
ಏನಾದರೂ ಆಗಲಿ ಸುಮ್ಮನಾಗದಿರು
ಬದುಕು ಮುಂದೆ ಸಾಗುತ್ತಲೇ ಇರಲಿ
ನೋವು ನಲಿವುಗಳು ಶಾಶ್ವತವಲ್ಲ
ಬದುಕಿನಲ್ಲಿ ಭರವಸೆಯು ಜೊತೆಗಿರಲಿ
ಜೊತೆಗೆ ಯಾರಿರಲಿ ಯಾರಿರದಿರಲಿ
ಮನ ಎಂದೆಂದಿಗೂ ಧೃತಿಗೆಡದಿರಲಿ
ಮುಂದಿಟ್ಟ ಒಂದೊಂದು ಹೆಜ್ಜೆಯೂ
ಮುಂದುವರೆಯಲಿ ಹಿಂಜರಿಯದೆ
ಯಾರ್ಯಾರೋ ಬಂದು ತಮಗನಿಸಿದಂತೆ
ಆಟವನ್ನು ಆಡಿಹೋಗುವ ಮೈದಾನವಲ್ಲ
ನಮ್ಮ ಬದುಕಿನಲಿ ನಮ್ಮ ಮನಸ್ಸಿನಲಿ
ನಮ್ಮಂತರಂಗ ಬೇರೆ ಯಾರದೋ ಸ್ವತ್ತಲ್ಲ
ಯಾರ್ ಯಾರದೋ ಚುಚ್ಚು ಮಾತಿಗೆ
ನೊಂದು ಸುಮ್ಮನೆ ಸುರಿಸದಿರಿ ಕಣ್ಣೀರು
ಅವರವರ ಕಾರ್ಯ ಮುಗಿದ ಮೇಲೆ
ನಮ್ಮ ಕನಸಿಗೆರಚುವರು ತಣ್ಣೀರು
ನಮ್ಮರಿವು ನಮಗಿರಬೇಕು ಜೀವನದಿ
ಕಣ್ಣ ಮುಂದೆ ಗುರಿಯು ಇರಬೇಕು
ಬಿಟ್ಟ ಬಾಣವು ಗುರಿಯನ್ನು ತಲುಪಿ
ಯಶಸ್ಸು ದೊರೆಯುವಂತಿರಬೇಕು
ನಮ್ಮದೇ ಬದುಕು ನಮ್ಮದೇ ಪಯಣ
ಶಿಸ್ತು ಬದ್ಧತೆಯಿಂದ ಕೂಡಿರಲಿ ಜೀವನ
ಆರು ಮೂರಾಗಲಿ ಮೂರು ಆರಾಗಲಿ
ಮರೆಯದೆ ತೋರೋಣ ನಮ್ಮ ಗಟ್ಟಿತನ
ನಾಗರಾಜ ಜಿ. ಎನ್. ಬಾಡ
ನಮ್ಮದೇ ಶಿಸ್ತು, ನಮ್ಮದೇ ಪಯಣ ಈ ಜೀವನ. ಬಹಳ ಚಂದದ ಕವಿತೆ ಸರ್
ಧನ್ಯವಾದಗಳು ಮೇಡಂ
ಸರಳ ಸಂದರ ಕವಿತೆ ಚೆನ್ನಾಗಿ ಬಂದಿದೆ ಸಾರ್…
ಧನ್ಯವಾದಗಳು ಮೇಡಂ
Beautiful
ಧನ್ಯವಾದಗಳು ಮೇಡಂ
ಆರು ಮೂರಾಗಲಿ ಮೂರು ಆರಾಗಲಿ
ಜೀವನ ಮುಂದಕೆ ಸಾಗಲಿ….ಧೈರ್ಯ ತುಂಬುವ ಸ್ಫೂರ್ತಿದಾಯಕ ಕವನ ಚೆನ್ನಾಗಿದೆ
ಧನ್ಯವಾದಗಳು ಮೇಡಂ
ಏನಾದರಾಗಲಿ ಸುಮ್ಮನಿರು ಎಂದು ನಾನು ನನ್ನ ಮನಕೆ
ಸಮಾಧಾನ ಮಾಡುತ್ತಿರುತ್ತೇನೆ, ಅದು ಸ್ವಲ್ಪವಷ್ಟೇ ಕೇಳಿಸಿಕೊಂಡು
ನನಗೇ ಒಮ್ಮೊಮ್ಮೆ ಉಲ್ಟಾ ಹೊಡೆಯುತ್ತದೆ, ನೀನಲ್ಲ ಬಾಸು, ನಾನು ಎಂದು!
ಅಂತಹುದರಲ್ಲಿ ಏನಾದರಾಗಲಿ ಸುಮ್ಮನಾಗದಿರು ಎಂದು ನಿಮ್ಮ ಪದ್ಯದ
ಮೊದಲ ಸಾಲು ಓದಿದಾಗ ಹ್ಙಾಂ ಎಂದುಕೊಂಡೆ. ಓದುತ್ತಿದ್ದಂತೆ,
ಹೌದು, ಇವರು ಸಹ ಬೇರೊಂದು ಬಗೆಯಲಿ ಮುಖಾಮುಖಿಯಾಗಿದ್ದಾರೆಂದು
ಸಮಾಧಾನಿಸಿ ಕೊಂಡೆ. ಅಂತೂ ನಿಮ್ಮ ಕವಿತೆಯಿಂದ ಏನಾದರೊಂದನು
ಕೊಳ್ಳದೇ ನಾ ಬಿಡೆನು. ಲಯವಿಲ್ಲದ ಬದುಕನ್ನು ಕುರಿತು ಲಯಬದ್ಧವಾಗಿ
ಬರೆಯು ನೀವು ನನಗೆ ಇಷ್ಟ; ಬರೆಹಗಳು ಇನ್ನೂ ಬರಲಿ, ಪ್ರಣಾಮಗಳು
ತಮ್ಮ ವಿಶ್ಲೇಷಣೆಯನ್ನು ಓದಿ, ತುಂಬ ಖುಷಿ ಆಯ್ತು ಸರ್, ಧನ್ಯವಾದಗಳು
ಮೂರನೇ ಪ್ಯಾರಾ ಇಷ್ಟವಾಯಿತು.
ಸ್ವಲ್ಪ ಬೋಧನಾಶೈಲಿ ಮತ್ತು ವರದಿಗಾರಿಕೆ ಶೈಲಿ ಬಿಟ್ಟು
ನಮ್ಮೊಳಗೆ ನಾವೇ ಮಾತಾಡಿಕೊಳ್ಳುವ ಶೈಲಿಯಲಿ ನೀವು ಪ್ರಯತ್ನ
ಪಟ್ಟರೆ ಇನ್ನಷ್ಟು ಕವಿತೆಯ ಗಂಧ ಪಸರಿಸೀತು, ಇದು ನನ್ನ ಅನಿಸಿಕೆ.
ಅನ್ಯಥಾ ಬೇಡ. ನಮಸ್ಕಾರ
ತಮ್ಮ ಸಲಹೆ ಸೂಚನೆಗಳಿಗೆ ಅನಂತ ಧನ್ಯವಾದಗಳು..