಿತು.

ವ್ಯಕ್ತಿಯು ಸಹೃದಯಿ ಅಥವಾ ಹೃದಯ ವೈಶಾಲ್ಯತೆ ಹೊಂದಿರಲು ಇತರರ ನೋವು, ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವದ ಅವಶ್ಯಕತೆಯಿದೆ. ಪರರ ಬಗ್ಗೆ ಕಾಳಜಿ ವಹಿಸುವುದು, ಪರಸ್ಪರ ಸಹಾಯ ಮಾಡುವುದು, ಇತ್ಯಾದಿ ಮಾನವೀಯ ಗುಣಗಳನ್ನು ಮೈಗೂಡಿಸಬೇಕಾಗಿದೆ. ದಯೆ ಅಥವಾ ಸಹಾನುಭೂತಿಯ ಕೊರತೆ ನಮ್ಮೆಲ್ಲರಲ್ಲಿ ಕಂಡು ಬರಲು ಪ್ರಮುಖ ಕಾರಣವೆಂದರೆ ನಮ್ಮಲ್ಲಿ ಕ್ಷಮಾಗುಣ ಇಲ್ಲದಿರುವುದು. ಅನೇಕ ಸಂದರ್ಭಗಳಲ್ಲಿ ನಾವು ನಿಷ್ಟುರವಾಗಿರಲು ನಮ್ಮ ಜೀವನದಲ್ಲಿ ಆಗಿರುವ ಕಹಿ ಘಟನೆಗಳು ಕಾರಣವಾಗಬಹುದು. ಬಾಲ್ಯದಲ್ಲಿ ಅನುಭವಿಸಿದ ನೋವು, ಗೆಳೆಯರೊಡನೆ ಮನಸ್ತಾಪ, ಅವಮಾನ, ಹತಾಶೆ ಮುಂತಾದ ಘಟಿಸಿ ಹೋದ ಪ್ರಸಂಗಗಳನ್ನು ಇನ್ನೂ ನೆನಪಿನ ಬುತ್ತಿಯಲ್ಲಿರಿಸಿ, ವರುಷಗಳೂ ಸಂದರೂ ಮುಕ್ತರಾಗದೆ, ಪದೇ ಪದೇ ಜ್ಞಾಪಿಸಿಕೊಳ್ಳುತ್ತಾ ಮನಸ್ಸು ಕ್ಷೋಭೆಗೊಳ್ಳುತ್ತದೆ. ನಾವು, ನಮ್ಮವರು ಎಂಬ ಸ್ವಾರ್ಥದಿಂದ ಹೊರ ಬರಲಾರದೆ ಹಪಹಪಿಸುತ್ತೇವೆ. ಇದಕ್ಕೆಲ್ಲಾ ಒಂದೇ ಪರಿಹಾರವೆಂದರೆ ಕ್ಷಮೆ ಎಂಬ ಎರಡಕ್ಷರದ ಪದಕ್ಕೆ ಮೊರೆ ಹೋಗುವುದು. ಈ ಕ್ಷಮಾ ಗುಣವು ನಮ್ಮಲ್ಲಿ ಉದ್ದಾತ್ತ ಮನೋಭಾವನೆಯನ್ನು ಬೆಳೆಸಲು ಪೂರಕವಾಗಿದೆ. ಕ್ಷಮೆಯು ನಕಾರಾತ್ಮಕ ಯೋಚನೆಗಳಿಂದ ಮುಕ್ತಿಗೊಳಿಸಿ, ಧನಾತ್ಮಕವಾಗಿ ಚಿಂತಿಸಲು ಸಹಾಯ ಮಾಡುತ್ತದೆ. ಸಹೃದಯತೆ ಒಂದು ಅಮೂಲ್ಯವಾದ ಗುಣವಾಗಿದ್ದು, ವ್ಯಕ್ತಿತ್ವಕ್ಕೆ ಅಪೂರ್ವ ಮೆರುಗನ್ನು ನೀಡಿ ಅರ್ಥಪೂರ್ಣ ಸಂಬಂಧಗಳನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ನೈತಿಕ ಸದ್ಗುಣಗಳಾದ ಸಹನೆ, ಸಹಾನುಭೂತಿ, ಅನುಕಂಪ, ಎಲ್ಲಕ್ಕಿಂತಲೂ ಮಿಗಿಲಾಗಿ ‘ಸಹೃದಯತೆ’ಯನ್ನು ಅಳವಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ. ಗೌರವ, ಘನತೆ ವೃದ್ಧಿಸಿ ಮೌಲ್ಯಯುತ ಜೀವನ ನಡೆಸಲು ಸಾಧ್ಯ. “ಸಹನೆ, ಶಾಂತಿ, ಸಮಾಧಾನ ಇಲ್ಲದವರು ಏನನ್ನೂ ಸಾಧಿಸಲಾರರು” ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ಸಹೃದಯಿಯಾಗಿ, ಸಹಿಷ್ಣುತಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದು ಅತೀ ಅಗತ್ಯವಾಗಿದೆ.

ಶೈಲಾರಾಣಿ ಬೋಳಾರ್, ಮಂಗಳೂರು.

10 Comments on “ ನಾವೆಷ್ಟು ಸಹೃದಯರು?

  1. ನಿಜ, ಸಹೃದಯತೆ ಇರಬೇಕು ; ಅದಕಾಗಿ ಕಲೆ ಸಾಹಿತ್ಯ ಸಂಸ್ಕೃತಿಗಳ ಸಂಗ
    ಜೊತೆಗೆ ಸಮಾನ ಮನಸ್ಕರ ಸಂಘ – ಎರಡರ ಸಂಪರ್ಕ ಮತ್ತು ಸಂಸರ್ಗ ಬೇಕು………

    ಆದರೆ ಇಂದಿನ ಚಮಕಿತ ಚಮತ್‌-ಖಾರ ಯುಗದಲಿ ಮಂದಿಯನು ಮೋಸ
    ಗೊಳಿಸುವ, ಪೇಚಿಗೆ ಸಿಲುಕಿಸುವ ಮತ್ತು ವಂಚನೆಗೈವ ಅವಕಾಶ ಆಕಾಶ !

    ಬಹಳಷ್ಟು ಸಲ ಹೃದಯವಂತಿಕೆಯು ಕಪಟ ನಾಟಕದ ಮುಖವಾಡವೇ ಆಗಿರುವ
    ಸಾಧ್ಯತೆ ……ಇವನ್ನು ಬೆಳೆಸಬಹುದು.

    ನಿಮ್ಮ ಅನುಭವದ ಮೂಲಕ ವ್ಯಕ್ತವಾದ ಅಭಿವ್ಯಕ್ತ ಮನಸಿಗೆ ನೇರ ನುಗ್ಗುತ್ತದೆ.
    ನಮಗೆ ತೊಂದರೆಯಾಗದ ಸಂದರ್ಭಗಳಲ್ಲಿ ಇತರರಿಗೆ ನೆರವೀಯುವ ಅವಶ್ಯ
    ಮಾನವೀಯ ಗುಣದತ್ತ ಗಮನ ಸೆಳೆದಿದ್ದೀರಿ. ಧನ್ಯವಾದ. ಈ ದಿಸೆಯಲ್ಲಿ ಪತ್ರಿಕೆಯ
    ಸಂಪಾದಕರು ತಿಂಗಳಿಗೊಂದು ಇಂಥದೊಂದು “ಧರ್ಮ ಸಂಕಟ” ಕುರಿತು
    ಸ್ವಾನುಭವ ಬರೆಯಿರಿ ಎಂದು ಓದುಗರನ್ನು ಕೋರಲೂ ಬಹುದು.

    ಅನುಭವಿಸಿ ಬರೆದದ್ದು ಸಾಹಿತ್ಯ; ಉಳಿದುದು ಕೇವಲ ವರದಿ ಹೀಗೆಂದವರು ಡಾ.
    ಶಿವರಾಮಕಾರಂತರು. ಅವರು ನೆನಪಾದರು! ನಮಸ್ಕಾರ.

  2. ಹೌದು ಆ ಸಹೃದಯತೆ ನಮ್ಮ ಲ್ಲಿ ಎಷ್ಟಿದೆ ಹೇಗೆ ಬೆಳೆಸಿ ಕೊಳ್ಳಬೇಕು… ಬಳಸಿಕೊಳ್ಳಬೇಕು ಒಡನಾಟದಲ್ಲಿದ್ದಾಗ ಮಾತ್ರ ಸಾದ್ಯತೆ ಎಂದು ನನ್ನ ಅನಿಸಿಕೆ ಲೇಖನ ಚೆನ್ನಾಗಿದೆ.. ಮೇಡಂ

  3. ಅಪರಿಚಿತರಿಗೂ ನಗುನಗುತ್ತಾ ವಿಶ್ ಮಾಡುವ ಅಮೆರಿಕದ ಜನರ ಸಹೃದಯತೆಯ ಅನುಭವ ನನಗೂ ಆಗಿದ್ದು ನೆನಪಿಸಿತು, ನಿಮ್ಮ ಲೇಖನ ಮೇಡಂ. ಸ್ವವಿಮರ್ಶೆಗೊಡ್ಡುವ ಬರೆಹ ಚೆನ್ನಾಗಿದೆ.

  4. Excellent article by Dr Shaila on beautifying our life by incorporating empathetic behaviour. I liked it.

  5. ಹೃದಯವಂತಿಕೆಗೆ ಕನ್ನಡಿ ಹಿಡಿದ ಸಹೃದಯ ಲೇಖನ.

  6. ನನ್ನ ನೆಚ್ಚಿನ ಗೆಳತಿಯ ಲೇಖನವನ್ನು ಓದಿ ಸಂತೋಷವಾಯಿತು ಹಾಗೂ ವಿದೇಶದವರ ಸಹೃದಯತೆ ಕಂಡು ಆಶ್ಚರ್ಯವಾಯಿತು. ಇದು ನಿಜವೇ ಎನ್ನುವಷ್ಟು ಸಂಶಯ ಮೂಡಿತು. ನಿಜವಾಗಿಯೂ ಆ ವ್ಯಕ್ತಿ ಅದ್ಯಾರು ನಿನಗೆ ಸಹಾಯ ಮಾಡಿದ್ರೋ ಅವರ ಹೃದಯವಂತಿಕೆಗೆ ನನ್ನ ದೊಡ್ಡ ನಮನ ಹಾಗೂ ಅವರ ಮೇಲೆ ಆ ಪರಮಾತ್ಮನ ಆಶೀರ್ವಾದ ಸದಾ ಇರಲಿ ಎಂದು ಬೇಡಿಕೊಳ್ಳುತ್ತೇನೆ. ಇನ್ನು, ನನ್ನ ಅನಿಸಿಕೆ ಪ್ರಕಾರ, ಹೃದಯವಂತಿಕೆ, ನಾವು ಬೆಳದ ರೀತಿ, ನಮ್ಮ, ಸಂಸ್ಕಾರ, ನಮ್ಮ ಹಿರಿಯರ ಅನುಕರಣೆ, ಒಟ್ಟಿನಲ್ಲಿ ಇದು ಒಂದು ರೀತಿಯ ನಮ್ಮೊಳಗೇ ಬರುವಂತಹ ಗುಣ. ಅದು ಯಾರೂ ಹೇಳಿ ಕೊಟ್ಟು ಬರುವಂತದ್ದಲ್ಲ. ಇದೊಂದು ರೀತಿಯಲ್ಲಿ ಒಬ್ಬೊಬ್ಬರ Nature ಅಂತ ನನ್ನ ಭಾವನೆ. ಈ ಗುಣವನ್ನು ಪ್ರತಿಯೊಬ್ಬರು ಬೆಳಸಿಕೊಂಡಲ್ಲಿ ಹಾಗೂ ಆ ವಿದೇಶಿ ಮಹಿಳೆಯಂತೆ ಅಳವಡಿಸಿಕೊಂಡಲ್ಲಿ, ಜೀವನವೇ ಸಾರ್ಥಕವಾದೀತು ಎಂದು ನನ್ನ ಭಾವನೆ. ಶಯ್ಲಾ, Keep writing.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *