‘ಅಡುಗೆ, ಆಹಾರ, ತಿಂಡಿ ತಿನಿಸುಗಳ ಬಗ್ಗೆ ಬರೆದವುಗಳನ್ನೇ ಒಂದು ಪುಸ್ತಕ ಮಾಡಿ’ ಎಂದು ಸ್ನೇಹಿತರು ಹೇಳಿದಾಗ ‘ಹೌದಲ್ವಾ’ ಎನಿಸಿತು.ಆದರೆ ನನ್ನ ಫೇವರಿಟ್ ಆದ ಅವಲಕ್ಕಿ ಕುರಿತು ಇನ್ನೂ ಬರೆದಿಲ್ಲವೆನಿಸಿ ಮತ್ತೆ ‘ಹೌದಲ್ಲಾ!’ ಎನಿಸಿತು. ಅದರ ಪ್ರಯತ್ನವೇ ಈ ಬರೆಹ. ಉಪ್ಪಿಟ್ಟು ಕುರಿತು ಬರೆದಾಗ ಅದನ್ನು ಉಪಮಾಲಂಕಾರವೆಂದಿದ್ದೆ. ಇದೀಗ ಅವಲಕ್ಕಿಗೆ ‘ರೂಪಕಾಲಂಕಾರ’ ಎನ್ನಬೇಕೇನೋ? ಏಕೆಂದರೆ, ಇದಕ್ಕೊಂದು ದಿವ್ಯತೆ ಮತ್ತು ಭವ್ಯತೆ ಎರಡೂ ಸಂಪ್ರಾಪ್ತ. ಗೀತಾಚಾರ‍್ಯನೂ ಸ್ನೇಹಜೀವಿಯೂ ಆದ ಶ್ರೀ ಕೃಷ್ಣ ಪರಮಾತ್ಮನಿಗೆ ಅವಲಕ್ಕಿಯು ಅತ್ಯಂತ ಪ್ರಿಯ. ಸುಧಾಮನು ತನ್ನ ಗುಡಾರದಿಂದ ಕಟ್ಟಿಕೊಂಡು ಬಂದಿದ್ದ ಒಂದು ಹಿಡಿ ಅವಲಕ್ಕಿಯನ್ನು ಸವಿದ ಕೃಷ್ಣನ ಸಖ್ಯದಾಖ್ಯಾನ ಬಲು ದಿವಿನಾದ ರೂಪಕವೇ; ಸ್ನೇಹದ ಪ್ರತೀಕವೇ!
ಭತ್ತದಿಂದ ಬಡ್ತಿ ಪಡೆದ, ತೀರಾ ಅಕ್ಕಿಯೂ ಅಲ್ಲದ, ಅತ್ತ ಕಡೆ ಅನ್ನವೂ ಆಗದ ನಡುವೆ ಸುಳಿವ ‘ಅಡುಗೆ ಮನೆಯ ಆತ್ಮ’ವಾಗಿ ಅವಲಕ್ಕಿ ನನಗೆ ಗೋಚರ. ಅವಲಕ್ಕಿ ಇಷ್ಟಪಡುವವ ಲಕ್ಕಿ ಅಷ್ಟೇ. ಏಕೆಂದರೆ ಇದನ್ನು ತಯಾರಿಸುವ ವಿಧಾನವು ರವೆ ಉಪ್ಪಿಟ್ಟಿಗಿಂತಲೂ ಸುಲಭ. ಕೆಲವರಂತೂ ಇದನ್ನು ‘ಅವಲಕ್ಕಿ ಉಪ್ಪಿಟ್ಟು’ ಎಂದೇ ಉಚ್ಚರಿಸುತ್ತಾರೆ. ಇನ್ನು ಹಲವರು ‘ಅವಲಕ್ಕಿ ಒಗ್ಗರಣೆ’ ಎನ್ನುವರು. ತಮಿಳುನಾಡಿನಲ್ಲಿ ಇದು ಅವಲ್, ಇನ್ನೂ ಕೆಲವು ಕಡೆ ಇದು ಅಟುಕುಲ್. ಮಹಾರಾಷ್ಟ್ರ ಮತ್ತದರಾಚೆ ಪೋಹಾ. ಥರಾವರಿ ಅವಲಕ್ಕಿ ಮಿಕ್ಸು, ರೆಡಿ ಟು ಈಟ್ ಮೊದಲಾದವುಗಳಲ್ಲಿ ‘ಕಂಡೆ ಪೋಹಾ’ ಪ್ರಸಿದ್ಧಿ. ಮುಕ್ಕಾಲು ಭಾಗ ಸಿದ್ಧವಾದ ಇದನ್ನು ಬಾಣಲೆಯಲ್ಲಿ ಹಾಕಿ, ಬಿಸಿನೀರು ಚಿಮುಕಿಸಿದರೆ ಸಾಕು, ತಿನ್ನಲು ಸಿದ್ಧ. ಬೇಕೆಂದರೆ ಒಂಚೂರು ಒಗ್ಗರಣೆ ತೋರಬಹುದು. ಅಡುಗೆ ಮಾಡುವವರಿಗೆ ಇದು ಬಲಗೈ ಬಂಟ ಎಂದರೆ ಅತಿಶಯೋಕ್ತಿಯಲ್ಲ. ಇತ್ತ ಕಡೆ ಬಡವಾಧಾರಿ; ಅತ್ತ ಕಡೆ ಶ್ರೀಮಂತರ ತರಕಾರಿ! ಅಂದರೆ ಅಂಗಡಿಯಿಂದ ತಂದ ಸಾದಾ ಅವಲಕ್ಕಿಯನ್ನು ಐದು ನಿಮಿಷದಲ್ಲಿ ಅವಲಕ್ಕಿಯುಪ್ಪಿಟ್ಟನ್ನಾಗಿಯೋ ಒಗ್ಗರಣೆ ಅವಲಕ್ಕಿಯನ್ನಾಗಿಯೋ ಮಾಡಿ ಬಿಡಬಹುದು. ಅಥವಾ ಈರುಳ್ಳಿ, ದಪ್ಪಮೆಣಸಿನಕಾಯಿ, ಆಲೂಗೆಡ್ಡೆ, ಕ್ಯಾರೆಟ್ ಮೊದಲಾದವುಗಳನ್ನು ಬೆರೆಸಿಯೂ ಸಿರಿವಂತಗೊಳಿಸಬಹುದು. ಒಟ್ಟಿನಲ್ಲಿ ಅವಲಕ್ಕಿಯಂತೂ ಹೇಗೆ ಬೇಕೋ ಹಾಗೆ ಬಳಸಲು ಅನುಕೂಲಕಾರಿ; ಬಹುತೇಕರ ಬೆಳಗಿನುಪಹಾರದ ಸಂಚಾರಿ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅವಲಕ್ಕಿಗೆ ದೈವೀ ಸ್ಥಾನ. ಇದೊಂಥರ ಹೆಲ್ದಿ ಫುಡ್. ಈಗಂತೂ ಓಟ್ಸ್, ಕಿನೊವ ಎಂದೆಲ್ಲಾ ವಿಜೃಂಭಿತಗೊಳ್ಳುತ್ತಿರುವಾಗ ಈ ಬಡಪಾಯಿ ಅವಲಕ್ಕಿಯು ಶ್ರೀಮಂತರ ಮನೆಗಳಿಂದ ಕಣ್ಮರೆಯಾಗುತ್ತಿದೆಯೇನೋ ಎಂಬುದೊಂದೇ ಆತಂಕ.
ಒಗ್ಗರಣೆ ಅವಲಕ್ಕಿಯಲ್ಲದೇ, ಅವಲಕ್ಕಿ ಬಿಸಿಬೇಳೆ ಬಾತು, ಅವಲಕ್ಕಿ ಬೋಂಡ, ಮೊಸರವಲಕ್ಕಿ, ಕುಟ್ಟವಲಕ್ಕಿ, ಗೊಜ್ಜವಲಕ್ಕಿ, ಅವಲಕ್ಕಿ ಚೂಡಾ, ಕಡಲೆಪುರಿಯಂತೆ ಭಟ್ಟಿಮನೆಯಲ್ಲಿ ಹುರಿದ ಅವಲಕ್ಕಿ ಜನಪ್ರಿಯ. ಅವಲಕ್ಕಿ ಶಿರಾ, ಅವಲಕ್ಕಿ ಪೊಂಗಲ್, ಅವಲಕ್ಕಿ ಕಟ್ಟಾಮೀಟಾಗಳಾಗಿಯೂ ಸಿಹಿಪ್ರಿಯರಿಗೆ ಅಚ್ಚುಮೆಚ್ಚು. ಅವಲಕ್ಕಿ ಪುಳಿಯೋಗರೆ ಅಂತ ಒಂದು ರೆಸಿಪಿ ಕಣ್ಣಿಗೆ ಬಿತ್ತು. ದೋಸೆ ಬ್ಯಾಟರ್ ಸಿದ್ಧಪಡಿಸುವಾಗ ಬಹುತೇಕರು ಒಂದು ಹಿಡಿ ಅವಲಕ್ಕಿಯನ್ನೂ ಸೇರಿಸುವರು. ‘ಹಂಚಿ ತಿನ್ನಲು ಪ್ರೇಮವೇನೂ ಅವಲಕ್ಕಿಯೇ? ‘ಎಂದ ಓರ್ವ ಹೆಣ್ಣುಮಗಳು ಒಂದು ನಾಟಕದಲ್ಲಿ ಪ್ರಶ್ನಿಸುತ್ತಾಳೆ. ಅವಲಕ್ಕಿಗೆ ಪ್ರೇಮವಾಗುವ ಯೋಗ್ಯತೆ ಇರದೇ ಇರಬಹುದು; ಆದರೆ ಸ್ನೇಹೌದಾರ್ಯವಾಗುವ ತಾಕತ್ತಿದೆ. ಅವಲಕ್ಕಿಗೆ ಬೆಲ್ಲ ಮತ್ತು ಕಾಯಿ ತುರಿದು, ಒಂದು ಏಲಕ್ಕಿ ತೋರಿದರೆ ಸಾಕು, ದೇವರ ನೈವೇದ್ಯಕೆ ಸಿದ್ಧ ; ಕೊನೆಗದು ಎಲ್ಲ ಬಕುತರಿಗೂ ಪ್ರಸಾದ! ತಕ್ಷಣಕ್ಕೆ ಪೇಪರ್ ಅವಲಕ್ಕಿ ತಂದು ಅದಕ್ಕೆ ಕಾಯಿತುರಿ, ಬೆಲ್ಲದ ಪುಡಿ ಸೇರಿಸಿದರೆ ಮುಗಿಯಿತು. ತಮಿಳುನಾಡಿಗರು ಅವಲಕ್ಕಿ ಪಾಯಸ, ಅವಲಕ್ಕಿ ಲಡ್ಡು ಎಂದೆಲ್ಲಾ ಸಿಹಿಯನ್ನು ಸಿದ್ಧಪಡಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಗರಿಗರಿ ಕುರುಕಲು ಅವಲಕ್ಕಿ ಕಟ್ಲೆಟ್, ಅವಲಕ್ಕಿ ಉಪ್ಕಾರಿ, ಅವಲಕ್ಕಿ ಪಂಚಕಜ್ಜಾಯ, ಅವಲಕ್ಕಿ ರೊಟ್ಟಿ, ಅವಲಕ್ಕಿ ಸಂಡಿಗೆ, ಅವಲಕ್ಕಿ ಇಡ್ಲಿ, ಅವಲಕ್ಕಿ ಹಲ್ವಾ, ಬರ್ಫಿ, ಅವಲಕ್ಕಿ ವಡೆ, ಅವಲಕ್ಕಿ ಚಕ್ಕುಲಿ, ಅವಲಕ್ಕಿ ಹಪ್ಪಳ, ಅವಲಕ್ಕಿ ಮಿಕ್ಸರ್………. ಅಯ್ಯೋ ದೇವರೇ, ಅವಲಕ್ಕಿಯಿಂದ ಎಷ್ಟೊಂದು ಥರಾವರಿ ರೆಸಿಪಿಗಳು! ಒಂಥರಾ ಅವಲಕ್ಕಿಯು ಮೂಲವಸ್ತು. ಅದನ್ನು ಹೇಗೆ ಬೇಕೋ ಹಾಗೆ ಬಳಸುವುದರಲ್ಲಿ ನಮ್ಮ ಜನ ಪ್ರಯೋಗಶೀಲರು. ಅನ್ನಕ್ಕೆ ಬದಲು ಅವಲಕ್ಕಿ ಬಳಸಿ, ಅದಕ್ಕೆ ಕರಿದ ಗೋಡಂಬಿ ಹಾಕಿ, ಅವಲಕ್ಕಿ ಚಿತ್ರಾನ್ನವೆಂದೂ ಕೆಲವರು ಮಾಡುವುದುಂಟು.
ತೆಳು ಅವಲಕ್ಕಿ, ಗಟ್ಟಿ ಅವಲಕ್ಕಿ, ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿ ಎಂದೆಲ್ಲಾ ಹಲವು ವಿಧಗಳಿವೆ. ಒಗ್ಗರಣೆ ಅವಲಕ್ಕಿ ಅಂದರೆ ಉಪ್ಪಿಟ್ಟಿನ ರೀತಿ ತಯಾರಿಸಿ ಸವಿಯಲು ಗಟ್ಟಿ ಅವಲಕ್ಕಿಯೇ ಸರಿ. ಪ್ರಸಾದ ಹಂಚಲು ಪೇಪರ್ ಅವಲಕ್ಕಿ ಬಳಕೆ. ಮೊಸರವಲಕ್ಕಿಗೆ ಮೀಡಿಯಂ ಅವಲಕ್ಕಿ ಸೂಕ್ತ. ಹೀಗೆ ಮೂಲವೊಂದೇ; ರೂಪ ಬೇರೆ! ಥೇಟ್ ಭಗವಂತನಂತೆ. ದೇವನೊಬ್ಬ; ನಾಮ ಹಲವು ಎಂದ ಹಾಗೆ. ಈಗ ಎಲ್ಲೆಡೆ ಆರ್ಗ್ಯಾನಿಕ್ ರೆಡ್ ಪೋಹಾ ಅಂತ, ಕೆಂಪಕ್ಕಿಯಿಂದ ತಯಾರಿಸಿದ ಅವಲಕ್ಕಿ ಸಿಗಹತ್ತಿದೆ. ಬೆಳಗಿನ ಹೊತ್ತು. ಅಡುಗೆಮನೆಯಿಂದ ಕರಿಬೇವಿನ ಸುವಾಸನೆ, ಕಡಲೆಕಾಯಿ ಕರಿಯುವ ಸುಗಂಧ, ಹಸಿಮೆಣಸಿನ ಮಿರಮಿರ. ಬಿಸಿ ಬಿಸಿ ಅವಲಕ್ಕಿ ಒಗ್ಗರಣೆಯ ಒಂದು ತಟ್ಟೆ ನಮ್ಮ ಮುಂದೆ ಬಂದರೆ, ನಿದ್ರಾವಸ್ಥೆಯೇ ಓಡಿಹೋಗುತ್ತದೆ. ಹೀಗೆ ನಮ್ಮ ಮನೆಗಳಲ್ಲಿ ಅನೇಕ ಪೀಳಿಗೆಯಿಂದ ಬೆಳಗಿನ ಮಿತ್ರನಾಗಿ ನಿಂತಿದೆ ಅವಲಕ್ಕಿ.
ಅವಲಕ್ಕಿಯ ಹುಟ್ಟು ಅಕ್ಕಿಯಲ್ಲೇ. ಭಾರತದ ಹಳೆಯ ಕೃಷಿ ಸಂಸ್ಕೃತಿಯಲ್ಲಿ ಅಕ್ಕಿ ಮುಖ್ಯ ಆಹಾರವಾಗಿದ್ದಾಗ, ಅದನ್ನು ದೀರ್ಘಕಾಲ ಉಳಿಸಿಕೊಂಡು, ತಕ್ಷಣ ತಿನ್ನಬಹುದಾದ ರೂಪಕ್ಕೆ ತರಬೇಕೆಂಬ ಬುದ್ಧಿ ಹುಟ್ಟಿತು. ಹೀಗಾಗಿ ಅಕ್ಕಿಯನ್ನು ನೆನೆಸಿ, ಸ್ವಲ್ಪ ಆವಿಯಲ್ಲಿ ಬೇಯಿಸಿ, ನಂತರ ಒಣಗಿಸಿ, ಒತ್ತುಗಲ್ಲಿನಲ್ಲಿ ಒತ್ತಿ ತೆಳ್ಳನೆಯ ಹಾಳೆಯಂತೆ ಮಾಡಿದಾಗ – ಜನ್ಮ ಕಂಡಿತು ಅವಲಕ್ಕಿ. ಇದೀಗ ಯಂತ್ರಗಳು ಆ ಕೆಲಸವನ್ನು ಮಾಡುತ್ತವೆ. ಆಕರ್ಷಕ ಪ್ಯಾಕೇಟುಗಳಲ್ಲಿ ಮಾರಾಟಕ್ಕೆ ಸಿದ್ಧವಾಗುತ್ತವೆ. ಪ್ರಾಚೀನ ಕಾಲದಲ್ಲಿ ಹಳ್ಳಿ ಹಬ್ಬಗಳಿಗೂ, ಕೃಷಿಕರ ಹೊಲದ ಊಟಕ್ಕೂ ಇದು ಪ್ರಮುಖ. ಸುಲಭವಾಗಿ ಹೊತ್ತೊಯ್ಯಬಹುದಾದ, ಹಾಳಾಗದ ಆಹಾರವಾಗಿದ್ದರಿಂದ, ರೈತರಿಗೆ ಇದು ಅಮ್ಮನ ಕಣ್ಣಂತೆ ಕಾಪಾಡಿದ ಅನ್ನ.
ಒಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಬಡ ಕೃಷಿಕನೊಬ್ಬನಿದ್ದ. ಅವನಿಗೆ ಚತುರಳಾದ ಮಗಳು. ಒಂದು ದಿನ ರಾಜನು ಗ್ರಾಮಕ್ಕೆ ಬಂದು, “ನನ್ನನ್ನು ಸಂತೋಷಪಡಿಸುವಂತಹ ಊಟವನ್ನು ತಕ್ಷಣ ಸಿದ್ಧಪಡಿಸಿಕೊಟ್ಟವರಿಗೆ ಬಹುಮಾನ” ಎಂದನು. ಹಳ್ಳಿಯವರು ಗೊಂದಲದಲ್ಲಿ ಬಿದ್ದರು. ಅಕ್ಕಿ ಬೇಯಿಸಲು ಹೊತ್ತಾಗುತ್ತದೆ, ರೊಟ್ಟಿ ತಯಾರಿಸಲು ಸಮಯ ಬೇಕು. ಕೃಷಿಕನ ಮಗಳು ತಕ್ಷಣ ತಂದೆಯ ಮನೆಗೆ ಓಡಿ ಹೋಗಿ, ಬಾಳೆ ಎಲೆಯ ಮೇಲೆ ಬಿಸಿ ಬಿಸಿ ಅವಲಕ್ಕಿ ಒಗ್ಗರಣೆಯನ್ನು ತಯಾರಿಸಿದಳು – ಸಾಸಿವೆ ಸಿಡಿಸಿದ ಶಬ್ದ, ಕರಿಬೇವಿನ ಸುವಾಸನೆ, ಕಡಲೆಕಾಯಿ ಕರಿಯುವ ರುಚಿ. ರಾಜನು ತಿಂದ ತಕ್ಷಣ, “ಇಷ್ಟು ಬೇಗ, ಇಷ್ಟೊಂದು ರುಚಿಕರ ಆಹಾರ ! ಭೇಷ್” ಎಂದು ಹೇಳಿ ಅವಳಿಗೆ ಬಂಗಾರದ ನಾಣ್ಯ ಕೊಟ್ಟನು. ಆ ದಿನದಿಂದ ಆ ಹಳ್ಳಿಯಲ್ಲಿ, ಅವಲಕ್ಕಿಯನ್ನು ‘ರೈತನ ಬಂಗಾರ’ ಎಂದು ಕರೆಯಲು ಶುರುವಾಯಿತಂತೆ.
ನೂರು ಗ್ರಾಂ ಅವಲಕ್ಕಿಯಲ್ಲಿ ಹಲವು ಬಗೆಯ ಪೌಷ್ಠಿಕಾಂಶಗಳಿರುತ್ತವೆ. ತಕ್ಷಣದ ಶಕ್ತಿವರ್ಧಕವಾಗಿ ಕಾರ್ಬೋಹೈಡ್ರೇಟುಗಳು 76 ಗ್ರಾಂ, ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನು 6.5 ಗ್ರಾಂ, ಹೃದಯದ ಆರೋಗ್ಯಕ್ಕೆ ಪೂರಕವಾದ ಕೊಬ್ಬು 1.1 ಗ್ರಾಂ, ಜೀರ್ಣಕ್ರಿಯೆಯ ಸುಧಾರಣೆಗಾಗಿ ಡಯಟರೀ ಫೈಬರು ನಾರು 2.5 ಗ್ರಾಂ, ರಕ್ತಹೀನತೆ ತಡೆಯಲು ಕಬ್ಬಿಣದೈರನ್ನು 2.6 ಮಿಲಿಗ್ರಾಂ, ಎಲುಬುಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ 20 ಮಿಲಿಗ್ರಾಂ, ನರವ್ಯವಸ್ಥೆ ಮತ್ತು ದೇಹದ ಮೆಟಾಬಾಲಿಸಂಗೆ ಥಿಯಾಮಿನ್ ಎಂಬ ಬಿ ಒನ್ ಜೀವಸತ್ವ 0.2 ಮಿಲಿಗ್ರಾಂ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಸೋಡಿಯಂ 5 ಮಿಲಿಗ್ರಾಂ ಮತ್ತು ಶರೀರದ ನೀರಿನ ಸಮತೋಲನಕ್ಕಾಗಿ ಪೊಟಾಷಿಯಂ 270 ಮಿಲಿಗ್ರಾಂ ಅಡಕವಾಗಿದೆಯೆಂದು ಆಹಾರತಜ್ಞರು ತಿಳಿಸುತ್ತಾರೆ. ಕಡಮೆ ಪ್ರಮಾಣದ ಎಣ್ಣೆ ಬಳಸಿ ಒಗ್ಗರಣೆ ಮಾಡಿದ ಹಾಗೆಯೇ ಈರುಳ್ಳಿ ಟೊಮ್ಯಾಟೋ ಮೊದಲಾದವುಗಳನ್ನು ಹುರಿಯಲು ಬಾಣಲೆಗೆ ಒಂದೇ ಚಮಚ ಎಣ್ಣೆ ಬಳಸಿದ ಅವಲಕ್ಕಿಯೊಗ್ಗರಣೆಯೆಂಬ ಬೆಳಗಿನ ಉಪಾಹಾರವು ಎಲ್ಲ ರೀತಿಯಲ್ಲೂ ಸೇಫ್. ಆರೋಗ್ಯಕಾರಿ, ಜೀರ್ಣಕಾರಿ, ಒಂಚೂರು ತರಕಾರಿ, ತಕ್ಷಣಕೆ ಆಪತ್ಬಾಂಧವ ಸಹಕಾರಿ. ಬೆಳಗಿನ ಹೊತ್ತೇ ಎಂದೇನಲ್ಲ; ಮೆತ್ತಗೆ ಮಾಡಿದರೆ ಮಧ್ಯಾಹ್ನದ ಭೋಜನದ ವೇಳೆಯಲ್ಲೂ ಸೈ, ಆದರೆ ಗಂಟಲು ಹಿಡಿದಂತಾಗುತ್ತದೆಂಬ ಕಾರಣಕ್ಕೆ ಜೊತೆಯಲ್ಲಿ ಮೊಸರು ಸೇವಿಸಬೇಕು. ಇನ್ನು ಸಂಜೆಯ ವೇಳೆಗೆ ಕೂಡಲೇ ತಯಾರಿಸಬಹುದಾದ ಅವಲಕ್ಕಿಯು ಯಾರಿಗೆ ಇಷ್ಟವಿಲ್ಲ? ಜೊತೆಯಲ್ಲಿ ಸ್ವಲ್ಪ ಕುರುಕು ಮುರುಕುಗಳು ಇದ್ದರಂತೂ ಅವಲಕ್ಕಿಯು ಧರೆಗಿಳಿದ ಸ್ವರ್ಗವೇ ಸರಿ. ಯಾರಾದರೂ ನೆಂಟರಿಷ್ಟರು ದಿಢೀರನೆ ಬಂದಾಗಲೂ ಇದು ಮಾನ ಕಾಪಾಡುವ ಶ್ರೀಕೃಷ್ಣನ ಅಕ್ಷಯಪಾತ್ರೆ. ಜಾಸ್ತಿ ಮಾಡಿದರೆ ಎರಡನೆಯ ಸಲವೂ ಬಡಿಸಬಹುದು; ಕಡಮೆಯಾದರೆ ತಿಂದು ಮುಗಿಸುವುದರೊಳಗಾಗಿ ತಕ್ಷಣಕೆ (ಐದು ನಿಮಿಷ ಸಾಕು) ತಯಾರಿಸಲೂ ಬಹುದು.
ಒಂದರ್ಥದಲ್ಲಿ ಇದು ರವೆಯುಪ್ಪಿಟ್ಟಿಗಿಂತಲೂ ಬೇಗ ಸಿದ್ಧವಾಗುತ್ತದೆ. ಒಂದು ಕಡೆ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಸ್ವಲ್ಪ ನೀರು ಚಿಮುಕಿಸಿ ನೆನೆಯಲು ಇಡುವುದು. ಇನ್ನೊಂದೆಡೆ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸಾಸುವೆ, ಕಡಲೇಬೇಳೆ, ಉದ್ದಿನಬೇಳೆ, ಕಡಲೇಬೀಜ ಮತ್ತು ಒಣಮೆಣಸಿನಕಾಯಿಯ ಒಂದೆರಡು ಎಸಳುಗಳನ್ನು ಹಾಕಿ ಒಗ್ಗರಣೆ ಮಾಡಿಟ್ಟುಕೊಳ್ಳುವುದು. ಅದಕ್ಕೇನೇ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಸಣ್ಣ ಉರಿಯೊಂದಿಗೆ ಫ್ರೈ ಮಾಡಿ, ಅದಕ್ಕೆ ನೆನೆಯುತ್ತಿರುವ ಅವಲಕ್ಕಿಯನ್ನು ಹಾಕಿ ಮಿಶ್ರಣ ಮಾಡುವುದು. ಮುಚ್ಚಿಟ್ಟು, ಮೂರ‍್ನಾಲ್ಕು ನಿಮಿಷ ಬೇಯಿಸಿ, ಅದಕ್ಕೆ ಕರಿಬೇವು, ಕೊತ್ತಂಬರಿ ಮತ್ತು ತೆಂಗಿನಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿ, ಇನ್ನೊಂದೆರಡು ನಿಮಿಷ ಬಿಟ್ಟು ಸ್ಟವ್ವಿಂದ ಕೆಳಗಿಳಿಸಿ, ನಿಂಬೆರಸ ಹಿಂಡಿ, ತಟ್ಟೆಗೆ ಹಾಕಿದರೆ ಅವಲಕ್ಕಿ ತಿನ್ನಲು ರೆಡಿ. ಸ್ವಲ್ಪ ಬರಕಲು ಎನಿಸಿದರೆ ಒಂದು ಚಮಚೆ ತುಪ್ಪವನ್ನು ಹಾಕಿಕೊಳ್ಳಬಹುದು, ಇನ್ನೂ ಮೆತ್ತಗಾಗಬೇಕೆನಿಸಿದರೆ, ಒಲೆಯಿಂದ ಇಳಿಸುವ ಮುನ್ನ ಒಂಚೂರು ನೀರು ಚಿಮುಕಿಸಿ, ಪ್ಲೇಟು ಮುಚ್ಚಿಟ್ಟು ಕಾಯಲೂಬಹುದು. ಒಟ್ಟಿನಲ್ಲಿ ಇದು ಸರಳವಾದ ಆದರೆ ಸಮೃದ್ಧವಾಗಿಯೂ ತಯಾರಿಸಬಹುದಾದ ತಿಂಡಿ. ಬಗೆಬಗೆಯಾಗಿಯೂ ತಯಾರಿಸಬಹುದು. ಕ್ಯಾರೆಟ್ ತುರಿದು ಬೆರೆಸಬಹುದು. ದಪ್ಪಮೆಣಸಿನಕಾಯಿ, ಬದನೆಕಾಯಿ, ಆಲೂಗೆಡ್ಡೆಗಳನ್ನು ಸೇರಿಸಿ, ಅವಲಕ್ಕಿ ವಾಂಗೀಬಾತ್ ಮಾಡಬಹುದು. ಖಾರಕ್ಕೆ ಮೆಣಸಿನಕಾಯಿ ಬಳಸದೇ ಒಂದು ಚಮಚೆ ಪಲ್ಯದ ಪುಡಿ ಹಾಕಿಯೂ ಮಾಡಿಕೊಳ್ಳಬಹುದು. ಈರುಳ್ಳಿ ಇತ್ಯಾದಿಗಳನ್ನು ಸೇರಿಸದೇ, ಶುದ್ಧವಾದ ಮಡಿಗೆ ಬರುವಂಥ ಸಾದಾ ಅವಲಕ್ಕಿಯನ್ನೂ ಮಾಡಬಹುದು. ಒಟ್ಟಿನಲ್ಲಿ ಯಾರಿಗೆ ಹೇಗೆ ಬೇಕೋ ಹಾಗೆ ಇದು ಎಲ್ಲರಿಗೂ ಸಲ್ಲುವ ಎಲ್ಲ ಕಾಲಕ್ಕೂ ಒಗ್ಗುವ ಎಲ್ಲರಿಗೂ ಇಷ್ಟವಾಗುವ ಆಹಾರ ಪದಾರ್ಥ. ಅವಲಕ್ಕಿಯನ್ನು ಇಷ್ಟಪಡದವರು ಅಪರೂಪ. ಗ್ಯಾಸ್ ಆಗುತ್ತದೆಂದೂ ಹೊಟ್ಟೆ ಉಬ್ಬರಿಸಿಕೊಳ್ಳುತ್ತದೆಂದೂ ಎದೆ ಒತ್ತುತ್ತದೆಂದು ಕೆಲವರು ದೂರುವರು ಮತ್ತು ದೂರವಿಡುವರು. ಲೋಕೋಭಿನ್ನರುಚಿ ಮಾತ್ರವಲ್ಲ; ವಿಭಿನ್ನ ಅಭಿರುಚಿ ಕೂಡ.
ನನಗಂತೂ ಇದು ಬಲು ಅಚ್ಚುಮೆಚ್ಚು. ಯಾವ ಸಮಯದಲ್ಲಿ ಕೊಟ್ಟರೂ ತಿನ್ನಲು ನಾನು ರೆಡಿ. ಆದರೆ ಕೆಲವೊಂದು ಪ್ಯಾರಾಮೀಟರುಗಳಿವೆ. ತಕ್ಷಣ ತಿನ್ನಬೇಕು, ಎಣ್ಣೆಮಯ ಮಾಡಿರಬಾರದು, ಕಡಮೆ ಉಪ್ಪು ಮತ್ತು ಸಪ್ಪೆ ಇರಬೇಕು. ಹಲವು ಬಗೆಯಲ್ಲಿ ಮಾಡಿ ಬಡಿಸುವ ನನ್ನ ಮಡದಿ ಮಾಡುವ ಅವಲಕ್ಕಿಯೊಗ್ಗರಣೆಯಂತೂ ನನ್ನ ಕನಸು ಮನಸಿನ ಕನವರಿಕೆ. ಈಕೆಯು ದಿನವೂ ಮಾಡಿ ಕೊಟ್ಟರೂ ರುಚಿ ಸವಿಯಬಲ್ಲ ಸಹಿಷ್ಣುಜೀವಿ ನಾನು. ನಮ್ಮಜ್ಜಿ ಮನೆಯಲ್ಲಿ ಮಾಡುತ್ತಿದ್ದ ಅವಲಕ್ಕಿಯೊಗ್ಗರಣೆ, ಅವರು ಪ್ರಸಾದವಾಗಿ ಕೊಡುತ್ತಿದ್ದ ಸಿಹಿಯವಲಕ್ಕಿ, ಫಳಾರ ಎಂದು ಸ್ವಲ್ಪವೇ ಕೈಗೆ ಕೊಡುತ್ತಿದ್ದ ಮೊಸರವಲಕ್ಕಿಗಳು ನನ್ನ ಬಾಲ್ಯದ ಅದೃಷ್ಟದ ಸದವಕಾಶಗಳಾಗಿದ್ದವು. ಶರೀರದ ಆರೋಗ್ಯ ಕೈ ಕೊಟ್ಟಾಗಲು ನನಗೆ ಅವಲಕ್ಕಿಯೇ ಮಿತ್ರ; ಆಹಾರವಾಗಿಯೂ ಅವುಷಧವಾಗಿಯೂ! ನಾನು ಇದಕ್ಕೆ ಒಗ್ಗಿರುವೆನೋ? ಇದು ನನಗೆ ಒಗ್ಗಿದೆಯೋ ಎರಡೂ ಸರಿ. ಹೀಗೆ ಇಷ್ಟೊಂದು ಪ್ರೀತಿಸುವ ಅವಲಕ್ಕಿಯನ್ನು ಕುರಿತು ನಾನು ಅತಿ ತಡವಾಗಿ ಬರೆಯುತ್ತಿರುವುದಕೆ ಅವಲಕ್ಕಿಯ ಕ್ಷಮೆಯನ್ನೇ ಕೇಳಬೇಕು. ಕಿಂಚಿತ್ತೂ ಅದು ಬೇಸರ ಮಾಡಿಕೊಳ್ಳದೇ ತನ್ನ ರುಚಿಯನ್ನು ಕಡಮೆ ತೋರದೆ ನನಗಿಂದಿಗೂ ಆಪ್ಯಾಯಮಾನವಾಗಿದೆ. ಒಗ್ಗರಣೆಯವಲಕ್ಕಿಯನ್ನು ಬಿಟ್ಟರೆ ಅವಲಕ್ಕಿ ಬಿಸಿಬೇಳೆಬಾತು ಸಹ ಇಷ್ಟವಾಗುವ ಇನ್ನೊಂದು ಊಟವಲ್ಲದ ತಿಂಡಿ. ಅವಲಕ್ಕಿ ನಮ್ಮ ಸಂಸ್ಕೃತಿಯ ಆಹಾರ ಬಿಂಬ. ಅದು ಕೇವಲ ಹೊಟ್ಟೆ ತುಂಬಿಸುವುದಲ್ಲ, ನೆನಪು, ಸುವಾಸನೆ, ಮನೆಯ ಉಡುಗೊರೆ. ಇಂದಿನ ವೇಗದ ಜೀವನದಲ್ಲೂ, ಬೆಳಗಿನ ಒಂದು ಬಿಸಿ ಅವಲಕ್ಕಿ ಒಗ್ಗರಣೆಯ ತಟ್ಟೆ – ಮನಸ್ಸಿಗೂ ಹೊಟ್ಟೆಗೂ ಸಮಾನ ಹಿತವನ್ನು ನೀಡುತ್ತದೆ. ರಾಜನನ್ನೂ ಮಂತ್ರಮುಗ್ಧಗೊಳಿಸಿದ ಆ ರೈತನ ಮಗಳಂತೆ, ಇಂದಿಗೂ ಅವಲಕ್ಕಿ ನಮ್ಮ ಮನೆಯನ್ನು ಸಂತೋಷದಿಂದ ತುಂಬಿಸುತ್ತಿದೆ.
ಆಹಾರ, ಊಟೋಪಚಾರಗಳ ವಿಚಾರಕ್ಕೆ ಬಂದಾಗ ನಮ್ಮಜ್ಜಿಯೇ ನೆನಪಾಗುತ್ತಾರೆ. ಬಡತನದ ಬದುಕನ್ನೇ ಉಸಿರಾಡಿದ ಆಕೆಯು ಸದಾ ವಟಗುಟ್ಟುತ್ತಲೇ ತೋರುತ್ತಿದ್ದ ನಿರ್ವ್ಯಾಜ ಪ್ರೀತಿಯು ನನ್ನ ಪಾಲಿಗೆ ನಿತ್ಯೋತ್ಸವ. ಅವರು ಕಣ್ಣಳತೆಯಲ್ಲಿ ಹಾಕುತ್ತಿದ್ದ ಪದಾರ್ಥಗಳು, ಮಾಡಿಡುತ್ತಿದ್ದ ಅಡುಗೆಗಳು, ಆಗಿನ ಕಾಲದ ಆಹಾರ ಪದಾರ್ಥಗಳಲ್ಲಿದ್ದ ಸತ್ಯ ಮತ್ತು ಸತ್ವಗಳು ಪರಮಾನ್ನಕ್ಕೆ ಸಮಾನವಾಗಿದ್ದವು. ಬರೀ ಒಂದು ಅನ್ನ, ತಿಳಿಸಾರು, ಮಜ್ಜಿಗೆಯ ಊಟವೂ ಸೊಗಸೆನಿಸುತ್ತಿತ್ತು. ಸೌದೆ ಒಲೆ ಮತ್ತು ಇದ್ದಿಲಿನ ಅಗ್ಗಿಷ್ಟಿಕೆಗಳೇ ಅವರ ಸರ್ವಸ್ವವಾಗಿದ್ದವು. ಅವಲಕ್ಕಿಯ ಮೇಲೆ ಪ್ರೇಮ ಉದಯಿಸಲು ನಮ್ಮಜ್ಜಿಯೇ ಕಾರಣ. ನನ್ನನ್ನು ಗೋಪಾಲ ಎಂದು ಕರೆಯುತ್ತಿದ್ದರು. ಶ್ರೀ ಕೃಷ್ಣಪರಮಾತ್ಮನಿಗೆ ತನ್ನ ಬಾಲ್ಯದ ಗೆಳೆಯ ಸುಧಾಮನು ತನ್ನ ಮನೆಯಿಂದ ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಹೋಗಿದ್ದ ಕತೆಯನ್ನು ಮೊದಲ ಬಾರಿಗೆ ನನಗೆ ಹೇಳಿ, ಮೊಸರವಲಕ್ಕಿಯನ್ನು ತಿನ್ನಿಸಿದ್ದರು.
ಆಕೆ ಮಾಡಿ ಕೊಡುತ್ತಿದ್ದ ಬಗೆಬಗೆಯ ಅವಲಕ್ಕಿಯ ಹಲವು ರೂಪಾಂತರೀ ತಿಂಡಿಗಳು ನನಗೆ ಪ್ರಿಯವಾಗಿದ್ದವು. ಒಗ್ಗರಣೆ ಅವಲಕ್ಕಿ, ಕುಟ್ಟವಲಕ್ಕಿ, ಗೊಜ್ಜವಲಕ್ಕಿಗಳು ವಾರದಲ್ಲಿ ಒಮ್ಮೆಯಾದರೂ ರಿಪೀಟಾಗುತ್ತಿದ್ದವು. ಉಪ್ಪಿಟ್ಟು ಮತ್ತು ಅವಲಕ್ಕಿ ಎಂಬವು ನಮ್ಮಂಥವರ ಅಡುಗೆಮನೆಯ ಎರಡು ಕಣ್ಣುಗಳು, ಎರಡು ಕೈಗಳು. ಏನೂ ಮಾಡಲು ತೋಚದಿದ್ದಾಗ ಉಪ್ಪಿಟ್ಟೋ ಅವಲಕ್ಕಿಯೋ ತಯಾರಾಗುತ್ತಿದ್ದವು. ಜೊತೆಗೆ ತುಂಬುಕುಟುಂಬದ ಹಲವು ಮಂದಿಗೆ ಏಕಕಾಲಕ್ಕೆ ಸಿದ್ಧಪಡಿಸಿ, ಬಡಿಸಬಹುದಾದ ರೆಸಿಪಿಯಿವು. ಈರುಳ್ಳಿ, ಕಡಲೇಬೀಜ ಏನೊಂದೂ ಇಲ್ಲದೆ ಕೇವಲ ಬೋಳು ಬೋಳು ಒಗ್ಗರಣೆಯವಲಕ್ಕಿಯು ಅದೆಷ್ಟು ರುಚಿಕರವಾಗಿರುತ್ತಿತ್ತೆಂದರೆ ಈಗ ನೆನಪಿಸಿಕೊಂಡರೂ ಬಾಯಲ್ಲಿ ಸಲೈವಾ ಸುರಿಯುತ್ತದೆ. ಅಜ್ಜಿಮನೆಗೆ ಹೋಲಿಸಿದರೆ, ನಮ್ಮ ತಾಯ್ತಂದೆಯರ ಮನೆಯು ಎಷ್ಟೋ ಪಾಲು ವಾಸಿ. ಕನ್ನೇಗೌಡನ ಕೊಪ್ಪಲು, ಜಯನಗರಗಳ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನಾವು ಅಷ್ಟೋ ಇಷ್ಟೋ ವ್ರತಗೆಟ್ಟವರು. ಉಪ್ಪಿಟ್ಟು ಮತ್ತು ಅವಲಕ್ಕಿಗಳಿಗೆ ಈರುಳ್ಳಿ ಬೆರೆಯುತ್ತಿತ್ತು. ಅಪರೂಪಕ್ಕೆ ದಪ್ಪಮೆಣಸಿನಕಾಯಿ, ಕ್ಯಾರೆಟ್ ಮೊದಲಾದ ತರಕಾರಿಗಳು ಸೇರ್ಪಡೆಯಾಗುತ್ತಿದ್ದವು. ಮದುವೆಯಾದ ಮೇಲೆ ಮಡದಿಯ ಅಪ್ರತಿಮ ಅಡುಗೆ ಕಲೆಯಿಂದಾಗಿ, ಇನ್ನೂ ಥರಾವರಿ ಅವಲಕ್ಕಿಯ ರುಚಿ ನಾಲಗೆಗೆ ಪರಿಚಯವಾಯಿತು. ಒಣಮೆಣಸಿನಕಾಯಿಯ ಬದಲು ಉಪ್ಪಚ್ಚಿ ಮೆಣಸಿನಕಾಯಿ ಹಾಕುವುದು, ಬೇರೆ ಬೇರೆ ತರಕಾರಿಗಳನ್ನು ಮಿಶ್ರಣ ಮಾಡಿ, ಅವಲಕ್ಕಿ ವಾಂಗೀಬಾತ್ ಮಾಡುವುದು, ಅವಲಕ್ಕಿ ಬಿಸಿಬೇಳೆ ಬಾತು ತಯಾರಿಸುವುದು, ಗೊಜ್ಜವಲಕ್ಕಿಯ ಬೇರೊಂದು ಹದವನ್ನು ಕಂಡು ಕೊಡುವುದು, ಅವಲಕ್ಕಿ ಪಡ್ಡು, ಅವಲಕ್ಕಿ ಬೋಂಡ, ಇಡ್ಲಿ ದೋಸೆಗಳನ್ನು ನೆನೆ ಹಾಕುವಾಗ ಒಂದು ಹಿಡಿ ಅವಲಕ್ಕಿಯನ್ನು ಬೆರೆಸುವುದು – ಒಟ್ಟಿನಲ್ಲಿ ಆಗಿನಿಂದಲೂ ನಮ್ಮ ಮನೆಯಲ್ಲಿ ಅವಲಕ್ಕಿಯದೇ ಯಥೇಚ್ಛ ರಾಜ್ಯಭಾರ. ಮೊದಲೇ ಇಷ್ಟಪಡುತ್ತಿದ್ದ ಒಗ್ಗರಣೆಯವಲಕ್ಕಿಯು ನನಗಿನ್ನೂ ಪರಮಾಪ್ತವಾಯಿತು. ಮೈಗ್ರೇನು ತಲೆನೋವಿನ ಕಾರಣವಾಗಿ ನೋವು ನಿವಾರಕಗಳನ್ನು ನುಂಗುವಾಗ, ಅದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣವಾಗಿ ವಾಂತಿಯಾಗುವಾಗ ನನ್ನ ದೇಹ ಸ್ವೀಕರಿಸುವುದು ಎರಡೇ: ಒಂದು ಎಳನೀರು, ಇನ್ನೊಂದು ಈ ಒಗ್ಗರಣೆಯವಲಕ್ಕಿ! ಒಂದು ಸಲವೂ ನನಗೆ ಅವಲಕ್ಕಿಯಿಂದಾಗಿ ಅಜೀರ್ಣವಾಗಿಲ್ಲ; ಹೊಟ್ಟೆಯುಬ್ಬರ ಎದುರಾಗಿಲ್ಲ. ನನ್ನ ಪಾಲಿಗೆ ಮಾತ್ರವಲ್ಲ ನನ್ನ ಬಾಳಿಗೂ ಅವಲಕ್ಕಿ ಒಂಥರಾ ಲಕ್ಕಿ! (ಅದೃಷ್ಟವೇ ಸರಿ).
ನಮ್ಮಜ್ಜಿಯು ಯಾವತ್ತೂ ಫ್ಲೋರ್ಮಿಲ್ಗೆ ಹೋದವರಲ್ಲ. ಮನೆಯಲ್ಲೇ ಬೀಸೆಕಲ್ಲು, ಒನಕೆ, ಒರಳು ಎಲ್ಲವೂ ಪೊಗದಸ್ತಾಗಿದ್ದವು ಮತ್ತು ಅವರು ಅಷ್ಟೇ ಗಟ್ಟಿಗಿತ್ತಿಯಾಗಿದ್ದರು. ದೊಡ್ಡಮಗನ ಮನೆಯಲ್ಲೇ ಇದ್ದ ನಮ್ಮಜ್ಜಿಯ ಜೊತೆಗೆ ಆಗಾಗ ನಮ್ಮ ದೊಡ್ಡಮ್ಮ ತನ್ನ ಪುಟ್ಟ ಮಗಳ ಜೊತೆ ಆಟವಾಡಿಕೊಳ್ಳುತ್ತಿದ್ದ ನನಗೂ ಅವಲಕ್ಕಿ ವಗ್ಗರಣೆಯನ್ನು ರುಚಿಗೆ ಕೊಡುತ್ತಿದ್ದರು. ಆಗೆಲ್ಲಾ ಸಹಜವಾಗಿ ನನ್ನ ಮನಸು ನಮ್ಮಜ್ಜಿ ಕೊಡುತ್ತಿದ್ದ ಅವಲಕ್ಕಿಗೂ ಇದಕ್ಕೂ ಹೋಲಿಸಿ ಸವಿಯುತ್ತಿತ್ತು. ಸ್ವಲ್ಪವೇ ಕೊಟ್ಟರೂ ದೊಡ್ಡಮ್ಮ ಮಾಡುತ್ತಿದ್ದ ಅವಲಕ್ಕಿ ಸಿರಿವಂತಿಕೆಯಿಂದ ತುಂಬಿ ತುಳುಕುತ್ತಿತ್ತು. ಹದವಾದ ಒಗ್ಗರಣೆ, ಸಣ್ಣ ಸಾಸುವೆಯ ಬಳಕೆ, ಕೆಂಪು ಕಡಲೇಬೀಜ, ಕೊತ್ತಂಬರಿ, ಕರಿಬೇವು ದಂಡಿಯಾಗಿ ಹಾಕಿದ್ದ ಆ ಅವಲಕ್ಕಿಯ ಗುಣಗಾತ್ರಗಳೇ ಬೇರೆ. ಬಹುಶಃ ಅವಲಕ್ಕಿಯನ್ನು ಅಂಗಡಿಯಿಂದ ತರುತ್ತಿದ್ದರೆನಿಸುತ್ತದೆ. ಆದರೆ ನಮ್ಮಜ್ಜಿಯದು ಗೃಹತಯಾರಿಕೆ. ವಂದರಿ ಆಡಿದ್ದರೂ ಅಲ್ಲಲ್ಲಿ ಉದುರಿದ ಅವಲಕ್ಕಿಯ ತುಣುಕುಗಳು ಒಂಥರಾ ಮುದ್ದೆ ಮುದ್ದೆ. ಇವೆಲ್ಲವೂ ನನಗೆ ಆಗ ತೋಚುತ್ತಿರಲಿಲ್ಲ. ಈಗ ಅವನ್ನೆಲ್ಲಾ ನೆನಪಿಸಿಕೊಂಡರೆ ಒಂದೊಂದಾಗಿ ಅರ್ಥ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಅಂದಹಾಗೆ ಅವಲಕ್ಕಿಯು ಭತ್ತದ ಬಂಧುವೇ. ಭತ್ತವನ್ನು ಮೂರು ದಿವಸಗಳವರೆಗೆ ನೆನೆಸಲಾಗುವುದು. ತರುವಾಯ ಕೆಲವು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಲಾಗುವುದು.ಆಮೇಲೆ ನೀರನ್ನು ಬಸಿದರೆ ಭತ್ತದ ಸಿಪ್ಪೆ ಬಿರಿದುಕೊಳ್ಳುತ್ತದೆ. ಮರದ ಒನಕೆಯಿಂದ ಕುಟ್ಟಿದಾಗ ಸಿಪ್ಪೆ ಬೇರೆಯಾಗಿ ಅಕ್ಕಿ ಚಪ್ಪಟೆಯಾಗಿ ಅವಲಕ್ಕಿಯಾಗುತ್ತದೆ. ನಮ್ಮಜ್ಜಿ ಮಾರಿಕೆಯ ಅವಲಕ್ಕಿಯನ್ನು ಬಳಸುತ್ತಿರಲಿಲ್ಲ. ತಾವೇ ಸ್ವತಃ ತಯಾರು ಮಾಡಿಕೊಳ್ಳುತ್ತಿದ್ದರು. ಜೊತೆಗೆ ಅಂಗಡಿಯ ರವೆಯನ್ನು ಬಳಸದೇ ಬೀಸುವ ಕಲ್ಲಿನಿಂದ ಅಕ್ಕಿತರಿಯನ್ನು ಮಾಡಿಕೊಂಡು ಅಕ್ಕಿತರಿ ಉಪ್ಪಿಟ್ಟು ಮಾಡುತ್ತಿದ್ದರು. ಈಗ ಯಂತ್ರಗಳ ಮೂಲಕ ಅವಲಕ್ಕಿಯನ್ನು ತಯಾರಿಸುವಾಗ ಒತ್ತಡದ ಆಧಾರದ ಮೇಲೆ ಗಟ್ಟಿ ಅವಲಕ್ಕಿ, ತೆಳು ಅವಲಕ್ಕಿ, ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿಗಳು ತಯಾರಾಗಿ ಅಂಗಡಿಗಳಲ್ಲಿ ಪ್ಯಾಕೇಟಾಗಿ ನಮಗೆ ಲಭಿಸುತ್ತವೆ. ಬೆಳಗಿನ ವೇಳೆಯಲ್ಲಿ ಅವಲಕ್ಕಿಯ ಸೇವನೆ ಒಳ್ಳೆಯದು ಎಂದು ಆಹಾರತಜ್ಞರೇ ಸಲಹೆ ನೀಡಿದ್ದಾರೆ. ಆದರೆ ಅದಕ್ಕೆ ಬಳಸುವ ಜಿಡ್ಡಿನಾಂಶವು ಕಡಮೆಯಿದ್ದು, ಗಾಣದ ಎಣ್ಣೆ ಆಗಿದ್ದರೆ ಒಳ್ಳೆಯದು. ಈರುಳ್ಳಿ, ಕ್ಯಾರೆಟ್, ಶುಂಠಿ, ಸಾಸುವೆ, ಇಂಗು, ಬದನೆಕಾಯಿ, ಕೊತ್ತಂಬರಿ, ಕರಿಬೇವು, ಮೊಸರು ಇವೆಲ್ಲವೂ ಅವಲಕ್ಕಿಯೊಂದಿಗೆ ಜಠರ ಸೇರುವುದು ಇನ್ನೂ ಒಳ್ಳೆಯದು. ಅವಲಕ್ಕಿಯ ಜೊತೆಗೆ ಕರಿದ ಮತ್ತು ಕುರುಕು ತಿಂಡಿಗಳನ್ನು ಸಾಧ್ಯವಾದಷ್ಟೂ ಸೇವನೆ ಮಾಡದಿದ್ದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು. ಎಣ್ಣೆಯನ್ನೇ ಕಾಣಿಸದ ಹಬೆಯಲ್ಲಿ ಬೇಯಿಸುವ ಅವಲಕ್ಕಿಯುಪ್ಪಿಟ್ಟಂತೂ ಇಡ್ಲಿಯಷ್ಟೇ ಆರೋಗ್ಯಕಾರಿ. ಹುಬ್ಬಳ್ಳಿ ಅವಲಕ್ಕಿ ಎಂಬೋ ಥಿಕ್ ಪೋಹಾ ಅನ್ನು ಒಮ್ಮೆ ಪ್ರಯತ್ನಿಸಿ ನೋಡಬೇಕು. ಕೆಲವು ಕಡೆ ವಗ್ಗರಣೆ ಅವಲಕ್ಕಿಯನ್ನು ಅವಲಕ್ಕಿ ಸುಸ್ಲಾ ಎಂದು ಕರೆಯುವರು. ಅಕ್ಷತಾ ರಾಜ್ ಪೆರ‍್ಲ ಅವರ ಅವಲಕ್ಕಿ ಪವಲಕ್ಕಿ ಎಂಬ ಹೆಸರಿನ ಲೇಖನಗಳ ಸಂಗ್ರಹವೊಂದು ಕರಾವಳಿ ಲೇಖಕಿಯರ ಪುರಸ್ಕಾರ ಪಡೆದಿದೆ. ಇದೇ ಹೆಸರಿನ ಮಕ್ಕಳ ಸಿನಿಮಾವೊಂದು 2021 ರಲ್ಲಿ ತೆರೆ ಕಂಡು, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಮಕ್ಕಳ ಒಂದು ಆಟದಲ್ಲಿ ಅವಲಕ್ಕಿ ಪವಲಕ್ಕಿ ಡಾಂ ಡೂಂ ಡಸ್ ಪುಸ್ ಕೊಂಯ್ ಕೊಟಾರ್ ಎಂಬ ಲಯಬದ್ಧ ಹಾಡಿದೆ. ನಾವು ಚಿಕ್ಕವರಿದ್ದಾಗ ಕಾಕನ ಅಂಗಡಿಯಲ್ಲಿ ಅವಲಕ್ಕಿ ಪುರಿಯುಂಡೆ ಅಂತ ಒಂದು ತಿನಿಸು ಸಿಗುತ್ತಿತ್ತು. ಒಮ್ಮೆ ಶ್ರೀಕೃಷ್ಣ ಸನ್ನಿಧಾನ ಇಸ್ಕಾನ್ ದೇಗುಲದಲ್ಲಿ ತುಪ್ಪದ ಅವಲಕ್ಕಿ ಅಂತ ಕೊಟ್ಟಿದ್ದರು. ಆ ಪ್ರಸಾದವೇ ದಿವಿನಾಗಿತ್ತು. ನನ್ನ ಮಡದಿ ಮಾಡುವ ಒಗ್ಗರಣೆಯವಲಕ್ಕಿ ಮತ್ತು ಗೊಜ್ಜವಲಕ್ಕಿಗಳನ್ನು ನಮ್ಮೆಲ್ಲ ಕುಟುಂಬ ಸ್ನೇಹಿಗಳು ಸವಿದಿದ್ದಾರೆ.
ಮೈಸೂರಿನ ನಮ್ಮ ಮನೆಯಿರುವ ಬಡಾವಣೆಯ ಗಣಪತಿ ಪ್ರತಿಷ್ಠಾಪನೆಯಲ್ಲಿ ಪ್ರತಿ ವರುಷ ತಪ್ಪದೇ ಮಾಡುವ ಗೊಜ್ಜವಲಕ್ಕಿಗೆ ಹಲವಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇದೀಗ ಹೊಳೆನರಸೀಪುರದಲ್ಲೂ ಗೊಜ್ಜವಲಕ್ಕಿಗೆ ಪ್ರೇಮಿಗಳು ಹುಟ್ಟಿಕೊಂಡಿದ್ದಾರೆ. ಗಟ್ಟಿ ಅವಲಕ್ಕಿಯನ್ನು ತರಿತರಿಯಾಗಿ (ಅವಲಕ್ಕಿಯ ಎಸಳೊಂದು ಮೂರ್ನಾಲ್ಕು ತುಂಡಾಗುವಷ್ಟು) ಮಿಕ್ಸಿಯಾಡಿಸಿ, ಅದನ್ನು ವಂದರಿ ಆಡಿ, ತೊಳದಿಟ್ಟುಕೊಳ್ಳಬೇಕು. ಈಗಾಗಲೇ ನೆನೆ ಹಾಕಿದ ಹುಣಸೆ ರಸ, ಬೆಲ್ಲ, ಸಾರಿನಪುಡಿ, ಉಪ್ಪು ಬೆರೆಸಿದ ಬಾಣಲೆಗೆ ತುಂಡರಿಸಿದ ಅವಲಕ್ಕಿಯನ್ನು ಮಿಶ್ರಣ ಮಾಡಿ ಆರೇಳು ಗಂಟೆ ಬಿಡಬೇಕು. ತದನಂತರ ಘಾಟು ಆಗದಿರಲೆಂದು ಒಣಕೊಬ್ಬರಿ ತುರಿಯೊಂದಿಗೆ, ಇಂಗು ಮತ್ತು ಕಡಲೇಬೀಜದ ಒಗ್ಗರಣೆ ಕೊಟ್ಟು ಹದವಾಗಿ ಕಲೆಸಬೇಕು. ಒಂದೆರಡು ನಿಮಿಷ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಇದು ನೆನೆದಷ್ಟೂ ರುಚಿ ಜಾಸ್ತಿ. ಇಟ್ಟು ಮಾರನೆಯ ದಿನ ತಿಂದರಂತೂ ಅದ್ಭುತವೇ ಸರಿ. ಆದರೆ ಇದು ಗಂಟಲಿಗೆ ಡ್ರೈ ಎನಿಸುವುದರಿಂದಾಗಿ ಯಥೇಚ್ಛವಾಗಿ ನೀರಿನಾಂಶ ಇರುವ ಮೊಸರು, ಪಾನಕ ಪನಿವಾರಗಳನ್ನು ಸೇವಿಸಬೇಕಷ್ಟೇ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ರುಚಿಯಿರುವ ಅವಲಕ್ಕಿ ಲಡ್ಡು ತಯಾರಿಸಿ ಉಳಿದ ಕುರುಕು ತಿಂಡಿಗಳ ಜೊತೆಯಲ್ಲಿ ಕೊಡುವುದು ವಾಡಿಕೆ. ಒಟ್ಟಿನಲ್ಲಿ ಅವಲಕ್ಕಿಯು ಅಕ್ಕಿಯ ಸೋದರ ಸೋದರಿಯಾಗಿ ಹಲವು ಬಗೆಯ ಸ್ವಾದಿಷ್ಟಕರ ತಿಂಡಿಗಳಿಗೆ ಮೂಲವಾಗಿ ತನ್ನ ರಾಜ್ಯಭಾರವನ್ನು ಅಂದಿನಿಂದಲೂ ಅಜಾತಶತ್ರುವಾಗಿ ಆಳ್ವಿಕೆ ಮಾಡಿಕೊಂಡು ಬರುತ್ತಿದೆ.
ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಅವಲಕ್ಕಿಯ ಕುರಿತಾದ ಲೇಖನ ಬಾಯಲ್ಲಿ ನೀರೂರಿಸುವುದರೊಂದಿಗೆ ಎಲ್ಲರ ಮೆಚ್ಚಿನ ಅವಲಕ್ಕಿಗೆ ರಾಜ ಮರ್ಯಾದೆಯನ್ನೂ ನೀಡಿದಂತಾಯಿತು ಎಂದೆನಿಸಿತು. ತುಂಬಾ ಚೆನ್ನಾಗಿದೆ.
ನಿಜ ಮೇಡಂ, ರಾಜಮರ್ಯಾದೆಯೇ ಸರಿ.
ಸವಿಯುತ್ತಿದ್ದರೆ ರಾಜನಿಗೂ ಮರ್ಯಾದೆಯೇ ಸರಿ !
simply wonderful ಅಂತಾರಲ್ಲ ಹಾಗೆ. ನಿಮ್ಮ ಅಭಿಪ್ರಾಯ ನನ್ನದೂ ಹೌದು. ಧನ್ಯವಾದ
ಬಹಳ ಸೊಗಸಾಗಿದೆ ಸರ್ ಬರಹ. ಒಂದು ಪುಟ್ಟ ವಿಷಯವನ್ನು ತಗೊಂಡು ಅದೆಷ್ಟು ಸೊಗಸಾಗಿ ಅದರ ಪೂರ್ತಿ ಇತಿಹಾಸವನ್ನೇ ತೆರೆದಿಟ್ಟಿರಿ. Very nice.
ಸತ್ಯ ಮೇಡಂ, ಅವಲಕ್ಕಿಯು ಪುಟ್ಟದೇ ಇರಬಹುದು; ಆದರೆ ಅದರ ಕಥನ ಕುತೂಹಲ ಮಾತ್ರ ದೀರ್ಘವೇ
ನಾನಿಷ್ಟು ದಿನ ಬರೆಯದೇ ಬರೀ ತಿನ್ನುತ್ತಿದ್ದವ; ಅದೆಷ್ಟು ಶಾಪ ಹಾಕಿತೋ ಏನೋ, ಶಾಪವೂ ಹಾಕುವಂಥದಲ್ಲ ಅದು
ನಿರುಪದ್ರವಿ; ನೀರಿಗೆ ಬಿದ್ದ ಮೇಲೆ ಎಲ್ಲರೂ ಈಜು ಕಲಿತರೆ ಇದು ಮಾತ್ರ ಮೆತ್ತಗಾಗಿ ಬೇಕಾದ ಹಾಗೆ ಬೆಂಡಾಗುತ್ತದೆ.
ನಿಮ್ಮ ಮೆಚ್ಚುಗೆಗೆ ನನ್ನ ಪ್ರಣಾಮಗಳು
ಬಹಳ ಚೆನ್ನಾಗಿದೆ ಅವಲಕ್ಕಿ ಪುರಾಣ.ಅವಲಕ್ಕಿಯ
ತಿಂಡಿಗಳನ್ನು ಚಪ್ಪರಿಸಿದಂತಾಯಿತು.ಅವಲಕ್ಕಿ ಬಹುಪಯೋಗಿ ಪದಾರ್ಥ ಎನ್ನುವುದು ಸುಳ್ಳಲ್ಲ.
ನಿಜ ಮೇಡಂ, ಇದು ಪುರಾಣವೇ ಸರಿ. ಶ್ರೀಕೃಷ್ಣನೊಂದಿಗೆ ಸೇರಿ ಸಾರ್ಥಕವಾಗಿದೆ
ಹಾಗೆಯೇ ಅಜರಾಮರವಾಗಿದೆ. ಕೃಷ್ಣ ಪರಮಾತ್ಮನ ಜೀವನೋತ್ಸಾಹಕೆ ಅವಲಕ್ಕಿಯೇ
ಮೂಲವಿರಬೇಕು; ಸಂಶೋಧನೆ ಆಗಬೇಕು.
ಮುಖ್ಯವಾಗಿ ಆತನ ಸಂದರ್ಶನ ಆಗಬೇಕು; ಇನ್ನೊಂದು ಲೇಖನಕ್ಕೆ ಆಗುವಷ್ಟು ನನ್ನಲ್ಲಿ
ವಿಷಯಗಳಿದ್ದವು.ಈಗಲೇ ದೀರ್ಘವಾಯಿತೆನಿಸಿ ನಿಲ್ಲಿಸಿದೆ. ನಮ್ಮ ನೆಂಟರೊಬ್ಬರು
ಅಡುಗೆ ಮನೆಯಿಂದ ಮಾಡಿ ತಂದರೂ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ಬಾಯಿಗೆ
ಹಾಕಿಕೊಳ್ಳುತ್ತಿದ್ದರು. ಅಷ್ಟೊಂದು ದಿವ್ಯತೆಯ ಸ್ಥಾನ ಕೊಟ್ಟಿದ್ದರು ಅವರು. ಈಗ ವಯಸಾದ
ಮೇಲೆ ಅವೆಲ್ಲ ನೆನಪಾಗುತ್ತಿದೆ; ವಾಸ್ತವವಾಗಿ ಮರೆತು ಹೋಗಬೇಕಿತ್ತು; ಕೃಷ್ಣಪ್ರಸಾದ ಅಲ್ಲವೇ
ಮರೆತಿಲ್ಲ! ನಿಮ್ಮ ಮೆಚ್ಚುಮಾತಿಗೆ ನನ್ನ ವಂದನೆ.
ಅಬ್ಭಾ ಅವಲಕ್ಕಿಯೇ…ಆಹಾ ನನಗೆ ಇಷ್ಟ ವಾದ ಖಾದ್ಯ ಅದರಲ್ಲೂ ಗೊಜ್ಜ ಅವಲಕ್ಕಿ ನನ್ನ ಫೇವರೇಟ್ ನನ್ನ ಅನ್ನದಾತರಿಗೆ ದೂರ…ಅದನ್ನು ಚೆನ್ನಾಗಿ ಮಾಡುವವರ ಹತ್ತಿರ ನಾಚಿಕೆ ಬಿಟ್ಟು ಕೇಳಿ ಮಾಡಿಸಿಕೊಂಡು ತಿನ್ನುತ್ತೇನೆ..ಸಾರ್..ನೀವು ನಿವೃತ್ತ ರಾದ ಮೇಲೆ ಕುಕ್ಕಿಂಗೆ ಚಾನಲ್ ತೆಗೆಯಿರಿ.. ಸೂಪರ್ ಲೇಖನ..
1. ನಿಮಗೂ ಫೇವರಿಟ್, ನನಗೂ
2. ಗೊಜ್ಜವಲಕ್ಕಿ: ನನ್ನ ಮಡದಿ ಮಾಡುವ ರೀತಿ ಸೂಪರ್; ನೆನಪಿಸಬೇಡಿ; ನಾನವಳಿಗೆ ಮತ್ತೆ ತೊಂದರೆ ಕೊಡಬೇಕಾದೀತು
3. ತಿನ್ನುವ ವಿಷಯದಲ್ಲಿ ನಾಚಿಗೆ ಗೀಚಿಗೆ ಎಲ್ಲವೂ ಊರಾಚೆಗೆ ! ಇಲ್ಲದಿದ್ದರೆ ಲಾಸು ನಾಲಗೆಗೆ. ನಿಮ್ಮ ಮಾತು ಸತ್ಯ
4. ಕುಕ್ಕಿಂಗ್ ಚಾನೆಲ್ ! ಎಂಥ ಐಡಿಯಾ!! ಹೊಳೆದೇ ಇರಲಿಲ್ಲ. ತೆಗೆಯೋದೆ; ಅದರ ಉದ್ಘಾಟನೆಗೆ ನೀವೇ ಫಿಕ್ಸ್,
ಬರಲಾರೆ ಎನ್ನದಿರಿ.
ನಿಮ್ಮ ಮೆಚ್ಚುಗೆಗೆ ಧನ್ಯವಾದ ಮೇಡಂ
ಮನೆ ಗೃಹಿಣಿಯ ಆಪದ್ಬಾಂಧವ, ವಿಶ್ವರೂಪಿ ಅವಲಕ್ಕಿಯು ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವೇ…ನನಗಂತೂ ಎಲ್ಲಕ್ಕಿಂತ ಪ್ರಿಯ!! ಒಂದೂ ಬಿಡದೆ, ಅದರ ಜನ್ಮ ಜಾಲಾಡಿದ ಸುದೀರ್ಘ ಲೇಖನ ಬಾಯಲ್ಲಿ ನೀರೂರಿಸುವಷ್ಟು ಸೂಪರ್!!
ನಿಮ್ಮ ಮಾತು ಸತ್ಯ ಮೇಡಂ…..
ಜನ್ಮ ಜಾಲಾಡು ಎಂಬುದನ್ನು ಸಕಾರಾತ್ಮಕವಾಗಿ ಬಳಸಿದ ನಿಮಗೆ ನನ್ನ ಕೃತಜ್ಞತೆ. ಹೊಸ ಅರ್ಥದ ಪ್ರಯೋಗ, ಇಷ್ಟವಾಯಿತು.
ನೀವು ಅವಲಕ್ಕಿ ತಿನ್ನುವಾಗಲೆಲ್ಲ ಇದು ನೆನಪಾದರೆ ಸಾಕು
ಅಹಾ…ಬಹಳ ರುಚಿಯಾದ ಅವಲಕ್ಕಿಯ ಬಗ್ಗೆ, lucky ಬರಹ!
ನಾವು 2019 ರಲ್ಲಿ ಗುಜರಾತಿನ ಪೋರಬಂದರ್ ನ ‘ಸುದಾಮಪುರಿ’ಗೆ ಭೇಟಿ ಕೊಟ್ಟಿದ್ದೆವು. ದ್ವಾಪರಯುಗದಲ್ಲಿ ಅಲ್ಲಿ ಸುದಾಮನ ಮನೆ ಇತ್ತೆಂಬ ನಂಬಿಕೆ. ಈಗ ಆ ಸ್ಥಳವು ಮಂದಿರವಾಗಿ ಪ್ರವಾಸಿ ಆಕರ್ಷಣೆಯಾಗಿದೆ.ಆಮೇಲೆ ದ್ವಾರಕೆಗೂ ಭೇಟಿ ಕೊಟ್ಟಿದ್ದೆವು. ಅಲ್ಲಿ ನಮಗೆ ಪ್ರಸಾದವಾಗಿ ಒಣ ಅವಲಕ್ಕಿ ಕೊಟ್ಟಿದ್ದರು. ”ಅದನ್ನು ಒಯ್ದು ನಿಮ್ಮ ಅಡುಗೆಮನೆಯ ಅಕ್ಕಿಡಬ್ಬದಲ್ಲಿರಿಸಿ, ಅನ್ನ ಅಕ್ಷಯವಾಗುತ್ತದೆ” ಎಂದಿದ್ದರು ಅಲ್ಲಿಯ ಅರ್ಚಕರು. ಆ ಕ್ಷಣದಲ್ಲಿ ವಿಶಿಷ್ಟ ಭಾವಾನುಭೂತಿಯಾಗಿತ್ತು.
ಹೌದೇ !
ತುಂಬ ಸೋಜಿಗ, ಅವೆಲ್ಲವನು ದರ್ಶಿಸಿದ
ನಿಮ್ಮ ಪ್ರವಾಸ ಪುಣ್ಯ ಹಿರಿದು !
ನಿಮ್ಮ ಮಾತು ಕೇಳಿಯೇ ನಮಗೆ ಅನುಭೂತಿ
ದೊರಕಿದಂತಾಯ್ತು, ಎಷ್ಟು ಸುಂದರ ಹೆಸರು
ಸುಧಾಮ ಪುರಿ !!
ಧನ್ಯವಾದ ಮೇಡಂ, ಈ ಮುಖೇನ ನಿಮ್ಮ ಆ
ಸವಿನೆನಪನ್ನು ಮೆಲುಕು ಹಾಕಿದ್ದಕ್ಕೆ
ಅದ್ಭುತವಾದ ಅವಲಕ್ಕಿಯ ವಿರಾಟ ದರ್ಶನವನ್ನು ಮಾಡಿಸಿದ
ನಿಮ್ಮ ಲೇಖನವು ” ಶ್ರೀ ಕೃಷ್ಣನಿಗೆ ” ಅರ್ಪಣೆ ಸಮರ್ಪಣೆ.
ಧನ್ಯವಾದ ಸರ್…….
Nimma avalakki puraana tumbaane chennagide.
ಹೌದೇ, ಧನ್ಯವಾದ ಸರ್………
ಅವಲಕ್ಕಿ ಬಗೆಗಿನ ತಮ್ಮ ಲೇಖನ ಬಹಳ ಸೊಗಸಾಗಿದೆ ನನ್ನ ಮಗನಿಗೆ ಅವಲಕ್ಕಿ ಅಂದರೆ ಸಾಕು ಮೊಸರು ಎನ್ನುತಾನೆ. ನನಗೂ ಬಿಸಿಬಿಸಿ ಅವಲಕ್ಕಿ ಉಪ್ಪಿಟ್ಟು ಬಹಳ ಇಷ್ಟ. ಕೆಲಸಕ್ಕೆ ಹೋಗುವ ನನ್ನಂತಹ ಮಹಿಳೆಯರಿಗೆ ಅವಲಕ್ಕಿ ಉಪ್ಪಿಟ್ಟು ಆಪತ್ ಬಾಂಧವ. ಮನೆಯವರು ಅವಲಕ್ಕಿ ಉಪ್ಪಿಟ್ಟಿಗೆ ಒಪ್ಪಿಗೆ ನೀಡಿದರೆ ನನ್ನ ಮುಖ ಅರಳುವುದು. ಬಹಳ ಸುಲಭ ಮತ್ತು ರುಚಿಕರ. ನನ್ನ ಅತ್ತೆ ಸೌತ್ ಕೆನರಾದವರಾಗಿರುವುದರಿಂದ ಅವರು ಮಾಡುವ ಪೇಪರ್ ಅವಲಕ್ಕಿ ಮಸಾಲೆ ಬಲು ರುಚಿ
ಹೌದೇ ಮೇಡಂ, ಗೊತ್ತೇ ಇರಲಿಲ್ಲ! ನೀವು ಹೇಳುವುದು ನಿಜ, ಉದ್ಯೋಗಸ್ಥ ಮಹಿಳೆಯರ ಆಪತ್ಬಾಂಧವ.