ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-1

Share Button
Vishwanath Panjimogaru

ವಿಶ್ವನಾಥ, ಪಂಜಿನಮೊಗರು

ಸಂಗೀತವೆನ್ನುವುದು ಕೇವಲ ಮನೋರಂಜನೆಗಾಗಿ, ದೈಹಿಕ ಅಥವಾ ಮಾನಸಿಕ ಶಾಂತಿ, ತೃಪ್ತಿಗಾಗಿ ಮಾತ್ರ ಇರುವಂತಹದು ಎನ್ನುವುದು ತಪ್ಪು ಕಲ್ಪನೆ. ಭಗವಂತನ ಸಾಕ್ಷಾತ್ಕಾರಕ್ಕೆ ಪೂಜೆ, ಜಪ, ತಪಸ್ಸು, ಧ್ಯಾನದಂತೆ ಸಂಗೀತ ವೂ ಒಂದು ಸಾಧನ. ಈ ರೀತಿ ನಾದಸಾಧನೆಯ ಮೂಲಕ ಭಗವಂತನ ನಾಮಸಂಕೀರ್ತನೆಯನ್ನು ಮಾಡಬಹುದೆಂಬ ಮಾರ್ಗೋಪಾಯವನ್ನು ಈ ಹಿಂದೆ ಬದುಕಿ ಬಾಳಿದ ಈಗ ಕೀರ್ತಿಶೇಷರಾಗಿರುವ ಹಲವಾರು ನಾದೋಪಾಸಕರು ತಮ್ಮ ಕೃತಿ ಗಳ ಮೂಲಕ ಶ್ರುತಪಡಿಸಿದ್ದಾರೆ.
Muthuswami_Dikshitar

ಅಂಥಹ ನಾದೋಪಾಸಕರಲ್ಲಿ ಸುಮಾರು ಹದಿನೆಂಟನೇ ಶತಮಾನದಲ್ಲಿ ಬಾಳಿ ಬದುಕಿದ ಕರ್ನಾಟಕ ಸಂಗೀತ ತ್ರಿಮೂರ್ತಿಗಳೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರೂ ಒಬ್ಬರು. ಮಹಾನ್ ವಿರಕ್ತರೂ, ಎಂದೂ ನರಮನುಷ್ಯರನ್ನು ಸ್ತುತಿಮಾಡದವರಾದ ದೀಕ್ಷಿತರು ಭಗವದ್ಭಕ್ತಿಯಲ್ಲಿಯೇ ಸಾಯುಜ್ಯ ಕಂಡವರು. ದೀಕ್ಷಿತರು ತಮ್ಮ ನಿತ್ಯಪೂಜೆಗೆ ಉಪಯೋಗಿ ಸುತ್ತಿದ್ದುದು ಸೋಮಾಸ್ಕಂದಪಾರ್ವತೀ ಮೂರ್ತಿಯನ್ನು ಅಂದರೆ ಈಶ್ವರ-ಸುಬ್ರಹ್ಮಣ್ಯನ ಸಮೇತ ಪಾರ್ವತೀ ವಿಗ್ರಹವನ್ನು ಹಾಗೆಯೇ ಇವರ ಇಷ್ಟದೈವ ಸುಬ್ರಹ್ಮಣ್ಯಸ್ವಾಮಿ. ಆದರೂ ಯಾವೂದೇ ಬೇಧ-ಭಾವವಿಲ್ಲದೇ ಎಲ್ಲಾ ದೇವಾನುದೇವತೆಯರ ಕುರಿತು ಕೃತಿ ರಚಿಸಿದ್ದಾರೆ. ಆದರೆ ಸಂಖ್ಯೆಯ ಲೆಕ್ಕ ದಲ್ಲಿ ನೋಡಿದರೆ ಅತೀ ಹೆಚ್ಚು ಕೃತಿ ರಚಿಸಿದ್ದು ಶಿವ-ಶಕ್ತಿಯರ ಕುರಿತು. ಜಗದ ಆದಿದಂಪತಿಗಳು, ಜಗನ್ಮಾತಾ-ಪಿತರೂ ಆಗಿರುವ ಪಾರ್ವತೀ ಪರಮೇಶ್ವರರನ್ನು ಸಾಂಕೇತಿಕವಾಗಿ ಪಕೃತಿ-ಪುರುಷ ರೂಪದಲ್ಲಿ ನೋಡುವ ದೃಷ್ಟಿಕೋನ ನಮ್ಮಲ್ಲಿ ಚಾಲ್ತಿಯಲ್ಲಿದೆ. ದೀಕ್ಷಿತರ ಶಿವ-ಶಕ್ತಿಯರ ಕುರಿತ ಕೃತಿಗಳ ಲೆಕ್ಕಾಚಾರವನ್ನು ನೋಡಿದರೆ ಪ್ರಕೃತಿ ಪುರುಷರ ಸಮ್ಮಿಲನ ವಾದಂತೆ ಕಾಣುತ್ತದೆ. ಪ್ರಕೃತಿಗೆ ಮೊದಲಸ್ಥಾನ(ತಾಯಿಗೆ ಮೊದಲ ಪ್ರಾಶಸ್ತ್ಯ) ದೀಕ್ಷಿತರು ರಚಿಸಿದ ದೇವಿಕೃತಿಗಳು ಸುಮಾರು ೧೬೯. ಪುರುಷನಿಗೆ ನಂತರದ ಸ್ಥಾನ(ತಂದೆಯ ಸ್ಥಾನ ನಂತರದ್ದು) ದೀಕ್ಷಿತರ ಶಿವಪರ ಕೃತಿಗಳು ಸುಮಾರು ೧೩೦.
ಇರಲಿ ಈಗ ನಾವು ದೀಕ್ಷಿತರ ಶಿವಪರ ಕೃತಿಗಳನ್ನು ನೋಡಿದರೆ, ಸಾಕ್ಷಾತ್ ಮಹಾದೇವನೇ ಅವರ ಕೃತಿಗಳ ಮೂಲಕ ತಾಂಡವವಾಡುತ್ತಿದ್ದಾನೆಯೋ ಎಂಬಂತೆ ಭಾಸವಾಗುತ್ತದೆ. ಇಲ್ಲಿ ಭಕ್ತಿಯು ತುಂಬು ನಾದವಾಹಿನಿ ಯಾಗಿ ದೀಕ್ಷಿತರ ಕೃತಿಗಳ ಮೂಲಕ ಹರಿಯುವ ಕಲ್ಪನೆ ಮೂಡುತ್ತದೆ. ಒಂದೊಂದು ಕೃತಿಗಳಲ್ಲಿಯೂ ಲಿಂಗಸ್ವರೂಪಿಯಾದ ಮಹಾದೇವನ ವಿವಿಧ ಚಿತ್ರಣಗಳನ್ನು ಕೊಡುತ್ತಾರೆ. ತದೇಕಚಿತ್ತದಿಂದ ದೀಕ್ಷಿತರ ಶಿವಪರ ಕೃತಿಯನ್ನು ಆಲಿಸಿದರೆ ನಮ್ಮನ್ನು ನಾವು ಮರೆತು ಧ್ಯಾನಸ್ಥಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಯಾವ ಅನುಮಾನವೂ ಇಲ್ಲ.

ದೀಕ್ಷಿತರ ಶಿವಪರ ಕೃತಿಗಳಲ್ಲಿ ವಿಶೇಷವೆನಿಸಿದವು ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳು, ಪಂಚಭೂತ ಲಿಂಗ ಕೃತಿಗಳು, ತಿರುವಾರೂರು ಪಂಚಲಿಂಗ ಕೃತಿಗಳು ಪ್ರಮುಖವಾದವು.

೧ ಶ್ರೀ ತ್ಯಾಗರಾಜ ವಿಭಕ್ತಿ ಕೃತಿಗಳು :
ಈ ಕೃತಿಗುಚ್ಛವನ್ನು ಶಿವನವಾವರಣ ಕೃತಿಗಳೆಂದೂ ಕರೆಯುತ್ತಾರೆ. ತಿರೂವಾರೂರಿನ ತ್ಯಾಗರಾಜಸ್ವಾಮಿ(ಶಿವ)ಯನ್ನು ಕುರಿತ ಸ್ತುತಿಗೀತಗಳೇ ತ್ಯಾಗರಾಜ ವಿಭಕ್ತಿ ಕೃತಿಗಳು. ದೀಕ್ಷಿತರು ಈ ಕೃತಿಗಳನ್ನು ವಿಭಕ್ತಿಕೃತಿಗಳೆಂದು ಹೆಸರಿಸಿ ಸಮುದಾಯ ಕೃತಿ(ಗುಂಪು ಕೃತಿ)ಯಾಗಿಸಿ ರಚಿಸಿದ್ದಾರೆ. ಸಂಸ್ಕೃತ ಭೂಯಿಷ್ಟವಾದ ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳು ದೀಕ್ಷಿತರ ಇತರ ಶಿವಪರ ಕೃತಿಗಳಿಗಿಂತ ಕ್ಲಿಷ್ಟಶೈಲಿಯಲ್ಲಿವೆ. ಆದರೂ ಇಲ್ಲಿಯ ಅಲಂಕಾರ, ಆದಿ-ಅಂತ್ಯ ಪ್ರಾಸಗಳು, ಉತ್ಕೃಷ್ಟವಾದ ಪದಪುಂಜಗಳನ್ನು ಬಳಸಿ ರಚಿಸಿದ ರಚನಾ ಕೌಶಲ್ಯ ಹಾಗೂ ಅತೀ ಮುಖ್ಯವಾಗಿ ಪರಮೇಶ್ವರನ ಗಂಭೀರ ಭಾವಕ್ಕೆ ಸರಿಯಾಗಿ ಇಲ್ಲಿಯ ಕೃತಿಗಳಲ್ಲಿ ಮಡುಗಟ್ಟಿದಂತಿರುವ ಘನಗಂಭೀರ ಛಾಯೆ, ಸಾಹಿತ್ಯದ ಬಿಗಿ, ಸಂಗೀತದ ನಿಕಟತೆ, ಭಕ್ತಿಯ ಗಾಢಭಾವ ವಂತೂ ವಿದ್ವದ್‌ರಸಿಕರ ಮನಮುಟ್ಟುವಂತಿದೆ. ಆದರೂ ಈ ಕೃತಿಗಳು ಕಛೇರಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇಲ್ಲ ಎನ್ನುವುದೇ ವಿಷಾದನೀಯ. ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳ ವಿವರ ಇಂತಿವೆ.

ಪ್ರಥಮ ವಿಭಕ್ತಿ ಕೃತಿ             :    ತ್ಯಾಗರಾಜೋ ವಿರಾಜತೇ, ಅಠಾಣ, ರೂಪಕ ತಾಳ
ದ್ವಿತೀಯ ವಿಭಕ್ತಿ ಕೃತಿ           :    ತ್ಯಾಗರಾಜಂ ಭಜರೇರೇ ಚಿತ್ತ, ಯದುಕುಲ ಕಾಂಭೊಜಿ, ಛಾಪು ತಾಳ
ತೃತೀಯ ವಿಭಕ್ತಿ ಕೃತಿ           :   ತ್ಯಾಗರಾಜೇನ ಸಂರಕ್ಷಿತೋಹಂ ಸಾಳಗ, ಭೈರವಿ, ಆದಿತಾಳ
ಚತುರ್ಥ ವಿಭಕ್ತಿ ಕೃತಿ           :    ತ್ಯಾಗರಾಜಾಯ ನಮಸ್ತೇ ನಮಸ್ತೇ, ಬೇಗಡೆ, ರೂಪಕ ತಾಳ
ಪಂಚಮ ವಿಭಕ್ತಿ ಕೃತಿ           :    ತ್ಯಾಗರಾಜಾದನ್ಯಂ ನಜಾನೇ, ದರ್ಬಾರ್, ಆದಿತಾಳ
ಷಷ್ಠಿ ವಿಭಕ್ತಿ ಕೃತಿ                 :    ತ್ಯಾಗರಾಜಸ್ಯ ಭಕ್ತೋಭವಾಮಿ, ರುದ್ರಪ್ರಿಯ, ಛಾಪುತಾಳ
ಸಪ್ತಮಿ ವಿಭಕ್ತಿ ಕೃತಿ             :    ತ್ಯಾಗರಾಜೇ ಕೃತ್ಯಾಕೃತ್ಯಮರ್ಪಯಾಮಿ, ಸಾರಂಗ, ಝಂಪೆ ತಾಳ
ಸಂಭೋದನಾ ವಿಭಕ್ತಿ ಕೃತಿ    :    ವೀರವಸಂತ ತ್ಯಾಗರಾಜ, ವೀರವಸಂತ, ಆದಿತಾಳ

 

ಈ ಮೇಲಿನ ಕೃತಿಗಳಲ್ಲದೆ ಶ್ರೀತ್ಯಾಗರಾಜ ಸ್ವಾಮಿಯನ್ನು ಕುರಿತು ಶ್ರೀರಾಗ (ಆದಿತಾಳ)ದಲ್ಲಿ ‘ತ್ಯಾಗರಾಜ ಮಹಧ್ವಜರೋಹ‘ , ನೀಲಾಂಬರಿ ರಾಗ(ರೂಪಕ ತಾಳ)ದಲ್ಲಿ ‘ತ್ಯಾಗರಾಜಂ ಭಜೇಹಂ ಸತತಂ‘ , ರುದ್ರಪ್ರಿಯ ರಾಗ(ಆದಿ ತಾಳ)ದಲ್ಲಿ ‘ತ್ಯಾಗೇಶಂ ಭಜರೇ ರೇಮಾನಸ‘ , ಗೌಳ ರಾಗ(ಆದಿತಾಳ)ದಲ್ಲಿ ‘ತ್ಯಾಗರಾಜ ಪಾಲಯಶು ಮಾಂ‘ , ಆನಂದ ಭೈರವಿ ರಾಗ(ರೂಪಕ ತಾಳ)ದಲ್ಲಿ ‘ತ್ಯಾಗರಾಜ ಯೋಗವೈಭವಂ ಸದಾಶಿವಂ‘ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಸಂಗೀತದಷ್ಟೇ ಸಾಹಿತ್ಯವನ್ನು ಪೋಷಿಸುವುದು ದೀಕ್ಷಿತರ ಪರಿಪಾಠ. ಇದನ್ನು ದೀಕ್ಷಿತರ ಹೆಚ್ಚಿನ ಕೃತಿಗಳಲ್ಲಿ ಕಾಣಬಹುದು. ಉದಾ: ತ್ಯಾಗಾರಾಜ ಯೋಗ ವೈಭವಂ(ಆನಂದ ಭೈರವಿ ರಾಗ) ಕೃತಿಯಲ್ಲಿ ಗೋಪುಚ್ಛ ಮತ್ತು ಶ್ರೋತೋವಾಹ ಅಲಂಕಾರಗಳನ್ನು ಬಳಸಿದ್ದಾರೆ. ಗೋಪುಚ್ಛಯತಿಯಲ್ಲಿ ಅಕ್ಷರಗಳು ಏಕಪ್ರಕಾರವಾಗಿ ಕಡಿಮೆಯಾಗುತ್ತಾ ಬರುತ್ತದೆ. ಪಲ್ಲವಿಯ ಸಾಹಿತ್ಯ ಇಂತಿವೆ:-
”  ತ್ಯಾಗರಾಜ ಯೋಗ ವೈಭವಂ ಅಗರಾಜ ಯೋಗ ವೈಭವಂ ರಾಜ ಯೋಗ ವೈಭವಂ ಯೋಗ ವೈಭವಂ ವೈಭವಂ ಭವಂ ವಂ
ಅದೇ ಕೃತಿಯ ಚರಣದಲ್ಲಿರುವ ಶ್ರೋತೋವಾಹ ಯತಿ ಪ್ರಯೋಗದಲ್ಲಿ ಅಕ್ಷರಗಳು ಕ್ರಮವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಆ ಸಾಲುಗಳು ಇಂತಿವೆ: –
ಶಂ ಪ್ರಕಾಶಂ ಸ್ವರೂಪ ಪ್ರಕಾಶಂ ತತ್ವಸ್ವರೂಪ ಪ್ರಕಾಶಂ ಸಕಲ ತತ್ವಸ್ವರೂಪ ಪ್ರಕಾಶಂ ಶಕ್ತ್ಯಾದಿ ಸಕಲ ತತ್ವಸ್ವರೂಪ ಪ್ರಕಾಶಂ ಶಿವ ಶಕ್ತ್ಯಾದಿ ಸಕಲ ತತ್ವಸ್ವರೂಪ ಪ್ರಕಾಶಂ  ”

ರಾ-ಗ ಎಂದೇ ಖ್ಯಾತರಾಗಿರುವ ರಂಜಿನಿ-ಗಾಯತ್ರಿ ಸೋದರಿಯರ ಕಂಠದಲ್ಲಿ  ಕೇಳಿ: ತ್ಯಾಗರಾಜ ಯೋಗ ವೈಭವಂ 

https://youtu.be/Skb3iqMbdGs
ಹೀಗೆ ದೀಕ್ಷಿತರು ಯಾವುದೇ ಕೃತಿ ರಚಿಸಿದಾಗಲೂ ಏನಾದರೊಂದು ಯೋಜನೆ ಅಥವಾ ವಿಶೇಷವೊಂದು ಇರುತ್ತದೆ. ಹಾಗಾಗಿಯೇ ಏನೋ ಕಲಾರಸಿಕರು ಹೇಳುವುದುಂಟು ದೀಕ್ಷಿತರ ಕೃತಿಗಳು ಪಾಮರರಿಗಲ್ಲ ಪಂಡಿತರಿಗೆ. ಆದರೆ ದೀಕ್ಷಿತರು ಇದ್ಯಾವುದರ ಪರಿವಿಲ್ಲದೆ ದೃಢಭಕ್ತಿಯಿಂದ ಕೃತಿ ರಚಿಸಿದ್ದು ಕೃತಿಗಳಲ್ಲಿ ಅಡಗಿರುವ ಗಾಢಭಕ್ತಿ ಭಾವದಿಂದ ಎದ್ದು ಕಾಣುತ್ತದೆ.

(ಮುಂದುವರೆಯುವುದು..)

ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-2

– ವಿಶ್ವನಾಥ, ಪಂಜಿನಮೊಗರು

 

 

3 Responses

  1. Shruthi Sharma says:

    ಶ್ರೀ ಮುತ್ತುಸ್ವಾಮಿ ದೀಕ್ಷಿತರ ಬಗ್ಗೆ ಅಪರೂಪದ ಮಾಹಿತಿಯನ್ನು ತಿಳಿಸುತ್ತಿದ್ದೇರಿ. ಉತ್ತಮ ಬರಹ 🙂

  2. VISHWANATH P says:

    ಲೇಖನವನ್ನು ಪ್ರಕಟಿಸಿದ್ದಕ್ಕೆ ಸುರಹೊನ್ನೆ ಬಳಗದವರಿಗೆ ವಂದನೆಗಳು ಹಾಗೂ ಪ್ರತಿಕ್ರಯಿಸಿದ ಶೃತಿಯವರಿಗೂ ವಂದನೆಗಳು

  3. ಉತ್ತಮ ಅಂಶಗಳ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: