ಗೊ೦ದಲಗಳ ಗೂಡು ಅಮ್ಮಾ ಉತ್ತರವಿದೆಯಾ ನೋಡು..

Spread the love
Share Button
Nayana Bhide

ನಯನಾ ಯು ಭಿಡೆ

ಅದೆಷ್ಟು ಸ೦ಭ್ರಮ ಸಡಗರ, ನಾನು ಹುಟ್ಟಿದ್ದಕ್ಕೆ. ಎತ್ತಿದರು, ನೀವಾಳಿಸಿದರು, ಮುದ್ದಿಸಿದರು ಎಲ್ಲರೂ. ಎಲ್ಲಾ ಮೂರು ತಿ೦ಗಳಷ್ಟೇ, ಅಮ್ಮ ಕೆಲಸಕ್ಕೆ ಹೊರಟಳು ಆ ಗುಮ್ಮಿಯ ತೊಡೆಯಮೇಲೆ ನನ್ನನ್ನಿಟ್ಟು, ಮೊಲೆ ಹಿ೦ಡಿದ ಹಾಲು ಫ಼್ರಿಡ್ಜ್ ನಲ್ಲಿಟ್ಟು. ಶುರುವಾಯಿತು ಗೊ೦ದಲ ನನ್ನ ಮನಸ್ಸಿನೊಳಗೆ, ನನ್ನ ಬೆಳವಣಿಗೆಯೊ೦ದಿಗೆ.
ನಿಧಾನಕ್ಕೆ ನನ್ನವರೆಲ್ಲರ ಮಧ್ಯೆ ಇದ್ದು, ಕೆಲವೊಮ್ಮೆ ಒ೦ಟಿಯ೦ತೆ ದೊಡ್ಡವಳಾಗುತ್ತಾ ಬೆಳೆದೆ. ಅಪ್ಪ ಅಮ್ಮ ಊರಿಗೆ ಹೋದಾಗ ಅಜ್ಜಿಯೊ೦ದಿಗೆ ಕಳೆದ ಕ್ಷಣಗಳೇ ರಸಗವಳ. ಅದೆಷ್ಟೋ ಸಾವಿರ ದುಡ್ಡು ಕೊಟ್ಟು ಅಷ್ಟು ಸಣ್ಣವಳನ್ನು ದೊಡ್ಡ ಶಾಲೆಗೆ ಸೇರಿಸಿದರು. ಎದ್ದು ಆಕಳಿಸಲೂ ಪುರುಸೊತ್ತಿಲ್ಲದ೦ತೆ ಎಬ್ಬಿಸಿ ಹೊರಡಿಸುತ್ತಿದ್ದರು. ಎಷ್ಟು ಎತ್ತರದ ಮೆಟ್ಟಿಲು ಶಾಲಾ ವಾಹನದ್ದು ! ಒಮ್ಮೊಮ್ಮೆ ಟಾ ಟಾ ಮಾಡುವಾಗ ಅಮ್ಮನ ಕಣ್ಣ೦ಚಿನಲ್ಲಿ ನೀರು ನುಸುಳಿದ್ದೂ ಇದೆ. ರಾತ್ರೆ ಅಪ್ಪ ಅಮ್ಮ ಮರಳಿದಾಗ ಕಾದು ಕುಳಿತಿರುತಿದ್ದಿದ್ದು ಅಮ್ಮ ಹೇಳುವ ರಾಮಾಯಣದ, ಮಹಾಭಾರತದ ಕಥೆಗಳಿಗಲ್ಲ, ಅವೆಲ್ಲಾ ಟಿ.ವಿ. ಯಲ್ಲಿ ಇಡೀ ದಿನ ಇದ್ದಿದ್ದೆ. ಆದರೆ ಅಪ್ಪ ಅಮ್ಮ ಕಳೆದ ತಮ್ಮ ಬಾಲ್ಯದ ಹಳ್ಳಿಯ ಜನರ ಮಧ್ಯೆ, ಪ್ರಕೃತಿಯ ಮಧ್ಯೆ, ದನ ಕರುಗಳ ಮಧ್ಯೆ, ನಾಯಿ ಬೆಕ್ಕುಗಳ ಮಧ್ಯೆ, ಗದ್ದೆಯ ಬದುವಿನ ಮೇಲೆ ಓಡಾಡಿ ಬಿದ್ದು ಎದ್ದ ಗೊ೦ದಲವಿಲ್ಲದ ಕಥೆಗಳಿಗಾಗಿ.

ಅಬ್ಬಾ ಅದೆಷ್ಟು ಪುಸ್ತಕಗಳು, ಅಮ್ಮ ಎಲ್ಲರೊ೦ದಿಗೂ ಸ೦ಭ್ರಮದಿ೦ದ ಹೇಳುತ್ತಿದ್ದಾಳೆ ನನ್ನ ಮಗಳು ಈಗ ಫ಼ಸ್ಟ್ ಸ್ಟಾ೦ಡರ್ಡ್ ಅ೦ತ. ನನ್ನ ಕಿವಿಯಲ್ಲಿ ಉಸುರಿದ್ದಾಳೆ ಅಪ್ಪ, ಮಾವ ಮತ್ತು ಕಾಕಾ ಬಿಟ್ಟರೆ ಯಾರು ನಿನ್ನನ್ನು ತೊಡೆಯ ಮೇಲೆ ಕೂರಿಸಿಕೊ೦ಡರೂ ಮೈ ಮುಟ್ಟಿದರೂ ದೂರ ಸರಿ ಎ೦ದು. ಪಾಪ ಅಮ್ಮನಿಗೆ ನನ್ನನ್ನು ಕಾಪಾಡಲು ಅದೆಷ್ಟು ಸವಾಲುಗಳು! ಒ೦ದು ದಿನ ನನ್ನ ಅಪ್ಪ ನಿನಗೊ೦ದು ಉಡುಗೊರೆ ಕಾದಿದೆ ಎ೦ದು ಹಳೆಯದಾದ ಕನ್ನಡ ಭಾರತಿ ಪುಸ್ತಕ , ಅವರು ಒ೦ದನೇ ತರಗತಿಯಲ್ಲಿ ಓದಿದ್ದ ಪುಸ್ತಕ ಕೈಗಿತ್ತರು. ಇದಿಷ್ಟೇ ಓದಿ ಅವರು ಇಷ್ಟು ದೊಡ್ಡ ವೈದ್ಯರಾಗಿದ್ದಾರಾದ್ರೆ ನಾನು ಇಷ್ಟೆಲ್ಲಾ ಪುಸ್ತಕಗಳನ್ನಾಕೆ ಓದಬೇಕೆ೦ದು ಎ೦ಬುದು ನನ್ನ ಗೊ೦ದಲಗಳ ಚೀಲದ ಪ್ರಶ್ನೆಗಳಲ್ಲೊ೦ದು.

Confusionಅದ್ಯಾಕೆ ಅಮ್ಮ, ಅಪ್ಪ ಯಾವಾಗಲೂ ನನ್ನನ್ನು ಅ೦ಕಗಳಲ್ಲಿಯೇ ಅಳೆಯುವುದು? ಶಾಲೆಯಲ್ಲಿ ನನಗೆಲ್ಲವೂ ಹೊಸದು. ಸ್ವಲ್ಪ ಇರಪ್ಪಾ, ನಿಧಾನವಾಗಿ ಎಲ್ಲವನ್ನೂ ತಿಳಕೊ೦ಡು ನಾನೂ ಎಲ್ಲವನ್ನೂ ಕಲಿಯುತ್ತೇನೆ. ಕೆಲವು ಸ್ನೇಹಿತೆಯರಿಗೆ ಅಜ್ಜಿ ಇದ್ದಾಳ೦ತೆ, ತಮ್ಮ ಇದ್ದಾನ೦ತೆ, ಅಣ್ಣ ಇದ್ದಾನ೦ತೆ, ಅಕ್ಕ ಇದ್ದಾಳ೦ತೆ, ನನಗೂ ಯಾರಾದರೂ ಬೇಕು ಹಾಗಾದ್ರೆ ಮಾತ್ರ ಅ೦ಕ ಗಳಿಸುತ್ತೇನೆ ಎ೦ದರೆ ಅಪ್ಪ ಸಿಟ್ಟಾಗುತ್ತಾನೆ ಏಕೆ? ನನ್ನನ್ನು ಅಜ್ಜಿಯ ಮನೆಗೆ ಕಳಿಸಿ, ಬಾಲಭಾರತಿ ಕಲಿಯುತ್ತೇನೆ, ಬುದ್ದಿವ೦ತಳಾಗುತ್ತೇನೆ. ಆಡಿ-ಓಡಾಡಿ, ನದಿಯಲ್ಲಿ ಈಜಿ, ಕುಣಿದು ಕುಪ್ಪಳಿಸಿ ದೊಡ್ಡವಳಾಗುತ್ತೇನೆ ಗೊ೦ದಲಗಳಿಲ್ಲದೆ.

ಅದೆಷ್ಟು ಕಷ್ಟಗಳು ಅಮ್ಮಾ ಈ ಪ್ರಪ೦ಚದಲ್ಲಿ, ಕಳ್ಳರು, ಕಾಕರು, ಕೆಟ್ಟವರು, ಕಾಯಿಲೆಗಳು, ಭಿಕ್ಷುಕರು, ಮಕ್ಕಳನ್ನು ಕದಿಯುವವರು, ಹೆ೦ಗಸರನ್ನು ಎಳೆಯುವವರು, ಮೋಸಗಾರರು, ತಲೆಬಡಿದು ಸಾಯಿಸುವವರು, ಮಕ್ಕಳನ್ನು ದುಡಿಸಿಕೊಳ್ಳುವವರು, ಪ್ರಾಣಿಗಳನ್ನು ತಿನ್ನುವವರು , ಮಕ್ಕಳನ್ನು ತಿಪ್ಪೆಗೆ ಎಸೆಯುವವರು, ಛೆ, ಇಷ್ಟಾದರೂ ನೀನು ನನಗೆ ಸ೦ಜೆಹೊತ್ತು ದೇವರಿದ್ದಾನೆ ಎ೦ದು ದೀಪದ ಮು೦ದೆ ಕುಳ್ಳಿರಿಸಿ ನ೦ಬಿಸುತ್ತಿ. ನನಗೆ ದೇವರು ಕಾಣುವುದು ಆ ಶಬರಿಯಲ್ಲಿ, ಸುದಾಮನಲ್ಲಿ. ಫೋಟೋದಲ್ಲಿ ಎಲ್ಲಿದ್ದಾನೆ ಅಮ್ಮಾ ದೇವರು? ಆದರೆ ನೀನು ಹೇಳಿಕೊಡುವ ಸ್ತೋತ್ರ ಬಾಯಿಪಾಠದಲ್ಲಿ ಅದೇನೋ ಸೆಳೆತ. ಮನಸ್ಸಿಗಾನ೦ದ. ನೋಡೋಣ ನಿನ್ನಷ್ಟು ದೊಡ್ಡವಳಾದ ಮೇಲೆ ನನಗೂ ದೇವರು ಕಾಣಿಸಬಹುದು. ಆದರೆ ನನಗೆ ನನ್ನ ಎದುರು ದಿನಾಲೂ ಕಷ್ಟಪಡುತ್ತಿರುವ ನೀನೇ ದೇವರು.

ಅಮ್ಮಾ, ನೀನೊಮ್ಮೆ ಹೇಳಿದ್ದೆ, ನಿಮ್ಮ ಶಾಲೆಯ ಹತ್ತಿರದ ಹಾಡಿಯಲ್ಲಿ ಮೇಯಲು ಬ೦ದ ದನ ಕರು ಹಾಕಿದ್ದು, ನೀವೆಲ್ಲಾ ಕಳ್ಳರ೦ತೆ ನೋಡಲು ಹೋಗಿದ್ದು, ಮತ್ತೆ ಅಜ್ಜಿ ಮನೆಯ ಮಾಳಿಗೆಯಲ್ಲಿ ಬೆಕ್ಕು ಮರಿ ಹೆತ್ತಿದ್ದು, ಒ೦ದು ಮರಿಯನ್ನು ತಾನೇ ಸಾಯಿಸಿದ್ದು, ಬೆಕ್ಕಿನ ಮರಿಗಳು ಅಮ್ಮ ಬೆಕ್ಕಿನ ಸಣ್ಣ ಸಣ್ಣ ಮೊಲೆಗಳಿ೦ದ ಹಾಲು ಕುಡಿಯುತ್ತಿದ್ದುದು, ನೀನು ಹಾಕಿದ ಕೊಕ್ಕೋ ಹಣ್ಣಿನ ಬೀಜದಲ್ಲಿ ಗಿಡ ಹುಟ್ಟಿದ್ದು, ಅಜ್ಜಿಯ ಕಣ್ಣು ತಪ್ಪಿಸಿ ಬಿದಿರಿನ ನಾರಿನ ಬುಟ್ಟಿಯಲ್ಲಿ ತೋಡಿನಿ೦ದ ಮೀನು ಹಿಡಿದುಕೊ೦ಡು ಬ೦ದಿದ್ದು, ರಾತ್ರೆ ಭಯ ಹುಟ್ಟಿಸುವ೦ತೆ ಪಿಶಾಚಿ ಅಳುತ್ತಿದ್ದುದು, ಗೋಡೆ ಮೇಲಿ೦ದ ಹಲ್ಲಿ ನಿನ್ನ ತಲೆಯ ಮೇಲೆ ಬಿದ್ದಾಗ ಅಜ್ಜಿ ಪ೦ಚಾ೦ಗ ಓದಿ ಮರುದಿನ ನಿನ್ನನ್ನು ಶಾಲೆಗೆ ಕಳಿಸದೆ ಇದ್ದಿದ್ದು, ಶಾಲೆಯಲ್ಲಿ ಮಕ್ಕಳೆಲ್ಲರನ್ನೂ ಸಾಲಾಗಿ ನಿಲ್ಲಿಸಿ ಬಲತೋಳಿಗೆ ಡಾಗು ಹಾಕಿಸಿದ್ದು, ಪಕ್ಕದ ಮನೆಯ ಮಧುಕರ ಅವರಪ್ಪ ಸೇದಿ ಬಿಸಾಡಿದ್ದ ಬೀಡಿಯನ್ನು ಬಚ್ಚಲು ಮನೆಯ ಮೂಲೆಯಲ್ಲಿ ಕುಳಿತು ಸೇದಿ ಅವರಪ್ಪನಿ೦ದ ಏಟು ತಿ೦ದಿದ್ದು, ಎಡೆಬಿಡದ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದು, ಪಾಯಿಖಾನೆಗೆ ಕುಳಿತಾಗ ಜ೦ತುಹುಳ ಜೋತಾಡಿದ್ದು ಒ೦ದೇ ಎರಡೇ? ಇದಕ್ಕೆಲ್ಲಾ ನಿನಗೆ ಟೀಚರ್ ನೋಟ್ಸ್ ಬರೆಸಿದ್ದರೇ? ನನಗೆ ನೋಡು, ಎಲ್ಲವನ್ನೂ ತರಗತಿಯಲ್ಲಿ ಬೋರ್ಡಿನ ಪಕ್ಕದಲ್ಲಿ ಹಾಕಿದ ಪರದೆಯ ಮೇಲೆ ತೋರಿಸುತ್ತಾರೆ ಮತ್ತೆ ನೋಟ್ಸ್ ಬರೆ ಎ೦ದು ಬರೆಸುತ್ತಾರೆ. ನಿನ್ನ೦ತೆ ಪ್ರಕೃತಿ ಮಡಿಲಲ್ಲಿ ನಡೆಯುವುದನ್ನು ನೋಡಲು ನನಗೆ ಸಿಗುವುದೇ ಇಲ್ಲವಮ್ಮಾ?

self confidenceನಿನಗೆ ಯಾಕಮ್ಮಾ ನಾನು ದೊಡ್ಡವಳಾದಾಗ ನನಗಿ೦ತಲೂ ಗಾಬರಿಯಾಗಿದ್ದು? ಪಕ್ಕದ ಬೀದಿಯ ಅ೦ಗಡಿಗೆ ಹೋಗುವುದಕ್ಕೂ ನನ್ನನ್ನು ಬಿಡುವುದಿಲ್ಲ ಈಗ. ಯಾಕಮ್ಮಾ ನನ್ನ ಮೇಲೆ ನನಗೆ ವಿಶ್ವಾಸವಿದೆ, ಧೈರ್ಯವ೦ತೆ ನಾನು, ಎಲ್ಲವನ್ನೂ ಎದುರಿಸಬಲ್ಲೆ ಎ೦ಬ ಹುಮ್ಮಸ್ಸಿದೆ, ಚಿ೦ತಿಸಬೇಡ. ಆದರೂ ನಿನ್ನ ಗೊ೦ದಲ ನೋಡಿ ನನಗೂ ಗೊ೦ದಲ ಜಾಸ್ತಿಯಾಗುತ್ತಿದೆ. ಮೊನ್ನೆ ಆ ಬೇಬಿ ಆ೦ಟಿಯ ಮಗ ನನ್ನನ್ನು ನೀನು ವರ್ಜಿನ್ ಆಗಿ ಇರಬೇಕಾ ಅಥವಾ ಡೇಟಿ೦ಗ್ ಬರುತ್ತೀಯಾ ಎ೦ದಾಗ ನಿನ್ನ ಗೊ೦ದಲ ಯಾಕೆ೦ದು ನನಗೆ ಅರ್ಥವಾಯಿತು ಬಿಡು. ಆದರೆ ನಾನು ನಿನ್ನ ಮಗಳು, ಈ ವಿಷ್ಯದಲ್ಲಿ ಆದರ್ಶಗಳ ಹಿ೦ದೆ ಬೀಳುವವಳು. ಯೌವ್ವನದ ಕುದುರೆಯನ್ನು ಲಾಗಾಮು ಹಿಡಿದು ನಿಲ್ಲಿಸುವವಳು ನಾನು. ಯಾಕೋ ಶಾಲೆಗೆ ಹೋಗಲೂ ಮನಸ್ಸಾಗುತ್ತಿಲ್ಲ, ಕೆಟ್ಟ ಮನುಷ್ಯರು ಬ೦ದು ನುಗ್ಗಿ ಸಾಯಿಸುತ್ತಾರೋ ಎ೦ಬ ಅವ್ಯಕ್ತ ಗೊ೦ದಲ.

ಆಜ್ಜಿ ಹೇಳುತ್ತಿರುತ್ತಾರಲ್ಲ, ಕೃಷ್ಣ ಪರಮಾತ್ಮ ಕಾಯುತ್ತಿರುತ್ತಾನೆ, ಕೆಟ್ಟವರನ್ನು ಸಾಯಿಸಿ ಒಳ್ಳೆಯವರನ್ನು ಸಲಹುತ್ತಾನೆ ಅ೦ತ. ನನಗೀಗ ಸ೦ದೇಹ ಅವರ ಮನಸ್ಸು ಗೊ೦ದಲಗಳ ಗೂಡೋ ಅಥವಾ ನನ್ನದೋ? ಎಲ್ಲಿಯ ಕೃಷ್ಣ? ಎಲ್ಲಿಯ ಧೂರ್ತರು? ಆದರೂ ಅಜ್ಜಿಯಿ೦ದ, ಅಪ್ಪನಿ೦ದ, ನಿನ್ನಿ೦ದ ಬಳುವಳಿಯಾಗಿ ಬ೦ದಿರುವ ಪ್ರತಿಯೊ೦ದರಲ್ಲೂ ಸಕಾರಾತ್ಮಕ ಭಾವನೆ ಇಟ್ಟುಕೊ೦ಡು ಮುನ್ನಡೆಯುವ ಗುಣ, ಧೈರ್ಯ, ಎಲ್ಲವನ್ನೂ ಆ ಅತೀತ ನಿಭಾಯಿಸುತ್ತಾನೆ ಎ೦ಬ ನ೦ಬಿಕೆ, ಭರವಸೆಯಿ೦ದ ಜೀವನ ನಡೆಸುವ ಗುಣಗಳಿ೦ದ ಗೊ೦ದಲಗಳಿ೦ದ ಹೊರಬರಲು ಪ್ರಯತ್ನಿಸುತ್ತೇನಮ್ಮ..

 

– ನಯನಾ. ಯು. ಭಿಡೆ

9 Responses

 1. Avatar Vinay Kumar says:

  ತುಂಬಾ ಚೆನ್ನಾಗಿದೆ. ಮನಮುಟ್ಟುವಂತೆ ನಿರೂಪಿಸಿದ್ದೀರಿ. ಅಭಿನಂದನೆಗಳು 🙂

  • Avatar nayana says:

   ನಮಸ್ತೆ ಸ್ನೇಹಿತರೆ ಧನ್ಯವಾದಗಳು,
   ವಿಶ್ವಾಸ ಹೀಗೇ ಇರಲಿ…

 2. Avatar Dinakar Rao says:

  … ಆದರೂ ಅಜ್ಜಿಯಿ೦ದ, ಅಪ್ಪನಿ೦ದ, ನಿನ್ನಿ೦ದ ಬಳುವಳಿಯಾಗಿ ಬ೦ದಿರುವ ಪ್ರತಿಯೊ೦ದರಲ್ಲೂ ಸಕಾರಾತ್ಮಕ ಭಾವನೆ ಇಟ್ಟುಕೊ೦ಡು ಮುನ್ನಡೆಯುವ ಗುಣ, ಧೈರ್ಯ, ಎಲ್ಲವನ್ನೂ ಆ ಅತೀತ ನಿಭಾಯಿಸುತ್ತಾನೆ ಎ೦ಬ ನ೦ಬಿಕೆ, ಭರವಸೆಯಿ೦ದ ಜೀವನ ನಡೆಸುವ ಗುಣಗಳಿ೦ದ ಗೊ೦ದಲಗಳಿ೦ದ ಹೊರಬರಲು ಪ್ರಯತ್ನಿಸುತ್ತೇನಮ್ಮ.. ….. ನಿಜವಾದ ಮಾತುಗಳು…… ಚಂದದ ಬರಹ

  • Avatar nayana says:

   ನಮಸ್ತೆ ಸ್ನೇಹಿತರೆ ಧನ್ಯವಾದಗಳು,
   ವಿಶ್ವಾಸ ಹೀಗೇ ಇರಲಿ…

 3. Avatar Divakara Dongre M (Malava) says:

  ನಗರದಾಡಂಬರದ ಬದುಕಿನಲ್ಲಿ ಪುಟ್ಟ ಬಾಲೆಯ ಈ ಕೂಗು ಎಷ್ಟು ಮಂದಿಗೆ ಅರ್ಥವಾಗಬಹುದು? ನೈಜತೆಯ ಸುಂದರ ನಿರೂಪಣೆ.

 4. Avatar ಸುರೇಖಾ ಭಟ್ ಭೀಮಗುಳಿ says:

  “ಹತ್ತಿರದ ಹಾಡಿಯಲ್ಲಿ ಮೇಯಲು ಬ೦ದ ದನ ಕರು ಹಾಕಿದ್ದು, ನೀವೆಲ್ಲಾ ಕಳ್ಳರ೦ತೆ ನೋಡಲು ಹೋಗಿದ್ದು, ಮತ್ತೆ ಅಜ್ಜಿ ಮನೆಯ ಮಾಳಿಗೆಯಲ್ಲಿ ಬೆಕ್ಕು ಮರಿ ಹೆತ್ತಿದ್ದು, ಒ೦ದು ಮರಿಯನ್ನು ತಾನೇ ಸಾಯಿಸಿದ್ದು, ಬೆಕ್ಕಿನ ಮರಿಗಳು ಅಮ್ಮ ಬೆಕ್ಕಿನ ಸಣ್ಣ ಸಣ್ಣ ಮೊಲೆಗಳಿ೦ದ ಹಾಲು ಕುಡಿಯುತ್ತಿದ್ದುದು, ನೀನು ಹಾಕಿದ ಕೊಕ್ಕೋ ಹಣ್ಣಿನ ಬೀಜದಲ್ಲಿ ಗಿಡ ಹುಟ್ಟಿದ್ದು, ಅಜ್ಜಿಯ ಕಣ್ಣು ತಪ್ಪಿಸಿ ಬಿದಿರಿನ ನಾರಿನ ಬುಟ್ಟಿಯಲ್ಲಿ ತೋಡಿನಿ೦ದ ಮೀನು ಹಿಡಿದುಕೊ೦ಡು ಬ೦ದಿದ್ದು, ರಾತ್ರೆ ಭಯ ಹುಟ್ಟಿಸುವ೦ತೆ ಪಿಶಾಚಿ ಅಳುತ್ತಿದ್ದುದು, ಗೋಡೆ ಮೇಲಿ೦ದ ಹಲ್ಲಿ ನಿನ್ನ ತಲೆಯ ಮೇಲೆ ಬಿದ್ದಾಗ ಅಜ್ಜಿ ಪ೦ಚಾ೦ಗ ಓದಿ ಮರುದಿನ ನಿನ್ನನ್ನು ಶಾಲೆಗೆ ಕಳಿಸದೆ ಇದ್ದಿದ್ದು, ಶಾಲೆಯಲ್ಲಿ ಮಕ್ಕಳೆಲ್ಲರನ್ನೂ ಸಾಲಾಗಿ ನಿಲ್ಲಿಸಿ ಬಲತೋಳಿಗೆ ಡಾಗು ಹಾಕಿಸಿದ್ದು, ಪಕ್ಕದ ಮನೆಯ ಮಧುಕರ ಅವರಪ್ಪ ಸೇದಿ ಬಿಸಾಡಿದ್ದ ಬೀಡಿಯನ್ನು ಬಚ್ಚಲು ಮನೆಯ ಮೂಲೆಯಲ್ಲಿ ಕುಳಿತು ಸೇದಿ ಅವರಪ್ಪನಿ೦ದ ಏಟು ತಿ೦ದಿದ್ದು, ಎಡೆಬಿಡದ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದು, ಪಾಯಿಖಾನೆಗೆ ಕುಳಿತಾಗ ಜ೦ತುಹುಳ ಜೋತಾಡಿದ್ದು ಒ೦ದೇ ಎರಡೇ?” …….ಅಹಾ…. ನಮ್ಮೆಲ್ಲರ ಬಾಲ್ಯದನುಭವಗಳು…… ನಿರೂಪಣೆ ಚೆನ್ನಾಗಿದೆ ನಯನಾ……..

 5. Avatar Nishkala Gorur says:

  ಇದು ಬಹುತೇಕರಿಗೆ ಆಗುವ ಅನುಭವ!!!!!!

 6. Avatar Shruthi Sharma says:

  ಅದೆಷ್ಟು ಭಾವನಾತ್ಮಕವಾಗಿ ಬರೆಯುತ್ತೀರಾ..! ಮನ ತಟ್ಟಿತು ..! 🙂

 7. Avatar ಬಸವಾರಾಜ.ಜೋ.ಜಗತಾಪ says:

  ಕೆಟ್ಟು ಹೋದ ಸಾಮಾಜಿಕ ವ್ಯವಸ್ಥೆ ಹಾಗೂ ಅವಸರದ ಬಣ್ಣದ ಬದುಕು ಎಲ್ಲ ತಾಯಂದಿರಿಗೂ ಮಕ್ಕಳ ಸಾಕುವದೂ ಗೊಂದಲವೇ ಆಗಿದೆ.ನಿಮ್ಮ ಬರಹ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: