ನಿಮ್ಮ ಡಿಮ್ಯಾಟ್ ಖಾತೆಯ ನಿರ್ವಹಣೆ ಹೇಗೆ?
ಇತ್ತೀಚೆಗೆ ದಲಾಲ್ ಸ್ಟ್ರೀಟ್ನತ್ತ ಜನತೆಯ ಕುತೂಹಲ ಹೆಚ್ಚುತ್ತಿದೆ. ಕಳೆದ ವರ್ಷ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚು ಹೊಸ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿರುವುದು ಇದಕ್ಕೆ ಸಾಕ್ಷಿ. ಕರ್ನಾಟಕದಲ್ಲಿ ಕೂಡ 2014-15 ರ ಸಾಲಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಅನೇಕ ಮಂದಿ ಮರೆತೇ ಬಿಟ್ಟಿದ್ದ ಡಿಮ್ಯಾಟ್ ಖಾತೆಗಳನ್ನು ಷೇರು ಸೂಚ್ಯಂಕಗಳ ಜಿಗಿತವನ್ನು ಕಂಡು ಮತ್ತೆ ಸಕ್ರಿಯಗೊಳಿಸಲು ಹೊರಟಿದ್ದಾರೆ. ಷೇರು ಮಾರುಕಟ್ಟೆ ಸೆಬಿ ಕೂಡ ಡಿಮ್ಯಾಟ್ ಖಾತೆ ತೆರೆಯುವುದಕ್ಕಿರುವ ನಿಯಮಗಳನ್ನು ಸರಳಗೊಳಿಸಿದೆ. ಮತ್ತೊಂದು ಕಡೆ ಆದರೆ ಯಾವುದೇ ವಹಿವಾಟು ನಡೆಸದೆ ಸುಮ್ಮನೆ ಇಟ್ಟಿರುವ ಡಿಮ್ಯಾಟ್ ಖಾತೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನು ಹಲವರು ಹಲವು ಖಾತೆಗಳನ್ನು ಹೊಂದಿದ್ದು, ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ಡಿಮ್ಯಾಟ್ ಖಾತೆ ಯಾಕೆ ಬೇಕು?
ಮ್ಯೂಚುವಲ್ ಫಂಡ್, ಇಟಿಎಫ್ಗಳಲ್ಲಿ ನೀವು ನೇರವಾಗಿ ಷೇರು ಕೊಳ್ಳದಿರುವುದರಿಂದ ಅಲ್ಲಿ ಹೂಡಿಕೆಗೆ ಡಿಮ್ಯಾಟ್ ಬೇಕಿಲ್ಲ. ಆದರೆ ನೀವು ನೇರವಾಗಿ ಷೇರುಗಳನ್ನು ಖರೀದಿ ಮತ್ತು ಮಾರಾಟ ಮಾಡಬೇಕಿದ್ದರೆ ಡಿಮ್ಯಾಟ್ ಖಾತೆ ಅಗತ್ಯ. ಕಂಪನಿಗಳ ಆರಂಭಿಕ ಷೇರು ಬಿಡುಗಡೆ(ಐಪಿಒ) ಸಂದರ್ಭ ಖರೀದಿಗೆ ಡಿಮ್ಯಾಟ್ ಬಿಲ್ಕುಲ್ ಬೇಕು. ಇದನ್ನೂ ಬ್ಯಾಂಕ್ ಉಳಿತಾಯ ಖಾತೆಗೂ ಹೋಲಿಸಬಹುದು. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ನಗದು ಇರುತ್ತದೆ. ಇಲ್ಲಿ ಹಣದ ಬದಲು ಷೇರು ಇರುತ್ತದೆ. ಡಿಮ್ಯಾಟ್ನಲ್ಲಿ ನಿಮ್ಮ ಷೇರುಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸಂಗ್ರಹವಾಗಿರುತ್ತವೆ. ಆದ್ದರಿಂದ ಕಾಗದ ರೂಪದಲ್ಲಿ ಷೇರುಗಳನ್ನು ಹೊಂದಬೇಕಿಲ್ಲ. ಷೇರುಗಳು ಕಳೆದು ಹೋಗುವ ಆತಂಕವಿರುವುದಿಲ್ಲ. ಇಲ್ಲಿ ಇಂಟರ್ನೆಟ್ ಪಾಸ್ವರ್ಡ್ ಮತ್ತು ಟ್ರಾನ್ಸಕ್ಷನ್ ಪಾಸ್ವರ್ಡ್ ಮೂಲಕ ಖಾತೆಗೆ ಪ್ರವೇಶ ಪಡೆಯಬಹುದು.
ಖಾತೆ ತೆರೆದ ನಂತರ ವಹಿವಾಟು ಮಾಡದಿದ್ದರೆ ಏನಾಗುತ್ತದೆ?
ಡಿಮ್ಯಾಟ್ ತೆರೆದ ನಂತರ ಒಂದಷ್ಟು ಷೇರುಗಳನ್ನು ಖರೀದಿಸಿದ ಬಳಿಕ ಉತ್ಸಾಹ ಕಳೆದುಕೊಂಡು ಬಿಟ್ಟರೆ, ವರ್ಷಗಟ್ಟಲೆ ವಹಿವಾಟು ನಡೆಸದಿದ್ದರೆ ಕ್ರಮೇಣ ಅದನ್ನು ಸಕ್ರಿಯವಲ್ಲದ ಡಿಮ್ಯಾಟ್ ಖಾತೆ ಎಂದು ಬ್ಯಾಂಕ್ ಇಲ್ಲವೇ ಬ್ರೋಕಿಂಗ್ ಸಂಸ್ಥೆಗಳು ಪರಿಗಣಿಸಬಹುದು. ಹೀಗಿದ್ದರೂ, ಇದಕ್ಕೆ ಎಷ್ಟು ವರ್ಷದ ನಂತರ ಪರಿಗಣಿಸಬೇಕು ಎಂಬ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಇದು ಡೆಪಾಸಿಟರಿ ಪಾರ್ಟಿಸಿಪೆಂಟ್(ಡಿಪಿ), ಬ್ಯಾಂಕ್ ಅಥವಾ ಬ್ರೋಕರ್ ಮತ್ತು ಗ್ರಾಹಕರ ನಡುವಣ ಒಪ್ಪಂದದ ಅನ್ವಯ ಇರುತ್ತದೆ.
ವಾರ್ಷಿಕ ನಿರ್ವಹಣೆ ಶುಲ್ಕ ಪಾವತಿಸದಿದ್ದರೆ?
ಡಿಮ್ಯಾಟ್ಗೆ ಸಂಬಂಸಿ ವಾರ್ಷಿಕ ೩೦೦-೬೦೦ ರೂ.ಗಳ ಶ್ರೇಣಿಯಲ್ಲಿ ವಾರ್ಷಿಕ ನಿರ್ವಹಣೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಮಗೆ ಎಸ್ಸೆಮ್ಮೆಸ್ ಅಥವಾ ಇ-ಮೇಲ್ ಮೂಲಕ ಬ್ಯಾಲೆನ್ಸ್ ಇಷ್ಟಿದೆ ಎಂದು ಸಂದೇಶ ಕಳಿಸಬಹುದು. ಅದನ್ನೂ ನೀವು ಮರೆತರೆ ಮುಂದಿನ ವರ್ಷ ಬಡ್ಡಿ ಸಮೇತ ಬಾಕಿ ಬೆಳೆಯುತ್ತದೆ. ನಿಮಗೆ ಡಿಮ್ಯಾಟ್ ಸೇವೆ ಒದಗಿಸುವ ಬ್ಯಾಂಕ್ ಯಾವತ್ತೂ ತಾನಾಗಿಯೇ ಖಾತೆಯನ್ನು ಮುಚ್ಚುವುದಿಲ್ಲ. ಹಾಗೆ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಗ್ರಾಹಕ ಅದನ್ನು ಪ್ರಶ್ನಿಸಬಹುದು. ಆದ್ದರಿಂದ ವಾರ್ಷಿಕ ನಿರ್ವಹಣೆ ಶುಲ್ಕವನ್ನು ಮಾತ್ರ ಸಲ್ಲಿಸುವಂತೆ ಸೂಚಿಸಬಹುದು ಎನ್ನುತ್ತಾರೆ ಸೆಂಟ್ರಲ್ ಡೆಪಾಸಿಟರಿ ಸರ್ವೀಸ್ ಲಿಮಿಟೆಡ್ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸಿ.ಎಸ್ ಹರೀಶ.
ಒಂದು ವೇಳೆ ನೀವು ಹತ್ತಾರು ವರ್ಷ ವಾರ್ಷಿಕ ನಿರ್ವಹಣೆ ಶುಲ್ಕವನ್ನೂ ಕೊಟ್ಟಿಲ್ಲವೆಂದಿದ್ದರೆ ಹತ್ತಾರು ಸಾವಿರ ರೂ.ಗಳನ್ನು ಬಡ್ಡಿ ಸಹಿತ ಕೊಡಬೇಕಾಗಿ ಬರಬಹುದು. ಯಾಕೆಂದರೆ ಬಾಕಿ ಮೊತ್ತಕ್ಕೆ ಬಡ್ಡಿಯನ್ನು ವಿಸುವ ಅವಕಾಶ ಬ್ಯಾಂಕ್ಗೆ ಇರುತ್ತದೆ. ಡಿಮ್ಯಾಟ್ ಒದಗಿಸುವ ಬಹುತೇಕ ಡೆಪಾಸಿಟರಿ ಪಾರ್ಟಿಸಿಪೆಂಟ್ಗಳು(ಡಿಪಿ) ಗ್ರಾಹಕರ ಪ್ರೊಫೈಲ್ಗಳನ್ನು ಆಧರಿಸಿ ಅಲ್ಪಕಾಲೀನ, ದೀರ್ಘಕಾಲೀನ ಮತ್ತು ದೀರ್ಘಕಾಲೀನ ಎಂದು ವರ್ಗೀಕರಿಸಿ ಭಿನ್ನ ನಿರ್ವಹಣೆ ಶುಲ್ಕ ವಿಸುತ್ತವೆ.
ಡಿಮ್ಯಾಟ್ ಸಕ್ರಿಯಗೊಳಿಸುವುದು ಹೇಗೆ?
ನಿಮಗೆ ಡಿಮ್ಯಾಟ್ ಕೊಟ್ಟ ಡೆಪಾಸಿಟರಿ ಪಾರ್ಟಿಸಿಪೆಂಟ್ ಕಚೇರಿಯನ್ನು ಸಂಪರ್ಕಿಸಿ ಎರಡು ದಿನಗಳೊಳಗೆ ಡಿಮ್ಯಾಟನ್ನು ಸಕ್ರಿಯಗೊಳಿಸಬಹುದು. ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಪ್ರಕ್ರಿಯೆಯ ವಿವರಗಳನ್ನು ನೀಡಬೇಕು. ಇದರಲ್ಲಿ ವಿಖಾಸ, ಗುರಿತಿನ ದೃಢೀಕರಣ ಇರುತ್ತದೆ. ನಿಮ್ಮ ಸಹಿ ಮೂಲ ದಾಖಲೆಯ ಸಹಿಯ ಜತೆ ತಾಳೆಯಾಗುತ್ತಿದೆಯೇ ಎಂಬುದನ್ನು ಡಿಪಿ ಪರಿಶೀಲಿಸುತ್ತದೆ. ಬಹುಶಃ ನಿರ್ದಿಷ್ಟ ಶುಲ್ಕವನ್ನು ವಿಸಬಹುದು. ಸಾಮಾನ್ಯವಾಗಿ ೫೦೦ ರೂ.ನಷ್ಟಿರುತ್ತದೆ.
ಸಿಬಿಲ್ನ ಕ್ರೆಡಿಟ್ ಸ್ಕೋರ್ಗೆ ಪರಿಣಾಮ?
ಇಲ್ಲ. ಸಿಬಿಲ್(ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೊ ಆಫ್ ಇಂಡಿಯಾ ಲಿಮಿಟೆಡ್) ತನ್ನ ಸದಸ್ಯತ್ವ ಪಡೆದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಗ್ರಾಹಕರ ಸಾಲಕ್ಕೆ ಸಂಬಂಸಿದ ಮಾಹಿತಿಗಳನ್ನು ಹೊಂದಿರುತ್ತದೆ. ಗ್ರಾಹಕರ ಉಳಿತಾಯ ಖಾತೆ, ನಿಶ್ಚಿತ ಠೇವಣಿ, ಡಿಮ್ಯಾಟ್ ಖಾತೆಗಳ ವಿವರಗಳನ್ನು ಪಡೆಯುವುದಿಲ್ಲ. ಆದ್ದರಿಂದ ಡಿಮ್ಯಾಟ್ನ ಶುಲ್ಕಗಳನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ಸಿಬಿಲ್ನ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಬೇಕೆ?
ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಖಾತೆಗಳಿರುವುದರಿಂದ ಅಂತಹ ಉಪಯೋಗವೇನೂ ಇಲ್ಲ. ಆದರೆ ಕೆಲವು ಬ್ಯಾಂಕ್, ಹಣಕಾಸು ಸಂಸ್ಥೆಗಳು ಡಿಮ್ಯಾಟ್ ಖಾತೆಗಳ ಜತೆಗೆ ಇತರ ಸೌಲಭ್ಯಗಳನ್ನು ನೀಡುವುದರಿಂದ ಬಳಕೆದಾರರು ಆಕರ್ಷಿತರಾಗಿ ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಖಾತೆ ತೆರೆಯುತ್ತಾರೆ. ಇನ್ನು ಕೆಲವರು ತೆರಿಗೆ ಉಳಿತಾಯಕ್ಕೆ ಅನುಕೂಲವಾದೀತೆಂದು ಭಾವಿಸುತ್ತಾರೆ. ಆದರೆ ಡಿಮ್ಯಾಟ್ ಬ್ಯಾಲೆನ್ಸ್ಗೆ ಮೂಲದಲ್ಲಿಯೇ ತೆರಿಗೆ ಕಡಿತ(ಟಿಡಿಎಸ್) ಅನ್ವಯವಾಗುವುದಿಲ್ಲ. ಆದ್ದರಿಂದ ಹಲವು ಡಿಮ್ಯಾಟ್ ಖಾತೆಗಳ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.
ಖಾತೆ ತೆರೆಯುವ ಮುನ್ನ ಗಮನಿಸಿ
ಮೊದಲನೆಯದಾಗಿ ಡಿಮ್ಯಾಟ್ ಒದಗಿಸುವ ಸಂಸ್ಥೆಗಳು ಭಿನ್ನ ನಿರ್ವಹಣಾ ಶುಲ್ಕಗಳನ್ನು ವಿಸುತ್ತವೆ ಎಂಬುದನ್ನು ಗಮನಿಸಿ. ಸಂಸ್ಥೆಯ ಹಿನ್ನೆಲೆಯನ್ನು, ನೆಟ್ವರ್ಕ್ ಮತ್ತು ಅನುಕೂಲಗಳನ್ನು ಕೂಡ ಪರಿಶೀಲಿಸಿ. ಸಾಮಾನ್ಯವಾಗಿ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿತ ಪ್ರತಿಷ್ಠಿತ ಬ್ಯಾಂಕ್ಗಳು, ಬ್ರೋಕರೇಜ್ ಕಂಪನಿಗಳು ಗುಣಮಟ್ಟದ ಡಿಮ್ಯಾಟ್ ಸೇವೆ ಒದಗಿಸುತ್ತವೆ. ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರನ್ನು ಉತ್ತೇಜಿಸುವ ಸಲುವಾಗಿ ಸೆಬಿ ಈಗ ಡಿಮ್ಯಾಟ್ ಖಾತೆ ತೆರೆಯುವುದಕ್ಕೆ ಸಂಬಂಸಿದ ನಿಯಮಗಳನ್ನು ಸಡಿಲಗೊಳಿಸಿದೆ. ಸರಳ್ ಅಕೌಂಟ್ ಎಂಬ ಪರಿಕಲ್ಪನೆಯಲ್ಲಿ ಹೂಡಿಕೆದಾರರಿಗೆ ಕೆವೈಸಿ ಪ್ರಕ್ರಿಯೆ ಸರಳವಾಗಿದ್ದು, ಒಂದು ದಾಖಲೆಯನ್ನು ಕೊಟ್ಟರೆ ಸಾಕಾಗುತ್ತದೆ. ವಾಸ್ತವ್ಯದ ವಿಳಾಸ ಕೊಟ್ಟ ದಾಖಲೆಗಿಂತ ಭಿನ್ನವಾಗಿದ್ದರೆ ಮಾತ್ರ ಇನ್ನೊಂದು ಸಲ್ಲಿಸಬೇಕಾಗುತ್ತದೆ. ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆಗೆ ಡಿಮ್ಯಾಟ್ ಅಗತ್ಯವಾದ್ದರಿಂದ ಸಹಜವಾಗಿ ಬೇಡಿಕೆ ಹೆಚ್ಚುತ್ತಿದೆ. ಡಿಮ್ಯಾಟ್ನಲ್ಲಿ ನಿಮ್ಮ ಷೇರುಗಳೂ ಸುರಕ್ಷಿತ. ಇಲ್ಲಿ ಸಾಲಪತ್ರಗಳ ವರ್ಗಾವಣೆಗೆ ಯಾವುದೇ ಮುದ್ರಾಂಕ ಶುಲ್ಕದ ಅಗತ್ಯವಿರುವುದಿಲ್ಲ. ನಿಮ್ಮ ಕಾಗದ ಪತ್ರಗಳನ್ನು ಕಡಿಮೆ ಮಾಡುತ್ತದೆ. ನಕಲಿ ಸರ್ಟಿಫಿಕೇಟ್ಗಳ ಆತಂಕವಿರುವುದಿಲ್ಲ. ವಿಳಂಬ, ಕಳ್ಳತನವಾಗುವ ಭೀತಿಯೂ ಇರುವುದಿಲ್ಲ. ಹೀಗಿದ್ದರೂ, ನಿರ್ವಹಣೆ ಬಗ್ಗೆ ತಿಳಿವಳಿಕೆ, ಕೊಂಚ ಮುನ್ನೆಚ್ಚರಿಕೆ ಅಗತ್ಯ.
ಡಿಮ್ಯಾಟ್ ಖಾತೆಯ ಕೆವೈಸಿ ದಾಖಲೆಗಳು:
ಡಿಮ್ಯಾಟ್ ಖಾತೆ ತೆರೆಯಲು ಹೂಡಿಕೆದಾರರು ಗುರುತಿನ ದೃಢೀಕರಣಕ್ಕಾಗಿ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಆಧಾರ್ ಕಾರ್ಡ್ ಸಲ್ಲಿಸಬಹುದು. ವಿಳಾಸದ ದೃಢೀಕರಣಕ್ಕೆ ರೇಶನ್ ಕಾರ್ಡ್, ಬ್ಯಾಂಕ್ ಖಾತೆ ಸ್ಟೇಟ್ಮೆಂಟ್, ವಾಹನ ಚಾಲನೆ ಪರವಾನಗಿ, ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ ನೀಡಬಹುದು. ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಡಿಪಿ ಖಾತೆ ತೆರೆಯಲಿ ಬ್ಯಾಂಕ್ ಖಾತೆ ಸಂಖ್ಯೆ ಕೊಡಬೇಕಾಗುತ್ತದೆ.
ಒಳನೋಟ
ರಾಜೀವ್ ಗಾಂ ಈಕ್ವಿಟಿ ಉಳಿತಾಯ ಯೋಜನೆಯಡಿಯಲ್ಲಿ ಡಿಮ್ಯಾಟ್ ಖಾತೆ ತೆರೆದು ಷೇರುಗಳಲ್ಲಿ 50,000 ರೂ. ತನಕ ಹೂಡಿಕೆ ಮಾಡಿದಾಗ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೮೦ಸಿ ಅಡಿಯಲ್ಲಿ ತೆರಿಗೆ ಉಳಿತಾಯಕ್ಕೆ ಅನುಕೂಲವಾಗುತ್ತದೆ. ಆದರೆ ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಕಡಿಮೆಯಿರಬೇಕು.
– ಕೇಶವ ಪ್ರಸಾದ್.ಬಿ.ಕಿದೂರು
(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ )
ಸರ್ ನೀಮ್ಮ ಲೇಖನ ಓದಿದ ಮೇಲೆ ಶೇರ ಮಾರ್ಕೆಟ ಕಡೆ ಬರಬೇಕು ಅನಿಸ್ತಿದೆ.ಇನ್ನೂ ಹೆಚ್ಚಿನ ಮಾಜಿತಿಗಳನ್ನು ಬರೆಯಿರಿ ಶೇರ ಮಾರ್ಕೆಟ ಬಗ್ಗೆ.