ಹಳೆ PF ದುಡ್ಡಿನ ಕ್ಷಿಪ್ರ ವರ್ಗಾವಣೆಗೆ Online ವ್ಯವಸ್ಥೆ

ನೀವು ಬಹುಶಃ ಮರೆತೇ ಹೋಗಿರುವ, ಹಳೆಯ ಪಿಎಫ್ ಖಾತೆಯಲ್ಲಿ ನಿಮಗೋಸ್ಕರ ಕಾಯುತ್ತಿರುವ ಹಣವನ್ನು ಮತ್ತೆ ನಿಮ್ಮದಾಗಿಸಿಕೊಳ್ಳಲು ಹಿಂಜರಿಯುವುದೇತಕ್ಕೆ?
ಮಾರುಕಟ್ಟೆಯ ಅಂದಾಜು ಪ್ರಕಾರ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯಲ್ಲಿ ಸಾವಿರಾರು ಚಂದಾದಾರರಿಗೆ ಸೇರಿದ 26 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ನಿಷ್ಕ್ರಿಯ ಖಾತೆಗಳಲ್ಲಿ ಜಮೆಯಾಗಿದೆ. ಇಪಿಎಫ್ಒ ಇಂತಹ ಹಳೆ ಖಾತೆಗಳನ್ನು ( Inoperative account ) ಸಕ್ರಿಯಗೊಳಿಸಲು ಆನ್ಲೈನ್ ಹೆಲ್ಪ್ ಡೆಸ್ಕ್ ವ್ಯವಸೆಯನ್ನು ಕಲ್ಪಿಸಿದೆ. ನೀವು ಒಂದು ಕಂಪನಿಯಿಂದ ಕೆಲಸ ಬಿಟ್ಟು ದೇಶದ ಯಾವುದೇ ಭಾಗದಲ್ಲಿ ಬೇರೊಂದು ಸಂಸ್ಥೆಯಲ್ಲಿದ್ದರೂ, ಹಳೆ ಪಿಎಫ್ ಹಣವನ್ನು ಹೊಸ ಖಾತೆಗೆ ಆನ್ಲೈನ್ ವಿಧಾನದಲ್ಲಿ ಕೆಲವೇ ದಿನಗಳಲ್ಲಿ ವರ್ಗಾಯಿಸಬಹುದು. ಇದು ಹೇಗೆ ಸಾಧ್ಯ? ಇಲ್ಲಿದೆ ವಿವರ:
ಹಳೆ ಪಿಎಫ್ ಖಾತೆ ಸಕ್ರಿಯಗೊಳಿಸುವುದು ಈಗ ಸುಲಭ:
ನಿವೃತ್ತಿಯ ನಂತರದ ಬದುಕಿಗೆ ನೆರವಾಗುವ ಉದ್ದೇಶದಿಂದ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯಲ್ಲಿ (ಇಪಿಎಫ್ಒ) ಐದು ಕೋಟಿಗೂ ಹೆಚ್ಚು ಚಂದಾದಾರರು ಖಾತೆಗಳನ್ನು ಹೊಂದಿದ್ದಾರೆ. ಆದರೆ ಅನೇಕ ಮಂದಿ ಉದ್ಯೋಗವನ್ನು ಬದಲಿಸಿದಾಗ ಹಳೆಯ ಪಿಎಫ್ ಖಾತೆಯನ್ನು ಹೊಸ ಖಾತೆಗೆ ವರ್ಗಾಯಿಸಲು ಅಥವಾ ಹಳೆಯದರಲ್ಲಿರುವ ತಮ್ಮದೇ ಹಣವನ್ನು ಹಿಂತೆಗೆದುಕೊಳ್ಳಲು ವಿಫಲರಾಗುತ್ತಾರೆ. ಇದೊಂದು ಸಂಕೀರ್ಣ ಪ್ರಕ್ರಿಯೆಯಾಗಿರಬಹುದು ಎಂದು ಭಾವಿಸಿ, ತಮ್ಮ ಗಳಿಕೆಯ ದುಡ್ಡನ್ನು ಹಾಗೆಯೇ ಪಿಎಫ್ ಖಾತೆಯಲ್ಲಿ ಕೊಳೆಯುವಂತೆ ಮಾಡುತ್ತಾರೆ. ಇತ್ತೀಚೆಗೆ ಇಪಿಎಫ್ಒ ಆನ್ಲೈನ್ ಮೂಲಕ ಚಂದಾದಾರರು ತಮ್ಮ ಹಳೆಯ ನಿಷ್ಕ್ರಿಯ ಖಾತೆಯಿಂದ ಪಿಎಫ್ ಬ್ಯಾಲೆನ್ಸ್ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ಅಥವಾ ಹಿಂತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ.
ನಿಷ್ಕ್ರಿಯ ಖಾತೆಗಳಲ್ಲಿರುವ ದುಡ್ಡಿಗೆ ಬಡ್ಡಿ ಸಿಗುವುದಿಲ್ಲ:
ಸತತ 36 ತಿಂಗಳಿನ ತನಕ ಭವಿಷ್ಯನಿಧಿ ಖಾತೆಗೆ ಉದ್ಯೋಗದಾತರ ಕಡೆಯಿಂದ ದೇಣಿಗೆ ಸಿಗದಿದ್ದರೆ, ಅಂತಹ ಖಾತೆಯನ್ನು ನಿಷ್ಕ್ರಿಯ ಖಾತೆಯೆಂದು ಇಪಿಎಫ್ಒ ಪರಿಗಣಿಸುತ್ತದೆ. 2011ರ ನಂತರ ಇಂತಹ ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ಸಿಗುತ್ತಿಲ್ಲ. ಇದುವರೆಗೆ ಏನಾಗುತ್ತಿತ್ತು ಎಂದರೆ, ಉದ್ಯೋಗಿಯೊಬ್ಬ ಕಂಪನಿಯನ್ನು ಬದಲಿಸಿದಾಗ ತನ್ನ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ಹೇಗೆ ವರ್ಗಾಯಿಸಬೇಕು? ಅದಕ್ಕೆ ಸಂಬಂನಿಧಿಸಿದ ಅರ್ಜಿ ಯಾವುದು? ಯಾರನ್ನು ಸಂಪರ್ಕಿಸಬೇಕು ಎಂಬುದು ಗೊತ್ತಾಗದೆ, ಹಾಗೆಯೇ ಇರುತ್ತಿದ್ದ. ಕೆಲವು ಸಲ ಅರ್ಜಿ ಪಡೆದರೂ, ನಂತರ ಅದನ್ನು ಸರಿಯಾಗಿ ಭರ್ತಿಗೊಳಿಸದೆ, ಅರ್ಜಿ ತಿರಸ್ಕೃತವಾದ ಬಳಿಕ ಇದರ ಸಹವಾಸವೇ ಬೇಡವೆಂದು ದೂರ ಉಳಿಯುತ್ತಿದ್ದ. ಹೀಗಾಗಿ ಹಳೆ ಖಾತೆಯಲ್ಲಿರುವ ಹಣ ಅಲ್ಲೇ ಬಾಕಿಯಾಗಿರುತ್ತಿತ್ತು. ಆದರೆ ಇನ್ನು ಮುಂದೆ ಅಂತಹ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಲಿವೆ. ಇದಕ್ಕೆ ಕಾರಣ ಇಪಿಎಫ್ಒ, ನಿಷ್ಕ್ರಿಯ ಖಾತೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ದೇಶಾದ್ಯಂತ 123 ಕ್ಷೇತ್ರ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ಗಳನ್ನು ತೆರೆದಿದೆ. ಇದರ ಜತೆಗೆ ಆನ್ಲೈನ್ ಮೂಲಕವೂ ಕ್ಲೇಮ್ಗಳನ್ನು ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸಲು ಮುಂದಾಗಿದೆ.
ಹಳೆ ಖಾತೆಯ ಸಂಖ್ಯೆ ನೆನಪಿರಲಿ.
ನೀವು ಅನೇಕ ವರ್ಷಗಳ ಹಿಂದೆ ಕೆಲಸವನ್ನು ಬದಲಿಸಿರಬಹುದು. ಹಳೆಯ ಖಾತೆಯಲ್ಲಿರುವ ಪಿಎಫ್ ಬ್ಯಾಲೆನ್ಸ್ನ ಗತಿ ಏನಾಗಿರಬಹುದು ಎಂಬ ಚಿಂತೆಯೇ? ಆದರೆ ಆತಂಕವೇ ಬೇಡ. ಅದು ಅಲ್ಲಿಯೇ ಇರುತ್ತದೆ. ಆದರೆ ಅದನ್ನು ನೀವೀಗ ಹಿಂಪಡೆಯಬಹುದು ಅಥವಾ ಹೊಸ ಖಾತೆಗೆ ವರ್ಗಾಯಿಸಿಕೊಳ್ಳಲು ಮಾತ್ರ ಮರೆಯದಿರಿ. ಆದರೆ ಎಷ್ಟೋ ಮಂದಿಗೆ ತುಂಬ ವರ್ಷಗಳ ಹಳೆ ಖಾತೆಯ ಸಂಖ್ಯೆಯೇ ನೆನಪಿರುವುದಿಲ್ಲ. ಆದರೆ ಹಳೆ ಖಾತೆಯ ಸಂಖ್ಯೆಯೊಂದು ಸಿಕ್ಕಿದರೆ ಮತ್ತೆಲ್ಲ ಕೆಲಸ ಸಲೀಸಾಗುತ್ತದೆ. ಒಂದು ಲಕ್ಷ ರೂ.ಗಿಂತ ಹೆಚ್ಚು ಬ್ಯಾಲೆನ್ಸ್ ಇರುವ ನಿಷ್ಕ್ರಿಯ ಖಾತೆಗಳ ಚಂದಾದಾರರನ್ನು ಇಪಿಎಫ್ಇ ಸಿಬ್ಬಂದಿ ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂದು ಬೆಂಗಳೂರಿನ ಪಿಎಫ್ ಪ್ರಾದೇಶಿಕ ಕಚೇರಿಯ ಹಿರಿಯ ಉದ್ಯೋಗಿ ರಾಮ ಮೂರ್ತಿ ಬಿ.ಎಲ್ ತಿಳಿಸಿದ್ದಾರೆ. ಹಣಕಾಸು ತಜ್ಞರ ಪ್ರಕಾರ ಹಳೆ ಖಾತೆದಾರರು ಅದರಲ್ಲಿರುವ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ವಿಳಂಬ ಮಾಡಬಾರದು. ವ್ಯಕ್ತಿಯೊಬ್ಬ ಒಂದು ಅಥವಾ 2 ವರ್ಷಗಳ ಕಾಲ ಬಡ್ಡಿ ಪಡೆಯದಿದ್ದರೂ ನಿವೃತ್ತಿ ನಿಯ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಬ್ಯಾಲೆನ್ಸ್ನ್ನು ವಿತ್ಡ್ರಾ ಮಾಡಿಕೊಳ್ಳುವುದರ ಬದಲಿಗೆ ಹೊಸ ಖಾತೆಗೆ ವರ್ಗಾವಣೆ ಮಾಡುವುದು ಸೂಕ್ತ. ಉದಾಹರಣೆಗೆ ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ 2 ಲಕ್ಷ ರೂ. ಇದ್ದು, 2011 ರಿಂದ ಬಡ್ಡಿ ಬರುತ್ತಿಲ್ಲ ಎಂದಿದ್ದರೆ, ಈ ನಾಲ್ಕು ವರ್ಷಗಳಲ್ಲಿ 80,000 ರೂ.ಗಳನ್ನು ಕಳೆದುಕೊಂಡಿರುತ್ತೀರಿ. ಇಷ್ಟು ಮಾತ್ರವಲ್ಲದೆ ವಂಚಕರು ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿ ಬಿಡುವ ಸಾಧ್ಯತೆಗಳೂ ಇವೆ.
ಆನ್ಲೈನ್ ಮೂಲಕ ಸಕ್ರಿಯಗೊಳಿಸುವುದು ಹೇಗೆ?
ಮೊದಲಿಗೆ ಇಪಿಎಫ್ಒ ವೆಬ್ಸೈಟ್ www.epfindia.com ತೆರೆಯಿರಿ. ಅದರಲ್ಲಿ ` ಫಾರ್ ಎಂಪ್ಲಾಯೀಸ್’ ವಿಭಾಗ ಇದೆ. ಅಲ್ಲಿ ` ಇನೋಪರೇಟಿವ್ ಅಕೌಂಟ್ ಹೆಲ್ಪ್ ಡೆಸ್ಕ್’ ವಿಭಾಗಕ್ಕೆ ಕ್ಲಿಕ್ ಮಾಡಿರಿ. ನಂತರ ` ಫಸ್ಟ್ ಟೈಮ್ ಯೂಸರ್’ಗೆ ಕ್ಲಿಕ್ಕಿಸಿ. ಅಲ್ಲಿರುವ ಜಾಗದಲ್ಲಿ ನಿಮ್ಮ ಸಮಸ್ಯೆಯನ್ನು ಚಿಕ್ಕದಾಗಿ ನಮೂದಿಸಿ `ನೆಕ್ಸ್ಟ್’ ಬಟನ್ ಒತ್ತಿರಿ. ಮುಂದಿನ ಸ್ಕ್ರೀನ್ನಲ್ಲಿ ಹಳೆ ಕಂಪನಿಯ ವಿವರಗಳನ್ನು ಕೊಡಬೇಕು. ಹಳೆ ಪಿಎಫ್ ಸಂಖ್ಯೆ, ಕಂಪನಿಯ ವಿಳಾಸ, ಎಸ್ಟಾಬ್ಲೀಷ್ಮೆಂಟ್ ಕೋಡ್, ಕೆಲಸಕ್ಕೆ ಸೇರಿದ ದಿನಾಂಕ ಇತ್ಯಾದಿ ನೀಡಬೇಕು. ಎಲ್ಲ ವಿವರಗಳು ಕಡ್ಡಾಯವಲ್ಲದಿದ್ದರೂ, ಸಾಧ್ಯವಾದಷ್ಟೂ ವಿವರಗಳನ್ನು ಕೊಡಿ. ನಂತರದ ಪುಟದಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಜನ್ಮ ದಿನಂಕ, ಇಮೇಲ್ ಐಡಿಯನ್ನು ದಾಖಲಿಸಿ. ಮೊಬೈಲ್ ಸಂಖ್ಯೆ ಮತ್ತು ಹೆಸರು ಕಡ್ಡಾಯವಾಗಿದ್ದು, ಯಾವುದೇ ತಪ್ಪಿಲ್ಲದಂತೆ ನಮೂದಿಸಿ. ಅಗತ್ಯ ಮಾಹಿತಿಗಳನ್ನು ತುಂಬಿದ ನಂತರ ` ಜನರೇಟ್ ಪಿನ್’ ಕ್ಲಿಕ್ ಮಾಡಿರಿ. ನಿಮ್ಮ ಮೊಬೈಲ್ಗೆ `ಪಿನ್’ ಸಿಗುತ್ತದೆ. ಸ್ಕ್ರೀನ್ ಮೇಲೆ ` ರೆಫರೆನ್ಸ್ ಸಂಖ್ಯೆ’ ಸಿಗಬೇಕಿದ್ದರೆ ಪಿನ್ನ್ನು ಎಂಟರ್ ಮಾಡಬೇಕಾಗುತ್ತದೆ. ರೆಫರೆನ್ಸ್ ಸಂಖ್ಯೆಯನ್ನು ಭವಿಷ್ಯದ ಬಳಕೆಗಾಗಿ ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ. ಈ ರೀತಿ ಹೆಲ್ಪ್ ಡೆಸ್ಕ್ಗೆ ನಿಮ್ಮ ಕೋರಿಕೆ ಸಲ್ಲಿಕೆಯಾದ ಬಳಿಕ ನಿಮ್ಮ ರೆಫರೆನ್ಸ್ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯ ಸ್ಟೇಟಸ್ಸನ್ನು ಪರಿಶೀಲಿಸಬಹುದು. ನಿಮ್ಮ ಹಳೆ ಪಿಎಫ್ ಖಾತೆಯನ್ನು ಪರಿಶೀಲಿಸಿದ ನಂತರ ಇಪಿಎಫ್ಒ ಕಚೇರಿ ನಿಮಗೆ ಎಸ್ಸೆಮ್ಮೆಸ್ ಮೂಲಕ ಮುಂದಿನ ಪ್ರಕ್ರಿಯೆ ಬಗ್ಗೆ ತಿಳಿಸುತ್ತದೆ. ಫಾರ್ಮ್ 9 ನ್ನು ಬಳಸಿ ಹಣ ಹಿಂತೆಗೆತ ಅಥವಾ ಹೊಸ ಇಪಿಎಫ್ ಖಾತೆಗೆ ವರ್ಗಾವಣೆ ಮಾಡಬಹುದು. ಈಗ ನೀವು ಉದ್ಯೋಗದಲ್ಲಿದ್ದು, ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಸಕ್ರಿಯಗೊಳಿಸಿದ್ದರೆ ಆನ್ಲೈನ್ ಮೂಲಕ ಹಳೆ ಖಾತೆಯನ್ನು ಹೊಸ ಖಾತೆಗೆ ಸಂಪರ್ಕಿಸಿ ಹಣವನ್ನು ಅದಕ್ಕೆ ವರ್ಗಾಯಿಸಬಹುದು. ಹಳೆ ಖಾತೆಯಲ್ಲಿರುವ ಮೊತ್ತ ಸ್ವಲ್ಪವಾಗಿದ್ದರೂ, ಪರವಾಗಿಲ್ಲ, ಹೊಸತಕ್ಕೆ ವರ್ಗಾಯಿಸಿ, ಇಲ್ಲವೇ ಹಿಂಪಡೆಯಿರಿ.
ಮೊಬೈಲ್ ಸಂಖ್ಯೆ ಬಗ್ಗೆ ಗಮನವಿರಲಿ:
ಹಳೆಯ ಭವಿಷ್ಯಧಿಯನ್ನು ಸಕ್ರಿಯಗೊಳಿಸುವ ಬಗ್ಗೆ ಆನ್ಲೈನ್ ಮೂಲಕ ಮಾಹಿತಿ ನೀಡುವ ಸಂದರ್ಭ, ಮುಖ್ಯವಾಗಿ ನೀವು ದಾಖಲಿಸುವ ಇ-ಮೇಲ್ ವಿಳಾಸ ಮತ್ತು ಸ್ವಂತ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಇದರಿಂದ ಇಪಿಎಫ್ಒ ಸಿಬ್ಬಂದಿಗೆ ನಿಮ್ಮನ್ನು ಸಂಪರ್ಕಿಸಲು ಸುಲಭವಾಗುತ್ತದೆ. ಎಷ್ಟೋ ಮಂದಿಯ ಮೊಬೈಲ್ ಸಂಖ್ಯೆ ಬದಲಾಗಿರುವುದರಿಂದ ಸಂಪರ್ಕಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಇಪಿಎಫ್ಒ ಅಕಾರಿಗಳು. ಹಲವು ಪ್ರಾದೇಶಿಕ ಭಾಷೆಗಳಲ್ಲಿ ಇಪಿಎಫ್ಒ ನಿಮ್ಮನ್ನು ಸಂಪಕಿತ್ತದೆ. ಒಂದು ವೇಳೆ ನೀವು ದಾಖಲಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ಪಂದಿಸದಿದ್ದರೆ, ಪ್ರಕರಣವನ್ನು ಮುಚ್ಚಲಾಗುವುದೆಂದು ಇಪಿಎಫ್ಒ ತನ್ನ ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಿದೆ. ಒಂದು ವೇಳೆ ಸ್ವಂತ ಬಳಕೆಯ ಮೊಬೈಲ್ ಇಲ್ಲದಿದ್ದರೆ ನೀವು ಸುಲಭವಾಗಿ ಸಿಗಬಹುದಾದ ಮತ್ತೊಂದು ಮೊಬೈಲ್ ಸಂಖ್ಯೆ ನೀಡಬೇಕಾಗುತ್ತದೆ.
ಒಳನೋಟ : ತಪ್ಪಿಲ್ಲದೆ ವಿವರ ದಾಖಲಿಸಿಕೊಳ್ಳಿ.
ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಹೆಸರು, ಜನ್ಮ ದಿನಾಂಕವನ್ನು ಸಂಸ್ಥೆಯ ಸೇವಾ ದಾಖಲೆಗಳಲ್ಲಿ ಹೇಗಿತ್ತೋ, ಅದೇ ರೀತಿಯಲ್ಲಿ ತಪ್ಪಿಲ್ಲದೆ ಬರೆಯಬೇಕು. ಸ್ಪೆಲ್ಲಿಂಗ್ ವ್ಯತ್ಯಾಸವಾದರೂ ನಿಮ್ಮ ಅರ್ಜಿ ತಿರಸ್ಕೃತವಾಗಬಹುದು. ಎರಡನೆಯದಾಗಿ ಸೇವೆಯ ಅವಧಿ 10ವರ್ಷಕ್ಕಿಂತ ಕಡಿಮೆಯಾಗಿದ್ದಾಗ ಮಾತ್ರ ಪಿಂಚಣಿ ಯೋಜನೆಯ ಹಣವನ್ನು ಹಿಂಪಡೆಯಲು ಸಾಧ್ಯವಿದೆ. ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೂಡ ಪಿಎಫ್ ಕುರಿತ ಅರ್ಜಿಗಳನ್ನು ಭರ್ತಿ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅವರ ಅರ್ಜಿ ತಿರಸೃತವಾಗುವುದಿದೆ ಎನ್ನುತ್ತಾರೆ ಭವಿಷ್ಯನಿಧಿ ಕಚೇರಿಯ ಅಕಾರಿಗಳು.
ಬಿ ಸ್ಮಾರ್ಟ್ : ಡಿಜಿಟಲ್ ಸಿಗ್ನೇಚರ್,ಯುಎಎನ್ ಮುಖ್ಯ
ಆನ್ಲೈನ್ ಮೂಲಕ ಪಿಎಫ್ ಖಾತೆಯಲ್ಲಿರುವ ಹಣವನ್ನು ಹೊಸ ಖಾತೆಗೆ ವರ್ಗಾವಣೆ ಮಾಡುವುದಕ್ಕೆ ಉದ್ಯೋಗದಾತರಿಗೆ (ಕಂಪನಿಗಳಿಗೆ) ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಬೇಕು. ಹಾಗೆಯೇ ಉದ್ಯೋಗಿಯ ಹಳೆಯ ಮತ್ತು ಈಗಿನ ಪಿಎಫ್ ಖಾತೆಯ ಸಂಖ್ಯೆ ಇಪಿಎಫ್ಒದ ದತ್ತಾಂಶಗಳಲ್ಲಿ ಲಭ್ಯವಿರಬೇಕು. ಮಾತ್ರವಲ್ಲದೆ ಉದ್ಯೋಗಿಗೆ ಪಿಎಫ್ ಸಂಖ್ಯೆಯ ಪೋರ್ಟಬಿಲಿಟಿ (ಸಾರ್ವತ್ರಿಕ ಖಾತೆ ಸಂಖ್ಯೆ-ಯುಎಎನ್) ಬೇಕು. ಆದ್ದರಿಂದ ಆನ್ಲೈನ್ ಮೂಲಕ ಪಿಎಫ್ ವರ್ಗಾವಣೆಗೆ ಮುನ್ನ ಯುಎಎನ್ ಪಡೆದುಕೊಳ್ಳಲು ಮರೆಯದಿರಿ.
ಆನ್ಲೈನ್ ಪದ್ಧತಿಯಲ್ಲಿ ಹಳೆ ಪಿಎಫ್ ಖಾತೆಯಿಂದ ಹೊಸತಕ್ಕೆ ದುಡ್ಡು ವರ್ಗಾವಣೆಗೆ ಎಷ್ಟು ಸಮಯ ಬೇಕು?
ಭವಿಷ್ಯನಿಧಿ ಅಧಿಕಾರಿಗಳ ಪ್ರಕಾರ ನೀವು ಆನ್ಲೈನ್ ಮೂಲಕ ಕ್ಲೈಮ್ ಸಲ್ಲಿಸಿದ ನಂತರ ಕೇವಲ 3 ರಿಂದ 20 ದಿನಗಳೊಳಗೆ ಹೊಸ ಖಾತೆಗೆ ಹಣವನ್ನು ವರ್ಗಾಯಿಸಬಹುದು.
ಪಿಂಚಣಿದಾರರಿಗೆ ಸಂಬಂಸಿದ ಮಾಹಿತಿಗಳನ್ನು ಒಳಗೊಂಡಿರುವ ಸರಕಾರಿ ಮಾರ್ಗದರ್ಶಿ ವೆಬ್ಸೈಟ್ : http://pensionersportal.gov.in
– ಕೇಶವ ಪ್ರಸಾದ್.ಬಿ.ಕಿದೂರು
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)