ತಾಂಬೂಲ

Share Button
Divakara Dongre

ದಿವಾಕರ ಡೋಂಗ್ರೆ ಎಂ. (ಮಾಳವ)

ಭಾರತೀಯ ಸಂಸ್ಕೃತಿಯ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದಾಗ ‘ತಾಂಬೂಲ’ ಇವೆಲ್ಲವುಗಳಲ್ಲಿ ಹಾಸುಹೊಕ್ಕಾಗಿ ಇಂದಿಗೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಪುರಾಣಗಳಿಂದ ಹಿಡಿದು ಇತಿಹಾಸದವರೆವಿಗೂ ಮನುಷ್ಯ-ದೈವ, ಅತಿಥಿ-ಅತಿಥೇಯ, ಗಂಡು-ಹೆಣ್ಣು ಹೀಗೆ ಜೀವನದ ವಿವಿಧ ಸಂಬಂಧಗಳೊಡನೆ ತಾಂಬೂಲ ಗುರುತಿಸಲ್ಪಡುತ್ತದೆ. ಜನನದಿಂದ ಮರಣದವರೆಗಿನ ಷೋಡಶ ಸಂಸ್ಕಾರಗಳು ತಾಂಬೂಲದಿಂದ ಹೊರತಾಗಿ ಇಲ್ಲವೇ ಇಲ್ಲ. ‘ಭಾವದಂತೆ ದೇವ’ ಎನ್ನುವುದಾದರೆ ವೀಳ್ಯದೆಲೆಯ ಮೇಲಿನ ಅಡಿಕೆಯೂ ‘ಮಹಾಗಣಪತಿ’ಯಾಗಬಹುದು.

ದೈನಂದಿನ ದೇವಪೂಜೆಯ ಕೊನೆಗೆ ಭಗವಂತನಿಗೆ ನೈವೇದ್ಯ ಸಮರ್ಪಣೆಯ ನಂತರ ಮುಖಶುದ್ಧಿಗಾಗಿಪೂಗೀ ಫಲ ತಾಂಬೂಲಂ ಸಮರ್ಪಯಾಮಿ’ ಎನ್ನುತ್ತೇವೆ. ಹಾಗಾಗಿ ಭಗವಂತನಿಗೂ ತಾಂಬೂಲಕ್ಕೂ ಅನನ್ಯ ಸಂಬಂಧವಿದೆಯೆಂದಾಯಿತು. ಪುರಾಣೋಕ್ತವಾಗಿ ತಾಂಬೂಲದ ಸೃಷ್ಟಿಯ ಕುರಿತಂತೆ ಹೀಗೊಂದು ಕಥೆಯಿದೆ. ಸಮುದ್ರ ಮಥನಾನಂತರ ಸಮುದ್ರದಿಂದ ಉದ್ಭವಿಸಿದ ಅಮೃತವನ್ನು ಮಹಾವಿಷ್ಣು ಮೋಹಿನಿಯ ರೂಪದಲ್ಲಿ ದೇವತೆಗಳಿಗೆ ಹಂಚುತ್ತಾನೆ. ಹಂಚಿ ಮಿಕ್ಕುಳಿದ ಅಮೃತದ ಪಾತ್ರೆಯನ್ನು ಮೋಹಿನಿ ಇಂದ್ರನ ಪಟ್ಟದಾನೆ ಐರಾವತದ ಬಳಿಯಿರಿಸುತ್ತಾಳೆ. ಐರಾವತದ ಸೊಂಡಿಲ ಬೀಸುವಿಕೆಗೆ ಅಮೃತ ಭೂಮಿಯ ಮೇಲೆ ಚೆಲ್ಲಲ್ಪಟ್ಟು ಅಲ್ಲಿ ಅತಿ ದಿವ್ಯವೂ, ಸುಂದರವೂ, ಮನಮೋಹಕವೂ ಆದ ಬಳ್ಳಿಯೊಂದು ಸೃಷ್ಟಿಯಾಗುತ್ತದೆ. ದೇವೇಂದ್ರ ದೇವವೈದ್ಯ ಧನ್ವಂತರಿಯನ್ನು ಆ ಬಳ್ಳಿಯ ಮಹತ್ವವನ್ನು ತಿಳಿಸಬೇಕೆಂದು ಕೇಳಿಕೊಂಡಾಗ ಧನ್ವಂತರಿ ಅದರ ಔಷಧಯುಕ್ತ ಗುಣಗಳು ಮತ್ತು ಮಹತ್ವವನ್ನು ದೇವತೆಗಳಿಗೆ ತಿಳಿಸುತ್ತಾನೆ. ಅದರ ಆಕಾರ, ಬಣ್ಣ ಮತ್ತು ಸುವಾಸನೆಗೆ ಮಹಾವಿಷ್ಣುವು ಮಾರುಹೋಗುತ್ತಾನೆ. ಪೂಗೀಫಲವು ಬ್ರಹ್ಮನಿಗೆ, ತಾಂಬೂಲವು ವಿ‍ಷ್ಣುವಿಗೆ ಮತ್ತು ಸುಣ್ಣವು ಶಿವನಿಗೆ ಪ್ರಿಯವೆಂದು ಬಣ್ಣಿಸಲಾಗಿದೆ.
Betal leaves
ವೀಳ್ಯದೆಲೆಯನ್ನು ಸಂಸ್ಕೃತದಲ್ಲಿ ‘ನಾಗವಲ್ಲೀ’ ಎಂದು ಕರೆಯಲಾಗಿದೆ. ಇದರ ಕುರಿತಂತೆಯು ರೋಚಕ ಕಥೆಯೊಂದಿದೆ. ಕೌರವರ ಮೇಲಿನ ವಿಜಯಾನಂತರ ಹಸ್ತಿನಾಪುರದಲ್ಲಿ ‘ಧರ್ಮಸಾಮ್ರಾಜ್ಯ’ ಸ್ಥಾಪನೆಯಾಯಿತು. ತಾಂಬೂಲಪ್ರಿಯರಾದ ಪಾಂಡವರಿಗೆ ವೀಳ್ಯದೆಲೆ ದೊರಕದೆ ಇದ್ದಾಗ ಪಾತಾಳ ಲೋಕದಿಂದಲಾದರೂ ಅದನ್ನು ತರಬೇಕೆಂದು ದೂತನೊಬ್ಬನನ್ನು ಪಾತಾಳಕ್ಕೆ ಅಟ್ಟಲಾಯಿತು. ಪಾತಾಳದಲ್ಲಿದ್ದ ಅರ್ಜುನನ ಪ್ರೇಯಸಿಯಾದ ‘ಚಿತ್ರಾಂಗದೆ’ ತನ್ನ ಕಿರುಬೆರಳ ತುದಿಯನ್ನು ಕತ್ತರಿಸಿ ಹಸ್ತಿನಾಪುರದಲ್ಲಿ ಅದನ್ನು ನೆಡುವಂತೆ ತಿಳಿಸುತ್ತಾಳೆ. ಹಸ್ತಿನಾಪುರದಲ್ಲಿ ಅದನ್ನು ನೆಟ್ಟಾಗ ಅದರಿಂದ ಬಳ್ಳಿಯೊಂದು ಹುಟ್ಟಿಕೊಂಡಿತು. ನಾಗಲೋಕದಿಂದ ಭೂಲೋಕಕ್ಕೆ ಬಂದ ಈ ಬಳ್ಳಿಯನ್ನು ‘ನಾಗವಲ್ಲಿ’ಯೆಂದು ಕರೆಯಲಾಯಿತು. ಈ ಬಳ್ಳಿಗೆ ಹಬ್ಬುವುದಕ್ಕೆ ಆಸರೆ ಒಂದು ಬೇಕಲ್ಲ! ಈ ಬಳ್ಳಿಯ ಸೌಂದರ್ಯಕ್ಕೆ ಮಾರು ಹೋದ ಪೂಗವೃಕ್ಷ ಅದಕ್ಕೆ ಆಸರೆಯನ್ನು ನೀಡಿತು. ಪೂಗವೃಕ್ಷವನ್ನು ತಬ್ಬಿ ಆವರಿಸುವ ನಾಗವಲ್ಲಿಗೆ ಎತ್ತರೆತ್ತರಕ್ಕೇರಿ ಅದನ್ನು ಚುಂಬಿಸುವ ಬಯಕೆ! ಇದು ನಾಗವಲ್ಲಿ ಮತ್ತು ಪೂಗವೃಕ್ಷದ ಅಮರ ಪ್ರೇಮದ ಕಥೆ. ಈ ಪ್ರೇಮಕ್ಕೆ ನೀರೆರೆದರೆ ಕಾಣುವ ನೋಟ ನಯನ ಮನೋಹರ.
.
ಭಾರತದಲ್ಲಿ ಮೂವತ್ತಕ್ಕೂ ಮಿಕ್ಕಿ ವೀಳ್ಯದೆಲೆಯ ತಳಿಗಳಿವೆ. ಅವುಗಳಲ್ಲಿ ‘ಮಹಾರಾಜಪುರಿ’, ‘ಮೊಹೋಬಾ’, ಮಸಾಲ್ ಪುರಿ’, ‘ಮಘಾಯಿ’, ‘ಜಗನ್ನಾಥಪುರಿ’, ಮಿಥುವಾ’, ‘ಕಲ್ಕತ್ತಾ’, ‘ಕೋಶಿಕೋಡಿ’, ‘ವಟ್ಟುಕೋಡಿ’, ‘ಪುಡುಕೋಡಿ’, ‘ಸತ್ಯನ್ಯಾವರಂ’, ಕರಿಬಳ್ಳಿ’, ‘ಕಾರ್ಪಲಕೋಟಿ’, ‘ದೇಸಿ’, ‘ದೇಸಿ ಬಿಹಾರಿ’, ‘ದೇಸಾವರಿ’, ‘ಸೋಫಿಯಾ’, ‘ಮದ್ರಾಸಿ’ ಮತ್ತು ‘ಬನಾರಸೀ’ ಮುಖ್ಯವಾದುವುಗಳು. ಜೋಳದ ಕಡ್ಡಿಗಳ ಗೊಬ್ಬರ, ಸಾಸಿವೆ ಹಿಂಡಿ ಮತ್ತು ಹಟ್ಟಿ ಗೊಬ್ಬರಗಳನ್ನು ಹಾಕಿ ಬೆಳೆಯುವ ‘ಮೊಹೊರ್’ ಎಂಬ ಜಾತಿಯ ವೀಳ್ಯದೆಲೆಯು ಅದರ ವಿಶಿಷ್ಟ ಆಕಾರ. ಸಮೃದ್ಧ ಮತ್ತು ಸುಗಂಧಯುಕ್ತ ರಸಕ್ಕೆ ಹೆಸರುವಾಸಿ. ಮರಳುಯುಕ್ತ ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಪ್ರಖರವಾದ ಬಿಸಿಲು, ಸಮೃದ್ಧ ನೀರು ಮತ್ತು ಹಟ್ಟಿ ಗೊಬ್ಬರವನ್ನು ಉಪಯೋಗಿಸಿ ಬೆಳೆಯುವ ವೀಳ್ಯದೆಲೆಗಳಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ಆಕಾರ, ಬಣ್ಣ ಮತ್ತು ರುಚಿಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು.
ತಾಂಬೂಲದ ಹದಿಮೂರು ಗುಣಗಳನ್ನು ವರ್ಣಿಸುವ ಸಂಸ್ಕೃತದ ಶ್ಲೋಕವೊಂದು ಹೀಗಿದೆ :

ತಾಂಬೂಲಂ ಕಟುತಿಕ್ತಮುಷ್ಣ ಮಧುರಂ ಕ್ಷಾರಂ ಕಷಾಯಾನ್ವಿತಂ |

ವಾತಘ್ನಂ ಕ್ರಿಮಿನಾಶನಂ ಕಫಹರಂ ದುರ್ಗಂಧ ನಿರ್ನಾಶನಂ ||

ವಕ್ತಸ್ಯಾಭರಣಂ ವಿಶುದ್ಧಿಕರಣಂ ಕಾಮಾಗ್ನಿ ಸಂದೀಪನಂ |

ತಾಂಬೂಲಸ್ಯ ಸಖೇ ತ್ರಯೋದಶ ಗುಣಾಃ ಸ್ವರ್ಗೇಪಿ ತೇ ದುರ್ಲಭಃ ||

 

ತಾಂಬೂಲವು ಖಾರ, ಹುಳಿ, ಉಷ್ಣ, ಮಧುರ, ಕ್ಷಾರ ಮತ್ತು ಒಗರೆಂಬ ರುಚಿಗಳುಳ್ಳದ್ದು. ವಾತ, ಕಫಗಳನ್ನು ಪರಿಹರಿಸುವ, ಬಾಯಿ ವಾಸನೆಯನ್ನು ಹೋಗಲಾಡಿಸುವ, ಉದರದಲ್ಲಿ ಅನಾರೋಗ್ಯಕ್ಕೆ ಕಾರಣವಾದ ಕ್ರಿಮಿಗಳನ್ನು ನಾಶ ಮಾಡುವ, ಮುಖಕ್ಕೆ ಆಭರಣವಾಗಿರುವ ( ತಾಂಬೂಲವನ್ನು ಸವಿದಾಗ ತುಟಿಗಳು ಕೆಂಪಾಗುವುದರಿಂದ), ವಿಶುದ್ಧಕಾರಕವಾಗಿಯೂ ಇರುವ ಈ ತಾಂಬೂಲವು ಗಂಡು ಹೆಣ್ಣುಗಳ ಮಿಲನವನ್ನು ಪ್ರಚೋದಿಸುವಂತಹದು ಆಗಿದೆ. ಗೆಳೆಯನೇ, ಹತ್ತು ಮೇಲ್ ಮೂರು ಗುಣಗಳಿರುವ ಈ ತಾಂಬೂಲವು ಸ್ವರ್ಗದಲ್ಲಿಯೂ ಸಿಗಲಾರದು.

ತಾಂಬೂಲವಿಲ್ಲದೆ ಪೂಜೆಯಿಲ್ಲ, ಯಾಗಯಜ್ಞಗಳಿಲ್ಲ, ವ್ರತಾಚರಣೆಯಿಲ್ಲ, ದಾನ-ಧರ್ಮವಿಲ್ಲ, ಅತಿಥಿ ಸತ್ಕಾರವಿಲ್ಲ, ಸಂಧಾನವಿಲ್ಲ, ಉಭಯಕುಶಲೋಪರಿಯಿಲ್ಲ, ಸರಸ ಸಲ್ಲಾಪವಿಲ್ಲ, ಪ್ರೇಮ-ಕಾಮಗಳಿಲ್ಲ! ಹೀಗಿದೆ ನಮ್ಮ ಬದುಕಿನಲ್ಲಿ ತಾಂಬೂಲದ ಅನಿವಾರ್ಯತೆ! ಮಡಿವಂತಿಕೆ, ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಎಂಬುದನ್ನು ಮರೆತು ಕೈಯೊಡ್ಡಬಹುದಾದ ಏಕೈಕ ಜಾತ್ಯತೀತ ವಸ್ತು ‘ತಾಂಬೂಲ’! ತಾಂಬೂಲದಲ್ಲಿ ಉಪಯೋಗಿಸುವ ಸಂಸ್ಕೃತದ ಪೂಗೀ ಫಲವೇ ಕನ್ನಡದ ಅಡಿಕೆ. ಅಡಿಕೆಯಲ್ಲಿರುವ ಅಲ್ಕೋಲಾಯಿಡ್ ಮತ್ತು ಟ್ಯಾನಿನ್ ಎಂಬ ರಾಸಾಯನಿಕ ಅಂಶಗಳು ಸುಣ್ಣದೊಡನೆ ಸೇರಿ ನಾವು ತಿನ್ನುವ ತಾಂಬೂಲಕ್ಕೆ ಕೆಂಪು ಬಣ್ಣವನ್ನು ನೀಡುತ್ತವೆ. ಸುಣ್ಣವಿಲ್ಲದೆ ತಾಂಬೂಲಕ್ಕೆ ಬಣ್ಣವಿಲ್ಲ! ಸಮುದ್ರದಲ್ಲಿ ದೊರಕುವ ಚಿಪ್ಪುಗಳು, ಮೊಟ್ಟೆ, ಮೃದ್ವಂಗಿಗಳನ್ನು ಸುಣ್ಣ ತಯಾರಿಕೆಯಲ್ಲಿ ಬಳಸಲಾಗುತ್ತದೆ. ‘ಚಿಂಗಾರಿ’ಗಳೆಂದು ಕರೆಯಲ್ಪಡುವ ಜನಾಂಗ ಸುಣ್ಣ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಹೊಂದಿದೆ. ರಾಜ ಮಹಾರಾಜರು ಸೇವಿಸುವ ತಾಂಬೂಲದಲ್ಲಿ ಸುಣ್ಣಕ್ಕೆ ಕೇಸರಿ ಮತ್ತು ಬೆಣ್ಣೆಯನ್ನು ಸೇರಿಸಲಾಗುತ್ತಿತ್ತು. ತಾಂಬೂಲ ಸೇವಿಸುವಾತನ ಬೆರಳ ಉಗುರಲ್ಲಿ ತೆಗೆಯಲು ಬರುವಷ್ಟು ಸುಣ್ಣವನ್ನು ಎಲೆಗೆ ಸವರಬೇಕು. ಇದು ತಾಂಬೂಲದಲ್ಲಿರಬೇಕಾದ ಸುಣ್ಣದ ಪ್ರಮಾಣ! ವೀಳ್ಯದೆಲೆ, ಅಡಿಕೆ, ಸುಣ್ಣಗಳೊಂದಿಗೆ ಯಾಲಕ್ಕಿ, ಲವಂಗ, ಬದಾಮು, ಕೊಬ್ಬರಿ ತುರಿ, ಪಚ್ಚೆ ಕರ್ಪೂರಗಳನ್ನು ಬೆರೆಸಿ ತಯಾರಿಸುವ ತಾಂಬೂಲ ಸೇವನೆಯು ಬಾಯಿಯ ದುರ್ಗಂಧವನ್ನು ಹೊಗಲಾಡಿಸುವ ಜತೆಗೆ ಆರೋಗ್ಯವರ್ಧಕವೂ ಹೌದು.
.
ಹಳ್ಳಿಯ ಮನೆಯ ಜಗಲಿಯ ಮೇಲೆ ತಟ್ಟೆಯಲ್ಲಿರುತ್ತಿದ್ದ ತಾಂಬೂಲದ ಪರಿಕರಗಳು ‘ರೆಡಿ ಟು ಈಟ್’ ಆಗಿ ‘ಪಾನ್ ಬೀಡಾ’ಗಳಾಗಿ ಪರಿವರ್ತನೆ ಹೊಂದಿ ಇಂದು ಮಾರುಕಟ್ಟೆಯನ್ನು ಪ್ರವೇಶಿಸಿವೆ. ನಗರಗಳ ಯಾವುದೇ ಖಾನಾವಳಿ ಅಥವಾ ಹೊಟೆಲ್ ಮುಂದೆ ಅರಳಿ ನಿಂತ ಕೊಡೆಯ ಕೆಳಗೊಬ್ಬ ಪಾನ್ ವಾಲಾ ಇದ್ದೇ ಇರುತ್ತಾನೆ. ಈಗೀಗ ಮದುವೆಯ ಆರತಕ್ಷತೆಯ ಸಮಾರಂಭಗಳಲ್ಲೂ ಆತ ಕಾಣಿಸತೊಡಗಿದ್ದಾನೆ! ನಿಮ್ಮ ಆಯ್ಕೆಯ ಪಾನ್ ಗೆ ಹದವಾಗಿ ಸುಣ್ಣ ಬೆರೆಸಿ ವಿವಿಧ ರೀತಿಯ ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ ತ್ರಿಕೋನಾಕೃತಿಯಲ್ಲಿ ಅದನ್ನು ಮಡಚಿ ನಮ್ಮ ಕೈಗೀಯುವ ಅವನ ಚಳಕಕ್ಕೆ ನಾವೆಲ್ಲ ಬೆರಗಾಗಲೇ ಬೇಕು. ವಿವಿಧ ಆಕೃತಿಗಳಲ್ಲಿ ಮಡಚಿ ಕಟ್ಟುವ ಪಾನ್ ಅಥವಾ ಬೀಡಾಗಳು ಗೋವಿಂದ್ ಬೀಡಾ, ಕಪೂರ್ ಬೀಡಾ, ಕುಲ್ಪಿ ಬೀಡಾ, ಮೊಂದ್ ಬೀಡಾ, ಕತರ್ ಬೀಡಾ, ಗೋಂಡ್ ಬೀಡಾ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತವೆ. ಪಾನ್ ಅಥವಾ ಬೀಡಾ ತಯಾರಿಕೆ ಭಾರತದಲ್ಲಿಂದು ಕಡಿಮೆ ಬಂಡವಾಳದ ಲಾಭದಾಯಕ ಸ್ವ ಉದ್ಯೋಗವಾಗಿ ಸ್ಥಾಪಿತಗೊಂಡಿದೆ.

Tamboola

ಭಾರತದಲ್ಲಿ ತಾಂಬೂಲ ಚರ್ವಣ ಯಾವಾಗಿನಿಂದ ಪ್ರಾರಂಭವಾಯಿತು ಎನ್ನುವ ಬಗ್ಗೆ ನಿಖರ ಮಾಹಿತಿಗಳಿಲ್ಲವಾದರೂ ಕ್ರಿ.ಶ. 320-467ರ ಗುಪ್ತರ ಕಾಲವನ್ನು ಗುರುತಿಸಲಾಗಿದೆ. 6ನೇಯ ಶತಮಾನದಲ್ಲಿ ಆಳಿದ ಚಾಲುಕ್ಯ ದೊರೆ ಸೋಮೇಶ್ವರ ತನ್ನ ‘ಮಾನಸೋಲ್ಲಾಸ’ ಎಂಬ ಕೃತಿಯಲ್ಲಿ ತಾಂಬೂಲ ಚರ್ವಣವು ರಾಜಹವ್ಯಾಸಗಳಲ್ಲಿ ಒಂದು ಎಂದು ತಿಳಿಸಿದ್ದಾನೆ. ಮುಂದೆ 8ನೆಯ ಶತಮಾನದಲ್ಲಿ ಚಂಡೇಲದ ರಜಪೂತರು ತಮ್ಮ ರಾಜಧಾನಿ ಮಹೋಲದಲ್ಲಿ ತಾಂಬೂಲವನ್ನು ಜನಪ್ರಿಯಗೊಳಿಸಲೋಸುಗ ರಾಜಸ್ಥಾನದಿಂದ ತಾಂಬೋಲಿಗಳನ್ನು (ಪಾನ್ ಬೀಡಾ ಕಟ್ಟುವವರು) ಕರೆಸಿದರೆಂದು ಉಲ್ಲೇಖಗಳಿವೆ. ಕ್ಷತ್ರಿಯರಲ್ಲಿ ಶತ್ರುದಮನಕ್ಕೆ ಮೊದಲು ರಣಾಂಗಣಕ್ಕೆ ಹೊರಡುವ ಮುನ್ನ ಅರಸನಿಂದ ‘ರಣವೀಳ್ಯ’ ವನ್ನು ಪಡೆಯುವ ಪದ್ಧತಿಯಿತ್ತು ಎನ್ನುವುದು ನಮಗೆ ಇತಿಹಾಸ, ಪುರಾಣಗಳಿಂದ ತಿಳಿದು ಬರುತ್ತದೆ. ಇದರ ವಿಕೃತ ರೂಪವನ್ನು ನಾವಿಂದು ‘ಸುಪಾರಿ’ಯ ರೂಪದಲ್ಲಿ ಪತ್ರಿಕೆ ಮತ್ತು ವಾರ್ತಾ ಮಾಧ್ಯಮಗಳಲ್ಲಿ ತಿಳಿಯುತ್ತಿದ್ದೇವೆ. ಜಾಗ್ನಿಕ್ ಎಂಬ ಲೇಖಕ ತನ್ನ ‘ಅಲ್ಕಾಖಂಡ್’ ಎನ್ನುವ ರಚನೆಯಲ್ಲಿ ತಾಂಬೂಲವು ರಜಪೂತರ ಜೀವನದ ಅವಿಭಾಜ್ಯ ಅಂಗವಾಗಿತ್ತೆಂದು ತಿಳಿಸುತ್ತಾನೆ. ರಣಾಂಗಣದಲ್ಲಿ ಪತಿಯ ನಿಧನಾ ನಂತರ ಸಹಗಮನ ಹೊರಡುವ ರಜಪೂತ ಸ್ತ್ರೀ ತನ್ನ ಅಂತಿಮ ತಾಂಬೂಲವನ್ನು ಸವಿದು ಸಹಗಮನಕ್ಕೆ ಅಣಿಯಾಗುತ್ತಿದ್ದಳಂತೆ. ಪ್ರಪ್ರಥಮವಾಗಿ ಯುರೋಪ್ ನ ಮಾರ್ಕೋಪೋಲೋ ಎನ್ನುವ ಲೇಖಕ `This habit of the entire population to masticate perpetually a leaf called `Tamboor’. The actual extent of this deeply rooted custom spans pre- British East Africa, Fiji Islands, India, Cylone, Burma, Thailand, Indonesia, Chaina, Malaysia, Philippains, Bornea, New Guinea and nearby Islands’ ಎಂದು ತಿಳಿಸುತ್ತಾನೆ.

ಇನ್ನು ಮಹಾರಾಷ್ಟ್ರೀಯ ವಿವಾಹ ಸಮಾರಂಭಗಳಲ್ಲಿ ತಾಂಬೂಲಕ್ಕೆ ತನ್ನದೇ ಆದ ಆಕರ್ಷಣೆಯಿದೆ. ವಧೂ ತನ್ನ ಕೆಂದುಟಿಗಳಲ್ಲಿ ಕಚ್ಚಿ ಹಿಡಿದ ತಾಂಬೂಲವನ್ನು ವರ ತನ್ನ ಬಾಯಿಯಿಂದ ಅರ್ಧ ತುಂಡರಿಸಿ ತಾನೂ ಸವಿಯಬೇಕು. ನೋಡುಗರಿಗೆ ಒಂದಿಷ್ಟು ಮನರಂಜನೆಯನ್ನು ನೀಡುವ ಈ ಸಂಪ್ರದಾಯ ಹಿಂದಿನ ಕಾಲದಲ್ಲಿ ವಧೂವರರು ತಾವು ಬಯಸುವ ಸಾಮೀಪ್ಯದ ಕುರಿತಾದ ಅಂಜಿಕೆ, ಸಂಕೋಚಗಳನ್ನು ನಿವಾರಿಸಲೋಸುಗವೂ ಇರಬಹುದೇನೋ?  ಜಯದೇವ ಕವಿಯ ‘ಗೀತಗೋವಿಂದಂ’ನಲ್ಲಿಯ ರಾಧೆಯ ಕೆಂದುಟಿಗಳ ವರ್ಣನೆಯಿಂದ ಮೊದಲ್ಗೊಂಡು ಕಥೆ, ಕಾವ್ಯ, ಭಾವಗೀತ, ಶಿಲ್ಪ, ಚಿತ್ರಗಳಲ್ಲಿ ತಾಂಬೂಲ ಮೆದ್ದ ಕೆಂದುಟಿಗಳದೇ ಕಾರುಬಾರು!  ತಂಬಾಕುವಿನಿಂದ ಹೊರತಾದ ತಾಂಬೂಲ ಸೇವನೆ ಆರೋಗ್ಯವರ್ಧಕವೆಂದು ಆಯುರ್ವೇದ ತಿಳಿಸುತ್ತದೆ.

ಬಡವ ಬಲ್ಲದ ಯಾರೇ ಇರಲಿ ಪ್ರತಿ ಮನೆಯ ಚಾವಡಿಯಲ್ಲಿ ತಾಂಬೂಲದ ತಟ್ಟೆಯೊಂದು ಇರಲೇ ಬೇಕು. ಅತಿಥಿ ಸತ್ಕಾರವಾದ ಮೇಲೆ ಎಲೆ ಅಡಿಕೆ ಹಾಕಿಕೊಂಡೇ ಉಭಯ ಕುಶಲೋಪರಿ ಸಾಂಪ್ರತ, ಊರ ಪರವೂರ ಸಮಾಚಾರಗಳು, ಸಾಮಾಜಿಕ ಬದಲಾವಣೆಯ ಕುರಿತಾದ ವಿಸ್ಮಯಕರ ಸಂಗತಿಗಳ ಆದಾನ ಪ್ರದಾನ, ಹಾಸ್ಯ, ಮೂದಲಿಕೆ, ಆತ್ಮರತಿ ಮೊದಲಾದುವುಗಳು ವಿಜ್ರಂಭಿಸುತ್ತಿದ್ದುದು ಈ ರಸಗವಳ ಚರ್ವಣದಲ್ಲೇ! ಕೂಲಿ ಕಾರ್ಮಿಕರಿಗೆ ಕೆಲಸ ಪ್ರಾರಂಭದ ಮೊದಲು ಎಲೆ ಅಡಿಕೆ, ಸುಣ್ಣ, ತಂಬಾಕುಗಳನ್ನು ನೀಡಿದಲ್ಲಿ ಅವರ ಮುಖದಲ್ಲಿಯ ಸಂತೃಪ್ತಿಗೆ ಪಾರವಿರಲಿಲ್ಲ.

Betel-Leaf-Benefits

 

ಇನ್ನು ಎಲೆ ಅಡಿಕೆ ಅಭ್ಯಾಸವಿದ್ದ ಕೂಲಿ ಕಾರ್ಮಿಕ ಹೆಂಗಸರಾದರೆ ಸೊಂಟಕ್ಕೆ ಬಟ್ಟೆಯಿಂದ ಹೊಲಿದ ಎಲೆ ಅಡಿಕೆಯ ಸಂಚಿ(ಆ ದಿನಕ್ಕೆ ಬೇಕಾಗುವಷ್ಟುತಾಂಬೂಲದ ಪರಿಕರಗಳು)ಯೊಂದು ಇರಲೇ ಬೇಕು. ಗಂಡಸರಾದರೆ ಎಲೆ ಅಡಿಕೆ ಡಬ್ಬಿಯೊಂದು ಜೇಬಲ್ಲಿ ಇರಲೇ ಬೇಕು. ಮನೆಗೆ ದೂರದೂರಿನಿಂದ ಅತಿಥಿಗಳಾಗಿ ಬರುವವರ ಚೀಲದಲ್ಲಿಯೂ ಎಲೆ ಅಡಿಕೆ ಡಬ್ಬಿಯೊಂದು ಇರುತ್ತಿತ್ತು. ಇದು ಪ್ರಯಾಣದ ಮಧ್ಯದಲ್ಲಿಯ ಉಪಯೋಗಕ್ಕಾಗಿ ಮತ್ತು ಒಂದು ವೇಳೆ ಅತಿಥೇಯನ ಮನೆಯಲ್ಲಿ ತಾಂಬೂಲ ಚರ್ವಣದ ವ್ಯವಸ್ಥೆಯಿಲ್ಲದಿದ್ದಲ್ಲಿ (ಅಂತಹ ಸಂದರ್ಭಗಳು ಅತಿ ವಿರಳ!)ಮುಂಜಾಗರೂಕತಾ ಕ್ರಮವಾಗಿ ಕೈಗೊಂಡ ವ್ಯವಸ್ಥೆಯಾಗಿತ್ತು. ಹಿರಿಯರು ಹೊಗೆಸೊಪ್ಪನ್ನು ತಾಂಬೂಲದ ಜತೆ ಉಪಯೋಗಿಸುವ ವಾಡಿಕೆಯಿತ್ತು. ಇನ್ನು ಮನೆಯ ಒಪ್ಪ ಓರಣಗಳಿಗೆ ಆದ್ಯತೆ ನೀಡುವವರ ಮನೆಯ ಅಡಿಕೆ ತಟ್ಟೆ ಸಹಜವಾಗಿಯೇ ಎಲೆಗಳ ಸರಿಯಾದ ಜೋಡಣೆ, ಸುಣ್ಣ ಮತ್ತು ಹೊಗೆಸೊಪ್ಪಿಗೆ ಪ್ರತ್ಯೇಕವಾದ ಡಬ್ಬಿಗಳು ಅಥವಾ ಕೆಲವೊಂದು ಸಲ ಒಂದೇ ಡಬ್ಬಿ (ಅಂಡೆ)ಯಲ್ಲಿ ಒಂದೆಡೆ ಹೊಗೆಸೊಪ್ಪು ಮತ್ತು ಇನ್ನೊಂದೆಡೆ ಸುಣ್ಣ, ಹಣ್ಣಡಿಕೆ ಸುಲಿದು ಅದನ್ನು ಸಣ್ಣ ತುಂಡುಗಳಾಗಿಸಿ ಡಬ್ಬದಲ್ಲಿರಿಸಿದ ತಾಂಬೂಲದ ತಟ್ಟೆ ಶೃಂಗಾರದಿಂದ ಬೀಗುತ್ತಿತ್ತು!. ಇನ್ನು ಎಲೆಅಡಿಕೆಯ ವಿಚಾರದಲ್ಲಿ ಸ್ಪೃಷ್ಯಾಸ್ಪೃಷ್ಯತೆಗಳ ವಿಚಾರವಿರದೆ ಅದು ವರ್ಣಭೇದವನ್ನು ಅಳಿಸುವಲ್ಲಿ ಸಹಕಾರಿಯಾಗುತ್ತಿತ್ತು!

ಬೆಣ್ಣೆ ಕಾಸಿ ತುಪ್ಪ ತಯಾರಿಕೆಯಲ್ಲಿ ತುಪ್ಪ ಹದವಾಗಿ ಸಿದ್ಧಗೊಂಡಾಗ ಅದಕ್ಕೆ ವೀಳ್ಯದೆಲೆಯನ್ನು ಹಾಕಿ ಅದನ್ನು ಸುಗಂಧಯುಕ್ತವಾಗಿಸುವ ಕ್ರಮವಿದೆ. ಬಾಣಂತಿಯರಿಗೆ ಔಷಧಯುಕ್ತವಾದ ತಾಂಬೂಲವನ್ನು ನೀಡುವುದನ್ನು ಆಯುರ್ವೇದ ತಿಳಿಸುತ್ತದೆ. ವೀಳ್ಯದೆಲೆಯು ಲಕ್ಷ್ಮಿಯ ವಾಸಸ್ಥಾನವೆಂಬ ನಂಬಿಕೆಯಿಂದ ಅದನ್ನು ಮುಸ್ಸಂಜೆ ಹೊತ್ತು ಕೊಯ್ಯುವುದು, ರಜಸ್ವಲೆಯರು ಮುಟ್ಟುವುದು ನಿ‍ಷಿದ್ಧವಾಗಿದೆ. ಇನ್ನು ತಾಂಬೂಲದ ಪೆಟ್ಟಿಗೆ, ತಟ್ಟೆ, ಅಡಿಕೆ ಕತ್ತರಿಸುವ ಕತ್ತರಿಯಲ್ಲಿ ಕಲಾತ್ಮಕತೆಯ ವಿವಿಧ ಸೊಬಗನ್ನು ನಾವು ಕಾಣಬಹುದು.

ಇನ್ನು ಕೊನೆಯದಾಗಿ ಒಂದು Statutory Warning! ಹೊಗೆಸೊಪ್ಪು ಅಥವಾ ತಂಬಾಕು ಮಿಶ್ರಿತ ತಾಂಬೂಲದ ವಿಕೃತ ರೂಪವಾದ ಪಾನ್ ಬೀಡಾ, ಜರ್ದಾಗಳ ಸೇವನೆ ಬಾಯಿ, ಅನ್ನನಾಳದ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳನ್ನು ತರುತ್ತದೆಯೆಂಬುದು ನಮಗೆಲ್ಲ ತಿಳಿದೇ ಇದೆ. ಸೇವಿಸುವವನಿಗೆ ‘ಕಿಕ್’ದೊರೆಯಲೆಂದು ಜರ್ದಾದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಇಂತಹ ಜರ್ದಾ ಸೇವನೆಯು ಕ್ಯಾನ್ಸರ್ ಕಾಯಿಲೆಯನ್ನು ಜನಸಮುದಾಯಕ್ಕೆ ಬಳುವಳಿಯಾಗಿ ನೀಡಿ, ಜನರನ್ನು ಈ ಲೋಕದಿಂದಲೇ ‘ಕಿಕ್’ ಮಾಡುತ್ತಿರುವುದು ಸುಳ್ಳಲ್ಲ ತಾನೇ?
.
ಆಯರ್ವೇದ ಪದ್ಧತಿಯಲ್ಲಿ ತಿಳಿಸಿದಂತೆ ಔಷಧಯುಕ್ತ ಗುಣಗಳುಳ್ಳ ಸುವಾಸನಾಯುಕ್ತ ಸಾಂಪ್ರದಾಯಿಕ ತಾಂಬೂಲವನ್ನು ಸೇವಿಸಿ ಆರೋಗ್ಯವಂತರಾಗಿ ದೀರ್ಘಾಯುಗಳಾಗೋಣ.

 

– ದಿವಾಕರ ಡೋಂಗ್ರೆ ಎಂ. (ಮಾಳವ)

5 Responses

  1. Hema says:

    ಸಮಗ್ರ ಲೇಖನ ತುಂಬಾ ಚೆನ್ನಾಗಿದೆ. ಪುರಂದರ ದಾಸರ ‘ತಾಂಬೂಲವ ಕೊಳ್ಳಿರೋ’ ಕೀರ್ತನೆ ನೆನಪಾಯಿತು.

  2. ವಾಹ್ ಎಂತಹ ವಿವರಣೆ
    ತುಂಬಾ ತುಂಬಾ ಧನ್ಯವಾದಗಳು
    ಸಮಾಜದ ಕೆಲವೆಡೆ ಮಾತ್ರ ಪರಿಚಿತ ವಿದ್ದ ಈ ತಾಂಬೂಲಕ್ಕೆ ಇಷ್ಟೆಲ್ಲಾ ಹಿನ್ನೆಲೆ ಇದೆ
    ವಿವರಣೆಯುಕ್ತ ತಾಂಬೂಲಕ್ಕಾಗಿ ನಿಮಗೆಧನ್ಯವಾದಗಳು

  3. ಲಕ್ಷ್ಮೀಶ ಜೆ. ಹೆಗಡೆ says:

    ನನಗೆ ತಾಂಬೂಲ ತಿನ್ನುವ ಅಭ್ಯಾಸವಿಲ್ಲ. ಆದರೂ ಲೇಖನ ಇಷ್ಟವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: