ಕಾಡುತ್ತಿರುವ ಸಾಲುಗಳಿವು..!
ಸದಾ ನನ್ನನ್ನು ಕಾಡುತ್ತಿರುವ ಕವಿತೆಯ ಸಾಲುಗಳಿವು..!
-
ಮರಗಳು ಭೂಮಿ ಆಕಾಶದಲ್ಲಿ ಬರೆಯುವ ಕವನಗಳು, ನಾವು ಅವುಗಳನ್ನು ಕತ್ತರಿಸಿ ಕಾಗದ ಮಾಡುತ್ತೇವೆ ನಮ್ಮ ಪೊಳ್ಳುತನವನ್ನು ದಾಖಲು ಮಾಡುವುದಕ್ಕೆ. – ಖಲೀಲ್ ಗಿಬ್ರಾನ್
-
ಮೆದುವಾಗಬೇಕು, ಮೃದುವಾಗಬೇಕು ಮಾಗಿದಂತೆ ಕವಿ ಹೃದಯ ಸುಧೆಯಾಗಬೇಕು. ನೊಂದಿರಬೇಕು, ಬೆಂದಿರಬೇಕು, ಪಟ್ಟ ಪಾಡು ಹಾಡಾಗಿ ಪಲ್ಲವಿಸಬೇಕು. ಗುರಿಯಿರಬೇಕು ಅರ್ಥದ ಪರಿವಿರಬೇಕು, ಶಬ್ದದೊಳಗಿನ ನಿಶ್ಶಬ್ದದ ಅರಿವಿರಬೇಕು. ಅಲ್ಲಿರಬೇಕು, ಇಲ್ಲಿರಬೇಕು ವಿಶ್ವವನ್ನು ತನ್ನೊಳಗೆ ತಾ ತುಂಬಿಕೊಂಡಿರಬೇಕು. – ಜಂಬಣ್ಣ ಅಮರಚಿಂತ.
-
ಸಾಹಿತ್ಯ ಅಂದ್ರೆ ಬದುಕು, ಭಾಷೆ, ಸಂಸ್ಕೃತಿ, ಸಮಾಜಮುಖಿ ಚಿಂತನೆ ಅರಿಯುವ ಬೆಳೆಸುವ ಮಾಧ್ಯಮ – ಹಾ.ಮಾ.ನಾಯಕ.
-
ಕವಿಗೆ ಕಾವ್ಯವೆ ಧರ್ಮ. ನನ್ನ ಕಾವ್ಯದ ವಸ್ತು ನ್ಯಾಯ, ಸ್ವಾತಂತ್ರ್ಯ, ಪ್ರೇಮ, ನಿಸರ್ಗ, ಭಾಷೆ ಮತ್ತು ಸಾವು. – ಕೆ ಸಚ್ಚಿದಾನಂದ.
-
ಎಲೇ ಕವಿ ಸುಡು ನಿನ್ನ ಕವನಗಳ ಕೀರ್ತಿ, ತಿಳಿಬಾನು ಗಿರಿಕಾಡುಗಳೆ ನಿನಗೆ ಸ್ಪೂರ್ತಿ, ಕೆರಿ ಕೆರಿಗಳಲ್ಲಿ ಉರಿದರೂ ಜ್ವಾಲೆ ಕವನ ಕಟ್ಟುವೆ ನೀ ಮಲ್ಲಿಗೆಯ ಮ್ಯಾಲೆ. -ದಿನಕರ ದೇಸಾಯಿ.
-
ಹತ್ತು ದಿಕ್ಕುಗಳಿಂದ ಹಾರಿ ಬರುವ ಹಕ್ಕಿಗಳು ಹೊಲಿಯುತ್ತಿದ್ದವು ಹರಿದ ಆಕಾಶವನ್ನು. –ಸತೀಶ್ ಕುಲಕರ್ಣಿ
-
ನಾನು ಬೆಳಕನ್ನು ವಿನಂತಿಸಿಕೊಳ್ಳುವುದಿಷ್ಟೆ ‘ಕತ್ತಲೆಗೊಂದಿಷ್ಟು ಕರುಣೆಯ ಪಾಠ ಕಲಿಸು’. –ವಾಸುದೇವ ನಾಡಿಗ.
-
ಎದೆಗೆ ಬೆಂಕಿ ಬಿದ್ದಾಗಿನ ಬೆಳಕಿನಲ್ಲೆ ಬದುಕಿನ ಅರ್ಥ ಹುಡುಕಬೇಕು. –ಶಶಿಕಲಾ ವೀರಯ್ಯಸ್ವಾಮಿ.
-
ಅಡ್ಡ ಗೋಡೆಗಳನ್ನು ಕೆಡುವುತ್ತಾ ಕೂಡುತ್ತಾ ಹೋದರೆ ಒಂದು ದಿನ ಆಗುವುದು ಜಗವೆಲ್ಲಾ ಕೂಡಲ ಸಂಗಮ. -ಡಾ ರಂಜಾನ್ ದರ್ಗಾ.
-
ತಂತಿಯ ಮೇಲೊಂದು ಕುಳಿತ ಹಕ್ಕಿ ಆಲೋಚಿಸುತ್ತಿದೆ, ಇನ್ನು ಆ ಅಡವಿ ನನ್ನದಲ್ಲವೆಂದು. -ಕೈಫ್ ಅಜ್ಮಿ
-
ಈ ದೇಶದ ಆಕಾಶ ಶುಭ್ರವಾಗಿದೆ ಏಕೆಂದರೆ ಇಲ್ಲಿಯ ಜನ ದಿನವೂ ಕಣ್ಣೀರಿಂದಲೇ ಆಕಾಶ ತೊಳೆಯುತ್ತಾರೆ. –ಡಾ. ಅರವಿಂದ ಮಾಲಗಿತ್ತಿ.
-
ಅಳುವಿನ ಜೊತೆ ನನ್ನ ಮದುವೆ, ‘ತಾಳಿ’ ಇಲ್ಲ ತಾಳುವುದೆ ಎಲ್ಲ. -ವಿಜಯಕಾಂತ ಪಾಟೀಲ.
-
ಮಗು ಇಲ್ಲಿ ತಿಳಿದು ತಿಳಿಯದವರಂತಿರಬೇಕು. ಇದ್ದರೂ ಇರದಂತಿರಬೇಕು, ಬದುಕಿಯೂ ಸತ್ತಂತಿರಬೇಕು. –ರೂಪಾ ಹಾಸನ.
-
ಗುಡಿಯಾಚೆ, ಗಡಿಯಾಚೆ, ಗಿಡದಾಚೆಗೆ ಹೊಗೋಣ ಬನ್ನಿರೊ ಹೊಸ ನಾಡಿಗೆ. -ಪು.ತಿ.ನ.
-
ತೆರೆದ ಕಿಡಿಕಿ ಮನೆಯ ಬೆಳಕಿಗೆ, ತೆರೆದ ಪುಸ್ತಕ ಮನದ ಬೆಳಕಿಗೆ. -ಡಿ.ವಿ.ಜಿ.
-
ಗಂಧವನ್ನು ತಾಕಿಸಿ ಬಣ್ಣ ಬರೆದು ಹೋಗುವ ಪಾತರಗಿತ್ತಿ, ಯಾವುದೋ ಅನೂಹ್ಯ ಕಲ್ಪನೆ ಮೂಡಿಸುವ ನವಿಲುಗರಿ, ಕಡು ಹಸಿರು ಬಣ್ಣದ ಬೊರಂಗಿ, ಒಂದೊಂದು ಕಸದ ಎಳೆಯನ್ನೂ ತಂದು ತಾಳ್ಮೆಯಿಂದ ಹೆಣೆದ ಗುಬ್ಬಿ ಗೂಡು ಇವೆಲ್ಲವೂ ಪ್ರಕೃತಿಯೇ ಬರೆದ ಅದ್ಭುತ ಕವಿತೆಗಳು.–ಮಾರುತಿ ದಾಸಣ್ಣವರ.
-
ತನ್ನ ಅನುಭವಗಳ ಮೂಲಕ ಓದುಗನನ್ನು ಬೆಚ್ಚಿ ಬೀಳಿಸಲಾಗದ ಲೇಖಕ ಏನನ್ನು ಮಾಡಲಾರ.–ಬೋದಿಲೇರ.
ಸಂಗ್ರಹ : ಕೆ.ಬಿ.ವೀರಲಿಂಗನಗೌಡ್ರ, ಬಾಗಲಕೋಟ ಜಿಲ್ಲೆ.
ಅತ್ಯುತ್ತಮ ಸೂಕ್ತಿಗಳ ಅತ್ಯುತ್ತಮ ಸಂಗ್ರಹ