‘ಚಿಮಣಿ’ಯನ್ನು ಮರೆಯಲಾದೀತೆ?

Share Button
Surekha Bhimaguli1

ಸುರೇಖಾ ಭಟ್ ಭೀಮಗುಳಿ

“ಚಿಮಣಿ” ಎಂದಾಗ ಬಾಲ್ಯದ ನೆನಪುಗಳು ಸಾಲುಗಟ್ಟಿ ನಿಲ್ಲುತ್ತವೆ. ಚಿಮಣಿದೀಪಕ್ಕೂ ನಮಗೂ ಎಲ್ಲಿಲ್ಲದ ನಂಟು. ಮಳೆಗಾಲದಲ್ಲಿ ಕರೆಂಟು ಇದ್ದರೇ ವಿಶೇಷ ! ಜೋರು ಗುಡುಗು-ಸಿಡಿಲು- ಮಳೆಯಾಯಿತೆಂದರೆ ಇಲಾಖೆಯವರೆ ಸಂಪರ್ಕ ತೆಗೆದುಬಿಡುತ್ತಾರೆ … ಮತ್ತೆ ಅದು ನಮ್ಮ ಒಳ್ಳೆಯದಕ್ಕೆ… ಎಂಬ ನಂಬಿಕೆಯೊಂದು ನಮ್ಮಲ್ಲಿತ್ತು…. ಹಾಗೇ ಮಲೆನಾಡಿನ ಮಳೆಗಾಲದ ರಾತ್ರಿಗಳಿಗೆ ನಾವೆಂದೂ ವಿದ್ಯುತ್ ದೀಪಗಳನ್ನು ನೆಚ್ಚಿಕುಳಿತವರಲ್ಲ…

ಹೋಂವರ್ಕ್ ಸಹ ಚಿಮಣಿ ಬುಡ್ಡಿಯ ಸುತ್ತ ಕುಳಿತು ಮುಗಿಸಿಕೊಳ್ಳಬೇಕಾದ ಅನಿವಾರ್ಯತೆ…. ಅರ್ಧಗಂಟೆ – ಒಂದು ಗಂಟೆ ದೀಪದ ಬುಡದಲ್ಲಿ ಕುಳಿತು ಓದುವ ಕಾರಣ ನಮ್ಮ ಮೂಗಿನ ಬುಡದಲ್ಲಿ “ಮೀಸೆ” ಮೂಡುತ್ತಿತ್ತು… ನಮ್ಮ ಮುಖವೇನು ನಮಗೆ ಕಾಣುತ್ತಿರಲಿಲ್ಲವಲ್ಲ !… ಎದುರಿನವರ ಮೀಸೆ ನೋಡಿ, ತಮಾಷೆ ಮಾಡುತ್ತಿದ್ದೆವು… ಅದು ಹಾಗೇಕೆ ಮೀಸೆ ಮೂಡುತ್ತದೆ ? ಎಂಬ ಪ್ರಶ್ನೆಯಾಗಲಿ.. ಅದಕ್ಕುತ್ತರ ಹುಡುಕುವ ಪ್ರಯತ್ನವಾಗಲಿ ಮಾಡಿದ ನೆನಪಿಲ್ಲ….. ದೀಪದ ಬೆಳಕಿನ ಹತ್ತಿರ ಕುಳಿತ ಪರಿಣಾಮ ಜ್ವಾಲೆಯಿಂದ ಹೊರಟ ಇಂಗಾಲದ ಡೈ ಆಕ್ಸೈಡ್ ಸಹ ಮೂಗಿನ ಹೊಳ್ಳೆಗಳನ್ನು ಪ್ರವೇಶಿಸ ಹೊರಟು ಮೀಸೆ ಮೂಡಿತ್ತು ಎಂಬುದರ ಜ್ಞಾನೋದಯ ಮತ್ತೆ ಆಯಿತು…. ಹೀಗೆ ಓದುತ್ತಾ ಕೂಳಿತಾಗ ಯಾವಾಗಾದರೊಮ್ಮೆ ಏನೋ ಸುಟ್ಟ ವಾಸನೆ ಬಂದಂತಾಗುತ್ತಿತ್ತು…  ನೋಡಿದರೆ ಎದುರಿಗೆ ಕುಗುರುತ್ತಾ(ನಿದ್ದೆ ತೂಗುತ್ತಾ) ಕುಳಿತವರ “ಕರ್ಲಿ ಹೇರ್” ಕರಟಿ ಹೋಗಿರುತ್ತಿತ್ತು… ಪಕ್ಕದವರು ತಿವಿದು ಎಬ್ಬಿಸುತ್ತಿದ್ದರು…..  ಒಂದಲ್ಲ ಒಂದು ದಿನ ನಮ್ಮೆಲ್ಲರಿಗೂ ಈ ಅನುಭವ ಸಾಮಾನ್ಯ.

Kerosine lamp

ಚಿಮಣಿಯನ್ನು ಯಾವ ಲೋಹದಿಂದ ತಯಾರಿಸಲಾಗುತ್ತಿತ್ತು ? ನಾವು ನೋಡುತ್ತಿದ್ದ ಚಿಮಣಿಗಳು ತಮ್ಮ ಮೂಲ ಬಣ್ಣವನ್ನು ಮರೆಮಾಚಿ ಕಪ್ಪು ಬಣ್ಣದಿಂದ ಶೋಭಿಸುತ್ತಿದ್ದವು. ಒಲೆಯ ಮೇಲ್ಭಾಗದಲ್ಲಿ ಅದಕ್ಕೆಂದೇ ಇರುತ್ತಿದ್ದ ಗೂಡು. ಒಂದು ಬೆಂಕಿ ಪಟ್ಟಣ ಮತ್ತು ಚಿಮಣಿ ಅದರಲ್ಲಿ ವಿರಾಜಮಾನವಾಗಿರುತ್ತಿದ್ದವು ! ಒಲೆಯ ಮೇಲ್ಬಾಗದ ಗೂಡುಗಳಲ್ಲೇ ಏಕೆ ? ಬಿಸಿ ಇರುವ ಜಾಗದಲ್ಲಿ ಇಡದೇ ಹೋದರೆ ಬೆಂಕಿ ಪೊಟ್ಟಣ ತನ್ನ ಕರ್ತವ್ಯದಿಂದ ಹಿಂದೆ ಸರಿದೀತು ಎಂಬ ಭಯವಿರಬೇಕು ! ಆ ಚಿಮಣಿಗಳು ಜೀವ ತಳೆದ ಮೇಲೆ ಸೋಪನ್ನಾಗಲಿ, ಬ್ರೆಷನ್ನಾಗಲಿ, ಬೂದಿಯನ್ನಾಗಲಿ, ತೆಂಗಿನ ನಾರನ್ನಾಗಲಿ, ಕಡೇಪಕ್ಷ ಒರೆಸುವ ಬಟ್ಟೆಯನ್ನಾಗಲೀ ಬೇಟಿಯಾಗುವ ಪುಣ್ಯವನ್ನು ಪಡೆದು ಬಂದಿರಲಿಲ್ಲ ! ಆಗಾಗ ಸಂಜೆ ಹೊತ್ತಿನಲ್ಲಿ ಅವುಗಳ ಮುಚ್ಚಲು ತೆಗೆದು, ಬತ್ತಿ ಗಿಡ್ಡವಾಗಿದ್ದರೆ ಹಳೆಯ ಹತ್ತಿ ಬಟ್ಟೆ ತುಂಡನ್ನು ತೂರಿಸಿ, ಚಿಮಣಿಯ ಹೊಟ್ಟೆಗೆ ಒಂದಿಷ್ಟು ಸೀಮೆ ಎಣ್ಣೆಯನ್ನು ಹುಯ್ದು ಸಿದ್ಧಗೊಳಿಸುತ್ತಿದ್ದರು. ನನಗೆ ಮತ್ತು ನನ್ನ ಅಕ್ಕ ಒಬ್ಬಳಿಗೆ ಸೀಮೆ ಎಣ್ಣೆ ಪರಿಮಳ(?) ತುಂಬಾ ಇಷ್ಟ ! (ಪೆಟ್ರೋಲ್ ಪರಿಮಳ ಇನ್ನೂ ಇಷ್ಟ !!!) ಹಾಗೇ…. ನಾವಿಬ್ಬರೂ ಚಿಮಣಿ ದೀಪದ ನಿರ್ವಹಣೆ ಹೊಣೆ ಹೊತ್ತ ಹಿರಿಯರನ್ನು ಕಾಡಿ-ಬೇಡಿ, ಕೈಗೊಂದು ಹನಿ ಸೀಮೆ ಎಣ್ಣೆಯನ್ನು ಹಾಕಿಸಿಕೊಂಡು ಮೂಸುತ್ತಾ ಕೂರುತ್ತಿದ್ದೆವು !!!!

ಚಿಮಣಿ ಬುಡ್ಡಿಯನ್ನು ಉರಿಸುವ ಸಮಯದಲ್ಲಿ ಹಿಂದಿನ ದಿನದ ಕರಿ ತೆಗೆದು, ಬತ್ತಿಯನ್ನು ಸ್ವಲ್ಪ ಮೇಲೆತ್ತಿ ಹೊತ್ತಿಸಿಟ್ಟರೆ ಅತ್ತ ಸಾಯದೆ – ಇತ್ತ ಬದುಕದೆ ತನ್ನ ಸ್ಥಿರವಾದ ಜ್ವಾಲೆಯಿಂದ ಬೆಳಕನ್ನು ಹೊರಸೂಸುತ್ತಾ ಧನ್ಯವಾಗುತ್ತಿದ್ದವು….. ಚಿಮಣಿ ಎಂದರೆ ಕಾರ್ಖಾನೆಯ ಹೊಗೆಕೊಳವೆ ಎಂಬ ಅಂಶ ನಮ್ಮ ಶಾಲಾದಿನಗಳಲ್ಲಿ ತಿಳಿದಾಗ ನನ್ನನ್ನೊಂದು ಅನುಮಾನ ಕಾಡಹತ್ತಿತು. ಆಂಗ್ಲರು ನಮ್ಮ ಕನ್ನಡದ ಚಿಮಣಿ ಪದವನ್ನು ಕದ್ದು ಹಾರಿಸಿದರೋ ಅಥವಾ ನಾವೇ ಆ ಪದವನ್ನು ಆಂಗ್ಲರಿಂದ ಎರವಲು ಪಡೆದದ್ದೋ ? ಎಂದು. (ಅವರಾದರೆ ಕದ್ದದ್ದು….. ನಾವಾದರೆ ಎರವಲು ಪಡೆದದ್ದು !).

ಮತ್ತೆ ಮತ್ತೆ ಸ್ವಲ್ಪ ಪೇಟೆ ಪರಿಣಾಮ ನಮ್ಮ ಮನೆಯ ಮೇಲಾದಂತೆ ಲ್ಯಾಂಪ್ ಎಂಬ ಬುರುಡೆ ದೀಪ ನಮ್ಮ ಮನೆಯನ್ನು ಪ್ರವೇಶಿಸಿತು…. ಜೊತೆಗೊಂದು ತಗಡನ್ನು ಹೊಂದಿ ಗೋಡೆಗೆ ನೇತು ಹಾಕಲು ಅನುಕೂಲವಿರುತ್ತಿದ್ದ ಆ ಲ್ಯಾಂಪ್ – ಗಾಜಿನ ಬುಡವನ್ನು ಹೊಂದಿ ತನ್ನಲ್ಲೆಷ್ಟು ಎಣ್ಣೆ ಇದೆ ಎಂಬ ಅರಿವನ್ನು ಬಿಟ್ಟುಕೊಡಲು ಸಮರ್ಥವಾಗಿತ್ತು. ಜೊತೆಗೆ ತಿರುಪನ್ನು ಹೊಂದಿ ಬತ್ತಿಯನ್ನು ವ್ಯತ್ಯಯಗೊಳಿಸಿ ಜ್ವಾಲೆಯನ್ನು ಹಿಡಿತದಲ್ಲಿಡುವ ಅನುಕೂಲವನ್ನು ಹೊಂದಿತ್ತು. ಮೇಲಿನಿಂದ ಗಾಜಿನ ಬುರುಡೆ ಹೊಂದಿದ ಅದು ಪೇಟೆ ಮನೆಗೆ ತಕ್ಕುದಾಗಿಯೇ ಇತ್ತು. ಗಾಜನ್ನು ಅಗಾಗ ಒರೆಸಬೇಕಾದ ಕಾರಣ ಒಡೆಯುವ ಸಂಭವವೂ ಹೆಚ್ಚಿತ್ತು !

kerosine lamp1

ಹೊಸದಾಗಿ ಬಂದ ಲ್ಯಾಂಪ್ ಕಮ್ಮಕ್ಕಿ ಮನೆಯವರ ಮನ ಗೆಲ್ಲುವಲ್ಲಿ ಅಸಹಾಯಕವಾಯಿತು. ನನ್ನಣ್ಣನಿಗೋ ಬೆಳಕು ಹೆಚ್ಚು ಇದ್ದಷ್ಟೂ ಖುಷಿ. ಅವನು ತನ್ನದೇ ಆದ ರಾಕ್ಷಸ ಚಿಮಣಿಗಳನ್ನು ಸೃಷ್ಟಿಸಿದ. ಸಣ್ಣ ಬಾಯಿಯ- ದೊಡ್ಡ ಬಾಟಲಿ… ಅಷ್ಟೆಲ್ಲಾ ಬಿಗುಮಾನವೇಕೆ ? ಎಲ್ಲೊ ಸಿಕ್ಕ ಬೀರು ಬಾಟಲಿಗೆ ಸೀಮೆ ಎಣ್ಣೆ ಸುರಿದು, ಅಮ್ಮನ ಹತ್ತಿಸೀರೆಯ ತುಂಡೊಂದನ್ನು ಬತ್ತಿಯಾಗಿಸಿ ಹೊತ್ತಿಸಿಟ್ಟ. ಅವೋ ತಮ್ಮ ಜ್ವಾಲೆಯಿಂದ ಸಾಕಷ್ಟು ಬೆಳಕನ್ನು- ಜೊತೆಗೆ ಸಾಕಷ್ಟು ಹೊಗೆಯನ್ನೂ ಹೊರ ಚೆಲ್ಲುತ್ತಿದ್ದವು. ಸ್ವಲ್ಪ ಹೊತ್ತಿಗೆ ಮಂಕಾಗುತ್ತಿದ್ದವು. ಅಣ್ಣ ಅವನ್ನು ಸ್ವಲ್ಪ ಬಗ್ಗಿಸಿ ಒಳಗಿರುವ ಸೀಮೆ ಎಣ್ಣೆಯನ್ನು ಬತ್ತಿ ಕುಡಿಯುವಂತೆ ಮಾಡುತ್ತಿದ್ದ. ಮತ್ತೆ ಅವು ಪ್ರಜ್ವಲಿಸುತ್ತಿದ್ದವು ! ಅವು ಗಾಜಿನ ಬಾಟಲಿಗಳಾದ ಕಾರಣ ನಾವದನ್ನು ಮುಟ್ಟಲು ಹೋಗಿತ್ತಿರಲಿಲ್ಲ. ಅವುಗಳು ಹೆಚ್ಚು ಸೀಮೆ ಎಣ್ಣೆ ಬಯಸುತ್ತಿದ್ದರಿಂದ ಅಮ್ಮ- ಅಕ್ಕಂದಿರಿಗೂ ಅದರ ಮೇಲೆ ಒಲವು ಮೂಡಲಿಲ್ಲ. ಒಟ್ಟಿನಲ್ಲಿ ಅಣ್ಣ ಸೃಷ್ಟಿಸಿದ ರಾಕ್ಷಸ ಚಿಮಣಿಗಳು ಅಣ್ಣನನ್ನೇ ನೆಚ್ಚಿಕೊಂಡಿದ್ದವು !

ಈಗ ನಮ್ಮ ಮನೆಯಲ್ಲಿ ಚಿಮಣಿ ದೀಪವೂ ಇಲ್ಲ. ಲ್ಯಾಂಪ್ ಸಹ ಇಲ್ಲ.  ಊರಿನ ಮನೆಯಲ್ಲಿ ಇಂದಿಗೂ ಚಿಮಣಿ ದೀಪದ ಬಳಕೆ ಇದೆ.  ಒಲೆ ಹೊತ್ತಿಸುವ ಸಮಯದಲ್ಲಿ ಹೊತ್ತಿಸಿಟ್ಟು ಅದರಲ್ಲಿ ಅಡಿಕೆ ಹಾಳೆಗಳನ್ನು ಹೊತ್ತಿಸಿ, ಬಚ್ಚಲು ಮನೆಯ ಒಲೆ ಹೊತ್ತಿಸುವ ಕ್ರಮ ಇಂದಿಗೂ ಜಾರಿಯಲ್ಲಿದೆ. ಕರೆಂಟು ಕೈಕೊಟ್ಟ ಹೊತ್ತಿನಲ್ಲಿ ಬೆಳಕಿಗಾಗಿ ಎಮರ್ಜನ್ಸಿ ಮತ್ತು ಸೋಲಾರ್ ದೀಪಗಳು ಹಳ್ಳಿ ಮನೆಯಲ್ಲಿ ಜಾಗ ಗಿಟ್ಟಿಸಿವೆ ! ಆದರೆ ಈಗಲೂ ಮಲೆನಾಡಿನ ಮಳೆಗಾಲದಲ್ಲಿ ವಾರಗಟ್ಟಲೆ ಬೇಟಿಕೊಡಲೊಪ್ಪದ ಸೂರ್ಯ – ಊರ ಕಡೆ ಮುಖ ಹಾಕದ ಕರೆಂಟು – ನಿಮ್ಮನ್ನು ಬಿಟ್ಟು ಹೋಗೋದಿಲ್ಲ ಎಂದು ಹಠಹೂಡಿ ಕುಳಿತ ಮಳೆರಾಯರ ಮಧ್ಯದಲ್ಲಿ ಚಿಮಣಿ ದೀಪ ಅನಿವಾರ್ಯವಾಗಿಬಿಡುತ್ತದೆ – ಹಳೆಗಂಡನ ಪಾದವೇ ಗತಿ ಎನ್ನುವಂತೆ !

ನನ್ನ ನೆನಪಿನ ಬುತ್ತಿಗೆ ಇಷ್ಟೆಲ್ಲ ನೆನಪುಗಳನ್ನು ಕಟ್ಟಿಕೊಟ್ಟ ಚಿಮಣಿಯನ್ನು ಮರೆಯಲಾದೀತೇ ?…..  ಮತ್ತು ಮರೆಯಬೇಕೇಕೆ ?

 

 

– ಸುರೇಖಾ ಭಟ್ ,  ಭೀಮಗುಳಿ

 

7 Responses

  1. savithri s bhat says:

    ಚಿಮಿನಿದೀಪ ಲೇಖನ ನನಗೂ ಬಾಲ್ಯದ ನೆನಪು ತ೦ದಿತು .ತು೦ಬಾ ಚೆನ್ನಾಗಿ ಬರೆದಿರುವಿರಿ .ಸುರಹೊಂನೆಗೆ ಧನ್ಯವಾದ.

  2. Hema says:

    “ನೆನಪುಗಳನ್ನು ಕಟ್ಟಿಕೊಟ್ಟ ಚಿಮಣಿಯನ್ನು ಮರೆಯಲಾದೀತೇ ?….. ಮತ್ತು ಮರೆಯಬೇಕೇಕೆ ?”..ಇದು ಅಪ್ಪಟ ಸತ್ಯ. ಗ್ರಾಮೀಣ ಭಾಗದಲ್ಲಿ ಬಾಲ್ಯ ಕಳೆದವರಿಗೆ ನೆನಪು ಮರುಕಳಿಸುವಂತೆ ಮಾಡುವ ಬರಹ. ಧನ್ಯವಾದಗಳು.

  3. Sneha Prasanna says:

    ಚೆನ್ನಾಗಿದೆ ಮೇಡಂ ನಿಮ್ಮ ಸೊಗಸಾದ ನಿರೂಪಣೆ,ಮತ್ತು ಅನುಭವ.:)

Leave a Reply to ಸುರೇಖಾ ಭೀಮಗುಳಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: