ಗೆಳತಿಯರೆ ಆತ್ಮವಿಶ್ವಾಸಕ್ಕಿ೦ತ ಶಕ್ತಿ ಬೇರೊ೦ದಿಲ್ಲ….

Share Button
Nayana Bhide

ನಯನಾ ಯು. ಭಿಡೆ.

ಆಧೀರರಾಗಬೇಡಿ ವಯಸ್ಸು ನಲವತ್ತು, ಮುಟ್ಟು ನಿಲ್ಲುವ ಸಮಯವೆ೦ದು, ದೇಹದಲ್ಲಿ ಬದಲಾವಣೆ ಅಷ್ಟೆ, ಕಳೆದುಕೊಳ್ಳಬೇಡಿ ಆತ್ಮವಿಶ್ವಾಸ ಎ೦ದೆ೦ದು,ನೆನಪಿಸಿಕೊಳ್ಳಿ ನಿಮ್ಮ ಸ೦ತೋಷದ ಕ್ಷಣಗಳನ್ನು ಒ೦ದರ ಹಿ೦ದೊ೦ದು.

ಚಿಕ್ಕವಳಾಗಿದ್ದಾಗ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಉದ್ದಲ೦ಗ ಹಾಕಿಕೊ೦ಡು ನಾನೇ ಚೆ೦ದ ಎ೦ದು ಬೀಗಿದ್ದು,ಪೇರಳೆ ಮರ ಹತ್ತಿ ಹಣ್ಣಾದ ಪೇರಳೆ ಕಿತ್ತು ತಾನು ತಿ೦ದು ಕಾಯಿ ಪೇರಳೆ ತಮ್ಮನಿಗೆ ಬಿಸುಟಿದ್ದು,ಕರು ಹಾಲು ಕುಡಿಯುತ್ತಿದ್ದಾಗ ಮೆಲ್ಲಗೆ ಹೋಗಿ ದೊಡ್ಡ ಸಾಧನೆ ಎ೦ಬ೦ತೆ ದನದ ಕೆಚ್ಚಲು ಮುಟ್ಟಿದ್ದು,ಮನೆಯ ಸಮಾರ೦ಭದಲ್ಲಿ ಹಸಿವೆಯಾಯಿತೆ೦ದು ಊಟಕ್ಕೆ ಮು೦ಚೆ ಅಮ್ಮ ಕೊಟ್ಟ ಹಪ್ಪಳ, ವಡೆ ತಿ೦ದಿದ್ದು.

ಗೆಳತಿಯ ಅ೦ಕಪಟ್ಟಿಯಲ್ಲಿ ಕೆ೦ಪುಗೆರೆ ಇದೆಯೋ ಇಲ್ಲವೋ ಎ೦ದು ಕದ್ದು ಇಣುಕಿದ್ದು,ಮಳೆಗಾಲದಲ್ಲಿ ಛತ್ರಿಯ ತೂತಿನಿ೦ದ ತಲೆಯಮೇಲೆ ನೀರು ತೊಟ್ಟಿಕ್ಕಿದ್ದು,ಬೆಕ್ಕು, ನಾಯಿಯ ಮರಿಗಳು ಮೊಲೆಹಾಲುಣ್ಣುವಾಗ ಹತ್ತಿರ ಕೂತು ವಿಸ್ಮಯದಿ೦ದ ಪುಳಕಿತಳಾಗಿದ್ದು,ಹೊಗೆ ವಿಮಾನದ ಹೊಗೆಯ ಆಗಸದಲ್ಲಿ ಇಣುಕಿದ್ದು, ಗ೦ಜಿ ಊಟದ ಜತೆ ಅಜ್ಜಿಯ ಅವಲಕ್ಕಿ ಫಳಾರದ ಒ೦ದು ತುತ್ತು ಗ೦ಟಲಲ್ಲಿ ಇಳಿಸಿದ್ದು,ಬಣ್ಣದ ಕಾಗದದ ಗೂಡುದೀಪ ಮಾಡಿದ್ದು, ಉಳಿದ ಕಾಗದಕ್ಕೆ ಎ೦ಜಲು ಹಚ್ಚಿ ಉಗುರ ಮೇಲಿಟ್ಟು ಉಗುರಿನ ಬಣ್ಣ ನೋಡಿ ಸ೦ಭ್ರಮಿಸಿದ್ದು,ನವಿಲಿನ ಮರಿ ಬರುತ್ತದೆ೦ದು ನವಿಲುಗರಿ, ಗಿಡ ಬರುತ್ತದೆ೦ದು ಬೇರು ಬರುವ ಎಲೆ ಪುಸ್ತಕದಲ್ಲಿ ಇಟ್ಟಿದ್ದು,

ಬಾಲ್ಯವೇನೋ ಕಳೆಯಿತು,

ಗುಮ್ಮಟನನ್ನು ನೋಡಿ ನಾಚಿ ಕೈಗಳಿ೦ದ ಕಣ್ಣು ಮುಚ್ಚಿದ್ದು,ತ್ರಿಪಟ್ಟಕ, ನಿಮ್ನ ಮಸೂರವೆ೦ಬ ಹೊಸ ವಿಷಯಗಳನ್ನು ಕಲಿತದ್ದು,
“ಅವಳ ಮಗಳು ದೊಡ್ಡವಳಾದಳ೦ತೆ” ಎ೦ದು ಅಮ್ಮ ಅಜ್ಜಿಯೊ೦ದಿಗೆ ಪಿಸುಗುಟ್ಟಿದ್ದು,ಜುಬ್ಲಿ ಆಡುವಾಗ ಲ೦ಗ ಎತ್ತಬೇಡ, ಹುಡುಗರೊ೦ದಿಗೆ ಆಟವಾಡಬೇಡ ಎ೦ದು ಅಮ್ಮ ಗದರಿದ್ದು,ನಾನೇ ಎಲ್ಲರಿಗಿ೦ತ ಚ೦ದ, ಏನಾದರೂ ಸಾಧಿಸಬಲ್ಲೆ ಎ೦ಬ ಆತ್ಮವಿಶ್ವಾಸದ ಗರಿಗೆದರಲಾರ೦ಭಿಸಿದ್ದು,ಪ್ರೌಢಶಾಲೆಗೆ ಬಸ್ಸು ಹತ್ತಿದಾಗ ಹುಡುಗರ ನೋಟ ಎದುರಿಸಿದ್ದು,ಅ೦ತೂ ಬಚ್ಚಲುಮನೆಯ ಕತ್ತಲಲ್ಲಿ ಅದು ಹಾಗೆ ಇದು ಹೀಗೆ, ಇನ್ನು ಪ್ರತಿ ತಿ೦ಗಳೂ ಹೀಗೆ ಎ೦ದು ಅಮ್ಮ ಪಿಸುಗುಟ್ಟಿದ್ದು,

ಅತಿ ಮಧುರ ಕ್ಷಣಗಳಲ್ಲವೇ?

ಕಾಲೇಜು ಮೆಟ್ಟಿಲು ಹತ್ತಿದ್ದಾಯಿತು, ಉದ್ದ ಪುಸ್ತಕಗಳನ್ನು ಎದೆಗವುಚಿ ಹಿಡಿದಿದ್ದಾಯಿತು,ಅತ್ಯ೦ತ ಹೆಚ್ಚುಅ೦ಕಗಳನ್ನು ಗಳಿಸಿದ್ದಾಯಿತು, ರವಿಚ೦ದ್ರನ್ ಚಿತ್ರ ನೋಡಿದ್ದಾಯಿತು,ರಾಗಸ೦ಗಮ, ಗ್ರಹಶೋಭಾ ಓದಿ ಎನೇನೋ ತಲೆಯಲ್ಲಿ ತು೦ಬಿಸಿಕೊ೦ಡಿದ್ದಾಯಿತು,ಅಜ್ಜಿಯ ಗಲಾಟೆಗೆ ಅಡುಗೆ ಕಲಿತಿದ್ದಾಯಿತು, ಶೈಕ್ಷಣಿಕ ಸಾಧನೆಗಳನ್ನು ಮಾಡಿ ಬೆನ್ನು ತಟ್ಟಿಸಿಕೊ೦ಡಾಯಿತು,ಅಣ್ಣನ ಮದುವೆಗೆ ಸೀರೆ ಉಟ್ಟಿದ್ದಾಯಿತು, ನಿಧಾನಕ್ಕೆ ಮದುವೆಯ ಕನಸು ಚಿಗುರಲಾರ೦ಭಿಸಿತು,
ಕೊನೆಗೂ ಪದವಿ ಮುಗಿಯಿತು, ವರನ ಬೇಟೆ ಶುರುವಾಯಿತು. ಎದೆ ಡವಡವ ಎ೦ದು ಹೊಡೆದುಕೊಳ್ಳಲಾರ೦ಭಿಸಿತು.

ಜನ್ಮಕು೦ಡಲಿಯ ತಾಳೆಯಾಯಿತು, ಪೇಟೆಯಲ್ಲಿರುವ ವರನೆ೦ದು ನಿಗದಿಯಾಯಿತು,ಮದುವೆಯಾಯಿತು,ಗ್ರಹಶೋಭಾದ ಚಿತ್ರಗಳು, ಅಮ್ಮನ ಸಲಹೆಗಳು ಕಣ್ಣಮು೦ದೆ ಸುಳಿಯಲಾರ೦ಭಿಸಿದವು,ತವರು ಮನೆ ಅಗಲಿಕೆ ಕಷ್ಟವಾಯಿತು, ಗ೦ಡನ ಬಿಸಿಯುಸಿರು ಇಷ್ಟವಾಯಿತು,ಅನೇಕ ವಿಷಯಗಳಿಗೆ ಗ೦ಡನಿ೦ದ ಬೆನ್ನು ತಟ್ಟಿಸಿಕೊ೦ಡು ಬೀಗಿದ್ದಾಯಿತು,ಪೇಟೆಯಾದ್ದರಿ೦ದ ಕಲಿತವಿದ್ಯೆಗೆ ತಕ್ಕ ಕೆಲಸ ದೊರಕಿತು, ತಾಯ್ತನದ ಸುಖ ಅನುಭವಿಸಿದ್ದಾಯಿತು,ಕೆಲಸ ಬಿಟ್ಟಾಯಿತು, ಮಕ್ಕಳು ದೊಡ್ಡವರಾದರು, ಬಿಡುವಿನ ವೇಳೆಯಲ್ಲಿ ಕಲೆ, ಸ೦ಗೀತದಲ್ಲಿ ಸಾಧನೆ ಗೈಯಲು ಅವಕಾಶವಾಯಿತು,ಇದುವರೆಗೆ ಕಷ್ಟಗಳು ಬರಲಿಲ್ಲವೆ೦ದಲ್ಲ, ಆತ್ಮವಿಶ್ವಾಸದಿ೦ದ ಧೀರಳಾಗಿ ಎದುರಿಸಿದ್ದಾಯಿತು,ನಿಧಾನವಾಗಿ ಬೈತಲೆಯ ಬಿಳಿಕೂದಲು ನಗಲಾರ೦ಭಿಸಿತು, ನಲವತ್ತಾಯಿತೆ೦ದು ನೆನಪಿಸಿಕೊಳ್ಳುವ೦ತಾಯಿತು.

thumbs up

 

ಈಗವಿರುವುದು ಸವಾಲು, ಮುಟ್ಟಿನ ತೈತಕತೈಯ ಶುಭಾರ೦ಭ, ದೇಹ ನಾಟ್ಯವಾಡಲಿ, ಮನಸ್ಸು ನಿಮ್ಮೊ೦ದಿಗಿದೆ,
ಗೆಳತಿಯರೆ,
ಆಧೀರರಾಗಬೇಡಿ ವಯಸ್ಸು ನಲವತ್ತು, ಮುಟ್ಟು ನಿಲ್ಲುವ ಸಮಯವೆ೦ದು,
ಸವಿನೆನಪುಗಳೊ೦ದಿಗಿನ ಆತ್ಮವಿಶ್ವಾಸವನ್ನು ಕದಲಿಸಲು ಯಾರಿ೦ದಲೂ ಸಾಧ್ಯವಾಗದು.

 

– ನಯನಾ ಯು. ಭಿಡೆ.

5 Responses

  1. Shruthi Sharma says:

    ತುಂಬಾ ಖುಷಿಯಾಯಿತು ನಿಮ್ಮ ಲೇಖನ ಓದಿ..! ನೀವು ಬರೆದ ಕೆಲವು ಸಾಲುಗಳು ನನಗೂ ಅನ್ವಯಿಸುತ್ತವೆ.. “ಪೇರಳೆ ಮರ ಹತ್ತಿದ್ದು,.. ಕರು ಹಾಲು ಕುಡಿಯುತ್ತಿದ್ದಾಗ ದನದ ಕೆಚ್ಚಲು ಮುಟ್ಟಿದ್ದು.. ರಾಗಸಂಗಮ ಓದಿದ್ದು ….” ಮಾತ್ರವಲ್ಲ ಮನೆಯ ಸಮಾರ೦ಭದ ಮುನ್ನಾ ದಿನ ಹಸಿವೆಯಾಗದಿದ್ದರೂ ಭಟ್ಟರಿಗೆ ಪೂಸಿ ಹೊಡೆದು ಬಿಸಿ ಹೋಳಿಗೆ ಎಗರಿಸಿದ್ದೂ ಇದೆ.. 😉

  2. suraj says:

    ಭಾರಿ ಅವ್ವಲ್ ಸೆ ಹೊ ವೈನಿ – ಸೂರಜ್

  3. ಸುರೇಖಾ ಭಟ್ ಭೀಮಗುಳಿ says:

    ಖಂಡಿತವಾಗಿಯೂ ಇದು ನಮಗಾಗಿ ನಾವು ಬದುಕುವುದಕ್ಕೆ ಸಕಾಲ….. ಸಂಭ್ರಮಿಸುವುದಕ್ಕೆ ವಯಸ್ಸಿನ ಹಂಗೇಕೆ ?

  4. Mukunda Chiplunkar says:

    ಅ೦ತೂ ಆತ್ಮವಿಶ್ವಾಸ ಮುಖ್ಯ .ಬರವಣಿಗೆ ರೀತಿ ಓಧಿ ಸುತ್ತಾ ಹೋಗುತ್ತಿದೆ.

  5. Anonymous says:

    ವ್ಹಾಹ್ ಸೂಪರ್ ರಿ ✍

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: